” ಚಹಾ ಪುರಾಣ ”
ಶಿವನ ಜಡೆಯಿಂದಂದು ಧರೆಗ್ಹಾರಿದವಳ ಸಖಿ
ಶಿವೆಯ ಕೈತೋಟದಲಿ ನಳನಳಿಸುತಿರಲು ತಾ
ರವಿಕಿರಣಗಳ ಝಳಕೆ ಬೆಂದು ಬಾಡಿದಳೊಮ್ಮೆ
ಜೀವಸಲಿಲವು ಇಲ್ಲದೆ ||
ಇಂತೊಂದು ದಿನದಲ್ಲಿ ಸಂತಸದಿ ಶಿವನರಸಿ
ಕಾಂತನೊಡಗೂಡಿ ಸಂಚರಿಸಿ ಬರುತಿರಲು
ನಿಂತು ನೋಡುತ ಸೊಬಗಿನಡುವಿನಲಿ ಛಾಯೆಯನು
ಸಂತಾಪಗೊಂಡಳು ಸತಿ ||
ಯಾರಲ್ಲಿ ಸೇವಕರು ಕೀಳಿರೈ ಛಾಯೆಯನು
ಕಾರಿರುಳಿನಂತಿರುವ ಇವಳ ಹೆಡೆಮುರಿ ಕಟ್ಟಿ
ನೀರಿಲ್ಲದಾ ಪರ್ವತದ ಮೇಲೆ ಧರಣಿಯೊಳು
ತೂರಿಬಿಡಿರೆಂದಳಾಗ ||
ಗಿರಿಜೆಯಾ ನುಡಿ ಕೇಳಿ ಥರಥರನೆ ಕಂಪಿಸುತ
ಕರವ ಜೋಡಿಸುತ ತಾ ಶಿರಬಾಗಿ ನಮಿಸುತ್ತ
ಕರುಣೆ ತೋರಿಸು ಎಂದು ಪರಿಪರಿಲಿ ಬೇಡುತ್ತ
ಪೊರೆಯೆಂದು ಶರಣಾದಳು ||
ನಾರಿಯಶ್ರುವ ಕಂಡು ಕನಿಕರಿಸಿ ತಾಯಿ ತಾ
ಸಾರಿದಾ ಶಾಪವನು ಮೀರಲಾಗದು ಎಂದು
ಧಾರುಣಿಯ ಮೇಲ್ಹೋಗಿ ಹಸಿರಾಗಿ ಬೆಳೆಯೆಂದು
ತೋರಿದಳು ವರ ಕರುಣದಿ ||
ಹಸಿದ ಆಯಾಸದಿಂ ಬಸವಳಿದ ಮಾನವಗೆ
ಹೊಸ ಚೇತನವ ನೀಡು ಎಂದು ಹರಸಲು ಮಾತೆ
ಹಸಿರಾಗಿ ಭುವಿಯಲ್ಲಿ ಬೆಳೆಯುತ್ತಲಾ ಛಾಯೆ
ರಸಪಾನ “ಚಹ”ವಾದಳು ||
ಹೀಗೆ ಕೈಲಾಸದಲ್ಲಿದ್ದ ಛಾಯೆ ಭುವಿಗಿಳಿದು ಚಹಾ (ಚಾಯ್) ಆದಳು.
ಇದು ನನ್ನ ತಂದೆ ದಿ. ಶ್ರೀ ಗಣಪತಿ ಭಟ್ ರು ಬರೆದ ಪದ್ಯ. ಬಾಲ್ಯದಲ್ಲಿ ಓದಿದ್ದ ಮಾಸಲು ನೆನಪಿದ್ದರೂ ಕೊನೆಯ ಎರಡು ಚರಣಗಳು ಪೂರ್ತಿ ಮರೆತುಹೋಗಿದ್ದವು. ಆದರೆ ಪದ್ಯದ ಸಾರಾಂಶ ಗೊತ್ತಿದ್ದರಿಂದ ಪೂರ್ಣಗೊಳಿಸುವ ಸಾಹಸ ಮಾಡಿದ್ದೇನೆ.
.
– ಭಾವನಾ