ಇದನ್ನು ಪಾಶ್ಚಾತ್ಯರಿಂದ ಕಲಿಯಬಹುದಲ್ಲ?

Share Button

 

Hema-21062015-edited

ಕೆಲವು ತಿಂಗಳ ಹಿಂದೆ ಜರ್ಮನಿಯ ವಿದ್ಯಾರ್ಥಿನಿಯೊಬ್ಬಳು ಸಾಂದರ್ಭಿಕವಾಗಿ, ನಮ್ಮ ಸಂಸ್ಥೆಗೂ ಭೇಟಿ ಕೊಟ್ಟಿದ್ದಳು. ಶ್ರೀಮಂತ ಉದ್ಯಮಿಯ ಮಗಳಾದರೂ, ತಮಿಳುನಾಡಿನ ಅನಾಥಾಲಯವೊಂದರಲ್ಲಿ ಒಂದೆರಡು ತಿಂಗಳ ಕಾಲ ಸ್ವಯಂಸೇವಕಿಯಾಗಿ ದುಡಿಯಲೆಂದು ಬಂದಿದ್ದಳು. ಅಲ್ಲಿ ಅವಳ ಜೀವನಶೈಲಿ ತೀರಾ ಸಾಮಾನ್ಯವಾಗಿತ್ತು. ಸಹಜವಾಗಿಯೇ, ಇವಳೇಕೆ ಇದನ್ನು ಆಯ್ಕೆ ಮಾಡಿಕೊಂಡಳು ಎಂಬ ಕುತೂಹಲದಿಂದ ಕೇಳಿದಾಗ ಅವಳು “ನಮ್ಮ ದೇಶದಲ್ಲಿ ಯುನಿವರ್ಸಿಟಿ ಪ್ರವೇಶಕ್ಕೆ ಮುನ್ನ ಸೈನ್ಯದಲ್ಲಿ ಕೆಲಸ ಮಾಡಿದ ಅಥವಾ ಸಮಾಜಸೇವೆ ಮಾಡಿದ ಅನುಭವ ಪಡೆದಿರಬೇಕಾದುದು  ಕಡ್ಡಾಯ. ಕೆಲವರು ಜರ್ಮನಿಯಲ್ಲಿಯೇ ಇದ್ದು ಸೈನ್ಯಕ್ಕೆ ಸೇರುತ್ತಾರೆ. ನಾನು ಸಮಾಜಸೇವೆಯನ್ನು ಆಯ್ಕೆ ಮಾಡಿ ಇಲ್ಲಿಗೆ ಬಂದೆ “ ಎಂದಳು. ಎಷ್ಟು ಉತ್ತಮವಾದ ವ್ಯವಸ್ಥೆಯಲ್ಲವೇ ?

ಪ್ರಾಥಮಿಕ ಶಾಲಾದಿನಗಳಲ್ಲಿ, ಟೀಚರ್ ಅವರು ‘ ಮಕ್ಕಳೇ, ನೀವು ದೊಡ್ಡವರಾದ ಮೇಲೆ ಏನಾಗಬೇಕೆಂದು ಬಯಸುತ್ತೀರಿ’ ಎಂದು ಕ್ಲಾಸ್ ನಲ್ಲಿ ಕೇಳಿದ್ದರು. ಆ ವಯಸ್ಸಿನಲ್ಲಿ ನಮಗೆ ಟೀಚರೇ ರೋಲ್ ಮಾಡೆಲ್ ಆಗಿದ್ದರಿಂದ ಕ್ಲಾಸಿನ ಹೆಚ್ಚಿನವರು ‘ನಿಮ್ಮಂತಯೇ ಟೀಚರ್’ ಆಗುತ್ತೇವೆಂದು ಹೇಳಿದ್ದೆವು. ಒಂದಿಬ್ಬರು ಡಾಕ್ಟರ್ , ಇಂಜಿನಿಯರ್ ಆಗುತ್ತೇವೆಂದು, ಇನ್ನು ಕೆಲವು  ಹುಡುಗರು ಸ್ವಲ್ಪ ವಿಭಿನ್ನವಾಗಿ, ಗಂಟೆ ಬಡಿಯುವ ಜವಾನ, ಬಟ್ಟೆ ಹೊಲಿಯುವ ಟೈಲರ್, ಐಸ್ ಕ್ಯಾಂಡಿ ಮಾರುವವ, ಬಸ್ ಡ್ರೈವರ್ .. …..ಹೀಗೆ ತಮ್ಮೆದುರು ಕಂಡ ಕೆಲಸವನ್ನು ಗುರುತಿಸಿದ್ದರು. ಯಾರೂ ಆದರೆ ಯಾರೂ ತಾನು ‘ಸೈನಿಕ’ನಾಗುತ್ತೇನೆಂದು ಹೇಳಿದ್ದ ನೆನಪಿಲ್ಲ. ‘ಸೈನ್ಯಕ್ಕೆ ಸೇರ್ಪಡೆ’ಯಾಗುವುದು ಎಂಬ ಕಲ್ಪನೆಯೇ ನನ್ನ ಕ್ಲಾಸಿನಲ್ಲಿ ಯಾರಿಗೂ ಇದ್ದಿರಲಿಲ್ಲ.

 Solldier Siachen
‘ಸೈನ್ಯಕ್ಕೆ’ ಸೇರುವುದು ಹೆಮ್ಮೆಯ ಕೆಲಸ ಎಂಬ ಭಾವನೆ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳು, ಅಲ್ಲಿನ ಜೀವನ ಹೇಗಿರುತ್ತದೆ, ಯಾವ ವಯಸ್ಸಿನಲ್ಲಿ ಅರ್ಜಿ ಹಾಕಬೇಕು, ಯಾವ ಅರ್ಹತೆಗಳನ್ನು ಪಡೆದಿರಬೇಕು …ಇತ್ಯಾದಿ ವಿಚಾರಗಳನ್ನು ಶಾಲಾದಿನಗಳಲ್ಲಿಯೇ ಮನದಟ್ಟು ಮಾಡುವ ವ್ಯವಸ್ಥೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ, ‘ಯಾವುದಾದರೂ ಒಂದು ಉದ್ಯೋಗ ಲಭಿಸಿದರೆ ಸಾಕಪ್ಪ’ ಎಂಬ ಅನಿವಾರ್ಯತೆ ಇದ್ದ ನನಗೂ ಸೈನ್ಯಕ್ಕೆ ಸೇರುವ ಬಗ್ಗೆ ಮಾಹಿತಿ ಸಿಕ್ಕಿದ್ದರೆ, ಈಗಿನಂತೆ ಸೈನ್ಯದಲ್ಲಿ ಮಹಿಳೆಯರಿಗೂ ಅವಕಾಶವಿದ್ದಿದ್ದರೆ, ನನ್ನ ಜೀವನದ ಗತಿ ಬದಲಾಗುತ್ತಿತ್ತು ಅನಿಸುತ್ತದೆ. ಇಡೀ ದೇಶವೇ ಕಂಬನಿ ಮಿಡಿಯುವಂತಹ, ಕೋಟ್ಯಾಂತರ ಜನರು ಎದ್ದು ಸೆಲ್ಯೂಟ್ ಹೊಡೆಯುವಂತಹ, ವೀರಮರಣವನ್ನು ಪಡೆಯಲು ಜನ್ಮಾಂತರಗಳ ಪುಣ್ಯ ಮಾಡಿರಬೇಕು. ಸಾಮಾನ್ಯರಿಗೆ ಇದು ಅಲಭ್ಯ.
 
ಪಾಶ್ಚಾತ್ಯರ ಹಲವಾರು ಆಚಾರ-ವಿಚಾರಗಳನ್ನು ನಮ್ಮ ದೇಶಕ್ಕೆ ಸೂಕ್ತವಲ್ಲದಿದ್ದರೂ ಅಂಧಾನುಕರಣೆ ಮಾಡುವ ನಾವು ಅವರ ಶಿಕ್ಷಣದಲ್ಲಿ ಹಾಸುಹೊಕ್ಕಾಗಿರುವ ಉತ್ತಮ ವ್ಯವಸ್ಥೆಯನ್ನು ಅನುಕರಿಸಬಹುದಲ್ಲ?

ಜೈ ಜವಾನ್ !

 

 – ಹೇಮಮಾಲಾ.ಬಿ

 

5 Responses

  1. Venkatesh Kulkarni says:

    ಉತ್ತಮ ವಿಚಾರ

  2. ಪೂರ್ಣಚಂದ್ರ says:

    ಉತ್ತಮ ವಿಚಾರಗಳನ್ನು ಅಳವಡಿಸಿಕೊಳ್ಳುವುದಿರಲ್ಲಿ ತಪ್ಪಿಲ್ವಲ್ಲ.

  3. Kadwadi Printers says:

    ತುಂಬಾ ಪ್ರಸ್ತುತ, ಹಾಗೆ ನಮಗೆ ಇದು ಅನಿವಾರ್ಯಕೂಡಾ…

  4. ಸಿಂಗಪುರದಲ್ಲಿ ಕೂಡ ಪುರುಷರಿಗೆ ಇದು ಕಡ್ಡಾಯ ಸೇವೆ. ಮಾತ್ರವಲ್ಲ, ನಲವತ್ತು ವರ್ಷದ ತನಕ ಪ್ರತಿ ವರ್ಷ ಇಂತಿಷ್ಟು ದಿನ ಎಂದು ನಿಗದಿ ಮಾಡಿರುತ್ತಾರೆ – ಕೆಲಸದಿಂದ ಬಿಡುವು ಮಾಡಿಕೊಂಡು ಸೈನ್ಯದ ಸೇವಾ / ತರಬೇತಿ ಶಿಬಿರಗಳಲ್ಲಿ ಭಾಗವಹಿಸಲು (ಕಾನೂನು ರೀತ್ಯಾ ಕಂಪನಿಗಳು ಇದಕ್ಕೆ ಅನುಮತಿ ಕೊಡಲೇಬೇಕು ಕೂಡ)

    • Hema says:

      ಒಹ್..ಉತ್ತಮ ವ್ಯವಸ್ಥೆ ಅಲ್ಲಿಯೂ ಇದೆ ಎಂದಾಯಿತು. ಧನ್ಯವಾದಗಳು …

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: