ಕ್ವಾರಂಟೈನ್ ರಜೆಯ ನೀತಿ ಪಾಠ

Share Button

        

ಹಿಂದೆಂದೂ ಕಂಡು, ಕೇಳಿ ಅರಿಯದ , ಮುಂದೆಂದೂ  ಈ ರೀತಿಯೂ ಆಗಬಹುದೇ ಎಂದು ಖಾತ್ರಿಯೇ ಇಲ್ಲದಂತಹ ವಿದ್ಯಮಾನವೊಂದು ಜಗತ್ತಿನಾದ್ಯಂತ ತಾಂಡವವಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೌದು…ನಾನು ಕೊರೊನ ಬಗೆಗೆಯೇ ಹೇಳುತ್ತಿರುವುದು.  ಯಾರಿಗೆ ಪಥ್ಯವಾದರೂ…ಆಗದಿದ್ದರೂ…ಪ್ರಕೃತಿಯ ಮುಂದೆ ಹುಲುಮಾನವ ತೃಣಕ್ಕೆ ಸಮಾನವಾಗಿದ್ದಾನೆ. ಜಗತ್ತಿನ ದೊಡ್ಡಣ್ಣ ಎನ್ನಲಾಗುವ ಅಮೇರಿಕಾದಂತಹ ದೇಶವೇ ಸೋತು ಸುಣ್ಣವಾಗಿದೆ. ವೈಜ್ಞಾನಿಕವಾಗಿ, ವೈಚಾರಿಕವಾಗಿ ಯೋಚಿಸುವಾಗ ಅನೇಕ ತರ್ಕಬದ್ಧ ವಿಚಾರಗಳನ್ನು ಪುಟಗಟ್ಟಲೆ ಮಂಡಿಸಬಹುದು, ಚರ್ಚಿಸಬಹುದು. ನಾನು..ನೀನು ಎಂದು ಅನೇಕ ತಾಕಲಾಟ-ಮೇಲಾಟ ಗಳನ್ನು ಮಾಡಬಹುದು. ದೊಂಬಿ-ಗಲಾಟೆಗಳನ್ನು ಎಬ್ಬಿಸಬಹುದು.

ಆದರೆ ವೈಯಕ್ತಿಕವಾಗಿ ಕೂತು ಮೌನವಾಗಿ ಯೋಚಿಸಿದರೆ  ಮನುಷ್ಯನ ಅಲ್ಪತನದ ಅನಾವರಣವಾಗಿತ್ತ ಹೋಗುತ್ತದೆ. ದೊಡ್ಡ ದೊಡ್ಡ ವಿಚಾರಗಳ ಮಾತೇ ಬೇಡ;ನಮ್ಮ ನಿತ್ಯದ ಜೀವನದ ಮಗ್ಗಲುಗಳನ್ನು ವಿಮರ್ಶಿಸಿದಾಗಲೇ ನಮಗೆ ಅರಿವಾಗುತ್ತದೆ, “ನಮ್ಮ ನಿಜವಾದ ಅಗತ್ಯವೇನು? ಮತ್ತು ನಾವು ನಮಗೆ ಏನೆಲ್ಲಾ ಅಗತ್ಯ ಎಂದುಕೊಂಡಿದ್ದೇವೆ?”ಎಂದು.

ಈ ಕ್ವಾರಂಟೈನ್ ರಜೆಗಳಲ್ಲಿ ನಾನು ಅನೇಕ ಹಳೆ ಕಾಲದ  ತಿಂಡಿ ತಿನಿಸುಗಳನ್ನು ಮಾಡಲು ಪ್ರಯತ್ನಿಸಿದೆ. ಚೆನ್ನಾಗಿ ಬಂತು ಕೂಡ. ಆದರೆ ದುರದೃಷ್ಟವಶಾತ್ ನಮ್ಮ ಮಕ್ಕಳಿಗೆ ಅವುಗಳ ಹೆಸರುಗಳೇ ಗೊತ್ತಿಲ್ಲ. ಆದರೆ  ಅದು  ಅವರ ತಪ್ಪಲ್ಲವೆಂದು ಸ್ಪಷ್ಟವಾಗಿ ನನಗೆ ಗೊತ್ತು. ಬಗೆ ಬಗೆಯ, ರುಚಿ ರುಚಿಯಾದ ತಿಂಡಿ ತಿನಿಸುಗಳು ಮಾರ್ಕೆಟ್ ನಲ್ಲಿ ಹೋಗುವಾಗ,ಮಕ್ಕಳಿಗೂ ಮೋಹ ಆಚೆ ಕಡೆಗೆಯೇ ..ಜಾಸ್ತಿ. ನಮ್ಮಂತಹ ದೊಡ್ಡವರಿಗೂ ಸುಲಭವಾಗಿ ಕೆಲಸ ಆಗುತ್ತದಲ್ಲ ಎನ್ನುವ ಭಾವ. ಅದರಿಂದ ಆರೋಗ್ಯ ಹಾಳಾಗುತ್ತದೆ ಎಂದು ಗೊತ್ತಿದ್ದರೂ ದಿವ್ಯ ನಿರ್ಲಕ್ಷ್ಯವನ್ನು ತಳೆದುಬಿಡುತ್ತೇವಲ್ಲ. ಈ ರಜೆಗಳಲ್ಲಿ ಇದಕ್ಕೆ ಕಡಿವಾಣ ಬಿದ್ದಿದೆ ತಾನೇ?

ನನ್ನ ಗೆಳೆಯ, ಗೆಳತಿಯರ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ನಾನು ಅವರವರ ಮಕ್ಕಳು ಮಾಡಿದ ಅಡಿಗೆಯದ್ದಿರಬಹುದು, ರಂಗೋಲಿ-ಪೇಂಟಿಂಗ್ ಗಳದ್ದಿರಬಹುದು,ಅವರು ಆಡುವ ಆಟಗಳದ್ದಿರಬಹುದು…ಫೋಟೋ-ವಿಡಿಯೋ ಗಳನ್ನು ಹೆಚ್ಚಾಗಿ ನೋಡುತ್ತಿದ್ದೇನೆ. ಇದನ್ನು ನೋಡಿದ ನಿಮಗೆ ಏನನ್ನಿಸುತ್ತದೆ? ಮಕ್ಕಳು ಮೊದಲು ಪೇಂಟಿಂಗ್..ರಂಗೋಲಿ ಗಳನ್ನು ಮಾಡದೆ, ಈಗ ಮಾತ್ರ ಮಾಡುತ್ತಿದ್ದಾರೆ ಎಂದೇ..? ಮೊದಲು ಮಾಡುತ್ತಿದ್ದರೂ ಈಗ ಮಾಡುತ್ತಿರುವುದು ಮಾತ್ರ ರಜೆಯಲ್ಲಿ ಕೆಲಸವಿಲ್ಲದೆ ಖಾಲಿ ಕೂತ ಅಪ್ಪ-ಅಮ್ಮಂದಿರಿಗೆ ಕಾಣಿಸುತ್ತಿದೆ ಎಂದೇ..? ಅಲ್ಲ..ಎಲ್ಲರ ಹಾಗೆ ತಾನೂ ಏನಾದರೂ ಮಾಡಿ ಎಲ್ಲರ ಗಮನ ಸೆಳೆಯಬೇಕೆಂದು ಮಗು ಬಯಸುತ್ತಿದೆ ಎಂದೇ..? ಯಾವ ರೀತಿಯಲ್ಲಿ ಅಳೆದು ತೂಗಿ ನೋಡಿದರೂ ಇದರಲ್ಲಿ ಎಳ್ಳಷ್ಟೂ ತಪ್ಪು ಕಾಣಿಸುತ್ತಿಲ್ಲವಲ್ಲ. ಈಗ …ಈ ರಜೆ ಗಳಲ್ಲಿ ಮಾತ್ರ ಮಕ್ಕಳು, ಈ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದರೆ…ಅವರು ಇಷ್ಟು ಸಮಯದ ತಮ್ಮ ಶೈಕ್ಷಣಿಕ “ಜೀತದಿಂದ” ಬಿಡುಗಡೆ ಹೊಂದಿ, ತಮ್ಮತನವನ್ನು ಅರಸುತ್ತಿದ್ದಾರೆಂದು ಅರ್ಥವಲ್ಲವೇ??? ಈ ಹಿಂದೆ ಶಾಲಾಸಮಯಗಳಲ್ಲಿ ಶಿಕ್ಷಕರ, ಪೋಷಕರ ಕಣ್ಣು ತಪ್ಪಿಸಿ ತಮ್ಮ ಇಷ್ಟ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಈಗ ಈ ರಜೆಗಳಲ್ಲಿ ತಮ್ಮ ತಮ್ಮ ಪೋಷಕರ ಪ್ರೋತ್ಸಾಹದಿಂದ ಆ ಕಾರ್ಯ ಗಳಲ್ಲಿ ತೊಡಗಿಸಿಕೊಂಡಿದ್ದಾರಾದರೆ, ಆ ಮಕ್ಕಳ ಆತ್ಮಸ್ತೈರ್ಯ ಅದೆಷ್ಟು ಪಟ್ಟು ಹೆಚ್ಚಾಗಿರಬೇಡ? ಯೋಚಿಸಿ ನೋಡಿ.

ನಮ್ಮ ಕಾಲದ ಕುಂಟೆಬಿಲ್ಲೆ, ಲಗೋರಿ ಇತ್ಯಾದಿ ಆಟಗಳನ್ನೆಲ್ಲ ಮಕ್ಕಳಿಗೆ ಹೇಳಿಕೊಟ್ಟು, ಅವರು ಖುಷಿಯಿಂದ ಅವುಗಳನ್ನು ಆಡುವಾಗ ಅದೆಷ್ಟು ಪುಳಕಿತಳಾಗಿದ್ದೇನೆ. ಮುಸ್ಸಂಜೆಯ ವೇಳೆಯಲ್ಲಿ ಅವರನ್ನು ಕೈ-ಕಾಲು ತೊಳೆದು,ದೇವರ ಮುಂದೆ ಕೂರಿಸಿ,ಭಜನೆ-ಶ್ಲೋಕ ಗಳನ್ನು ಹೇಳಿಸುವಾಗ ಅದೆಷ್ಟು ಧನ್ಯತಾಭಾವ ಆವರಿಸುತ್ತದೆ. ಮಕ್ಕಳಿಗೆ ರಜೆಯಲ್ಲಿ ಪೇಟೆ ಸುತ್ತುವುದು, ಪ್ರವಾಸ ಕರೆದುಕೊಂಡು ಹೋಗುವುದು ಇತ್ಯಾದಿ ಯಾವುದೂ ಇಲ್ಲದೆ ತೋಟದಲ್ಲಿ ವಾಕಿಂಗ್ ಹೋಗಿ ಬರುವುದು , ಅಡಿಕೆ-ತೆಂಗಿನಕಾಯಿ ಹೆಕ್ಕಿ ತರುವುದು , ಗುಡ್ಡೆಗೆ ಹೋಗಿ ಗೇರುಹಣ್ಣು ಕೊಯ್ಯುವುದು ಇತ್ಯಾದಿ ಸಣ್ಣ ಸಣ್ಣ ಚಟುವಟಿಕೆಗಳನ್ನು ಮಾಡುವುದರಿಂದ ದೈಹಿಕ ವ್ಯಾಯಾಮ ದೊಂದಿಗೆ ಹಳ್ಳಿ ಜೀವನದ ಕಿರುಪರಿಚಯ ಮಾಡಿ ಕೊಟ್ಟಂತೆ ಆಗುವುದಿಲ್ಲವೇ? ಈ ತರಹದ ಬೇಸತ್ತು ಹೋಗುವ ದೀರ್ಘ ರಜೆಗಳಿಲ್ಲದೇ ಹೋಗಿದ್ದರೆ ಮಕ್ಕಳಿಂದ ಇದನ್ನೆಲ್ಲ ಮಾಡಿಸಲು ಸಾಧ್ಯವಿತ್ತೇ..

 

(ಚಿತ್ರಕೃಪೆ:ಅಂತರ್ಜಾಲ)

 

(ಚಿತ್ರಕೃಪೆ:ಅಂತರ್ಜಾಲ)


ಅಂದಾಜು ಮೂವತ್ತರಿಂದ ಮೂವತ್ತೈದು ವರ್ಷಗಳನ್ನು ಹಳೆಯ ರಾಮಾಯಣ, ಮಹಾಭಾರತದ ಬಗೆಗಿನ ಟಿವಿ ಧಾರಾವಾಹಿ ಗಳ ಮರುಪ್ರಸಾರದ ಒಂದು ಎಪಿಸೋಡು ಗಳನ್ನೂ ತಪ್ಪಿಸದೇ ಅತ್ಯಂತ ಆಸಕ್ತಿಯಿಂದ ನಮ್ಮ ಮಕ್ಕಳು ನೋಡುವ ಹಾಗೆ ಮಾಡಿದ ಈ ಕ್ವಾರಂಟೈನ್ ರಜೆಗೆ ಅದ್ಹೇಗೆ ಧನ್ಯವಾದ ಹೇಳಲಿ. ಟಿವಿ ಯಲ್ಲಿ ಬರುವ ಹಾಳು ಮೂಳು ಧಾರಾವಾಹಿ, ರಿಯಾಲಿಟಿ ಷೋ ಗಳನ್ನು ಕಣ್ಣು ಎವೆಯಿಕ್ಕದೆ ನೋಡುವ ನಮ್ಮ ಮಕ್ಕಳು, ಅಷ್ಟೇ ಶ್ರದ್ಧೆಯಿಂದ ರಾಮಾಯಣ, ಮಹಾಭಾರತವನ್ನೂ ನೋಡುತ್ತಾರೆಂದರೆ ಇದರ ಅರ್ಥ ಏನು? ನಾವು ಆದರ್ಶವಂದು ಬೋಧಿಸುವ ವಿಚಾರಗಳಲ್ಲೇ ದೋಷವಿದೆ ಎಂದಲ್ಲ? ಒಳ್ಳೆಯ ವಿಚಾರಗಳು ನಮಗ್ಯಾರಿಗೂ ಬೇಡವಾಗಿದೆ ಎಂದಲ್ಲವೇ ? ನೈತಿಕತೆಯ ವ್ಯಾಖ್ಯಾನ ವೇ ಬದಲಾಗಿದೆ ಎಂದಲ್ಲವೇ? ಸುಮ್ಮನೆ ನಮ್ಮ ಮಕ್ಕಳನ್ನು ದೂರಿ ಪ್ರಯೋಜನವಿಲ್ಲ. ದುಡ್ಡು ಮಾಡುವ ದಂಧೆಕೋರರ ನಡುವೆ ಅವರ ಬಾಲ್ಯ ಮಾರಾಟವಾಗುತ್ತಿದೆ, ಅಷ್ಟೇ .. ಇದನ್ನೆಲ್ಲ ಅರಿತುಕೊಳ್ಳಲು ಇದಕ್ಕಿಂತ ಒಳ್ಳೆಯ ಸುವರ್ಣ ಅವಕಾಶ ಬೇರೆ ಸಿಕ್ಕೀತೇ?

ನಮ್ಮ ಬಾಲ್ಯದಲ್ಲಿ ಮತ್ತು ತೀರ ಇತ್ತೀಚಿನ ವರೆಗೂ ಊರು ಬಿಟ್ಟು ಪೇಟೆ-ಪಟ್ಟಣ ಗಳಲ್ಲಿ ವಾಸಿಸುವ, ದೇಶ ಬಿಟ್ಟು  ವಿದೇಶದಲ್ಲಿರುವವರು, ಉದ್ಯೋಗ ನಿಮಿತ್ತವೇ ಹೋಗಿದ್ದರೂ ಅಪರೂಪಕ್ಕೊಮ್ಮೆ ಊರಿಗೆ ಮರಳುವಾಗ ಅವರಿಗೆ ಸಿಗುವ ಗೌರವ ನೋಡಿದರೆ, ಊರಿನ ದೇವರ  ಜಾತ್ರೆ ಸುರುವಾಗಿದೆಯೇನೋ ಎಂದೆನಿಸುತ್ತದೆ.ಅಂತಹವರಲ್ಲಿ ಅನೇಕರು ಇಂದು ಪೇಟೆ-ಪಟ್ಟಣಗಳೆಂಬ ಕಾಂಕ್ರೀಟ್ ಕಾಡಿನಲ್ಲಿ,ಒಂಟೊಂಟಿ ಮನೆಗಳಲ್ಲಿ, ಬಾಗಿಲು ಜಡಿದು ಅಕ್ಷರಶ: ಬಂಧಿಗಳಂತಾಗಿರುವ ಈ ಸಮಯದಲ್ಲಿ ತೋಟ, ಗುಡ್ಡ, ಹಸು,ಕರು ಇತ್ಯಾದಿ ವಿಶಾಲ ವ್ಯಾಪ್ತಿಯಲ್ಲಿರುವ ನಮ್ಮ ಹಳ್ಳಿಗರು ಅದೆಷ್ಟು ಧನ್ಯರು ಎಂದೆನಿಸದೇ ಇದ್ದರೆ ಖಂಡಿತ ಆತ್ಮವಂಚನೆಯಾಗುತ್ತದೆ. 

ಆದರೂ ಕೂಳ್ಳುಬಾಕತನದಿಂದ ಹಳ್ಳಿಗರೂ ಹೊರಗುಳಿದಿಲ್ಲ. ಯಾವುದು ಬೇಕು, ಯಾವುದು ಬೇಡ ಎಂದು ಕಿಂಚಿತ್ತೂ ಯೋಚಿಸದೆ ಸ್ಪರ್ಧೆಗೆ ಬಿದ್ದಂತೆ ಕೊಂಡು ತಂದು ಮನೆಯಲ್ಲಿ ರಾಶಿ ಹಾಕಿದ ಯಾವುದೇ  ನಿರ್ಜೀವ ವಸ್ತುಗಳಿಗೂ ಬೆಲೆಯೇ ಇಲ್ಲ ಎಂದು ಕೊರೊನ ಹೇಳಿ ಕೊಟ್ಟಿದೆ. ತೋಟಕ್ಕೆ, ಹಟ್ಟಿಗೆ ಹೋಗುವಾಗ ಬಳಸುವ ಸ್ಲಿಪ್ಪರ್ ಒಂದನ್ನು ಬಿಟ್ಟು, ಆಸೆಬುರುಕುತನದಿಂದ ಕೊಂಡು ರಾಶಿ ಹಾಕಿದ ಎಂಟ್ಹತ್ತು ಜತೆ ಚಪ್ಪಲಿಗಳು ಉಪಯೋಗಕ್ಕೇ ಬರುತ್ತಿಲ್ಲ. ಮನೆಯಲ್ಲಿ ದಿನವೂ ಧರಿಸುವ ಉಡುಪುಗಳನ್ನು ಬಿಟ್ಟು ಕಪಾಟುಗಳಲ್ಲಿ ಪೇರಿಸಿಟ್ಟ ಬಣ್ಣ ಬಣ್ಣದ, ಬಗೆ ಬಗೆಯ ರಾಶಿ ರಾಶಿ ಉಡುಪುಗಳಿಗೆ ಕೆಲಸವೇ ಇಲ್ಲವಾಗಿದೆ. 

ಕಾಂಕ್ರೀಟು ಹಾಕಿ ಹಾಕಿ ಕಟ್ಟಿದ ಬಿಲ್ಡಿಂಗ್ ಗಳಾಗಲೀ…ಅಪಾರ ಸಂಖ್ಯೆಯಲ್ಲಿ ಮರಗಳ ಮಾರಣಹೋಮ ಮಾಡಿ ರಚಿಸಿದ ರಸ್ತೆಗಳಾಗಲೀ…ಇವತ್ತು ನಮ್ಮ ಉಪಯೋಗಕ್ಕೆ ಬರುತ್ತಿಲ್ಲ. ಉಪಯೋಗಕ್ಕೆ ಬರುತ್ತಿರುವುದೇನಿದ್ದರೂ, ಮಣ್ಣಿನಲ್ಲಿ ಬೆಳೆದ ಹಣ್ಣು, ತರಕಾರಿ, ದವಸಧಾನ್ಯ ಮಾತ್ರ.ಹಾಗಾದರೆ ನಮಗೆ ನಿಜವಾಗಿಯೂ ಏನು ಬೇಕು, ಏನು ಬೇಡ ಎಂದು ಯೋಚಿಸುವುದರಲ್ಲಿ ನಾವು ಸೋತಿದ್ದೇವೆ ಎಂದರ್ಥವಲ್ಲವೇ? 

ಈ ಕೊರೊನ ರಜೆ ಯೋಚಿಸಲು ನಮಗೊಂದು ಉತ್ತಮ ಸಮಯಾವಕಾಶವನ್ನು ಕೊಟ್ಟಿದೆ. ಹಿಂದಿನ ತಪ್ಪುಗಳನ್ನು  ಸರಿಪಡಿಸಿ, ಬಲಹೀನರನ್ನು ಎತ್ತಿ ಎಬ್ಬಿಸಿ ಹೆಗಲು ಕೊಡುವುದಕ್ಕಾಗಿ ಒಳ್ಳೆಯ ಅವಕಾಶ ವನ್ನು ಒದಗಿಸಿದೆ. ನಮ್ಮ ಮುಂದಿನ ಪೀಳಿಗೆಗೆ ನಿಜಕ್ಕೂ ನಾವು ಮಾಡಬೇಕಾದ ದ್ದೇನು ಎಂದು ಯೋಚಿಸಿ ಕಾರ್ಯಗತಗೊಳಿಸುವ ಮೈದಾನ ವನ್ನು  ಒದಗಿಸಿದೆ. ನಾಡು,ಅಥವಾ ದೇಶ ಕಾಯಲು ಸೈನಿಕನಾಗಿ ಗಡಿಗೇ ಹೋಗಬೇಕಿಲ್ಲ, ನಮ್ಮ ನಮ್ಮ ಮಿತಿಯನ್ನರಿತು ವ್ಯಾಪ್ತಿಯನ್ನು ಬಳಸಿ ಪರೋಪಕಾರಾರ್ಥಂ ಇದಂ ಶರೀರಂ ಎಂಬಂತೆ ಬದುಕಿ “ಅನನ್ಯ”ರಾಗಬಹುದೆಂಬ ಬಹುದೊಡ್ಡ ಪಾಠವನ್ನೇ ಕಲಿಸಿದೆ.

-ವಿದ್ಯಾಶ್ರೀ. ಎಸ್.ಅಡೂರ್

8 Responses

  1. Hema says:

    ಸೊಗಸಾದ ಸಕಾಲಿಕ ಬರಹ.

  2. ನಯನ ಬಜಕೂಡ್ಲು says:

    ಹೌದು ಕೊರೊನ, ಇವತ್ತು ಪ್ರತಿಯೊಬ್ಬನ ಕಣ್ಣು ತೆರೆಸಿದೆ. ವ್ಯವಧಾನವೇ ಇಲ್ಲದ ಬದುಕಲ್ಲಿ ಎಲ್ಲವನ್ನು ಕಣ್ಣರಳಿಸಿ ನೋಡುವಂತೆ ಮಾಡಿದೆ. ಪ್ರತಿಯೊಂದು ವಿಚಾರದ ಮೌಲ್ಯವನ್ನು ತಿಳಿಸಿ ಕೊಟ್ಟಿದೆ. ಉತ್ತಮ ಬರಹ

  3. ASHA nooji says:

    ಅರ್ಥ ಗರ್ಭಿತ ಬರಹ .ಸುಪರ್ ‍ಕೊರೊನೆಂಬ ಮಾರಿವಕ್ಕರಿಸದಿದ್ದರೆ ನಮಗೆ ಹೊಸ ಹೊಸ ತಿಂಡಿ madadlu ಬರುತ್ತಿರಲಿಲ್ಲ ನಿಜ .ವಿದ್ಯ .ಮಕ್ಕಳಿಗೂ adara ಗುರುತು ಸಿಗುವಂತೆ madithu ನೀವು ಹೇಳಿದಹಾಗೆ ನಮ್ಮ ನೆಲವನ್ನು ಬಿಟ್ಟು ಬೇರೆಯ ಮಣ್ಣಿಗೆ ಹೋದರೆ ಏನು ಪ್ರಯೋಜನ?ಸರಿyagi
    ವಿವರಿಸಿದಿರಿ .

  4. ಶಂಕರಿ ಶರ್ಮ says:

    ಕೊರೋನದಿಂದ ಕಲಿಯಬಹುದಾದಂತಹ ಪಾಠಗಳು ಅನೇಕ..ಮನ ಮುಟ್ಟುವ ಬರಹ.

  5. parvathikrishna says:

    ಧಾವಂತದ ಬದುಕಿಗೆ ತುಸು ಅಡ್ಡಗಾಲು ಹಾಕಿದ lockdown ಎಲ್ಲರನ್ನು ಯೋಚಿಸುವಂತೆ ಮಾಡಿದೆ. ಹಣ,ಆಧುನಿಕ ಜೀವನ ಕ್ರಮವನ್ನು ಇನ್ನೊಂದೇ ದೃಷ್ಟಿಕೋನದಲ್ಲಿ ನೋಡುವ ಅವಕಾಶ ತಂದಿದೆ.ಚೆನ್ನಾಗಿದೆ ಲೇಖನ.

  6. Samatha says:

    ನಮ್ಮ ಒಳ ಹೊರಗನ್ನೆಲ್ಲ ಸ್ವಲ್ಪ ವಾದರೂ ಈ ಕೊರೋನ ಶುಚಿ ಗೊಳಿಸುವ ಕೆಲಸ ಮಾಡಿದೆ.ಸಕಾಲಿಕ ಚಿಂತನಾ ಶೀಲ ಬರಹ.

  7. Anonymous says:

    ಸಕಾಲಿಕ ಬರಹ. ಅಡಗಿಹೋದ ಅಡಿಗೆ,ಆಟ, ಪಾಠ ಇವುಗಳೆಲ್ಲ ಮುಂದೆ ಬಂತು.ಸಕಾಲಿಕ ಬರಹ ವಿದ್ಯಾಶ್ರೀ

  8. Vidyashree.s.adoor says:

    ಓದಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು

Leave a Reply to Samatha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: