ತಳಮಳ ….
ಕಟ್ಟಿಮನಿ ಪರಿವಾರದ ಮದುವೆಯಿಂದಾಗಿ ಕಲ್ಯಾಣ ಮಂಟಪ ಆಗಲೇ ಜನರಿಂದ ತುಂಬಿ ತುಳುಕುತಿತ್ತು. ಜನ ವಿಶೇಷ ವೇಷ ಭೂಷಣ ಧರಿಸಿ ಆಸನದಲ್ಲಿ ವಿರಾಜಮಾನರಾಗಿದ್ದರು. ಯಾವ ಆಸನಗಳು ಖಾಲಿ ಕಾಣುತಿರಲಿಲ್ಲ ಅತಿಥಿಗಳ ಕೈಯಲ್ಲಿ ಉಡುಗೊರೆ ನೀಡಲು ತಂದ ಸಾಮಾನುಗಳು ಕಾಣುತಿದ್ದವು. ಮದಿಮಕ್ಕಳ ವೇದಿಕೆ ಹೂವಿನಲಂಕಾರದಿಂದ ಸಿಂಗಾರಗೊಂಡಿತ್ತು. ದೊಡ್ಡವರ ಮದುವೆ ಅಂದಮೇಲೆ ಸಹಜವಾಗಿಯೇ ಕಾರು ಜೀಪು ಬೈಕು ಮಂಟಪದ ಅಂಗಳದಲ್ಲಿ ಸಾಲುಸಾಲಾಗಿ ನಿಂತಿದ್ದವು . ಬ್ಯಾಂಡ ಬಾಜಿಯ ಸದ್ದು ಕಿವಿಗಡಚುವಂತೆ ಕೇಳಿ ಬರುತಿತ್ತು ಕೆಲ ಸಣ್ಣ ಮಕ್ಕಳು ಬ್ಯಾಂಡ ಬಾಜಿಯ ಸದ್ದಿಗೆ ಡ್ಯಾನ್ಸ್ ಮಾಡುತ್ತಾ ಹೆಜ್ಜೆ ಹಾಕುತಿದ್ದರು.
ಊರು ಸಣ್ಣದಾದರೂ ಮದುವೆಯಿಂದ ಊರಿನ ಚಿತ್ರಣವೇ ಬದಲಾದಂತೆ ಕಾಣುತಿತ್ತು .ಬಣ್ಣ ಬಣ್ಣದ ಬ್ಯಾನರ್, ಕಟೌಟುಗಳು ಹಾದಿ ಬೀದಿಯಲ್ಲಿ ರಾರಾಜಿಸಿ ಗಾಳಿಗೆ ಟಪಟಪನೆ ಸದ್ದು ಮಾಡುತ್ತಾ ಜನರನ್ನು ಸ್ವಾಗತಿಸಿದಂತೆ ಭಾಸವಾಗುತಿತ್ತು. ಜನ ತಮ್ಮ ಮನೆಗೆ ಮುಂಜಾನೆಯಿಂದಲೇ ಹೊರಗೀಲಿ ಹಾಕಿಕೊಂಡು ಬಂದಿರುವದರಿಂದ ಊರು ಭಣಗೊಡತಿತ್ತು. ಮದುವೆ ಮಂಟಪದ ಮುಖ್ಯ ದ್ವಾರದ ಬಳಿ ಮದಿಮಗನ ತಂದೆ ನೀಲಕಂಠಪ್ಪ ಸರ್ವರಿಗೂ ಸ್ವಾಗತಿಸಿ ಒಳ ಕಳಿಸುತಿದ್ದ. ಇವನ ಹೆಂಡತಿ ಭಾಗ್ಯಲಕ್ಛ್ಮಿ ಮಹಿಳೆಯರಿಗೆ ಕುಂಕುಮ ಹಚ್ಚಿ ಗೌರವಿಸುತಿದ್ದಳು. ಇಬ್ಬರ ಮುಖದ ಮೇಲೂ ಖುಷಿ ತೇಲಾಡುತಿತ್ತು.
ನೀಲಕಂಠಪ್ಪ ಮೊದಲೇ ಕೀಟನಾಶಕ ವ್ಯಾಪಾರಿ ಊರ ರೈತರಲ್ಲದೇ ಬೇರೆ ಊರಿನ ರೈತರಿಗೂ ಕೂಡ ಕೀಟನಾಶಕ ಕೊಡುತಿದ್ದ. ಅನೇಕರು ಉದ್ರಿ ಒಯ್ದು ಆಮೇಲೆ ಹಣ ಚುಕ್ತಾ ಮಾಡುತಿದ್ದರು. ಇದರಿಂದ ಇವನ ಮೇಲೆ ಅವರಿಗೆಲ್ಲ ಪ್ರೀತಿ ವಿಶ್ವಾಸ ಅಪಾರವಾಗಿತ್ತು.ತನ್ನ ಏಕೈಕ ಮಗ ನಂದೀಶನ ಮದುವೆ ಭರ್ಜರಿಯಾಗಿ ಮಾಡುವ ಉದ್ದೇಶದಿಂದ ನೀಲಕಂಠಪ್ಪ ಯಾರಿಗೂ ಬಿಟ್ಟು ಬಿಡದೇ ಆಮಂತ್ರಣ ಕೊಟ್ಟಿದ್ದ. ನಿರೀಕ್ಷೆಗೂ ಮೀರಿ ಜನ ಸೇರಿದ್ದರು .
ಮಗನ ನೆಂಟಸ್ಥನ ಮಾಡಿಸಲು ನೀಲಕಂಠಪ್ಪ ಬ್ರೋಕರ ಮಲ್ಲಣ್ಣನಿಗೆ ಜವಾಬ್ದಾರಿ ವಹಿಸಿದ್ದ ಅಂದೊಂದಿನ ಬ್ರೋಕರ ಮಲ್ಲಣ್ಣ ನೆಂಟಸ್ಥನ ಮಾಡಿಸಲು ಇವನ ಮನೆಗೆ ಬಂದಾಗ ಬೇಸಿಗೆಯ ಸುಡು ಬಿಸಿಲು ಬೆವರಿಳಿಸಿತ್ತು. ಜೇಳಜಿ ಕಟ್ಟೆಗೆ ಬಂದು ಉಸ್ಸಂತ ಕುಳಿತಾಗ ಭಾಗ್ಯಲಕ್ಛ್ಮಿ ಅವನಿಗೆ ತಂಪಾದ ಮಜ್ಜಿಗೆ ಕುಡಿಸಿದ್ದಳು. ಬ್ರೋಕರ ಮಲ್ಲಣ್ಣ ತನ್ನ ಹೆಗಲಿನ ಬ್ಯಾಗ ಕೆಳಗಿಳಿಸಿ. ಫೋಟೋ ಆಲ್ಬಮ್ ಹಿಡಿದು ಯಾವ ಹುಡುಗಿಗೆ ಆಯ್ಕೆ ಮಾಡ್ತಿರೊ ಮಾಡ್ರಿ ನೆಂಟಸ್ಥನ ಮಾಡಿಸುವ ಜವಾಬ್ದಾರಿ ನನ್ನದು ಅಂತ ಹೇಳಿದ್ದ. ನೂರಾರು ಫೋಟೋಗಳಿರು ಆಲ್ಬಮ್ ನೋಡಿದ ನೀಲಕಂಠಪ್ಪ ಅವುಗಳಲ್ಲಿನ ಒಂದು ಫೋಟೋ ಆಯ್ಕೆ ಮಾಡಿ ಯಾರೀ ಹುಡುಗಿ ಅಂತ ಪ್ರಶ್ನಿಸಿದ. ಭಾಗ್ಯಲಕ್ಛ್ಮಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದಳು. ಇವಳ ಹೆಸರು ಅಪರ್ಣ. ಸೋಲಾಪೂರ ಕನ್ಯೆ. ವಿದ್ಯಾವಂತೆ ಬುದ್ಧಿವಂತೆ ಅಂತ ಮಲ್ಲಣ್ಣ ಗುಣಗಾನ ಮಾಡಿದ್ದ. ನೀಲಕಂಠಪ್ಪ ಖುಷಿಗೊಂಡು ತಕ್ಷಣ ನಂದೀಶನಿಗೆ ಕರೆಯಿಸಿ ಫೋಟೋ ತೋರಿಸಿದ. ನಂದೀಶ ಮರು ಮಾತಾಡದೆ ಒಪ್ಪಿಗೆ ಸೂಚಿಸಿದ್ದ. ತಕ್ಷಣ ಬ್ರೋಕರ ಮಲ್ಲಣ್ಣ ಈ ನೆಂಟಸ್ಥನ ಬೆಸೆದಿದ್ದ ಆತ ಮದುವೆ ಮಂಟಪದ ಮುಂದಿನ ಸೀಟಿನಲ್ಲೇ ವಿರಾಜಮಾನನಾಗಿ ಕುಳಿತಿದ್ದ.
ಮದುವೆ ವ್ಯವಸ್ಥೆ ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತಿದ್ದರು. ಈ ರೀತಿ ಮದುವೆ ನಮ್ಮಂಥ ಸಣ್ಣ ಊರಾಗ ಯಾರೂ ಮಾಡಿಲ್ಲ ಅಂತ ಹೊಗಳುತಿದ್ದರು. ಮನೆಗೆ ಸೊಸೆ ಬರ್ತಾಳೆ ಯಾರ ಮನೀಗಾದರೂ ಸೊಸೆ ಬಂದರೆ ನಮ್ಮ ಮನೆಗೆ ಯಾವಾಗ ಬರ್ತಾಳೆ ಅಂತ ಮುಖ ಸಪ್ಪಗೆ ಮಾಡತಿದ್ದೆ ಈಗಲಾದರೂ ಖುಷಿ ಆಯ್ತಿಲ್ಲ ಅಂತ ಭಾಗ್ಯಲಕ್ಛ್ಮಿಗೆ ಅಕ್ಕ ಪಕ್ಕದ ಮನೆಯ ಮಹಿಳೆಯರು ಪ್ರಶ್ನಿಸಿದಾಗ ಭಾಗ್ಯಲಕ್ಛ್ಮಿ ಮುಗ್ಳನಗೆ ಬೀರಿ ತಲೆಯಾಡಿಸಿದಳು.
ಪಕ್ಕದ ಟೆಂಟಿನಿಂದ ಅಡುಗೆ ವಾಸನೆ ಘಮ್ ಅಂತ ಮೂಗಿಗೆ ಬಡಿದು ಬಾಯಲ್ಲಿ ನೀರೂರಿಸುತಿತ್ತು ಸಿಹಿ ತಿಂಡಿಗಳಾದ ಜಿಲೇಬಿ, ಬೋಂದಿಲಾಡು, ಮೈಸೂರಪಾಕ್, ಸೋನಪಪ್ಪಡಿ, ಬರ್ಫಿ, ಪೂರಿ, ಚಪಾತಿ, ಕಡಕ್ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಕಾಳುಪಲ್ಯ, ಮುದ್ದೆಪಲ್ಯ, ಅನ್ನ ಸಾರು, ಎಲ್ಲವೂ ಬುಟ್ಟಿಯಲ್ಲಿ ಹಾಕಿ ಸಾಲಾಗಿ ಜೋಡಿಸಿ ಊಟಕ್ಕೆ ಬಡಿಸಲು ಸಿದ್ಧಗೊಳಿಸುತಿದ್ದರು.
ಇನ್ನೇನು ಕೆಲವೇ ನಿಮಿಷಗಳಲ್ಲಿ ಅಕ್ಛತೆ ಬಿದ್ದು ಊಟ ಚಾಲೂ ಆಗುವದಿತ್ತು. ಅಷ್ಟರಲ್ಲಿ ಮದಿಮಗ ಕಾಣಸ್ತಿಲ್ಲ ಅನ್ನುವ ಧನಿಯೊಂದು ಜನರ ಮಧ್ಯೆ ಬಿರುಗಾಳಿಯಂತೆ ನುಗ್ಗಿ ತಳಮಳ ಸೃಷ್ಟಿಸಿತು. ಸುದ್ದಿ ಕೇಳುತಿದ್ದಂತೆ ಜನ ಗಾಬರಿಯಾಗಿ ತಮ್ಮ ಆಸನದಿಂದ ಎದ್ದು ಒಬ್ಬರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡತೊಡಗಿದರು.
”ಮದಿಮಗ ಎಲ್ಲಿಗೆ ಹೋಗ್ತಾನೆ? ಅಲ್ಲೇ ಇದ್ದಿರಬೇಕು ಛೊಲೊ ಹುಡುಕರಿ” ಅನ್ನುವ ಸಲಹೆಗಳು ಅಲ್ಲಲ್ಲಿ ಕೇಳಿ ಬಂದವು. ”ಮದಿಮಗನಿಗೆ ಹುಡುಕುವ ಜಾಗಾ ಒಂದೂ ಉಳಿದಿಲ್ಲ ಎಲ್ಲ ಕಡೆ ಹುಡುಕಿದ ಮ್ಯಾಲೇ ಹೇಳತಿರೋದು” ಅಂತ ಉತ್ತರ ಬಂದಿತು .
ಇಂಥಾ ಸಮಯದಾಗ ಮದಿ ಮಗಾ ಹೋಗ್ತಾನೆಂದರೆ ಅವನಿಗೆ ತಿಳಿಯೋದಿಲ್ಲೇನು? ಅಂತ ಕೆಲವರು ಸಿಟ್ಟು ಹೊರಹಾಕಿದರು. ಇಡೀ ಮದುವೆ ಮಂಟಪ ಚರ್ಚೆಯ ಗೂಡಾಯಿತು. ಬ್ಯಾಂಡ ಬಾಜಿಯವರು ಸ್ತಬ್ಧರಾದರು. ದೂರ ದೂರ ನಿಂತವರು ಸಮೀಪ ಬಂದು ಮದಿಮಗ ಎಲ್ಲಿಗೆ ಹೋಗಿರಬೇಕು ಅಂತ ಲೆಕ್ಕ ಹಾಕತೊಗಿದರು. ಒಂದು ಕಡೆ ಮದಿಮಗನ ಕಡೆಯವರು ಇನ್ನೊಂದು ಕಡೆ ಮದಿಮಗಳ ಕಡೆಯವರು ಗುಂಪುಗೂಡಿ ಚರ್ಚೆಯಲ್ಲಿ ಮುಳುಗಿದರು. ಎಲ್ಲರ ಮುಖದ ಮೇಲೂ ನೋವು ನಿರಾಸೆ ಎದ್ದು ಕಾಣುತಿತ್ತು. ನೀಲಕಂಠಪ್ಪನ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು.
ಭಾಗ್ಯಲಕ್ಛ್ಮಿಯಂತೂ ಅತ್ತ ಇತ್ತ ಮೈಮೇಲೆ ಅರಿವಿಲ್ಲದಂತೆ ತಿರುಗಾಡಿ ನಮ್ಮ ನಂದೀಶಗ ನೋಡಿರೇನು? ಯಾರ ಮದುವ್ಯಾಗೂ ಹಿಂಗ ಆಗಿಲ್ಲ ನಮ್ಮ ನಂದೀಶನ ಮದುವ್ಯಾಗ ಹೀಗಾಗಬೇಕಾ? ನಾವು ಯಾರಿಗೇನು ಅನ್ಯಾಯ ಮಾಡಿದ್ದೇವು? ದೇವರು ಯಾಕೆ ಇಂತಹ ವ್ಯಾಳ್ಯಾ ತಂದಿಟ್ಟ ಅಂತ ನೋವು ಸಂಕಟ ಹೊರ ಹಾಕಿದಳು .
”ನಂದೀಶನ ಗೆಳಯ ನಾಗರಾಜನಿಗಾದ್ರು ವಿಚಾರಿಸು ” ಅಂತ ಭಾಗ್ಯಲಕ್ಛ್ಮಿ ಯಾರೋ ಸಲಹೆ ಕೊಟ್ಟರು.
ಭಾಗ್ಯಲಕ್ಛ್ಮಿ ಆತನ ಹತ್ತಿರ ಹೋಗಿ ”ನೀನಾದರೂ ನಂದೀಶನಿಗೆ ನೋಡಿದೇನು?” ಅಂತ ಪ್ರಶ್ನಿಸಿದಳು ಸ್ವಲ್ಪ ಸಮಯದ ಮೊದಲು ರಾಜೇಶನ ಜೊತೆ ರೂಮಿನಲ್ಲಿ ಕುಳಿತು ಮಾತುಕತೆಯಲ್ಲಿ ತೊಡಗಿದ ವಿಷಯ ಆತ ತಿಳಿಸಿದ.
”ನಂದೀಶ ಹಾಲು ಕುಡಿಯುವ ಮಗುನಾ? ಎಲ್ಲರೂ ಪರೇಶಾನ ಆಗ್ತಾರೆ ಅಂತ ಗೊತ್ತಾಗುವದಿಲ್ಲವೇ?” ಅಂತ ಆತನ ಗೆಳೆಯ ಧರ್ಮೇಶ ತರಾಟೆಗೆ ತೆಗೆದುಕೊಂಡ. ಯಾರ ಕಣ್ಣಿಗೂ ಬೀಳದೆ ಏಕಾಏಕಿ ಮಂಗಮಾಯ ಯಾಕಾದ? ಅಂತ ಶಿವಕುಮಾರ ಯೋಚಿಸಿದ.
ನಂದೀಶನ ಮೊಬೈಲಿಗೆ ಕರೆ ಮಾಡಿ ನೋಡುತ್ತೇನೆ ಅಂತ ನಾಗರಾಜ್ ತನ್ನ ಮೊಬೈಲ ಹೊರ ತೆಗೆದು ಕರೆ ಮಾಡಿದ. ಆಗ ನಂದೀಶನ ಮೊಬೈಲ ಸ್ವಿಚ್ ಆಫ್ ಹೇಳಿತು. ನಂದೀಶನಿಗೆ ಹುಡುಗಿ ಪಸಂದ ಇಲ್ಲ ಅನ್ನುವದಕ್ಕೆ ಯಾವುದೇ ಆಸ್ಪದವಿರಲಿಲ್ಲ ತಾನು ಒಪ್ಪಿದ ಮೇಲೆಯೇ ಈ ನೆಂಟಸ್ಥನ ಮಾಡಲಾಗಿತ್ತು. ಮದುವೆ ವಾರ ಇರುವಾಗಲೇ ರಾಜೇಶನ ಬೈಕ ಮೇಲೆ ಊರೂರ ತಿರುಗಾಡಿ ಆಮಂತ್ರಣ ಪತ್ರಿಕೆ ಹಂಚಿ ಬಂದಿದ್ದ ಮದುವೆಯ ದಿನ ಮುಂಜಾನೆ ಮದಿಮಗಳ ಕೈ ಹಿಡಿದು ಕೆಲ ಸಂಪ್ರದಾಯ ನೆರವೇರಿಸಿದ್ದ . ಹಸಿ ಮಣೆಯ ಮೇಲೆ ಕುಳಿತು ಅರಸಿಣ ಗಂಧ ಲೇಪಿಸಿಕೊಂಡು ಸುರಗಿ ನೀರು ಹಾಕಿಸಿಕೊಂಡಿದ್ದ ಇಂತಹವನು ಒಮ್ಮೆಲೇ ಅಕ್ಛತೆ ಸಮಯದಲ್ಲಿ ಕಾಣೆಯಾಗಿದ್ದು ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿ ಕಾಡಿತು.
ನಂದೀಶ ಹೋಗುವ ವಿಷಯ ನಿನಗೂ ಹೇಳಿಲ್ಲೇನು? ಅಂತ ಅಪರ್ಣಾಳಿಗೆ ಗೆಳತಿಯರು ಸುತ್ತುವರೆದು ಪ್ರಶ್ನಿಸಿದರು. ಅಪರ್ಣ ಕಣ್ತುಂಬಾ ನೀರು ತಂದು ಇಲ್ಲ ಅಂತ ತಲೆಯಾಡಿಸಿದಳು. ನಂದೀಶ ವ್ಯಾಪಾರ ಉದ್ಯೋಗ ಮಾಡ್ತಾನೆ ಒಬ್ಬನೇ ಮಗಾ ಯಾವುದೇ ದುಶ್ಚಟ ಇಲ್ಲ ಅಂತ ನಮ್ಮ ಮಗಳಿಗೆ ಕೊಡಲು ಒಪ್ಪಿದೇವು ಈಗ ನೋಡಿದರೆ ನಡು ನೀರಾಗ ಕೈಬಿಟ್ಟು ಹೊರಟು ಹೋದ. ಅವನ ಮನಸ್ಸಿನ್ಯಾಗ ಅದ್ಯಾವ ಹುಡುಗಿ ಇದ್ದಾಳೊ ಏನೊ ಯಾರಿಗೆ ಗೊತ್ತು ಅಂತ ಅಪರ್ಣಾಳ ತಾಯಿ ನೀಲಮ್ಮ ಸಂಕಟ ಹೊರ ಹಾಕಿದಳು. ಮೊದಲೇ ಗೊತ್ತಿದ್ದರೆ ಈ ನೆಂಟಸ್ಥನ ನಾವೆಲ್ಲಿ ಮಾಡತಿದ್ದವಿ, ಊರ ಮಂದಿಗೆ ಕರಕೊಂಡು ಬಂದು ಮದುವೆ ಮಾಡದೆ ವಾಪಸ್ ಹೋದರೆ ನಮ್ಮ ಮರ್ಯಾದೆ ಏನಾಗಬೇಕು? ಅಂತ ಅಪರ್ಣಾಳ ತಂದೆ ಶೇಖರೆಪ್ಪ ಕೋಪ ತಾಪ ಹೊರ ಹಾಕಿದ.
ನಮಗೇನು ಹತ್ತೆಂಟು ಮಕ್ಕಳಾ? ಇರೋಳು ಒಬ್ಬಳೇ, ಬೀಗರು ಬೇಡೋದಕ್ಕಿಂತ ಹೆಚ್ಚಿನ ಹುಂಡಾ ಬಂಗಾರ ಕೊಟ್ಟು ಕೈನೂ ಖಾಲಿ ಮಾಡಿಕೊಂಡವಿ ಅಂತ ಇಬ್ಬರೂ ಕಣ್ಣಂಚಿನಲ್ಲಿ ನೀರು ತಂದರು. ಇನ್ನೇನು ಮಾಡೋದು ಎಲ್ಲಾ ಮುಗಿದೇ ಹೋಯಿತು. ಅದೇ ಚಿಂತೆಯಲ್ಲಿ ಕಾಲಹರಣ ಮಾಡಿದರೆ ಫಾಯದಾ ಇಲ್ಲ . ಟೆಂಟಿನವರು ಸಾಮಾನು ಬಿಚ್ಚಿ ಹೋಗುತಿದ್ದಾರೆ. ಅಡುಗೆ ಭಟ್ಟರು ಗಂಟು ಮೂಟೆ ಕಟ್ಟಿ ತಯ್ಯಾರಾಗಿದ್ದಾರೆ ಬ್ಯಾಂಡ ಬಾಜಿಯವರು ಆಗಲೇ ಹೋಗಿ ಬಿಟ್ಟಿದ್ದಾರೆ. ಖಾಲಿ ಕಲ್ಯಾಣ ಮಂಟಪದಾಗ ನಾವ್ಯಾಕೆ ಕೂಡಬೇಕು? ಕತ್ತಲಾಗುವದರೊಳಗೆ ಊರು ಸೇರೋಣ ಅಂತ ಮಲ್ಲಿನಾಥ ಸಲಹೆ ನೀಡಿದ. ಶೇಖರೆಪ್ಪನಿಗೆ ದುಃಖ ತಡೆಯಲಾಗಲಿಲ್ಲ ಹೆಗಲ ಮೇಲಿನ ಶಲ್ಯ ತೆಗೆದು ಕಣ್ಣೀರೊರೆಸಿಕೊಂಡು ಎದ್ದು ನಿಂತ.
‘ನೀನ್ಯಾಕೆ ಅಳತಿ ಮಾರಾಯ ಅಪರ್ಣಾ ಬಂಗಾರದ ಹುಡುಗಿ ಇಂಥವಳಿಗೆ ಕೈಬಿಟ್ಟು ಹೋಗ್ಯಾನಂದ್ರ ಅವನೇ ಮೂರ್ಖ ಇದೇ ತಲ್ಯಾಗ ಇಟ್ಕೊಂಡು ಕೊರಗಬ್ಯಾಡ. ಮಗಳಿಗೆ ಮತ್ತೊಂದು ವರ ಹುಡುಕಿ ಮದುವೆ ಮಾಡಿದರಾಯಿತು’ ಅಂತ ಸುಧಾಕರ ಸಮಾಧಾನ ಪಡಿಸಲು ಮುಂದಾದ . ನಂದೀಶ ಮದುವೆ ಆದ ಮ್ಯಾಲ ಕೈಕೊಟ್ಟಿದ್ದಿರ ಏನು ಮಾಡೋದಿತ್ತು ಮಗಳು ಜೀವನ ಪೂರ್ತಿ ಕೊರಗಬೇಕಾಗುತಿತ್ತು ಅಂತ ಕೆಲವರು ಸಮಜಾಯಿಷಿ ನೀಡಿದರು.
ನಂದೀಶನ ಬಗ್ಗೆ ಎದ್ದಿರುವ ಊಹಾಪೋಹಕ್ಕೆ ತೆರೆ ಎಳೆಯಬೇಕು ಇಲ್ಲದಿದ್ದರೆ ಆತ ಎಲ್ಲರ ದೃಷ್ಟಿಯಲ್ಲಿ ಅಪರಾಧಿಯಾಗುತ್ತಾನೆ ಅಂತ ರಾಜೇಶ್ ಸತ್ಯ ಹೇಳಲು ಧಾವಿಸಿ ಬಂದ. ರಾಜೇಶನ ಮುಖ ಎಲ್ಲರೂ ಪ್ರಶ್ನಾರ್ಥಕವಾಗಿ ನೋಡತೊಡಗಿದರು. ”ನಂದೀಶ ಒಳ್ಳೆಯ ಹುಡುಗ ಇದರಲ್ಲಿ ಆತನದೇನೂ ತಪ್ಪಿಲ್ಲ. ವಾರದ ಹಿಂದೆ ನಾವಿಬ್ರೂ ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದೇವು. ವಾಪಸ್ ಬರುವಾಗ ನಮ್ಮ ಬೈಕಿಗೆ ಕಾರೊಂದು ಡಿಕ್ಕಿ ಹೊಡೆಯಿತು. ನಾನು ಕೆಳಗೆ ಬಿದ್ದೆ. ನನ್ನ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಯಿತು. ನಾನು ಪ್ರಜ್ಞೆ ಕಳೆದುಕೊಂಡಾಗ ನಂದೀಶನೇ ನನ್ನನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದ. ರಕ್ತಸ್ರಾವವಾಗಿದೆ ತುರ್ತು ರಕ್ತದ ಅವಶ್ಯಕತೆ ಇದೆ ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಅಂತ ಡಾಕ್ಟರ್ ಹೇಳಿದರು. ಆಗ ನಂದೀಶ ತನ್ನ ರಕ್ತ ನೀಡಿ ಆಮಂತ್ರಣ ಪತ್ರ ಹಂಚಲು ಹೊರಟು ಹೋದ. ನಾನು ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡದೆ, ಡಿಸ್ಚ್ಯಾರ್ಜ ಮಾಡುವಾಗ ನಿನ್ನ ಗೆಳಯ ಎಲ್ಲಿ ಅಂತ ಡಾಕ್ಟರ್ ನನಗೆ ಕೇಳಿದರು. ಆತನ ಮದುವೆ ಇವತ್ತೇ ಇದೆ” ಅಂತ ಹೇಳಿದೆ.
ಡಾಕ್ಟರ್ ನನ್ನ ಮುಖ ಪ್ರಶ್ನಾರ್ಥಕವಾಗಿ ನೋಡಿದಾಗ ”ಯಾಕೆ ಸರ್ ಏನು ವಿಷಯ” ಅಂತ ಪ್ರಶ್ನಿಸಿದೆ.
”ನಿನ್ನ ಗೆಳೆಯನಿಗೆ ಎಚ್ ಆಯ್ ವಿ ಪಾಸಿಟಿವ್ ಇದೆ ಆತನ ರಕ್ತದ ಬದಲಿಗೆ ನಿನಗೆ ಬೇರೆ ರಕ್ತದ ವ್ಯವಸ್ಥೆ ಮಾಡಬೇಕಾಯಿತು ಎಂದರು” ವಿಷಯ ಕೇಳಿ ಅಘಾತಗೊಂಡೆ ಇನ್ನೂ ತಡಾ ಮಾಡಬಾರದು ವಿಷಯ ನಂದೀಶನ ಕಿವಿಗೆ ಮುಟ್ಟಿಸಬೇಕು ಅಂತ ಸೀದಾ ಕಲ್ಯಾಣ ಮಂಟಪಕ್ಕೆ ಬಂದೆ.
ನಂದೀಶ ಆಗಲೇ ಅಕ್ಛತೆ ಹಾಕಿಸಿಕೊಳ್ಳಲು ತಯ್ಯಾರಾಗುತಿದ್ದ. ಅವಸರದಿಂದ ಈ ವಿಷಯ ಆತನ ಕಿವಿಗೆ ಮುಟ್ಟಿಸಿದೆ. ವಿಷಯ ಕೇಳಿ ನಂದೀಶನ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು . ನನಗೆ ಈ ರೋಗ ಯಾಕೆ ಬಂತು? ಹೇಗೆ ಬಂತು? ಅಂತ ಗಾಬರಿಯಾದ .
ಇನ್ನೂ ಕಾಲ ಮಿಂಚಿಲ್ಲ. ಅಪರ್ಣಾಳ ಬಾಳು ನನ್ನಿಂದ ಹಾಳಾಗಬಾರದು. ಮದುವೆ ನಿಂತು ಹೋದರೆ ಹೋಗಲಿ ಅವಳಿಗೆ ಮತ್ತೊಬ್ಬ ವರ ಸಿಗ್ತಾನೆ. ಮುಂದಿನ ಅವಳ ಭವಿಷ್ಯ ಉಜ್ವಲವಾಗುತ್ತದೆ ಅಂತ ನಿರ್ಧರಿಸಿ ಹೊರಟು ಹೋದ ಅನ್ನುವ ವಾಸ್ತವ ವಿವರಿಸಿದ. ರಾಜೇಶನ ಮಾತು ಎಲ್ಲರಿಗೂ ಮೂಕಸ್ಮಿತರಾಗುವಂತೆ ಮಾಡಿತು ಭಾರವಾದ ಮನಸ್ಸಿನಿಂದ ನಿಟ್ಟುಸಿರು ಬಿಟ್ಟರು. ನಂದೀಶನ ಬಗ್ಗೆ ಇದ್ದ ಕೊಪ ತಾಪ ಕ್ಛಣ ಮಾತ್ರದಲ್ಲೇ ಕರಗಿ ಹೋಯಿತು !!!
–ಶರಣಗೌಡ ಬಿ ಪಾಟೀಲ ತಿಳಗೂಳ , ಕಲಬುರಗಿ
ಉತ್ತಮ ಮಾಹಿತಿಯನ್ನು ನೀಡಿದ ..ಹಾಗೂ ನಿಸ್ವಾರ್ಥ ಮನೋಭೂಮಿಕೆಯ ಕಥೆ..
ಧನ್ಯವಾದಗಳು ಸಾರ್
ಉತ್ತಮವಾದ ವಿಚಾರಗಳ ಮೂಲಕ ಕಥೆಯು ಅಲಂಕೃತವಾಗಿದೆ ,ಹೀಗೆ ಇನ್ನೂ ಅನೇಕ ವಿಚಾರಗಳು ನಮಗೆ ತಲುಪಿಸಿ ಒಳ್ಳೆದಾಗಲಿ
ತಳಮಳ
ವಾಸ್ತವಿಕ ವಿವರಣೆಯಲ್ಲಿ ಯಥಾರ್ಥ ನಿರೂಪಣೆಯಲ್ಲಿ/
ಮದುವೆ ಮಂಟಪದ ಸಡಗರವು ಪ್ರದರ್ಶಿಸಿತು ಕಂಗಳಲ್ಲಿ/
ವಾಸ್ತವಿಕ ವಿವರಣೆಯಲ್ಲಿ ಯಥಾರ್ಥ ನಿರೂಪಣೆಯಲ್ಲಿ/
ಮದುವೆ ಸಂಭ್ರಮದ ಉಲ್ಲಾಸವು ತುಂಬಿತು ಬಾವಗಳಲ್ಲಿ/
ಹೆತ್ತವರ ಆತುರವು ಅಥಿತಿಗಳ ಆನಂದವು ತೇಲಿಬಂತು/
ಹರ್ಷದ ಹೊಳೆಯಲ್ಲಿ ಸಂತೋಷದ ಸಾಗರವು ಉಕ್ಕೇರಿತಿತ್ತು/
ಬಂದುಬಳಗದವರ ತನುಮನಗಳು ಹಿಗ್ಗಿನಲ್ಲಿ ಹಾರಾಡಿತು/
ವೈಭವದ ಮದುವೆ ಸಮಾರಂಭದಲ್ಲಿ ನಿರೀಕ್ಷೆಯು ಹೆಚ್ಚುತ್ತಿತ್ತು/
ಶುಭಸಮಯ ಹತ್ತಿರವಾದಂತೆ ಮದುಮಗನ ನೆನಪಾಯಿತು/
ಹೋಗಿರುವುನೆಲ್ಲಿಗೆ ಕಣ್ಮರೆಯಾಗಿ ಯಾರಿಗೂ ಅರಿಯದಂತೆ//
ನೆರೆದಿರುವ ಮನಗಳಲ್ಲಿ ತರ್ಕರಹಿತ ಪುಕಾರಗಳು ಪ್ರವಹಿಸಿತು/
ಕೊನೆಯ ಗಳಿಗೆಯವರೆಗು ಕಟುಸತ್ಯವು ಅವಿದಿತ್ತು ವಿಧಿಯಂತೆ/
ಬಣ್ಣಿಸಿ ಮದುವೆಯ ಸಂಭ್ರಮದ ವಾತಾವರಣವ ವೈಭವೋಪೇತದಲ್ಲಿ/
ಓದುಗರ ಗಮನವ ಸೆರೆಹಿಡಿದಿರಿ ಕ್ಷಣ ಕ್ಷಣವು ಬಣ್ಣನೆಯ ವರ್ಣನೆಯಲ್ಲಿ/
ವಿವಾಹ ಮಂಟಪದ ಪರಿಸರವ ಚಿತ್ರಿಸಿ ವರ್ಣಮಯ ವೈವಿಧ್ಯತೆಯಲ್ಲಿ/
ಓದುಗರ ಅನುಮಾನಗಳ ಸಮಾಪ್ತಿಸಿದಿರಿ ನಿಸ್ವಾರ್ಥದ ಪರಾಕಾಷ್ಠೆಯಲ್ಲಿ/
ಅತ್ಯುತ್ಕೃಷ್ಟ ಅಗ್ಗಳಿಕೆಯ ಬರಹವು ನಿಮ್ಮ ಲೇಖನ ತಳಮಳ
ಬಹಳ ಚೆನ್ನಾಗಿದೆ ಕಥೆ.
ಕಥೆ ಕುತೂಹಲದಿಂದ ಓದಿಸಿಕೊಂಡು ಹೋಗಿ ತಾರ್ಕಿಕ ಅಂತ್ಯ ಕಂಡಿದೆ. ಸುಂದರವಾದ ಕಥೆಗಾಗಿ ಅಭಿನಂದನೆಗಳು.
ಹುಡುಗಿಯ ಬಾಳು ಹಾಳಾಗದಂತೆ ಒಳ್ಳೆಯ ನಿರ್ಧಾರ ತೆಗೆದುಕೊಂಡ ಹುಡುಗನ ಪಾತ್ರ ಇಷ್ಟವಾಯ್ತು…ಚಂದದ ಕಥೆ..ಧನ್ಯವಾದಗಳು ಸರ್.