ತಾರಕ್ಕ ಬಿಂದಿಗೆ

Share Button

ಮೊನ್ನೆ ಕೈ ಕೊಟ್ಟ ಕರೆಂಟು ಮೂರು ದಿನ ಆದರೂ ನಾಪತ್ತೆಯಾದಾಗಲೇ ಅದರ ಬಿಸಿ ತಟ್ಟಿದ್ದು.ನಲ್ಲಿ ತಿರುಗಿಸಿದರೆ ಸಾಕು ಭರ್ರೋ ಎಂದು ಪವಾಡದಂತೆ ಸುರಿಯುತ್ತಿದ್ದ ನೀರು,ಇದೀಗ ಬಿಕ್ಕಳಿಸಿ ಬಿಕ್ಕಳಿಸಿ ಕಣ್ಣ ಹನಿ ಉದುರಿಸುತ್ತಾ ಮೆಲ್ಲನೆ ಅಳೋಕೆ ಶುರು ಮಾಡಿದಾಗಲೇ ಕೊಂಚ ಭಯ ಹುಟ್ಟಿದ್ದು.ಇನ್ನೇನು ಮಾಡುವುದು?.ಯಾವುದೋ ಒಂದು ಬಲವಾದ ನಂಬಿಕೆ.ಮನೆಯಲ್ಲಿ ತೊಟ್ಟು ನೀರಿಲ್ಲದಾಗ ದೇವರು ದಯ ಪಾಲಿಸದೇ ಇರುವನೇ?.

ಹಾಗಂತ ಕೆಲ ವಿಚಾರದಲ್ಲಿ ನಾವು ಪುಣ್ಯವಂತರು.ನೀರಿಗಾಗಿ ಪಂಚಾಯತ್ ನೀರಿಗಾಗಿ ಕಾದು ಕುಳಿತು ಪರದಾಡಬೇಕಿಲ್ಲ.ಪಕ್ಕದಲ್ಲಿಯೇ ಶಾಂತವಾಗಿ ಹರಿಯುವ ಪಯಸ್ವಿನಿ ನದಿ,ಎಷ್ಟು ಕೊಡ ನೀರು ತುಂಬಿಕೊಂಡು ಹೋದರೂ ನಂದೇನು ಅಡ್ಡಿಯಿಲ್ಲವೆಂಬಂತೆ ಮತ್ತಷ್ಟು ಗಲಗಲಿಸಿ ಸದ್ದು ಮಾಡಿಕೊಂಡು ಹರಿಯುತ್ತಲೇ ಇದ್ದಾಳೆ.ಮನೆಯ ಅನತಿ ದೂರದಲ್ಲಿ ಬಾವಿಗಳಿವೆ.ಆದರೂ ಮನೆಯಲ್ಲಿ ನೀರಿಲ್ಲವೆಂದರೆ ನಾಚಿಕೆಗೇಡಿನ ವಿಚಾರವಲ್ಲವೇ?.ಇನ್ನು ಹೊಳೆಯಿಂದ ನೀರು ಹೊತ್ತು,ಬಾವಿಯಿಂದ ನೀರು ಸೇದಿ,ಅಡುಗೆ ಕೋಣೆ,ಬಚ್ಚಲು ಮನೆ,ಹೀಗೆ ವಗೈರ,ವಗೈರ..ಗಳಿಗೆ ನೀರು ತುಂಬಿಸಿಡಲಿಕ್ಕೆ ಸಾಧ್ಯ ಉಂಟಾ?.ಅಸಲಿಗೆ ಮನೆಯ ಮೇಲೆ ನೀರನ್ನೇ ಹೊತ್ತು ನಿಂತ ದೊಡ್ಡ ಟ್ಯಾಂಕಿ ಬಿಟ್ಟರೆ,ಉಳಿದಂತೆ ನೀರು ತುಂಬಿಸಿಡಲಿಕ್ಕೆ ಇನ್ಯಾವ ಸಲಕರಣೆಗಳೂ ಈಗ ಇಲ್ಲ.ಸವಲತ್ತುಗಳು ಈಗ ಸಾಕಷ್ಟು ವಸ್ತುಗಳ ಬಳಕೆಯನ್ನು ಕಡಿಮೆಗೊಳಿಸಿ,ಸಣ್ಣ ವ್ಯಾಪಾರಸ್ಥರ ಉದ್ಯೋಗಕ್ಕೇ ಕಲ್ಲು ಹಾಕಿ ಬಿಟ್ಟಿದೆ.ಇವೆಲ್ಲಾ ಯೋಚನೆಗೆ ಗಾಬರಿ ಹುಟ್ಟಿ,ಇನ್ನರ್ಧ ಗಂಟೆ ಕಾದರೆ ಯಾರ ಗಂಟೇನು ಹೋಗುವುದಿಲ್ಲ ,ಆಮೆಲೆ ನೀರಿನ ಬಗ್ಗೆ ಚಿಂತಿಸುವ ಅಂತ ಅರ್ಧ ಗಂಟೆ ಹೋಗಿ ಅರ್ಧ ದಿನ ಕಳೆದರೂ ಕರೆಂಟಿನ ಪತ್ತೆ ಇಲ್ಲ.ಕರೆಂಟು ಇಲ್ಲ ಅಂದರೆ ನೀರಿಗೂ ತತ್ವಾರ.ಹಿತ್ತಲ ನಲ್ಲಿಯಡಿಯಲ್ಲಿ ಪಾತ್ರೆ ರಾಶಿ, ಬಟ್ಟೆಗಳ ರಾಶಿ ನೋಡಲಾರದೆ,ಏಕ್‌ದಂ ಸೊಂಟಕ್ಕೆ ಸೆರಗು ಕಟ್ಟಿ,ಅಲ್ಲಲ್ಲ! ಚೂಡಿದಾರ್ ಶಾಲು ಸುತ್ತಿ,ಮೂಲೆಯಲ್ಲಿ ಅಡಗಿ ಕುಳಿತ್ತಿದ್ದ,ಕೊಡಪಾನ,ಬಕೀಟು ,ಚಿಕ್ಕ ದೊಡ್ಡ ಪಾತ್ರೆಗಳನ್ನೆಲ್ಲಾ ಹುಡುಕಿ ಎಳೆದು ತಂದು ನೀರು ಸೇದಿ ತುಂಬಿಸುವ ಹಠಕ್ಕೆ ಬಿದ್ದದ್ದು.ಪ್ರತೀ ಬಿಂದಿಗೆ ತುಂಬಿದಾಗಲೆಲ್ಲಾ ಒಂದೊಂದು ಕತೆಗಳು ಹನಿ ಹನಿಯಾಗಿ ತುಂಬಿಕೊಳ್ಳುತ್ತಾ ಹೋದದ್ದು.

ನಮ್ಮ ಬಾಲ್ಯದ ದಿನಗಳಲ್ಲಿ ನಮ್ಮ ಮನೆಯಲ್ಲಿ ಬಿಡಿ,ಆಸುಪಾಸಿನಲ್ಲೂ ಕೂಡ ಒಂದೇ ಒಂದು ನಲ್ಲಿ ಇರಲಿಲ್ಲ.ದೂರದಲ್ಲಿ ಹರಿಯುತ್ತಿದ್ದ ನದಿಯಿಂದ ನೀರು ಹೊತ್ತು ತರಬೇಕಿತ್ತು.ಅಗತ್ಯಕ್ಕೆ ಬೇಕಾದ ನೀರನ್ನೆಲ್ಲಾ ಹೊತ್ತು ತುಂಬಿಸುವುದು ಶಾಲೆಗೆ ಹೋಗುವ ಮಕ್ಕಳ ಕೆಲಸ.ಅದರಲ್ಲೂ ಅದು ಹೆಣ್ಣು ಮಕ್ಕಳ ದಿನಚರಿ.ಹಾಗಾಗಿ ಶಾಲೆಯಿಂದ ಬಂದ ತಕ್ಷಣ ನಮ್ಮ ಮೊದಲ ಕೆಲಸ ಅದುವೇ ಆಗಿತ್ತು.ಹಂಡೆ,ಬಿಂದಿಗೆ,ಮಡಕೆ..ಎಷ್ಟು ಸಾಧ್ಯವೋ ಅಷ್ಟು ನೀರನ್ನು ತುಂಬಿಸಿಡುವುದು.ಬೆಳಗ್ಗೆ ಎದ್ದ ಹಾಗೆಯೇ ಹಲ್ಲುಜ್ಜುತ್ತಲೇ ನೀರು ಹೊರುವ ಅನಿವಾರ್‍ಯತೆ.ಮಳೆಗಾಲದಲ್ಲಿ ಮಾತ್ರ ನಮ್ಮ ಈ ಕೆಲಸಕ್ಕೆ ನಿವೃತ್ತಿ.ಆಗ ಕೆಲಸ ದೊಡ್ಡ ಸಂಗತಿ ಅಂತ ಅನ್ನಿಸಿಯೇ ಇರಲಿಲ್ಲ.ಮಾಡಲೆ ಬೇಕಾದ ಅನಿವಾರ್‍ಯ ಕೆಲಸ ಎಂಬಂತೆ ಸಾಗಿ ಹೋಗುತ್ತಿತ್ತು.ಒಂದೇ ಕೊಡದಲ್ಲಿ ನೀರು ಹೊತ್ತು ಸಾಗಿದರೆ ಸಧ್ಯಕ್ಕೆ ಸಮಯ ಸಾಕಾಗೋದಿಲ್ಲ ಅಂತ ಸೊಂಟದ ಮೇಲೊಂದು,ತಲೆ ಮೇಲೊಂದು ಬಿಂದಿಗೆ ಇಟ್ಟುಕೊಂಡು ನೀರು ತಂದು ಸಮಯದ ಸದ್ಭಳಕೆ ಮಾಡುತ್ತಿದ್ದೆವು.ತಲೆಯ ಮೇಲೆ ಕೊಡ ಏರಿಸಿಡಲು ಪಕ್ಕದಲ್ಲಿ ಜನ ಯಾರೂ ಇಲ್ಲದಿದ್ದರೆ,ನಾವೊಬ್ಬರೇ ಹೊಳೆಯ ನಡುವಲ್ಲಿ ನಿಂತು ತಲೆಯ ಮೇಲೆ ಇಟ್ಟ ನಂತರ ಸೊಂಟಕ್ಕೆ ಕೊಡ ಇಡುತ್ತಿದ್ದೆವು.ಅಕಾಸ್ಮಾತ್ ಆಯ ತಪ್ಪಿದರೂ ಪ್ಲಾಸ್ಟಿಕ್ ಕೊಡ ಒಡೆದು ಚೂರಾಗದೆ ಮನೆಯಲ್ಲಿ ಸಹಸ್ರನಾಮಾರ್ಚನೆ ತಪ್ಪುತಿತ್ತು.ಓರಗೆಯ ಗೆಳತಿಯರದ್ದೂ ಇದೇ ಕೆಲಸವಾದುದರಿಂದ ಅದೆಷ್ಟೋ ಕತೆಗಳನ್ನು ಹೇಳುತ್ತಾ,ಕೇಳುತ್ತಾ ಪ್ರಯಾಸವೇ ಇಲ್ಲದಂತೆ ನೀರು ಹೊತ್ತು ತುಂಬಿಸಿಬಿಡುತ್ತಿದ್ದೆವು. ತಲೆಯ ಮೇಲೂ ಸೊಂಟದ ಮೇಲೆ ನೀರು ಏರಿಸಿದಾಗಲೂ ಒಡೆದು ಚೂರಾಗದಂತೆ ನಿಗಾ ವಹಿಸುವ ಈ ಸಮತೋಲನದ ಭಾವದ ಬದುಕಿನುದ್ದಕ್ಕೂ ಹೀಗೆ ಪೊರೆಯುತ್ತಾ ಬಂದದ್ದು.

ಈಗ ಬದಲಾದ ಕಾಲ ಹೆಣ್ಣು ಮಕ್ಕಳಿಗೆ ಅದೆಷ್ಟು ಕರುಣೆ ತೋರಿಸಿ ಬಿಟ್ಟಿತ್ತು ಎಂದರೆ,ಹಿತ್ತಲಿನಲ್ಲಿ ಒಂದು ಬಾವಿ.ಅದಕ್ಕೆ ಪಂಪಿನ ಅಳವಡಿಕೆ.ಮನೆಯೊಳಗೇ ನೀರಿನ ನಲ್ಲಿ.ಸ್ವರ್ಗ ಸುಖವೆಂಬುದು ಇಲ್ಲೇ ಇರುವಂತೆ.ಬರೇ ಸಿರಿವಂತರ ಮನೆ ಬಾಗಿಲಿನಲ್ಲಿ ಮಾತ್ರ ಸೋರಿ ಹೋಗುತ್ತಿದ್ದ ನಲ್ಲಿ ನೀರು ಇವತ್ತು ಎಲ್ಲರ ಮನೆಯೊಳಗೂ ಹರಿದುಕೊಂಡು ಬರುತ್ತಿದೆ ಅಂದರೆ,ನೀರು ದಯಾಮಯಿ.ನೀರಿಗೆ ತಾರತಮ್ಯಗಳಿಲ್ಲವೆಂಬುದು ಸಾಬೀತಾಗಿ ಬಿಡುತ್ತದೆ ನೋಡಿ.ನೀರು ಯಥೇಚ್ಛವಾಗಿ ಬಳಕೆ ಮಾಡಿದ್ದೇ ಮಾಡಿದ್ದು.ಹಂಡೆಗೆ ನೀರು ಬಂದು ಬಿದ್ದದ್ದು,ಮುಸುರೆ ತೊಳೆಯುವ ಕೆಲಸ ಸರಳೀಕರಣಗೊಂಡಿದ್ದು,ಹಿತ್ತಲಿನಲ್ಲಿ ನೆಟ್ಟ ಬೆಂಡೆ ಬದನೆ ಬಸಳೆಗಳಿಗೆ ಪೈಪು ಹಿಡಿದು ಸೊಂಟ ಬಗ್ಗಿಸದೇ ನೀರು ಹಾಯಿಸಿದ್ದು,ವಾಷಿಂಗ್ ಮೆಷಿನ್‌ನೊಳಗೆ ಬಟ್ಟೆ ಹಾಕಿಬಿಟ್ಟರಷ್ಟೇ ಮುಗಿಯಿತು.ಗುರ್ ಅಂತ ಸದ್ದು ಮಾಡುತ್ತಾ ತಾನೇ ತೊಳೆದುಕೊಳ್ಳುತ್ತಾ ಬಟ್ಟೆ ಶುಭ್ರಗೊಳ್ಳುತ್ತಾ ಹೋಗಿದ್ದು,ಒಂದೇ ಎರಡೇ..!,ನಲ್ಲಿ ನೀರಿಗೆ ನಾವೆಷ್ಟು ಒಗ್ಗಿ ಹೋಗಿ ಬಿಟ್ಟಿದ್ದೇವೆಂದರೆ,ಒಮ್ಮೆ ನಲ್ಲಿ ಕೆಟ್ಟು ಹೋದರೆ,ಕರೆಂಟು ಕೈ ಕೊಟ್ಟರೆ ಮನಸು ಅಲ್ಲೋಲ ಕಲ್ಲೋಲ ಆಗಿ ಹೋಗಿ ಬಿಡುತ್ತದೆ.ಅರಿವಿಲ್ಲದೆಯೇ ಸಿಟ್ಟು ತಾರಕ್ಕಕ್ಕೇರಿ ಬಿಡುತ್ತದೆ.ಶಾಂತವಾಗಿ ಹರಿಯುವ ನೀರು ಆ ಕ್ಷಣ ಹೇಗೆ ನಮ್ಮೊಳಗೆ ಪ್ರಕ್ಷುಬ್ದತೆಯನ್ನು ಹುಟ್ಟು ಹಾಕಿಬಿಡುತ್ತದೆ ಎಂದು ಆಶ್ಚರ್ಯವಾಗುತ್ತದೆ.ಈ ಹಿಂದೆ ನೀರಿಗಾಗಿ ಅದೆಷ್ಟೋ ಸಮಯ ತೇದು ಪರದಾಡಿದ ಕತೆಗಳು ಸುಳ್ಳೇ ಎನ್ನುವಷ್ಟರ ಮಟ್ಟಿಗೆ ಮನಸು ಗೋಜಲಾಗಿ ಬಿಡುತ್ತದೆ.

ಅದಿರಲಿ.ನೀರಿನ ಬಗ್ಗೆ ಹೇಳುತ್ತಲೇ ನೆನಪಾಯಿತು ನೋಡಿ.ಮುಂದೊಂದು ದಿನ ನೀರಿಗಾಗಿಯೇ ಯುದ್ದಗಳು ನಡೆಯುತ್ತವೆ ಅಂತ ಜ್ಯೋತಿಷಿಗಳು ಭವಿಷ್ಯವನ್ನೇ ನುಡಿದು ಬಿಟ್ಟಿದ್ದಾರೆ.ಇದ ಕೇಳಿದಾಗ ನಿಜಕ್ಕೂ ಎದೆ ಧಸಕ್ಕೆನ್ನುತ್ತದೆ.ಇದಕ್ಕೆ ಯಾವ ಗಿಣಿ ಶಾಸ್ತ್ರವೂ ಬೇಕಿಲ್ಲ.ಇದು ಕಣ್ಣೆದುರಿಗಿನ ಸತ್ಯ ತಾನೇ?.ಭೂಮಿಯೊಡಲು ಇಂಗಿ ಬರಡಾದರೆ ಇನ್ನೇನು ಆಗೋಕೆ ಸಾಧ್ಯ?.ನದಿ ,ಕೆರೆ,ತೋಡುಗಳೆಲ್ಲಾ ಬತ್ತಿ ಹೋಗುತ್ತಿದೆ.ಸಾವಕಾಶಗಳನ್ನು ಹದವರಿತು ಬಳಸುತ್ತಾ,ಅದರ ಮೂಲ ಸೆಲೆಗಳನ್ನ ಜತನದಿಂದ ಪೋಷಿಸಿದರೆ ಮಾತ್ರ ಅದು ಕೊನೆ ತನಕ ನಮಗೆ ಅನುಭವಿಸಲಿಕ್ಕೆ ಸಾಧ್ಯ ಅನ್ನುವುದು ಒಪ್ಪತ್ತಕ್ಕ ವಿಷಯವೇ.ಈ ವರುಷವಂತು ನೀರಿಗಾಗಿ ಸಾಕಷ್ಟು ಪರದಾಡಿದ್ದೇವೆ.ಹಳ್ಳಿಯ ಜನರಿಗೂ ನೀರಿನ ತತ್ವಾರ ಕಾಡಿದೆಯೆಂದರೆ ಇದು ಎಚ್ಚುತ್ತುಕೊಳ್ಳಬೇಕಾದ ಸಂಗತಿಯೇ.ಪಕ್ಕದ ಮನೆಯವರಿಂದ ಹಿಡಿದು ನೆರೆ ರಾಜ್ಯದೊಂದಿಗೂ ನೀರಿಗಾಗಿ ತಿಕ್ಕಾಟ ಶುರುವಾಗಿ ಬಿಟ್ಟಿದೆ.ನಮ್ಮ ಸುತ್ತು ಮುತ್ತಲು ನೀರಿದೆ,ನಾವೆಲ್ಲಾ ಪುಣ್ಯವಂತರು ಅಂತ ಅನ್ನಿಸಿಕೊಳ್ಳುತ್ತಲೇ,ಇವತ್ತು ಈ ಆಧುನಿಕ ಯುಗದಲ್ಲಿ ಅದೆಷ್ಟೋ ಹೆಣ್ಣುಮಕ್ಕಳು ಒಂದು ಕೊಡ ನೀರಿಗಾಗಿ ತಮ್ಮ ದಿನದ ಹೆಚ್ಚಿನ ಸಮಯವನ್ನು ವ್ಯಯಿಸುತ್ತಾರೆ ಎಂಬುದನ್ನು ನೆನೆದಾಗ ನಿಜಕ್ಕೂ ಕರುಳು ಚುರುಕ್ ಎನ್ನುತ್ತದೆ.

ದೊಡ್ಡ ದೊಡ್ಡ ಕೆರೆಗಳನ್ನೆಲ್ಲಾ ಮಣ್ಣು ಮುಚ್ಚಿ ಅದರ ಮೇಲೆ ದೊಡ್ಡ ದೊಡ್ಡ ಮಹಲುಗಳನ್ನು ಕಟ್ಟಿ,ಕಟ್ಟು ಕಟ್ಟು ನೋಟು ಎಣಿಸಿದರೆ ಎಷ್ಟು ದಿನ ಬಿಸ್ಲೆರಿ ಬಾಟಲ್ ನೀರು ನಮ್ಮ ಬಾಯಾರಿಕೆಯನ್ನ ತಣಿಸಬಲ್ಲುದು?.ಅಂತ:ಕರಣದಲ್ಲಿ ಒಂದಷ್ಟು ತೇವವೆ ಇಲ್ಲದಿದ್ದರೆ ನೆಲ ಬರಡಾಗದೇ ಇರಬಲ್ಲುದೇ?.ಎಲ್ಲೋ ಅಂಗೈಯಷ್ಟಗಲ ಹರಿವ ನೀರು, ಪಾತ್ರಗಳನ್ನು ಹಿಗ್ಗಿಸಿಕೊಂಡು ಕಡಲಾಗುತ್ತಿರುವಾಗ,ನಾವು ಅದರ ಒಡಲ ಸೆಲೆಗಳನ್ನು ನಾನಾ ನೆವಗಳನ್ನು ಇಟ್ಟುಕೊಂಡು ಆರಿಸುವುದು ಯಾತರ ನ್ಯಾಯ?

ಬದುಕುವ ಪ್ರತೀ ಜೀವಿಗಳಿಗೂ ನೀರು ದಕ್ಕಬೇಕಾದದ್ದು ನ್ಯಾಯ ಮತ್ತು ಪ್ರಕೃತ್ತಿ ನಿಯಮ ತಾನೇ?.ನಮ್ಮೊಳಗಿನ ಭಾವಸೆಲೆಯನ್ನು ಕಾಪಿಟ್ಟುಕೊಳ್ಳುತ್ತಲೇ ಅಂತರ್ಜಲವನ್ನು ಕಾಪಿಡೋಣ.ಕರೆಂಟು ಕೈ ಕೊಟ್ಟರೂ ಬೇಸರ ಇಲ್ಲ.ಬಟ್ಟೆ ತೊಳೆಯಲು,ಪಾತ್ರೆ ತೊಳೆಯಲು,ಬದುಕಿನ ಎಲ್ಲಾ ಅವಶ್ಯಕತೆಗಳಿಗೆ ಪಕ್ಕದ ನದಿ ಕೆರೆ ಬಾವಿಗಳಲ್ಲಿ ನೀರು ತುಂಬಿ ತುಳುಕಲಿ.ತಾರಕ್ಕ ಬಿಂದಿಗೆ..ನಾ ನೀರಿಗೋಗುವೆ..ಅಂತ ಬಿಂದಿಗೆ ಹಿಡಿದುಕೊಂಡು ಸಾಗುವಾಗ ತಮ್ಮ ಎದೆಯೊಳಗಿನ ಎಲ್ಲ ಸುಗ್ಗಿ ಸಂಕಟಗಳಿಗೆ ನೀರು ತರುವ ಹಾದಿಯೊಂದು ನಿರಾಳತೆಯನ್ನು ದಕ್ಕಿಸಿಕೊಡಲಿ ಅಂತ ಯೋಚಿಸುತ್ತಲೇ ನೀರು ಹೊತ್ತು ಮುಗಿದಾಗ ಪಕ್ಕನೆ ಬೆಳಗಿ ನಕ್ಕ ಕರೆಂಟು ಎಷ್ಟೊಂದು ಅರ್ಥಗಳನ್ನು ಹೊಳೆಯಿಸಿತು.

-ಸ್ಮಿತಾ ಅಮೃತರಾಜ್. ಸಂಪಾಜೆ

 

4 Responses

  1. Ranganath Nadgir says:

    ಬಿಂದಿಗೆ ಇನ್ನು ಮುಂದೆ ಎಕ್ಸಿಬಿಶನ್ ನಲ್ಲಿ ನೋಡುವ ವಸ್ತು ಆಗಬಹುದು. ಸಮಯೋಚಿತ ಹಾಗು ಅರ್ಥಪೂರ್ಣವಾದ ಲೇಖನ

  2. Raghunath Krishnamachar says:

    ನೀರೆಯರಿಗೆ ನೀರಿನ ಮಹತ್ವದ ಅರಿವು ಚಂದದ ಬರಹ.

  3. Mohini Damle says:

    ನೀರ ಹರಿವಿನಂತೆ ನಿರರ್ಗಳವಾಗಿ ಬರೆದ ಲೇಖನದಲ್ಲಿ ಎಷ್ಟೆಲ್ಲ ವಿಷಯಗಳು ಅಡಕವಾಗಿವೆ.

  4. Manjula B S says:

    ನೀರೆ ಬರೆದ ನೀರಿನ ಲೇಖನ ನೀರೆಯಷ್ಟೇ ಸುಂದರ…ಅಕ್ಷರಶಃ ಸತ್ಯ ಕೂಡ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: