ಪುನರುತ್ಥಾನದ ಪಥದಲ್ಲಿ… ಹೆಜ್ಜೆ 24
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ದಿನ 8: ಮೆಕಾಂಗ್ ನದಿ ಪ್ರದೇಶದಲ್ಲಿ ವಿಹಾರ
22 ಸೆಪ್ಟೆಂಬರ್ 2024 ರಂದು ಬೆಳಗಾಯಿತು. ಎಂದಿನಂತೆ ಸ್ನಾನಾದಿ ಪೂರೈಸಿ, ಹಲವಾರು ಆಹಾರ ವೈವಿಧ್ಯಗಳಿದ್ದ ಉಪಾಹಾರ ಮುಗಿಸಿ , ಹೊರಡಲು ಸಿದ್ಧರಾಗಿ ಹೋಟೆಲ್ ನ ರಿಸೆಪ್ಷನ್ ಹಾಲ್ ನಲ್ಲಿ ಕುಳಿತೆವು. ನಮ್ಮ ಆ ದಿನದ ಗೈಡ್ ‘ಹುಂಗ್’ ಬಂದ. ಈತನೂ ಎಳೆಯ ವಯಸ್ಸಿನ ನಗುಮುಖದ ಯುವಕ. ನಮ್ಮನ್ನು ಗುರುತಿಸಿ, ತಾನು ಕರೆತಂದಿದ್ದ ಮಿನಿ ಬಸ್ ಬಳಿಗೆ ಬರಲು ಹೆಳಿದ. ನಮ್ಮನ್ನೂ ಸೇರಿಸಿ ಒಟ್ಟು ಹತ್ತು ಜನರಿದ್ದೆವು. ಅವರಲ್ಲಿ ಮಲೇಶ್ಯಾ, ಕೊರಿಯಾ ಹಾಗೂ ಭಾರತೀಯರು ಇದ್ದರು. ಹುಂಗ್ ನಮಗೆಲ್ಲಾ ಗುಡ್ ಮಾರ್ನಿಂಗ್ ಹೇಳಿ, ಆ ದಿನದ ವೇಳಾಪಟ್ಟಿ ಪ್ರಕಾರ ನಾವು ‘ ಮೆಕಾಂಗ್’ ನದಿಮುಖಜ ಭೂಮಿ ಡೆಲ್ಟಾ ಪ್ರದೇಶದ ಪ್ರಮುಖ ಆಕರ್ಷಣೆಯಾದ ನಾಲ್ಕು ದ್ವೀಪಗಳಿಗೆ ಭೇಟಿ ಕೊಡಲಿದ್ದೇವೆ ಎಂದ.
ಮೊದಲು ಮಿನಿ ಬಸ್ ನಲ್ಲಿ ಸುಮಾರು ಅರ್ಧ ಗಂಟೆ ಪ್ರಯಾಣಿಸಿದೆವು. ಸಣ್ಣಗೆ ಹನಿಯುತ್ತಿದ್ದ ಮಳೆಗೆ ನೆನೆದಿದ್ದ ರಸ್ತೆಗಳು ಶುಭ್ರವಾಗಿ ಕಾಣಿಸುತ್ತಿದ್ದುವು. ಅಲ್ಲಲ್ಲಿ ಪಚ್ಚೆ ಪೈರಿನ ಗದ್ದೆಗಳ ನಡುವೆ ಹಾದು ಹೋಗಿದ್ದ ಅಗಲವಾಗಿದ್ದ ರಸ್ತೆಯು ಮೈಸೂರು-ಮಂಡ್ಯದ ನಡುವಿನ ರಸ್ತೆ ಪ್ರಯಾಣವನ್ನು ನೆನಪಿಸಿತು. ಅಂದಾಜು 70 ಕಿಮೀ ದೂರ, ಒಂದುವರೆ ಗಂಟೆ ಪ್ರಯಾಣಿಸಿ ಮೈ ಥೋ (My Tho ) ಎಂಬ ಸ್ಥಳ ತಲಪಿದೆವು. ಅಲ್ಲಿ ಲಕ್ಕಿ ಬಾಂಬೂ (Lucky Bamboo ) ಎಂಬ ಹೆಸರಿನ ಬಿದಿರಿನ ಹಾಗೂ ವಿವಿಧ ಇತರ ಉತ್ಪನ್ನಗಳ ತಯಾರಿ ಮಾಡುವ ಕಾರ್ಖಾನೆಯ ಬಳಿ ಬಸ್ಸು ನಿಂತಿತು. ಈ ಮೊದಲೇ ನಾವು ಗಮನಿಸಿದಂತೆ, ತಮ್ಮ ಸ್ಥಳೀಯ ಉತ್ಪನ್ನಗಳನ್ನು ಪ್ರವಾಸಿಗರಿಗೆ ಆಕರ್ಷಣೀಯವಾಗಿ ಪ್ರದರ್ಶಿಸುವುದರಲ್ಲಿ ವಿಯೆಟ್ನಾಂ ಜನರು ಚತುರರು. ನಮ್ಮನ್ನು ಸ್ವಾಗತಿಸಿದ ಸಿಬ್ಬಂದಿಯೊಬ್ಬರು, ಬಿದಿರಿನಿಂದ ತಯಾರಿಸಲಾದ ಹತ್ತಿಯ ವಿವಿಧ ರೀತಿಯ ಬಟ್ಟೆಗಳು, ಹಾಸಿಗೆ , ದಿಂಬು, ಬುಟ್ಟಿ, ಬೀಸಣಿಗೆ, ಟೋಪಿ, ಕೈಚೀಲ ಮೊದಲಾದ ಕರಕುಶಲ ವಸ್ತುಗಳು , ಬಿದಿರಿನ ಮಸಿಯಿಂದ ಸಿದ್ಧಪಡಿಸಿದ ತಲೆಕೂದಲಿಗೆ ಹಾಕುವ ಬಣ್ಣ, ಟೂಥ್ ಪೇಸ್ಟ್ ಇತ್ಯಾದಿಗಳ ವಿವರಣೆ ಹಾಗೂ ಪ್ರಾತ್ಯಕ್ಷಿಕೆ ಕೊಟ್ಟರು. ಇವೆಲ್ಲವೂ ಮಾರಾಟಕ್ಕೆ ಲಭ್ಯವಿದ್ದುವು. ಜೊತೆಗೆ ಕೆಲವು ಸ್ಥಳೀಯ ತಿನಿಸುಗಳು, ಒಣಹಣ್ಣುಗಳು, ಚಹಾ, ಕಾಫಿ ಇತ್ಯಾದಿ ಕೂಡ ಲಭ್ಯವಿತ್ತು. ತೆಂಗಿನಹಾಲು ಬಳಸಿ, ಚೆಕ್ಕೆಯನ್ನು (Cinnamon) ಸೇರಿಸಲಾದ ಕಾಫಿ ಲಭ್ಯವಿತ್ತು. ಈ ಕಾಫಿ ಹೇಗಿರಬಹುದೆಂಬ ಕುತೂಹಲದಿಂದ ಖರೀದಿಸಿ ಕುಡಿದೆ. ಸುಮಾರಾಗಿತ್ತು, ದುಬಾರಿ ಕೂಡ. ಒಟ್ಟಿನಲ್ಲಿ, ಪ್ರವಾಸಿಗರನ್ನು ಇಂತಹ ಆಯ್ದ, ದುಬಾರಿ ಮಾರಾಟ ಮಳಿಗೆಗಳಿಗೆ ಕರೆದೊಯ್ಯಬೇಕೆಂದು ಮಾರ್ಗದರ್ಶಕರಿಗೆ ಆದೇಶವಿರುತ್ತದೆ, ಬಹುಶ: ಪ್ರವಾಸಿಗರು ಮಾಡಬಹುದಾದ ವ್ಯಾಪಾರದಲ್ಲಿ ಅವರಿಗೆ ಸ್ವಲ್ಪ ಕಮಿಷನ್ ಇದ್ದರೂ ಇರಬಹುದು ಎನಿಸಿತು. ಈ ರೀತಿಯ ವ್ಯವಸ್ಥೆ ನಮ್ಮ ದೇಶದಲ್ಲಿಯೂ ಇದೆಯಷ್ಟೆ. ಪ್ರಯಾಣ ಮುಂದುವರಿದು, ಮೆಕಾಂಗ್ ಡೆಲ್ಟಾ ಪ್ರದೇಶದ ಬಂದರು ತಲಪಿದೆವು. ಅಲ್ಲಿಂದ ಫೆರ್ರಿಗಳಲ್ಲಿ ನಮ್ಮನ್ನು ದ್ವೀಪಗಳಿಗೆ ಕರೆದೊಯ್ದರು.
ಫೆರ್ರಿ ಅಥವಾ ಮೋಟಾರು ಚಾಲಿತ ದೋಣಿಗೆ ಇಲ್ಲಿ ‘ಸಂಪನ್’ ಎಂದು ಕರೆಯುತ್ತಾರೆ. ಮೆಕಾಂಗ್ ನದಿಯಲ್ಲಿ ಈ ‘ಸಂಪನ್’ ನಲ್ಲಿ ಪ್ರಯಾಣ ಆಹ್ಲಾದಕರವಾಗಿತ್ತು. ಅಲ್ಲಲ್ಲಿ ಕಾಣುವ ‘ಸಂಪನ್’ ಗಳಲ್ಲಿ ವಿಯೆಟ್ನಾಂನ ‘ನಾನ್ ಲಾ’ ಟೋಪಿ ಧರಿಸಿದ ಸ್ಥಳೀಯರು ಹಾಗೂ ಪ್ರವಾಸಿಗಳು ಕಾಣಿಸುತ್ತಿದ್ದರು. ‘ಎಲ್ಲೆಲ್ಲೂ ನೋಡಲಿ, ನೀರನ್ನೆ ಕಾಣುವೆ’ ಎಂಬಂತಹ ಅನುಭವ. ಮೆಕಾಂಗ್ ನದಿಯು ಅಂದಾಜು 4909 ಕಿಮೀ ಉದ್ದದ ನದಿಯಾಗಿದ್ದು ಏಷಿಯಾ ಖಂಡದಲ್ಲಿ ಮೂರನೆಯ ಅತಿ ಉದ್ದದ ನದಿಯಾಗಿದೆ. ಟಿಬೆಟ್ ನಲ್ಲಿ ಹುಟ್ಟುವ ಈ ನದಿಯು ಚೀನಾ, ಬರ್ಮಾ, ಥೈಲಾಂಡ್, ಲಾವೋಸ್, ಕಾಂಬೋಡಿಯಾ ಮತ್ತು ದಕ್ಷಿಣ ವಿಯೆಟ್ನಾಂ ಮೂಲಕ ಹರಿದು ದಕ್ಷಿಣ ಚೀನಾ ಸಮುದ್ರವನ್ನು ಸೇರುತ್ತದೆ. ತಾನು ಹರಿಯುವ ದೇಶಗಳಲ್ಲಿ ಪ್ರಾದೇಶಿಕ ನಾಮಧೇಯಗಳನ್ನು ಹೊಂದಿರುವ ಈ ನದಿಯು ಅಗಾಧವಾದ ಪ್ರಮಾಣದ ಜಲರಾಶಿಯನ್ನು ಹೊತ್ತೊಯ್ಯುವುದರ ಜೊತೆಗೆ ಹಲವಾರು ಜೀವಸಂಕುಲ ಹಾಗೂ ದ್ವೀಪಗಳಿಗೆ ನೆಲೆಯಾಗಿದೆ. ಮೆಕಾಂಗ್ ಅಂದರೆ ‘ಜಲರಾಶಿಯ ತಾಯಿ’ ( Mother of Waters) ಎಂಬ ಅರ್ಥವಂತೆ. ಅಮೆಜಾನ್ ನದಿಯನ್ನು ನಂತರ, ಅತ್ಯಂತ ಹೆಚ್ಚು ಜೀವ ಸಂಕುಲಕ್ಕೆ ಆಶ್ರಯ ಕೊಡುವ ನದಿ ಮೆಕಾಂಗ್ . ಕೃಷಿಗೆ ಆಧಾರವಾಗಿದ್ದು ಇತರ ವಾಣಿಜ್ಯ ವ್ಯವಹಾರದ ಮಾರ್ಗವೂ ಆಗಿದೆ. ಇತ್ತೀಚೆಗೆ ಪ್ರವಾಸೋದ್ಯಮವೂ ಗರಿಗೆದರಿದೆ. ಹಾಗಾಗಿ ಮೆಕಾಂಗ್ ವಿಯೆಟ್ನಾಂನ ‘ ಮಹಾಮಾತೆ’ಯೇ ಆಗಿದ್ದಾಳೆ, ಭಾರತದ ಗಂಗೆಯಂತೆ.
ಮೆಕಾಂಗ್ ನ ‘ಡ್ರ್ಯಾಗನ್ ದ್ವೀಪ’‘
ವಿಶಾಲವಾದ ಮೆಕಾಂಗ್ ನದಿಮುಖಜ ಪ್ರದೇಶದಲ್ಲಿ ಸುಮಾರು ಅರ್ಧ ಗಂಟೆ ಪ್ರಯಾಣಿಸಿ ದ್ವೀಪವೊಂದರ ಬಳಿ ‘ಸಂಪನ್’ ನಿಂತಿತು. ಆ ದ್ವೀಪದ ಹೆಸರು ‘ಡ್ರ್ಯಾಗನ್’ , ಸ್ಥಳೀಯ ಭಾಷೆಯಲ್ಲಿ ಕಾನ್ ಲಾಂಗ್. ‘ಸಂಪನ್’ ನಿಂದ ಇಳಿದು, ಸ್ವಲ್ಪ ದೂರ ಕಾಲುದಾರಿಯಲ್ಲಿ ನಡೆದೆವು. ಮಳೆಯಿಂದ ಒದ್ದೆಯಾಗಿದ್ದ ನೆಲ, ಚಪ್ಪಲಿಗೆ ಮೆತ್ತಿಕೊಂಡ ಕೆಸರು, ಅಲ್ಲಲ್ಲಿ ತೂಗಿ ತೊನೆಯುವ ತೆಂಗಿನ ಮರಗಳು, ಹಲಸಿನ ಮರದಲ್ಲಿ ಕಂಡ ಎಳೆಗುಜ್ಜೆ, ಕೆಂಪು ಹಣ್ಣುಗಳಿದ್ದ ಗೋಡಂಬಿ ಮರಗಳು, ಅರಳಿದ್ದ ನಂದಿ ಬಟ್ಟಲು ಹೂಗಳು, ದೇವ ಕಣಗಿಲೆ, ಗೋಸಂಪಿಗೆ, ರತ್ನಗಂಧಿ, ಮಂದಾರ ಪುಷ್ಪಗಳು, ವಿವಿಧ ಬಣ್ಣದ ಕಿಸ್ಕಾರ ಹೂಗಳು ಇವೆಲ್ಲವೂ ಧುತ್ತೆಂದು ನಮ್ಮ ಮನಸ್ಸನ್ನು ಪಶ್ಚಿಮ ಕರಾವಳಿಯ ಹಳ್ಳಿಯ ಮಧ್ಯೆ ತಂದು ನಿಲ್ಲಿಸಿತು. ನಮ್ಮೂರಿಗೂ ಇಲ್ಲಿಗೂ ಎಷ್ಟೊಂದು ಭೌಗೋಳಿಕ ಸಾಮ್ಯತೆ ಇದೆ ಎನಿಸಿ ಅಚ್ಚರಿಯಾಯಿತು!
ಆ ಕಾಲುದಾರಿಯ ಕೊನೆಯಲ್ಲಿ ಒಂದು ಸರಳವಾದ ಚಪ್ಪರದಂತಹ ಮಾಡು ಇದ್ದ ಎರಡು ಪ್ರತ್ಯೇಕ ವೇದಿಕೆಗಳಿದ್ದುವು. ಅದರಲ್ಲಿ ಕೂರಲು ನಾಲ್ಕಾರು ಕುರ್ಚಿಗಳು, ಎದುರುಗಡೆ ಪುಟ್ಟ ಮೇಜುಗಳು ಇದ್ದುವು. ಮಾರ್ಗದರ್ಶಕ ನಮ್ಮನ್ನು ಅಲ್ಲಿ ಕುಳಿತಿರಲು ಹೇಳಿದ. ಸಣ್ಣಗೆ ಹನಿಯುತ್ತಿದ್ದ ಮಳೆಯನ್ನು ನೋಡುತ್ತಾ ಇದ್ದಾಗ, ನಮ್ಮ ಎದುರಿದ್ದ ಮೇಜಿನ ಮೇಳೆ ನಾಲ್ಕಾರು ತಟ್ಟೆಗಳಲ್ಲಿ ಚೆಂದಕೆ ಕತ್ತರಿಸಿದ ಅನಾನಸ್, ಕಲ್ಲಂಗಡಿ, ಪೇರಳೆಹಣ್ಣು ಇಟ್ಟರು. ಜೊತೆಗೆ ‘ ಕೊರೊನಾ’ ವೈರಸ್ ನ ಆಕಾರದಲ್ಲಿದ್ದ ರಂಬೂಟಾನ್, ಹಳದಿ ಬಣ್ಣದಲ್ಲಿ ಗುಂಡಗಿದ್ದ ‘ಲೋಂಗಾನ್’ ಕೂಡಾ ತಂದಿರಿಸಿದರು. ಲಲನೆಯೊಬ್ಬಳು ಸ್ವಾಗತಿಸುತ್ತಾ, ‘ ಎಂಜಾಯ್ ಟ್ರಾಪಿಕಲ್ ಫ್ರೂಟ್ಸ್’ ಎಂದು ಹೇಳಿ ಮರೆಯಾದರು.
ಅಷ್ಟರಲ್ಲಿ ಅಲ್ಲಿಗೆ ಬಂದ ಒಂದಿಬ್ಬರು ಕಲಾವಿದರು ಸುಶ್ಯಾವ್ಯವಾಗಿ ಹಾಡಲಾರಂಭಿಸಿದರು. ಜಾನಪದ ಸಾಹಿತ್ಯಕ್ಕೆ ಹಿನ್ನೆಲೆಯಾಗಿ ಗಿಟಾರ್ , ಕೊಳಲು ಮತ್ತು ಬಿದಿರಿನ ಕೊಳವೆಯಂತಿದ್ದ ದಾನ್ ಬಾಯ್ (Dan Bau ) ಸಂಗೀತೋಪಕರಣವನ್ನು ನುಡಿಸಿದರು. ಭಾಷೆ ಅರ್ಥವಾಗದಿದ್ದರೂ, ಸಂಗೀತ ಹಿತವಾಗಿತ್ತು. ರುಚಿಯಾದ ಹಣ್ಣುಗಳನ್ನು ಸವಿಯುತ್ತಾ ಹಾಡು ಕೇಳಿದೆವು. ನಮ್ಮ ಮುಂದೆ ಒಂದು ಟಿಪ್ಸ್ ಬಾಕ್ಸ್ ಇರಿಸಿದರು. ಅದರಲ್ಲಿ ತಮ್ಮ ಆತಿಥ್ಯ ಇಷ್ಟವಾಗಿದ್ದರೆ ಟಿಪ್ಸ್ ಹಾಕಬಹುದು ಎಂಬ ಬರಹವಿತ್ತು. ನಾವು ಸ್ವಲ್ಪ ಹಣವನ್ನು ಟಿಪ್ಸ್ ಬಾಕ್ಸ್ ಗೆ ಹಾಕಿ ಮುಂದುವರಿದೆವು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=42369
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಪ್ರ ವಾಸ ಕಥನ ಚೆನ್ನಾಗಿ ಮೂಡಿಬರುತ್ತಿದೆ… ಗೆಳತಿ..ಚಿತ್ರ ಗಳು ಪೂರಕವಾಗಿ ಮನಕ್ಕೆ ಮುದಕೊಟ್ಟಿತು..ನಾವು ಸಹ ನಿಮ್ಮ ಜೊತೆಗೆ ಪ್ರವಾಸ ಮಾಡುತಿದ್ದೇವೆ..ಅನ್ನಸುತ್ತಿದೆ..ವಂದನೆಗಳು
ಆಪ್ತವಾದ ಪ್ರತಿಕ್ರಿಯೆ..ಧನ್ಯವಾದಗಳು .
ಬ್ಯೂಟಿಫುಲ್
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು .
ನಮ್ಮ ದೇಶದ ಪವಿತ್ರ ಗಂಗೆಯಂತಿರುವ ಜಲರಾಶಿಯ ತಾಯಿ ಮೆಕಾಂಗ್ ನದಿ, ಚಂದದ ಸಂಪನ್ ನಲ್ಲಿ ಜಲಪಯಣ, ನಮ್ಮೂರನ್ನು ನೆನಪಿಸುವ ಹೂ, ಹಣ್ಣು, ಗಿಡ ಮರಗಳು, ರುಚಿಕರವಾದ ಸ್ಥಳೀಯ ಹಣ್ಣುಗಳ ಸ್ವಾದ ಇತ್ಯಾದಿಗಳ ವಿವರಣಾತ್ಮಕ ಪ್ರವಾಸ ಲೇಖನ…ಸೂಪರ್!
ಆಪ್ತವಾದ ಪ್ರತಿಕ್ರಿಯೆ..ಧನ್ಯವಾದಗಳು .