ಐವತ್ತರ ಮೇಲೆ ಆವರಿಸಿಕೊಳ್ಳುವ ಆಲ್ಜೀಮರ್‍ಸ್ ಕಾಯಿಲೆ

Share Button

‘ನನ್ನನ್ನು ಮೈಸೂರಿಗೆ ಕರೆದುಕೊಂಡು ಹೋಗು’ ಎಂದು ಕೆಲವು ದಿನಗಳಿಂದ ಮಗನ ಜೊತೆ ವರಾತ ಹಿಡಿದಿದ್ದರು ವೆಂಕಟೇಶರಾಯರು. ಮಗ ಸುರೇಶನಿಗೆ ಅಪ್ಪನಿಗೆ ತಿಳಿಹೇಳಿ ಸಾಕೋ ಸಾಕಾಗಿತ್ತು. ಅಪ್ಪ, ನೀವು ಮೈಸೂರು ಮನೆಯಲ್ಲೇ ಇದ್ದೀರ. ಇನ್ನೆಲ್ಲಿಯ ಮೈಸೂರು? ಅದಕ್ಕೆ ತಂದೆ ಉತ್ತರ ಇಲ್ಲ ನಾವು ಬೆಂಗಳೂರಿನಲ್ಲಿದ್ದೇವೆ. ಇದು ಮೈಸೂರು ಅಲ್ಲ, ನಮ್ಮ ಮನೆಯೂ ಅಲ್ಲ, ನನ್ನ ಕರೆದುಕೊಂಡು ಹೋಗು. ಸ್ವಲ್ಪ ದಿನದಲ್ಲೇ ಅಪ್ಪ ಟ್ರಂಕಿನಲ್ಲಿ ತಮ್ಮ ಕೆಲವು ಬಟ್ಟೆಗಳನ್ನೂ ಹಾಕಿ ಸಿದ್ಧಮಾಡಿಕೊಂಡರು. ಸುರೇಶನಿಗೆ ಒಮ್ಮೆ ಬೆಂಗಳೂರಿನಲ್ಲಿರುವ ಅಣ್ಣನ ಮನೆಗೆ ತಂದೆಯನ್ನು ಕರೆದುಕೊಂಡು ಹೋಗಿ, ಮತ್ತೆ ಮೈಸೂರಿಗೆ ಬಂದರೆ ಹೇಗೆ ಎನ್ನಿಸಿತು. ಸರಿ, ಅರವತ್ತರ ಹತ್ತಿರದ ತಂದೆಯವರಿಗೆ ಸರಿ ಹೋಗಬಹುದೆಂದು ಬೆಂಗಳೂರು ಟ್ರಿಪ್ ಮಾಡಿಸಿದ್ದಾಯಿತು. ವಾಪಸ್ ಮೈಸೂರಿನ ಮನೆಗೆ ಬಂದಾಯಿತು. ಆದರೂ ಅವರ ಮನಸ್ಸಿನಲ್ಲಿ ಇದು ಮೈಸೂರು ಆಗಿರಲಿಲ್ಲ. ಮತ್ತೆ ಅದೇ ರಾಗ ಅದೇ ಹಾಡು. ಮೈಸೂರನ್ನೇ ಅವರು ಮರೆತಿದ್ದರು. ಹಾಗೆಯೇ ಒಂದು ದಿನ ಹೊರಗೆ ನಡೆದಾಡಲು ಹೋದವರಿಗೆ ಮನೆಯ ದಾರಿಯೇ ಮರೆತುಹೋಯಿತು. ಪುಣ್ಯಕ್ಕೆ ಪರಿಚಯದವರು ಇವರನ್ನು ನೋಡಿ ಮನೆ ತಲುಪಿಸಿದರು. ಈ ರೀತಿ ಒಂದೊಂದೇ ವಿಷಯಗಳನ್ನು ಮರೆಯಲು ಪ್ರಾರಂಭ ಮಾಡಿದರು ವೆಂಕಟೇಶರಾಯರು. ವೈದ್ಯರ ಹತ್ತಿರ ಕರೆದುಕೊಂಡು ಹೋದಾಗ ಅವರು ಈ ಕಾಯಿಲೆಯ ಹೆಸರು ‘ಆಲ್ಜೀಮರ್ ಕಾಯಿಲೆ’ ಎಂದು ಹೇಳಿದರು. ಇದು ಮರೆವಿನ ಕಾಯಿಲೆ. ಕಡೆಗೆ ವ್ಯಕ್ತಿಯು ಮನೆಯವರು ಅವರ ಹೆಸರುಗಳು, ಸಂಬಂಧ ಎಲ್ಲವನ್ನೂ ಮರೆಯಬಹುದು. ತುತ್ತು ನುಂಗುವ ಕ್ರಿಯೆಯನ್ನೂ ಮರೆಯಬಹುದು.

ಆಲ್ಜೀಮರ್ ಕಾಯಿಲೆ :
ಇದೊಂದು ನರಗಳು ನಶಿಸಿಹೋಗುವ ಕಾಯಿಲೆ. ಆಲ್ಜೀಮರ್ ಕಾಯಿಲೆಯಲ್ಲಿ ವ್ಯಕ್ತಿ ಎಲ್ಲವನ್ನೂ ಮರೆಯುತ್ತಾ ಹೋಗುತ್ತಾನೆ. ಒಂದು ರೀತಿಯ ಆಲ್ಜೀಮರ್ ಕಾಯಿಲೆಯಲ್ಲಿ ಅಮೈಲಾಯಿಡ್ ಎನ್ನುವ ಪ್ರೋಟೀನ್ ಅಸಹಜ ರೀತಿಯಲ್ಲಿ ಅಂಟಂಟಾದ ಉಂಡೆಯಾಗಿಬಿಡುತ್ತದೆ. ಸಹಜವಾಗಿ ಅಮೈಲಾಯಿಡ್ ಪ್ರೋಟೀನು ಬಿಡಿಬಿಡಿಯಾದ ಅಣುಗಳಾಗಿ ಇರಬೇಕು. ಇದು ಪ್ರೋಟೀನು ಸರಿಯಾದ ರೀತಿಯಲ್ಲಿ ಮಡಿಸಿಕೊಳ್ಳದೆ ಇರುವುದರಿಂದ ಆಗುತ್ತದೆ.

ಕ್ರೋಮೋಸೋಮ್ ಸಂಖ್ಯೆ 21 ರಲ್ಲಿ ಇದಕ್ಕೆ ಸಂಬಂಧಪಟ್ಟ ಜೀನು ಇದೆ. ಶೇಕಡ ಐದರಿಂದ ಹತ್ತರಷ್ಟು ಜನರಲ್ಲಿ ಆಲ್ಜೀಮರ್ ಕಾಯಿಲೆ ಆನುವಂಶಿಕವಾಗಿ ಬರುತ್ತದೆ. ಕಾಯಿಲೆಯ ಲಕ್ಷಣಗಳು ನಲವತ್ತರಿಂದ ಐವತ್ತು ವರ್ಷಗಳಾಗಿದ್ದಾಗ ಕಾಣಿಸಲು ಪ್ರಾರಂಭವಾಗುತ್ತವೆ. ಆನುವಂಶಿಕವಾಗಿ ಬರುವಾಗ ಆಲ್ಜೀಮರ್ ಕಾಯಿಲೆಗೆ ನಾಲ್ಕು ಜೀನುಗಳಲ್ಲಾಗುವ ವಿಕೃತಿಗಳೇ ಕಾರಣ. ಇನ್ನೂ ಒಂದು ಜೀನಿನಲ್ಲಿಯೂ ಆಗಬಹುದು. ಜರ್ಮನಿಯ ನರಶಾಸ್ತ್ರಜ್ಞ ಆಲೋಮ್ ಆಲ್ಜೀಮರ್ ಈ ಕಾಯಿಲೆಯನ್ನು ಮೊದಲು  1907 ರಲ್ಲಿ ಗುರುತಿಸಿದರು. ಇದನ್ನು ಮರೆವಿನ ಕಾಯಿಲೆ ಎಂದರು. ವಯಸ್ಸಾದ ಹಾಗೆ ಎಲ್ಲರಿಗೂ ಮರೆವು ಸಾಮಾನ್ಯ! ಆದರೆ ಈಗ ಇದನ್ನು ಒಂದು ಕಾಯಿಲೆ ಎಂದು ಗುರುತಿಸಿದ್ದಾರೆ.

ಈ ಕಾಯಿಲೆ 14 ನೆಯ ಕ್ರೋಮೋಸೋಮಿನಲ್ಲಿ ಉಂಟಾಗುವ ವ್ಯತ್ಯಾಸದಿಂದ ಆಗುತ್ತದೆ ಎಂದು 1992 ರಲ್ಲಿ ಕಂಡುಹಿಡಿಯಲಾಯಿತು. ಇಲ್ಲಿರುವ ಜೀನು ಪ್ರಿಸೆನೆಲಿನ್ 1  ಎನ್ನುವ ಪ್ರೋಟೀನ್‌ಗೆ ಎನ್‌ ಕೋಡ್ ಮಾಡುತ್ತದೆ ಹಾಗೂ ಬೀಟ ಅಮೈಲಾಯಿಡ್ ಎನ್ನುವ ವಸ್ತುವನ್ನು ಮಿದುಳಿನಲ್ಲಿ ಎಷ್ಟು ಇರಬೇಕೆಂದು ನೋಡಿಕೊಳ್ಳುತ್ತದೆ. ಪ್ರಿಸೆನೆಲಿನ್ ಪ್ರೋಟೀನು ಸರಿಯಿಲ್ಲದಾಗ ಅಮೈಲಾಯಿಡ್ ಮಿದುಳಿನಲ್ಲಿ ಶೇಖರಣೆಯಾಗುತ್ತದೆ. ಮೂವತ್ತಕ್ಕೂ ಜಾಸ್ತಿ ವಿಕೃತಿಗಳು ಈ ಪ್ರಿಸೆನೆಲಿಗ್ 1ಒಂದು ಅಮೆನೋ‌ಆಸಿಡ್ ವ್ಯತ್ಯಾಸದಿಂದ ಉಂಟಾಗುವುದನ್ನು ಗುರುತಿಸಲಾಗಿದೆ. ಇದಲ್ಲದೆ ಇನ್ನೂ ನಾಲ್ಕು ಜೀನುಗಳಲ್ಲಿ ವಿಕೃತಿ ಉಂಟಾಗಿ ಆಲ್ಜೀಮರ್ ಕಾಯಿಲೆ ಕಾಣಿಸಬಹುದು. ಡೌನ್ಸ್ ಸಿಂಡ್ರೋಮ್‌ನಿಂದ ಬಾಧಿತರಾಗಿರುವವರಿಗೆ ಆಲ್ಜೀಮರ್ ಕಾಯಿಲೆ ಕೂಡ ಬರಬಹುದು. ಅವರ ಮಿದುಳಿನಲ್ಲಿಯೂ ಅಮೈಲಾಯಿಡ್ ಬಿಲ್ಲೆಗಳು ಕಾಣಿಸಿಕೊಳ್ಳಬಹುದು.

ಪದಗಳ ಅರ್ಥ :
ಕ್ರೋಮೋಸೋಮ್ = ವಂಶವಾಹಿ ಜೀನುಗಳು (ಡಿ‌ಎನ್‌ಎ) ಇರುವ ಸೂಕ್ಷ್ಮ ದಾರದ ರೀತಿಯ ರಚನೆ
ಆನುವಂಶಿಕ ಲಕ್ಷಣ = ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಬರುವ ಲಕ್ಷಣ
ವಿಕೃತಿ = ಜೀನಿನಲ್ಲಿ ಆಗುವ ಅಣುವಿಕ ಬದಲಾವಣೆ = ಮುಂದಿನ ಪೀಳಿಗೆಗೂ ಹೋಗುತ್ತದೆ.
ಡೌನ್ಸ್ ಸಿಂಡ್ರೋಮ್ = 21 ನೆಯ ಕ್ರೊಮೋಸೋಮು ಎರಡರ ಬದಲು ಮೂರು ಇದ್ದಾಗ ಉಂಟಾಗುವ ಕಾಯಿಲೆ
ಜೀನು = ವಂಶವಾಹಿ, ಡಿ‌ಆಕ್ಸಿರೈಬೋ ನ್ಯೂಕ್ಲಿಕ್ ಆಸಿಡ್‌ನಿಂದ ಆಗಿರುತ್ತದೆ. ಅನುವಂಶೀಯ ವಸ್ತು, ಕ್ರೊಮೋಸೋಮುಗಳಲ್ಲಿರುತ್ತದೆ.

-ಡಾ ಎಸ್ ಸುಧಾ ರಮೇಶ್, ಮೈಸೂರು

11 Responses

  1. ನಿರ್ಮಲ says:

    ನಮ್ಮ ಪರಿಚಯದವರೊಬ್ಬರು ತಾವು ಸ್ಕೂಟರ್ ಪಾರ್ಕ್ ಮಾಡಿದ ಜಾಗವನ್ನೇ ಮರೆತು ಪೋಲಿಸ್ ಸ್ಟೇಷನ್ ಗೆ ಹೋಗಿ ದೂರು ನೀಡಿದ್ದರು. ಚಿಕ್ಕದಾದ, ಉಪಯುಕ್ತ ಲೇಖನ. ಅಭಿನಂದನೆಗಳು.

  2. ನಯನ ಬಜಕೂಡ್ಲು says:

    ಈ ಕಾಯಿಲೆಯ ಹೆಸರು ಕೇಳಿದ್ದೆ, ಇವತ್ತು ವಿಸ್ತಾರವಾಗಿ ತಿಳಿದುಕೊಳ್ಳುವಂತಾಯಿತು. ಧನ್ಯವಾದಗಳು ಮೇಡಂ

  3. Anonymous says:

    ಅತ್ಯುತ್ತಮ ಲೇಖನ ಈ ತೊಂದರೆ ಯಿಂದ ನರಳುತ್ತಿದ್ದ ಮಹಿಳೆಯನ್ನು ಕಣ್ಣಾರೆ ಕಂಡಿದ್ದೇನೆ.ಅವರನ್ನು ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ಮಹಿಳೆ ನನ್ನ ಗೆಳತಿ.ಚೆನ್ನಾಗಿ ಬಾಳ್ವೆ ನಡೆಸಿದ ಮಹಿಳೆಯ ರೀತಿ ನೋಡಿ ಮನಸ್ಸು ಹೊಂದಿತ್ತು.ಪುಣ್ಯಕ್ಕೆ ಬಹಳ ದಿನ ನರಳಲಿಲ್ಲ.. ಮಾಹಿತಿ ಕೊಟ್ಟಿದ್ದಕ್ಕೆ ಅಭಿನಂದನೆಗಳು ಮೇಡಂ.

  4. Hema says:

    ಆಲ್ಜೀಮರ್ ಕಾಯಿಲೆಯಿಂದ ಬಳಲುವ ಹಿರಿಯರನ್ನು ಕಂಡು ಮರುಗಿದ್ದೇನೆ. ಅವರಿಗೂ, ಮನೆಯವರಿಗೂ ಕಷ್ಟದ ಸನ್ನಿವೇಶವನ್ನು ಸೃಷ್ಟಿಸುವ ಕಾಯಿಲೆಯಿದು… ಮಾಹಿತಿಪೂರ್ಣ ಬರಹ.

  5. Asha nooji says:

    ಸುಪರ್ . ಮಾಹಿತಿ .ಮತ್ತು ವಿವರಣೆ

  6. ಶಂಕರಿ ಶರ್ಮ says:

    ಈ ಅಸಹನೀಯ ಕಾಯಿಲೆ ಬಗೆಗಿನ ಉತ್ತಮ ಮಾಹಿತಿಯುಕ್ತ ಲೇಖನವು ಅನಂತನಾಗ್ ನಟಿಸಿರುವ ” ಗೋಧಿಬಣ್ಣ ಸಾಧಾರಣ ಮೈಕಟ್ಟು” ನೆನಪಾಯ್ತು. ಯಾವುದೇ ಚಿಕಿತ್ಸೆ ಇಲ್ಲದ ಈ ರೋಗವು, ಅವರನ್ನು ಮತ್ತು ಜೊತೆಯವರನ್ನೂ ಅಸಹಾಯಕ ಪರಿಸ್ಥಿತಿಗೆ ನೂಕುವುದು ಸತ್ಯ. ಒಳ್ಳೆಯ ಸಕಾಲಿಕ ಲೇಖನಕ್ಕಾಗಿ ಕೃತಜ್ಞತೆಗಳು ಮೇಡಂ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: