ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 8

Share Button

 ಮರಳಿ ಪೋಖ್ರಾದತ್ತ…

ಹಿಂತಿರುಗಿ ಬರುವ ದಾರಿಯಲ್ಲಿ ಭಾರತಿ ಮತ್ತು ನಾನು ಹೋಟೆಲ್ ಒಂದರಲ್ಲಿ ನೂಡಲ್ಸ್, ಸಾಂಡ್ ವಿಚ್ ತಿಂದು   ಜೀಪಿನತ್ತ ಬಂದೆವು.  ನಮ್ಮೊಡನೆ ಬಂದಿದ್ದ ಹಿರಿಯರೊಬ್ಬರಿಗೆ ಬಹಳ ಸುಸ್ತಾಗಿತ್ತು. ಅವರಿಗೆ ಸ್ವಲ್ಪ ನೀರು ಕುಡಿಸಿ, ನಮ್ಮ ಬಳಿ ಇದ್ದ ಒಣಹಣ್ಣುಗಳು ಮತ್ತು  ಚಾಕೊಲೇಟ್ ತಿನ್ನಲು ಕೊಟ್ಟೆವು, ನಮ್ಮ ಜೀಪಿನಲ್ಲಿದ್ದವರೆಲ್ಲ ಬಂದ ಕಾರಣ ಜೋಮ್ ಸಮ್ ಗೆ ಹೊರಟೆವು.   ಜೀಪು ಬಂದ ದಾರಿಯಲ್ಲಿ ಹಿಂತಿರುಗಿ ಮಧ್ಯಾಹ್ನ ಎರಡು ಗಂಟೆಗೆ ಜೋಮ್ ಸಮ್ ತಲಪಿಸಿತು.

‘ನೀರು ಗೆಸ್ಟ್ ಹೌಸ್’ ನ ಮಾಲಿಕ ‘ಜಂಗ’ನ ಬಳಿ ಹರಟಿದೆವು. ಆತ ಪೋಖ್ರಾದವನಂತೆ. ಹೆಂಡತಿ, ಮಕ್ಕಳು ಅಲ್ಲಿದ್ದಾರಂತೆ. ಅವನ ಹೋಟೆಲ್ ಗೆ ವಿದೇಶಿ ಪ್ರವಾಸಿಗರು ಬರುತ್ತಾರೆ, ಭಾರತೀಯರೆಂದರೆ ನಮಗೆ ಅಚ್ಚುಮೆಚ್ಚು ಎಂದ. ಅದೂ ಇದೂ ಹರಟಿದೆವು, ಪುನ: ಜೋಮ್ ಸಮ್ ನ ರಸ್ತೆಯಲ್ಲಿ ಅಡ್ಡಾಡಿದೆವು. ಕೆಲವರು ಸ್ವಲ್ಪ ನಿದ್ರೆ ಮಾಡಿದರು. ಅಷ್ಟರಲ್ಲಿ  ಇನ್ನೊಂದು ಜೀಪಿನಲ್ಲಿ ಹೋದವರು  ತಲಪಿದರು.  ಅವರು ಬರುವಾಗ, ಬೇರೆ ಯಾವುದೋ ಜೀಪು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು, ರಸ್ತೆ ತೆರವು ಮಾಡಿ ಬರುವಾಗ ಇಷ್ಟು ತಡವಾಯಿತೆಂದರು.

ಸಂಜೆ ನಾಲ್ಕುವರೆಗೆ   ‘ಜೋಮ್ ಸಮ್ ‘ಬಿಟ್ಟೆವು. ಹೆಚ್ಚಿನವರಿಗೆ ಹಸಿವಾಗಿತ್ತು. ಎಲ್ಲಾದರೂ ಒಂದು ಸಸ್ಯಾಹಾರಿ ಹೋಟೆಲ್ ಇರುವಲ್ಲಿ ಬಸ್ ನಿಲ್ಲಿಸಪ್ಪಾ ಎಂದು ಡ್ರೈವರ್ ಗೆ ಪದೇ ಪದೇ ಹೇಳುತ್ತಿದ್ದರು.  ದಾರಿಯಲ್ಲಿ ‘ಟುಕ್ ಚೆ’ ಎಂಬ ಹಳ್ಳಿಯ ಸಣ್ಣ ಹೋಟೆಲ್ ನ  ಮುಂದೆ ಬಸ್ ನಿಲ್ಲಿಸಿ ಡ್ರೈವರ್  ಕೆಳಗಿಳಿದ.  ನಾನು  ನಿಧಾನವಾಗಿ ನಡೆಯುತ್ತಾ, ಸುತ್ತುಮುತ್ತಲಿನ ಪರಿಸರದ  ಫೊಟೋ ಕ್ಲಿಕ್ಕಿಸುತ್ತಾ ಅತ್ತಿತ್ತ ನೋಡುತ್ತಿದ್ದೆ.   “ ಜಲ್ದಿ ಜಾಯಿಯೇ..  ಥಕಲಿ..ಥಕಲಿ ‘ ಎಂದ.  ‘ತಕಲಿ, ತಕ್ಕೊಳ್ಳಿ, ತಿಕ್ಕಲು’ ..ಮೊದಲಾದ ಕನ್ನಡ ಪದಗಳು ಗೊತ್ತು . ಆದರೆ ‘ಥಕಲಿ’ ಎಂಬ ನೇಪಾಳಿ ಪದ ಏನೆಂದು ಅರ್ಥವಾಗದೆ,  ಅವನನ್ನೇ   ಕೇಳಿದೆ. ‘ಥಕಲಿ  ಮೀನ್ಸ್ ವೆಜೆಟೇರಿಯನ್’ ಅನ್ನುತ್ತಾ ಹೋಟೆಲ್ ನ ಬೋರ್ಡ್ ಅನ್ನು ತೋರಿಸಿದ. ಅಲ್ಲಿಗೆ,  ನೇಪಾಳಿ ಭಾಷೆಯ ‘ಥಕಲಿ’  ಎಂದರೆ ‘ಸಸ್ಯಾಹಾರಿ’ ಅಂತ  ಗೊತ್ತಾಯಿತು!

ನೇಪಾಳದಲ್ಲಿ ಹೆಚ್ಚಿನ  ಅಂಗಡಿ, ಹೋಟೆಲ್ ಗಳನ್ನು ಮಹಿಳೆಯರೇ ನಿಭಾಯಿಸುವುದನ್ನು ಗಮನಿಸಿದೆ. ಮುಂದಿನ ದಾರಿಯಲ್ಲಿ ‘ರೂಪಸಿ’ ಎಂಬ ಸುಂದರವಾದ  ಜಲಪಾತದ ಪಕ್ಕ  ಫೊಟೊ ಕ್ಲಿಕ್ಕಿಸಿದೆವು. ಅಲ್ಲಿ ನಮ್ಮ ಬಸ್ಸಿನ ಡ್ರೈವರ್ ರಾಜಕುಮಾರನ ಬಳಿ  ಮಾತನಾಡುತ್ತಾ,   ಕಠಿಣ ರಸ್ತೆಯಲ್ಲಿ  ಸುರಕ್ಷಿತವಾಗಿ ನಮ್ಮನ್ನು ಕರೆತಂದುದಕ್ಕಾಗಿ ಧನ್ಯವಾದ ತಿಳಿಸಿ, ‘ಆಪ್ ಕೋ  ಸಬ್ ಸೇ ಅಚ್ಚಾ ಡ್ರೈವರ್ ಅವಾರ್ಡ್ ಮಿಲೇಗಾ’  ಅಂದೆ.  ಆತ  ಹೆಮ್ಮೆಯಿಂದ   ನಗುತ್ತಾ ಫೊಟೊಕ್ಕೆ  ಫೋಸ್ ಕೊಟ್ಟು, ಬೆರಳುಗಳನ್ನು ‘ವಿ’ ಆಕಾರದಲ್ಲಿ ಹಿಡಿದ.

ನೇಪಾಳವು ಭಾರತದಷ್ಟು ಮುಂದುವರಿದ ದೇಶವಲ್ಲದಿದ್ದರೂ, ಪ್ರಕೃತಿ ಕರೆಗೆ  ಬಯಲಿಗೆ  ಹೋಗುವುದು ಕಾನೂನು ರೀತ್ಯ ನಿರ್ಬಂಧಿಸಿದೆ. ಪ್ರಕೃತಿ ಕರೆಗಾಗಿ  ಹೊರಗಡೆ  ಹೋಗಬೇಡಿ,  ೨೦೦೦ ರೂ ದಂಡ ಹಾಕುತ್ತಾರೆ ಎಂದು ನಮ್ಮ ಟ್ರಾವೆಲ್ಸ್ ನವರು ಮುಂಚಿತವಾಗಿ ತಿಳಿಸಿದ್ದರು.    ನಾನು ಗಮನಿಸಿದ ವಿಶೇಷವೇನೆಂದರೆ, ಕಾಡುದಾರಿಯ ಮಧ್ಯದಲ್ಲಿಯೂ, ಸಣ್ಣ ಹಳ್ಳಿಗಳಲ್ಲಿಯೂ, ನೀರಿನ ವ್ಯವಸ್ಥೆಯುಳ್ಳ ಶೌಚಾಲಯವಿರುತ್ತದೆ. ಇದು ಮೆಚ್ಚತಕ್ಕ ಅಂಶ. ಆದರೂ, ತೀರ ದುರ್ಗಮ ಪ್ರದೇಶಗಳಲ್ಲಿ, ಶೌಚಾಲಯವಿಲ್ಲದ ಕಡೆ ಕೆಲವರು ಪ್ರಕೃತಿಯ ಕರೆಗಾಗಿ ಬಸ್ಸನ್ನು ನಿಲ್ಲಿಸಬೇಕಾದರೆ  ‘2000…..2000….2000’  ಅನ್ನುತ್ತಾ  ಬಸ್ಸಿನಿಂದ ಇಳಿಯುತ್ತಿದ್ದುದು  ಎಲ್ಲರಿಗೂ ತಮಾಷೆಯ  ವಿಷಯವಾಗಿತ್ತು.

ರಾತ್ರಿ 1145 ಕ್ಕೆ ಪೋಖ್ರಾ ತಲಪಿದೆವು. ನಮ್ಮ ನಿಗದಿತ ಯೋಜನೆ ಪ್ರಕಾರ ಸಂಜೆ ಬೇಗನೇ ತಲಪಿ, ಅಲ್ಲಿಂದ ಇನ್ನೊಂದು ಬಸ್ಸಿನಲ್ಲಿ  ಪ್ರಯಾಣಿಸಿ ಬೆಳಗಿನ ಜಾವ  ಕಟ್ಮಂಡು ತಲಪಬೇಕಿತ್ತು. ಆದರೆ ಆಗಲೆ ತಡರಾತ್ರಿಯಾಗಿತ್ತು. ರಾತ್ರಿ ಹನ್ನೆರಡು ಗಂಟೆಯ ನಂತರ ನೇಪಾಳದಲ್ಲಿ ಟ್ಯಾಕ್ಸಿ, ಬಸ್ ಓಡಾಡುವುದಿಲ್ಲವೆಂದು ಡ್ರೈವರ್ ತಿಳಿಸಿದ. ಹಾಗಾಗಿ ಅನಿವಾರ್ಯವಾಗಿ ಮುಖ್ಯರಸ್ತೆಯಲ್ಲಿಯೇ ಇದ್ದ ‘ರಾಯಲ್  ರಿದಂ’ ಎಂಬ ಹೋಟೆಲ್ ನಲ್ಲಿ ವಿಚಾರಿಸಿ,  ರೂಮುಗಳನ್ನು ಪಡೆದುಕೊಂಡು ವಿಶ್ರಾಂತಿ ಪಡೆದೆವು.

ಮರುದಿನ (23/02/2017), ಬೆಳಗ್ಗೆ 0700 ಗಂಟೆಗೆ  ಹೋಟೆಲ್ ನಿಂದ ಹೊರಟು ಸಂಜೆ ನಾಲ್ಕರ ಸಮಯಕ್ಕೆ  ಕಟ್ಮಂಡು  ತಲಪಿ, ತಂಡವನ್ನು ಸೇರಿಕೊಂಡೆವು. ಅಮ್ಮ ಆಗಲೇ ಇತರರ ಜೊತೆಗೆ ಹೋಗಿ ಕಟ್ಮಂಡು ನಗರ ದರ್ಶನ ಮಾಡಿ   ಗೆಲುವಾಗಿದ್ದರು.     ಟ್ರಾವೆಲ್ಸ್ ನ ಮುಖ್ಯಸ್ಥ ಗಿರೀಶ್ ನಿಂದ ಮೊದಲ್ಗೊಂಡು ಸಹಪ್ರಯಾಣಿಕರೆಲ್ಲರೂ ಆತ್ಮೀಯವಾಗಿ    ತನ್ನ ಯೋಗಕ್ಷೇಮ ವಿಚಾರಿಸಿಕೊಂಡೆರೆಂದು ತಿಳಿಸಿದರು. ನಮ್ಮನ್ನು ಕಂಡಾಗ ಗಿರೀಶ್, ಬೆಂಗಳೂರಿನ ಸೋಮಣ್ಣ,  ಚನ್ನಪಟ್ಟಣದ ವೇದಾ,  ರಾಮನಗರದ ಪದ್ಮಜಾ, ಬಳ್ಳಾರಿಯ ಬಸವರಾಜ್…….ಹೀಗೆ ಸಹಪ್ರಯಾಣಿಕರೆಲ್ಲರೂ  ಮುಕ್ತಿನಾಥದ ಪ್ರಯಾಣ ಹೇಗಾಯಿತೆಂದೂ ವಿಚಾರಿಸಿದರು. ಒಟ್ಟಾರೆಯಾಗಿ  ಅಲ್ಲಿ  ‘ವಿಜಯಿ’ಗಳನ್ನು ಬರಮಾಡಿಕೊಳ್ಳುವಂತಹ ಸಂಭ್ರಮವಿತ್ತು. ಸಹಯಾತ್ರಿಗಳಾಗಿ ಒಂದು ವಾರ ಜೊತೆಗೆ ಇದ್ದ ಆತ್ಮೀಯತೆ ಎದ್ದು ಕಾಣಿಸುತಿತ್ತು.

ಉತ್ತರ ಭಾರತದ ಕೆಲವು  ಹೋಟೆಲ್ ಗಳಲ್ಲಿ   ಟ್ರಾವೆಲ್ಸ್ ನ ಅಡುಗೆಯವರಿಗೆಂದೇ ಮೀಸಲಾದ ಅಡುಗೆಕೋಣೆಗಳಿರುತ್ತವೆ. ನಮ್ಮ ಜೊತೆಯೇ ಬಸ್ಸಿನಲ್ಲಿ ಬರುತ್ತಿದ್ದ ಅಡುಗೆ ಸಿಬ್ಬಂದಿಯವರು, ನಾವು ಉಳಕೊಳ್ಳುವ ಹೋಟೆಲ್ ತಲಪಿದ ಕೂಡಲೇ ಅಲ್ಲಿಯ ಅಡುಗೆಮನೆಯಲ್ಲಿ, ಸ್ಥಳೀಯ ಪಾತ್ರೆಗಳು/ದಿನಸಿ/ಗ್ಯಾಸ್ ಸ್ಟವ್ ಬಳಸಿ ,ಅಡುಗೆ ಮಾಡುತ್ತಿದ್ದರು.  ನಾವು ಕಟ್ಮಂಡು ತಲಪಿದಾದ ಸಂಜೆ ನಾಲ್ಕು ಆಗಿದ್ದರೂ, ಟ್ರಾವೆಲ್ಸ್ ನ ಅಡುಗೆಯವರಾದ ರಾಜು. ಶೇಖರ್ ಮತ್ತು ಮೂರ್ತಿ ಅವರು ನಮಗಾಗಿ ಬಿಸಿ ಅನ್ನ, ಕ್ಯಾಬೇಜು ಪಲ್ಯ, ತಿಳಿಸಾರು, ಸಾಂಬಾರು , ಹಪ್ಪಳ, ಮಜ್ಜಿಗೆ ಸಿದ್ದಪಡಿಸಿ ಇಟ್ಟಿದ್ದರು. ಎರಡು ದಿನಗಳಿಂದ ಸರಿಯಾದ ಊಟ ಸಿಗದಿದ್ದ ನಾವು ಪುಷ್ಕಳವಾಗಿ ‘ಅನ್ನ ಕಾಣದವರಂತೆ’ ಉಂಡೆವು! ಈ ಅಡುಗೆಯವರು, ಬಹಳ ಅಚ್ಚುಕಟ್ಟಾಗಿ, ರುಚಿಯಾಗಿ, ಬಿಸಿಬಿಸಿ ಅಡುಗೆ ಮಾಡಿ ಬಡಿಸುತ್ತಿದ್ದರು. ಅನ್ನದಾತ ಸುಖೀಭವ!

ತೀರ್ಥಕ್ಷೇತ್ರಗಳಿಗೆ ಭೇಟಿ ಕೊಡಲು ನಾವಾಗಿ ಬಯಸಿದರೂ ಹಲವು ಬಾರಿ  ಪ್ರವಾಸದ ಅವಕಾಶಗಳು  ಲಭಿಸುವುದಿಲ್ಲ. ಅವಕಾಶ ಸಿಕ್ಕಿದರೂ, ಅನಿರೀಕ್ಷಿತ ತೊಂದರೆಗಳಿಂದಾಗಿ ಗಮ್ಯ ಸ್ಥಾನವನ್ನು ತಲಪದಿರುವ ಸಾಧ್ಯತೆಗಳೂ ಇರುತ್ತವೆ. ಅತ್ಯರೂಪದ ಸಂದರ್ಭಗಳಲ್ಲಿ ತೀರ್ಥಕ್ಷೇತ್ರಗಳನ್ನು ತಲಪಿದರೂ, ಕಾರಣಾಂತರದಿಂದ ದೇವರ ದರ್ಶನವಾಗುವುದಿಲ್ಲ. ಹೀಗಿರುವಾಗ, ದಕ್ಷಿಣ ಭಾರತದ ತುದಿಯಲ್ಲಿರುವ ಕೇರಳದ ಪುಟ್ಟ ಹಳ್ಳಿಯಲ್ಲಿ ಜನಿಸಿದ ನನಗೆ, ನೇಪಾಳದ ಹಿಮಾಲಯದಲ್ಲಿರುವ ಮುಕ್ತಿನಾಥಕ್ಕೆ, ಅನಿರೀಕ್ಷಿತವಾಗಿ, ಅಡಚಣೆಗಳ ಮಧ್ಯೆಯೂ  ಹೋಗಲು ಸಾಧ್ಯವಾದುದು ನಿಜಕ್ಕೂ ಸುಯೋಗ.

ಉದ್ಯೋಗ ಮತ್ತು ಮನೆವಾರ್ತೆಗಳ ಧಾವಂತದ ಬದುಕಿನಲ್ಲಿಯೇ ಮಗ್ನಳಾಗಿದ್ದ ನಾನು,  2016  ರಲ್ಲಿ ಸ್ವಯಂನಿವೃತ್ತಿ  ಪಡೆದುಕೊಂಡ ನಂತರ,  ಒಂದೇ ವರ್ಷದ ಅವಧಿಯಲ್ಲಿ, ಸುಲಲಿತವಾಗಿ ಕೇದಾರನಾಥ, ಬದರೀನಾಥ, ಪಶುಪತಿನಾಥ, ಮುಕ್ತಿನಾಥ ಮತ್ತು ಕಾಶಿಯ ವಿಶ್ವನಾಥನನ್ನು ದರ್ಶನ ಮಾಡಲು ಸಾಧ್ಯವಾಗಿತ್ತು!   ಮನುಷ್ಯರಿಗೆ  ಆಯುಸ್ಸು, ಆರೋಗ್ಯ, ಸಮಯ, ತಕ್ಕಷ್ಟು ಹಣ – ಇಷ್ಟೆಲ್ಲಾ ಇದ್ದರೂ,  ಆ ಭಗವಂತನು  ತನ್ನ ಬಳಿಗೆ ಕರೆಸಿಕೊಂಡರೆ ಮಾತ್ರ ಇದು ಸಾಧ್ಯ ಎಂದು ನಿಚ್ಚಳವಾಯಿತು.

1985-90 ರ ಅವಧಿಯಲ್ಲಿ, ನಾನು ಕಾಲೇಜು  ವಿದ್ಯಾರ್ಥಿನಿಯಾಗಿದ್ದಾಗ, ಶ್ರೀ ಶಿರಂಕಲ್ಲು  ಈಶ್ವರ ಭಟ್ಟ ಎಂಬವರು,  ಕಾಲ್ನಡಿಗೆಯಲ್ಲಿ  ಮುಕ್ತಿನಾಥಕ್ಕೆ ಹೋಗಿಬಂದಿದ್ದರು. ಆ ಬಗ್ಗೆ ಪುಸ್ತಕವನ್ನೂ ಬರೆದಿದ್ದರು. ಒಂದು ದಿನ ಕಾಲೇಜಿನಲ್ಲಿ ಅವರಿಂದ ಉಪನ್ಯಾಸ ಕಾರ್ಯಕ್ರಮವಿತ್ತು. 30  ವರ್ಷಗಳ ಹಿಂದೆ ಉಪನ್ಯಾಸ ಕೇಳಿದ್ದೇನೆಂಬ  ನೆನಪು ಮಾತ್ರ ಇತ್ತು ಆದರೆ ಯಾವುದೇ  ಮಾಹಿತಿ ನೆನೆಪಿರಲಿಲ್ಲ.  ನಾವು ಮುಕ್ತಿನಾಥಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಕಿಂಚಿತ್ತಾದರೂ ಸುಳಿವು ಸಿಕ್ಕಿದ್ದರೆ   ಆ ಪುಸ್ತಕವನ್ನು ಪುನ: ಓದಿ ಅಥವಾ ಅಂತರ್ಜಾಲದಲ್ಲಿ ಹುಡುಕಿ  ಸ್ಥಳದ ಬಗ್ಗೆ  ಮಾಹಿತಿ ಪಡೆದುಕೊಳ್ಳುತ್ತಿದ್ದೆ . ನೇಪಾಳದಲ್ಲಿ ಗೂಗಲ್ ಗೆ ಹೋಗಿ  ತಿಳಿದುಕೊಳ್ಳೋಣವೆಂದರೆ  ಅಲ್ಲಿ ನಮ್ಮ ಫೋನ್  ಗಳಿಗೆ ಸಿಗ್ನಲ್ ಸಿಗದೆ ಸ್ತಬ್ಧವಾಗಿದ್ದುವು.

ಪ್ರವಾಸದಿಂದ ಮರಳಿ  ಬಂದ ಮೇಲೆ, ಶ್ರೀ ಈಶ್ವರ ಭಟ್ಟರು ಬರೆದ ‘ಮುಕ್ತಿನಾಥದ ಪಥದಲ್ಲಿ’ ಪುಸ್ತಕವನ್ನು  ಕೊಂಡು ಓದಿದೆ. ಈ ಬರಹದಲ್ಲಿ ಉಲ್ಲೇಖಿಸಲಾದ ‘ನೀರಿನಲ್ಲಿ ಉರಿಯುತ್ತಿರುವ ಜ್ವಾಲೆ’ಯನ್ನು ನಮ್ಮ ತಂಡದವರಾರೂ ನೋಡಲಿಲ್ಲ, ಯಾಕೆಂದರೆ ನಮಗಾರಿಗೂ  ಆ ಬಗ್ಗೆ ತಿಳುವಳಿಕೆ ಇರಲಿಲ್ಲ. ಹಾಗಾಗಿ, ಮುಕ್ತಿನಾಥಕ್ಕೆ ಹೋಗಿ ಬಂದೆನೆಂಬ  ಸಂತೋಷದ ಜೊತೆಗೆ,  ಅಖಂಡ ಜ್ವಾಲೆಯನ್ನು ನೋಡಬೇಕಿತ್ತು ಅನಿಸುತ್ತಿದೆ. ಅವಕಾಶ ಲಭಿಸಿದರೆ, ಪುನ: ಮುಕ್ತಿನಾಥನೇ ಕರೆಸಿಕೊಂಡರೆ,  ಜ್ವಾಲಾಮಾಯಿ ಮಂದಿರಕ್ಕೂ  ಭೇಟಿ ಕೊಟ್ಟು ಅಖಂಡ ಜ್ವಾಲೆಯನ್ನು ನೋಡಿ ಬರಬೇಕೆಂಬ ಆಶಾಭಾವವಿದೆ.
.

(ಮುಗಿಯಿತು)

ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ :  http://surahonne.com/?p=17657

 

-ಹೇಮಮಾಲಾ.ಬಿ. ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: