ಯೋಗ-ಆರೋಗ್ಯ

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ

Share Button

ಮಕ್ಕಳೇ..ಏಳಿ..ಸ್ಕೂಲಿಗೆ ಲೇಟಾಗುತ್ತೆ.. ಎಂಬ ಅಮ್ಮನ ಕೂಗಿಗೆ, ಇನ್ನೂ ಬೆಳಕಾಗಿಲ್ಲ ಅಮ್ಮಾ..ತುಂಬಾ ಚಳಿ.. ಎಂದು ಮುಸುಕೆಳೆದು ಮುದುಡಿ ಮಲಗುವ ಮಕ್ಕಳು..ಈ ಚಳಿಗಾಲ ಯಾವಾಗ ಮುಗಿಯುತ್ತೋ..ಗಂಟು ನೋವು,ಕೆಮ್ಮು,ಉಬ್ಬಸದಿಂದ ಸಾಕಾಗಿ ಹೋಗಿದೆ..ಎನ್ನುವ ಹಿರಿಯರು.. ಇವೆಲ್ಲಾ ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯಗಳು.

ಋತುಗಳಿಗನುಸಾರವಾಗಿ ಹವಾಮಾನವು ಬದಲಾಗುತ್ತಿದ್ದಂತೆಯೇ ಪರಿಣಾಮವಾಗಿ ಮನುಷ್ಯ ದೇಹದಲ್ಲೂ ಕೆಲವೊಂದು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.ಹಾಗಾಗಿ ಹವಾಮಾನಕ್ಕನುಗುಣವಾಗಿ ಶರೀರದ ಆರೈಕೆಯೂ ಅತ್ಯಗತ್ಯ.
ಚಳಿಗಾಲದಲ್ಲಿ ವಾತಾವರಣವು ಶೀತಲ ಹಗೂ ರೂಕ್ಷತೆಯಿಂದ ಕೂಡಿರುತ್ತದೆ. ಇದರ ಪರಿಣಾಮವಾಗಿ ಚರ್ಮ ಹಾಗೂ ಕೂದಲು ತುಂಬಾ ಒರಟಾಗುತ್ತದೆ, ತುಟಿ- ಪಾದದ ಹಿಮ್ಮಡಿಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ,ಸಂಧಿಗಳಲ್ಲಿ ನೋವು ಮತ್ತು ಹಿಡಿತ ಉಂಟಾಗುತ್ತದೆ, ಶ್ವಸನ ಸಂಬಂಧೀ ಸಮಸ್ಯೆಗಳಾದ ಅಲರ್ಜಿ,ಕೆಮ್ಮು,ಉಬ್ಬಸ ಮೊದಲಾದವುಗಳು ತೊಂದರೆ ಕೊಡುತ್ತವೆ.ಹಾಗೆಯೇ ಮಲಬದ್ಧತೆಯೂ ಉಂಟಾಗಬಹುದು. ಆದುದರಿಂದ ಇವೆಲ್ಲವುಗಳಿಂದ ದೂರವಿರಲು ಜೀವನ ಶೈಲಿಯಲ್ಲಿ ಕೆಲವೊಂದು ಸರಳ ಕ್ರಮಗಳನ್ನು ಅನುಸರಿಸಬೇಕು.

ಆಹಾರ: ಚಳಿಗಾಲದಲ್ಲಿ ಜೀರ್ಣ ಶಕ್ತಿಯು ಹೆಚ್ಚಾಗಿರುವುದರಿಂದ ಉತ್ತಮ ಪ್ರಮಾಣದ ಆಹಾರ ಸೇವಿಸಬಹುದು.ಗೋಧಿ, ಉದ್ದು,ಅಕ್ಕಿ,ಹಾಲು,ತುಪ್ಪ,ಎಣ್ಣೆಯನ್ನು ಬಳಸಿ ತಯಾರಿಸಿದಂತಹ ಆಹಾರಗಳನ್ನು ಸೇವಿಸಬೇಕು. ಸೊಪ್ಪು ತರಕಾರಿಗಳನ್ನು ಹಾಗೂ ನಾರಿನಿಂದ ಕೂಡಿದ ತರಕಾರಿಗಳನ್ನು ಅಡಿಗೆಯಲ್ಲಿ ಬಳಸಬೇಕು. ಮಾಂಸಾಹಾರಿಗಳು ಎಲ್ಲ ರೀತಿಯ ಮಾಂಸಗಳನ್ನು ಸೇವಿಸಬಹುದು.ಬೇಳೆ ಕಾಳುಗಳು,ಗಡ್ಡೆಗೆಣಸುಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು(ಇವುಗಳ ಅಧಿಕ ಸೇವನೆಯಿಂದ ಮಲಬದ್ಧತೆ ಉಂಟಾಗಬಹುದು).ದಿನದಲ್ಲಿ ಹಲವು ಬಾರಿ ಬಿಸಿ ನೀರನ್ನು ಕುಡಿಯಬೇಕು.

ಕೂದಲು ಹಾಗೂ ತ್ವಚೆಯ ಆರೈಕೆ: ಕೂದಲು ಒರಟಾಗುವುದು,ಉದುರುವುದು ಹಾಗೂ ತಲೆಹೊಟ್ಟನ್ನು ತಡೆಯಲು ತಲೆಗೂದಲಿಗೆ ವಾರಕ್ಕೆರಡು ಬಾರಿ ಚೆನ್ನಾಗಿ ಎಣ್ಣೆ ಹಚ್ಚಬೇಕು. ತೆಂಗಿನ ಎಣ್ಣೆ‌ಅಥವಾ ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಚೆನ್ನಾಗಿ ಮೈಗೆ ಹಾಗೂ ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ಸೀಗೆ,ಲಿಂಬೆ ರಸ ಅಥವಾ ಕಡ್ಲೆಪುಡಿ ಉಪಯೋಗಿಸಿ ತೊಳೆಯಬೇಕು.
ಪಾದದ ಹಿಮ್ಮಡಿ ಒಡೆತ ಮತ್ತು ನೋವು: ಇದಕ್ಕೆ ಉಗುರು ಬೆಚ್ಚಗಿನ ನೀರಲ್ಲಿ ಪಾದವನ್ನು ಚೆನ್ನಾಗಿ ತೊಳೆದು ಒರೆಸಿ ರಾತ್ರಿ ಎಣ್ಣೆ, ಹಾಲಿನ ಕೆನೆ ಅಥವಾ ಲೋಳೆರಸವನ್ನು ಹಚ್ಚಿ ಮಲಗಬೇಕು.

ತುಟಿ ಒಡೆತ: ತುಟಿಗೆ ಬೆಣ್ಣೆ,ತುಪ್ಪ,ಎಣ್ಣೆ ಅಥವಾ ಹಾಲಿನ ಕೆನೆಯನ್ನು ಹಚ್ಚುವುದು.
ವ್ಯಾಯಾಮ: ಚಳಿಗಾಲದಲ್ಲಿ ಹಗಲು ಕಡಿಮೆ ಹಾಗೂ ರಾತ್ರಿ ದೀರ್ಘವಾಗಿರುವುದರಿಂದ ಶಾರೀರಿಕ ಜಡತ್ವ ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಿಸಲು ಸಣ್ಣ ಪುಟ್ಟ ವ್ಯಾಯಾಮಗಳನ್ನು ಮಾಡಬೇಕು. ಇದರಿಂದ ಸಂಧಿಗಳು ಹಾಗೂ ಮಾಂಸ ಪೇಶಿಗಳು ಸಡಿಲಗೊಂಡು ಶರೀರದಲ್ಲಿ ರಕ್ತಸಂಚಾರವು ವೃದ್ಧಿಸುತ್ತದೆ.

ಗಮನಿಸಬೇಕಾದ ಇನ್ನೊಂದು ಅಂಶ ಏನೆಂದರೆ ವಾತಾವರಣದಲ್ಲಿ ತೇವಾಂಶವು ಕಡಿಮೆಯಾಗಿರುವುದರಿಂದ ಧೂಳಿನ ಕಣಗಳು ಗಾಳಿಯಲ್ಲಿ ಹರಡಿರುತ್ತವೆ(ಅದರಲ್ಲೂ ವಾಹನಗಳ ದಟ್ಟಣೆ ಹಾಗೂ ಕಾರ್ಖಾನೆಗಳು ಇರುವಂತಹ ನಗರಗಳಲ್ಲಿ ಇನ್ನೂ ಅಧಿಕ). ಮಾತ್ರವಲ್ಲದೆ ಹೆಚ್ಚಿನ ಸಸ್ಯಗಳು ಹೂ ಬಿಡುವ ಸಮಯವಾದುದರಿಂದ ಗಾಳಿಯಲ್ಲಿ ಪರಾಗರೇಣುಗಳೂ ಸೇರಿಕೊಂಡಿರುತ್ತವೆ. ಇದರಿಂದಾಗಿ ಕೆಲವರಲ್ಲಿ ಅಲರ್ಜಿ ಮೊದಲಾದ ಶ್ವಾಸ ಸಂಬಂಧೀ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ವಿಟಾಮಿನ್ ಸಿ ಇರುವಂತಹ ಹಣ್ಣುಗಳಾದ ಕಿತ್ತಳೆ,ಪೇರಳೆ,ಪಪ್ಪಾಯಿ,ನೆಲ್ಲಿಕಾಯಿಗಳ ಸೇವನೆಯಿಂದ ಶರೀರದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಬಹುದು. ಬಿಸಿ ಹಾಲಿಗೆ ಅರಶಿನ ಪುಡಿ ಮತ್ತು ಬೆಲ್ಲ ಸೇರಿಸಿ ಕುಡಿಯುವುದೂ ಉತ್ತಮ. ಶುಂಠಿ, ಒಳ್ಳೆಮೆಣಸು, ಅರಶಿನ, ಲವಂಗವನ್ನು ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿಯಬಹುದು.

ಮನೆಯನ್ನೂ ಧೂಳಿನಿಂದ ಮುಕ್ತವಾಗಿರುವಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ಗಾಳಿ ಬಿಸಿಲು ಚೆನ್ನಾಗಿ ಮನೆಯನ್ನು ಪ್ರವೇಶಿಸುವಂತೆ ನೋಡಿಕೊಳ್ಳಬೇಕು. ಹೊದಿಕೆ,ಕಂಬಳಿ,ಹಾಸಿಗೆ,ತಲೆದಿಂಬುಗಳನ್ನು ಬಿಸಿಲಿಗೆ ಹಾಕಿ ಧೂಳು ಕೊಡವಬೇಕು. ಸಾಕುಪ್ರಾಣಿಗಳಿಂದಲೂ ಸ್ವಲ್ಪ ಮಟ್ಟಿನ ಅಂತರ ಕಾಯ್ದುಕೊಂಡರೆ ಒಳ್ಳೆಯದು.

ಹೀಗೆ ಈ ವರ್ಷದ ಚಳಿಗಾಲದೊಂದಿಗೆ ಉಲ್ಲಾಸದಾಯಕವಾಗಿ ಮುನ್ನಡೆಯುತ್ತಾ ಹೊಸವರ್ಷವನ್ನು ಸ್ವಾಗತಿಸೋಣ.

-ಡಾ.ಹರ್ಷಿತಾ ಎಂ.ಎಸ್ ,  ಉಡುಪಿ

11 Comments on “ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ

  1. ಬರಹ ಚೆನ್ನಾಗಿದೆ.ಉತ್ತಮ ಮಾಹಿತಿ ಡಾಕ್ಟ್ರೆ..

  2. ಚಳಿಗಾಲದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಅಚ್ಚುಕಟ್ಟಾಗಿ ಹೇಳಿದ್ದಲ್ಲದೇ, ಅಲರ್ಜಿ ಬಗ್ಗೆ ನೀಡಿದ ಮಾಹಿತಿ ಮತ್ತು ಸಲಹೆಗಳು ಅತ್ಯಂತ ಉಪಯುಕ್ತ. ಮನೆಯೊಳಗೇ ಕೂತರೂ ಚಳಿಗೆ ಬರುವ ಆಕ್ಷೀ ಮತ್ತು ಸುರಿಯುವ ಮೂಗು (running nose) – ಇದಕ್ಕೇನಾದರೂ ಸರಳ ಪರಿಹಾರ ನೀಡಬಹುದೇ? ಧನ್ಯವಾದಗಳು.

    1. ಧನ್ಯವಾದಗಳು..ಲೇಖನದಲ್ಲಿ ತಿಳಿಸಿದ ಕಶಾಯ ಮೊದಲಾದವುಗಳ ಸೇವನೆ ಜೊತೆಗೆ ಬಿಸಿನೀರಿನ ಆವಿಯನ್ನು ತೆಗೆದುಕೊಳ್ಳುವುದರಿಂದಲೂ ಉತ್ತಮ ಪರಿಣಾಮ ಸಿಗಬಹುದು…

      1. ಓಹ್! ಖಂಡಿತಾ ಮಾಡಿ ನೋಡುವೆ. ಪ್ರತಿಸ್ಪಂದನಕ್ಕೆ ಮತ್ತು ಸಲಹೆಗೆ ಧನ್ಯವಾದಗಳು 🙂

  3. ಚಳಿಗಾಲದ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *