ಊರ್ಮಿಳೆ – ಒಂದು ಸ್ವಗತ

Share Button

ನಾನು ಊರ್ಮಿಳೆ. ಯಾರೆಂದು ಕೇಳುವಿರಾ? ಜನಕ ಮಹಾರಾಜ ಹಾಗೂ ಮಹಾರಾಣಿ ಸುನೈನಾಳ ಪ್ರೀತಿಯ ಪುತ್ರಿ. ಸೀತೆ ಭೂಮಿಯಲ್ಲಿ ದೊರೆತ ದತ್ತು ಪುತ್ರಿ ಜನಕನಿಗೆ. ನನಗೆ ಸಹೋದರಿಯಾದರೂ ಅದಕ್ಕಿಂತ ಹೆಚ್ಚು ಸ್ನೇಹಿತೆಯೆಂದೇ ಅನಿಸಿಕೆ. ನನ್ನನ್ನು ಜಾನಕಿಯೆಂದೇ ಕರೆಯುತ್ತಿದ್ದರೆಂಬುದು ವಿಶೇಷ. ರಾಮನು ಶಿವಧನುಸ್ಸನ್ನು ಭೇದಿಸಿದ ಸೀತೆಯ ಸ್ವಯಂವರವಾದ ಮೇಲೆ ವಿಶ್ವಾಮಿತ್ರರ ಅಣತಿಯಂತೆ ರಾಮನ ಅನುಜ ಲಕ್ಷಣ ನನ್ನನ್ನು ವರಿಸಿದ. ಪ್ರಾರಂಭದಲ್ಲಿ ಎಲ್ಲ ಬಹಳ ಚೆನ್ನಾಗಿಯೇ ಇತ್ತು. ಮುಂದೆ ದಶರಥ ಮಹಾರಾಜ ಕೈಕೇಯಿಗೆ ಕೊಟ್ಟ ವರದ ಪರಿಣಾಮ ರಾಮ ಹದಿನಾಲ್ಕು ವರ್ಷ ವನವಾಸಕ್ಕೆ ಹೊರಡಬೇಕಿತ್ತು. ನನಗೆ ರಾಮನೆಂದರೆ ಭಕ್ತಿ ಹಾಗೂ ಪ್ರೀತಿ ಮೊದಲಿನಿಂದಲೂ ಇತ್ತು. ನನ್ನ ಪತಿ ಲಕ್ಷ್ಮಣನೂ ರಾಮನನ್ನು ಬಿಟ್ಟಿರುತ್ತಿರಲಿಲ್ಲ. ಹೀಗಾಗಿ ಅವನೂ ಕಾಡಿಗೆ ಹೋಗಬೇಕಾಗಿ ಬಂತು ರಾಮನ ಬೆಂಗಾವಲಿಗೆ. ಲಕ್ಷ್ಮಣನಿಗೋ ನನ್ನನ್ನು ಕಂಡರೆ ಅತೀವ ಪ್ರೇಮ. ಏನು ಮಾಡಲಿ, ಹೇಗಾದರೂ ಅವನನ್ನು ಈ ಸಂಕೋಲೆಯಿಂದ ಬಿಡಿಸಬೇಕೆಂದು ಒಂದು ಉಪಾಯ ಯೋಜಿಸಿದೆ.

ಲಕ್ಷ್ಮಣ ನನ್ನ ಅಂತಃಪುರಕ್ಕೆ ಬಂದಾಗ ನಾನು ಮಹಾರಾಣಿಯಂತೆ ಅಲಂಕರಿಸಿಕೊಂಡು ನಗುಮೊಗದಿಂದ ಸ್ವಾಗತಿಸಿ, ರಾಮ ಕಾಡಿಗೆ ಹೋದರೇನಾಯಿತು ನಾವು ಅರಮನೆಯಲ್ಲಿ ಹಾಯಾಗಿರೋಣ ಎಂದೆ. ರಾಮನಿಗಾದರೋ ಅವರ ತಂದೆಯ ಆಜ್ಞೆ ಪಾಲನೆ, ನಿನಗೇನಾಗಿದೆ. ಈ ನಾರು ಬಟ್ಟೆಯಲ್ಲಿ ಏಕಿರುವೆ? ಬದಲಾಯಿಸಿ ಯುವರಾಜನಿಗೆ ಸಮನಾದ ಬಟ್ಟೆ ಧರಿಸು ಎಂದೆ. ಈ ನಿನ್ನ ನಾರು ಬಟ್ಟೆಯನ್ನು ನೋಡಲು ನನ್ನಂಥಹ ರಾಜಕುಮಾರಿ ಮದುವೆಯಾದೆಯೇ ಎಂದು ಮೂದಲಿಸಿದೆ. ನಾನೂ ನಿನ್ನನ್ನು ಕಾಡಿಗೆ ಅನುಸರಿಸುತ್ತೇನೆಂದು ನಿನಗೆ ಭ್ರಮೆಯಾ? ಎಂದೆ. ಈ ಸಾಧುವಿನ ವೇಷ ಮೊದಲು ಬದಲಾಯಿಸು ಎಂದೆ. ಅದೇ ಸರಿಯಾದ ಹಾಗೂ ಜಾಣತನದ ಮಾರ್ಗ ಎಂದೂ ಸೇರಿಸಿದೆ.

ಲಕ್ಷ್ಮಣ ಕೋಪದಿಂದ ಕುದ್ದು ನನ್ನನ್ನು ಬಯ್ದು ನಿನ್ನ ಮುಖ ನೋಡಲಾರೆ ಎಂದು ಅಲ್ಲದೆ ನಾನು ನಿನ್ನ ಮುಖವನ್ನು ನನ್ನ ಹೃದಯದಿಂದೆ ಕಿತ್ತುಹಾಕಿದ್ದೇನೆ ಹಾಗೂ ನಿನ್ನ ಬಗ್ಗೆ ಯಾವ ಯೋಚನೆಗಳೂ ಬಾರದಂತೆ ನನ್ನ ಮನಸ್ಸು ಹಾಗೂ ಹೃದಯವನ್ನು ಕಲ್ಲಿನಂತೆ ಮಾಡಿದ್ದೇನೆ ಎಂದು ಹೇಳಿ ರಾಮನ ಜೊತೆ ಕಾಡಿಗೆ ಹೊರಡಲು ಅನುವಾದನು.

ನಾನು ನನ್ನ ಕೆಲಸ ಆಯಿತೆಂಬ ತೃಪ್ತಿಯಿಂದ ನಿಟ್ಟುಸಿರಿಟ್ಟೆ. ಹೀಗೆ ಲಕ್ಷ್ಮಣನ ಕೋಪ ಹದಿನಾಲ್ಕು ವರ್ಷ ಮುಂದುವರಿಯಿತು. ನಾನು ವಿರಹಿಯಂತೆ ನನ್ನ ಬಾಳು ಸವೆಸಿದೆ.ಇದಕ್ಕೂ ಮೊದಲು ಲಕ್ಷ್ಮಣ ನನ್ನ ಅಂತಃಪುರಕ್ಕೆ ಬಂದಾಗ ಅವನ ನಾರುಮಡಿ ನೋಡಿ ಕಣ್ಣೀರಿಟ್ಟೆ. ಆಗ ಅವನು ನಾನು ಅರಮನೆಯ ಎಲ್ಲರ ಸೇವೆ ಹಾಗೂ ಎಲ್ಲಾ ಮಾತೆಯರ ಉಪಚಾರ ವಹಿಸುವ ಜವಾಬ್ದಾರಿ ನೀಡುತ್ತಾನೆ. ಜೊತೆಗೆ ಇನ್ನೆಂದಿಗೂ ಕಣ್ಣೀರು ಹಾಕಬಾರದೆಂದು ವಚನ ಪಡೆಯುತ್ತಾನೆ.

ವನವಾಸದಲ್ಲಿದ್ದಾಗ ಲಕ್ಷ್ಮಣನಿಗೆ ರಾಮ ಹಾಗೂ ಸೀತೆಯರ ರಕ್ಷಣೆಗೆ ನಿದ್ರೆ ಅಡ್ಡ ಬರುತ್ತಿತ್ತು. ಆಗ ಲಕ್ಷ್ಮಣ ನಿದ್ರಾದೇವಿಯನ್ನು ಆವಾಹನೆ ಮಾಡಿದಾಗ ಆಕೆ ಪ್ರತ್ಯಕ್ಷವಾದಾಗ ತನಗೆ ನಿದ್ರೆಯನ್ನೂ ಕರುಣಿಸದಂತೆ ಪ್ರಾರ್ಥಿಸಿದ. ಆದರೆ ನಿದ್ರಾದೇವಿ ಇದನ್ನು ಬೇರೆ ಯಾರಾದರೂ ಸ್ವೀಕರಿಸಿದರೆ ಮಾತ್ರ ಸಾಧ್ಯ ಎಂದು ಹೇಳಿದಾಗ ಲಕ್ಷ್ಮಣ ತಕ್ಷಣ ತನ್ನ ರಾಣಿ ಊರ್ಮಿಳೆಗೆ ಇದನ್ನು ಕರುಣಿಸು ಎನ್ನುತ್ತಾನೆ. ನಿದ್ರಾದೇವಿ ತಕ್ಷಣ ನನ್ನಲ್ಲಿಗೆ ಬಂದು ಆದ ಸಂಗತಿ ತಿಳಿಸಿದಾಗ ನಾನು ಪತಿ ನೀಡಿದುದನ್ನು ಬೇಡ ಎನ್ನಲಾರೆ ಎಂದು ಸ್ವೀಕರಿಸಿ ನನ್ನ ಜೀವನದ ಬಹುಭಾಗ ನಿದ್ರೆಯಲ್ಲೇ ಕಳೆದ. ಯೌವ್ವನದ ನೂರಾರು ಕನಸುಗಳನ್ನು ಹೊತ್ತ ನನಗೆ ನಿದ್ರೆಯೇ ಒಂದು ವರವಾಯಿತು.

ಮುಂದೆ ರಾಮರಾವಣರ ಯುದ್ಧದಲ್ಲಿ ಮೇಘನಾಥನನ್ನು (ಇಂದ್ರಜಿತು) ಸಂಹಾರ ಮಾಡಲು ನನ್ನ ಪತಿ ನಾನು ಬ್ರಹ್ಮನಿಂದ ಪಡೆದ ತಪಶ್ಯಕ್ತಿಯನ್ನು ಹೊಂದಿದಾಗಲೇ ಅವನ ಸಂಹಾರವಾಯಿತು ಎಂದು ಬಹಳ ಜನರಿಗೆ ಗೊತ್ತಿಲ್ಲ ಆದರೆ ಇದು ವಾಸ್ತವ.
ನಾನು ನನ್ನ ಜೀವನ ಪರ್ಯಂತ ಪತಿಯ ಅಣತಿಯಂತೆ ಅರಮನೆಯ ಹಿರಿಯರ ಸೇವೆ ಮತ್ತು ಪತಿಯ ನೆನಪಿನೊಂದಿಗೆ ಬದುಕನ್ನೇ ನಶ್ವರ ಎಂಬಂತೆ ಕಳೆದೆ. ಪತಿ ಯಾವ ಕಾರಣಕ್ಕೂ ಕಣ್ಣೀರು ಹಾಕಬಾರದು ಎಂಬ ಆಜ್ಞೆ ನೀಡಿದ್ದರಿಂದ ದಶರಥ ಮಹಾರಾಜ ತೀರಿಕೊಂಡಾಗಲೂ ನಾನು ಕಣ್ಣೀರಿಡಲು ಸಾಧ್ಯವಾಗಲಿಲ್ಲ ಎಂದರೆ ನನ್ನ ಸ್ಥಿತಿ ಅರ್ಥವಾದೀತು.
ಹದಿನಾಲ್ಕು ವರ್ಷ ಕಳೆದು ನನ್ನ ಪತಿ ರಾಮನೊಂದಿಗೆ ಅಯೋಧ್ಯೆಗೆ ಬಂದಾಗಲೂ ನಾನು ನಿದ್ದೆಯ ಮಂಪರಿನಲ್ಲಿದ್ದೆ. ನನ್ನ ಪತಿಯ ಕೋಪ ಇನ್ನೂ ತಣಿದಿರಲಿಲ್ಲ. ಏನೂ ಮಾತಿರಲಿಲ್ಲ.

ಮುಂದಿನ ತಿರುವು ಇನ್ನೂ ವಿಚಿತ್ರ. ಯಾರದೋ ಅಗಸನ ಮಾತು ಕೇಳಿ ರಾಮ ಸೀತೆಯನ್ನು ಪರಿತ್ಯಾಗ ಮಾಡಿ ಸೀತೆಯನ್ನು ಕಾಡಿಗೆ ಬಿಟ್ಟು ಬರಲು ನನ್ನ ಪತಿಯನ್ನೇ ರಥದ ಸಾರಥಿಯಾಗಿ ನೇಮಿಸಿದ. ದಾರಿಯಲ್ಲಿ ಸೀತೆಯ ಜೊತೆ ನನ್ನ ಪತಿ ಸಂಭಾಷಣೆಯಲ್ಲಿದ್ದಾಗ ಸೀತೆ ನನ್ನ ಬಗ್ಗೆ ಎಲ್ಲವನ್ನೂ ತಿಳಿಸಿದಳು. ಕೊನೆಗೆ ನನ್ನ ಈ ನಿರ್ಧಾರವನ್ನು ಯಾರಿಗೂ ತಿಳಿಸಬಾರದೆಂದು ಸೀತೆಗೆ ತಾಕೀತು ಮಾಡಿದ್ದನ್ನು ಸೀತೆ ಲಕ್ಷ್ಮಣನಿಗೆ ತಿಳಿಸಿದ್ದಳು. ವನವಾಸ ಮುಗಿಯುವವರೆಗೂ ಇದನ್ನು ಪಾಲಿಸಬೇಕೆಂದು ತನ್ನಲ್ಲಿ ಪ್ರಮಾಣ ಮಾಡಿದ್ದರಿಂದ ಸೀತೆ ಇದನ್ನು ಲಕ್ಷ್ಮಣನಿಗೆ ವನವಾಸದ ಅವಧಿಯಲ್ಲಿ ತಿಳಿಸಲಾಗಲಿಲ್ಲ. ಇದೂ ಕೂಡ ನನ್ನ ಒಂದು ಉಪಾಯವೇ. ಯಾವುದೇ ಕಾರಣಕ್ಕೂ ಲಕ್ಷ್ಮಣನಿಗೆ ರಾಮ ಸೀತೆಯರ ಸೇವೆಯಲ್ಲಿ ಚ್ಯುತಿ ಬರಬಾರದೆಂದು ನನ್ನ ಹಾರೈಕೆಯಾಗಿತ್ತು.

ಲಕ್ಷ್ಮಣ ನನ್ನನ್ನು ಭೇಟಿಯಾದಾಗ ನನ್ನ ಕಾಲಿಗೆ ಬಿದ್ದ. ಏಕೆಂದು ನನಗಂತೂ ಅರ್ಥವಾಗಲಿಲ್ಲ. ನೀನು ನನ್ನ ರಾಣಿಯಲ್ಲಿ ದೇವಿ ಎಂದು ಕೈಮುಗಿದ. ರಾಮ ಸೀತೆಯರಲ್ಲಿ ನನಗಿದ್ದ ಆಸ್ಥೆ ಕಂಡು ಬೆರಗಾದ ಹಾಗೂ ಮೂಕನಾಗಿದ್ದ. ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲವಲ್ಲ ಎಂದು ಮಮ್ಮಲ ಮರುಗಿದ. ಕೊನೆಗೂ ನಿದ್ರಾದೇವಿಯನ್ನು ಆವಾಹನೆ ಮಾಡಿ ವರವನ್ನು ಹಿಂಪಡೆಯುವಂತೆ ಪ್ರಾರ್ಥಿಸಿದ. ಇಲ್ಲಿಗೆ ಎಲ್ಲ ಸುಖಾಂತ್ಯವಾದಂತೆ ಕಂಡುಬಂದಿತು.

ಹೀಗೆ ನನ್ನ ಹದಿನಾಲ್ಕು ವರ್ಷದ ನೋವು, ಸಂಕಟ, ದುಃಖ ಯಾರಿಗೂ ತಿಳಿಯದಂತೆ ನಾನು ಅನುಭವಿಸಿದೆ. ನಾನು ಓರ್ವ ತಪಸ್ವಿನಿಯಂತೆ ಆ ಹದಿನಾಲ್ಕು ವಷಗಳನ್ನು ಕಳೆದು ರಾಮನ ಹಾಗೂ ಲಕ್ಷ್ಮಣನ ವನವಾಸ ಒಂದು ತೆರನಾದರೆ ನನ್ನದ್ದು ಒಂದು ತರಹದ ವಿಚಿತ್ರವಾದ ವನವಾಸದಂತೆಯೇ ಆಗಿತ್ತು ಎನ್ನುವುದರಲ್ಲಿ ಯಾವ ಸಂದೇಹವೂ ಕಾಣಿಸುತ್ತಿಲ್ಲ. ನಾನು ನಂತರ ನನ್ನ ಸುಖ ಕಾಲದಲ್ಲಿ ಅಂಗದ ಮತ್ತು ಚಂದ್ರಖೇತು ಎಂಬ ಸುಂದರ ಗಂಡು ಮಕ್ಕಳ ತಾಯಾದೆ.

ಕೊನೆಗೂ ನನ್ನ ಪತಿಯ ಜೀವಿತಾವಧಿ ಮುಗಿದ ಲಕ್ಷಣ ಬಂಡುಬಂದಾಗ ಅದಕ್ಕೂ ಮೊದಲು ನಾನು ಸಾಗರದ ದಡದಲ್ಲೇ ಗಂಧದ ಕಟ್ಟಿಗೆಗಳ ಮಧ್ಯೆ ಸೀತೆಯಂತೆಯೇ ಅಗ್ನಿಯನ್ನು ಪ್ರವೇಶಿಸಿ ದೇಹ ತ್ಯಾಗಮಾಡಿದೆ.

ಇಷ್ಟೆಲ್ಲ ತ್ಯಾಗ ಮಾಡಿಯೂ ಈ ಭರತ ಖಂಡದಲ್ಲಿ ನನ್ನ ಹಾಗೂ ಲಕ್ಷ್ಮಣನ ಒಂದೇ ಒಂದು ದೇವಾಲಯ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಮಾತ್ರ ಇದೆ ಎಂಬುದು ವಿಪರ್ಯಾಸ. ಆದರೆ ಅದಕ್ಕೆ ನನಗೇನೂ ಬೇಸರವಿಲ್ಲ. ನನ್ನ ಹೆಸರಂತೂ ರಾಮಾಯಣದಲ್ಲಿ ಶಾಶ್ವತ ಸ್ಥಾನದಲ್ಲಿದೆ.

ಮೂಲ- ಜನಪದ ಮತ್ತು ಉತ್ತರ ರಾಮಾಯಣ.

ಕೆ. ರಮೇಶ್

10 Responses

  1. ವಾವ್ ಊರ್ಮಿಳೆಯ ಸ್ವಗತ ಚೆನ್ನಾಗಿ ಓದಿಸಿಕೊಂಡುಹೋಯಿತು. ಧನ್ಯವಾದಗಳು ಸಾರ್

  2. ನಯನ ಬಜಕೂಡ್ಲು says:

    ಚಂದದ ಲೇಖನ

  3. Padma Anand says:

    ರಾಮಾಯಣದ ಪ್ರತಿಯೊಂದು ಪಾತ್ರವೂ ವುಶಿಷ್ಟವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಊರ್ಮಿಳೆಯ ಸ್ವಗತ ಮನವನ್ನು ಚಿಂತನೆಗೆ ಹಚ್ಚುವಂತಿದೆ. ಅಭಿನಂದನೆಗಳು.

  4. ವಿದ್ಯಾ says:

    ಹೌದು, ಊರ್ಮಿಳೆಯ ಬಗ್ಗೆ ಕತೆ ಲೇಖನ ಕಡಿಮೆ,,,,,
    ಅದರೆ ಪಾಪ ಊರ್ಮಿಳೆ ಅನಸ್ಸತ್ತೆ,,,,

  5. . ಶಂಕರಿ ಶರ್ಮ says:

    ಮಹಾತ್ಯಾಗಿ ಊರ್ಮಿಳೆಯ ಬಗ್ಗೆ ಪುರಾಣದಲ್ಲಿ ಸಿಗುವ ಮಾಹಿತಿಗಳು ಬಹಳ ಕಡಿಮೆ. ಅತಿ ವಿಶೇಷವಾದ, ವಿಚಿತ್ರವಾದ ಸಂಗತಿಗಳು ಊರ್ಮಿಳೆ ಬಗ್ಗೆ ತಿಳಿದು ಬಹಳ ಖೇದವೆನಿಸಿತು. ಬಹಳ ಸೊಗಸಾದ ಕಥಾನಿರೂಪಣೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: