ಅವಿಸ್ಮರಣೀಯ ಅಮೆರಿಕ-ಎಳೆ 35
ಅದ್ಭುತ ಕಮಾನು..!!
ಏದುಸಿರು ಬಿಡುತ್ತಾ ನಿಂತವಳಿಗೆ, ಎದುರು ಕಂಡ ನೋಟ ಅದೆಷ್ಟು ಅದ್ಭುತ! Delicate Arch ನನ್ನೆದುರು ಪ್ರತ್ಯಕ್ಷವಾಗಿದೆ! ಅದರಲ್ಲೂ, ಮನೆಯವರಲ್ಲಿ ಎಲ್ಲರಿಗಿಂತ ಮೊದಲು ನಾನೇ ನೋಡಿದೆ ಎಂಬ ಹೆಮ್ಮೆಯೂ ಸೇರಿಕೊಂಡಿದೆ… ಯಾಕೆಂದರೆ, ನಮ್ಮವರೆಲ್ಲಾ ಇನ್ನೂ ಹಿಂದುಗಡೆಯಿಂದ ಬರುತ್ತಿದ್ದಾರೆ ಅಷ್ಟೆ..!
ಇದು ಬಹಳ ವಿಶೇಷವಾಗಿ, ಸ್ವತಂತ್ರವಾಗಿ ನಿಂತಿರುವ ಕಮಾನು ಆಗಿದ್ದು, ಯೂಟ ರಾಜ್ಯದ ಚಿಹ್ನೆಯೊಂದಿಗೆ, ಈ ಪಾರ್ಕಿನ ಹೆಮ್ಮೆಯ ಹೆಗ್ಗುರುತಾಗಿದೆ (Land Mark). ಜುರಾಸಿಕ್ ಯುಗ, ಅಂದರೆ ಸರಿಸುಮಾರು 140ರಿಂದ 180 ಮಿಲಿಯ ವರ್ಷಗಳಷ್ಟು ಹಿಂದೆಯೇ ತಾಮ್ರವರ್ಣದ, ಅತ್ಯಂತ ನಯವಾದ ಮರಳುಮಣ್ಣಿನಿಂದ ರೂಪುಗೊಂಡಿದ್ದ ವಿಶೇಷವಾದ ಮಣ್ಣಿನ ಪದರುಗಳು, ಆ ನಂತರದ ಕಾಲಗಳಲ್ಲಿ, ಪ್ರಾಕೃತಿಕ ಸವೆತಗಳಿಗೆ ಸಿಲುಕಿ ಆಕಾರ ಪಡೆದ ಇದು, ಸೂರ್ಯ ರಶ್ಮಿಗೆ ಹೊಳೆಯುವ ಚಂದವನ್ನು ನೋಡಿಯೇ ಸವಿಯಬೇಕಷ್ಟೆ! ಇದರ ಎತ್ತರ 52 ಅಡಿಗಳಷ್ಟಿದ್ದು, ಇದು ಸುಮಾರು1933-34ರಲ್ಲಿ, ಅಲ್ಲಿ ವಾಸಿಸುತ್ತಿದ್ದ ಹಳ್ಳಿಗರ ಗಮನಕ್ಕೆ ಬಂದಿದ್ದರೂ, 1937 ರ ಸಮಯದಲ್ಲಿ ಹೊರಜಗತ್ತಿಗೆ ಇದರ ಇರುವಿಕೆ ತಿಳಿದುಬಂತು ಎನ್ನಬಹುದು. ಈ ಪಾರ್ಕ್ ನಲ್ಲಿ ಇರುವ ಸಾವಿರಾರು ಕಮಾನುಗಳಲ್ಲಿ, ಸ್ವತಂತ್ರವಾಗಿ ನಿಂತಿರುವಂತೆ ರೂಪುಗೊಂಡಿರುವ ಕಮಾನು ಇದೊಂದೇ ಎನ್ನುವ ಹೆಗ್ಗಳಿಕೆ ಇದರದು! ಈ ಕಮಾನಿನಲ್ಲಿ ಬೆಳಕು ಸಂಚರಿಸುವ ರಂಧ್ರದ ಎತ್ತರವು 46 ಅಡಿಗಳಷ್ಟಿದ್ದು, ಅಗಲವು 32 ಅಡಿಗಳಷ್ಟಿದೆ. ಇದರ ಚಿತ್ರಗಳು, ರಾಜ್ಯದ ಅಂಚೆಚೀಟಿ, ಪರವಾನಿಗಿ ಪತ್ರ ಇತ್ಯಾದಿ ಪ್ರಮುಖ ವಿಭಾಗಗಳಲ್ಲಿ ರಾರಾಜಿಸುತ್ತಿವೆ. 2002 ರಲ್ಲಿ ನಡೆದ ಒಲಿಂಪಿಕ್ ಜ್ಯೋತಿಯನ್ನು ಈ ಕಮಾನಿನ ಮೂಲಕ ಕೊಂಡೊಯ್ಯಲಾಗಿತ್ತು ಎಂಬುದನ್ನು ತಿಳಿದಾಗ ಇದರ ಮಹತ್ವ ಅರಿವಾಗುತ್ತದೆ!
ಬಹಳ ಆಳವಾದ ಮತ್ತು ಕಿ.ಮೀ. ಗಟ್ಟಲೆ ಅಗಲವಾದ ಪ್ರದೇಶದಲ್ಲಿರುವ ಚಿಕ್ಕ ಚಿಕ್ಕ ಬಂಡೆಗಳ ನಡುವೆ ಒಂಟಿಯಾಗಿ ಎತ್ತರಕ್ಕೆ ತಲೆ ಚಾಚಿ ನಿಂತ ಕಮಾನು ನಾನು ನಿಂತಿದ್ದ ಎತ್ತರದ ಸ್ಥಳದಿಂದ ಸುಮಾರು ಅರ್ಧ ಕಿ.ಮೀ. ಆಳದಲ್ಲಿದೆ! ಆ ಪ್ರದೇಶದ ಒಂದು ಪಕ್ಕದಲ್ಲಿರುವ ಆಳವಾದ ಕಂದಕದಂತಹ ರಚನೆಯು ನೋಡುಗರಲ್ಲಿ ಭಯ ಹುಟ್ಟಿಸುವಂತಿದೆ್! ಆದ್ದರಿಂದ ಅದನ್ನು ತಲಪಲು ಮತ್ತೂ ಕ್ಲಿಷ್ಟಕರ ಜಾರು ದಾರಿಯನ್ನು ಸವೆಸಬೇಕಿತ್ತು. ಆದರೆ ಅದರ ಬಳಿಗೆ ಹೆಚ್ಚಿನ ಪ್ರವಾಸಿಗರು ಹೋಗದೆ, ದೂರದಿಂದಲೇ ಅದರ ಸೌಂದರ್ಯವನ್ನು ಆಸ್ವಾದಿಸುತ್ತಿದ್ದರು. ಹಾಗೆಯೇ, ನಾನು ಕೂಡಾ ಅವರಲ್ಲಿ ಒಬ್ಬಳಾಗಿ, ಮನೆಯವರನ್ನು ಕಾಯುತ್ತಾ ಕುಳಿತೆ…ಕಾಲು ನೆಲದ ಹಿಡಿತ ತಪ್ಪುವಂತಿದ್ದ, ರಭಸವಾಗಿ ಬೀಸುವ ಗಾಳಿಯಿಂದ ನನ್ನನ್ನು ರಕ್ಷಿಸಿಕೊಳ್ಳುತ್ತಾ.
ಸ್ವಲ್ಪ ಹೊತ್ತಿನಲ್ಲಿಯೇ ಮನೆಯವರೆಲ್ಲರೂ ಬಂದು ಸೇರಿದಾಗ ನನಗೆ ಸ್ವಲ್ಪ ನಿರಾಳವಾಯ್ತು. ಹಾಗೆಯೇ ಚೀಲದಲ್ಲಿದ್ದ ನೀರು, ಹಣ್ಣುಗಳು ಖಾಲಿಯಾದವು. ಅಲ್ಲಿ ಅಕಸ್ಮಾತ್ತಾಗಿ ನಮ್ಮ ಉಡುಪಿಯ ಕುಟುಂಬದವರನ್ನು ಭೇಟಿಯಾದಾಗ ಬಹಳ ಆಶ್ಚರ್ಯವಾಯ್ತು.. ತುಂಬಾ ಸಂತೋಷವೂ ಆಯ್ತು. ನಮ್ಮ ಭೂಮಿ ಗುಂಡಗಿರುವುದು ಸುಳ್ಳಲ್ಲ ಅಲ್ವೇ?! ಪುಟ್ಟ ಮಗುವನ್ನು ನಮ್ಮಿಬ್ಬರ ಕೈಯಲ್ಲಿರಿಸಿ, ಮಕ್ಕಳು ಕಮಾನಿನ ಬಳಿಗೆ ಇಳಿದು ಹೋದರು. ಅವರಂತೆಯೇ ಕೆಲವು ಉತ್ಸಾಹಿಗಳು ಅಲ್ಲಿಗೆ ಹೋಗುವುದನ್ನು ಕಂಡು ನನಗೂ ಆಸೆಯಾದುದು ನಿಜ.. ಆದರೆ ಹೋಗುವ ದಾರಿಯನ್ನು ನೆನೆದರೇ ಭಯ..ಯಾವುದೇ ರೀತಿಯ ಕಾಲುದಾರಿಯಾಗಲೀ, ಮೆಟ್ಟಲುಗಳಾಗಲೀ ಇಲ್ಲ! ನಿಜವಾಗಿಯೂ ಒಂದೊಳ್ಳೆ ಅವಕಾಶವು ಕೈ ತಪ್ಪಿದುದಕ್ಕೆ ಈಗಲೂ ಬೇಸರವಾಗುತ್ತಿದೆ. ಕೆಳಗಡೆಗೆ ಹೋದವರು ಕಮಾನಿನ ಬಳಿ ನಿಂತು ಫೋಟೋ ತೆಗೆಸಿಕೊಂಡರು . ಆದರೆ ಎಲ್ಲರೂ ಪುಟ್ಟ ಇರುವೆಗಳಂತೆ ಕಾಣುತ್ತಿದ್ದರು ನಮಗೆ! ಅಂತೂ ಒಂದು ತಾಸು ಸುತ್ತಲೂ ಕಾಣುತ್ತಿರುವ ಕಂದು ಬಣ್ಣದ ಕಲ್ಲಿನ ಬೆಟ್ಟಗಳು, ಇವುಗಳ ಮೇಲೆ ಅಲ್ಲಲ್ಲಿ ಕಾಣುವ ಹಸಿರು ಪೊದೆಗಳು ಮತ್ತು ಎಲ್ಲದರ ನಡುವೆ, ಒಂಟಿ ಬಾಳಿನ ಜೊತೆಗೆ ತನ್ನನ್ನೂ ಸವೆಸುತ್ತಿರುವ Delicate Arch ತನ್ನ ಗೋಳನ್ನು ನಿಸರ್ಗದೊಡನೆ ಗಟ್ಟಿಯಾಗಿ ಹೇಳುತ್ತಿರುವಂತಿತ್ತು. ನಿಜವಾಗಿಯೂ, ಈ ಪಾರ್ಕಿನಲ್ಲಿ ಕಾಣುತ್ತಿರುವ ಯಾವುದೇ ಪ್ರಾಕೃತಿಕ ರಚನೆಗಳೂ ಶಾಶ್ವತವಲ್ಲ.. ಕಾಲಾಂತರದಲ್ಲಿ ನಶಿಸಿಹೋಗುವಂತಹುಗಳು.
ಅಲ್ಲಿಂದ ಮೇಲೇರಿ ಬಂದ ಮಗಳು ನಮ್ಮ ಕೈಲಿದ್ದ ಕಂದನನ್ನು ಕರೆದೊಯ್ದು ಸ್ವಲ್ಪ ದೂರದಲ್ಲಿರುವ ಬಂಡೆಯ ನೆರಳಿನಲ್ಲಿ ಕೂತಿದ್ದರೆ, ಮೇಲ್ಗಡೆಗೆ ನಮ್ಮಿಬ್ಬರ ಪ್ರಕೃತಿ ವೀಕ್ಷಣೆ ನಡೆದಿತ್ತು. ಸ್ವಲ್ಪ ಹೊತ್ತಿನ ಬಳಿಕ ಹಿಂತಿರುಗಲು ತಯಾರಿ ನಡೆಸುತ್ತಾ ಮಗಳಿದ್ದಲ್ಲಿ ನೋಡಿದರೆ ಅವಳು ಕಾಣಲಿಲ್ಲ. ಅದಾಗಲೇ ಮಧ್ಯಾಹ್ನದ ಉರಿ ಬಿಸಿಲಿನ ಝಳ ಅನುಭವಕ್ಕೆ ಬರಲಾರಂಭಿಸಿತ್ತು. ಅಳಿಯ ದೊಡ್ಡ ಮಗುವಿನ ಜೊತೆಗೆ ಈ ಮೊದಲೇ ಹಿಂತಿರುಗಿಯಾಗಿತ್ತು. ಬಂದಿದ್ದ ಪ್ರವಾಸಿಗರೆಲ್ಲರೂ ಹಿಂತಿರುಗಲಾರಂಭಿಸಿದ್ದರು. ಬಹಳ ಗಾಬರಿಗೊಂಡು ಅಕ್ಕಪಕ್ಕ ಹುಡುಕಿದರೂ ಅವರಿಬ್ಬರ ಸುಳಿವೇ ಕಾಣಲಿಲ್ಲ. ಅವರು ಹಿಂತಿರುಗಿರಬಹುದು ಎಂದುಕೊಳ್ಳಲು ಆಸ್ಪದವೇ ಇರಲಿಲ್ಲ..ಯಾಕೆಂದರೆ, ಹೋಗುವುದಾದರೆ ನಮ್ಮಲ್ಲಿ ತಿಳಿಸದೆ ಹೋಗಲಾರಳೆಂಬ ನಂಬಿಕೆ. ನಾನು, ಹಿಂತಿರುಗುವ ಕಾಲುದಾರಿಯಲ್ಲಿ ಸ್ವಲ್ಪ ದೂರ ನಡೆದು ನಿರುಕಿಸಿದರೂ ಅವರನ್ನು ಕಾಣದೆ ವಾಪಾಸು ಬಂದು ಕುಳಿತೆ..ಇಬ್ಬರಿಗೂ ಚಿಂತೆ ಕಾಡಲಾರಂಭಿಸಿತು. ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗುತ್ತಾ ಬಂದುದರಿಂದ, ನಾವಿಬ್ಬರೂ ಆತಂಕದಿಂದಲೇ ಕೆಳಗಿಳಿಯಲು ಪ್ರಾರಂಭಿಸಿದೆವು. ಸ್ವಲ್ಪ ದೂರ ಸಾಗಿದಾಗ ಎದುರಾದ ಅಮೆರಿಕನ್ ದಂಪತಿಗಳು, ನಮ್ಮನ್ನು ನಿಲ್ಲಿಸಿ, “ಮಗು ಮತ್ತು ಮಗಳು ಮುಂದೆ ಇದ್ದಾರೆ, ನಮಗಾಗಿ ಕಾಯುತ್ತಿದ್ದಾರೆ” ಎಂದಾಗ, ನಮಗೋ ಬಹಳ ಗಲಿಬಿಲಿ…ಆಶ್ಚರ್ಯ! ಇವರಿಗೆ ನಮ್ಮ ಪರಿಚಯ ಹೇಗಾಯ್ತು ಮತ್ತು ಮಗಳು ಇವರಲ್ಲಿ ಹೇಗೆ ಹೇಳಿ ಕಳುಹಿಸಿದಳು ಎಂದು! ಅವರಿಗೆ ಧನ್ಯವಾದ ಹೇಳಿ ನೆಮ್ಮದಿಯಿಂದ ನಡೆದಾಗ, ಮೇಲೇರಿದಾಗಿನ ಕಷ್ಟ ಕಾಣಲಿಲ್ಲ. ಅನತಿ ದೂರದಲ್ಲಿ ಮಗಳು ಕೈ ಬೀಸುವುದು ಕಾಣುತ್ತಿತ್ತು. ಅಮೆರಿಕನ್ ದಂಪತಿಗಳು ನಮ್ಮನ್ನು ಸರಿಯಾಗಿ ಗುರುತಿಸಿ ಸುದ್ದಿ ತಲಪಿಸಿದ ರೀತಿ ನಿಜಕ್ಕೂ ಕುತೂಹಲದಾಯಕವಾಗಿತ್ತು…ಮೇಘದೂತನ ಸಂದೇಶದಂತೆ! ಅದರ ಬಗ್ಗೆ ಮಗಳಲ್ಲಿ ಕೇಳಿದಾಗ, ನಮ್ಮ ಗುರುತಿಗಾಗಿ, ನಮ್ಮ ಉಡುಗೆ, ಅದರ ಬಣ್ಣ, ನಮ್ಮ ವಯಸ್ಸುಗಳನ್ನು ಹೇಳಿ ಸರಿಯಾಗಿ ಸಂದೇಶ ರವಾನೆಯಾಗುವಂತೆ ಮಾಡಿದ್ದು ಗೊತ್ತಾಗಿ, ಆ ದಂಪತಿಗಳಿಗೆ ಇನ್ನೊಮ್ಮೆ ಮನದಲ್ಲೇ ಕೃತಜ್ಞತೆ ಅರ್ಪಿಸಿದೆವು.
ಭೂತ..ದೇವತೆಗಳ ದರ್ಶನ..!!
ಅದಾಗಲೇ ಮಧ್ಯಾಹ್ನದ ಒಂದು ಗಂಟೆಯ ಸಮಯ…ನೆತ್ತಿ ಸುಡುತ್ತಿತ್ತು, ಹೊಟ್ಟೆ ತಾಳ ಹಾಕಲು ಸುರುಹಚ್ಚಿತ್ತು! ಉದರ ತಣಿಸಲು ನಮ್ಮದೇ ದಮಯಂತಿ ಪಾಕ ಕಾರಲ್ಲಿ ತಣ್ಣಗೆ ಕೂತಿತ್ತು. ಮುಂದಕ್ಕೆ, ಸ್ವಲ್ಪ ದೂರದಲ್ಲಿರುವ Devils Garden ಗೆ ಹೋಗಲು ಕಾರು ಏರಿದೆವು. ಇಲ್ಲಿ, ಎಲ್ಲಾ ಕಡೆಗಳಿಂತಲೂ ಹೆಚ್ಚು ಕಮಾನುಗಳನ್ನು ಒಂದೇ ಕಡೆಯಲ್ಲಿ ನೋಡಬಹುದು. ಹೋಗುತ್ತಾ ರಸ್ತೆ ಪಕ್ಕದಲ್ಲಿದ್ದ ಸಣ್ಣ ಮರದ ನೆರಳಿನಡಿಯಲ್ಲಿ ಕುಳಿತು, ಮೊಸರನ್ನ, ಉಪ್ಪಿನಕಾಯಿಯ ನಮ್ಮ ಭರ್ಜರಿ ವನಭೋಜನವನ್ನು ಬಹು ಸೊಗಸಾಗಿ ಮುಗಿಸಿ, ಇರುವ ಹಣ್ಣುಗಳನ್ನು ಖಾಲಿ ಮಾಡಿ, ಪಾರ್ಕಿನ ಕಡೆಗೆ ಸ್ವಲ್ಪ ದೂರ ಹೊರಟಾಗ, ನಮ್ಮ ರಸ್ತೆಯ ಎರಡೂ ಕಡೆಗಳಲ್ಲಿ, ಕಲ್ಲಿನ ಮಹಾ ಸಮೂಹವನ್ನೇ ತಂದು ಯರ್ರಾಬಿರ್ರಿಯಾಗಿ ರಾಶಿ ಹಾಕಿದಂತೆ ಕಂಡಿತು. ಕಮಾನುಗಳನ್ನು ನೋಡಬೇಕಾದರೆ, ವಾಹನವನ್ನು ಅಲ್ಲೇ ಬಿಟ್ಟು,ತಾಸುಗಟ್ಟಲೆ ನಡೆಯಬೇಕೆಂದು ಅಳಿಯ ಹೇಳಿದಾಗ, ನಾವೆಲ್ಲರೂ ಒಕ್ಕೊರಲಿನಿಂದ, ಅದರ ವೀಕ್ಷಣೆಯನ್ನು ರದ್ದುಗೊಳಿಸಿ ಮುಂದುವರಿಯಲು ಮಂಡಿಸಿದ ಠರಾವಿಗೆ ಒಪ್ಪಿಗೆ ಸಿಕ್ಕಿತು. ಅಲ್ಲಿಂದ ಹಿಂತಿರುಗುವ ಹಾದಿಯಲ್ಲೇ ಸಿಕ್ಕಿತು, Angels Park!
ಆಹಾ..! ಎಲ್ಲಿ ನೋಡಿದರಲ್ಲಿ ಅಗಾಧ ಎತ್ತರದ ಹಾಗೂ ಚಪ್ಪಟೆಯಾದ, ವಿಶಾಲವಾದ ಬಂಡೆಗಳು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಇರಿಸಲ್ಪಟ್ಟಂತೆ ಕಾಣುತ್ತಿತ್ತು! ನನಗೆ ಇಲ್ಲೊಂದು ಸಂಶಯ ಉದ್ಭವಿಸಿತ್ತು..ಏನು ಗೊತ್ತಾ? ಈ ಮೊದಲು ದೂರದಿಂದ ನೋಡಿದ್ದ ಡೆವಿಲ್ಸ್ ಗಾರ್ಡನ್ ಗೆ, ಅಂತಹ ಭಯ ಹುಟ್ಟಿಸುವ ಹೆಸರೇಕೆ ಇಟ್ಟಿರುವರೆಂದು? ಈಗ ಅರ್ಥವಾಯ್ತು ನೋಡಿ.. ಭೂತಾಕಾರದ, ಆಕಾರವಿಲ್ಲದ ಬಂಡೆಗಳು ಯದ್ವಾತದ್ವಾ ಹರಡಿದಂತೆ ಬಿದ್ದಿರುವುದನ್ನು ನಸುಗತ್ತಲೆಯಲ್ಲಿ ನೋಡಿದಾಗ ನಿಜವಾಗಿಯೂ ಭೂತದರ್ಶನವಾದಂತೆ ಭಾಸವಾದರೆ ಅತಿಶಯೋಕ್ತಿಯಲ್ಲ ಅಲ್ಲವೇ? ಅದಕ್ಕೆ ತದ್ವಿರುದ್ಧವಾಗಿ, ಏಂಜಲ್ಸ್ ಪಾರ್ಕ್ ನಲ್ಲಿರುವ ಬಂಡೆಗಳು ಮೈಸೂರು ಪಾಕನ್ನು ನಾಜೂಕಾಗಿ ಜೋಡಿಸಿಟ್ಟಂತೆ ಮನಮೋಹಕವಾಗಿವೆ…ಹೆಸರಿಗೆ ತಕ್ಕಂತೆ!
ಇಲ್ಲಿ, ಆಗಸದೆತ್ತರಕ್ಕೇರಿದ ಬಂಡೆಗಳ ಶಿಖರಗಳು, ಅದರ ಪಕ್ಕದಲ್ಲಿ ನಿಂತರೆ, ನಮ್ಮ ದೃಷ್ಟಿಗೆ ಗೋಚರಿಸದಂತಿವೆ. ಕೆಂಪು ಕಂದು ಬಣ್ಣದ ಈ ಬಂಡೆಗಳನ್ನು ಕೆರೆದರೆ, ಮಣ್ಣಿನಂತಹ ಪುಡಿ ನಮ್ಮ ಕೈಗೆ ತಗಲುತ್ತದೆ…ಅಷ್ಟೂ ಮೃದು! ಅವುಗಳ ಪಕ್ಕದಲ್ಲಿ ನಡೆದಾಡುವಾಗ, ಯಾವುದೋ ಮಣ್ಣಿನ ಕೋಟೆಯ ಗೋಡೆ ಪಕ್ಕ ನಡೆದ ಅನುಭವವಾಗುತ್ತದೆ. ಕೆಲವು ಕಡೆ, ಒಂದರ ಮೇಲೆ ಒಂದು ಕೇಕ್ ಪದರುಗಳನ್ನು ಸೊಗಸಾಗಿ ಪೇರಿಸಿಟ್ಟು, ನಮಗಾಗಿ ಕಾದಿರುವಂತಿದೆ..! ಇಲ್ಲಿರುವ 290 ಅಡಿ ಅಗಲದ ತೆಳುವಾದ ಬಂಡೆಯು, ಇಡೀ ಪಾರ್ಕಿನಲ್ಲೇ ಅತೀ ಅಗಲವಾದುದಾಗಿದೆ. ಇದನ್ನು ನೋಡುತ್ತಾ ನಿಂತವಳಿಗೆ ಮುಂದೆ ಹೆಜ್ಜೆ ಇಡಲೇ ಮನಸ್ಸಾಗಲಿಲ್ಲ.. ಅಷ್ಟು ಸುಂದರವಾಗಿತ್ತದು! ರಭಸವಾಗಿ ಬೀಸುವ ಗಾಳಿ ಹಾಗೂ ಮಳೆಗಳಿಗೆ ಮೈಯೊಡ್ಡಿ ನಿಂತ ಇವುಗಳು ಸವಕಳಿಯಿಂದಾಗಿ ಕ್ಷಣ ಕ್ಷಣವೂ ತಮ್ಮ ರಚನೆಯನ್ನು ಕಳೆದುಕೊಳ್ಳುತ್ತಿವೆ. ಈ ರಾಷ್ಟ್ರೀಯ ಕಮಾನಿನ ಪಾರ್ಕ್, ಸಮಯ ಸರಿದಂತೆ, ಪೂರ್ತಿ ನಾಶವಾಗುವುದರಲ್ಲಿ ಸಂಶಯವಿಲ್ಲ. ಇಂತಹ ಸುಂದರವಾದ ರಚನೆಗಳು ಜಗತ್ತಿನಿಂದಲೇ ಮಾಯವಾಗುವುದನ್ನು ಊಹಿಸಿಯೇ ಬಹಳ ಖೇದವೆನಿಸಿದ್ದು ಸುಳ್ಳಲ್ಲ. ಒಂದು ಕಡೆಗಂತೂ ಗುಹೆಯಾಕಾರದ ಪುಟ್ಟ ರಚನೆಯ ಮೂಲಕ ಹೋಗುವ ಪ್ರಯತ್ನದಲ್ಲಿ, ಅಲ್ಲಿ ಬಂಡೆ ಸವೆದು ಸಂಗ್ರಹವಾದ ಧೂಳಿನ ದೊಡ್ಡದಾದ ರಾಶಿಯಲ್ಲಿ ಕಾಲು ಸಿಕ್ಕಿಹಾಕಿಕೊಂಡು ಗಾಬರಿಯಾದಾಗ, ಮತ್ತೆ ಆ ಸಾಹಸಕ್ಕೆ ಹೋಗಲಿಲ್ಲವೆನ್ನಿ! ಇಲ್ಲಿ ಎಲ್ಲಿಯೂ ಗಟ್ಟಿಯಾಗಿ ಮಾತಾಡುವಂತಿಲ್ಲ, ಮಕ್ಕಳು ಕಿರುಚುವಂತಿಲ್ಲ.. ರಚನೆಗಳು ಬಹಳ ನಾಜೂಕಾಗಿರುವುದರಿಂದ ಅವುಗಳಿಗೆ ಧಕ್ಕೆಯಾಗಬಾರದೆಂಬ ಮುಂಜಾಗರೂಕತೆ!
ಇಲ್ಲಿ ವಿಶೇಷವಾದ ಕೆಲವು ‘O’ ಮತ್ತು ‘P’ ಆಕಾರಗಳ ಬೃಹದಾಕಾರದ ಕಮಾನುಗಳನ್ನು ನೋಡಲು, ಅಲ್ಲಿ ಕಾಣಿಸಿದ ಮಾರ್ಗಸೂಚಿಯಂತೆ, ನಾವು ಇರುವಲ್ಲಿಂದ ಎರಡು ಮೈಲಿ ದೂರ ನಡೆಯಬೇಕಿತ್ತು. ಬಂದಮೇಲೆ ಎಲ್ಲವನ್ನೂ ನೋಡುವ ತವಕ…ಉತ್ಸಾಹ! ನಡೆದೇ ತೀರುವುದೆಂದು ನಿರ್ಧರಿಸಿ ನಾನು ನಮ್ಮವರೊಂದಿಗೆ ನಡೆಯಲಾರಂಭಿಸಿದೆ. ಎಲ್ಲಿಯೂ ಮಾನವ ನಿರ್ಮಿತ ಕಸ, ಪ್ಲಾಸ್ಟಿಕ್ ಕೊಳಕುಗಳಿಲ್ಲದೆ, ಪ್ರಕೃತಿಯು ಸ್ವಚ್ಛವಾಗಿ ತಾನೇ ತಾನಾಗಿ ವಿಜೃಂಭಿಸುತ್ತಿತ್ತು. ಅದಾಗಲೇ ಇಳಿಹಗಲು ಮೂರುಗಂಟೆ.. ಪುಟ್ಟ ಕಾಲುದಾರಿಯಲ್ಲಿ ಇಳಿದು, ಏರಿ ನಡೆದಾಗ ನಮ್ಮವರು ಆಯಾಸವೆಂದು ನೀರ ಬಾಟಲಿ ಹಿಡಿದುಕೊಂಡು ಅರ್ಧ ದಾರಿಯಲ್ಲೇ ಕುಳಿತುಬಿಟ್ಟರು. ಆದರೂ ನನ್ನ ಉತ್ಸಾಹ ತಗ್ಗಿರಲಿಲ್ಲ…ನೋಡಲೇ ಬೇಕೆಂಬ ಆಸೆಯನ್ನು ಬಿಡಲಾರದೆ ಮುಂದಕ್ಕೆ ಏರುಹಾದಿಯಲ್ಲಿ ನಡೆದು ಮೇಲೆ ತಲಪಿದಾಗ ಏನಿದೆ…ದೃಷ್ಟಿ ಹಾಯಿಸಿದಷ್ಟು ದೂರವೂ ಬಟ್ಟಬಯಲು.. ಬಹು ದೂರದಲ್ಲಿ, ಚುಕ್ಕಿಯಾಕಾರದಲ್ಲಿ ಕಮಾನೊಂದು ಕಾಣುತ್ತಿತ್ತು. ಅಲ್ಲೇ ಪಕ್ಕದಲ್ಲಿದ್ದ ಸೂಚ್ಯ ಫಲಕದಲ್ಲಿರುವ ಮಾಹಿತಿಯಂತೆ, ಅದನ್ನು ತಲಪಲು ಇನ್ನೂ ಎರಡು ಮೈಲಿಗಳಷ್ಟು ನಡೆಯಬೇಕಿತ್ತು. ಹಿಂತಿರುಗಿ ಬರುವ ಒಂದೆರಡು ಪ್ರವಾಸಿಗರು ಕಾಣಸಿಕ್ಕರೂ, ಆ ಕಡೆಗೆ ಹೋಗುವವರಾರೂ ಕಾಣಿಸಲಿಲ್ಲ. ನಾನೊಬ್ಬಳೇ ಹೋಗಲು ಧೈರ್ಯ ಸಾಲದೆ, ಮುಂದಕ್ಕೆ ಚಲಿಸದೆ ಅಲ್ಲೇ ನಿಂತುಬಿಟ್ಟೆ. ಅಲ್ಲದೆ, ನಮ್ಮ ಮುಂದಿನ ಪಯಣಕ್ಕೂ ಸಮಯವನ್ನು ಮೀಸಲಿಡಬೇಕಿತ್ತಲ್ಲಾ? ಬಹಳ ನಿರಾಶೆಯಿಂದ ಅಲ್ಲಿಂದಲೇ ನಮಸ್ಕರಿಸಿ ಪೆಚ್ಚುಮುಖ ಹೊತ್ತು ಹಿಂತಿರುಗಿದಾಗ, ನಮ್ಮವರ ಪ್ರಶ್ನೆ, “ ಏನು..ಇಷ್ಟು ಬೇಗ ಹೋಗಿ ಬಂದ್ಯಾ?!” ನಾನು ಏನು ಹೇಳಲಿ…ನನ್ನ ಅವಸ್ಥೆಯನ್ನು.. ನೀವೇ ಹೇಳಿ!
(ಮುಂದುವರಿಯುವುದು……)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=35997
–ಶಂಕರಿ ಶರ್ಮ, ಪುತ್ತೂರು.
ಎಂದಿನಂತೆ ಅಮೆರಿಕ ಪ್ರವಾಸ ಕಥನ… ಅಪ್ಯಾಯಮಾನವಾಗಿದೆ…ನಾವೂ ಅಮೆರಿಕ ಪ್ರವಾಸ.. ಮಾಡಿದಂತಹ ಅನುಭವ… ಆಗುತ್ತಿದೆ…ಧನ್ಯವಾದಗಳು ಮೇಡಂ.
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.
ಬಹಳ ಚೆನ್ನಾಗಿದೆ
ಧನ್ಯವಾದಗಳು.
ಅಮೇರಿಕ ಪ್ರವಾಸದ ಅನುಭವ ಕಥನ ಸೊಗಸಾಗಿ ಮೂಡಿಬರುತ್ತಿದೆ ವಂದನೆಗಳು