ಹಾವಿನ ಪಗೋಡಾ

Share Button

ಮೈನಮಾರ್‌ನ ಹಿಂದಿನ ರಾಜಧಾನಿ ಯಂಗೂನ್‌ನ ದಕ್ಷಿಣಕ್ಕೆ ಮೇನ್ಮಾರ್‌ ಟ್ವಾಂಟೆ ಟೌನ್‌ಷಿಪ್ ಇದೆ. ಇಲ್ಲಿರುವ ‘ಬಾಂಗ್ ‌ಡಾವ್‌ ಗ್ಯೊಕೆ’ ಪಗೋಡಾ ಸ್ಥಳೀಯರಿಂದ ‘ಹ್ಮೈ ಪಾಯಾ’ ಎಂದುಕರೆಯಲ್ಪಡುತ್ತದೆ. ಕನ್ನಡದಲ್ಲಿ‌ ಇದು ‘ಹಾವಿನ ದೇವಾಲಯ ಎಂಬ ಅರ್ಥ ಹೊಂದಿದೆ.

ಈ ಪಗೋಡಾ ಸರೋವರದ ಮದ್ಯೆ ನೆಲೆಗೊಂಡಿದೆ.ಇದಕ್ಕೆ ಹಾವಿನ ದೇವಾಲಯ ಎಂಬ ಹೆಸರು ಬರಲು ಮೂಲ ಕಾರಣ‌ಇಲ್ಲಿರುವ ಸುಮಾರು ಮೂವತ್ತಕ್ಕೂ ಹೆಚ್ಚು ಹೆಬ್ಬಾವುಗಳು. ಇವುಗಳಲ್ಲಿ ಕೆಲವು ಎರೆಡರಿಂದ ಮೂರು ಮೀಟರ್‌ನಷ್ಟು‌ ಉದ್ದವಿರುವ ದೊಡ್ಡ ಹಾವುಗಳು. ಎಲ್ಲವನ್ನೂ ‌ಒಂದೇ ಕಡೆ ಕೂಡಿ ಹಾಕಿಲ್ಲ. ಇವುಗಳಲ್ಲಿ ಹಲವು ದೇವಾಲಯದ ಕಿಟಕಿಗಳ ಸರಳುಗಳಿಗೆ ಸುತ್ತಿಕೊಂಡು ಸೂರ್ಯನ ಬಿಸಿಲನ್ನು/ಉಷ್ಣತೆಯನ್ನು‌ ಆಸ್ವಾದಿಸುತ್ತಿದ್ದರೆ, ಮತ್ತೆ ಕೆಲವು ನೆಲದ ಮೇಲೆ ಹಾಗೂ ಮಹಡಿಯಲ್ಲಿ ಹರಿದಾಡುತ್ತಿರುತ್ತವೆ. ಈ ಪಗೋಡಾದಲ್ಲಿರುವ ಬುದ್ಧನ ಪ್ರತಿಮೆಯ ಸುತ್ತಾ ಸುರಳಿ ಸುತ್ತಿಕೊಂಡಿರುವ ಹೆಬ್ಬಾವುಗಳು ಕೆಲವಾದರೆ, ಇದರ ಮುಖ್ಯ ಸಭಾಂಗಣದಲ್ಲಿರುವ ಮರದ ಕೊಂಬೆಗಳಿಗೆ ನೇತು ಹಾಕಿಕೊಂಡಿರುವ ಹೆಬ್ಬಾವುಗಳು ಹಲವು.ಈ ಪಗೋಡಾದಲ್ಲಿ ಅವು ಸರ್ವ ಸ್ವತಂತ್ರ. ಅವುಗಳಿಗೆ ಇಲ್ಲಿಯಾವುದೇ ಅಡೆತಡೆಗಳಿಲ್ಲ, ಸಾವಿನ ಅಂಜಿಕೆ ಸಹ ಇಲ್ಲ. ಆಹಾರಕ್ಕಾಗಿ‌ ಅಲೆದಾಡುವ‌ ಅವಶ್ಯಕತೆ ಸಹ ಅವುಗಳಿಗೆ ಇಲ್ಲ.

ಸ್ಥಳೀಯರಲ್ಲಿ ಅನೇಕರು ಪಗೋಡಾದಲ್ಲಿ ಹೆಬ್ಬಾವುಗಳ ಉಪಸ್ಥಿತಿ ಒಂದು ಶುಭ ಸಂಕೇತ‌ಎಂದು ಭಾವಿಸಿದ್ದಾರೆ. ಅವರುಗಳು ಈ ದೇವಾಲಯಕ್ಕೆ ಆಗಾಗ್ಗೆ ಭೇಟಿಕೊಟ್ಟು‌ಈ ಸರೀಸೃಪಗಳಿಗೆ ಅವಶ್ಯವಿರುವ‌ ಆಹಾರವಸ್ತುಗಳನ್ನು ಅರ್ಪಿಸುವ ಪರಿಪಾಠ ರೂಢಿಸಿಕೊಂಡಿದ್ದಾರೆ. ಸಭಾಂಗಣದ ಮರದಲ್ಲಿ ನೇತಾಡುತ್ತಿರುವ ಹೆಬ್ಬಾವುಗಳನ್ನು ದೇವರ ಸ್ವರೂಪ‌ ಎಂದು ಭಾವಿಸಿ ಭಕ್ತಾದಿಗಳು ನಮಸ್ಕರಿಸುವುದನ್ನು, ಹಾಗೂ ಹಾವುಗಳ ಸುರಳಿಯೊಳಗೆ ಸಾವಿರ ಕ್ಯಾಟ್ ನೋಟುಗಳನ್ನು ಸಿಕ್ಕಿಸಿರುವುದನ್ನು ಕಾಣಬಹುದು ನೋಟನ್ನು ಸಿಕ್ಕಿಸಿದ ನಂತರ ಕೆಲವು ದೈರ್ಯಶಾಲಿ ಭಕ್ತಾದಿಗಳು ಹೆಬ್ಬಾವಿನ ಮೈದಡವುತ್ತಾರೆ. ಈ ರೀತಿ ಹೆಬ್ಬಾವಿನ ಮೈ ಸವರುವುದರಿಂದ ಶುಭವಾಗುತ್ತದೆ ಎಂಬ ಅಚಲ ನಂಬಿಕೆ ಅವರದು.

ಸುತ್ತಮುತ್ತಲಿನ ಪ್ರದೇಶದಲ್ಲಿ ದೊರಕುವ ಹೆಬ್ಬಾವುಗಳನ್ನು ಸ್ಥಳೀಯರು, ಅದಕ್ಕೆತೊಂದರೆಯಾಗದಂತೆ ಹಿಡಿದು, ಸಂಗ್ರಹಿಸಿ ತಂದು‌ಇಲ್ಲಿ ಬಿಡುತ್ತಾರೆ. ಇಲ್ಲಿ ಬಂದು ಸೇರಿದ ನಂತರ ಆ ಹೆಬ್ಬಾವುಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ತಮ್ಮ‌ ಆಕ್ರಮಣಕಾರಿ ಪ್ರವೃತ್ತಿಯನ್ನು ತ್ಯಜಿಸಿ, ಸಾಕು ಪ್ರಾಣಿಗಳಂತೆ ಜನ ಸ್ನೇಹಿಯಾಗಿ ವರ್ತಿಸುತ್ತವೆ. ದೇವಾಲಯಕ್ಕೆ ಬರುವ ದೇಣಿಗೆಯಿಂದ ಹಾಲು ಮತ್ತು ಮೊಟ್ಟೆಗಳನ್ನು ಖರೀದಿಸಿ ಅವುಗಳಿಗೆ ಪುಷ್ಕಳ ಆಹಾರವನ್ನು‌ ಒದಗಿಸಲಾಗಿತ್ತದೆ. ಈ ಪಗೋಡಾದಲ್ಲಿರುವ ಸಂನ್ಯಾಸಿಗಳು ಮತ್ತು ಸಂನ್ಯಾಸಿನಿಗಳು ಈ ಹೆಬ್ಬಾವುಗಳನ್ನು ಬಹಳ ಅಕ್ಕರೆಯಿಂದ ಕಾಪಾಡುವ ಕಾರಣ ಅವುಗಳು ಭಯವಿಲ್ಲದ ವಾತಾವರಣದಲ್ಲಿ ನೆಮ್ಮದಿಯಿಂದ ಬದುಕುತ್ತಿವೆ.

ತಮ್ಮತಮ್ಮ ಭೂಮಿಯಲ್ಲಿ ದೊರಕುವ ಹಾವುಗಳನ್ನು ಹಿಡಿದು, ಈ ದೇವಾಲಯಕ್ಕೆತಂದು ‌ಒಪ್ಪಿಸುವ ಪರಿಪಾಠ ‌ಇಲ್ಲಿನ ರೈತರಲ್ಲೂ ‌ಇದೆ.ಅವುಗಳನ್ನು ಕೊಲ್ಲುವ ಬದಲು‌ ಇಲ್ಲಿಗೆ ತಂದುಕೊಟ್ಟರೆ, ಅದು‌ ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆ ಅವರದು. ಹಾಗಾಗಿ ಅಲ್ಲಿನಜನ ಹಾವುಗಳನ್ನು ಕೊಲ್ಲುವುದಿಲ್ಲ. ಎಲ್ಲಾ ಪ್ರಾಣಿಗಳೂ ಮುಂದಿನ ಜನ್ಮದಲ್ಲಿ ಮಾನವರಾಗಿ ಪುನರ್ಜನ್ಮ ಪಡೆಯುವ ಸಾಮರ್ಥ್ಯವನ್ನು ಹೊಂದಿರುವ ಸಂವೇಧನಾಶೀಲ ಜೀವಿಗಳು ಎಂಬ ನಂಬಿಕೆ ಭೌದ್ಧತತ್ವದಲ್ಲಿದೆ. ಅದನ್ನೇ ಇವರುಗಳು ಪರಿಪಾಲಿಸುತ್ತಾರೆ.ಪ್ರಾಣಿಗಳನ್ನು ಕೊಲ್ಲುವ ಮೂಲಕ ದುರಾದೃಷ್ಟವನ್ನು‌ ಆಹ್ವಾನಿಸಲು ಅವರುಗಳು ಇಷ್ಟಪಡುವುದಿಲ್ಲ.

ಹಾವುಗಳು ಮತ್ತು ಸರ್ಪಗಳು ಹಿಂದೂ ಮತ್ತು ಬೌಧ್ಧ ಪ್ರತಿಮಾಶಾಸ್ತ್ರದಲ್ಲಿ (ಯಾವುದೇ ವಿಷಯವನ್ನು ಪ್ರತಿಮೆ ಯಾ ಚಿತ್ರದ ಮೂಲಕ ನಿರೂಪಿಸುವುದು) ಪೌರಾಣಿಕಮಹತ್ವ/ಹಿನ್ನಲೆಯನ್ನು ಹೊಂದಿದೆ. ಭೌದ್ದ ಪುರಾಣಗಳಲ್ಲಿ ಬುದ್ದ ಜ್ಞಾನೋದಯದ ನಂತರ ಏಳು ವಾರಗಳ ಕಾಲ ಧ್ಯಾನಾಸಕ್ತನಾಗಿದ್ದಾಗ, ಇಹದ ಪರಿವೆಯನ್ನೇ ತೊರೆದಿದ್ದಾಗ, ಆಕಾಶದಲ್ಲಿ ಕಾರ್ಮೋಡಗಳು ತುಂಬಿ, ಪ್ರಚಂಡ ಗಾಳಿಯ ಸಹಿತಧಾರಾಕಾರ ಮಳೆಯನ್ನು ಸುರಿಸಿತಂತೆ. ಇಂತಹ ಸಮಯದಲ್ಲಿ ಬುಧ್ದನ ಧ್ಯಾನ ನಿರ್ವಿಘ್ನವಾಗಿ ನೆರವೇರಲು, ಹಾವಿನ ರಾಜ ತನ್ನ ಹಡೆಯನ್ನು ಬುದ್ದನ ಶಿರದ ಮೇಲೆ ಕೊಡೆಯಾಕಾರದಲ್ಲಿ ಹಿಡಿದು ರಕ್ಷಿಸಿತಂತೆ. ಯಾವುದೇ ತೊಂದರೆಯಾಗದೆ ಬುದ್ದಧ್ಯಾನವನ್ನು ಮುಗಿಸಿದನಂತೆ. ಹಾಗಾಗಿ ಬೌದ್ದಧರ್ಮದ ಅನುಯಾಯಿಗಳಿಗೆ ಹಾವಿನ ಮೇಲೆ ವಿಶೇಷ ಅಕ್ಕರೆ.

ಆಗ್ನೇಯ ‌ಏಷ್ಯಾದಾದ್ಯಂತ ಅನೇಕ ದೇವಾಲಯಗಳ ಪ್ರವೇಶದ್ವಾರಗಳಲ್ಲಿ ಹಾವುಗಳು ಅಥವಾ ನಾಗರಕಲ್ಲಿನ ಕೆತ್ತನೆಗಳನ್ನು ಕಾಣಬಹುದಾದರೂ, ಜೀವಂತ ಹಾವುಗಳು ಇರುವ ದೇವಾಲಯಗಳು ಅತಿ ವಿರಳ.ಆದರೆ‌ ಇಲ್ಲಿನ ಮತ್ತೊಂದು ‘ಬಾಂಗ್‌ಡಾವ್ ‌ಗ್ಯೊಕೆ’  ಪಗೋಡಾ, ಬೌದ್ದ ಪಗೋಡಾಗಳಲ್ಲಿ ಜೀವಂತ ಹಾವುಗಳನ್ನು ಉದ್ದೇಶ ಪೂರ್ವಕವಾಗಿ ಸಾಕುತ್ತಿರುವ ಬೌದ್ದ ದೇವಾಲಯಗಳಲ್ಲಿ‌ ಒಂದು.

‘ಲಬಾಮುನಿ ಹ್ಸು-ಟೌಂಗ್ಪೈ ಪಯಾ’ ಎಂದು‌ ಅಧಿಕೃತವಾಗಿ ಕರೆಯಲ್ಪಡುವ, ಮೈನಮಾರ್‌ನ ಮಾಂಡಲೆಯ ಹೊರಗಡೆ‌ ಇರುವ ಮತ್ತೊಂದು ಬೌದ್ದದೇವಾಲಯವೂ ಸಹ ದೊಡ್ಡದೊಡ್ಡ ಹೆಬ್ಬಾವುಗಳಿಗೆ ಹೆಸರುವಾಸಿಯಾಗಿದೆ. ಇವುಗಳನ್ನು ‘ಬೌದ್ದ ಸಂನ್ಯಾಸಿಗಳ ಪುನರ್ಜನ್ಮದ ಆತ್ಮಗಳು’ ಎಂದು ಪೂಜಿಸುತ್ತಾರೆ.

ಮಲೇಷಿಯಾದ ಪೆನಾಂಗ್‌ನಲ್ಲಿರುವ ‘ಹಾಕ್ ಹಿನ್ ಕಿಯೊಂಗ್’ ಹಾವಿನ ದೇವಾಲಯದಲ್ಲೂ ಸಹ ಹಾವುಗಳಿವೆ. ಆದರೆ‌ ಇದು ಹೆಸರುವಾಸಿಯಾಗಿರುವುದು ಮೇಲಿನ ದೇವಾಲಯಗಳಂತೆ ಹೆಬ್ಬಾವುಗಳಿಗಲ್ಲಾ ಬದಲಿಗೆ ವೈಪರ್ (ವಿಷ ಸರ್ಪ, ಮಂಡಲ ಹಾವು)ಹಾವುಗಳಿಗೆ.

-ಕೆ.ವಿ.ಶಶಿಧರ

4 Responses

  1. ನಯನ ಬಜಕೂಡ್ಲು says:

    ವಿಭಿನ್ನ ಹಾಗೂ ಕುತೂಹಲಕಾರಿಯಾಗಿದೆ ಬರಹ.

  2. ಶಂಕರಿ ಶರ್ಮ says:

    ವಿಶೇಷ ಮಾಹಿತಿಯನ್ನೊಳಗೊಂಡ ವಿಸ್ಮಯಕರ ಲೇಖನ! ಹೀಗೂ ಉಂಟೇ..??! ಇಲಿಗಳ ದೇವಸ್ಥಾನ ಕೇಳಿದ್ದೇನೆ..ಅಬ್ಬಾ.. ನಿರುಪದ್ರವಿ ಪಗೆಲ ಕಂಡರೇ ಮೈಲು ದೂರ ಓಡುವ ನನ್ನಂತಹವರು ಎಷ್ಟು ಪುಣ್ಯ ಸಿಕ್ಕಿದರೂ ಈ ದೇವಸ್ಥಾನಕ್ಕೆ ಹೋಗಲಾರೆ!!

  3. ಜಲಜಾರಾವ್ says:

    ಜನಮರುಳೋ ಜಾತ್ರೆ ಮರುಳೋ ಎಂಬಂತೆ ಜೀವಂತ ಹಾವುಗಳನ್ನು ಹೀಗೆ ಬಿಟ್ಟರೆ ಹೆದರುಪುಕ್ಕರ ಗತಿ ಏನಪ್ಪಾ….ತಲೆಹರಟೆಗಳು ಚೇಷ್ಟೆ ಮಾಡಿ ಅವುಗಳನ್ನು ಕೆರಳಿಸಿ ಅವು ನಮ್ಮನ್ನು ಕಚ್ಚಿಬಿಟ್ಟರೆ ಅಲ್ಲಲ್ಲ ನುಂಗಿ ಬಿಟ್ಟರೆ ಎಂಬ ಯೋಚನೆ ಒಂದು ಕ್ಷಣ ಬಂದು ಹೋಯಿತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ ಎಂಬ ಭರವಸೆ..

  4. Hema says:

    ವಾವ್ …ಬಹಳ ವಿಶಿಷ್ಟವಾಗಿದೆ.

Leave a Reply to ಜಲಜಾರಾವ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: