ಕೈ ಜಾರಿದ ಚಹಾ ಕಪ್ಪು
ಯೋಗ ತರಗತಿಯಿಂದ ಹಿಂತಿರುಗಿ ಬಂದವಳು, ಚಹಾ ತಯಾರಿಸಿ, ಒಂದು ಕೈಲಿ ಅಂದಿನ ಪೇಪರ್ ಹಿಡಿದು, ಮತ್ತೊಂದು ಕೈಲಿ ಚಹಾ ಕಪ್ಪನ್ನು ಹಿಡಿದು ನಿಧಾನವಾಗಿ ಚಹಾ ಗುಟುಕರಿಸುತ್ತಾ ಇದ್ದೆ. ಏಕೋ ಏನೋ, ಕೈಲಿದ್ದ ಬಿಸಿ ಬಿಸಿ ಚಹಾ ಲೋಟ ಥಟ್ಟನೆ ಕೆಳಗೆ ಬಿತ್ತು. ನೆಲದ ಮೇಲೆಲ್ಲಾ ಚೆಲ್ಲಾಡಿದ್ದ ಚಹಾ ಒರೆಸಿದವಳು, ಅಡುಗೆ ಮನೆ ಹೊಕ್ಕೆ. ಪೇಪರ್ ಓದುತ್ತಿದ್ದ ಪತಿರಾಯ, ಒಮ್ಮೆ ನನ್ನೆಡೆ ಕೆಕ್ಕರಿಸಿ ನೋಡಿ ಮತ್ತೆ ಪೇಪರ್ ಓದುವುದರಲ್ಲಿ ತಲ್ಲೀನರಾದರು. ‘ಒಂದು ಕೆಲಸಾನೂ ನೆಟ್ಟಗೆ ಮಾಡಲ್ಲ ಇವಳು’, ಎಂಬ ಭಾವ, ಅವರ ನೋಟದಲ್ಲಿ ಎದ್ದು ಕಾಣುತ್ತಿತ್ತು.
ನಾಲ್ಕು ದಿನ ಕಳೆದಿರಬಹುದು. ಮತ್ತೆ ಅದೇ ಘಟನೆ ಪುನರಾವರ್ತನೆಯಾಗಿತ್ತು. ಮತ್ತೆ ಚಹಾ ಕಪ್ಪು ಕೈಯಿಂದ ಜಾರಿ ಬಿದ್ದಿತ್ತು. ಈ ಬಾರಿ ಪತಿರಾಯ ಸ್ವಲ್ಪ ಕರುಣೆ ತೋರಿದ. ‘ನನ್ನ ಕಪ್ಪಿನಿಂದ ಸ್ವಲ್ಪ ಟೀ ಹಾಕಲೇ’ ಎಂದನು. ‘ಬೇಡ ಬಿಡಿ’, ಎಂದವಳು ಅಡುಗೆ ಮನೆ ಕಡೆ ಹೋದೆ. ತಲೆ ಗಿಮ್ಮೆಂದಿತು. ಸ್ವಲ್ಪ ಸುಧಾರಿಸಿಕೊಂಡು ತಿಂಡಿ ಮಾಡಿದರಾಯಿತು, ಎಂದು ಹಾಸಿಗೆಯ ಮೇಲೆ ಅಡ್ಡಾದೆ. ಪತಿರಾಯನಿಗೆ ಗಾಬರಿಯಾಗಿತ್ತು. ‘ಏನಾಯಿತು, ಡಾಕ್ಟರ್ ಬಳಿ ಹೋಗೋಣವೇ?’ ವೈದ್ಯಳಾಗಿದ್ದ ಮಗಳಿಗೆ ಫೋನು ಮಾಡಿದರು. ಮಗಳು, ವೈದ್ಯರ ಬಳಿ ತಪಾಸಣೆಗೆಂದು ಸಮಯ ಗೊತ್ತುಮಾಡಿಯೇ ಬೆಟ್ಟಳು. ಅದೇ ವೇಳೆಗೆ ಪತಿರಾಯನಿಗೆ ತೋಟದಿಂದ – ‘ತೆಂಗಿನ ಕಾಯಿ ಕೀಳುವರು ಬಂದಿದ್ದಾರೆ, ಬೇಗನೆ ಬನ್ನಿ’ ಎನ್ನುವ ಸಂದೇಶ ಬಂತು. ನಾನು ಮೊಮ್ಮಗ ತೇಜುವಿನೊಂದಿಗೆ ಆಸ್ಪತ್ರೆಗೆ ಹೊರಟೆ. ವೈದ್ಯರ ಕೊಠಡಿ ಮುಂದೆ ನನ್ನ ಸರತಿಗಾಗಿ ಕಾಯುತ್ತಾ ಕುಳಿತಿದ್ದೆ, ನರ್ಸ್ ನನ್ನ ಬಳಿ ಬಂದು, ‘ಪೇಷಂಟ್ ಎಲ್ಲಿ ಎಂದಳು’? ನಾನೇ ಪೇಷಂಟ್ ಎಂದರೆ, ಅವಳಿಗೆ ನಂಬಿಕೆ ಬರಲಿಲ್ಲ. ವೈದ್ಯರ ಮುಂದೆ ಯಾವ ರೋಗ ಲಕ್ಷಣ ಹೇಳಲಿ ಎಂದು ಯೋಚಿಸುತ್ತಿದೆ. ವೈದ್ಯರ ನಗುಮುಖ ನೋಡಿ ಧೈರ್ಯ ಬಂತು. ಮೊದಲಿಗೆ ಕೈಯಿಂದ ಚಹಾದ ಕಪ್ಪು ಜಾರಿ ಬಿದ್ದುದ್ದನ್ನು ಹೇಳಿದೆ. (ಗಡಿಬಿಡಿ ಮಾಡಿಕೊಂಡರೆ ಮತ್ತೇನಾದೀತು?) ನನ್ನ ಕೈ ಬೆರಳುಗಳು ನಡುಗುವುದನ್ನು ಹೇಳಿದೆ. (ವಯಸ್ಸಾಗಿದೆಯಲ್ಲಾ) ಆಗಾಗ ತಲೆ ಸುತ್ತುವುದನ್ನೂ ಹೇಳಿದೆ .(ಸೋಮವಾರ, ಶುಕ್ರವಾರ ಎಂದೆಲ್ಲಾ ಉಪವಾಸ ಮಾಡಿದರೆ ಮತ್ತೇನಾದೀತು) ಒಮ್ಮೊಮ್ಮೆ, ಗಂಟಲು ಒಣಗಿ, ಹೃದಯದ ಬಡಿತ ಜೋರಾಗಿ, ಮೈಯೆಲ್ಲಾ ಬೆವರಿಬಿಡುತ್ತೆ (ಪತಿರಾಯ ದೂರ್ವಾಸ ಮುನಿಯ ಅವತಾರ ಎತ್ತಿದಾಗ). ನನ್ನ ರೋಗ ಲಕ್ಷಣಗಳಿಗೆ, ನನ್ನ ಒಳ ಮನಸ್ಸಿನ ಉತ್ತರ ಹೀಗಿತ್ತು.
ಆದರೆ ವೈದ್ಯರು ತುಂಬಾ ಸಹಾನುಭೂತಿಯಿಂದ, ನನ್ನ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡರು. ನನ್ನ ಒಳ ಮನಸ್ಸಿನ ಹಾಗೆ ಅಪಹಾಸ್ಯ ಮಾಡಲಿಲ್ಲ. ಬಿ.ಪಿ. ಪರೀಕ್ಷಿಸಿದರು, ಸ್ವಲ್ಪ ಹೆಚ್ಚೇ ಇತ್ತು. ಅದಕ್ಕೊಂದು ಉತ್ತರ ನನ್ನಲ್ಲಿ ಸಿದ್ಧವಾಗಿತ್ತು. ಇದು ‘ವೈಟ್ ಕಾಲರ್ ಬಿ.ಪಿ.’ ಆಸ್ಪತ್ರೆಗೆ ಬಂದಾಗಲೆಲ್ಲಾ ಹೀಗಾಗುತ್ತೆ. ರಕ್ತ ಪರೀಕ್ಷೆ, ಇ.ಸಿಜಿ. ಮಾಡಿಸಿಕೊಳ್ಳಲು ಸಲಹೆ ನೀಡಿದರು. ಕೌಂಟರ್‌ನಲ್ಲಿ ಹಣ ಕಟ್ಟಿ, ರಕ್ತ ಪರೀಕ್ಷೆ ಮಾಡಿಸಿಕೊಂಡೆ. ನರ್ಸಿಂಗ್ ಮಾಡುತ್ತಿದ್ದ ಹುಡುಗಿಯೊಬ್ಭಳು ಅರ್ಧ ಸಿರಿಂಜಿನಷ್ಟು ರಕ್ತವನ್ನು ನನ್ನ ತೋಳಿನಿಂದ ತೆಗೆದಳು. ಆ ರಕ್ತದ ಕಣಗಳು – ನನ್ನಲ್ಲಿರುವ ಹೀಮೋಗ್ಲೋಬಿನ್, ಗ್ಲುಕೋಸ್, ಥೈರಾಯಿಡ್, ಕೊಲೆಸ್ಟ್ರಾಲ್ ಮುಂತಾದ ವಿವರಗಳನ್ನು ನೀಡಲಿದ್ದವು. ಮುಂದೆ ಹೃದಯದ ತಪಾಸಣೆ ಮಾಡಿಸಿಕೊಳ್ಳಲು ಪಕ್ಕದ ಕೊಠಡಿಗೆ ಹೋದೆ. ಮೇಲುಡುಪನ್ನು ತೆಗೆಸಿ, ಎದೆಯ ಭಾಗದಲ್ಲೆಲ್ಲಾ ತಣ್ಣಗಿದ್ದ ಪುಟ್ಟ ಪುಟ್ಟ ಬಿಲ್ಲೆಗಳನ್ನು ಹಚ್ಚಿದರು. ಸ್ವಲ್ಪ ಸಮಯದ ನಂತರ, ಎಲ್ಲವನ್ನೂ ತೆಗೆದು, ನೀವಿನ್ನು ಹೊರಡಿ ಎಂದಳು. ಉಡುಪು ಸರಿಪಡಿಸಿಕೊಂಡು ಬರುವಷ್ಟರಲ್ಲಿ, ಇ.ಸಿ.ಜಿ. ವರದಿ ಸಿದ್ಧವಾಗಿತ್ತು. ಒಂದು ಹಾಳೆಯಲ್ಲಿ ಗೋಪುರಾಕಾರದ ಚಿತ್ರ ವಿಚಿತ್ರ ರೇಖೆಗಳನ್ನು ಎಳೆದಿದ್ದರು. ಇ.ಸಿ.ಜಿ. ನಾರ್ಮಲ್ ಆಗಿದೆ ಎಂದರು. ರಕ್ತ ಪರೀಕ್ಷೆಯ ವರದಿಯಲ್ಲಿ ಬಿ-12 ಕೊರತೆ ಎದ್ದು ಕಾಣುತ್ತಿತ್ತು. ಉಳಿದೆಲ್ಲಾ ಸಂಗತಿಗಳು ನಾರ್ಮಲ್ ಎಂದಾಗ ಖುಷಿ ಎನ್ನಿಸಿತು.
ವೈದ್ಯರಿಗೆ, ಚಹಾ ಕಪ್ಪು ಜಾರಿದ್ದಕ್ಕೆ, ಇನ್ನೂ ಯಾವ ಕಾರಣಗಳೂ ಸಿಕ್ಕಿರಲಿಲ್ಲ. ಅವರು ಮಗಳ ಬಳಿ ಮಾತನಾಡಿ – ನಿಮ್ಮ ತಾಯಿಗೆ ಒಂದು ಮೆದುಳಿನ ಎಮ್.ಆರ್.ಐ ಮಾಡಿಸಿಬಿಡೋಣ ಎಂದರು. ನನಗೆ ಗಾಬರಿಯಾಯಿತು. ಏನಾದರೂ ಗಂಭೀರವಾದ ಖಾಯಿಲೆಯಿರಬಹುದೇ ಅಂತ. ಆತಂಕದಿಂದ ಮೊಮ್ಮಗನ ಕೈ ಹಿಡಿದು ಬಳಿಯಲ್ಲಿಯೇ ಇದ್ದ ಡಯಾಗ್ನೊಸ್ಟಿಕ್ ಲ್ಯಾಬಿಗೆ ಹೋದೆ. ಅಲ್ಲಿ ಹೆಸರು ಬರೆಸಿ, ಹಣ ಕಟ್ಟಿ, ನನ್ನ ಸರತಿಗಾಗಿ ಕಾಯುತ್ತಾ ಕೂತೆ. ನನ್ನ ವಿಧ್ಯಾರ್ಥಿನಿಯೊಬ್ಬಳು ಬಂದು ಮಾತಾಡಿಸಿದಳು. ‘ಫೇಸ್‌ಬುಕ್ ನಲ್ಲಿ ನಿಮ್ಮ ಲೇಖನಗಳನ್ನು ಓದುತ್ತಿರುತ್ತೇನೆ ಮೇಡಂ. ತುಂಬಾ ಚೆನ್ನಾಗಿ ಬರೀತೀರ’ ಎಂದು ಹೇಳಿದಳು. ಅವಳ ಮಾತು ಕೇಳಿ, ಒಂದು ಕ್ಷಣ ನನ್ನ ಆತಂಕ ಕಡಿಮೆಯಾಯಿತು. ಎಲ್ಲಿಯೂ ಟಾಯ್ಲೆಟ್ ಕಡೆಗೆ ಎಂಬ ಬೋರ್ಡ್ ಕಾಣಿಸಲಿಲ್ಲ. ನರ್ಸ್ ಕೇಳಿದರೆ, ನಿಮ್ಮ ಪಕ್ಕದಲ್ಲೇ ಇದೆಯಲ್ಲ ಎಂದು ಹೇಳಿದಳು. ನನ್ನ ಪಕ್ಕದಲ್ಲಿ ಟೈಲ್ಸ್ ಹಾಕಿದ್ದ ಗೋಡೆಯಿತ್ತು. ಮೊಮ್ಮಗ ಆ ಟೈಲ್ಸ್ ಮಧ್ಯೆ ಕಂಡೂ ಕಾಣದಂತಿದ್ದ ಬಾಗಿಲು ತೆರೆದು ಟಾಯ್ಲೆಟ್ ತೋರಿಸಿದ. ಅಷ್ಟರಲ್ಲಿ ನರ್ಸ್ ಬಂದು, ನಿಮ್ಮ ಬಳೆ, ಸರ, ಓಲೆ ಎಲ್ಲವನ್ನೂ ತೆಗೆದು ಒಳಗೆ ಬನ್ನಿ ಎಂದಳು. ಸಧ್ಯ ಜೊತೆಗೊಬ್ಬ ಮೊಮ್ಮಗನಿದ್ದುದರಿಂದ, ಎಲ್ಲವನ್ನೂ ತೆಗೆದು ಪರ್ಸಿನೊಳಗೆ ಹಾಕಿ, ಜೋಪಾನ ಎಂದು ಹೇಳಿ, ಅವನಿಗೆ ಕೊಟ್ಟು, ಯುದ್ಧಭೂಮಿಗೆ ಹೊರಡುವ ಸೈನಿಕನಂತೆ ಹೊರಟೆ. ಇಲ್ಲಿಯೂ ಮೇಲುಡುಪನ್ನು ತೆಗೆಸಿ, ಒಂದು ಏಪ್ರನ್ ಹಾಕಿ ಎಮ್. ಆರ್. ಐ. ಮೆಷಿನ್ ಮೇಲೆ ಮಲಗಿಸಿದರು. ನನಗೋ ಅದು, ಕುರುಕ್ಷೇತ್ರದಲ್ಲಿ ಭೀಷ್ಮನು ಮಲಗಿದ್ದ ಶರಶಯ್ಯೆಯಂತೆ ತೋರುತ್ತಿತ್ತು. ತಲೆಗೊಂದು ಹೆಡ್‌ಫೋನ್ ಸಿಕ್ಕಿಸಿದರು. ಹಾ, ಸಂಗೀತ ಕೇಳಲೆಂದು ಅಲ್ಲ. ಎಮ್.ಆರ್.ಐ.ನ ಕರ್ಕಶ ಸದ್ದು ಕೇಳದಿರಲೆಂದು. ಹದಿನೈದು ನಿಮಿಷವಾಗುತ್ತೆ, ಭಾರೀ ಶಬ್ದ ಆಗುತ್ತೆ ಎಂದು ಎಚ್ಚರಿಕೆ ನೀಡಿದ ತಂತ್ರಜ್ಞ ಅಲ್ಲಿಂದ ಹೊರನಡೆದ. ನಿಧಾನವಾಗಿ ನನ್ನ ತಲೆಯ ಭಾಗವನ್ನು ಮೆಷೀನ್ ಕೆಳಗೆ ಜರುಗಿಸಲಾಯಿತು.
ಗಾಬರಿಯಾಗಿದ್ದ ನನಗೆ ಮೊಮ್ಮಗನ ಮಾತುಗಳು ನೆನಪಾದವು. ‘ಅಜ್ಜೀ, ಇದು ಒಂದು ಬಗೆಯ ಕ್ಯಾಮರಾ ಅಷ್ಟೇ. ಚೀಸ್ ಎನ್ನುತ್ತಾರೆ, ಆಗ ನಕ್ಕುಬಿಡು. ಅವರು ನಿನ್ನ ಮೆದುಳಿನ ಫೋಟೋ ತೆಗೆಯುತ್ತಾರೆ.’ ನನ್ನ ಮೆದುಳಿನ ಚಿತ್ರೀಕರಣದ ದೃಶ್ಯಗಳನ್ನು ಊಹಿಸಿಕೊಳ್ಳುತ್ತಾ ಕಣ್ಣುಮುಚ್ಚಿ ಮಲಗಿದೆ.. ಮೊದಲಿಗೆ ಢಗ್, ಢಗ್ ಎಂಬ ಸದ್ದಾಯಿತು, ಟ್ರೀಂ, ಟ್ರೀಂ ಎಂಬ ಸದ್ದು, ಫ್ರೀಂ, ಫ್ರೀಂ ಎಂಬ ಬಸ್ಸಿನ ಹಾರನ್ ಹೋಲುವಂತಹ ಸದ್ದು, ನಂತರ ಕಬ್ಬಿಣ ವೆಲ್ಟ್ ಮಾಡುವ ಕರ್ಕಶವಾದ ಸದ್ದು, ಮತ್ತೆ ನಿಶ್ಯಬ್ದ. ಇದ್ದಕ್ಕಿದ್ದಂತೆ ಮತ್ತೆ ಜೋರಾದ ಸದ್ದು. ಒಂದು ಬಸ್ಸಿನ ವರ್ಕ್‌ಶಾಪ್‌ನಲ್ಲಿ ಇರುವ ಅನುಭವ. ನನ್ನ ಮೆದುಳಿನ ಒಂದೊಂದೇ ಭಾಗವನ್ನು ಬಿಡಿಸಿ ಬಿಡಿಸಿ ಫೋಟೋ ತೆಗೆಯುತ್ತಿದ್ದರು. ಏನಾದರೂ ಹೆಚ್ಚು ಕಡಿಮೆಯಾಗಿ, ಆ ಮೆಷಿನ್ ನನ್ನ ಮೇಲೆ ಬಿದ್ದು ಬಿಟ್ಟರೆ ಎಂಬ ಭಯ, ಆತಂಕವೂ ಕಾಡುತ್ತಿತ್ತು. ನನ್ನ ಬಂಧುಗಳೊಬ್ಬರು ಹಲ್ಲಿನ ವೈದ್ಯರ ಬಳಿ, ಹುಳುಕ ಹಲ್ಲು ತೆಗೆಸಲು ಹೋದಾಗ, ಅವರಿಗೆ ನೋವೇ ಆಗಲಿಲ್ಲವಂತೆ. ಚಕಿತಗೊಂಡ ವೈದ್ಯರು, ಅವರನ್ನು ಸಿದಾ ನರರೋಗತಜ್ಞರ ಬಳಿ ಕಳುಹಿಸಿದರಂತೆ. ಎಮ್.ಆರ್.ಐ. ಮಾಡಿದಾಗ, ಅವರಿಗೆ, ಮೆದುಳಿನ ಒಂದು ಭಾಗದಲ್ಲಿ, ಒಂದು ಗೆಡ್ಡೆ ಇತ್ತಂತೆ. ಅದನ್ನು ಕರಗಿಸಲು ಐದಾರು ವರ್ಷ ಔಷಧೋಪಚಾರ ಮಾಡಿದರಂತೆ. ನಾನು ನಿತ್ಯ ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾಡುತ್ತಿದ್ದುದರಿಂದ, ನನಗೆ ಅಂತಹದ್ದೇನೂ ಆಗಿರಲಾರದು ಎಂಬ ವಿಶ್ವಾಸ ಮನದಲ್ಲಿತ್ತು. ಹದಿನೈದು ನಿಮಿಷ ಆಮೆಗತಿಯಲ್ಲಿ ಸಾಗಿತ್ತು. ಕೊನೆಗೂ ಎಮ್.ಆರ್.ಐ. ಮುಗಿದಿತ್ತು. ಅದರ ವರದಿ ಹಾಗೂ ಫೋಟೋ ಒಂದು ದಿನಪತ್ರಿಕೆಯಷ್ಟು ದೊಡ್ಡದಾಗಿತ್ತು. ಅದರ ತುಂಬ ಪುಟ್ಟ ಪುಟ್ಟ ಚೌಕಗಳು, ಮೆದುಳಿನ ಎಲ್ಲಾ ಭಾಗಗಳ ಚಿತ್ರೀಕರಣ ಮಾಡಲಾಗಿತ್ತು. ಅದನ್ನು ಒಂದು ಬೆಳಕಿನ ಬೋರ್ಡ್‌ಗೆ ತೂಗು ಹಾಕಿದ ವೈದ್ಯರು, ಮೆದುಳಿನ ಒಂದು ಮೂಲೆಯಲ್ಲಿ ಪುಟ್ಟ ಪುಟ್ಟ ಹೆಪ್ಪುಗಟ್ಟಿದ್ದ ರಕ್ತದ ಕಣಗಳನ್ನು ತೋರಿಸಿದರು. ಇವು ವಯೋಸಹಜವಾದ ಬದಲಾವಣೆಗಳು, ಇವುಗಳಿಂದ ಏನೂ ತೊಂದರೆಯಿಲ್ಲ ಎಂದರು ನರರೋಗತಜ್ಞರು, ಹಾಗಿದ್ದಲ್ಲಿ, ಟೀ ಕಪ್ ಜಾರಿ ಬಿದ್ದುದರ ಕಾರಣ? ಮತ್ತೊಂದು ಪರೀಕ್ಷೆ ಮಾಡಿಸಲು ವೈದ್ಯರು ಮಗಳಿಗೆ ಹೇಳಿದರು. ಹೆಸರು – ಕ್ಯಾರೋಟಿಡ್ ಡಾಪ್ಲರ್ ಸ್ಕ್ಯಾನ್. ನನ್ನನ್ನು ಮಲಗಿಸಿ, ಕತ್ತಿನ ಮೇಲ್ಭಾಗದಲ್ಲಿ ಜೆಲ್ ಸವರಿ, ಒಂದು ಪುಟ್ಟ ಉಪಕರಣದಿಂದ – ಏರುಪೇರಾಗುತ್ತಿದ್ದ ಬಿ.ಪಿ.ಯ ಕಾರಣ ಪತ್ತೆ ಹಚ್ಚಲು ಯತ್ನಿಸುತ್ತಿದ್ದರು. ಇಲ್ಲಿಯೂ ‘ನಾರ್ಮಲ್’ ಎಂಬ ವರದಿ ಬಂತು.
ವೈದ್ಯರು ಬಿ.ಪಿ. ಮಾತ್ರೆಗಳನ್ನು ಬರೆದುಕೊಟ್ಟರು. ಬಿ-12 ಗಾಗಿ ಒಂದು ನೇಸಲ್ ಸ್ಪ್ರೆ ಕೊಟ್ಟರು. ಎಲ್ಲ ಪರೀಕ್ಷೆಗಳಲ್ಲಿ ನಾರ್ಮಲ್ ಬಂತಲ್ಲ ಎಂದು ನನಗೆ ನೆಮ್ಮದಿಯಾಗಿತ್ತು. ವೈದ್ಯರ ಬಳಿ ಮಗಳು ಹೇಳುತ್ತಿದ್ದಳು – ‘ಅಮ್ಮ, ಗೆಳತಿಯರ ಜೊತೆ ತಿರುಗಾಡಲು ಹೊರಟುಬಿಡುತ್ತಾರೆ. ಇನ್ನು ಮುಂದೆ ಕುಟುಂಬದವರ ಜೊತೆಯಲ್ಲಿ ಮಾತ್ರ ಹೋಗಲು ಹೇಳಿ’. ‘ಎಲ್ಲಿಗೆ ಹೊರಟಿದ್ದಿರಿ?’ ಎಂಬ ವೈದ್ಯರ ಪ್ರಶ್ನೆಗೆ ನಾನು – ನಾಗಾಲ್ಯಾಂಡ್, ಮಿಝೋರಾಂ, ತ್ರಿಪುರ, ಮಣಿಪುರ ಎಂದಾಗ ಬೆಚ್ಚಿಬೀಳುವ ಸರದಿ ಅವರದಾಗಿತ್ತು.
ಯುಗಾದಿಯಂದು ಬೇವು ಬೆಲ್ಲ ಸವಿದ ನನಗೆ, ಕಹಿಯಾದ ಸಿಹಿಯಾದ ಫಲಗಳೆರಡೂ ದೊರೆತಿದ್ದವು. ಕೈಯಿಂದ ಜಾರಿದ ಚಹಾ ಕಪ್ಪು -ಒಂದು ಮೈಲ್ಡ್ ಸ್ಟ್ರೋಕ್‌ನ ಸೂಚನೆಯನ್ನು ವೈದ್ಯರಿಗೆ ನೀಡಿತ್ತು. ಹಾಗಾಗಿ ಎಮ್.ಆರ್.ಐ. ಮಾಡಿಸಿದ್ದರು. ದೂರ ದೂರದ ಪ್ರವಾಸ ಸಧ್ಯಕ್ಕೆ ಬೇಡ ಎಂದು ವೈದ್ಯರು ಹೇಳಿದಾಗ ಮನಸ್ಸಿಗೆ ಬೇಸರವಾಗಿತ್ತು. ಹಾಗಾದರೆ ಸಿಹಿ ಸುದ್ದಿ ಏನು ಅಂತೀರಾ – ದೂರ್ವಾಸ ಮುನಿಯ ಅವತಾರದಂತಿದ್ದ ಪತಿರಾಯ ಈಗ ಬಹಳ ಬದಲಾಗಿದ್ದಾರೆ – ಹಾಲು ಜೇನು ಸಿನೆಮಾದಲ್ಲಿ ಬರುವ ಹಾಡನ್ನು ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ..’ ಆಗಾಗ ಗುನುಗುತ್ತಿರುತ್ತಾರೆ.
– ಡಾ.ಗಾಯತ್ರಿ ಸಜ್ಜನ್
ಸೊಗಸಾಗಿದೆ ಬರಹ. ಇಲ್ಲಿ ನಿಮ್ಮ ಜೀವನೋತ್ಸಾಹ ತುಂಬಾ ಇಷ್ಟವಾಗುತ್ತದೆ, ಖುಷಿಯಾಗಿ ಬದುಕಲು ಪ್ರೇರಣೆ ನೀಡುತ್ತದೆ.
ವಂದನೆಗಳು ಗೆಳತಿ
ವಾವ್ ನಿಜವಾಗಿಯೂ ಬದುಕಿನ ಲ್ಲಿ ಭರವಸೆ ತುಂಬುವ ಲೇಖನ ಧನ್ಯವಾದಗಳು ಮೇಡಂ
ನಿಮ್ಮ ಅಭಿಮಾನ ದ ನುಡಿಗಳಿಗೆ ಧನ್ಯವಾದಗಳು
ಎಲ್ಲಾ ವಿದ್ಯಮಾನ ಕಣ್ಣಿಗೆ ಕಟ್ಟುವಂತೆ ಬರೆದಿರುವ ನಿಮಗೆ ದೊಡ್ಡ ನಮಸ್ಕಾರ. ಬಹಳ ಆಸಕ್ತಿದಾಯಕ ಲೇಖನ…. ಬರುವುದನ್ನು ಸಹಜವಾಗಿ ಎದುರಿಸುವ ನಿಮ್ಮ ಮನೋಭಾವ ಇಲ್ಲಿ ಬಿಂಬಿತವಾಗಿದೆ ಮೇಡಂ
ಧನ್ಯವಾದಗಳು ಶರಣರಿಗೆ
ಹಾಸ್ಯಪ್ರಜ್ಞೆಯ ಬರಹ ಸೂಪರ್
ಧನ್ಯವಾದಗಳು
ನಿಮ್ಮ ಲವಲವಿಕೆಯೇ ನಿಮ್ಮನ್ನು ಕಾಪಾಡುತ್ತದೆ. ಚೆಂದದ ಬರಹ..
ಬಂದ ತೊಂದರೆಗಳನ್ನು ನೀವು ಸಹಜವಾಗಿ ಸ್ವೀಕರಿಸಿದ ರೀತಿ ಎಲ್ಲರಿಗೂ ಮಾದರಿ. ಲೇಖನವು ಆತ್ಮೀಯವಾಗಿದೆ ಗಾಯತ್ರಿ ಮೇಡಂ.