ಅವಿಸ್ಮರಣೀಯ ಅಮೆರಿಕ-ಎಳೆ 34
ಅದ್ಭುತ ಕಮಾನಿನೆಡೆಗೆ…
ಪುಟ್ಟ ಪಟ್ಟಣ ಮೋಬ್ ನ ಬಳಿಯ ಬೆಟ್ಟದ ತಳಭಾಗದಲ್ಲಿರುವ ಬಿಗ್ ಹಾರ್ನ್ ವಸತಿಗೃಹದಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡ ಕೋಣೆ ನಮ್ಮದಾಗಿತ್ತು. ಜೊತೆಗೇ ಊಟ, ತಿಂಡಿಗೋಸ್ಕರ ಅದೇ ಕಟ್ಟಡದಲ್ಲಿರುವ ಅವರದ್ದೇ ಹೋಟೇಲನ್ನೂ ಬಳಸಬಹುದು. ಬೆಳಗಾಗೆದ್ದು ಹೊರಡುವಾಗ ಗಂಟೆ ಹತ್ತು. ಎಂದಿನಂತೆ ನನ್ನ ಉಪಾಹಾರವನ್ನು ಕೋಣೆಯಲ್ಲೇ ಮುಗಿಸಿದೆ, ಬ್ರೆಡ್ ಜ್ಯಾಮ್ ತಿಂದು. ಅಲ್ಲಾ ..ದೋಸೆ, ಇಡ್ಲಿ ಬೇಕೆಂದರೆ ಅಲ್ಲಿ ಎಲ್ಲಿ ಸಿಗಲು ಸಾಧ್ಯ ಹೇಳಿ?!
ಯೂಟಾ ರಾಜ್ಯದ ಪೂರ್ವ ದಿಕ್ಕಿನಲ್ಲಿರುವ ಈ ಪಟ್ಟಣದಿಂದ 6 ಕಿ.ಮೀ ದೂರದಲ್ಲಿ, ಜಗದ್ವಿಖ್ಯಾತ ಕೊಲೊರಾಡೊ ನದಿಯ ಪ್ರಸ್ಥಭೂಮಿಯಲ್ಲಿದೆ.. ಕಮಾನುಗಳ ರಾಷ್ಟೀಯ ಉದ್ಯಾನವನ (Arches National Park). ಸುಮಾರು ಮುನ್ನೂರು ಮಿಲಿಯ ವರ್ಷಗಳ ಹಿಂದೆ ಸಮುದ್ರವು ಈ ಪ್ರದೇಶಕ್ಕೆ ನುಗ್ಗಿದಾಗ ಸಂಗ್ರಹವಾದ ಉಪ್ಪು ನೀರು ಕಾಲಕ್ರಮೇಣ ಆವಿಯಾಗಿ ಸಾವಿರಾರು ಅಡಿಗಳಷ್ಟು ದಪ್ಪದ ಪದರಾಗಿ ಮಾರ್ಪಟ್ಟು, ಅದರ ಮೇಲೆ, ಪ್ರಕೃತಿಯ ಏರುಪೇರುಗಳ ನಡುವೆಯೇ ಸಂಗ್ರಹವಾದ ಧೂಳು, ಮಣ್ಣು, ಮರಳುಗಳ ಜೊತೆಗೆ, ರಭಸದಿಂದ ಬೀಸುವ ಗಾಳಿಯಿಂದಾಗಿ ಉಂಟಾದವುಗಳು… ಈ ಪ್ರಾಕೃತಿಕ ಮರಳು ಕಲ್ಲುಗಳ ಪದರುಗಳ ರಚನೆಗಳು. ಇವುಗಳಲ್ಲಿ ಸುಮಾರು 2000ಕ್ಕೂ ಹೆಚ್ಚು ಬರೇ ಪ್ರಾಕೃತಿಕ ಕಮಾನುಗಳೇ ಇವೆ. ಸರಿಸುಮಾರು 76, 680 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿರುವ ಈ ಪ್ರಾಕೃತಿಕ ವಿಸ್ಮಯದಲ್ಲಿ ಸುಮಾರು 5000ಕ್ಕೂ ಹೆಚ್ಚು ಸೇತುವೆ, ಕಮಾನು, ಇತ್ಯಾದಿ ವಿವಿಧ, ವಿಚಿತ್ರ ರಚನೆಗಳನ್ನು ಕಾಣಬಹುದು. ಇದು ಜಗತ್ತಿನಲ್ಲಿಯೇ, ಒಂದೇ ಕಡೆಗೆ ಅತೀ ಹೆಚ್ಚು ಕಮಾನುಗಳಿರುವ ಸ್ಥಳವಾಗಿದೆ. ಇವುಗಳಿರುವ ಅತೀ ಎತ್ತರದ ಸ್ಥಳವು ಸಮತಲದಿಂದ ಸುಮಾರು 5,700 ಅಡಿಗಳಷ್ಟು ಎತ್ತರವಿದ್ದರೆ, ಕಡಿಮೆ ಎಂದರೆ, ಸಮತಲದಿಂದ 4,100ಅಡಿಗಳಷ್ಟು ಎತ್ತರದ ಪ್ರದೇಶದಲ್ಲಿದೆ. ವರ್ಷದಲ್ಲಿ ಇಲ್ಲಿ ಬೀಳುವ ಮಳೆ 10 ಇಂಚಿನಷ್ಟು ಮಾತ್ರ. ಚಳಿಗಾಲದಲ್ಲಿ ಸೊನ್ನೆ ಡಿಗ್ರಿಗಿಂತಲೂ ಕಡಿಮೆ ಉಷ್ಣತೆ ಇದ್ದರೆ, ಬೇಸಿಗೆಯಲ್ಲಿ 29°c ಉಷ್ಣತೆಯಿರುತ್ತದೆ. 1929ರಲ್ಲಿ ಮೊತ್ತಮೊದಲಾಗಿ ಇದನ್ನು ವಿಶೇಷ ಸ್ಮಾರಕವೆಂದು ಘೋಷಿಸಲಾಯಿತು. ಬಳಿಕ 1971ರಲ್ಲಿ, ರಾಷ್ಟ್ರೀಯ ಉದ್ಯಾನವನವೆಂದು ಪುನರ್ನಾಮಕರಣ ಮಾಡಲಾಯಿತು. ಇಲ್ಲಿಗೆ ವರ್ಷದಲ್ಲಿ ಸುಮಾರು 1.6ಮಿಲಿಯದಷ್ಟು ಪ್ರವಾಸಿಗರು ಭೇಟಿ ಕೊಡುವರು.
ಬೆಳಗ್ಗೆ 10 ಗಂಟೆಗೆ ಹೊರಟಾಗ, ಅದಾಗಲೇ ಅಲ್ಲಿ ನೆರೆದ ಪ್ರವಾಸಿಗರ ದಂಡು ಆ ಕಡೆಗೆಯೇ ಸಾಗಿತ್ತು. ಪಾರ್ಕ್ ನೊಳಗೆ ಹೋಗಲು ಪ್ರವೇಶ ಶುಲ್ಕವು ಎರಡು ರೀತಿಗಳಲ್ಲಿವೆ. ಒಂದು ಬಾರಿಗೆ ಹೋಗುವಂತಹ ಸಾಮಾನ್ಯ ಪ್ರವೇಶ ಶುಲ್ಕ ಮತ್ತು ಇನ್ನೊಂದು ವಾರ್ಷಿಕ ಶುಲ್ಕ. ವಾರ್ಷಿಕ ಶುಲ್ಕವು ಸ್ವಲ್ಪ ದುಬಾರಿಯಾದರೂ ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಬಂದು ಸುತ್ತಾಡಿ ಹೋಗುವ ಅನುಕೂಲತೆಯಿದೆ. ಹಾಗೆಯೇ ನಾವು ಟಿಕೆಟ್ ಖರೀದಿಸಲು ಹೋದರೆ ಕೌಂಟರಿನ ಎದುರಲ್ಲಿ ಮೈಲುದ್ದದ ಸಾಲು. ಪ್ರವಾಸಿಗರ ದಟ್ಟಣೆಯಿಂದಾಗಿ ಅರ್ಧಗಂಟೆ ಕಾಯಬೇಕಾಯಿತು. ವಾರ್ಷಿಕ ಶುಲ್ಕದೊಂದಿಗೆ ಟಿಕೆಟ್ ಖರೀದಿಸಿ, ಮುಂದುವರಿಯಲು ನೋಡಿದರೆ, ಅದಾಗಲೇ ಆ ಅಗಲಕಿರಿದಾದ ಏರು ರಸ್ತೆಯು ಪ್ರವಾಸಿಗರ ವಾಹನಗಳಿಂದ ತುಂಬಿ ಹೋಗಿ, ಎಲ್ಲಾ ವಾಹನಗಳೂ ಆಮೆ ನಡಿಗೆಯಲ್ಲಿ ಸಾಗಿತ್ತು…ಜೊತೆಗೆ ಒಂದು ಹಂತದಲ್ಲಿ ನಿಂತೇ ಹೋಯ್ತು! ಅಂತೂ, ಹಾಗೆಯೇ ಸ್ವಲ್ಪ ಮುಂದಕ್ಕೆ ನಾವೂ ಹೋಗುತ್ತಿದ್ದಂತೆಯೇ ಅರಿವಾಯ್ತು..ಸಾಲು ಯಾಕೆ ನಿಂತುಬಿಟ್ಟಿದೆ ಎಂದು!
ಆಹಾ…ಏನು ಹೇಳಲಿ..?? ನಾನೆಲ್ಲಿರುವೆ ಎಂಬುದನ್ನೂ ಮರೆತು, ನಾನೂ ಅಳಿಯನಲ್ಲಿ ಕಾರು ನಿಲ್ಲಿಸಲು ಹೇಳಿದೆ..ಫೋಟೋ ಕ್ಲಿಕ್ಕಿಸಲು! ಅದಾಗಲೇ ವಿಚಿತ್ರವಾದ, ವಿಶೇಷವಾದ ಲೋಕವೊಂದರ ಅನಾವರಣವಾಗಿಬಿಟ್ಟಿತ್ತು!! ರಸ್ತೆಯ ಎರಡೂ ಬದಿಗಳಲ್ಲಿ ಚತುರ ಶಿಲ್ಪಿಯ ಕೈಚಳಕದಿಂದ ರೂಪುಗೊಂಡ ಅತ್ಯಂತ ಸುಂದರ ಅರಮನೆಗಳ ಪಳೆಯುಳಿಕೆಗಳು ನಮ್ಮ ಕಣ್ಣ ಮುಂದೆ ಮೆರವಣಿಗೆ ಹೊರಟಿವೆಯೇನೋ ಎನ್ನುವಂತಿವೆ. ಅಗಾಧ ಎತ್ತರೆತ್ತರಕೆ ಎದ್ದು ನಿಂತ, ಒಂದೇ ಕೆಂಪು ಕಲ್ಲಿನಿಂದ ರಚಿತವಾದ ಛಾವಣಿಗಳು, ಸ್ತಂಭಗಳು, ಇನ್ನೂ ಏನೇನೋ… ಅವುಗಳಲ್ಲಿರುವ ಸೂಕ್ಷ್ಮ ಕೆತ್ತನೆಗಳು ನಮ್ಮ ಬೇಲೂರು, ಹಳೆಬೀಡಿನ ಕಂಬಗಳನ್ನು ನೆನಪಿಸುವಂತಿವೆ. ನಾವೇನೋ, ನೂರಾರು ವರ್ಷಗಳ ಹಿಂದಿನ, ರಾಜ ಮಹಾರಾಜರ ಕಾಲದ ನಶಿಸಿದ ದೊಡ್ಡದಾದ ನಗರದ ರಾಜ ಬೀದಿಗಳಲ್ಲಿ ನಡೆದಾಡುತ್ತಿದ್ದೆವೇನೋ ಅನ್ನಿಸಿಬಿಟ್ಟಿತು. ಇವುಗಳೆಲ್ಲಾ ಪ್ರಾಕೃತಿಕವಾಗಿ ರೂಪುಗೊಂಡವುಗಳು ಎಂದರೆ ತಿಲಮಾತ್ರವೂ ನಂಬಲಸಾಧ್ಯ! ರಸ್ತೆ ಮೇಲೇರುತ್ತಾ ಬಹಳ ವಿಶಾಲವಾದ ಬಯಲು ಪ್ರದೇಶಕ್ಕೆ ತಲಪಿದಾಗ… ಇದೇನು ನೋಡುತ್ತಿರುವೆ..!! ಸಮತಟ್ಟಾದ ಅಗಾಧ ಅನಂತದೆಡೆಗೆ ಚಾಚಿದ ಬಟ್ಟಬಯಲಿನಲ್ಲಿ ಕಣ್ಣ ನೋಟ ನಿಲುಕುವ ವರೆಗೂ ಸಾಲು ಸಾಲು ಬೆಟ್ಟದಾಕಾರದಲ್ಲಿ ವಿಚಿತ್ರ ರಚನೆಗಳು!! ಇವುಗಳೆಲ್ಲಾ ಮರಳು ಕಲ್ಲಿನ ಬೆಟ್ಟಗಳು! ಹೋಗುತ್ತಾ …ಹೋಗುತ್ತಾ ಕ್ಷಣ ಮಾತ್ರವೂ ಕ್ಯಾಮರಕ್ಕೆ ಬಿಡುವು ಕೊಡದೆ ಕ್ಲಿಕ್ಕಿಸುತ್ತಿದ್ದೆ…ನೀರಡಿಕೆಯಾದಾಗ ಒಂದೇ ಗುಟುಕಿಗೆ ಎಲ್ಲಾ ನೀರು ಕುಡಿಯುವ ಆತುರವಿದೆಯಲ್ಲಾ..ಆ ತರಹ! ಅಷ್ಟರೊಳಗೆ ರಸ್ತೆಯಿಂದ ಅನತಿದೂರದಲ್ಲಿ ವಿಚಿತ್ರ ವೊಂದು ಕಾಣುತ್ತಿದೆಯಲ್ಲಾ!… ವಿಶೇಷವಾದ ಬೃಹದಾಕಾರ ಬಂಡೆಯೊಂದರ ಮೇಲೆ, ಅದರಿಂದಲೂ ದೊಡ್ಡದಾದ ಬಂಡೆಯು ತನ್ನ ಸಮತೋಲನ ಕಾಯ್ದುಕೊಂಡು ನಿಂತಿದೆ!(Balancing Rock) ನೋಡಿದರೆ, ಈಗಬೀಳುತ್ತೋ..ಮತ್ತೆ ಬೀಳುತ್ತೋ ಎನ್ನುವಂತಿದೆ. ಬೆರಳತುದಿಯಿಂದ ಮುಟ್ಟಿದರೆ ಬಿದ್ದೇ ಬಿಡಬಹುದೇನೋ ! ಇದರ ಕೆಳಗಡೆಯ ಕಲ್ಲು ನೆಲದ ಮೇಲಿಂದ 55 ಅಡಿಗಳಷ್ಟು ಎತ್ತರವಾಗಿದ್ದರೆ, ಅದರ ಮೇಲೆ ನಿಂತಿರುವ ಕಲ್ಲು 128 ಅಡಿ ಎತ್ತರವಾಗಿದ್ದು, ಸುಮಾರು ಮೂರು ಬಸ್ಸಿನಷ್ಟು ದೊಡ್ಡದಾಗಿದೆ! ಈ ವೈಭವವನ್ನು ಕಣ್ಮನಗಳಲ್ಲಿಯೇ ಸವಿಯುವ ಅನೂಭೂತಿಯನ್ನು ಏನೆಂದು ವಿವರಿಸಲಿ.. ಬರೆಯಲು ಪದಗಳೇ ಸಿಗಲಾರದಲ್ಲಾ!?
ಇಲ್ಲಿ ವಾಹನಗಳನ್ನು ಎಲ್ಲಾ ಕಡೆಗಳಿಗೂ ಒಯ್ಯುವಂತಿಲ್ಲ. ಆಯಾಯ ಸ್ಥಳಗಳಲ್ಲಿ ಅದಕ್ಕಾಗಿ ನಿಗದಿಪಡಿಸಿದ ಜಾಗಗಳಲ್ಲಿ ವಾಹನಗಳನ್ನು ಇರಿಸಿ, ಉಳಿದಂತೆ ನೋಡಲು ಮೈಲುಗಟ್ಟಲೆ ನಡೆಯಬೇಕಾಗುತ್ತದೆ. ಅಲ್ಲದೆ, ವಾಹನ ಚಲಾಯಿಸುವಾಗ ಹಾರ್ನ್ ಮಾಡುವಂತಿಲ್ಲ. ಮುಂದಕ್ಕೆ, ಇಲ್ಲಿಯ ಅತ್ಯಂತ ಪ್ರಖ್ಯಾತ, ಹಾಗೆಯೇ ಯೂಟ ರಾಜ್ಯದ ಚಿಹ್ನೆಯೂ ಆಗಿರುವ, ವಾಹನ ನಿಲುಗಡೆಯಿಂದ ಸುಮಾರು 1.3ಮೈಲು ದೂರದಲ್ಲಿರುವ Delicate Arch ನ್ನು ನೋಡಲು ಹೊರಟೆವು. ಬಹಳ ಕಾತರದ ಕ್ಷಣಗಳಾಗಿದ್ದವು ಅವು.. ಮಧ್ಯಾಹ್ನ 11.30ರ ಸಮಯ, ಬಿಸಿಲು ಜೋರಾಗಿಯೇ ಇತ್ತು, ಜೊತೆಗೇ ತಂಪಾದ ಗಾಳಿಯೂ ಅದರೊಡನೆ ಸೇರಿತ್ತು. ಬಿಸ್ಕೆಟ್ ನಂತಹ ಅಗತ್ಯದ ಆಹಾರಗಳ ಜೊತೆಗೆ, ನೀರು, ಜೂಸ್ ಬಾಟಲಿಗಳೂ ನನ್ನ ಹೆಗಲ ಮೇಲಿನ ಚೀಲದಲ್ಲಿ ಸೇರಿದವು. ದೂರದ ಬಂಡೆ ಮೇಲೆ ಏರುತ್ತಾ ಸಾಗುವ ಜನರು ಪುಟ್ಟ ಇರುವೆಗಳಂತೆ ಗೋಚರಿಸುತ್ತಿದ್ದರು. “ಏನಪ್ಪಾ…ನಾವು ಅಲ್ಲಿ ವರೆಗೂ ಹೋಗಬೇಕಾ?!” ಎಂದು ಮನದಲ್ಲೇ ಅಂದುಕೊಡೆ. “ಇಷ್ಟು ದೂರ ಬಂದ ಮೇಲೆ ಅತೀ ಮುಖ್ಯವಾಗಿ ನೋಡಲಿರುವುದನ್ನೇ ನೋಡದೆ ಹಿಂತಿರುಗುವುದು ಹೇಗೆ?” ಎಂದು ಮೊಂಡು ಧೈರ್ಯದಲ್ಲಿ ಹೊರಟೆವು. ಮೊದಲಿಗೆ, ಸಮತಟ್ಟಾದ ಪ್ರದೇಶದಲ್ಲಿ ಕುರುಚಲು ಗಿಡಗಳ ನಡುವೆ ನಡೆಯುತ್ತಾ ಸಾಗಿದಾಗ, ನಾನು ಮೊದಲು ನೋಡಿದ್ದ ಬೃಹದಾಕಾರದ ನಯವಾದ ಹೆಬ್ಬಂಡೆಯು ಎದುರಿಗೇ ಧುತ್ತೆಂದು ನಿಂತಿದೆ…”ಬಾ ನೋಡೋಣ.. ನನ್ನನ್ನು ಏರು!”..ಎನ್ನುತ್ತಾ!
ಏರುವಾಗ ಆಧಾರಕ್ಕಾಗಿ ಹಿಡಿದುಕೊಳ್ಳಲು ಏನೂ ಇಲ್ಲದ ಕಡಿದಾದ ಬಂಡೆಯನ್ನು ಕಂಡು ಬಹಳ ಭಯವಾಯಿತು. ಆದರೆ, ಮಗಳು ಮುಂಜಾಗರೂಕತೆಯಿಂದ, ಒತ್ತಾಯಪೂರ್ವಕ ಹಾಕಲು ಕೊಟ್ಟಿದ್ದ, ಇಂತಹ ಜಾಗಗಳನ್ನು ಏರಲೆಂದೇ ಇರುವ ಶೂ, ಈಗ ಬಹಳ ಉಪಯೋಗಕ್ಕೆ ಬಂತು ನೋಡಿ. ನನ್ನ ಎಂದಿನ ಚಪ್ಪಲಿಯಲ್ಲಿಯೇ ನಡೆದು ಬರುತ್ತಿದ್ದರೆ, ಖಂಡಿತಾ ಕೆಳಗಡೆ ಪ್ರಪಾತದಲ್ಲಿ ಇರುತ್ತಿದ್ದೆನೋ ಏನೋ! ಪುಣ್ಯಕ್ಕೆ, ಕಾಲ ಕೆಳಗಿನ ಹಿಡಿತ ಗಟ್ಟಿಯಾಗಿತ್ತು…ಆದರೆ ಎದೆ ಮಾತ್ರ ಅಷ್ಟು ಗಟ್ಟಿಯಾಗಿರಲಿಲ್ಲವಲ್ಲಾ! ಪುಟ್ಟ ಮಕ್ಕಳು ಉತ್ಸಾಹದಿಂದ ಓಡುತ್ತಿರುವುದು, ದೊಡ್ಡವರು ಏದುಸಿರು ಬಿಡುತ್ತಾ ಏರುವುದನ್ನು ನೋಡುತ್ತಾ, ರಭಸದಿಂದ ಬೀಸುವ ಗಾಳಿಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುತ್ತಾ ಬಂಡೆಯ ಬಲಭಾಗವನ್ನು ಸುತ್ತುವರಿದು ಮೇಲೆ ವಿಸ್ತಾರವಾದ ಬಯಲು ಪ್ರದೇಶಕ್ಕೆ ತಲಪಿದಾಗ, ಇನ್ನೇನು ನಾವು ನೋಡಲಿರುವ ಕಮಾನು ಬಂದೇ ಬಿಟ್ಟಿತು ಎನಿಸಿತು… ಆದರೆ ಅದು ಬರೆ ಅನಿಸಿಕೆ ಮಾತ್ರವಾಗಿದ್ದು… ಹೋಗಲಿರುವ ಅರ್ಧದಾರಿಯೂ ಮುಗಿದಿರಲಿಲ್ಲ. ಪುಟ್ಟ ಮಗುವಿನೊಂದಿಗೆ ಉಳಿದವರೆಲ್ಲರೂ ನಿಧಾನವಾಗಿ ಮೇಲೇರುತ್ತಿದ್ದರು. ಹಿಂತಿರುಗಿ ನೋಡಿದಾಗ ನಮ್ಮವರು ಒಬ್ಬರೂ ಕಾಣಲೇ ಇಲ್ಲ.. ನಾನು ಅವರಿಂದ ಬಹಳ ಮುಂದಿದ್ದೆ. ನನಗೋ ಕೈಯ ಚೀಲ ಬಹಳ ಭಾರವಾಗಲು ಪ್ರಾರಂಭವಾಯ್ತು. ಆದರೆ ಅದರೊಳಗಿರುವುದನ್ನು ಖಾಲಿ ಮಾಡುವವರು ಜೊತೆಗಿಲ್ಲದೆ ಅನಿವಾರ್ಯವಾಗಿ ಅದನ್ನು ಹೊರುವ ಕೆಲಸ ಮಾಡಲೇಬೇಕಾಗಿತ್ತು. ನಡೆಯುವ ದಾರಿ ತುಂಬ ದೂರವೆಂದು ಭಾಸವಾಗಲಾರಂಭಿಸಿತು. ಇನ್ನು ನಡೆಯಲು ಸಾಧ್ಯವಿಲ್ಲವೆಂದು ವಿಶ್ರಾಂತಿಗಾಗಿ ಕೂತರೆ ಮತ್ತೆ ಏಳಲು ಮನಸ್ಸು ಬಾರದೆಂದು ಗೊತ್ತಿತ್ತು! ಏರುವುದು, ಇಳಿಯುವುದರ ಜೊತೆಗೆ, ಎದುರುಗಡೆಗೆ ಸಿಕ್ಕಿದವರಲ್ಲಿ, “ಅಲ್ಲಿಗೆ ಇನ್ನೆಷ್ಟು ದೂರವಿದೆ?” ಎಂದು ಕೇಳಿದರೆ, “ಇನ್ನೇನು.. ಇಲ್ಲೇ ಹತ್ತಿರದಲ್ಲೇ ಇದೆ” ಎನ್ನುವ ಉತ್ತರ ಸಿಗುತ್ತಿತ್ತು!
ಎಷ್ಟು ನಡೆದರೂ, ಹತ್ತಿರವು ದೂರವಾಗುತ್ತಿತ್ತು. ಯಾವ ಕಮಾನೂ ಕಾಣಲಿಲ್ಲ.. ನಾನೊಬ್ಬಳೇ ನಡೆದೆ..ನಡೆದೆ.. ಕೆಲವು ಕಡೆಗಳಲ್ಲಿ ಪ್ರವಾಸಿಗರೂ ಕಾಣದೆ, ಸವೆದ ದಾರಿಯೂ ಅಸ್ಪಷ್ಟವಾಗಿತ್ತು. ಅಲ್ಲಲ್ಲಿ, ಪುಟ್ಟ ಕಲ್ಲುಗಳನ್ನು ಲಗೋರಿಯಾಡಲು ಇರಿಸಿದಂತೆ ಪೇರಿಸಿ ಇಟ್ಟಿದ್ದರು. ಅವುಗಳ ಗುರುತಿನಲ್ಲೇ ಮುನ್ನಡೆದೆ. ನೂರಾರು ಜನರು ನಡೆದಾಡುವ ಈ ದಾರಿಯ ಇಕ್ಕೆಲಗಳೂ ಅತ್ಯಂತ ಸ್ವಚ್ಛವಾಗಿರುವುದು ಗಮನ ಸೆಳೆಯುವಂತಿದೆ. ಕಡಿದಾದ ಬೆಟ್ಟದಲ್ಲೇ, ಕಿರಿದಾದ ಕಾಲುದಾರಿಯನ್ನು ಕೊರೆದು ನಡೆದಾಡಲು ಅನುಕೂಲವಾಗುವಂತೆ ಮಾಡಿದ್ದರು. ಇಲ್ಲಿ ಒಮ್ಮೆಗೆ ಒಬ್ಬರು ಮಾತ್ರ ನಡೆದಾಡಲು ಸಾಧ್ಯವಿತ್ತು! ಹಾಗೇ ಹೋಗುತ್ತಿರುವಾಗಲೇ ಮೇಲ್ಗಡೆಗೆ ಕಂಡಿತೊಂದು, ಹೆಬ್ಬಂಡೆಯಲ್ಲಿ ದೊಡ್ಡದಾದ ತೂತಿನಂತಹ ಕಮಾನು! ನನಗೆ ಅದುವೇ ನಾವು ನೋಡಲಿರುವ ಕಮಾನು ಎಂದುಕೊಂಡು ಖುಶಿಯಿಂದ ಒಬ್ಬರಲ್ಲಿ ಕೇಳಿದೆ.. “ಇದುವೆ ಏನು Delicate Arch?” ಅಲ್ಲವೆಂದು ತಿಳಿದಾಗ ಪೆಚ್ಚಾಗುವ ಸರದಿ ನನ್ನದು. ಅಲ್ಲಾ…ಅದು ಮತ್ತೆ ಹೇಗಿರಬಹುದು ಎನ್ನುವ ಕುತೂಹಲ! ..ಆದರೆ ನನ್ನ ಕಸುವು ಕುಂದುತ್ತಿತ್ತು…ಕಾಲು ಮುಂದಕ್ಕೆ ಹೋಗಲಾರೆ ಎಂದು ಮುಷ್ಕರ ಬೇರೆ ಹೂಡಲು ಯೋಚಿಸುತ್ತಿತ್ತು. ಜೊತೆಗೆ, ಮುಂದಕ್ಕಿರುವ ದಾರಿಯನ್ನು ನೋಡಿ ನನ್ನ ಜಂಘಾಬಲವೇ ಉಡುಗಿ ಹೋಯ್ತು… ಆದರೂ ಮುನ್ನಡೆದೆ.
ಪರ್ವತಾಕಾರದ ಕಲ್ಲಿನ ಬೆಟ್ಟದ ಮಧ್ಯ ಭಾಗದಲ್ಲಿ ಅತಿ ನಾಜೂಕಿನಿಂದ ಕೊರೆದು ಮಾಡಿದ ಅಗಲ ಕಿರಿದಾದ ಕಾಲುದಾರಿಯಲ್ಲಿ ಕೆಲವು ಕಡೆಗೆ ಅರ್ಧದಷ್ಟು ಮೈಯನ್ನು ಬಗ್ಗಿಸಿಕೊಂಡು ಹೋಗಬೇಕು..ಇನ್ನು ಕೆಲವು ಕಡೆ, ಒಂದೇ ಪಾದವಿರಿಸಿ ಮುಂದಿನ ತಿರುವಿಗೆ ಸಾಗಬೇಕು..ಈ ರೀತಿಯಲ್ಲಿ ನಮ್ಮ ಬಲಭಾಗದಲ್ಲಿ ಹೋಗುತ್ತಿರುವಾಗ, ತಪ್ಪಿಯೂ ಎಡಭಾಗವನ್ನು ನೋಡಬಾರದು…ಯಾಕೆ ಗೊತ್ತೇ, ನೂರಾರು ಅಡಿಗಳ ಆಳಕ್ಕಿರುವ ಪ್ರಪಾತವು ಇದ್ದಬದ್ದ ಧೈರ್ಯವನ್ನೂ ಕಸಿದುಕೊಂಡು ಬಿಡುತ್ತದೆ! ಒಂದು ಹಂತದಲ್ಲಿ ನನ್ನ ಸ್ಥಿತಿ ಯಾರಿಗೂ ಬೇಡ…ಮುಂದೆ ಕಾಲಿಡಲು ಧೈರ್ಯ ಸಾಲದೆ ನಿಂತೇ ಬಿಟ್ಟೆ..ಹಿಂತಿರುಗಲೆಂದು! ಸಹಾಯಕ್ಕೂ ಯಾರೂ ಸಿಗದಂತಾಗಿತ್ತು. ಅಲ್ಲಿಯೂ ನನ್ನ ಪ್ರಶ್ನೆ ನಡೆದೇ ಇತ್ತು…”ಇನ್ನೆಷ್ಟು ದೂರ??” ನಾನು ನಿಂತ ತಿರುವಿನಲ್ಲಿ ಮುಂದೇನಿದೆ ಎಂದು ಸ್ವಲ್ಪವೂ ಕಾಣಿಸುತ್ತಿರಲಿಲ್ಲ. ಅಲ್ಲೇ ಪಕ್ಕದಲ್ಲಿದೆ ಎಂದು ತಿಳಿದಾಗ ಎಲ್ಲಿಂದ ಬಂತೋ ಧೈರ್ಯ, ಆದದ್ದಾಗಲಿ ಎಂದು ಆ ತಿರುವಿನಲ್ಲಿ ಕಾಲನ್ನು ಹಾಗೇ ಮುಂದೆ ಸರಿಸಿ ಸಾಗಿದೆ. ನಿಮಿಷದೊಳಗೆ ನನ್ನ ಕಣ್ಮುಂದೆ ಜಗತ್ತಿನ ಅದ್ಭುತವೊಂದು ಪ್ರತ್ಯಕ್ಷವಾಯ್ತು!!…
ಮುಂದೇನಾಯ್ತು....ಮುಂದಿನ ಎಳೆಯಲ್ಲಿ..
(ಮುಂದುವರಿಯುವುದು……)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=35956
–ಶಂಕರಿ ಶರ್ಮ, ಪುತ್ತೂರು.
ಈ ಸಾರಿಯ ನಿಮ್ಮ ಅಮೆರಿಕ ಪ್ರವಾಸ ಕಥನ..
ಕುತೂಹಲ. ಘಟ್ಟಕ್ಕೆ ಬಂದು ನಿಂತಿದೆ.. ಚೆನ್ನಾಗಿ ಓದಿ ಸಿಕೊಂಡು ಹೋಗುತ್ತಿದೆ…ಧನ್ಯವಾದಗಳು ಶಂಕರಿ ಮೇಡಂ
ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು… ನಾಗರತ್ನ ಮೇಡಂ.
Very nice
ಧನ್ಯವಾದಗಳು
Nice narration
ಸೂಪರ್ ಅಕ್ಕೋ