(ಹಿಂದಿನಸಂಚಿಕೆಯಿಂದಮುಂದುವರಿದುದು)
ಒಂದು ವಾರ ಕಳೆಯುವಷ್ಟರಲ್ಲಿ ಹುಡುಗಿಯರು ಹೊಸ ಬದುಕಿಗೆ ಹೊಂದಿಕೊಂಡರು. ಸಿಂಧು, ಮಾನಸ ತಮ್ಮ ಬೈಕ್ ತರಿಸಿಕೊಂಡರು. ಕೆಲಸದವಳು ಗೊತ್ತಾದಳು. ಪಾತ್ರೆ, ಕಸದ ವ್ಯವಸ್ಥೆ ಅವಳದು. ಬೇಗ ಎದ್ದು ಬಂದು ಬಾಗಿಲಿಗೆ ನೀರು ಹಾಕಲು ಅವಳಿಗೆ ಕಷ್ಟವಾಗಿತ್ತು. ಓನರ್ ಮನೆಯವರು ಪೂಜೆ ಮಾಡಲು ಪುರೋಹಿತರನ್ನು ಗೊತ್ತುಮಾಡಿದ್ದರು. ಬಾಗಿಲಿಗೆ ನೀರು ಹಾಕಲು ಅಮ್ಮ-ಮಗಳಿಗೆ ಸೋಮಾರಿತನ. ಕೆಲಸದ ಮಲ್ಲಿ ಬೇಗ ಬರುತ್ತಿರಲಿಲ್ಲ. ದಿನಾ ಜಗಳವಾಗುತ್ತಿತ್ತು.
“ಮಲ್ಲಿ ನಾನೇ ಬಾಗಿಲಿಗೆ ನೀರು ಹಾಕ್ತೀನಿ. ಅದರ ಬದಲು ನೀವು ನನಗೆ ಏನು ಕೆಲಸ ಮಾಡಿಕೊಡ್ತೀರಾ?” ಒಂದು ದಿನ ವರು ಕೇಳಿದಳು.
“ನೀವು ಏನು ಹೇಳಿದರೂ ಮಾಡ್ತೀನಿ. ಅಮ್ಮಾವರು ಹಾಲು ದೇವರಮನೆ ಗುಡಿಸ್ಕೋತಾರೆ. ಆದರೆ ಬಾಗಿಲಿಗೆ ಮಾತ್ರ ನೀರು ಹಾಕಲ್ಲ. ನಾನು ಮನೇಲಿ ಟೀ ಮಾಡಿ, ತಿಂಡಿ-ಪಂಡಿ ಮಾಡಬೇಡ್ವಾ ಹೇಳಿ.”
“ನಾನೇ ಹಾಕ್ತೀನಿ. ನೀವು ನನಗೆ ಒಣಕೊಬ್ಬರಿ, ಕಾಯಿ ತುರಿದುಕೊಡಬೇಕು.”
“ಅಷ್ಟೇತಾನೆ ಬಿಡಿ” ಅಂದಳು ಮಲ್ಲಿ.
ವಾರುಣಿ ಬೆಳಿಗ್ಗೆ ಆರು ಗಂಟೆಗೆ ಎದ್ದು ಎದುರುಗಡೆ ಬೂತ್‌ನಿಂದ ಹಾಲು ತಂದು, ಬಾಗಿಲಿಗೆ ನೀರು ಹಾಕಿ ಒಳಗೆ ಬಂದು ಹಾಲು ಕಾಯಿಸಿ ಡಿಕಾಕ್ಷನ್ ಹಾಕಿ, ಸ್ನಾನ ಮಾಡಿ ದೇವರ ದೀಪ ಹಚ್ಚಿ, ಒಂದು ಕಡೆ ಅಡಿಗೆಗಿಟ್ಟು, ತಿಂಡಿಗೆ ರೆಡಿ ಮಾಡುತ್ತಿದ್ದಳು. ರಾತ್ರಿ ಟಿ.ವಿ. ನೋಡುವಾಗ ತರಕಾರಿ ಹೆಚ್ಚಿಕೊಳ್ಳುತ್ತಿದ್ದಳು. ಪುಡಿಗಳು ಸಿದ್ಧವಿದ್ದವು. ಸಿಂಧು, ಮಾನಸ, ಕೃತಿಕಾ ಚಟ್ನಿಪುಡಿ, ಉಪ್ಪಿನಕಾಯಿ ತಂದಿದ್ದರು.
ದಿನಗಳು ಸಾಗುತ್ತಿದ್ದವು. ವಾರುಣಿಯ ಚುರುಕುತನ ನೋಡಿ ಉಳಿದವರಿಗೆ ನಾಚಿಕೆಯಾಗುತ್ತಿತ್ತು. ಸಿಂಧು ಸಾಯಂಕಾಲ ತಾನೇ ಟೀ, ಕಾಫಿ ಮಾಡುತ್ತಿದ್ದಳು. ಚಪಾತಿ ಮಾಡುವಾಗ ಯಾರಾದರೊಬ್ಬರು ಸಹಾಯ ಮಾಡುತ್ತಿದ್ದರು.
ಸಾಮಾನ್ಯವಾಗಿ ಭಾನುವಾರ ಎಲ್ಲರೂ ತಡವಾಗಿ ಏಳುತ್ತಿದ್ದರು. ಆನ್‌ಲೈನ್‌ನಲ್ಲಿ ತಿಂಡಿ ಬರುತ್ತಿತ್ತು. ತಲೆಗೆ ಸ್ನಾನ ಮಾಡಿ ಸಿನಿಮಾ ನೋಡಲೋ, ಶಾಪಿಂಗ್ ಮಾಡಲೋ ಹೋಗುತ್ತಿದ್ದರು. ಆದರೆ ವಾರುಣಿ ಹೋಗುತ್ತಿರಲಿಲ್ಲ.
“ಈ ದಿನ ಕಣ್ತುಂಬಾ ನಿದ್ರೆ ಮಾಡ್ತೀನಿ. ನೀವು ಹೋಗಿ ಬನ್ನಿ. ನೀವು ಬರುವ ವೇಳೆಗೆ ಸ್ಪೆಷಲ್ ಅಡಿಗೆ ರೆಡಿ” ಎನ್ನುತ್ತಿದ್ದಳು.
ಕೆಲವು ಸಲ ಅವಳು ನೋಟ್ಸ್ ಮಾಡುವುದಿರುತ್ತಿತ್ತು. ಸೆಮಿನಾರ್‌ಗೆ ಪ್ರಿಪೇರ್ ಆಗಬೇಕಿರುತ್ತಿತ್ತು. ಭಾನುವಾರ ತಂದೆ-ತಾಯಿಗೆ ಕಾಲ್ ಮಾಡಿ ಬಾಯ್ತುಂಬಾ ಮಾತಾಡುತ್ತಿದ್ದಳು. ಒಮ್ಮೊಮ್ಮೆ ಶೋಭಾ, ತಂಗಿ-ತಮ್ಮ ಎಲ್ಲರಿಗೂ ಮಾತಾಡುತ್ತಿದ್ದಳು. ಒಮ್ಮೆ ಶಕುಂತಲಾ ಕೇಳಿದ್ದರು.
“ನೀನು ಹೋಗಿ 2 ತಿಂಗಳಾಗ್ತಾ ಬಂತು. ಒಂದು ಸಲ ಬರಕ್ಕಾಗಲ್ವಾ?”
“ಅಮ್ಮಾ, ಶನಿವಾರ ಬಂದು, ಭಾನುವಾರ ವಾಪಸ್ಸು ಓಡಿ ಬರಬೇಕು. ಪುನಃ ಸೋಮವಾರ ಕಾಲೇಜ್‌ಗೆ ಓಡಬೇಕು. ಒಟ್ಟಿಗೆ ನಾಲ್ಕು ದಿನ ರಜ ಸಿಕ್ಕರೆ ಬರ‍್ತೀನಮ್ಮ.”
“ನೀವೇ ಅಡಿಗೆ ಮಾಡಿಕೊಳ್ತಿದ್ದೀರಾ?”
“ಹೌದಮ್ಮ.”
“ಮಾನಸಂಗೆ ಅಡಿಗೆ ಬರತ್ತೇನೆ?”
“ಕಲಿತಾ ಇದ್ದಾಳೆ. ತರಕಾರಿ ಹೆಚ್ತಾಳೆ. ಚಪಾತಿ ಬೇಯಿಸ್ತಾಳೆ. ಟೀ, ಕಾಫಿ ಮಾಡ್ತಾಳೆ. ಸುಮ ಹೇಗಿದ್ದಾಳೆ?”
“ಅದೊಂದು ದೊಡ್ಡ ಕಥೆ. ಅಮ್ಮ-ಮಗಳು ಬಂದಿದ್ದಾರೆ. ಫೋನ್‌ನಲ್ಲಿ ಏನೂ ಹೇಳಕ್ಕಾಗಲ್ಲ……..”
“ಅಮ್ಮ ನಾನು ಎರಡು ದಿನದ ಮಟ್ಟಿಗೆ ಬರ‍್ತಿದ್ದೀನಿ. ಈ ಶುಕ್ರವಾರ ಸಾಯಂಕಾಲ ಬಂದು ಭಾನುವಾರ ಸಾಯಂಕಾಲ ವಾಪಸ್ಸಾಗ್ತೀನಿ.”
“ಹಾಗೇ ಮಾಡು. ನಮಗೂ ನಿನ್ನ ಮೋಡಬೇಕು ಅನ್ನಿಸಿದೆ.”
ಅಂದೇ ಅವಳು ಗೆಳತಿಯರಿಗೆ ಹೇಳಿದಳು.
“ನಾವೆಲ್ಲಾ ಕುಶಾಲನಗರಕ್ಕೆ ಹೋಗುವುದೂಂತ ಪ್ಲಾನ್ ಮಾಡಿದ್ದೆವಲ್ಲಾ………”
“ನಾನು ಸೆಮಿನಾರ್‌ಗೆ ಹೆಸರು ಕೊಟ್ಟಿದ್ದೇನೆ. ಶೇಕ್ಸ್ಪಿಯರ್ ಡ್ರಾಮಾಗಳಲ್ಲಿ ಯಾವುದಾದರೂ ಡ್ರಾಮಾದ ಒಂದು ಪಾತ್ರದ ಬಗ್ಗೆ ಮಾತನಾಡಬೇಕು. ನಾನು ಒಥೆಲೋ ಆರಿಸಿಕೊಂಡಿದ್ದೇನೆ……”
“ಯಾವ ಪಾತ್ರದ ಬಗ್ಗೆ ಮಾತಾಡ್ತೀಯಾ?”
“ಡೆಸ್ಡಿಮೋನಾ………!”
“ಫೈನ್…”
“ನಮ್ಮ ತಂದೆ, ನಮ್ಮ ಚಿಕ್ಕಪ್ಪನ ಹತ್ತಿರ ಒಂದು ಸಲ ಡಿಸ್ಕಸ್ ಮಾಡಿ, ಪೇಪರ್ ಸಿದ್ದ ಮಾಡ್ತೀನಿ.”
“ಹಾಗೆ ಮಾಡು. ನಾವು ಸೋಮವಾರ ಬೆಳಿಗ್ಗೆ ರ‍್ತೇವೆ.”
“ನಾನು ಭಾನುವಾರಾನೇ ಬರ‍್ತೀನಿ. ಲ್ಯಾಪ್‌ಟಾಪ್ ಇಟ್ಟುಹೋಗು ಮಾನಸ.”
“ನಾನದನ್ನು ಎಲ್ಲೇ ಉಪಯೋಗಿಸ್ತಿದ್ದೇನೆ?”
ವರು ಪೇಪರ್ ಪ್ರೆಸೆಂಟ್ ಮಾಡುವ ವಿಚಾರ ತಿಳಿದು ಸಿಂಧು, ಕೃತಿಕಾ ಹೇಳಿದರು. “ನಮಗೆ ನಾಚಿಕೆಯಾಗ್ತಿದೆ. ನೀನು ಕೆಲಸದಲ್ಲೂ ಮುಂದೆ, ಓದಿನಲ್ಲೂ ಮುಂದು. ನಾವೇ ಶುದ್ಧ ದಂಡ ಪಿಂಡಗಳು……….”
“ಛೆ ಹಾಗೆ ಯಾಕೆ ಅನ್ನುತ್ತೀರಾ? ರಾಮ್‌ಗೋಪಾಲ್ ಅಂತ ಇದಾರಲ್ಲಾ ಅವರು “ಹುಡುಗಿಯರು ಅಲಂಕಾರ ಮಾಡಿಕೊಳ್ಳಕ್ಕೇ ಲಾಯಕ್ಕು ಅಂತ ಕಾಮೆಂಟ್ ಮಾಡಿದ್ರು. ಇರುವ 12 ಹುಡುಗಿಯರಲ್ಲಿ ಒಬ್ಬರೂ ಹೆಸರು ಕೊಟ್ಟಿಲ್ಲಾಂತ ರಾಜೇಶ್‌ಸರ್ ಹೇಳಿದರು. ಅದಕ್ಕೆ ನಾನೂ, ಮಡಿಕೇರಿಯ ರಾಗಿಣಿ ಹೆಸರು ಕೊಟ್ಟೆವು.”
“ಮುಂದಿನ ಸಲ ನಾವು ಕೊಡ್ತೇವೆ ಕಣೆ….. ಸಾರಿ.”
“ನಮ್ಮ ಗುಂಪಿನಿಂದ ಒಬ್ಬೊಬ್ಬರು ಒಂದೊಂದು ಸಲ ಹೆಸರಕೊಡೋಣ” ಎಂದಳು ಮಾನಸ.
ಶುಕ್ರವಾರ ಮಧ್ಯಾಹ್ನ ನಾಲ್ಕು ಗಂಟೆಯ ಬಸ್ ಹತ್ತಿದಳು. ಎರಡು ದಿನ ರಜವಿದ್ದುದರಿಂದ ವಿಪರೀತ ಟ್ರಾಫಿಕ್. ಅವಳು ಮನೆ ತಲುಪಿದಾಗ ಎಂಟು ಗಂಟೆ.
ಎಲ್ಲರ ಜೊತೆ ಕುಳಿತು ವರು ಊಟ ಮುಗಿಸಿದಳು. ಶೋಭಾ ಚಿಕ್ಕಮ್ಮ ಬಡಿಸುತ್ತಾ ತಮಾಷೆ ಮಾಡಿದರು. “ವರು ನೀನು ಸಣ್ಣ ಆಗಿದ್ದೀಯ. ಆದರೆ ಮೊದಲಿಗಿಂತ ತುಂಬಾ ಚೆನ್ನಾಗಿ ಕಾಣ್ತಿದ್ದೀಯ. ನಿನ್ನ ಮುಖದಲ್ಲಿ ಒಂದು ತರಹ ಖಳೆ ಬಂದಿದೆ ಕಣೆ.”
“ಸುಮ್ನಿರಮ್ಮ. ನನ್ನ ಮಗಳಿಗೆ ದೃಷ್ಟಿಯಾದೀತು” ಎಂದರು ಶಕುಂತಲ.
ಎಲ್ಲರನ್ನೂ ಮಾತನಾಡಿಸಿ ತಂದೆಯ ಮುಂದೆ ಕುಳಿತಳು. ಅವರು “ಬೆಳಿಗ್ಗೆ ಶಿವಶಂಕರ ನಾನು ನೀನು ಕುಳಿತು ಡಿಸ್ಕಸ್ ಮಾಡೋಣ” ಎಂದರು. ಶಕುಂತಲ ಮಗಳ ಜೊತೆ ಹೊರಗಡೆ ಮೆಟ್ಟಲ ಮೇಲೆ ಕುಳಿತರು.
“ಹೇಗಿದೆ ಮೈಸೂರು?”
“ಚೆನ್ನಾಗಿದೆಯಮ್ಮ. ನನಗೆ ಮೈಸೂರಲ್ಲೇ ಸೆಟ್ಲ್ ಆಗಬೇಕು ಅನ್ನಿಸ್ತಿದೆ.”
“ಅದೇ ಒಳ್ಳೆಯದು ಅನ್ನಿಸತ್ತೆ. ವಾರದ ಹಿಂದೆ ನಿಮ್ಮ ಪಾರು ಅತ್ತೆ ಜೊತೆ ಬಂದ ಮಗಳು ಸುಮ ‘ನಾನು ಮುಂದೆ ಓದಲ್ಲ. ನಂಗೆಲ್ಲಾದರೂ ಕೆಲಸ ಕೊಡಿಸಿ’ ಅಂದಳು. ನಿಮ್ಮ ತಂದೆ ಡಾ|| ಚಾಂದಿನಿ ಕ್ಲಿನಿಕ್‌ನಲ್ಲಿ ಕೆಲಸ ಕೊಡಿಸಿದರು. ಬೆಳಿಗ್ಗೆ 9 ರಿಂದ 1 ಗಂಟೆ. ಸಾಯಂಕಾಲ 6ರಿಂದ 8ರವರೆಗೆ ಕೆಲಸ. ಚೀಟಿ ಬರೆಯೋದು, ಪೇಷೆಂಟ್ಸ್ನ ಒಳಗೆ ಕಳಿಸೋದು. ‘5,000 ರೂ ಕೊಡ್ತೀನಿ’ ಅಂದ್ರು. ನಿಮ್ಮತ್ತೆ ಒಪ್ಪಲಿಲ್ಲ.”
“ಯಾಕೆ?”
“ಅವರಿಗೆ 15,000 ರೂ. ಕೆಲಸ ಬೇಕಂತೆ. ಆ ಸುಮ ಒಂದು ಕೆಲಸಾನೂ ಮಾಡಲ್ಲ. ದೇವಕೀನೇ ತುಂಬಾ ಬೈತಾ ಇದ್ದಾಳೆ.”
“ಹೋಗಲಿ ಬಿಡಮ್ಮ. ಕೆಲಸ ಸಿಗದಿದ್ರೆ ಅವಳೇ ವಾಪಸ್ಸು ಹೋಗ್ತಾಳೆ.”
“ನಿಮ್ಮ ಪಾರು ಅತ್ತೆ ಆಲೋಚನೆ ಬೇರೆ ಏನೋ ಇದೆ.”
“ಅದಕ್ಕೆಲ್ಲಾ ಉತ್ತರ ಕೊಟ್ಟರಾಯ್ತು ಬಾ ಮಲಗೋಣ…….”
“ನಾವು ಮನೆ ಬಿಡಬೇಕಾಗಬಹುದು………”
“ಬಿಡೋಣ. ಅದೂ ಒಂದು ರೀತಿಯಲ್ಲಿ ಒಳ್ಳೆಯದೇ” ಎಂದಳು ವರು.
ಶನಿವಾರ ಮಗಳಿಗೆ ಇಷ್ಟವಾದ ಪೂರಿ, ಸಾಗು ಮಾಡಿದರು ಶಕುಂತಲಾ. ತಿಂಡಿ ತಿಂದು ವರು, ಚಿಕ್ಕಪ್ಪ ಹಾಗೂ ತಂದೆಯ ಜೊತೆ ‘ಡೆಸ್ಡಿಮೋನಾ’ ಪಾತ್ರದ ಬಗ್ಗೆ ಚರ್ಚಿಸುತ್ತಾ ಕುಳಿತಳು. ಶಿವಶಂಕರ್ ಅವಳ ಪಾಯಿಂಟ್ಸ್ ಕೇಳಿ ‘ವೆರಿ ಗುಡ್, ಫೈನ್’ ಎನ್ನುತ್ತಿದ್ದ. ನಂತರ ಅವಳು ಪೇಪರ್ ಹೇಗೆ ಪ್ರೆಸೆಂಟ್ ಮಾಡಬೇಕೆಂದು ಹೇಳಿದ. ಅವಳ ತಂದೆಯೂ ಪೇಪರ್ ತಯಾರು ಮಾಡಲು ಮಾರ್ಗದರ್ಶನ ಮಾಡಿದರು.
ಅವರ ಮಾತುಕಥೆ ಕೇಳುತ್ತಿದ್ದ ಸುಮ ಹೇಳಿದಳು. “ಅಮ್ಮಾ ಖಂಡಿತ ವರು ಅಣ್ಣನ್ನ ಮದುವೆಯಾಗಲ್ಲ. ನೀನು ತುಂಬಾ ಆಸೆ ಇಟ್ಟುಕೋಬೇಡ.”
“ಯಾಕೆ ಹಾಗಂತೀಯ?”
“ಅವಳು ಪಟಪಟ ಇಂಗ್ಲೀಷ್ ಮಾತಾಡ್ತಾಳೆ. ತನಗಿಂತ ಕಡಿಮೆ ಓದಿರುವವನನ್ನು ಯಾಕಮ್ಮ ಮದುವೆಯಾಗ್ತಾಳೆ?”
“ಸೀನು ಹೇಳಿದ್ದಾನೆ. ನಾನು ಒಪ್ಪಿಸೇ ಒಪ್ಪಿಸ್ತೇನೆ” ಎಂದರು ಪಾರ್ವತಿ.
ಶನಿವಾರ ಸಾಯಂಕಾಲ ಎಲ್ಲರೂ ಕಾಫಿ ಕುಡಿಯುತ್ತಿದ್ದಾಗ ಪಾರ್ವತಿ ಹೇಳಿದರು. “ಸೀನು ಒಂದು ವಿಚಾರ ಹೇಳಬೇಕು.”
“ಹೇಳಕ್ಕಾ.”
“ದಸರಾ ಹೊತ್ತಿಗೆ ನಾಗರಾಜನ ಮದುವೆ ಆಗಬೇಕು. ನಾಗರಾಜನ ಮದುವೆಯಾದ ಮೇಲೆ ಸುಮ ಮದುವೆ ಮಾಡಿಬಿಡ್ತೀನಿ. ನಟರಾಜನ ಬಗ್ಗೆ ಆಮೇಲೆ ಯೋಚಿಸೋಣ.”
“ನಾಗರಾಜಂಗೆ ಹುಡುಗಿ ನೋಡಿದ್ದೀಯಾ?”
“ಇದೇನೋ ಹೀಗೆ ಕೇಳ್ತೀಯಾ? ವರುನ್ನ ಕೊಟ್ಟು ಮದುವೆ ಮಾಡು. ಅವಳು ಓದು ಮುಂದುವರೆಸಲಿ ಯಾರು ಬೇಡ ಅಂತಾರೆ. ಅವಳ ಓದು ಮುಗಿದ ಮೇಲೆ ನಾವೂ ಬೆಂಗಳೂರಿಗೇ ಬಂದು ಬಿಡ್ತೇವೆ.”
ಶ್ರೀನಿವಾಸ್‌ರಾವ್ ಉತ್ತರ ಕೊಡುವ ಮೊದಲೇ ಶಕುಂತಲಾ ಹೇಳಿದರು.
“ಅತ್ತಿಗೆ, ವರು ಇನ್ನೆರಡು ವರ್ಷ ಮದುವೆ ಆಗಲ್ಲ. ಅದೂ ಅಲ್ಲದೆ ಈಗಿನ ಕಾಲದಲ್ಲಿ ಸಂಬಂಧಗಳಲ್ಲಿ ಮದುವೆಯಾಗಲು ಇಷ್ಟಪಡಲ್ಲ. ನೀವು ಬೆಂಗಳೂರಿಗೆ ಬರುವುದು ಬಿಡುವುದು ನಿಮ್ಮ ಇಷ್ಟ. ಯಾಕೇಂದ್ರೆ ನಾವು ಮನೆ ಬಿಡಬೇಕಾಗಬಹುದು.”
“ಯಾಕೆ ಮನೆ ಬಿಡಬೇಕು?”
“ಓನರ್ ಮಗಳ ಮದುವೆ ಸೆಟ್ಲ್ ಆಗಿದೆ. ದುಬೈನಲ್ಲೇ ಮದುವೆ. ಮಗನ ಓದು ಇನ್ನು 6-8 ತಿಂಗಳಲ್ಲಿ ಮುಗಿಯುತ್ತದೆ. ಅವನು ‘ಇಂಡಿಯಾದಲ್ಲೇ ಕೆಲಸ ಮಾಡ್ತೀನಿ ಅಂತಿದ್ದಾನಂತೆ. ಆದ್ದರಿಂದ ಮಗಳ ಮದುವೆಯಾದ ಮೇಲೆ ಅವರು ಈ ಊರಿಗೆ ಬರ‍್ತಾರೆ. ಮನೆ ರಿಪೇರಿ ಆಗಬೇಕು. ನೀವು ಬಿಡಬೇಕಾಗತ್ತೆ’ ಅಂತ ಹೇಳಿದರು.”
“ಬೇರೆ ಮನೆ ನೋಡಿದರಾಯ್ತು. ನೋಡುವಾಗಲೇ ದೊಡ್ಡ ಮನೆ ನೋಡಿಬಿಡು.”
“ಅಕ್ಕ, ಬೆಂಗಳೂರಲ್ಲಿ ಈಗ ಮನೆ ಬಾಡಿಗೆ ಹೇಗಿದೆ ಗೊತ್ತಾ? ನಾವು ಕೊಟ್ಟು ಪೂರೈಸಕ್ಕಾಗಲ್ಲ…..”
“ಏನಪ್ಪ ಹಾಗಂದ್ರೆ?”
“ನಾನು ಉತ್ತರ ಕೊಡ್ತೀನಿ ಅತ್ತೆ. ನಾನು ಯಾವುದೇ ಕಾರಣಕ್ಕೂ ಸಧ್ಯದಲ್ಲಿ ಮದುವೆ ಆಗಲ್ಲ. ಓದು ಮುಗಿಯುತ್ತಿರುವ ಹಾಗೆ ಕೆಲಸಕ್ಕೆ ಸೇರ‍್ತೀನಿ. ನನಗೆ ಯಾವ ಊರಿನಲ್ಲಿ ಕೆಲಸ ಸಿಗುತ್ತದೋ ಅಲ್ಲಿಗೆ ಅಪ್ಪ-ಅಮ್ಮನ್ನ ಕರೆದುಕೊಂಡು ಹೋಗ್ತೀನಿ. ಶರೂಗೆ ಏನಿಷ್ಟನೋ ಅದನ್ನು ಓದಿಸ್ತೇನೆ. ಇನ್ನು ಪುಟ್ಟನ್ನ ಎಂ.ಟೆಕ್ ಓದಿಸ್ತೀನಿ.”
“ಅದಕ್ಕೋಸ್ಕರ ಮದುವೆ ಬೇಡಾಂತಿದ್ದೀಯಾ?”
“ಹೌದು. 28 ವರ್ಷಕ್ಕೆ ಮದುವೆಯಾದ್ರೂ ನಡೆಯುತ್ತದೆ. ನಾನು ನನಗಿಂತ ಹೆಚ್ಚಿಗೆ ಓದಿರುವವರನ್ನೇ ಮದುವೆಯಾಗೋದು. ನೀವು ನಾಗರಾಜಂಗೆ ಬೇರೆ ಹುಡುಗೀನ್ನ ನೋಡಿ.”
“ಸೀನು ಒಪ್ಪಿರುವಾಗ ನಿನ್ನದೇನೇ ತಲೆಹರಟೆ?”
“ಮದುವೆಯಾಗಿ ಸಂಸಾರ ಮಾಡಬೇಕಿರುವುದು ನಾನು. ನಿಮ್ಮ ತಮ್ಮ ಅಲ್ಲ. ನನ್ನ ಓದಿಗೆ ಸರಿಹೋಗುವಂತಹ ಹುಡುಗನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರö್ಯ ನನಗಿದೆ” ವರು ಹೇಳಿದಳು.
“ನಿಮ್ಮಪ್ಪ ಒಬ್ಬನೇ ತಮ್ಮ ಅಲ್ಲ ನನಗೆ. ಶಿವ, ಸುಧಾಕರ, ದೇವಕಿ ನನ್ನ ಜೊತೆ ಇದ್ದಾರೆ. ನಾವು ದೊಡ್ಡ ಮನೆ ಮಾಡಿಕೊಂಡು ಇರ‍್ತೀವಿ ಬಿಡು.”
“ನಮ್ಮದೆಲ್ಲಾ ವರ್ಗವಾಗುವ ಕೆಲಸಗಳು. ನಮ್ಮನ್ನು ನೆಚ್ಚಿಕೊಂಡು ನೀನು ಬೆಂಗಳೂರಿಗೆ ಬರಬೇಡಕ್ಕಾ” ಎಂದಳು ದೇವಕಿ.
ಪಾರ್ವತಿಗೆ ಒಂದು ತರಹವಾಯಿತು. ಅವರು ದುರ್ದಾನ ತೆಗೆದುಕೊಂಡವರಂತೆ ಎದ್ದು ಹೋದರು. ಶಕುಂತಲಾ, ಶೋಭಾ ವರು ಬೆನ್ನು ತಟ್ಟಿ ಹೇಳಿದರು. “ಸರಿಯಾದ ಉತ್ತರ ಹೇಳಿದೆ ವರು. ಈ ರೀತಿ ಉತ್ತರಕೊಡುವವರು ಒಬ್ಬರು ನಮ್ಮನೆಗೆ ಬೇಕಿತ್ತು.”
“ಇಲ್ಲಮ್ಮ ನೀನು ಮಾತಾಡಿದ್ದು ನಾನು ಒಪ್ಪಲ್ಲ” ಎಂದರು ಶ್ರೀನಿವಾಸರಾವ್.
ವರು ಸುತ್ತಲೂ ನೋಡಿದಳು. ಎಲ್ಲರೂ ಎದ್ದು ಹೋಗಿದ್ದರು.
“ಯಾವುದು ತಪ್ಪು ಅಪ್ಪ? ಇಷ್ಟು ದಿನ ನೀವು ಅನುಭವಿಸಿದ್ದು ಸಾಕು. ನೀವಿಬ್ಬರೂ ಪುಣ್ಯಕೋಟಿ ತರಹ ಇರುವುದಕ್ಕೆ ನಾನು ಬಿಡಲ್ಲಪ್ಪ.”
“ಹೌದೂರಿ. ನಿಮ್ಮ ಒಳ್ಳೆಯತನದಿಂದ ನಾನು ಅನುಭವಿಸಿದ್ದು ಸಾಕು. ನನ್ನ ಮಗಳು ಅನುಭವಿಸುವುದು ಬೇಡ….”
“ಶಕ್ಕು……..”
“ನಮಗಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಮದುವೆಗೆ ಎಷ್ಟು ಹಣ ಇಟ್ಟಿದ್ದೀರ? ಏನು ಒಡವೆ ಮಾಡಿಸಿದ್ದೀರ? ಬರುವ ಹಣ ಮನೆ ಬಾಡಿಗೆ, ದಿನಸಿಗೆ ಖರ್ಚು ಮಾಡ್ತಾ ಇದ್ದೀರ. ತಿಂಗಳ ಕೊನೆಯಲ್ಲಿ ಅದೂ ಸಾಲದೆ ಅಂಗಡಿಯಲ್ಲಿ ಸಾಲ ಬರೆಸುತ್ತೀರ. ಸುಧಾ, ಜಾನಕಿ, ಶಿವಶಂಕರ, ದೇವಕಿ ಬ್ಯಾಂಕ್‌ನಲ್ಲಿ ಹಣ ಸೇರಿಸ್ತಾ ಇದ್ದಾರೆ. ನಾವು ನೋಡ್ತಾ ಕುಳಿತಿರೋಣವಾ?”
ರಾವ್ ಮಾತಾಡಲಿಲ್ಲ.
“ಅಪ್ಪ, ನೀವು ಒಳ್ಳೆಯವರಾಗಿರಿ ಬೇಡ ಅನ್ನಲ್ಲ. ತಮ್ಮ, ತಂಗಿ ಜವಾಬ್ದಾರಿ ಹೊತ್ತುಕೊಂಡಿದ್ರಿ. ಈಗ ಅಕ್ಕನ ಮಗಳ ಜವಾಬ್ದಾರಿಗೆ ತಲೆ ಕೆಡಿಸಿಕೊಳ್ಳಬೇಡಿ.”
ರಾವ್ ಮಾತಾಡದೆ ಮಗಳ ಕೈ ಹಿಡಿದುಕೊಂಡರು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ: http://surahonne.com/?p=43226
(ಮುಂದುವರಿಯುವುದು)
ಸಿ.ಎನ್. ಮುಕ್ತಾ
ಕನಸ್ಸೊಂದು ಶುರುವಾಗಿದೆ ಧಾರಾವಾಹಿಯ ಕಂತಿನಲ್ಲಿ.. ಹಿಂದಿನ ಇಂದಿನ ತಲಮಾರಿನವರ ಯೋಚನಾ ಲಹರಿಯ ಬಗ್ಗೆ ಒಂದು ತುಣುಕು..ಇಣಕಿ ನೋಡುವಂತಿದೆ..ಮೇಡಂ
ಕಾದಂಬರಿ ಪ್ರಕಟಿಸುತ್ತಿರುವ ಉದ್ದಕ್ಕೆ ಧನ್ಯವಾದಗಳು ಹೇಮಮಾಲಾ ಅವರಿಗೆ.
ಒಳ್ಳೆಯ ಕೌಟುಂಬಿಕ ಕಥಾನಕ ಕುತೂಹಲದಿಂದ ಮುಂದುವರೆಯುತ್ತಿದೆ.
ತುಂಬಾ ಒಳ್ಳೆಯವರಾಗಿ ಇರುವುದೂ ಸಹ ತಪ್ಪು. ಕಥೆ ತುಂಬಾ ಚೆನ್ನಾಗಿ ಸಾಗುತ್ತಿದೆ. ವರು ಅಂತಹ ಹೆಣ್ಣು ಮಕ್ಕಳು ಇಂದಿನ ಕಾಲಕ್ಕೆ ಬೇಕು.
ಸುಜಾತಾ ರವೀಶ್
ಬಗ್ಗಿದವನಿಗೆ ಗುದ್ದು ಹೆಚ್ಚು ಅನ್ನುವ ಒಂದು ಗಾದೆ ಇದೆ, ಅದು ವರು ಅಪ್ಪನಿಗೆ ಅನ್ವಯ ಆಗುತ್ತೆ ಇಲ್ಲಿ. ಸರಿಯಾಗಿ ರಿಯಾಕ್ಟ್ ಮಾಡಿದ್ದಾಳೆ ವರು. ಕುತೂಹಲ ಕಾರಿಯಾಗಿ ಸಾಗುತ್ತಿದೆ ಕಥೆ.
ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾರವರಿಗೂ, ಓದಿ ಅಭಿಪ್ರಾಯ ತಿಳಿಸಿರುವ ಆತ್ಮೀಯ ಗೆಳತಿಯರೆಲ್ಲರಿಗೂ, ಧನ್ಯವಾದಗಳು.
ಅಭಿಪ್ರಾಯ ತಿಳಿಸಿದ ಆತ್ಮೀಯ ಗೆಳತಿಯರಿಗೆ ಧನ್ಯವಾದಗಳು
ಓದುತ್ತಿರುವ ಹುಡುಗಿಯರ ಜವಾಬ್ದಾರಿಯುತ ನಡೆ ಹೇಗಿರಬೇಕೆಂಬುದನ್ನು ವರು ಪಾತ್ರದ ಮೂಲಕ ಸೊಗಸಾಗಿ ಕಟ್ಟಿ ಕೊಟ್ಟಿದ್ದೀರಿ ಮೇಡಂ. ಕಥೆಯ ಓಘ, ಓಟ ಕುತೂಹಲಕಾರಿಯಾಗಿದೆ.