ಚಿತ್ರಾನ್ನವೆಂಬ ವಿ-ಚಿತ್ರ ವೈವಿಧ್ಯ!

Share Button

‘ಚಿತ್ರಾನ್ನ ಚಿತ್ರಾನ್ನ ಚಿತ್ರ ಚಿತ್ರ ಚಿತ್ರಾನಾ?’ ಎಂಬ ಹಾಡೊಂದು 2008 ರಲ್ಲಿ ತೆರೆ ಕಂಡ ಉಪೇಂದ್ರರ ‘ಬುದ್ಧಿವಂತ’ ಎಂಬ ಚಲನಚಿತ್ರದಲ್ಲಿ ಅಳವಟ್ಟಿದೆ. ಉಪೇಂದ್ರರೇ ಬರೆದು ಅವರೇ ಹಾಡಿದ್ದಾರೆ. ಸ್ವವಿಮರ್ಶೆ ಈ ಹಾಡಿನ ಉದ್ದೇಶ. ‘ಚಿತ್ರಾನ್ನ’ ಎಂಬ ಪದಕ್ಕೆ ಹೀನಾರ್ಥಪ್ರಾಪ್ತವಾಗಿ ‘ಎಲ್ಲವೂ ಕಲಸುಮೇಲೊಗರ’ ಎಂಬರ್ಥದಲ್ಲಿ ಬಳಕೆಯಾಗುತ್ತಿದೆ. ಜೊತೆಗೆ ಈ ಪದವನ್ನು ಕೇಳಿಸಿಕೊಳ್ಳುವಲ್ಲಿ ಶ್ಲೇಷೆಯೊಂದಿದೆ. ‘ಇದೇನು ಚಿತ್ರವೇ? ಇದನ್ನೂ ಚಲನಚಿತ್ರವೆನ್ನುತ್ತಾರೆಯೇ?’ ಎಂಬರ್ಥ! ನಾನು ಈ ಹಾಡನ್ನು ಕೇಳಿಸಿಕೊಳ್ಳುವಾಗೆಲೆಲ್ಲಾ ನಿಜವಾದ ಚಿತ್ರಾನ್ನವೇ ಕಣ್ಮುಂದೆ ಬರುತ್ತದೆ. ದಿಢೀರ್‌ ತಯಾರಾಗುವ ಹಸಿವನ್ನು ತಣಿಸುವ ಈ ಮೃಷ್ಟಾನ್ನವನ್ನು ಹೀಗಳೆಯುವವರೇ ಬಹಳ ಮಂದಿ. ಏಕೆಂದರೆ ಮನೆಯಲ್ಲಾಗಲೀ ಹೊಟೆಲಿನಲ್ಲಾಗಲೀ ರಾತ್ರಿಯುಳಿದ ಅನ್ನಕ್ಕೆ ಬೆಳಗ್ಗೆ ಒಗ್ಗರಣೆ ತೋರಿ, ಅರಿಶಿನಪುಡಿ ಉದುರಿಸಿ, ಬಿಸಿ ಮಾಡಿ, ನಿಂಬೆಹಣ್ಣನ್ನು ಹಿಂಡಿದರೆ ಚಿತ್ರಾನ್ನ ರೆಡಿ! ಬೆಳಗಿನ ವೇಳೆ ಬಿಸಿಯನ್ನ ಮಾಡಿ ಚಿತ್ರಾನ್ನ ಕಲೆಸಿದರೂ ಈ ಅಪವಾದವನ್ನು ಹೋಗಲಾಡಿಸಲಾಗದು. ಹಬೆಯಾಡುತ್ತಿರುವ ಚಿತ್ರಾನ್ನದ ತಟ್ಟೆಯನ್ನು ಡೈನಿಂಗ್ ಟೇಬಲ್ ಮೇಲಿಟ್ಟು ‘ಬೆಳಗ್ಗೆ ಮಾಡಿದ ಅನ್ನ, ಫ್ರೆಶ್’ ಅಂತ ಕಣ್ಣಗಲಿಸಿ, ‘ಕ್ಯಾತೆ ತೆಗೆಯಬಾರದು’ ಎಂಬ ಎಚ್ಚರಿಕೆ ಕೊಟ್ಟು ಮನೆಯ ಹೆಂಗಸರು ಹೋದರೆಂದರೆ ‘ಮಾತಾಡದೇ ತಿನ್ನಿ’ ಎಂದೇ ಒಳಾರ್ಥ! ಪಾಪ, ಅಷ್ಟರಮಟ್ಟಿಗೆ ಚಿತ್ರಾನ್ನವು ತಿನ್ನುವವರಿಂದಲೂ ಸಿದ್ಧಪಡಿಸುವವರಿಂದಲೂ ಹೀಯಾಳಿಕೆ ಅನುಭವಿಸಿ, ತಬ್ಬಲಿಯ ಮಗುವಾಗುವುದು.

ಚಿತ್ರಾನ್ನವು ಬಡವರ ಆಧಾರಿ. ಅದರಲ್ಲೂ ಬ್ಯಾಚುಲರ್ಸ್ ಫ್ರೆಂಡ್ಲಿ! ನಾವು ಹಾಸ್ಟೆಲಿನಲ್ಲಿದ್ದಾಗ ‘ಮೆಸ್ ಬಿಲ್ಲು ಅಧಿಕ’ ಎಂಬ ಕಾರಣಕಾಗಿ ಕರೆಂಟು ಸ್ಟವ್ ತಂದಿಟ್ಟುಕೊಂಡು ಥರಾವರಿ ಚಿತ್ರಾನ್ನಗಳನ್ನು ಮಾಡಿಕೊಂಡ ನೆನಪು ಇನ್ನೂ ಇದೆ. ಜೊತೆಗೆ ಇದನ್ನು ತಯಾರಿಸಲೂ ತಿನ್ನಲೂ ಸುಲಭ. ಆದರೆ ಒಗ್ಗರಣೆ ಬೇಕೇ ಬೇಕು. ಇಲ್ಲದಿದ್ದರೆ ಅದು ಹಳದಿಯನ್ನವಷ್ಟೇ! ಚಿತ್ರಾನ್ನಕೊಂದು ಮೆರುಗು ತರಲು ಸೊಗಡು ಸಂಭ್ರಮಿಸಲು ಈ ಒಗ್ಗರಣೆಯೇ ಮೂಲಾಧಾರ. ಒಮ್ಮೊಮ್ಮೆ ನಿಂಬೆಹುಳಿ ಹಿಂಡಿ, ‘ಲೆಮನ್ ರೈಸ್‌ಬಾತ್’ ಎಂದು ಹೆಸರಿಟ್ಟು ಅಕ್ಕಪಕ್ಕದ ಸಹನಿವಾಸಿ ಗೆಳೆಯರಿಗೆ ಉಣಬಡಿಸಿದಾಗ ರಾಜಾತಿಥ್ಯ ಮಾಡಿದಷ್ಟೇ ಸಂತೋಷ ಪಡುತ್ತಿದ್ದುದೂ ಉಂಟು. ನಮ್ಮ ಕಾಲೇಜಿನ ಹೆಣ್ಣುಮಕ್ಕಳು ಮಧ್ಯಾಹ್ನದ ಊಟಕೆಂದು ಬಹುತೇಕ ತರುವುದೇ ಈ ಚಿತ್ರಾನ್ನವನ್ನು. ಗೆಳತಿಯರೊಂದಿಗೆ ಹರಟೆ ಕೊಚ್ಚುತ್ತಾ, ಪುಟ್ಟ ಬಾಕ್ಸಿನಲಿ ತಂದಿದ್ದನ್ನು ಜೊತೆಯಲ್ಲಿರುವವರಿಗೂ ಒಂದೊಂದು ಚಮಚೆ ಶೇರಿಸುತ್ತಾ, ಬಡಿದು ಬಾಯಿಗೆ ಎಸೆದುಕೊಳ್ಳುವಾಗ ನನಗಿದು ‘ಚಿತ್ರಾನ್ನವೋ? ಹಳದಿ ಮಂತ್ರಾಕ್ಷತೆಯೋ?’ ಎಂಬ ಗುಮಾನಿ ಮೂಡುತ್ತದೆ. ತೀರಾ ಉದುರುದುರು ಚಿತ್ರಾನ್ನ ತಿನ್ನುವಾಗ ಗಂಟಲು ಬಿಗಿದು ಊಟಕಿಂತ ನೀರೇ ಜಾಸ್ತಿ ಹೋಗುವುದು ಗ್ಯಾರಂಟಿ. ತೀರಾ ಮುದ್ದೆಯೂ ಅಲ್ಲದ, ತೀರಾ ಉದುರುದುರೂ ಅಲ್ಲದ ಮಧ್ಯಮಾವತಿ ರಾಗ ಈ ಚಿತ್ರಾನ್ನವಾದರೆ ಬಲು ರುಚಿ. ಸಹಜ ಸುಂದರಿಯರಾದ ಹಳ್ಳಿಯ ಮುಗ್ಧ ಹೆಣ್ಣುಮಕ್ಕಳಿಗೆ ಒಂದೆರಡು ಆಭರಣ ತೊಡಿಸಿ ಇನ್ನಷ್ಟು ಲಕ್ಷಣವಂತೆಯನ್ನಾಗಿಸುವಂತೆ, ಒಗ್ಗರಣೆಯ ಸಾಸುವೆ, ಉದ್ದಿನಬೇಳೆ, ಕಡಲೆಬೀಜಗಳು ಚಿತ್ರಾನ್ನವೆಂಬ ಚೆಲುವೆಗೆ ಮೇನಕೆಯ ಮೆಹನತ್ತನ್ನು ತಂದಿಟ್ಟು ನೋಡುಗರ ಮನ ಸೆಳೆಯುವುದು ಗ್ಯಾರಂಟಿ. ಅದರಲ್ಲೂ ಕೆಲವೊಂದು ಫಾಸ್ಟ್‌ಫುಡ್‌ನವರು ಕೊಡುವ ಚಿತ್ರಾನ್ನದ ರುಚಿಯನ್ನು ನಾನು ಖಾರಾಮೃತವೆಂದೇ ಕರೆಯುತ್ತೇನೆ. ‘ದೊಡ್ಡ ಡಬ್ಬರಿ ತುಂಬ ಮಾಡಿಟ್ಟ ಈ ಚಿತ್ರಾನ್ನದಲೆಂತು ರುಚಿಯನು ಆ ಭಗವಂತ ದಯಪಾಲಿಸಿರುವ!’ ಎಂದು ಅಚ್ಚರಿಗೊಳ್ಳುತ್ತೇನೆ. ಎರಡು ಇಡ್ಲಿ ತಿಂದು, ಆಫ್ ಲೆಮನ್ ರೈಸ್‌ಬಾತನ್ನು ಅದೇ ತಟ್ಟೆಗೆ ಹಾಕಿಸಿಕೊಂಡು, ಚಟ್ನಿಯನು ನಂಚಿಕೊಂಡು ತಿನ್ನುವಾಗ ನನಗೆ ಸ್ವರ್ಗ ಬೇರೆಲ್ಲೂ ಇಲ್ಲ; ಈ ತಳ್ಳುವ ಗಾಡಿಯಲ್ಲೇ ಕಾಲು ಮುರಿದುಕೊಂಡು ಬಿದ್ದಿದೆ! ಎನಿಸುವುದು. ಕೆಲವರು ಒಗ್ಗರಣೆಯೊಂದಿಗೆ ಈರುಳ್ಳಿಯನ್ನೂ ಫ್ರೈ ಮಾಡಿ ಹಾಕಿರುತ್ತಾರೆ. ಫಾಸ್ಟ್‌ಫುಡ್‌ನವರು ಕಂಡೂ ಕಾಣದಂತೆ ಬಹುಶಃ ಗಾರ್ಲಿಕ್ ಪೇಸ್ಟನ್ನು ಸ್ವಲ್ಪ ಹಾಕಿರುತ್ತಾರೆನಿಸುತ್ತದೆ. ನಾನು ಬೆಳ್ಳುಳ್ಳಿಯನ್ನು ಬಳಸುವುದಿಲ್ಲವಾದರೂ ಹಳದಿಯನ್ನದ ರುಚಿಯನ್ನು ಸವಿಯುವಾಗ ಅದು ನನಗೆ ಮ್ಯಾಟರೇ ಆಗುವುದಿಲ್ಲ! ಮೈಸೂರಿನ ದೊಡ್ಡ ಗಡಿಯಾರ ಸರ್ಕಲಿನ ಟೌನ್‌ಹಾಲಿನೆದುರು ಇರುವ ಹಳತಾದ ಕಟ್ಟಡದ ಒಂದು ಫಾಸ್ಟ್‌ಫುಡ್ ಹೊಟೆಲಿನಲ್ಲಿ ಈಗಲೂ ಈ ಲೆಮನ್ ರೈಸ್‌ಬಾತ್ ತನ್ನ ಪ್ರಥಮ ಸ್ಥಾನದಿಂದ ಹಿಂದೆಯೇ ಸರಿದಿಲ್ಲ!

ನಿಂಬು ಚಿತ್ರಾನ್ನದ ಮುಂದುವರಿದ ರೂಪವೇ ಹಲವು ಬಗೆಯ ಕಲಸನ್ನಗಳು. ಮಾವಿನಕಾಯಿ ಚಿತ್ರಾನ್ನ, ಕಾಯಿಸಾಸುವೆ ಚಿತ್ರಾನ್ನ, ಅಮಟೆಕಾಯಿ ಚಿತ್ರಾನ್ನ, ಹೆರಳೇಕಾಯಿ ಚಿತ್ರಾನ್ನ, ಎಳ್ಳುಪುಡಿ ಚಿತ್ರಾನ್ನ, ಜೀರಿಗೆ ಮೆಣಸನ್ನಗಳು ಸಹ ಇದರ ಮುಂದುವರಿದ ಪ್ರಭೇದ. ಹಾಗೆ ನೋಡಿದರೆ ವಾಂಗೀಬಾತು, ಪುಳಿಯೋಗರೆ, ಉಳಂದೋಗರೆಗಳು ಕೂಡ ಚಿತ್ರಾನ್ನದ ಎಕ್ಸ್‌ಟೆನ್‌ಷನ್ ಆ್ಯಕ್ಟಿವಿಟಿ! ಇವೆಲ್ಲವೂ ಓಗರ ಜಾತಿಗೆ ಸೇರಿದವು. ನಮ್ಮ ಭಾರತದಲ್ಲಿ ಅನ್ನವೇ ಸಿರಿವಂತರ ಆಹಾರವಾಗಿದ್ದ ದಿನಗಳಲ್ಲಿ ಚಿತ್ರಾನ್ನ ಮತ್ತು ಇದರ ವಿವಿಧ ರೂಪಗಳು ಹಬ್ಬಗಳಂದು ಅವತರಿಸುತ್ತಿದ್ದವು. ಭತ್ತ ಬೆಳೆಯುವ ಪ್ರಮಾಣ ಹೆಚ್ಚಾದ ಮೇಲೆ ಓಗರಗಳು ಅವತರಿಸಿದವು. ಅದರಲ್ಲೂ ರಾಗಿ, ಜೋಳ ಮೊದಲಾದ ಕಡಮೆ ನೀರು ಕೇಳುವ ಪ್ರದೇಶಗಳಲ್ಲಿ ಬೆಳೆಯುವ ಏಕದಳ ಧಾನ್ಯಗಳೇ ನಮ್ಮಲ್ಲಿ ಹೆಚ್ಚಿದ್ದವು. ಭತ್ತವು ನೀರು ಹೆಚ್ಚು ಕೇಳುವ ಜೌಗು ಪ್ರದೇಶದ ಬೆಳೆ. ಒಂದು ಕಾಲಘಟ್ಟದಲ್ಲಿ ನಮ್ಮಲ್ಲಿ ಅನ್ನ ತಿಂದರೇನೇ ಶ್ರೀಮಂತರೆನಿಸಿಕೊಳ್ಳುತ್ತಿದ್ದೆವು! ಹೀಗಿರುವಾಗ ಅನ್ನವನ್ನು ಎಸೆಯುವ ಮಾತೇ ಇಲ್ಲ. ಆಹಾರವೇ ಔಷಧವಾಗಿದ್ದ ದಿನ ಮತ್ತು ಅನ್ನವೇ ಬ್ರಹ್ಮ ಎಂಬ ಭಕ್ತಿಭಾವಗಳಿಂದ ಕಾಣುತ್ತಿದ್ದ ಸಂಸ್ಕೃತಿ ನಮ್ಮದಾಗಿದ್ದರಿಂದ ತಂಗಳನ್ನವನ್ನು ಎಸೆಯದೇ ವಿವಿಧ ಬಗೆಯ ಓಗರಗಳನ್ನು ಮಾಡಿ ಬಳಸುವ ಜಾಯಮಾನ ಬಂತು.

ತಂಗಳನ್ನಕೂ ಹಳಸನ್ನಕೂ ವ್ಯತ್ಯಾಸವಿದೆ. ತಣ್ಣಗಾದ ಕೂಳು ತಂಗೂಳು>ತಂಗುಳು>ತಂಗಳು! ಬಿಸಿಯಲ್ಲದ್ದು; ಆರಿಹೋದ ಅನ್ನ ಎಂದರ್ಥ. ಹಳಸಲು ಬೇರೆ. ಅನ್ನವು ಕೆಟ್ಟು ಹೋಗಿ, ನೀರು ಬಿಟ್ಟು, ವಾಸನೆ ಬರುವಂಥದು. ಇದನ್ನು ತಿಂದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ನಮ್ಮ ಮನೆಯಲ್ಲಿ ಅನ್ನ ಉಳಿದರೆ ಮಾರನೆಯ ದಿನ ಬೆಳಗಿನ ಉಪಾಹಾರಕ್ಕೆ ಈರುಳ್ಳಿ ಚಿತ್ರಾನ್ನವಾಗಿಯೇ ವಿಲೇವಾರಿಯಾಗುತ್ತಿತ್ತು. ಚಿಕ್ಕದಾಗಿ ಈರುಳ್ಳಿ ಹೆಚ್ಚಿ, ಒಗ್ಗರಣೆಗೆ ಹಾಲಿಂಗು-ಅರಿಶಿನದ ಪುಡಿ ಬೆರೆಸಿ, ಒಣಮೆಣಸಿನಕಾಯಿಯ ತುಂಡುಗಳನ್ನು ಹಾಕಿ ಬಾಡಿಸುತ್ತಾ, ಹಿಂದಿನ ದಿನದ ಅನ್ನವನ್ನು ಮಿಶ್ರಣ ಮಾಡಿ, ಉಪ್ಪು-ತೆಂಗಿನ ತುರಿ ತೋರಿಸಿ, ನಿಂಬೆಹುಳಿ ಹಿಂಡಿ ಕೆಳಗಿಳಿಸಿ ಚೆನ್ನಾಗಿ ಮೇಲೆ ಕೆಳಗೆ ಮಾಡಿ ತಟ್ಟೆಗೆ ಬಡಿಸಿದರೆ ಬಿಸಿಬಿಸಿ ಚಿತ್ರಾನ್ನವು ತಿನ್ನಬಲ್ ಆಗುತ್ತಿತ್ತು! ಹೊಸದಾಗಿ ಬಿಸಿಯನ್ನವನೇ ಮಾಡಿ, ಅದರ ಚಿತ್ರಾನ್ನ ತಿನ್ನಬೇಕೆಂಬ ಚಿಕ್ಕಂದಿನ ನನ್ನಾಸೆಯು ಆಸೆಯಾಗಿಯೇ ಉಳಿದಿತ್ತು. ಕೆ ಆರ್ ನಗರದ ಮಹಿಳಾ ಕಾಲೇಜಿನಲ್ಲಿ ನಾನು ಎನ್‌ಎಸ್‌ಎಸ್ ಅಧಿಕಾರಿಯಾಗಿ ವಾರ್ಷಿಕ ವಿಶೇಷ ಶಿಬಿರವನ್ನು ನಡೆಸಿದಾಗೊಮ್ಮೆ ಅಡುಗೆ ತಂಡದ ಹೆಣ್ಣುಮಕ್ಕಳು ನನ್ನ ನೆರವನ್ನು ಕೋರಿದರು. ಆಗ ಇದು ನೆನಪಾಗಿ, ಬಿಸಿಯನ್ನವನೇ ಮಾಡಿ, ಮೇಲೆ ಹೆಸರಿಸಿದ ಪದಾರ್ಥಗಳನ್ನು ಬಳಸಿ ಚಿತ್ರಾನ್ನ ತಯಾರಿಸಿಯೇ ಬಿಟ್ಟೆ. ಹೊಸತರ ಪ್ರಯೋಗ ಮಾಡೋಣವೆಂಬ ಹಂಬಲದಿಂದ ಜೀರಿಗೆ ಮತ್ತು ಮೆಣಸಿನ ಪುಡಿಯನ್ನು ಸಹ ಒಗ್ಗರಣೆಗೆ ಬೆರೆಸಿದೆ. ಇದರಿಂದ ಹೊಸದೊಂದು ರುಚಿ ದಕ್ಕಿಬಿಟ್ಟಿತು. ಹಾಗಾಗಿ ‌‘ಜ಼ೂಮ್ ಜ಼ೂಮ್ ಚಿತ್ರಾನ್ನ’ ಎಂದು ಹೆಸರಿಟ್ಟು ಜನಪ್ರಿಯಗೊಳಿಸಿದೆ. ನಾವೆಲ್ಲ ಒಟ್ಟು ಅರುವತ್ತು ಮಂದಿಯೂ ಇಷ್ಟಪಟ್ಟು ತಿನ್ನುವ ಚಿತ್ರಾನ್ನ ಮಾಡಿದ ಸಂತೋಷವನ್ನು ಅಂದು ಅನುಭವಿಸಿದೆ. ಆಗೆಲ್ಲಾ ಅಮಿತಾಬ್ ಬಚ್ಚನ್ ಮತ್ತವರ ಮಗ ಅಭಿನಯಿಸಿದ್ದ ಜ಼ೂಮ್ ಬರಾಬರ್ ಜ಼ೂಮ್ ಚಿತ್ರದ ಹಾಡು ಎಲ್ಲೆಡೆ ಸದ್ದು ಮಾಡಿತ್ತು. ಹಾಗಾಗಿ ಈ ಹೆಸರು ನಾಮಕರಣವಾಯಿತು!

ನಾನು ಪುಟ್ಟವನಿರುವಾಗ ನಮ್ಮ ತಂದೆಯವರು ಎಸ್ ಎಲ್ ಭೈರಪ್ಪನವರ ಕಾದಂಬರಿಯೊಂದನ್ನು ಓದುವಾಗ ಚಿತ್ರಾನ್ನದ್ದೊಂದು ವಿವರ ನೋಡಿ, ಅದರಂತೆ ಮನೆಯಲ್ಲಿ ಮಾಡಿಸಿದರು. ನಮ್ಮಜ್ಜಿ ಮನೆಯಲ್ಲಿ ವ್ರತದಡುಗೆ ಸಮಯದಲ್ಲಿ ಮಾಡುತಿದ್ದ ಮೆಣಸನ್ನದ ಮುಂದುವರಿದ ರೂಪವದು. ಅನ್ನ ಮಾಡಿ ಗಂಜಿ ಬಸಿದು, ಪರಾತಕ್ಕೆ ಹಾಕಿಕೊಳ್ಳಬೇಕು. ಸಾಸುವೆ, ಇಂಗು, ಒಣಮೆಣಸಿನಕಾಯಿ, ಉದ್ದಿನಬೇಳೆಯ ತುಪ್ಪದ ಒಗ್ಗರಣೆ ಮಾಡಿಕೊಂಡು, ಮೊದಲೇ ಕುಟ್ಟಿ ಪುಡಿ ಮಾಡಿಟ್ಟುಕೊಂಡಿದ್ದ ಮೆಣಸು ಮತ್ತು ಜೀರಿಗೆಯನ್ನು ಹಾಕಿ, ಹುರಿದು, ಅನ್ನಕ್ಕೆ ಕಲೆಸಿಕೊಳ್ಳುತ್ತಾ ಒಣಕೊಬ್ಬರಿ ತುರಿಯನ್ನು ಬೆರೆಸುತ್ತಾ ಉಪ್ಪು ಸೇರಿಸಿ ಕಲೆಸಬೇಕು. ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಮೆಣಸು ಜೀರಿಗೆಯ ಘಮದ ಸೊಗಡೇ ಬೇರೆ! ಅದೂ ತುಪ್ಪದ ಒಗ್ಗರಣೆಯಲ್ಲಿ ಹರಡಿದ ಗಂಧ. ನಮ್ಮ ಮನೆಯಲ್ಲಿದು ‘ಭೈರಪ್ಪನವರ ಚಿತ್ರಾನ್ನ’ವೆಂದೇ ಖ್ಯಾತಿಯಾಯಿತು. ಈಗಲೂ ಒಮ್ಮೊಮ್ಮೆ ನನ್ನ ಮಡದಿಗೆ ನೆನಪಿಸಿ, ಮಾಡಿಸಿಕೊಂಡು ತಿನ್ನುವುದು ರೂಢಿ. ಹೀಗೆ ಚಿತ್ರಾನ್ನಗಳು ಅನ್ನಕೂ ಉಳಿದ ಮಸಾಲೆ ಪದಾರ್ಥಗಳಿಗೂ ಏಕರೀತಿಯ ಮರ್ಯಾದೆಯನ್ನು ತಂದಿಡುವ ಕುಸುರಿ ಕಲೆ. ನಾರಿನಂಶ ಇರುವುದಿಲ್ಲವೆಂಬುದೊಂದನ್ನು ಬಿಟ್ಟರೆ ಉಳಿದಂತೆ ಆರೋಗ್ಯಕಾರಿಯೇ. ತರಕಾರಿಯು ಲಭ್ಯವಿಲ್ಲದಾಗ ಅಥವಾ ಅದರ ರೇಟು ಹೆಚ್ಚಿದ್ದಾಗ ಮಧ್ಯಮವರ್ಗದವರಿಗಿದ್ದ ಏಕೈಕ ದಿಢೀರ್ ಮೆನು ಇದೊಂದೇ.

ಓಗರ ಅಂದರೆ ಅನ್ನಕ್ಕೆ ಹುಳಿ, ಉಪ್ಪು ಮತ್ತು ಖಾರವನ್ನು ಬೆರೆಸಿ ಮೆನು ತಯಾರಿಸಿಕೊಳ್ಳುವುದು ಬಹಳ ಹಳೆಯ ಪದ್ಧತಿ. ಇದಕ್ಕೆ ಆನಂತರ ಹಲವು ಸಂಸ್ಕಾರಗಳು ಬೆರೆತು, ಹೊಸ ರುಚಿಗಳು ಉಗಮಿಸಿದವು. ಎಳ್ಳುಪುಡಿ ಗೊಜ್ಜನ್ನು ತಯಾರಿಸಿಕೊಂಡು ಅನ್ನಕ್ಕೆ ಕಲೆಸಿಕೊಂಡು ಎಳ್ಳುಪುಡಿ ಚಿತ್ರಾನ್ನವೆಂದರು. ಕೇವಲ ಹುಣಸೇಹಣ್ಣು, ಮೆಣಸಿನಪುಡಿ ಮತ್ತು ಬೆಲ್ಲದ ಗೊಜ್ಜಿನ ಪಾಕಕ್ಕೆ ಎಳ್ಳು ಬೆರೆಸದೇ ಒಣಕೊಬ್ಬರಿ ತುರಿ ಹಾಕಿ, ಕಡಲೇಬೀಜದ ಒಗ್ಗರಣೆ ಕೊಟ್ಟು ಕಲೆಸಿದ ಅನ್ನವು ಪುಳಿಯೋಗರೆ ಆಯಿತು. ಉದ್ದಿನಬೇಳೆಯ ಅನ್ನಕ್ಕೆ ಉಳಂದೋಗರೆ ಎಂದರು. ತೆಂಗಿನತುರಿ, ಹುಣಸೇಹಣ್ಣು ಮತ್ತು ಸಾಸುವೆಗಳನ್ನು ರುಬ್ಬಿಕೊಂಡು ಒಗ್ಗರಣೆ ಕೊಟ್ಟು ಸಿದ್ಧಪಡಿಸಿದ್ದನ್ನು ಕಾಯಿಸಾಸುವೆ ಚಿತ್ರಾನ್ನ ಎಂದು ಕರೆದರು. ಉದ್ದಿನಬೇಳೆಯನ್ನು ಹುರಿದು ಅದಕ್ಕೆ ಮೆಣಸುಪುಡಿಯನ್ನು ಸೇರಿಸಿ, ಒಣಕೊಬ್ಬರಿ ಪುಡಿ ಹಾಕಿ, ಗೋಡಂಬಿ ತುಪ್ಪದ ಒಗ್ಗರಣೆ ಕೊಟ್ಟು ಸಿದ್ಧಪಡಿಸಿದ ಅನ್ನವೇ ಉಳಂದೋಗರೆ. ನಿಂಬೆಹಣ್ಣಿನ ರಸದ ಬದಲಿಗೆ ಹೆರಳೇಕಾಯಿ ರಸ ಬಳಸಿದರೆ ಅದು ಹೆರಳೇಕಾಯಿ ಚಿತ್ರಾನ್ನ. ಹುಳಿಮಾವಿನಕಾಯಿ ತುರಿ ಹಾಕಿದರೆ ಮಾವಿನಕಾಯಿ ಚಿತ್ರಾನ್ನ. ಮಾವಿನಕಾಯಿಯನ್ನು ತುರಿದುಕೊಂಡು, ರುಬ್ಬಿ ಮಾಡುವ ಇನ್ನೊಂದು ಬಗೆಯೂ ಇದೆ. ಬೆಟ್ಟದನೆಲ್ಲಿಯಲ್ಲಿ ಚಿತ್ರಾನ್ನ ಮಾಡುವವರೂ ಇದ್ದಾರೆ. ಕಸಕಟ್ಟೆ ಸೀಬೇಕಾಯಿಯಲ್ಲಿ ಕೆಲವರು ಚಿತ್ರಾನ್ನ ಮಾಡುತ್ತಾರಂತೆ. ವಿಚಿತ್ರ ಎಂದುಕೊಂಡೆ. ಇನ್ನು ನಿಂಬೆ ಬಾತು, ಬಿಸಿಬೇಳೆಬಾತು, ರೈಸ್‌ಬಾತು, ಪುಲಾವು, ಕದಂಬ, ವಾಂಗೀಬಾತುಗಳು ಸಹ ಚಿತ್ರಾನ್ನದ ದಾಯಾದಿ ನೆಂಟರೇ! ಅದರಲ್ಲೂ ಅನ್ನವೇ ಪ್ರಧಾನ. ಪುತಿನ ಅವರ ‘ಮಸಾಲೆದೋಸೆ’ ಎಂಬ ಪ್ರಬಂಧವನ್ನು ಓದುವಾಗ ಮೊದಲ ಬಾರಿಗೆ ‘ಉಳಂದೋಗರೆ’ ಎಂಬ ಪದವನ್ನು ಕಂಡು ಚಕಿತಗೊಂಡೆ. ವೈವಿಧ್ಯಮಯವಾದ ರುಚಿಕರ ಮೆನುಗಳನ್ನು ತಯಾರಿಸಿ, ಆತ್ಮೀಯರಿಗೆಲ್ಲಾ ಆತಿಥ್ಯ ಮಾಡುವುದರಲ್ಲಿ ಪಳಗಿದ ಕೈ ಎಂದೇ ಖ್ಯಾತರಾದ ಮೈಸೂರಿನ ಸಂವೇದನಾಶೀಲ ಸಾಹಿತಿ ಶ್ರೀಮತಿ ಉಷಾನರಸಿಂಹನ್ ಅವರಲ್ಲಿ ವಿಚಾರಿಸಿದಾಗ ‘ಅಯ್ಯೋ, ಅದ್ಭುತ ಸರ್ ಅದು. ಅದೆಷ್ಟೊತ್ತು? ಈಗಲೇ ಮಾಡಿ ಕೊಡುವೆ’ ಎಂದಂದು ಸಿದ್ಧಪಡಿಸಿ ಬಡಿಸಿದರು. ಆಗಿನಿಂದ ನಾನು ಉಳದೋಂಗರೆಯ ಫ್ಯಾನ್ ಆಗಿಬಿಟ್ಟೆ! ಮೊದಲ ಬಾರಿಗೆ ‘ಕದಂಬ’ವನ್ನು ಸವಿದದ್ದೂ ಅವರ ಮನೆಯಲ್ಲಿಯೇ!

ಮೂವತ್ತು ಬಗೆಯ ದೋಸೆಗಳು ಎಂದು ಬೋರ್ಡು ಹಾಕಿಕೊಂಡಿದ್ದ ಮೈಸೂರಿನ ಹೊಟೆಲೊಂದರಲ್ಲಿ ದೋಸೆಯೊಳಗೆ ಚಿತ್ರಾನ್ನ ಹಾಕಿ ಕೊಡುತ್ತಿದ್ದರಂತೆ. ಹೊಟೆಲಿನವರ ಕಲಬೆರಕೆ ಬುದ್ಧಿಗೂ ತಿಂದವರ ವಿಲಕ್ಷಣ ರುಚಿಗೂ ನಾನು ವಂದಿಸಬೇಕೋ? ನಿಂದಿಸಬೇಕೋ? ತಿಳಿಯದೇ ಕಕ್ಕಾಬಿಕ್ಕಿಯಾದೆ. ಚಿತ್ರಾನ್ನದ ಮಾನ ಮರ್ಯಾದೆಯನ್ನು ಹೀಗೂ ತೆಗೆಯಬಹುದೇ? ಎಂದು ಆತಂಕಿತನಾದೆ. ತಿಂದು ಬಂದ ಗೆಳೆಯರಿಗೆ ಹೇಗಿತ್ತು? ಎಂದು ಕೇಳಿಬಿಟ್ಟೆ. ಅದಕ್ಕವರು ‘ದೋಸೆಗೆ ಚಿತ್ರಾನ್ನ ನಂಚಿಕೊಳ್ಳಬೇಕೋ? ಚಿತ್ರಾನ್ನಕ್ಕೆ ದೋಸೆ ನಂಚಿಕೊಳ್ಳಬೇಕೋ? ತಿಳಿಯದೇ ನಾನೂ ಪರದಾಡಿದೆ’ ಎಂದರು!

ಚಿತ್ರಾನ್ನದ್ದು ಬಣ್ಣ, ರುಚಿ ಮತ್ತು ಘಮ ಈ ಮೂರರ ತ್ರಿವೇಣಿ ಸಂಗಮ. ಸಾಸುವೆಯೊಗ್ಗರಣೆಯು ಘಮ ತಂದುಕೊಟ್ಟರೆ, ಕೊತ್ತಂಬರಿ ಮತ್ತು ಕರಿಬೇವು ಸೊಪ್ಪು ರುಚಿಯನ್ನು ಹೆಚ್ಚಿಸುವುದು. ಇನ್ನು ಹುಣಸೇಹಣ್ಣು ಮತ್ತು ಅರಿಶಿನಗಳು ಬಣ್ಣವನ್ನು ನಿರ್ಧರಿಸುವುವು. ಹೀಗೆ ಬರಿಯ ಬಿಳಿಯನ್ನಕ್ಕೊಂದು ಘನತೆಯನ್ನೂ ಮಮತೆಯನ್ನೂ ತಂದಿಡುವ ಇವುಗಳ ಪಾತ್ರ ಗಣನೀಯ. ತುಪ್ಪದ ಒಗ್ಗರಣೆಯ ಜೊತೆಗೆ ಕಲೆಸುವಾಗ ಅರ್ಧ ಚಮಚೆ ಕಡಲೇಕಾಯಿ ಎಣ್ಣೆ ಬಳಸಿಕೊಂಡರೆ ಚಿತ್ರಾನ್ನದ ಘಮಲು ಸಪ್ತ ಲೋಕಗಳನು ದಾಟಿ, ಅಲ್ಲೆಲ್ಲೋ ಇರಬಹುದಾದ ಇಂದ್ರಾದಿ ವರುಣ ದೇವತೆಗಳ ಸಮಸ್ತ ಅವಯವಗಳನ್ನು ಬಡಿದೆಬ್ಬಿಸುವುದು ಖಚಿತ! ಅದಿರಲಿ, ಸರಿಯಾದ ರೀತಿಯಲ್ಲಿ ಮಾಡಿದರೆ ಚಿತ್ರಾನ್ನವು ನಮ್ಮ ನೆರೆಹೊರೆಯವರನ್ನು ಎಚ್ಚರಿಸುವುದಂತೂ ಖಂಡಿತ. ಬದುಕನ್ನು ವರ್ಣರಂಜಿತವಾಗಿಸಿಕೊಳ್ಳಲು ಚಿತ್ರಾನ್ನವನ್ನು ನೋಡಿ ಕಲಿಯಬೇಕೆಂದು ಒಮ್ಮೊಮ್ಮೆ ಅನಿಸುತ್ತದೆ. ಚಿತ್ರಾನ್ನದಲಿ ಬೆರೆತ ಒಂದೊಂದೂ ಇನ್‌ಗ್ರಿಡಿಯಂಟ್ಸಿನದು ಒಂದೊಂದು ಬಗೆಯ ಬಣ್ಣ, ಒಂದೊಂದು ಬಗೆಯ ಟೇಸ್ಟು. ಆದರೆ ಇವು ಅನ್ನದೊಂದಿಗೆ ಸೇರಿ ಸಮರಸಗೊಂಡು ಹೊಸದೊಂದು ರುಚಿಯನ್ನು ನಾಲಗೆಗೆ ಕೊಡುವಾಗ ನನಗೆ ನಮ್ಮ ಭಾರತೀಯ ಸಂಸ್ಕೃತಿಯೇ ನೆನಪಾಗುತ್ತದೆ. ‘ವಿವಿಧತೆಯಲ್ಲಿ ಏಕತೆ’ ಎಂದು ಬಣ್ಣಿಸುವಾಗಲೆಲ್ಲಾ ಚಿತ್ರಾನ್ನ ನೆನಪಾಗಿ, ಉದರದಲ್ಲೊಂದು ಹಸಿವಿನ ಕೂಗು ಮೆಲ್ಲಗೆ ಹೆಚ್ಚಾಗುತ್ತಾ ಬರುತ್ತದೆ. ಅದಕ್ಕೆ ತಕ್ಕಂತೆ ‘ಈ ರಾತ್ರಿಗೆ ಏನು ಮಾಡಲಿ? ಹೆರಳೇಕಾಯಿ ಚಿತ್ರಾನ್ನ ಆದೀತೇ?’ ಎಂಬ ನನ್ನ ಪ್ರಿಯ ಮಡದಿಯ ಮೆಸೇಜು ನನ್ನ ವಾಟ್ಸಾಪಿಗೆ ಬಂದರಂತೂ ನನಗೆ ‘ಸ್ವರ್ಗಕ್ಕೆ ಕಿಚ್ಚು ಹಚ್ಚು ; ಬಗೆಬಗೆಯ ಕಲಸನ್ನವೇ ನಿನ್ನ ಹುಚ್ಚು!’ ಎಂದು ಯಾರೋ ಪಿಸುಗುಟ್ಟಿದಂತಾಗಿ ಮನೆಯ ಕಡೆ ದೌಡಾಯಿಸುತ್ತೇನೆ.

ಡಾ. ಹೆಚ್ ಎನ್ ಮಂಜುರಾಜ್, ಮೈಸೂರು                                                                          

22 Responses

  1. Anonymous says:

    ಪ್ರಕಟಿಸಿದ ಸುರಹೊನ್ನೆಯೇ, ನಿನಗೆ ಸಾವಿರದ ಪ್ರಣಾಮ !

    • Hema Mala says:

      ಬಹಳ ಸೊಗಸಾದ ‘ರುಚಿಕರ’ವಾದ ಬರಹಗಳನ್ನು ಸೃಷ್ಟಿಸುತ್ತಿರುವ ತಮಗೂ ಧನ್ಯವಾದಗಳು. ಅಂದ ಹಾಗೆ , ಈವತ್ತು ನಮ್ಮ ಮನೆಯಲ್ಲಿ ‘ನೆಲ್ಲಿಕಾಯಿ ಚಿತ್ರಾನ್ನ’ ಮಾಡಿದೆ!

      • MANJURAJ H N says:

        ನಿಮ್ಮ ಸ್ಪಂದನೆಗೆ ಧನ್ಯವಾದ ಮೇಡಂ. ನೆಲ್ಲಿಕಾಯಿ ಚಿತ್ರಾನ್ನವೇ !

        ಓಹ್!‌ ಆಹಾರ ಬೇರೆಯಲ್ಲ; ಆರೋಗ್ಯ ಬೇರೆಯಲ್ಲ ಎಂಬುದಕದು ಸಾಕ್ಷಿ.
        ಆಯುರ್‌-ವೇದವೇ ಅದರೊಳು ಅಡಗಿ ಹೊಗರಾಗಿದೆ. ನಿಮ್ಮ ಮನೆಯ
        ಸ್ವಾದಿಷ್ಟವನು ಈ ಮೂಲಕ ನಮಗೂ ಉಣಬಡಿಸಿದ್ದೀರಿ. ಖುಷಿಯಾಯಿತು.
        ಇನ್ನೊಮ್ಮೆ ಅಭಿ – ವಂದನೆ.

  2. ವೆಂಕಟಾಚಲ says:

    ರುಚಿಕರ ಚಿತ್ರಾನ್ನದಂತೆ ರುಚಿಕರ ಬರೆಹ

    • MANJURAJ H N says:

      ಧನ್ಯವಾದಗಳು ಸ್ನೇಹಿತರೇ. ಒಟ್ಟಿನಲ್ಲಿ ನಿಮಗೂ ಚಿತ್ರಾನ್ನ ಇಷ್ಟವೆಂದಾಯಿತು.

  3. ಸಾರ್ ನಿಮ್ಮ ಅಡಿಗೆವರ್ಣನೆ ಮನಕ್ಕೂ ಮುದ…ನಾಲಿಗೆಯಲ್ಲಿ ನೀರು ತರಿಸಿತು ನೀವು ಏನೃ ಹೇಳಿ ಚಿತ್ರಾನ್ನದ ಮುಂದೆ..ಮಿಕ್ಕಿದೆಲ್ಲಾ ಗೌಣ ನನಗೆ….ಒಳ್ಳೆಯ..ರುಚಿಭರಿತ ಲೇಖನ.. ಸಾರ್

    • MANJURAJ H N says:

      ಹೌದಾ ಮೇಡಂ, ಧನ್ಯವಾದಗಳು.
      ನಿಮಗೂ ಇಂಥ ಕಲಸನ್ನಗಳು
      ಇಷ್ಟವೆಂದಾಯಿತು. ನನ್ನದೂ ಇದೇ ಗೋತ್ರ ;
      ಚಿತ್ರಾನ್ನದ್ದು ಮಹತ್ವದ ಪಾತ್ರ !

  4. ಪದ್ಮಾ ಆನಂದ್ says:

    ವಿವಿಧ ಬಗೆಯ ಚಿತ್ರಾನ್ನಗಳ ಸವಿಯನ್ನು ಅಕ್ಷರ ರೂಪದಲ್ಲಿ ಸೆರೆಹಿಡಿದು, ಉಣಬಡಿಸಿ, ರಸಧೂತಗಳನ್ನು ಬಡಿದೆಬ್ಬಿಸಿ ಈಗಲೇ ಬಾಂಡಲೆಯನ್ನಿಟ್ಟು ಸಂಡಿಗೆ ಪುಡಿಯ ಚಿತ್ರಾನ್ನ ಮಾಡಲು ಹೊರಟೆ, ಹೊತ್ತಾಯಿತು, ನಮಸ್ಕಾರ.

    • MANJURAJ H N says:

      ಓಹ್!‌ ಸಂಡಿಗೆಪುಡಿಯ ಚಿತ್ರಾನ್ನ !!

      ಒಗ್ಗರಣೆಯ ಚಟಪಟ ಸದ್ದಿಗಿಂತಲೂ ಘೋರ ಭೀಕರ
      ಅದರ ಸಶಬ್ದ! ಕಲಸಿಕೊಳ್ಳುವಾಗಲೂ ತಿನ್ನುವಾಗಲೂ
      ಅದರ ಪ್ರತಿಧ್ವನಿ ಅಕ್ಕಪಕ್ಕದವರಿಗೆಲ್ಲಾ ಎಚ್ಚರಿಕೆ.

      ಅವರೂ ತಿನ್ನಬೇಕು ಅಥವಾ ತಿನ್ನುವುದನ್ನು ಕೇಳಬೇಕು.
      ಅಷ್ಟೇ ಅವರಿಗಿರುವ ಆಯ್ಕೆ………

      ನೀವು ಹೊತ್ತಾಯಿತು ಎಂದಾಗಲೇ ಗೊತ್ತಾಯಿತು:
      ನೀವೂ ಚಿತ್ರಾನ್ನದ ವಂಶಸ್ಥರೇ ಎಂದು. ಆಲ್‌ ದ ಬೆಸ್ಟ್‌.

      ತಪ್ಪದೇ ಓದಿ, ಅಭಿಪ್ರಾಯಿಸಿ, ಮೆಚ್ಚಿದ್ದಕೆ ಧನ್ಯವಾದ ಮೇಡಂ

    • Hema Mala says:

      ಅಬ್ಬಾ, ಚಿತ್ರಾನ್ನಗಳಲ್ಲಿ ಅದೆಷ್ಟು ವೈವಿಧ್ಯ! ‘ಸಂಡಿಗೆ ಪುಡಿ’ ಚಿತ್ರಾನ್ನ? ಈ ಹೆಸರನ್ನು ನಾನು ಇದೇ ಮೊದಲ ಬಾರಿ ಕೇಳುತ್ತಿದ್ದೇನೆ. ಸಾಧ್ಯವಾದರೆ ರೆಸಿಪಿ ತಿಳಿಸಿ ಮೇಡಂ.

  5. ಮುಕ್ತ c. N says:

    ಸೊಗಸಾಗಿದೆ. ಚಿತ್ರಾನ್ನ ತಿಂದಷ್ಟೇ ಖುಷಿಯಾಯಿತು.

  6. ಶಂಕರಿ ಶರ್ಮ says:

    ವೈವಿಧ್ಯಮಯ ಚಿತ್ರಾನ್ನಗಳೇ ತುಂಬಿ ತುಳುಕುವ ಲೇಖನವು ಪರಿಮಳ ಬೀರುವ, ರುಚಿಕರವಾದ, ಈ ಖಾದ್ಯದಷ್ಟೇ ಸ್ವಾದಿಷ್ಟವಾಗಿದೆ. ಧನ್ಯವಾದಗಳು ಸರ್.

  7. ನಯನ ಬಜಕೂಡ್ಲು says:

    ಬಹಳ ಸರಳವಾದ ವಿಚಾರಗಳನ್ನು ಕುತೂಹಲ ಮೂಡುವಂತೆ ಬರೆಯುತ್ತೀರಿ. ಸೊಗಸಾಗಿದೆ.

    • MANJURAJ H N says:

      ನಿಮ್ಮ ಮಾತು ನಿಜ. ನನ್ನದು ಸ್ವಭಾವೋಕ್ತಿ. ಇಷ್ಟು ದಿವಸ ಬರೆಯದೇ ಸುಮ್ಮನಿದ್ದೆ ಅಷ್ಟೇ!
      ಪ್ರಕಟಪಡಿಸುವ ಸುರಹೊನ್ನೆ ಇರುವಾಗ ನಿಮ್ಮಂಥ ಸಹೃದಯರು ಸಿಗುವಾಗ
      ಬರೆಯದೇ ಹೇಗಿರಲಿ. ತುಂಬ ಕಷ್ಟವಾಗುತ್ತದೆ. ಹಾಗಾಗಿ ಬರೆದು ಬದುಕನ್ನು ಬದುಕುತ್ತಿದ್ದೇನೆ!!

      ನಿಮ್ಮ ಪ್ರತಿಸ್ಪಂದನದ ಅಂತರಾಳದಲಿರುವ ಕಾಳಜಿ ಮತ್ತು ಪ್ರಶಂಸೆಗಳನು ನಾನು ಅರಿತೆ.
      ಅನಂತ ಪ್ರಣಾಮಗಳು ಮೇಡಂ. ನೀವು ತಪ್ಪದೇ ಎಲ್ಲರ ಬರೆಹಗಳನ್ನು ಓದಿ ಅಭಿಪ್ರಾಯಿಸುವ
      ಶಿಸ್ತನ್ನು ನಾನು ಬಹುವಾಗಿ ಮೆಚ್ಚಿರುವೆ. ಅದಕಾಗಿ ಇನ್ನೊಂದು ಧನ್ಯವಾದ.

  8. Sandhya says:

    Jwarada baayige chitranna nodi tindashte sambhramavaaytu. Sandige pudi chitranna gothilla. Menu please madam.

    • MANJURAJ H N says:

      ಹೌದೇ ಮೇಡಂ, ಧನ್ಯವಾದಗಳು.

      ಸಂಡಿಗೆಪುಡಿ ಚಿತ್ರಾನ್ನ ನೆನಪಿಸಿದ ಪದ್ಮಾ ಮೇಡಂ
      ಪ್ರತಿಕ್ರಿಯೆಯಿಂದಾಗಿ ಚೇತನಾಚೇತನಗಳೂ ಧಿಗ್ಗನೆ
      ಮೇಲೆದ್ದು ಬಂದು ಹಾಹಾಕರಿಸುತ್ತಿವೆ ! ಬನ್ನಿ, ಅವರ
      ಮನೆಗೇ ಒಟ್ಟಿಗೆ ದಾಳಿಯಿಡೋಣ !!

  9. ಆರ್.ಬಿ.ಪುಟ್ಟೇಗೌಡ says:

    ಚಿತ್ರಾನ್ನದ ಬಗ್ಗೆ ವಿವರವಾಗಿ ಪ್ರಕಟಿಸಿದ್ದಾರೆ ಧನ್ಯವಾದಗಳು ಸರ್

  10. Dr. HARSHAVARDHANA C N says:

    Nice article sir

  11. Chaitra umashankar says:

    ತುಂಬಾ ಸುಂದರ ಹಾಗೂ ರುಚಿಕರವಾದ ಬರೆಹ… ಚಿತ್ರಾನ್ನದ ಬಗ್ಗೆ ಇಷ್ಟು ಸವಿಯಾದ ವಿಚಾರ ತಿಳಿದಿರಲಿಲ್ಲ. ಅಂದ ಹಾಗೆ ನನ್ನ ಹೆಸರು ಚಿತ್ರ. ಯಾರಾದರೂ ನನ್ನ ಚಿತ್ರಾನ್ನ ಅಂತ ಕರೆದರೆ ಕೋಪ ಬರುತ್ತಿತ್ತು. ಆದರೆ ಈಗ ತುಂಬಾ ಸ್ಪೆಷಲ್‌ ಅನಿಸುತ್ತಿದೆ. ಧನ್ಯವಾದಗಳು ಸರ್.‌ ನಿಮ್ಮ ಬರವಣಿಗೆಗೆ ನಾನೆಂದೂ ಫಿದಾ!!!

    • MANJURAJ H N says:

      ನಿಮ್ಮ ಸಂತಸದ ಕಮೆಂಟಿಗೆ ಧನ್ಯವಾದ ಮೇಡಂ.

      ಈಗ ಚಿತ್ರಾನ್ನ ತಿನ್ನುವಾಗೆಲ್ಲಾ ನೀವೇ ನೆನಪಾಗುತ್ತೀರಿ!
      ಇಷ್ಟು ದಿನ ಹೊಳೆದಿರಲಿಲ್ಲ; ನೀವೇ ತಿಳಿಸಿದಂತಾಯಿತು!!

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: