ಅಂತಃಕರಣದ ಅಧಃಪತನ
ಜಗತ್ತು ಬದಲಾಗುತ್ತಿದೆ, ನಾವು ಬದಲಾಗುತ್ತಿದ್ದೇವೆ, ನಮ್ಮೊಟ್ಟಿಗೆ ನಮ್ಮ ಸಂಸ್ಕಾರ, ಆಚಾರ-ವಿಚಾರ, ಸನಾತನ ಸಂಸ್ಕ್ರತಿ, ಪರಂಪರೆ ಕೂಡ ನಮಗರಿವಿಲ್ಲದೆ ಬದಲಾಗುತ್ತಿದೆ. ಬದಲಾವಣೆ ಪ್ರಕೃತಿಯ ಸಹಜ ನಿಯಮ ನಿಜ ಆದರೆ ಒಮ್ಮೆ ಯೋಚಿಸಿದಾಗ ಈ ಬದಲಾವಣೆಯ ವೇಗಕ್ಕೆ ಸಿಲುಕಿ ನಾವು ನಮ್ಮವರನ್ನು ಕಳೆದುಕೊಳ್ಳುತ್ತಿದ್ದೇವೆ , ಆ ಸವಿಯಾದ ಆತ್ಮೀಯತೆ, ಸ್ನೇಹ ಬಾಂಧವ್ಯ ನಮ್ಮಿಂದ ದೂರ ಸರಿಯುತ್ತಿದೆ ಎಂದೆನಿಸುತ್ತದೆ. ಇವೆಲ್ಲವೂ ಮಾನವನಿಗೆ ತಿಳಿಯುವ ಹೊತ್ತಿಗೆ ಬದಲಾವಣೆಯ ಸೋಂಕು ನಮ್ಮನ್ನು ಸಂಪೂರ್ಣ ಆವರಿಸಿ ಬಿಡುತ್ತದೆ ಎಂಬ ಭಯ ಕಾಡುತ್ತಿದೆ.
ಬದಲಾವಣೆಯು ನಮ್ಮ ಮನಸ್ಸನ್ನು ಸಂಕುಚಿತಗೊಳಿಸುತ್ತಿದೆ.
ಸ್ವಾರ್ಥ ಭಾವನೆ ನಮ್ಮಲ್ಲಿ ಹುತ್ತದ ಹಾಗೇ ಬೆಳೆಯುತ್ತಿದೆ. ಕುಟುಂಬ ಎಂಬ ಪರಿಕಲ್ಪನೆ ಕೇವಲ ಪದಕ್ಕಷ್ಟೇ ಸಿಮೀತವಾಗುತ್ತಿದೆ. ಹಳೆಯ ತಲೆಮಾರಿನ ಆಚಾರ-ವಿಚಾರವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವಲ್ಲಿ ಹಳೆಯ ಜೀವಗಳು ಸೋತುಹೋಗುತ್ತಿವೆ. ಎಲ್ಲವೂ ಅತಿಯಾದ ಆಧುನಿಕತೆಯ ಕಪಿ ಮುಷ್ಠಿಯಲ್ಲಿ ಬಂಧಿಯಾಗಿ ನರಳಾಡುತ್ತಿದೆ. ಮನುಷ್ಯ ಹುಟ್ಟಿರುವುದೇ ಹಣ ಸಂಪಾದಿಸಲು ಎಂಬ ಧೋರಣೆ ಬಂದಿದೆ. ಸಮಾಜದ ಏಳ್ಗೆಗಾಗಿ ದುಡಿಯುವ ಕೈಗಳು ಕಾಣೆಯಾಗುತ್ತಿವೆ. ಅದೆಷ್ಟೋ ಜೀವಗಳು ತಮ್ಮವರ ಆತ್ಮೀಯ ಅಪ್ಪುಗೆಯನ್ನು ನಿರೀಕ್ಷಿಸುತ್ತೀವೆ. ನಮಗಾಗಿ ಮಿಡಿವ ಮನಸ್ಸುಗಳು ಧೂಳು ಹಿಡಿದ ಹಾಳೆಯಾಗಿ ಪುಸ್ತಕದ ಪುಟಗಳನ್ನು ಸೇರಿವೆ. ಆ ಸುಂದರ ಪ್ರಕೃತಿ ಕಾಮನಬಿಲ್ಲಿನ ಹಾಗೇ ಮೈದುಂಬಿ ನಮ್ಮನ್ನು ಕೈ ಬೀಸಿ ಕರೆಯುತ್ತಿದ್ದರು ಸಹ ನಮಗೆ ಆ ಸುಂದರ ಬಣ್ಣಗಳನ್ನು ಗುರುತಿಸುವಲ್ಲಿ ಕಷ್ಟವಾಗುತ್ತಿದೆ. ಸನಾತನ ಧರ್ಮದ ತಿರುಳನ್ನು ಅರ್ಥೈಸಿಕೊಳ್ಳಲು ನಾವು ಸೋಲುತ್ತಿದ್ದೇವೆ. ಆದರೂ ನಮಗೆ ಯಾವುದೂ ಕಾಣುತ್ತಿಲ್ಲ ಕಾರಣ ಗೊಂದಲ. ಯಾವುದು ಬೇಕು/ಬೇಡ ಎಂಬ ನಿರ್ಧಾರ ಮಾಡಲು ಅಂತಃಕರಣಕ್ಕೆ ಸಾಧ್ಯವಾಗುತ್ತಿಲ್ಲ.
ನಮ್ಮ ಸಂಸ್ಕ್ರತಿ ಎಂಬ ತಾಯಿ ಬೇರನ್ನು ಗಟ್ಟಿಗೊಳಿಸುವ ಕಾರ್ಯ ನಮ್ಮಿಂದ ನಡೆಯಬೇಕಿದೆ. ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳನ್ನು ಉಳಿಸಬೇಕಿದೆ. ಆಧುನೀಕತೆ ಎಂಬ ಸೋಂಕಿಗೆ ಬಲಿಯಾಗದೇ ನಾವು ಮುನ್ನಡೆಯಬೇಕಿದೆ. ಪ್ರಕೃತಿಯು ಹೇಗೆ ತನ್ನ ಅಸಮತೋಲನವನ್ನು ಸರಿದುಗಿಸಿಕೊಳ್ಳುತ್ತಿದೆಯೋ ಹಾಗೇ ನಮ್ಮ ಮನಸ್ಸುಗಳ ನಡುವೆ ಇರುವ ಕಂದಕವನ್ನು ನಾವೇ ನಿವಾರಿಸಿಕೊಳ್ಳಬೇಕು. ಮಾನವ ಎಲ್ಲಿಯವರೆಗೂ ಈ ಕಟು ಸತ್ಯವನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಮ್ಮ ವಿನಾಶ ಖಂಡಿತ.
ಬೇರೆ ದೇಶಗಳು ಸಹ ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮುಂದುವರೆಯುತ್ತಿವೆ. ಆದರೆ ನಮಗೆ ಅದು ಅರ್ಥವಾಗುತ್ತಿಲ್ಲ. ಬಹುಶಃ ‘ದೀಪದ ಬುಡದಲ್ಲಿ ಕತ್ತಲು’ ಎಂಬ ಗಾದೆಯನ್ನು ಹಿರಿಯರು ಮಾಡಿರುವುದುರ ತಾತ್ಪರ್ಯ ಇದೆ ಎಂದು ಅನಿಸುತ್ತಿದೆ. ನಾವು ಬೇರೆಯವರಿಗೆ ಬೆಳಕಾಗುತ್ತಿದ್ದೇವೆ ಆದರೆ ನಾವು ಬೇರೋಬ್ಬರ ಬೆಳಕಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಇದು ನಿಜಕ್ಕೂ ವಿಪರ್ಯಾಸವೇ ಸರಿ. ನಾವು ಇತರರನ್ನು ಹಿಂಬಾಲಿಸುವ ಬರದಲ್ಲಿ ಗೊತ್ತಿಲ್ಲದೆ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ.
ನಮ್ಮ ಚಿಂತನೆಗಳಲ್ಲಿ, ಯೋಚನೆಯಲ್ಲಿ , ಆದರ್ಶದಲ್ಲಿ, ಬದಲಾವಣೆ ಹೊಂದಬೇಕೇ ವಿನಃ ಅಲ್ಪ ತೃಪ್ತಿಯನ್ನು ಪಡೆಯಲು ನಮ್ಮ ಮನಸ್ಸನ್ನು ಕಳೆದುಕೊಳ್ಳುತ್ತಿರುವುದು ಎಷ್ಟು ಸರಿ?
– ಸುರೇಂದ್ರ ಪೈ. ಸಿದ್ಧಾಪುರ