ನ್ಯಾಸ 

Spread the love
Share Button
 

ಸನ್ಯಾಸ, ಮುಕ್ತಿ,ದೈವ ಸಾಕ್ಷಾತ್ಕಾರ, ಪುನರ್ಜನ್ಮ ರಾಹಿತ್ಯತೆ ಇಂಥ ಅಲೌಕಿಕ ಪರಿಭಾವಗಳು ಜನಸಾಮಾನ್ಯರ ಅಳವಿಗೆ ಬರುವುದು ದುಸ್ತರ. ಇಂಥ ಪರಿಕಲ್ಪನೆಗಳ ಸ್ಥಿತಿಯನ್ನು ತಲುಪುವುದೇ ಎಷ್ಟೋ ಜನಕ್ಕೆ ಸಾಧ್ಯವಾಗದು. ನಮ್ಮ ಗ್ರಾಹ್ಯ ಅನುಭೂತಿ, ಅನುಭವಗಳ ಆಧಾರದಲ್ಲೇ ಜೀವನದ ಅರ್ಥ ಹಚ್ಚಲು ಪ್ರಯತ್ನಿಸುವ ನಮಗೆ ಅದು ದಕ್ಕಿತೋ ಬಿಟ್ಟಿತೋ ಅದೂ ಒಂದು ಪ್ರಶ್ನೆಯೇ .

ನ್ಯಾಸ ಕಾದಂಬರಿಯ ಬಗ್ಗೆ ಏನನ್ನಾದರೂ ಹೇಳುವುದೆಂದರೆ ಸಮುದ್ರದ ಒಂದು ಅಂಚಿನಲ್ಲಿ ನಿಂತು ಅದರ ಸುತ್ತಳತೆಯ ಲೆಕ್ಕ ಹಾಕಿದಂತೆ ಅನಿಸುತ್ತದೆ. ಅಗಾಧವಾದ ವಸ್ತು ಹರವಿರುವ ಈ ಸಾಹಿತ್ಯಸಮೃದ್ಧಿಯಲ್ಲಿ ನೈಜ ಸಂನ್ಯಾಸವೆಂದರೆ ಏನು.. ಸಂನ್ಯಾಸದ ಒಳಾರ್ಥಗಳೇನಿರಬಹುದು…ಜನಸಾಮಾನ್ಯರೇ ಆಗಿ ಕಾಣಿಸಿಕೊಳ್ಳುವ ಹಲವರಲ್ಲಿ ಜೀವನ ದೃಷ್ಟಿ ಕವಲೊಡೆದು ವಿಭಿನ್ನವಾಗಿ ಚಲಿಸುವುದು ಹೇಗೆ ಎಂಬ ಚಿತ್ರಣವಿದೆ.ಸನ್ಯಾಸಿಗಳ ಜೀವನದ ಬಗ್ಗೆ ನಮಗೆಲ್ಲ ಇರುವ ಒಂದು ಅಪಾರದರ್ಶಕ ತೆರೆಯನ್ನು ಕಳಚಿಟ್ಟು ತೋರಿಸುವ ಈ ಕಾದಂಬರಿಯ ಪುಟಗಳಲ್ಲಿ ಪ್ರತ್ಯಕ್ಷವಾಗುವ ಅನೇಕ ವಿರಾಗಿಗಳು ಅರ್ಥಾತ್ ಲೌಕಿಕ ಜೀವನಕ್ಕೆ ಬೆನ್ನು ಹಾಕಲೆಳಸುತ್ತ ಆಧ್ಯಾತ್ಮ ಮಾರ್ಗಕ್ಕೆ ಆಶ್ರಮಗಳ ಮೂಲಕ ಏರಬಯಸುವ  ಅನೇಕ ಜೀವಿಗಳಲ್ಲಿ ಸತ್ಯಪ್ರಕಾಶನೆಂಬ ಹುಡುಗ ಪರೋಕ್ಷ ರೂಪದಲ್ಲಿ ಇಡೀ ಕಥನವನ್ನು ಆವರಿಸಿಕೊಂಡರೂ ಮತ್ತೆ ಅದೇ ಮೂಲ ಪ್ರಶ್ನೆಯನ್ನೇ ಬಿಡಿಸಲಾಗದ ‘ಪುನರಪಿ ಮೂಲೆ ಸ್ಥಿತೇ’ ಎಂಬಲ್ಲಿಗೆ  ತನ್ನನ್ನೇ ತಂದುಕೊಂಡುಬಿಡುತ್ತಾನೆ. ಸತ್ಯಪ್ರಕಾಶನಲ್ಲಿದ್ದ ಆಧ್ಯಾತ್ಮಿಕ ತುಡಿತ, ಶಾಂತಿ ಮತ್ತು  ಮುಕ್ತಿಗಾಗಿನ  ಹಂಬಲ,  ಇನ್ನುಳಿದ ಹಲವರಲ್ಲೂ ಅಷ್ಟೇ ತೀವ್ರವೇನಿಸಿದರೂ  ಅದನ್ನು ಸಾಧಿಸಲು ಕೈಗೆಟುಕಿದ ಹಲವು ಸಾಧನಗಳ ಬಗ್ಗೆ ಅವರೆಲ್ಲರೀಗೂ ಯಾವುದೋ ಒಂದು ಹಂತದಲ್ಲಿ  ಆಗಿಬಿಡುವ ಭ್ರಮನಿರಸನಗಳ ಸವಿಸ್ತಾರ ರೂಪಕ ಈ ಕಾದಂಬರಿ.

ಮುಕ್ತಿಗಾಗಿ, ಜಗನ್ಮಾತೆಯ ಕೃಪೆಗಾಗಿ ಸಂನ್ಯಾಸಕ್ಕೆ ಕಾಲಿಟ್ಟ, ಇಡಬಯಸುವ ಪುರುಷರ ಮನಸ್ಸಿನ ಒಳತೋಟಿಯ ಹಲವಾರು ನಿರ್ಭೆದ್ಯ ಸಂಗತಿಗಳ ಅನಾವರಣ. ತಂದೆ ತಾಯಿ, ರಕ್ತಸಂಬಂಧಗಳ ಕಟ್ಟು ಕಳಚಿಟ್ಟ   ಪ್ರಬುದ್ಧ ಮನಸುಗಳ ವಿವಿಧ ಆಯಾಮಗಳ ನೋಟ ಇಲ್ಲಿದೆ. ಇವರೆಲ್ಲ ಹೊಕ್ಕಿರುವುದು ನಮ್ಮ ನಿಮ್ಮೆಲ್ಲರ ನಡುವಲ್ಲೇ ಇರುವ ಅನನ್ಯ ಮುಕ್ತಿಮಾರ್ಗದ ವರ್ತುಲವೊಂದಕ್ಕೆ..ಆದರೂ ಅದೊಂದು ವಿಭಿನ್ನ ಜಗತ್ತು. ನಮ್ಮ ಜೊತೆಜೊತೆಯಲ್ಲೇ ಸಾಗಿ ಹೊರಟಿದ್ದರೂ ಎಲ್ಲರನ್ನೂ ಮೀರಿಸಿದ ಯೋಗಿಗಳು , ಸಾಧಕರು, ಸಾಧಕರಾಗಬಯಸುವವರು ಆ ದಾರಿಯಲ್ಲಿ  ದಾಟಿ ಹೋಗುವ ಅರಿಷಡ್ವರ್ಗಗಳು ಅಚ್ಚರಿ ಮೂಡಿಸುತ್ತವೆ. ಸ್ವಗತದಲ್ಲಿ ತೆರೆದುಕೊಳ್ಳುವ ಇಲ್ಲಿನ ಸಾಧಕರ ಕಥನದಲ್ಲಿ ನಮಗೆ ಇದುವರೆಗೂ ಸಂಪೂರ್ಣ ಪರಿಚಯವಿಲ್ಲದ ಪಾರಮಾರ್ಥಿಕ ತಾಪಸೀ ,ಜಗತ್ತಿನ ಒಳನೋಟಗಳನ್ನು  ತೋರಿಸಿ ಅಚ್ಚರಿ  ಮೂಡಿಸುತ್ತವೆ.

ನಾನು ಯಾರು..? . ‘ಕೋಹಂ..ಕಸ್ತ್ವಂ ‘ ಎಂಬ ಮೂಲಪ್ರಶ್ನೆಯ ಉತ್ತರವನ್ನು ಶೋಧಿಸಲು ಪರಿವ್ರಾಜಕರಾಗಿ ಹೊರಟವರಿಗೂ ಆಧ್ಯಾತ್ಮಿಕ ವಲಯಗಳಲ್ಲಿ ದ್ವಂದ್ವ, ನಿರಾಸೆ, ನೋವುಗಳ ಅನುಭವ ಆಗುತ್ತದೆ. ಆಧ್ಯಾತ್ಮ ಸಾಧನೆಗೆ ಪ್ರಾಪಂಚಿಕ ಸಾಧನಗಳಾಗುವ  ಆಶ್ರಮಗಳಲ್ಲಿ ನಡೆಯುವ ಒಳಜಗಳ, ಸಮಯಸಾಧಕತನ, ಸ್ವಾರ್ಥಗಳು ಮನಸ್ಸನ್ನು ಹಿಂಸಿಸಿದರೆ  ಸಂನ್ಯಾಸಿಗಳ ವಲಯಕ್ಕೆ ಕಪ್ಪು  ಚುಕ್ಕೆಯಂಥ ಅಪ್ರಮತ್ತಾನಂದರಂಥ ಕೆಲವು ನಕಲಿ ಯೋಗಿಗಳೂ  ಮೊದಲೇ ಕೆಲವರು  ಅನುಮಾನದಿಂದ  ಕಾಣುವ   ಸಂನ್ಯಾಸ  ವಲಯದ ಬಗ್ಗೆ ಇನ್ನಷ್ಟು ಚಿಂತೆಗಳನ್ನು ಹುಟ್ಟಿಸುತ್ತವೆ.

ದಕ್ಷಿಣದ ಆಶ್ರಮಗಳ ಸಂಗತಿ ಹೀಗಿದ್ದರೆ ಉತ್ತರದ ಆಶ್ರಮಗಳಲ್ಲಿ ಸಲಿಂಗ ಕಾಮ, ಅಥವಾ ಸಂನ್ಯಾಸಿಗಳಿಗೆ ನಿರಂತರ ಮಹಿಳಾ ಸಂಪರ್ಕ  ಇರುವ ಸಂಗತಿ ಬ್ರಹ್ಮಚರ್ಯ ಹಾಗೂ ಸಂನ್ಯಾಸ ಇವೆರಡೂ  ಅವಿಭಾಜ್ಯ ಅಂಶಗಳು ಎಂಬ ನಮ್ಮ ಭಾವನೆಯನ್ನು ಅಲ್ಲಗಳೆಯುತ್ತವೆ. ನೈಜ ಪ್ರೇಮ, ನಿಸ್ವಾರ್ಥ ಸಮರ್ಪಣೆ, ಜಗನ್ಮಾತೆ ಅಥವಾ ಕೃಷ್ಣನಲ್ಲಿ ಕಾಣಬಯಸುವ ಸಂಪೂರ್ಣ ವಿಲೀನವನ್ನು ಬಯಸಿ ಹೊರಟ ಹಲವಾರು ಸಾಧಕರು ಯಾವುದೋ ಒಂದು ಬಗೆಯಲ್ಲಿ ಭ್ರಮನಿರಸನಗೊಳ್ಳುವ ವಸ್ತುನಿಷ್ಠ ನಿರೂಪಣೆ ನ್ಯಾಸ ಕಾದಂಬರಿಯ ಮುಖ್ಯ ಅಂಶಗಳಲ್ಲಿ ಒಂದು…

ಸತ್ಯಪ್ರಕಾಶನ ತಂದೆ ರುದ್ರಯ್ಯನವರನ್ನು ಹೊರತುಪಡಿಸಿದಂತೆ  , ಅವಿಮುಕ್ತಾನಂದರು,ದೇವಪ್ರಿಯಾನಂದರು,, ಧರ್ಮಾತ್ಮಾನಂದರು,ವೀತಭಯಾನಂದರು, ಸೇವಾನಂದರು ಹೀಗೆ ಇಲ್ಲಿ ಮುಖ್ಯವಾಹಿನಿಯಾಗಿ ಅಧ್ಯಾತ್ಮ ಮಾರ್ಗದಲ್ಲಿ ಹರಿಯುವ ಪ್ರತಿ ಸಂನ್ಯಾಸಿಯೂ ಸತ್ಯಪ್ರಕಾಶನನ್ನೇ ಒಂದು ವಿಧದ ಮಾನವೀಯ, ಸಾತ್ವಿಕಸ್ವರೂಪಿಯಾಗಿ , ಮೇಧಾಶಕ್ತಿಯ ಪ್ರತೀಕದಂತೆ ಭಾವಿಸಿಕೊಂಡು ಅವನೇ ಒಂದು ಬಗೆಯ ರೋಲ್ ಮಾಡೆಲ್ ಅನಿಸುವ ಭಾವನಾತ್ಮಕತೆ ಇಲ್ಲಿ ಕಥನದ ಉದ್ದಕ್ಕೂ ಹರಿದು ಬಂದಿದೆ. ಹೆಚ್ಚು  ಕಡಿಮೆ ಸತ್ಯನ ಸುತ್ತಲೇ ಎಂಬಂತೆ ಬಳಸಿಕೊಂಡು ಬರುವ ಅವರ ಚಿತ್ತವೃತ್ತಿಯ ಒಳಹೊರಗುಗಳ ವಿವರಣೆಯಲ್ಲಿ ಸಂನ್ಯಾಸ ಮಾರ್ಗ ಸ್ವೀಕರಿಸಿ ಆಶ್ರಮಗಳನ್ನು ಸ್ಥಾಪಿಸಿ ತನ್ಮೂಲಕ ಲೋಕೋದ್ಧಾರ, ಸಮಾಜ ಸೇವೆ, ಆಧ್ಯಾತ್ಮಿಕ ಪುನರುತ್ಥಾನ ಇಂಥ ಧ್ಯೇಯಗಳನ್ನೇ ಹೊಂದಿದ ಧರ್ಮಾತ್ಮಾನಂದರು, ದೇವಪ್ರಿಯಾನಂದರು ಬರಬರುತ್ತ ತಮ್ಮ ಆಶ್ರಮ ಮತ್ತದರ ವಿಸ್ತಾರಗಳನ್ನೇ  ಗುರಿ ಆಗಿಸಿಕೊಂಡು  ಲೌಕಿಕರಂತೆಯೇ ಜಮೀನು, ಕಟ್ಟಡ,  ಭವ್ಯ ಆಶ್ರಮ, ತೋಟ ಇತ್ಯಾದಿಗಳ ಲೋಭಕ್ಕೆ ಬೀಳುವ, ಅದಕ್ಕೋಸ್ಕರ ಶ್ರೀಮಂತ ಭಕ್ತರ , ರಾಜಕಾರಿಣಿಗಳ, ವ್ಯಾಪಾರಸ್ಥರ ಮರ್ಜಿ ಕಾಯುವ   ಪರಿಸ್ಥಿತಿ ತಂದುಕೊಂಡದ್ದಕ್ಕೆ  ಅವರೇ ಹೊಣೆ ಎಂದು ಅನಿಸುತ್ತಾರೆ.
;
ಅವಿಮುಕ್ತಾನಂದರು ಮಾತ್ರ ಇಲ್ಲಿ ಲೋಕಾರೂಢಿಗಳಿಗೆ, ಉಳಿದ  ಪರಿವ್ರಾಜಕರಿಗೆ  ವ್ಯತೀತರಾಗಿ ನಿಜಕ್ಕೂ ಸಂನ್ಯಾಸತ್ವದ ಮೂಲೋದ್ದೇಶಗಳನ್ನು ನಿಭಾಯಿಸುತ್ತಾ ತಮ್ಮ ಆನಾರೋಗ್ಯದಿಂದ ಚಿಕ್ಕ ವಯಸ್ಸಿನಲ್ಲೇ ಹೊಂದಿದ ದಾರುಣ ಸಾವಿನಲ್ಲೂ ಕೊನೆಯವರೆಗೂ ಅಧ್ಯಾತ್ಮದ ದಾರಿ ಬಿಟ್ಟಲುಗದೆ ನಮ್ಮ ಮನಸ್ಸಿನಲ್ಲಿ ನಿಲ್ಲುವಂಥ ಚೇತನವೆನಿಸುತ್ತಾರೆ… ನ್ಯಾಸಕ್ಕೆ ನಿಜವಾದ ಅರ್ಥವನ್ನು ಯಾರಾದರೂ ಒದಗಿಸಿದ್ದರೆ ಅದು ಅವಿಮುಕ್ತಾನಂದರೆ ಹೌದು.

ತಮ್ಮ  ಓದನ್ನು ಬಿಟ್ಟುಕೊಟ್ಟು ಅನೀವಾರ್ಯವಾಗಿಯಾದರೂ ಲೌಕಿಕ, ಪ್ರಾಪಂಚಿಕ ಜವಾಬ್ದಾರಿಗಳನ್ನು  ನಿಭಾಯಿಸಿ ಮಗನ ಅಗಲಿಕೆಯನ್ನು ಸಹಿಸಿದ ರುದ್ರಯ್ಯ, ಆಶ್ರಮಕ್ಕೆ ಮನೆಯನ್ನೇ ಬಿಟ್ಟುಕೊಟ್ಟು ತಮ್ಮೆಲ್ಲ ಹಣವನ್ನೂ ನೀಡಿದ ಹುಬ್ಬಳ್ಳಿಯ ಅಜ್ಜಿ ತಾತ, (ವೆಂಕಟೇಶ ರಾಯಕರ್) ಎಲ್ಲ ಸಂದರ್ಭದಲ್ಲೂ ಆಶ್ರಮದ ಒಳಿತೇ ಮುಖ್ಯ ಅನಿಸಿ ದುಡಿದ ವಿಜಯಲಕ್ಷ್ಮಿ, ಅನುಪಮಾ, ಕುಲಕರ್ಣಿಯವರು ಇಲ್ಲಿ ನಿಜಕ್ಕೂ ನಿಜಸಾಧಕರಾಗಿ ನಿಲ್ಲುತ್ತಾರೆ.  ಇನ್ನು ಶಮಂತ, ಸೋಮು, ತೇಜು, ಊರಿಗಾಗಿ, ತಮ್ಮವರಿಗಾಗಿ ಏನೆಲ್ಲಾ ಮಾಡಿಯೂ ಕೊನೆಗೂ ಶೂನ್ಯದತ್ತಲೇ ಇಳಿದು ಹೋಗುವ, ಅತ್ತ ಸಂನ್ಯಾಸವೂ ಸಾಧಿಸದೆ ಲೌಕಿಕ ಬದುಕೂ ಯಶಸ್ವಿಯಾಗದೆ ಭ್ರಮೆಯಲ್ಲೇ ತೊಳಲಾಡುತ್ತ ಉಳಿದುಬಿಡುತ್ತಾರೆ. ಆದರೂ ಶಮಂತ ಅಮ್ತ್ತು ಅನುಪಮಾ ಅದೇ ಆಶ್ರಮಗಳ ನಿರರ್ಥಕತೆಯನ್ನು ಅನುಭವಿಸಿ ಗ್ರಹಸ್ಥಾಶ್ರಮಕ್ಕೆ ಸೇರಿ ಅಲ್ಲಿ ನೆಮ್ಮದಿ ಕಾಣಲು ಹವಣಿಸುವುದು ಅಧ್ಯಾತ್ಮ ಮಾರ್ಗಿಗಳ ಸೋಲೇ ಎಂಬಂತೆ ಬಿಂಬಿತವಾಗಿದೆ..ಇನ್ನು   ಸೇವಾನಂದರ ಮನಸ್ಸಿನ ತೊಳಲಾಟ ಸಂನ್ಯಾಸದ ಸಾರ್ಥಕ್ಯವನ್ನೇ ಪ್ರಶ್ನಿಸುತ್ತದೆ.

 ‘ಕಾಲಮೇವ ಪ್ರತೀಕ್ಷೆತ ಯಾವದಾಯು: ಸಮಾಪ್ಯತೇ   ನಾಭಿನಂದೇತ ಮರಣಂ ನಾಭಿನಂದೇತ ಜೀವಿತಂ’ ಎನ್ನುವ ಮಾತನ್ನೇ ಆಳವಾಗಿ ನಂಬಿ ಬದುಕಿನ ಆಧ್ಯಾತ್ಮಿಕ, ಪಾರಮಾರ್ಥಿಕ ಸತ್ಯಗಳನ್ನು ಕಂಡುಕೊಳ್ಳಲು ಸಮಗ್ರ ಸಂಬಂಧಗಳನ್ನು ಕಡಿದುಕೊಂಡು ಹೊರಟ  ಸತ್ಯಪ್ರಕಾಶನ ಪಾತ್ರ ಯಾಕೋ  ಸರಿಯಾಗಿ ಪ್ರಕಟಗೊಂಡಿಲ್ಲ ಅನಿಸುತ್ತದೆ. ಅವನನ್ನೇ  ಆದರ್ಶವಾಗಿಸಿಕೊಂಡು,  ಗುರಿಯಾಗಿಸಿಕೊಂಡು ಶೋಧಿಸುತ್ತಾ ಹೊರಟವರಿಗೂ ಕೈಗೆ ದಕ್ಕದೆ ತನ್ನದೇ ಸತ್ಯಶೋಧನೆಗಳಲ್ಲಿ ತೊಳಲಾಡುತ್ತ ಕೊನೆಗೂ ತಾನು ಸಾಧಿಸಿದ್ದೇನು ಅನ್ನುವ ಪ್ರಶ್ನೆಗಳೊಂದಿಗೆ ಮತ್ತೆ ಊರಿಗೆ ಮರಳಿದರೂ ಅಲ್ಲಿಯೂ ನಿಲ್ಲಲಾಗದೆ ಮತ್ತೆ ಮಥುರೆಗೆ ತಾನೇ ನಿರಾಕರಿಸಿ ಬಂದಿದ್ದ ಜಮುನಾಳನ್ನು ಹುಡುಕಿ ಹೋಗುವ ಸನ್ನಿವೇಶ… ಹೊದರೂ ಅವಳು ದಕ್ಕದೆ ಮತ್ತದೇ ನಿರಾಸೆ ಶೂನ್ಯಕ್ಕೆ ಇಳಿಯುವ  ವಿಚಿತ್ರ  ಸ್ವಲ್ಪ ಗಲಿಬಿಲಿಗೊಳಿಸುತ್ತದೆ. ‘ಬ್ರಹ್ಮಚರ್ಯದ ಪಾಠಗಳಾದ ”ದರ್ಶನಂ ಸ್ಪರ್ಶನಂ ಕೇಲೀ: ಕೀರ್ತನಂ ಗುಹ್ಯಭಾಷಣಂ| ಸಂಕಲ್ಪೋ ಅಧ್ಯಾವಸಾಯಶ್ಚ ಕ್ರಿಯಾ ನಿರ್ವೃತ್ತಿರೇವ ಚ:” ಸ್ತ್ರೀಯರನ್ನು ನೋಡುವುದು, ಸ್ಪರ್ಶಿಸುವುದು,ಮಾತನಾಡಿಸುವುದು ಮನಸ್ಸಿನಲ್ಲೇ ಸ್ಮರಿಸುವುದು ಎಲ್ಲವೂ ಮೈಥುನಗಳೇ …ಸಂನ್ಯಾಸಿ, ಶುದ್ಧ ಬ್ರಹ್ಮ ಚಾರಿ  ಅವುಗಳಿಂದ ದೂರವಿರಬೇಕು ಅದೇ ಬ್ರಹ್ಮಚರ್ಯ… ಎಂಬುದನ್ನೆಲ್ಲ ಮನಗಂಡಿದ್ದರೂ  ಮಥುರೆ, ದೆಹಲಿ, ಬೃಂದಾವನಗಳ ಆಶ್ರಮದೊಳಗಿನ ಸ್ತ್ರೀ ಪುರುಷ ಸಂಗಗಳ ವಾತಾವರಣದಲ್ಲಿ ಕೊಚ್ಚಿ ಹೋಗಲು ಬಿಟ್ಟನೇ? ಅವನ ಅಂತ:ಸತ್ವ ಇಷ್ಟು ಸಲೀಸಾಗಿ ತೆಳುವಾಗಿ ಹೋಗಬಹುದೇ ಎನ್ನುವ ಪ್ರಶ್ನೆಯೊಂದಿಗೆ ಸತ್ಯಪ್ರಕಾಶ ನೈಜಾರ್ಥಸಂನ್ಯಾಸದ ಮಟ್ಟಕ್ಕೆ ಏರುವಲ್ಲಿ ವಿಫಲನಾಗಿರಬಹುದೇ? ಎಂಬ ಅನುಮಾನವನ್ನು ಮೂಡಿಸುತ್ತದೆ.
;
ಒಟ್ಟಿನಲ್ಲಿ ನ್ಯಾಸ ಕಾದಂಬರಿ ನಮ್ಮ  ಮನಸ್ಸು ಮಸ್ತಿಷ್ಕಗಳನ್ನು ನಿರಂತರವಾಗಿ ಚಿಂತನೆಗೆ ಹಚ್ಚುತ್ತಾ ಆಧ್ಯಾತ್ಮಿಕ ಲೋಕದ ಜಟಿಲ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಯತ್ನಿಸುತ್ತಲಿರುವಾಗಲೇ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

 

  – ಜಯಶ್ರೀ ದೇಶಪಾಂಡೆ

 .

2 Responses

  1. Hema says:

    ಉತ್ತಮ ವಿಶ್ಲೇಷಣೆ…ಪುಸ್ತಕವನ್ನು ಓದಬೇಕು ಅನಿಸಿತು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: