ಒಂದು ಗುಟ್ಟು, ಒಂದು ನಿಜ….

Share Button

 

ವಿದ್ಯಾರ್ಥಿಗಳು ಒಂದೇ ಸಮನೆ ಮಾತಾಡಿ ಗದ್ದಲ ಮಾಡುತ್ತಿದ್ದರು, ಪ್ರಾಂಶುಪಾಲರು ಶೈಲಜಾ ಮೇಡಂನ ಕರೆದು “ನೋಡ್ರೀ, ಮಕ್ಕಳು ಏನೋ ಕಿರಾಚುಡುತ್ತಿದ್ದಾರೆ. ಏನಾಯ್ತು ನೋಡೀ!” ಎಂದರು. ಶೈಲಜಾ, ಆ ಕಾಲೇಜಿನ ಇಂಗ್ಲೀಷ್ ಟೀಚರ್, ಅವರನ್ನು ನೋಡಿದ್ರೇನೇ ಸ್ಟೂಡೆಂಟ್ಸ್ ಸಪ್ಪಗಾಗ್ತರೆ. ಹಾಗಂತ ತುಂಬಾ ಸ್ಟ್ರಿಕ್ಟ್ ಕೂಡ ಅಲ್ಲ. ಯಾವ ವಿದ್ಯಾರ್ಥಿಯನ್ನು ಹೇಗೆ ಹಿಡಿತದಲ್ಲಿಟ್ಟುಕೊಳ್ಳಬೇಕು ಅಂತ ಗೋತ್ತಿರೋ ಲೆಕ್ಚರರ್. “ಎಸ್ ಸರ್, ಐ ವಿಲ್ ಟೇಕ್ ದಿ ಕ್ಲಾಸ್” ಎಂದವರೇ ಆ ಕ್ಲಾಸ್‌ನತ್ತ ನಡೆದರು.

classroomಅದು ಕೊನೆಯ ವರ್ಷದ ಬಿಬಿ‌ಎಮ್ ತರಗತಿ. ಎಲ್ಲರೂ ಹೇಳೋ ಹಾಗೆ ‘ಸಂಭಾಳಿಸೋಕೆ ಆಗದ’ ತರಗತಿ. ಕ್ಲಾಸ್‌ನೊಳಗೆ ಬರುತ್ತಿದ್ದಂತೆ ಅಲ್ಲಲ್ಲಿ ಚದುರಿದ್ದ ವಿದ್ಯಾರ್ಥಿಗಳು ‘ಗಪ್‌ಚಿಪ್’ ಎನ್ನದೇ ಕುಳಿತುಬಿಟ್ಟರು. ಒಮ್ಮೆ ತನ್ನ ಕನ್ನಡಕವನ್ನು ಸರಿಪಡಿಸಿಕೊಂಡು ಎಲ್ಲರತ್ತ ತೀಕ್ಷ್ಣವಾದ ನೋಟ ಬೀರಿ, ಗಟ್ಟಿಯಾಗಿ, “ವಾಟ್ ಈಸ್ ಯುವರ್ ಪ್ರಾಬ್ಲಂ?” ಎಂದು ಕೇಳಿದರು. ಯಾರೂ ಉತ್ತರಿಸಲಿಲ್ಲ. ಮತ್ತೆ ದನಿ ತಗ್ಗಿಸಿ ಸೌಮ್ಯವಾದ ದನಿಯಲ್ಲಿ ಕೇಳಿದರು “ಏನಾಯ್ತು? ಯಾಕೆ ಹೀಗೆ ಕಿರುಚಾಡುತ್ತಿದ್ದೀರಿ?” ಕೊನೆಯ ಬೆಂಚಿನ ಕೃಷ್ಣ ನಿಧಾನವಾಗಿ ಎದ್ದು ನಿಂತು, “ನಥಿಂಗ್ ಮೇಡಂ! ಇವತ್ತು ಕಾಲೇಜಿನ ಕೊನೆಯ ದಿನ. ಲೆಸ್ಸನ್, ರಿವಿಜನ್ ಎಲ್ಲಾ ಮುಗಿದಿದೆ, ಹಂಗಂತ ಸ್ವಲ್ಪ ಎಂಜಾಯ್ ಮಾಡ್ತಿದ್ವಿ”.

ಎಲ್ಲರ ಮುಖದಲ್ಲೂ ಮಂದಸ್ಮಿತ. ಗಟ್ಟಿಯಾಗಿ ನಗುವ ಧೈರ್ಯವೂ ಮಾಡಲಿಲ್ಲ.

“ಎಂಜಾಯ್ ಮಾಡೋಕೆ, ಕಾಲೇಜಿಗೆ ಬರ್‍ತೀರಾ? ಹೊರಗಡೆ ನಿಮಗೆ ಎಷ್ಟೊಂದು ಅವಕಾಶ ಇದೆ. ಕಾಲೇಜಿಗೆ ಬಂದು ಶಿಸ್ತು ಹಾಳು ಮಾಡ್ತಿರಾ ಅಲ್ವಾ?” ಕಣ್ಣರಳಿಸಿ ಮೇಡಂ ಕೇಳಿದರು. ಕೃಷ್ಣ ಕಲಿಯುವುದರಲ್ಲಿ ಸೋಮಾರಿ. ಆದ್ರೆ ಉಳಿದೆಲ್ಲಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ‘ಕಿಲಾಡಿ ಕೃಷ್ಣ’ ಅಂತಲೇ ಫೇಮಸ್ಸು. ಈಗ ಕೃಷ್ಣ ಮೌನವಾಗಿದ್ದ.

ಮೇಡಂ ಮತ್ತೆ ಕೇಳಿದರು, “ಎಷ್ಟು ಸಬ್ಜೆಕ್ಟ್ ಬಾಕಿ ಉಳಿಸಿದ್ದೀಯಾ?” ಖಾರವಾಗಿ ಪ್ರಶ್ನೆ ಹಾಕಿದರು.

ಕೃಷ್ಣ ತಲೆ ತಗ್ಗಿಸಿಯೇ ಉತ್ತರಿಸಿದ “ಎರಡು ಮೇಡಂ.” “ಅದರಲ್ಲಿ ಒಂದು ನನ್ನ ಸಬ್ಜೆಕ್ಟ್ ಅಲ್ವಾ? ಇಂಗ್ಲೀಷ್ ಮಾತಾಡಿ ಅಂತ ಹೇಳಿದ್ರೂ ನೀವು ಕೇಳಲ್ಲ. ಗ್ರಾಮರ್ ಓದಿ ಅಂದ್ರೂ ಓದಲ್ಲ. ಮುಂದೇನ್ಮಾಡ್ಬೇಕೂಂತ ಇದ್ದೀಯಾ?” “ಸ್ವಂತ ಬ್ಯುಸಿನೆಸ್ ಮಾಡ್ಬೆಕೂಂತ ಇದ್ದೀನಿ” ಇದ್ದ ಧೈರ್ಯವನ್ನೆಲ್ಲಾ ಒಟ್ಟು ಮಾಡಿ ಮೆಲ್ಲನೆ ಉತ್ತರಿಸಿದ. ಈಗಂತೂ ಎಲ್ಲಾ ಗೊಳ್ಳನೆ ನಕ್ಕರು. ಶೈಲಜಾ ಮೇಡಂ ಗರಂ ಆಗ್ತಾರೆ ಅಂತಂದ್ರೆ ಇಲ್ಲ! ಅವರ ಮೊಗದಲ್ಲೂ ನಗುವಿತ್ತು.

“ನಿನ್ನ ನಿರ್ಧಾರವೇನೋ ಒಳ್ಳೆಯದೇ, ಆದ್ರೆ ಎಷ್ಟರಮಟ್ಟಿಗೆ ನಿನಗೆ ನಿನ್ನ ಮೇಲೆ ನಂಬಿಕೆಯಿದೆಯೋ ಅಷ್ಟರವರೆಗೆ ಯಶಸ್ಸು ನಿನ್ನ ಪಾಲಾಗುತ್ತದೆ. ಈಗ ನಿಮಗೊಂದು ಸಣ್ಣ ನೈಜ ಘಟನೆಯೊಂದನ್ನು ಹೇಳುತ್ತೇನೆ.” ಎಂದವರೇ ಕೃಷ್ಣನಿಗೆ ಕುಳಿತುಕೊಳ್ಳಲು ಕೈಸನ್ನೆ ಮಾಡಿದರು.

ಒಂದು ದಿನ ನನ್ನ ಸ್ಕೂಟಿ ಕೆಟ್ಟು ಹೋಯ್ತೂಂತ ರಿಪೇರಿಗೆ ಕೊಟ್ಟಿದ್ದೆ. ಆ ಶೋರೂಂನವರು ನನಗೆ ಚೆನ್ನಾಗೇ ಪರಿಚಯದವರು. ಹಾಗಾಗಿ ಒಬ್ಬ ಹುಡುಗನನ್ನು ಕರೆದು ಇವತ್ತು ಸಂಜೆಯೊಳಗೆ ರಿಪೇರಿ ಮಾಡಿಕೊಡು ಅಂತ ಹೇಳಿದರು. ಸಂಜೆ ಹೊತ್ತಿಗೆಲ್ಲಾ ಸ್ಕೂಟಿ ತಯಾರಿರಬೇಕು ಅಂತ ನಾನೂ ಕೂಡ ಹೇಳಿ ಬಂದೆ. ಯಾವುದಕ್ಕೂ ಇರಲಿ ಅಂತ ಆ ಹುಡುಗನ ಫೋನ್ ನಂಬರ್ ಕೇಳಿದೆ. ಸಂಜೆಯಾಗುತ್ತಲೇ, ಫೋನಾಯಿಸಿದಾಗ “ಮೇಡಂ ತುಂಬಾ ಕೆಲ್ಸ ಇದೆ ನಿಮ್ಮ ಸ್ಕೂಟೀಲಿ; ಬಹುಶಃ ಎರಡು ದಿನ ಬೇಕಾಗಬಹುದು.” ಎಂದ ನಾನು ಹೊಸ ಕಾರು ಬುಕ್ ಮಾಡಿದ್ದೆ; ಅದು ಇದೇ ಸಮಯದಲ್ಲಿ ಬಂದಿದ್ದರಿಂದ ಕಷ್ಟ ಅನ್ನಿಸಲಿಲ್ಲ. ಎರಡು ದಿನ ಬಿಟ್ಟು ಮತ್ತೆ ಫೋನ್ ಮಾಡಿದೆ, ಅವನು ಮತ್ತೆ ಅದೇ ರಾಗ ಎಳೆದ. “ಬರುವ ವಾರದಲ್ಲಿ ಖಂಡಿತಾ ಆಗುತ್ತೆ” ಎಂದ. ಕೆಲಸದ ಒತ್ತಡದಲ್ಲಿ ಒಂದು ತಿಂಗಳು ಕಳೆಯಿತು.

ಈ ಬಾರಿ ನೇರವಾಗಿ ಶೋರೂಂ ಕಡೆಗೆ ಹೋದೆ. ಮೇನೇಜರ್ ಬಳಿ ವಿಚಾರಿಸಿದಾಗ ಸತ್ಯ ತಿಳಿಯಿತು. ಅವನು ನನ್ನ ಸ್ಕೂಟಿಯನ್ನು ಆವತ್ತೇ ರಿಪೇರಿ ಮಾಡಿಯಾಗಿದೆ ಎಂದು. ಆದರೆ ಆ ಹುಡುಗ ಕೆಲಸ ಬಿಟ್ಟನಂತೆ ಕಾರಣ ಏನು? ಗೊತ್ತಿಲ್ಲ! ನನ್ನೊಂದಿಗೆ ವಿಷಯ ಮುಚ್ಚಿಟ್ಟದ್ದಕ್ಕೆ ನಖಶಿಖಾಂತ ಕೋಪ ಬಂದಿತ್ತು. ಮತ್ತೆ ಫೋನಾಯಿಸಿದೆ. ಈ ಬಾರಿ ಸ್ವಿಚ್ಛ್ ಆಫ್ ಬಂತು. ಏನೂ ಮಾಡಲಾಗದೆ ಸುಮ್ಮನಾದೆ. ಸುಮಾರು ಒಂದು ತಿಂಗಳು ಕಳೆದಿರಬಹುದು. ಕಾಲಿಂಗ್ ಬೆಲ್ ಬಾರಿಸಿತೆಂದು ಬಾಗಿಲು ತೆರೆದೆ. ಬಾಗಿಲು ಮುಂದೆ ಚೆನ್ನಾಗಿ ಡ್ರೆಸ್‌ಮಾಡಿಕೊಂಡ ಒಬ್ಬ ಹುಡುಗ ಮುಗುಳುನಗೆಯೊಂದಿಗೆ ನಿಂತಿದ್ದ. ತಕ್ಷಣ ಗುರುತುಮಾಡಿಕೊಂಡೆ ಅದೇ ಹುಡುಗ. ಎಲ್ಲಿಲ್ಲದ ಕೋಪ ಬಂದು ಸರಿಯಾಗಿ ಬೈದು ಬಿಟ್ಟೆ, ಆದರೂ ಅವನು ಅದೇ ಮುಗುಳುನಗೆಯೊಂದಿಗೆ ನಿಂತಿದ್ದ. ಕೊನೆಗೆ ಅವನೇ ಮಾತನಾಡಿದ.

“ಮೇಡಂ. ನನ್ನನ್ನು ಕ್ಷಮಿಸಿ! ನಿಜವಾಗಿಯೂ ನಾನು ತಪ್ಪು ಮಾಡಿದ್ದೇನೆ. ಆದರೆ ನಿಮ್ಮಿಂದ ನನ್ನ ಜೀವನದಲ್ಲಿ ಹೊಸ ತಿರುವು ಸಿಕ್ಕಿತು” ಎಂದು ತನ್ನಲ್ಲಿದ್ದ ಒಂದು ದಪ್ಪ ಪುಸ್ತಕವನ್ನು ಹಿಂತಿರುಗಿಸಿದ. “ಆ ಪುಸ್ತಕ ನೋಡುತ್ತಲೇ ನೆನಪಾಯ್ತು. ಸ್ವಾಮಿ ವಿವೇಕಾನಂದರ ನೂರೈವತ್ತನೇ ಜಯಂತಿಯಂದು ನನಗೆ ಸನ್ಮಾನ ಸಮಾರಂಭದಲ್ಲಿ ಕೊಟ್ಟಿದ್ದ ಪುಸ್ತಕ.” ಗಂಟಲು ಸರಿಪಡಿಸಿಕೊಂಡು ಮತ್ತೆ ಹೇಳಿದ. ಆವತ್ತು ನೀವು ಸ್ಕೂಟಿಯಲ್ಲಿ ಈ ಪುಸ್ತಕವನ್ನು ಮರೆತು ಬಂದಿದ್ರಿ. ಅದನ್ನು ಓದಿದಾಗ ನನಗೆ ಆತ್ಮವಿಶ್ವಾಸವಿತ್ತು. ಏನನಾದರೂ ಸಾಧಿಸುವ ಛಲ ಬೆಳೆಯಿತು. ಓದುತ್ತಾ ಓದುತ್ತಾ ವಿವೇಕಾನಂದರ ಮಾತುಗಳು ನನ್ನನ್ನು ಜಾಗೃತಗೊಳಿಸಿದುವು. ಅದಕ್ಕೆ ನೀವು ಎಲ್ಲಿಯಾದರೂ ಸ್ಕೂಟಿ ತೆಗೆದುಕೊಂಡು ಹೋಗಲು ಬಂದಲ್ಲಿ ನನಗೆ ಈ ಪುಸ್ತಕವನ್ನು ಓದಲಾಗುತ್ತಿರಲಿಲ್ಲವೆಂದು ಸುಳ್ಳು ಹೇಳಿದೆ. ಈವಾಗ ನಾನು ಒಂದು ಸ್ವಂತ ಉದ್ಯಮವೊಂದನ್ನು ಶುರುಮಾಡಿದೇನೆ. ಈ ಎರಡು ತಿಂಗಳಲ್ಲಿ ಅದೆಷ್ಟೋ ಬದಲಾಗಿದ್ದೇನೆ. ಸ್ವಾವಲಂಬಿಯಾಗಿ ಕಷ್ಟಪಷ್ಟು ದುಡಿಯುವವರಿಗೆ ಆತ್ಮವಿಶ್ವಾಸ ತುಂಬುತ್ತಿದ್ದೇನೆ ಎಂದು ಹೇಳಿದ. ಅಂದು ಅವನ ಮಾತು ಕೇಳಿ ನನಗೆ ಅತೀವ ಸಂತಸವಾಗಿತ್ತು. ಬಹುಶಃ ನಾನು ಆ ಪುಸ್ತಕವನ್ನು ನನ್ನ ಜೊತೆಯೇ ಕೊಂಡು ಬಂದಿದ್ದರೆ ಒಬ್ಬ ಪ್ರಾಮಾಣಿಕತೆಯ ಹುಡುಗನ ಬಾಳು ಬೆಳಗುತ್ತಿರಲಿಲ್ಲವೇನೋ….!

ಸುದೀರ್ಘವಾಗಿ ಮಾತನಾಡಿದ ಶೈಲಜಾ ಮೇಡಂ ಒಮ್ಮೆ ಎಲ್ಲರತ್ತ ದಿಟ್ಟಿಸಿದರು. ಅವರ ಕಣ್ಣಲ್ಲಿ ಏನೋ ಹೊಳಪು ಕೃಷ್ಣನ ಕಣ್ಣಲ್ಲಂತೂ ಆತ್ಮವಿಶ್ವಾಸದ ಬೆಳಕು ಪ್ರಜ್ವಲಿಸುತ್ತಿತ್ತು.

 

– ಅಶೋಕ ಕೆ. ಜಿ. ಮಿಜಾರ್.

3 Responses

  1. Hema says:

    Very Inspiring story…

  2. smitha Amrithraj says:

    ಕತೆಯ ಆಶಯ ಹಿಡಿಸಿತು-ಸ್ಮಿತಾ

  3. savithri s.bhat. says:

    ಚೆನ್ನಾದ ಬರವಣಿಗೆ. ಹಾಗೂ ಕಥೆ. ಷಡಕ್ಷರಿಯವರ ಕಥೆ ನೆನಪಾಯಿತು,

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: