ಸ್ವಾತಂತ್ರ್ಯದ ಬಣ್ಣಗಳು

Share Button

ಇದೀಗ ಆಗಸ್ಟ್ ತಿಂಗಳು. ಟಿವಿಯಲ್ಲಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಿನೆಮಾಗಳಿಂದ ಹಿಡಿದು ಸಾಕ್ಷ್ಯಚಿತ್ರಗಳು, ಪತ್ರಿಕೆಗಳಲ್ಲಿನ ಸಂಪಾದಕೀಯಗಳು, ಲೇಖನಗಳು, ಧಾರಾವಾಹಿಗಳು.. ಹೀಗೆ ದೇಶಕ್ಕೆ ದೇಶವೇ ಸ್ವಾತಂತ್ರ್ಯದ ಸ್ಮೃತಿಯನ್ನು ಸಂಭ್ರಮಿಸುವ ಕಾಲ. ಸ್ವತಂತ್ರವಾಗಿರಲು ಯಾರಿಗೆ ಇಷ್ಟ ಇಲ್ಲ? ಪುಟ್ಟ ಮಗುವಿಗೆ ಅಮ್ಮನ ಕೈ ಬಿಡಿಸಿಕೊಂಡು ಓಡುವ ಹಂಬಲ. ಟೀನೇಜಿನ ಹುಡುಗ ಹುಡುಗಿಯರಿಗೆ ದೊಡ್ಡವರ ಕಣ್ಣು ತಪ್ಪಿಸಿ ತಮ್ಮದೇ ಲೋಕದಲ್ಲಿರುವ ಹಂಬಲ. ಸ್ವಾತಂತ್ರ್ಯದ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ, ದೇಶದಿಂದ ದೇಶಕ್ಕೆ, ಆಯಾ ಸಂಸ್ಕೃತಿಗನುಗುಣವಾಗಿ ವಿಭಿನ್ನವಾಗಿರುತ್ತದೆ.

ಒಂದು ಮನ ಕರಗಿಸುವ ಕತೆಯಲ್ಲಿ ಕೂಡು ಕುಟುಂಬದ ಗೃಹಿಣಿಯೋರ್ವಳು ಹೇಳುತ್ತಾಳೆ ” ನನಗೆ ಒಂದಿಡೀ ದಿನ ಅಡಿಗೆ, ಮನೆ ಕೆಲಸ ಏನೂ ಮಾಡದೆ ಒಬ್ಬಳೇ ಇರುವ ಆಸೆ” ಎಂದು. ಹಳ್ಳಿಯಲ್ಲಿನ ಹೆಣ್ಣು ಮಗಳೊಬ್ಬಳು ನನಗೆ ಹೇಳಿದ್ದಳು ” ನನಗೆ ಒಂದು ದಿನವಾದರೂ ಜೀನ್ಸ್ ಹಾಕಿ ಫ಼್ಯಾಷನೆಬಲ್ ಆಗಿ ಇರಬೇಕು ಎಂದು”. ( ಜೀನ್ಸ್ ಹಾಕುವುದು ಬಿಡಿ ಕೂದಲನ್ನು ಕತ್ತರಿಸಲು,ಸ್ವಂತ ಬ್ಯಾಂಕ್ ಅಕೌಂಟ್ ಹೊಂದಲು ಕೂಡ ಅನುಮತಿ ಕೇಳಬೇಕಾದ ಹೆಣ್ಣು ಮಕ್ಕಳು ಇದ್ದಾರೆ ಎಂದರೆ ನೀವು ನಂಬಬೇಕು). ದೇವರ ದಯೆಯಿಂದ ದಕ್ಷಿಣ ಭಾರತದವರಾದ ನಮಗೆ ಮುಖಕ್ಕೆ ಸೆರಗು ಹೊದ್ದುಕೊಳ್ಳುವ ಪರಿಸ್ಥಿತಿ ಇಲ್ಲ. ಸಂಸ್ಕೃತಿ ಎನ್ನುವುದು ಧರ್ಮ, ಜಾತಿ, ಆರ್ಥಿಕತೆ ಇವುಗಳನ್ನೆಲ್ಲ ಆಧರಿಸಿಕೊಂಡಿರುವ ಕಾರಣ ಸ್ವಾತಂತ್ರ್ಯ ಕೂಡ ಅಷ್ಟಿಷ್ಟು ದಕ್ಕಿದಷ್ಟು. ಹಾಗೆ ನೋಡಿದರೆ ನಾಗರಿಕತೆ ಎನ್ನುವುದು ಸ್ವಾತಂತ್ರ್ಯ ಸ್ವೇಚ್ಛೆ ಆಗದಂತೆ ತಡೆಗಟ್ಟುವುದೇ ಆಗಿತ್ತು ಅಲ್ಲವೇ? ಅದೇನೇ ಇರಲಿ, ಹೀಗೆಲ್ಲ ಟೀಕಿಸಲಿಕ್ಕಾದರೂ ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯವಿದೆ, ಅದಕ್ಕೆ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ, ಅವರ ತಪನೆಗೆ ಋಣಿಯಾಗಿರಬೆಕು. ಎಷ್ಟೋ ವಿರೋಧಾಭಾಸಗಳಿದ್ದರೂ ಒಂದು ದೇಶವಾಗಿ ಭಾರತ ಏಕ ಸೂತ್ರದಲ್ಲಿ ಬೆಸೆದಿದೆ ಹಾಗೂ ಅದು ಧರ್ಮ, ಜಾತಿ, ಪಂಗಡಗಳಿಂದ ಸಾಧಿತವಾಗಿರುವುದು ಇಂದು ಸತ್ಯ. ಒಂದುಗೂಡಿಸುವ ಆಂಶಗಳೇ ವಿಘಟನೆಗೆ ಕಾರಣವಾಗುತ್ತಿರುವುದೂ ಇನ್ನೊಂದು ಸತ್ಯ. ವ್ಯಕ್ತಿಗತವಾಗಿಯೂ, ಸಾಂಘಿಕವಾಗಿಯೂ ದೈನ್ಯದ, ದಾಸ್ಯದ ಅನುಭವ ಹೆಚ್ಚು ಕಡಿಮೆ ಎಲ್ಲರಿಗೂ ಆಗುವ ಕಾರಣದಿಂದಾಗಿಯೇ ಸ್ವಾತಂತ್ರ್ಯಕ್ಕೆ ಇಷ್ಟು ಮಹತ್ವ.

ಹಾಗೆ ನೋಡಿದರೆ ನಿಜವಾದ ಸ್ವಾತಂತ್ರ್ಯ ಸಮಷ್ಟಿ ಪ್ರಜ್ಞೆಯಲ್ಲಿ ಬದುಕುತ್ತಿರುವ ಸಾಮಾಜಿಕತೆಯಲ್ಲಿ ಸಾಧ್ಯ ಇಲ್ಲ. ವ್ಯಕ್ತಿ ಸ್ವಾತಂತ್ರ್ಯ, ಸಮೂಹದ ಸಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ ಎಲ್ಲಕ್ಕೂ ಒಂದು ಚೌಕಟ್ಟಿದೆ ಹಾಗೂ ಸಾಂವಿಧಾನಿಕ ಹಕ್ಕುಗಳು ಮತ್ತು ಕರ್ತವ್ಯದ ಅಡಿಪಾಯದಲ್ಲಿಯೇ ಸ್ವಾತಂತ್ರ್ಯವನ್ನು ನಾವು ಅನುಭವಿಸುತ್ತಿರುತ್ತೇವೆ. (ಪದವಿ ತರಗತಿಗಳಲ್ಲಿ ಭಾರತೀಯ ಸಂವಿಧಾನ ಕಡ್ಡಾಯ ಮಾಡಿರುವುದು ಈ ನಿಟ್ಟಿನಲ್ಲಿ ತುಂಬ ಒಳ್ಳೆಯದು.) ಭವಿಷ್ಯದ ಪ್ರಜೆಗಳಿಗೆ ಸಂವಿಧಾನದ ಅರಿವು ಕಂಪಲ್ಸರಿಯಾಗಿ ಇರಬೆಕು.

ಜನ ಸಾಮಾನ್ಯರಾದ ನಾವು ಸ್ವಾತಂತ್ರ್ಯ, ರಾಷ್ಟ್ರೀಯತೆ, ರಾಜಕೀಯ.. ಇವನ್ನೆಲ್ಲ ಯೋಚಿಸುವುದು ಕಡಿಮೆ. ಅದರಲ್ಲೂ ಮಹಿಳೆಯರು ಮನೆ, ಮನೆ ವಾರ್ತೆಗೆ ಸಂಬಂಧಿಸಿದ ವಿಷಯಗಳನ್ನೇ ಧ್ಯಾನಿಸುತ್ತಿರಬೇಕೆಂದು ಭಾರತದ ಕುಲೀನ ವರ್ಗದ ನಿರೀಕ್ಷೆ ಆಗಿರುವುದರಿಂದ ಸಕ್ರಿಯ ರಾಜಕಾರಣದಲ್ಲಿರುವವರನ್ನು ಹೊರತು ಪಡಿಸಿದರೆ ಈ ಬಗ್ಗೆ ಆಸಕ್ತಿ ಇರುವವರು ವಿರಳ. ಹಾಗಿದ್ದರೂ ‘ಪರ್ಸನಲ್ ಈಸ್ ಪೊಲಿಟಿಕಲ್’ ಎನ್ನುವಂತೆ ದೇಶದ ಸ್ಥಿತಿಗತಿಗಳು ನಮ್ಮ ಜೀವನದ ಮೇಲೆ, ಹೆಚ್ಚೇಕೆ ನಾವು ಖರೀದಿಸುವ ಕೊತ್ತಂಬರಿ ಸೊಪ್ಪಿನ ಮೇಲೆ ಕೂಡ ಪರಿಣಾಮ ಬೀರುವುದು ತುಂಬ ತಡವಾಗಿ ನಮಗೆ ಅರಿವಾಗುತ್ತದೆ. ರೋಟಿ ಕಪಡಾ ಮಕಾನ್ ಇವಷ್ಟಲ್ಲದೆ ವಿದ್ಯಾಭ್ಯಾಸ, ಉದ್ಯೋಗ, ಸ್ವಂತವಾಗಿ ಏನನ್ನಾದರೂ ಸಾಧಿಸಲು ಅವಕಾಶ, ಮನರಂಜನೆ ಇವಿಷ್ಟು ಇದ್ದರೆ ಒಬ್ಬ ಭಾರತೀಯ ಪ್ರಜೆ ಫ಼ುಲ್ ಖುಶ್. ಆದರೆ ಇವಿಷ್ಟು ಸಿಗಲೂ ಕೂಡ ದಿನ ನಿತ್ಯ ಹೋರಾಡಬೇಕಾದ ಪರಿಸ್ಥಿತಿ ದೇಶದ ದೊಡ್ಡ ಪಾಲು ಜನತೆಗೆ ಇದೆ.

ಕಾರ್ಲ್ ಮಾರ್ಕ್ಸ್ ಕಾಲದಿಂದ ಹಿಡಿದು ‘ಗರೀಬಿ ಹಟಾವೋ’ ಮೊದಲುಗೊಂಡು ಉದ್ಯೋಗ ಖಾತ್ರಿ ಯೋಜನೆ ಎಲ್ಲ ಇದ್ದರೂ ತುತ್ತು ಅನ್ನಕ್ಕಾಗಿ, ಮಲಗಲೊಂದು ಸೂರು ಕೂಡ ಇಲ್ಲದೆ ಹೆಚ್ಚೇಕೆ ತನ್ನ ದೇಹದ ಮೇಲೆ ಕೂಡ ಅಧಿಕಾರ ಇಲ್ಲದೆ ಇರುವ ದೈನೇಸಿ ಸ್ಥಿತಿ ಈಗಲೂ ಇರುವಾಗ ಕಡು ಬಡವರಿಗೆ ಸಮಾನತೆ ಎನ್ನುವುದು ಬಹುಶ: ಮರೀಚಿಕೆ. ಬಿಬಿಸಿ ಯ ‘ವೆಲ್ಕಂ ಟು ಇಂಡಿಯಾ’ ಇದನ್ನು ಮನ ತಟ್ಟುವಂತೆ ತೋರಿಸುತ್ತದೆ. ಅದ್ಭುತ ಎನಿಸುವ ಈ ಸಾಕ್ಷ್ಯಚಿತ್ರದಲ್ಲಿ ಮೋರಿಗೆ ಇಳಿದು ಚಿನ್ನದ ಅದುರಿನ ಕಣಗಳನ್ನು ಸಂಗ್ರಹಿಸುವವರು, ಸಮುದ್ರ ತೀರಗಳಲ್ಲಿ ಕಳ್ಳ ಭಟ್ಟಿ ಸಾರಾಯಿ ತಯಾರಿಸುವವರು. ಗುಜರಿ ಆಯುವವರು, ಟೆಂಟುಗಳಲ್ಲಿ ಬದುಕುವವರು, ನದಿಗಳಿಗೆ ಭಕ್ತಾದಿಗಳು ಎಸೆಯುವ ನಾಣ್ಯ ಹುಡುಕುವವರು, ಬೀದಿ ಬದಿ ಪುಸ್ತಕ, ಬಳೆ, ಕಳ್ಳೆ ಕಾಯಿ ಮಾರುವವರು, ಜುಗ್ಗಾಡುತ್ತ ಸಣ್ಣ ಪುಟ್ಟ ವ್ಯಾಪಾರ ಮಾಡುವವರು.. ಹೀಗೆ ಹೋರಾಟದ, ಆದರೆ ಧನಾತ್ಮಕ ಬದುಕನ್ನು ತೋರಿಸುತ್ತಾರೆ.

ಇವರುಗಳ ಕಷ್ಟಗಳಿಗೆ ಮನಮಿಡಿಯುವುದು ಹೌದಾದರೂ ಮಹಾತ್ಮಾ ಗಾಂಧಿಯಂತೆಯೋ, ಕೈಲೇಶ್ ಸತ್ಯಾರ್ಥಿಯಂತೆಯೋ ಅತಿ ಸರಳವಾಗಿ ಬದುಕಲು ನಮಗೆ ಸಾಧ್ಯವಿಲ್ಲದ ಕಾರಣ, ಆಧುನಿಕ ಕ್ಯಾಪಿಟಲಿಸಂನ ಜೀವನ ವಿಧಾನವೇ ವೈಭೋಗಕ್ಕೆ ಪೂರಕವಾಗಿರುವ ಕಾರಣ, ನಮ್ಮ ಜೀವನ ಮೌಲ್ಯಗಳೇ ಅಭೂತ ಪೂರ್ವ ಪಲ್ಲಟದಲ್ಲಿದೆ. ಆಸೆ, ನಿರೀಕ್ಷೆ, ಮಹತ್ವಾಕಾಂಕ್ಷೆ, ಲೋಭ, ಭ್ರಷ್ಟಾಚಾರ.. ಹೀಗೆ ನವ್ಯೋತ್ತರ ಜಗತ್ತಿನಲ್ಲಿನ ಹೊಸದಾದ ಸಮಸ್ಯೆಗಳು ಕೂಡ.

ಇನ್ನು ಸಾಮಾಜಿಕ ಜಾಲ ತಾಣಗಳು ಸಕ್ರಿಯವಾಗಿರುವ ಈ ಕಾಲ ಘಟ್ಟದಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವೂ ಒಂದು ಸೂಕ್ಷ್ಮ ವಿಚಾರ. ವಾಕ್ ಸ್ವಾತಂತ್ರ್ಯ ಎನ್ನುವುದು ಸಂವಿಧಾನ ಬದ್ಧ ಹಕ್ಕು ಹೌದಾದರೂ ಅದನ್ನು ಯಾವ ವಿಚಾರಕ್ಕೆ ಎಷ್ಟರ ಮಟ್ಟಿಗೆ ಬಳಸಬೆಕೆನ್ನುವುದು ಅವರವ ವಿವೇಕಕ್ಕೆ ಬಿಟ್ಟ ವಿಷಯ. ಸರಕಾರಗಳ ಕಾರ್ಯ ಶೈಲಿಗಳು, ರಾಜಕೀಯ ನಾಯಕರ ನಡೆ ನುಡಿಗಳು, ಸೆಲೆಬ್ರಿಟಿಗಳ ಹೇಳಿಕೆಗಳು.. ಹೀಗೆ ಎಲ್ಲವೂ ಎಲ್ಲರಿಂದಲೂ ವಿಮರ್ಶಿಸಲ್ಪಡುವುದು ಯಾವ ರೀತಿಯ ಬೆಳವಣಿಗೆ ಎಂದು ಕಾದು ನೋಡಬೇಕಷ್ಟೆ.


ಅನಕ್ಷರತೆ, ನಿರುದ್ಯೋಗ, ಬಡತನ, ಹೆಚ್ಚುತ್ತಿರುವ ಸ್ಲಮ್ ಗಳು, ಜನಸಂಖ್ಯೆ, ಬೆಲೆ ಏರಿಕೆ.. ಹೀಗೆ ಇವೆಲ್ಲ ಸಮಸ್ಯೆಗಳ ನಡುವೆಯೂ ನಾವು ಭಾರತದಂತಹ ಅತಿ ದೊಡ್ಡ ಪ್ರಜಾಪಭುತ್ವ ದೇಶದಲ್ಲಿ ಇದ್ದೇವೆ ಎನ್ನುವುದೇ ಹೆಮ್ಮೆಯ ವಿಷಯ. ಅದೂ ಅಲ್ಲದೆ ಒಗ್ಗೂಡಿದ ಜನತೆಯ ಕರ್ತೃತ್ತ್ವ ಶಕ್ತಿಗೆ, ಇಚ್ಛಾ ಶಕ್ತಿಗೆ ಮಿಗಿಲಾದುದುದು ಯಾವುದೂ ಇಲ್ಲ. ಹೀಗಾಗಿಯೇ ದೇಶಕ್ಕೆ ದಕ್ಕಿದ ಸ್ವಾತಂತ್ರ್ಯವನ್ನು ಅರಿವಿನ ಬೆಳಕಿನಿಂದ ಜತನದಿಂದ ಕಾಪಿಟ್ಟುಕೊಳ್ಳೋಣ.

,

– ಜಯಶ್ರೀ ಬಿ. ಕದ್ರಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: