ಕಾದಂಬರಿ: ನೆರಳು…ಕಿರಣ 4
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ಶಂಭುಭಟ್ಟರ ಮನೆಯಿಂದ ಮುಂದಿನ ಬೀದಿಯಲ್ಲೇ ಕೇಶವಯ್ಯನವರ ಮನೆ. ಹಿರಿಯರ ಕಾಲದಿಂದಲೂ ಅವೆರಡೂ ಮನೆಗಳ ನಡುವೆ ಉತ್ತಮ ಒಡನಾಟವಿತ್ತು. ಸೌಹಾರ್ದಯುತ ಸಂಬಂಧವಿತ್ತು. ಕೇಶವಯ್ಯನವರಿಗೆ ಒಡಹುಟ್ಟಿದವರೆಂದರೆ ಇಬ್ಬರು ಸೋದರಿಯರು ಮಾತ್ರ. ಅವರು ವಿವಾಹವಾಗಿ ತಮ್ಮತಮ್ಮ ಪತಿಯಂದಿರೊಡನೆ ಅವರವರ ಮನೆಯಲ್ಲಿದ್ದರು. ಮನೆಯಲ್ಲಿ ಅವರ ಪತ್ನಿ ರಾಧಮ್ಮ, ಮಗ ಸುಬ್ಬಣ್ಣ, ಮಗಳು ಶಾಂತಾ, ತಾಯಿ ಗೋದಮ್ಮನವರು ಇದ್ದರು. ಶಾಂತಾ ಭಾವನಾಳ ಓರಿಗೆಯವಳು. ಸಹಪಾಠಿಗಳೂ ಆಗಿದ್ದರು. ಹಿರಿಯರಿಂದ ಬಂದಿದ್ದ ಮನೆ ಕೇಶವಯ್ಯನವರದ್ದು. ಭೂಮಿಕಾಣಿಯೂ ಇತ್ತು. ಜೊತೆಗೆ ಮನೆಯಲ್ಲಿಯೇ ವೇದಪಾಠ, ಸಂಸ್ಕೃತಪಾಠ, ಸಂಗೀತ ತರಗತಿಗಳನ್ನು ನಡೆಸುತ್ತಿದ್ದರು. ಅಲ್ಲದೆ ಸ್ವಲ್ಪ ಪ್ರಮಾಣದ ಜ್ಯೋತಿಷ್ಯವನ್ನು ಹೇಳುತ್ತಿದ್ದರು. ದೇವಸ್ಥಾನಗಳಲ್ಲಿ ಹೆಚ್ಚಿನ ಪೂಜಾಕಾರ್ಯಗಳಿದ್ದಾಗ ವೆಂಕಟರಮಣ ಜೋಯಿಸರಿಗೆ ಬಲಗೈ ಭಂಟರಾಗಿ ನೆರವು ನೀಡುತ್ತಿದ್ದರು. ಮಗ ಸುಬ್ಬಣ್ಣನಿಗೆ ಒಂದು ಗ್ರಂದಿಗೆ ಅಂಗಡಿ ಇಟ್ಟುಕೊಟ್ಟಿದ್ದರು. ಶಂಭುಭಟ್ಟರ ಮನೆಗಿಂತಲೂ ಸ್ವಲ್ಪ ಅನುಕೂಲವಂತರೆಂದೇ ಹೇಳಬಹುದು. ಇವೆಲ್ಲಕ್ಕೂ ಮಿಗಿಲಾಗಿ ಸರಳ ನಡೆನುಡಿಗಳಿಂದ ಜನಾನುರಾಗಿಗಳಾಗಿದ್ದರು.
ದಾರಿಯಲ್ಲಿ ನಡೆಯುತ್ತಾ ”ಲಕ್ಷ್ಮೀ ನೀನು ಭಾಗ್ಯಳ ಹತ್ತಿರ ಮದುವೆ ವಿಷಯ ಮಾತನಾಡಿದೆಯಾ?” ಎಂದು ಶಂಭುಭಟ್ಟರು ಪ್ರಶ್ನಿಸಿದರು.
”ಮದುವೆಯ ಪ್ರಸ್ತಾಪ ಅವಳ ಪರೀಕ್ಷೆಗಿಂತ ಮೊದಲೇ ಪ್ರಾರಂಭವಾಗಿದ್ದ ಸಂಗತಿ. ಈಗ ಅದು ಮುಂದುವರೆದಿದೆ. ನಾನು ಸಮಯ ಸಂದರ್ಭ ನೋಡಿ ಬಾಗ್ಯಳ ಹತ್ತಿರ ಮಾತನಾಡಬೇಕೆಂದಿದ್ದೆ. ಆದರೆ ಆ ಕೆಲಸವನ್ನು ನಮ್ಮ ಭಾವನಾಳೇ ನನಗಿಂತ ಮೊದಲೇ ಮಾಡಿದ್ದಾಳೆಂದು ಅವರಿಬ್ಬರ ನಡುವೆ ನೆನ್ನೆ ನಡೆದಿದ್ದ ಮಾತುಕತೆಗಳನ್ನು ಕೇಳಿದಾಗ ತಿಳಿದುಬಂತು. ನಂತರ ಭಾವನಾ ತನ್ನ ಅಕ್ಕನನ್ನು ದೇವಸ್ಥಾನದಲ್ಲಿ ಹೆಣ್ಣು ನೋಡುವ ಕ್ರಮ ಸರಿಯಿಲ್ಲವೆಂದು ಈ ರೀತಿಯಲ್ಲಿ ಬೇರೆ ಮಾರ್ಗವನ್ನು ಅನುಸರಿಸುವಂತೆ ಹೇಳಿದ್ದನ್ನೆಲ್ಲ ಕೇಳಿದ್ದೆ. ಆದರೆ ನನಗೆ ಇದು ತಿಳಿದಿದೆಯೆಂಬುದು ಭಾಗ್ಯಳಿಗೆ ಗೊತ್ತಿಲ್ಲ” ಎಂದು ಗಂಡನಿಗೆ ವಿವರವಾಗಿ ಹೇಳಿದಳು ಲಕ್ಷ್ಮಿ.
”ಓ ಹಾಗಾದರೆ ಇದು ನಿನ್ನ ಚಿಂತನೆಯಲ್ಲ, ಮಗಳದ್ದು. ವೆರಿಗುಡ್, ಪರವಾಗಿಲ್ಲವೇ ! ನಮ್ಮ ಭಾವನಾ ಒಳ್ಳೆಯ ದಾಷ್ಟಿಕ ಹೆಣ್ಣು. ಅವಳೊಬ್ಬಳೇ ಏನು ನಮ್ಮ ಮಕ್ಕಳೆಲ್ಲರೂ ಹೆಚ್ಚುಕಮ್ಮಿ ಹಾಗೇ ಇದ್ದಾರೆ. ಬಾಗ್ಯ ಎಲ್ಲರಿಗಿಂತ ಸ್ವಲ್ಪ ಹೆಚ್ಚೇ. ಈಗ್ಯಾಕೋ ಮೌನಗೌರಿಯಂತಿದ್ದಾಳೆ. ಎಲ್ಲರೂ ನಿನ್ನಂತೆಯೇ” ಎಂದು ಪರೋಕ್ಷವಾಗಿ ತಮ್ಮ ಹೆಂಡತಿಯ ಪ್ರಶಂಸೆ ಮಾಡಿದರು ಭಟ್ಟರು. ಹೀಗೇ ಅದೂ ಇದೂ ಮಾತನಾಡುತ್ತಲೇ ಕೇಶವಯ್ಯನವರ ಮನೆ ಮುಟ್ಟಿದರು. ಭಟ್ಟರು ದಂಪತಿಗಳ ಆಗಮನ ಕೇಶವಯ್ಯನವರಿಗೆ ಅಚ್ಚರಿಯ ವಿಷಯವೇನಲ್ಲ. ಆದರೂ ಈ ಸಮಯದಲ್ಲಿ ? ಕುತೂಹಲದಿಂದ ಮನೆಯೊಳಕ್ಕೆ ಸ್ವಾಗತಿಸಿದರು. ಒಳಗಡಿಯಿಟ್ಟ ದಂಪತಿಗಳು ಚಾಪೆಯಮೇಲೆ ಆಸೀನರಾದರು. ಸಂಕೋಚಪಟ್ಟುಕೊಂಡೇ ಚುಟುಕಾಗಿ ತಮ್ಮ ಆಲೋಚನೆಯನ್ನು ಅವರಿಗೆ ತಿಳಿಸಿ ಇದು ಸಾಧ್ಯವೇ? ಎಂದು ಕೇಳಿದರು.
”ಓಹೋ ಹಾಗೇನು ಅವರು ಹೀಗೇ ಆಗಬೇಕೆಂದು ಪಟ್ಟುಹಿಡಿಯುವವರಲ್ಲ. ಸುಮ್ಮನೆ ಅವರಿವರಿಗೆ ತೊಂದರೆ ಕೊಡುವುದೇಕೆಂದು ದೇವಸ್ಥಾನಕ್ಕೆ ಕರೆತನ್ನಿ ಎಂದು ಹೇಳಿದ್ದರು. ಬಿಡಿ ಆ ವಿಷಯ ನಾನು ಅವರಿಗೆ ಹೇಳುತ್ತೇನೆ. ಅದೇನೂ ಅಂಥಹ ದೊಡ್ಡ ಸಮಸ್ಯೆಯಾಗದು. ಅದಿರಲಿ ನಿಮ್ಮ ಸಾಧ್ಯಾನುಸಾಧ್ಯತೆಯ ಬಗ್ಗೆ ಹೇಳಿ. ಅವರ ನಿರೀಕ್ಷೆಗಳೇನು ಎಂದು ನಾನು ಗೊತ್ತುಮಾಡಿಕೊಳ್ಳುತ್ತೇನೆ. ಸರಿಹೋದರೆ ಮುಂದುವರೆಯೋಣ. ಇಲ್ಲವೆಂದರೆ ಇಲ್ಲಿಗೇ ನಿಲ್ಲಿಸಿಬಿಡೋಣ. ಏನು ಹೇಳ್ತೀರಾ? ಲಕ್ಚ್ಮಮ್ಮ” ಎಂದು ಕೇಶವಯ್ಯನವರು ಪ್ರಶ್ನಿಸಿದರು.
”ಸಂಪ್ರದಾಯದಂತೆ ಏನೇನು ಕೊಡಬೇಕೋ ಕೊಟ್ಟು ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಡುತ್ತೇವೆ. ಅತಿಯಾದ ವರೋಪಚಾರ, ಅಬ್ಬರದ ಅಂದರೆ ವಿಜೃಂಭಣೆಯಿಂದ ಮದುವೆ ಮಾಡಿಕೊಡುವುದು ನಮ್ಮ ಶಕ್ತಿ ಮೀರಿದ್ದು ಕೇಶವಣ್ಣ. ಅಲ್ಲವೇನ್ರೀ? ”ಎಂದು ಮೊಣಕೈಯಿಂದ ಗಂಡನನ್ನು ತಿವಿದು ಸೂಚನೆ ಕೊಟ್ಟಳು ಹೆಂಡತಿ. ಅವಳ ಮಾತಿನಿಂದ ಎಚ್ಚೆತ್ತ ಭಟ್ಟರು ಅದಕ್ಕೆ ಹೌದೆಂದು ಗೋಣಾಡಿಸಿದರು.
”ಆಯಿತು, ಎಲ್ಲ ವಿಚಾರಗಳನ್ನು ಅವರಿಗೀಗಲೇ ಹೇಳುವುದಿಲ್ಲ. ನಾನು ನನ್ನ ಗಮನಕ್ಕೆ ತಂದುಕೊಳ್ಳಲು ಕೇಳಿದೆ. ಈಗ ಸದ್ಯಕ್ಕೆ ನಿಮ್ಮ ಬೇಡಿಕೆಯನ್ನು ತಿಳಿಸಿ ಉತ್ತರವನ್ನು ಸಂಜೆಯ ಹೊತ್ತಿಗೆ ತಿಳಿಸುತ್ತೇನೆ. ಆಗಬಹುದೇ” ಎಂದರು ಕೇಶವಯ್ಯನವರು.
ಇನ್ನು ಅವರ ನಿದ್ರೆಯ ಸಮಯವೆಂಬ ಸೂಚನೆ ಸಿಕ್ಕು ರಾಧಮ್ಮ ಕೊಟ್ಟ ಕುಂಕುಮ ಇಟ್ಟುಕೊಂಡು ಗಂಡನನ್ನು ಎಬ್ಬಿಸಿಕೊಂಡು ಮನೆಯ ಕಡೆ ಹೊರಟಳು ಲಕ್ಷ್ಮಿ.
ಅಪ್ಪ ಅಮ್ಮ ಹೊರಗೆ ಹೋಗುತ್ತಲೇ ಇತ್ತ ಭಾಗ್ಯ ತಂಗಿಯರ ಬೇಡಿಕೆಯಂತೆ ಎಲ್ಲರನ್ನೂ ಸುತ್ತ ಕೂರಿಸಿಕೊಂಡು ಕೈತುತ್ತು ಹಾಕಿದಳು. ಬಿಗುವನ್ನು ಬಿಟ್ಟು ಎಲ್ಲರೊಡನೆ ನಗುನಗುತ್ತಾ ಮಾತನಾಡುತ್ತಾ ತನ್ನ ಊಟವನ್ನೂ ಮುಗಿಸಿದಳು. ನಂತರ ಒಬ್ಬೊಬ್ಬರು ಒಂದೊಂದು ಕೆಲಸವನ್ನು ಹಂಚಿಕೊಂಡು ಮಾಡಿ ಮುಗಿಸಿದರು. ಎಲ್ಲರೂ ಹಾಲಿನಲ್ಲಿ ಕುಳಿತು ತಮ್ಮ ಶಾಲೆ, ಶಿಕ್ಷಕರು, ಸ್ನೇಹಿತರ ಬಗ್ಗೆ ಸ್ವಾರಸ್ಯದ ಮಾತುಗಗಳನ್ನಾಡುತ್ತ ಒಬ್ಬರೊಗೊಬ್ಬರು ಛೇಡಿಸುತ್ತಾ ಆನಂದವಾಗಿರುವಾಗಲೇ ಭಾಗ್ಯಳ ಅವಳಿ ತಂಗಿಯರಾದ ವಾಣಿ, ವೀಣಾ ”ಅಕ್ಕಾ ಭಾಗ್ಯಕ್ಕಾ, ನಿನಗೆ ಮದುವೆ ಮಾಡ್ತಾರಂತೆ. ಅದಕ್ಕೇ ಅಪ್ಪ ಅಮ್ಮ ಓಡಾಡುತ್ತಿರುವುದಲ್ಲವಾ? ನೀನು ಓದಿ ಟೀಚರ್ ಆಗ್ತೀನಿ, ಮಕ್ಕಳಿಗೆ ಪಾಠ ಹೇಳ್ತೀನಿ ಅಂತಿದ್ದೆ. ಈಗ ಏನು ಮಾಡುತ್ತೀಯೆ?ದು ಅಕ್ಕನ ಗದ್ದ ಹಿಡಿದು ಪ್ರೀತಿಯಿಂದ ಕೇಳಿದರು.
ನಗುನಗುತ್ತಿರುವ ಅಕ್ಕ ಎಲ್ಲಿ ಮತ್ತೆ ಬೇಸರ ಮಾಡಿಕೊಳ್ಳುತ್ತಾಲೋ ಎಂದು ಯೋಚಿಸಿದ ಭಾವನಾ ಭಾಗ್ಯಳು ಉತ್ತರಿಸುವ ಮೊದಲೇ ”ಹೇ ಬಿಡ್ರೇ, ಅಕ್ಕ ಅವಳ ಸ್ವಂತ ಮಕ್ಕಳಿಗೆ ಟೀಚರ್ ಆಗ್ತಾಳೆ ”ಎಂದಳು.
ಹ್ಹೊಹ್ಹೊ ಎಂದು ಅವರಿಬ್ಬರೂ ಚಪ್ಪಾಳೆತಟ್ಟಿ ”ಅಹಾ ಹಾಗಾದರೆ ನಮಗೆಲ್ಲಾ ಜರಿಲಂಗ ಬರೋದು ಗ್ಯಾರಂಟಿ. ಬಾವನಾಕ್ಕಾ ನಾವು ಜಡೆಗೆ ಹಾಕ್ಕೋತೀವಲ್ಲ ಕುಚ್ಚು, ಅದೇ ಹಿಂದಿನ ಎಳ್ಳುಬೀರುವ ಹಬ್ಬದಲ್ಲಿ ‘ಸಂಕ್ರಾಂತಿ’ಯಲ್ಲಿ ತಗೊಂಡಿದ್ದೆವಲ್ಲಾ ಅದರ ಮೇಲಿನ ವೆಲ್ವೆಟ್ ಬಟ್ಟೆಯೆಲ್ಲ ಬಿಚ್ಚಿಕೊಂಡಿದೆ. ಅದನ್ನು ಹೊಲಿಯುವುದ್ಹೇಗೆಂದು ಹೇಳಿಕೊಡುವೆಯಾ? ಪ್ಲೀಸ್ ” ಎಂದರು.
”ಸರಿ, ನಾನೇ ಹೇಳಿಕೊಡ್ತೀನಿ ಆಯ್ತಾ” ಎಂದಳು ಭಾಗ್ಯ. ಅವಳ ಮಾತನ್ನು ಆಲಿಸಿದ ಬಾವನಾ ಓ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತನ್ನ ಮನಸ್ಸನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾಳೆ. ಇದೊಳ್ಳೆಯ ಬೆಳವಣಿಗೆ. ಏನೂ ಮಾಡಲಾಗುವುದಿಲ್ಲ. ಇದು ಮನೆಮನೆಯ ಹೆಣ್ಣುಮಕ್ಕಳ ಕಥೆ. ಎಂದುಕೊಂಡಳು ಭಾವನಾ. ನಮ್ಮ ಮಕ್ಕಳ ಕಾಲಕ್ಕಾದರೂ ಈ ಕಟ್ಟುಪಾಡುಗಳಲ್ಲಿ ಸಡಿಲಿಕೆ ಹೆಚ್ಚಲ್ಲದಿದ್ದರೂ ಸ್ವಲ್ಪವಾದರೂ ಆಗಿ ಹೆಣ್ಣುಮಕ್ಕಳು ಅವರಿಚ್ಛೆಯಂತೆ ಓದುವುದಾಗಲೀ, ಕೆಲಸಕ್ಕೆ ಸೇರಿ ತಮ್ಮ ಕಾಲಮೇಲೆ ತಾವು ನಿಲ್ಲುವಂತಹ ಗಟ್ಟಿತನ ಬೆಳೆಯುವಂತಹ ವಾತಾವರಣ ಉಂಟಾಗಲಿ. ಅದನ್ನು ಪ್ರೋತ್ಸಾಹಿಸುವ ಮನೆಗಳು ಸಿಗಲಪ್ಪಾ ಎಂದುಕೊಳ್ಳುತ್ತಿದ್ದಂತೆ ಹೊರಗಡೆ ಬಾಗಿಲು ತಟ್ಟಿದ ಸದ್ದಾಯಿತು.
”ಓ ಅಪ್ಪಾ, ಅಮ್ಮ ಬಂದರು ”ಎಂದು ಕುಳಿತಲ್ಲಿಂದ ಎದ್ದವರನ್ನು ತಡೆದ ಭಾವನಾ ತಾನೇ ”ಒಂದು ನಿಮಿಷ, ಧಡಕ್ಕೆಂದು ಯಾವಾಗಲೂ ಬಾಗಿಲನ್ನು ತೆರೆಯಬಾರದು. ಅವರೇ ಆದರೆ ಹೆಸರಿಡಿದು ಕೂಗುತ್ತಾರೆ” ಎಂದಳು. ಅಷ್ಟರಲ್ಲಿ ”ಭಾಗ್ಯಮ್ಮ, ಬಾವನಾ” ಎಂಬ ಕರೆಯೊಂದಿಗೆ ಮತ್ತೊಮ್ಮೆ ಬಾಗಿಲು ತಟ್ಟಿದ ಸದ್ದಾಯಿತು. ಕರೆ ಕಿವಿಗೆ ಬಿದ್ದ ತಕ್ಷಣ ವೀಣಾ ವಾಣಿ ಓಡಿ ಬಾಗಿಲು ತೆರೆದರು. ಮನೆಯೊಳಕ್ಕೆ ಬಂದ ಲಕ್ಷ್ಮಿ, ಶಂಭುಭಟ್ಟರು ”ಮಕ್ಕಳೇ, ಎಲ್ಲಾರದ್ದು ಊಟವಾಯಿತೇ? ”ಎಂದು ಕೇಳಿದರು. ಅವರ ಪ್ರಶ್ನೆಗೆ ಮಕ್ಕಳು ಹೂಗುಟ್ಟಿದರು. ಅವರು ಕಾಲ್ತೊಳೆಯಲು ಹಿತ್ತಲಿಗೆ ನಡೆದರು. ಇತ್ತ ಮಕ್ಕಳೆಲ್ಲರೂ ಒಳಗಿನ ರೂಮಿನ ಕಡೆ ನಡೆದರು.
ಆ ದಿನ ಸಂಜೆಯೇ ಸುಬ್ಬಣ್ಣ ಭಟ್ಟರ ಮನೆಗೆ ಹಾಜರಾದ. ಅವನನ್ನು ಪ್ರೀತಿಯಿಂದ ಬರಮಾಡಿಕೊಂಡರು ಭಟ್ಟರು. ”ಹೂ..ಭಟ್ಟರೇ, ಲಕ್ಷ್ಮಮ್ಮ ನಾಳೆ ಸಂಜೆ ನಾಲ್ಕು ಗಂಟೆಗೆ ನಮ್ಮ ಮನೆಗೇ ಜೋಯಿಸರು ತಮ್ಮ ಕುಟುಂಬ ಸಮೇತರಾಗಿ ಬರುತ್ತಾರಂತೆ. ಮೂರೇ ಜನ ಹೋಗಬಾರದೆಂದು ಜೊತೆಗೆ ಅವರ ದೊಡ್ಡಪ್ಪನೂ ಬರುತ್ತಿದ್ದಾರಂತೆ. ಇದನ್ನು ನಿಮಗೆ ಹೇಳಿಬಿಡಿ ಕೇಶವಯ್ಯಾ. ಹೆಚ್ಚು ಹೊತ್ತು ಇರೊಕಾಗಲ್ಲ. ಸಂಜೆ ದೇವವಸ್ಥಾನದ ಪೂಜೆಗೆ ಹೋಗಬೇಕಲ್ಲಾ ಅಂತ ಹೇಳಿ ಕಳುಹಿಸಿದ್ದಾರೆ. ಅರ್ಧ ಕಪ್ಪು ಕಾಫಿ ಅದೂ ತೀರಾ ಪಿಚ್ಚೆನ್ನಿಸಿದರೆ. ಅಪ್ಪಯ್ಯನೇ ಬರಬೇಕೆಂದಿದ್ದರು. ಯಾರೋ ಮನೆಗೆ ಬಂದಿದ್ದರಿಂದ ನನ್ನನ್ನು ಕಳುಹಿಸಿದರು. ಹಾ..ಇನ್ನೊಂದು ವಿಷಯ ಅಮ್ಮ ಹೇಳಿದ್ದು, ನಾಳೆ ಊಟ ಆದಮೇಲೆ ಕೆಲಸಮುಗಿಸಿ ಭಾಗ್ಯಳನ್ನು ಕರೆದುಕೊಂಡು ನೀವು ಬಂದುಬಿಡಬೇಕಂತೆ. ಭಟ್ಟರು ನಂತರ ಬರಲಿ. ಭಾವನಾ, ವೀಣಾ, ವಾಣಿಯರನ್ನೂ ಕೆರತರಲು ಹೇಳಿದರು. ಅವರೆಲ್ಲ ಶಾಂತಾ ಜೊತೆಯಲ್ಲಿ ಒಳಗಡೆ ರೂಮಿನಲ್ಲಿ ಇರುತ್ತಾರೆ. ಮನೆಯಲ್ಲಿ ಮಕ್ಕಳನ್ನಷ್ಟೇ ಬಿಟ್ಟುಬರುವುದು ಬೇಡ” ಎಂದು ಹೇಳಿದರು. ನಾನೀಗ ಅಂಗಡಿ ಬಾಗಿಲು ತೆರೆಯಬೇಕು ಬರುತ್ತೇನೆಂದು ಹೊರಟ ಸುಬ್ಬಣ್ಣ.
”ಆಯಿತು ಸುಬ್ಬಣ್ಣ, ರಾಧಕ್ಕನಿಗೆ ಊಟ ಮುಗಿದ ಕೂಡಲೇ ಬರೋಲ್ಲ. ಒಂದೆರಡು ಗಂಟೆ ಸುಮಾರಿಗೆ ಎಲ್ಲರೂ ಒಟ್ಟಿಗೇ ಬರುತ್ತೇವೆ. ಪಾಪ ನಮ್ಮಿಂದ ನಿಮಗೆ ತೊಂದರೆಯಾಯ್ತು” ಎಂದಳು ಲಕ್ಷ್ಮಿ.
”ಛೇ ಹಾಗೇನೂ ತಿಳಿದುಕೊಳ್ಳಬೇಡಿ ಲಕ್ಷ್ಮಮ್ಮ, ನಮ್ಮ ಮನೆಬೇರೆ ನಿಮ್ಮ ಮನೆಬೇರೇನಾ? ಆದಷ್ಟು ಬೇಗ ಬನ್ನಿ” ಎಂದ ಸುಬ್ಬಣ್ಣ.
ಏನಾಗುತ್ತೋ, ನಾವು ಕೇಳಿದ ವ್ಯವಸ್ಥೆಗೆ ಒಪ್ಪುತ್ತಾರೋ ಇಲ್ಲವೋ ಎನ್ನುವ ಆತಂಕದಿಂದಿದ್ದ ದಂಪತಿಗಳಿಗೆ ಸುಬ್ಬಣ್ಣ ತಂದ ಸುದ್ಧಿ ನಿರಾಳತೆ ಒದಗಿಸಿತು. ಅವನನ್ನು ಬೀಳ್ಕೊಟ್ಟು ನೆಮ್ಮದಿಯಿಂದ ಮನೆಯೊಳಕ್ಕೆ ಬಂದರು.
ಇದೆಲ್ಲವನ್ನೂ ಗಮನಿಸುತ್ತಿದ್ದ ಭಾವನಾ ”ನಾನು ಕೊಟ್ಟ ಸಲಹೆ ಉಪಯೋಗಕ್ಕೆ ಬಂತು ”ಎಂದು ಸಂತಸಪಟ್ಟರೆ, ಇತ್ತ ಅಮ್ಮನ ಕೋರಿಕೆಗೆ ಗಂಡಿನ ಕಡೆಯವರು ಮನ್ನಣೆ ಕೊಡುವ ದೊಡ್ಡತನ ತೋರಿದರಲ್ಲ ಎಂಬ ನೆಮ್ಮದಿ ಭಾಗ್ಯಾಳದ್ದಾಗಿತ್ತು.
ರಾತ್ರಿ ಊಟವಾದ ಮೇಲೆ ಮಿಕ್ಕ ಕೆಲಸಗಳನ್ನು ಮುಗಿಸಿ ಹಿತ್ತಲ ಬಾಗಿಲನ್ನು ಭದ್ರಪಡಿಸಿ ಮುಂಭಾಗಿಲ ಕಡೆ ನೋಡಲು ಹೊರಟ ಲಕ್ಷ್ಮಿ ಹಾಗೇ ಮಕ್ಕಳ ರೂಮಿನ ಕಡೆ ಕಣ್ಣಾಯಿಸಿದಳು. ಕೋಣೆಯ ಬಾಗಿಲು ತೆರೆದಿತ್ತು. ಲೈಟು ಉರಿಯುತ್ತಿದೆ, ಇನ್ನೂ ಮಲಗದೆ ಹುಡುಗಿಯರು ಏನು ಮಾಡುತ್ತಿದ್ದಾರೆಂದು ದಿಟ್ಟಿಸಿದಳು. ಅಲ್ಲಿ ಕಂಡಿದ್ದೇನು? ಭಾವನಾ ತನ್ನಕ್ಕನ ಮುಂದೆ ಒಂದು ಪೆಟ್ಟಿಗೆ ಇಟ್ಟುಕೊಂಡು ಕುಳಿತಿದ್ದಾಳೆ. ಅವರಿಬ್ಬರ ಅಕ್ಕಪಕ್ಕದಲ್ಲಿ ಅವಳಿ ತಂಗಿಯರು. ಅವರ ಕೈಯಲ್ಲೂ ಏನೋ ವಸ್ತುಗಳಿವೆ. ಏನು ಮಾಡುತ್ತಿದ್ದಾರೆಂದು ಅಚ್ಚರಿಪಡುತ್ತಾ ಅಲ್ಲೇ ಬಾಗಿಲ ಬಳಿ ನಿಂತಳು. ಉಹುಂ ಒಬ್ಬರಿಗೂ ಇತ್ತಕಡೆ ಗಮನವೇ ಇಲ್ಲದಂತೆ ತಮ್ಮದೇ ಲೋಕದಲ್ಲಿ ಮುಳುಗಿಹೋಗಿದ್ದರು.
”ಭಾಗ್ಯಕ್ಕಾ, ಈ ಸೀರೆ ಹೇಗಿದೆಯೇ? ಇದರ ಬ್ಲೌಸ್ ಸರಿಯಾಗಿದೆಯಾ? ಇಲ್ನೋಡು ದಟ್ಟ ಹಸಿರು ಬಣ್ಣ, ಲೈಟ್ ಎಲ್ಲೋ ಕಲರ್ ಬಾರ್ಡರ್ ತುಂಬ ಚೆನ್ನಾಗಿದೆ. ಇದು ನಿನಗೆ ಒಪ್ಪುತ್ತೆ. ಹೌದು ಬಾಗ್ಯಕ್ಕಾ ಇದೋ ಈ ಬಳೆಗಳು ಒಪ್ಪುತ್ತವೆ, ಅಳತೆ ಸರಿಹೋಗುತ್ತಾ ನೋಡಕ್ಕಾ, ಇನ್ನು ಓಲೆ ನಮ್ಮ ಹತ್ತಿರ ಇರೋವು ಸ್ಟಾರ್. ಕೆಲವೆಲ್ಲಾ ಆರ್ಟಿಫಿಷಿಯಲ್. ಸ್ಕೂಲಿಗೆ ಹಾಕಿಕೊಂಡು ಹೋಗುವಂತಹವು. ಜಡೆಗೆ ಕುಚ್ಚು ಹಾಕ್ಕೋತೀಯಾ ಅಕ್ಕಾ ಚೆನ್ನಾಗಿದೆ. ಮೊನ್ನೆ ನೀನೇ ರಿಪೇರಿ ಮಾಡಿಕೊಟ್ಟಿದ್ದು ನೋಡು. ಅಪ್ಪಪ್ಪಾ ಏ ಚಿಲ್ಟಾರಿಗಳಾ ಸ್ವಲ್ಪ ಸುಮ್ಮನಿರುತ್ತೀರಾ, ಅಮ್ಮ ಭಾಗ್ಯಕ್ಕಳಗಾಗಿ ಓಲೆ ಮಾಡಿಸಿಲ್ಲವಾ. ಅದನ್ನೇ ಹಾಕಿಕೊಳ್ಳುತ್ತಾಳೆ ಅಲ್ವೇನೇ? ಅಜ್ಜಿಯ ಕಾಸಿನಸರ..ಬೇಡಬೇಡ, ಗುಂಡಿನ ಸರ ಹಾಕ್ಕೋ. ಈ ಸೀರೆ ಮೇಲೆ ಎದ್ದು ಕಾಣಿಸುತ್ತೆ. ಎರಡು ಜಡೆ ಹಾಕ್ಕೋ ಬಾರದಲ್ವಾ, ಒಂದೇಒಂದು ನಾನೇ ಹಾಕುತ್ತೇನೆ. ಮಲ್ಲಿಗೆ ದಂಡೆ ಪೋಣಿಸಿಟ್ಟಿದ್ದೇನೆ, ಬೆಳಗ್ಗೆ ಸ್ನಾನ ಆದ ಕೂಡಲೇ ಓಲೆ ಹಾಕಿಕೊಂಡುಬಿಡು. ಅ ಮೇಲೆ ಗಡಿಬಿಡಿಯಾಗುತ್ತೆ. ಮತ್ತೆ ಸರ ನಿನಗ್ಯಾವುದು ಬೇಕೋ ತೆಗೆದಿಟ್ಟುಕೋ. ನೋಡು ಈ ಬಳೆಗಳ ಮುಂದೆ ಬೇಕಾದರೆ ಒಂದೊಂದು ಕಡಗ ಹಾಕಿಕೋ. ನಿನ್ನ ದುಂಡಾದ ಕೈಗೆ ಹೇಳಿ ಮಾಡಿಸಿದಂತೆ ಕಾಣಿಸುತ್ತದೆ” ಎಂಬ ಮಾತುಗಳು ಮುಂದುವರೆಯುತ್ತಿದ್ದವು.
ರಾಮರಾಮ ನಾನು ಹೇಳಬೇಕೆಂದುಕೊಂಡಿರುವ ಮಾತುಗಳನ್ನು ನನ್ನ ಮಕ್ಕಳೇ ವಹಿಸಿಕೊಂಡಿದ್ದಾರೆ. ಮಧ್ಯೆ ತಲೆ ಹಾಕುವುದು ಬೇಡವೆಂದುಕೊಂಡಳು. ಹಾಗೇ ಭಾಗ್ಯಳ ಕಡೆಗೆ ದೃಷ್ಟಿ ಹಾಯಿಸಿದಳು. ಅವಳು ಸೋದರಿಯರ ಸಲಹೆಗಳನ್ನು ತದೇಕ ಚಿತ್ತದಿಂದ ಆಲಿಸುದ್ದಾಳೇನೋ ಎಂಬಂತೆ ತನ್ನ ಕೈಯನ್ನು ಗದ್ದಕ್ಕೆ ಆನಿಸಿಕೊಂಡು ಮುಗುಳು ನಗುತ್ತಾ ಕುಳಿತಿದ್ದನ್ನು ನೋಡಿ ಸದ್ದಾಗದಂತೆ ಸಲ್ಲಿಂದ ಸರಿದಳು.
ಮಾರನೆಯ ದಿನ ಮಾಮೂಲಿಗಿಂತ ಬೇಗ ಎಚ್ಚರವಾದ ಲಕ್ಷ್ಮಿ ಕಣ್ಣುಬಿಟ್ಟು ನೋಡಿದಳು. ಕಿಟಕಿ ತೆರೆದೇ ಇತ್ತು. ಬೀದಿಯ ದೀಪದ ಬೆಳಕಷ್ಟೇ ಕಾಣಿಸಿತು. ಇನ್ನೂ ಬೆಳಕು ಹರಿದಿಲ್ಲ ಎಂದು ತನ್ನಲ್ಲೇ ಗೊಣಗಿಕೊಂಡಳು. ”ಲಕ್ಷ್ಮೀ, ನಿದ್ರೆ ಬರಲಿಲ್ಲವೇ? ಬೇಗ ಎದ್ದ ಹಾಗಿದೆ?” ಎನ್ನುತ್ತಾ ಭಟ್ಟರು ಹಾಸಿಗೆಯಿಂದ ಎದ್ದು ಕುಳಿತರು.
”ಹೌದು ಬೇಗ ಎಚ್ಚರವಾಗಿ ಬಿಟ್ಟಿದೆ. ಮಲಗಿದರೂ ನಿದ್ರೆ ಬರಲ್ಲ” ಎಂದಳು. ”ಹಾ ಅಂದ ಹಾಗೆ ರಾತ್ರಿ ನಿಮಗೆ ಹೇಳುವುದು ಮರೆತಿದ್ದೆ. ನೀವು ಜಮೀನಿನ ಕಡೆ ಹೋಗಿ ಹಿಂತಿರುಗುವಾಗ ಒಂದಿಷ್ಟು ಹೂ, ಹಣ್ಣುಗಳನ್ನು ತೆಗೆದುಕೊಂಡು ಬನ್ನಿ. ಅಡಿಕೆ, ವೀಳ್ಯದೆಲೆ ಮನೆಯಲ್ಲಿದೆ. ನೀವು ಬರುವಷ್ಟರಲ್ಲಿ ನಾನು ಸ್ನಾನ ಮುಗಿಸಿ ಅಡುಗೆ ಕೆಲಸ ಮಾಡಿರುತ್ತೇನೆ. ಮಕ್ಕಳನ್ನು ಎಬ್ಬಿಸಿ ಮನೆಗೆಲಸವನ್ನೆಲ್ಲ ಮಾಡಿಸಿಟ್ಟಿರುತ್ತೇನೆ. ನೀವು ಬಂದ ತಕ್ಷಣ ಸ್ನಾನ ಪೂಜೆ ಮುಗಿಸಿ ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಆನಂತರ ಎಲ್ಲರೂ ಒಟ್ಟಿಗೆ ಕೇಶವಯ್ಯನವರ ಮನೆಗೆ ಹೋಗೋಣ” ಎಂದಳು ಲಕ್ಷ್ಮಿ.
”ಅದೆಲ್ಲಾ ಸರಿ ಲಕ್ಷ್ಮೀ, ಹೆಣ್ಣು ನೋಡೋಕೆ ಬರೋದು ಅವರು. ನಾವ್ಯಾಕೆ ಹೂ ಹಣ್ಣುಗಳನ್ನು ತೆಗೆದುಕೊಂಡು ಹೋಗಬೇಕು? ಮಾತುಕತೆಗೆ ಕುಳಿತು ಒಪ್ಪಂದ ಮಾಡಿಕೊಳ್ಳುವಾಗ ತೆಗೆದುಕೊಂಡು ಹೋದರಾಯಿತಲ್ಲವೇ?” ಎಂದು ಕೇಳಿದರು ಭಟ್ಟರು.
”ಅಯ್ಯೋ ನಿಮ್ಮ, ತಿಳುವಳಿಕೆಗೆ ಬಡುಕೊಂಡರು. ನಿಮ್ಮ ಅಜ್ಜಿ, ತಾತ, ಅಪ್ಪ, ಎಲ್ಲಾ ಸೇರಿ ನಿಮ್ಮನ್ನು ಬುದ್ಧುಮಾಡಿಬಿಟ್ಟಿದ್ದಾರೆ. ಅಲ್ರೀ ಕೇಶವಣ್ಣ, ರಾಧಕ್ಕ ಇಬ್ಬರೂ ನಮಗೋಸ್ಕರ ತಾವೇ ಇಷ್ಟೆಲ್ಲ ಮಾತನಾಡಿ ತಮ್ಮ ಮನೆಯಲ್ಲೇ ಈ ಏರ್ಪಾಡು ಮಾಡಿಕೊಂಡಿರುವಾಗ ನಾವು ಹಾಗೇ ಬರೀಕೈಯಲ್ಲಿ ಹೋಗುವುದು ತರವೇ? ನೀವೇ ಯೋಚಿಸಿ” ಎಂದಳು.
”ನೀನು ಹೇಳಿದ ಹಾಗೆ ದೊಡ್ಡವರೇ ಎಲ್ಲವನ್ನೂ ನೋಡಿಕೊಂಡು ನನಗೇನೂ ತಿಳಿದುಕೊಳ್ಳಲು ಬಿಡದೆ ಬೆಳೆಸಿಬಿಟ್ಟಿದ್ದಾರೆ. ಈಗ ತಾನೇ ನನ್ನ ಸಂಸಾರ, ಹೆಂಡತಿ, ಮಕ್ಕಳ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನೀನೇ ನನಗೆ ಇದರಲ್ಲಿ ಗುರು. ನೋಡು ಲಕ್ಷ್ಮೀ ನೀನು ಹೇಗೆ ಹೇಳ್ತಿಯೋ ಹಾಗೇ ಮಾಡ್ತೀನಿ. ಪ್ರಶ್ನೆ ಮಾಡಲ್ಲ. ಆದರೆ ಏತಕ್ಕೆ, ಏನು, ಯಾಕೆ ಮಾಡಬೇಕು, ಮಾಡಬಾರದು ಎಂಬುದನ್ನು ನನಗೆ ವಿವರಣೆ ನೀಡಬೇಕು. ನಾನು ತಿಳಿದುಕೊಳ್ಳಬೇಕು. ಆಯಿತಾ, ಹಾ..ಹೇಗಿದ್ದರೂ ಎದ್ದಾಯಿತು. ಬೇಗ ಸಿದ್ಧವಾಗಿ ಜಮೀನಿನ ಕಡೆಗೆ ಹೋಗಿ ಬಂದುಬಿಡ್ತೇನೆ” ಎಂದು ಭಟ್ಟರು ಹಿತ್ತಲಕಡೆಗೆ ನಡೆದರು.
ಗಂಡನ ಮಾತುಗಳನ್ನು ಕೇಳಿದ ಲಕ್ಷ್ಮಿ ”ಹೂಂ, ನನ್ನ ಕರ್ಮಕ್ಕೆ ಯಾರು ಹೋಣೆ. ಒಣ ಬಡಿವಾರವಿಲ್ಲ. ಸೀದಾಸಾದಾ ಒಪ್ಪಿಕೊಂಡುಬಿಡುತ್ತಾರೆ ನನ್ನ ಪುಣ್ಯ. ನಾಲ್ಕು ಮಕ್ಕಳನ್ನು ತಟಾಯಿಸುವ ಹೊತ್ತಿಗೆ ತಲೆಗೆ ತಾಕಬಹುದು” ಎಂದುಕೊಂಡು ಹಾಸಿಗೆಗಳನ್ನು ಸುತ್ತಿಟ್ಟು ಕೂದಲನ್ನು ಕ್ಯಯಿಂದಲೇ ಓರಣಮಾಡಿ ಗಂಟುಹಾಕಿಕೊಂಡು ನಲುಗಿದ್ದ ಸೀರೆಯನ್ನು ಸರಿಪಡಿಸಿಕೊಂಡು ರೂಮಿನಿಂದ ಹೊರಬಂದಳು.
ತನ್ನ ನಿತ್ಯಕರ್ಮಗಳನ್ನು ಪೂರೈಸಿ ಕೈಕಾಲು ಮುಖ ತೊಳೆದುಕೊಂಡು ಬಂದ ಭಟ್ಟರು ಅಡುಗೆ ಮನೆ ಹೊಕ್ಕು ಒಂದೆರಡು ಲೋಟ ನೀರನ್ನು ಬಿಸಿಮಾಡಿಕೊಂಡು ಕುಡಿದರು. ದಟ್ಟಿಪಂಚೆ, ಮೇಲೊಂದು ಶರಟು, ತಲೆಗೊಂದು ಟೋಪಿ, ಕೈಯಲ್ಲೊಂದು ದೊಣ್ಣೆ ಹಿಡಿದು ”ಲಕ್ಷ್ಮೀ ಎಲ್ಲಿದ್ದೀ? ಬಾ ಮುಂಭಾಗಿಲು ಹಾಕಿಕೋ” ಎಂದು ಕೂಗಿದರು.
”ರೀ ಹೊರಗಿನ್ನೂ ಕತ್ತಲು ಕತ್ತಲು, ಸ್ವಲ್ಪ ಹೊತ್ತು ಕೂತಿರಿ, ಬೆಳಕು ಹರಿಯಲಿ. ಅಷ್ಟರಲ್ಲಿ ಬಾಗಿಲು ಮುಂದೆ ಗುಡಿಸಿ, ನೀರುಹಾಕಿ, ರಂಗೋಲಿ ಬಿಟ್ಟುಬರ್‍ತೇನೆ” ಎಂದಳು ಲಕ್ಷ್ಮಿ.
”ಅಲ್ವೇ ಲಕ್ಷ್ಮೀ, ಹೊರಗೆ ಕತ್ತಲಿದೆ ಎಂದು ಹೇಳಿದವಳು ನೀನು ಹೇಗೆ ..ಹಹ..ನಿನಗೂ ಕಾಣಿಸಬೇಡವೇ?”
”ಅಷ್ಟು ಕಾಣಿಸದೆ ಏನು, ಮದುವೆಯಾಗಿ ಪಡಿಯಕ್ಕಿ ಒದ್ದು ಈ ಮನೆಗೆ ಕಾಲಿರಿಸಿದವಳಿಗೆ ಇಷ್ಟು ವರ್ಷಗಳಾದನಂತರ ಇಲ್ಲಿನ ಒಂದೊಂದು ಇಂಚು ಜಾಗವೂ ಗೊತ್ತು” ಎಂದು ಹೇಳುತ್ತಾ ನೀರು ತುಂಬಿದ ಬಕೀಟು, ಪೊರಕೆ ಸಮೇತ ಹಿತ್ತಲಿಂದ ಮುಂಭಾಗಿಲಿಗೆ ಬಂದಳು ಲಕ್ಷ್ಮಿ. ಮುಂಬಾಗಿಲನ್ನು ತೆರೆದು ಹೆಂಡತಿಗೆ ದಾರಿಮಾಡಿಕೊಟ್ಟರು ಭಟ್ಟರು. ಚಕ್ಕನೆ ತನ್ನ ಕೆಲಸ ಮುಗಿಸಿ ರಂಗೋಲಿಯಿಟ್ಟಳು ಲಕ್ಷ್ಮಿ. ”ವಾವ್, ನಿನ್ನ ಕೆಲಸಕ್ಕೆ ಸಹಾಯಮಾಡಲು ಸೂರ್ಯದೇವನೇ ಬರುತ್ತಿದ್ದಾನೆ. ಆಯಿತು ನಾನಿನ್ನು ಹೋಗುಬರುತ್ತೇನೆ. ಒಳಗೆ ಹೋಗಿ ಬಾಗಿಲು ಹಾಕಿಕೋ” ಎಂದು ಹೇಳಿ ಹೊರಟರು ಭಟ್ಟರು.
ಒಳಗಿನ ರೂಮಿನಲ್ಲಿ ತಂಗಿಯರ ಜೊತೆಗೆ ಹೆಸರಿಗಷ್ಟೇ ಮಲಗಿದ್ದ ಭಾಗ್ಯಳಿಗೆ ಹೆತ್ತವರ ಮಾತುಗಳೆಲ್ಲ ಕಿವಿಗೆ ಬೀಳುತ್ತಿದ್ದವು. ಆಗ ಅವಳು ಮನದಲ್ಲೇ ಹೀಗಂದುಕೊಂಡಳು. ”ಅಪ್ಪ ಅಷ್ಟು ಬುದ್ಧಿವಂತರಲ್ಲ ನಿಜ, ಆದರೆ ಹೃದಯವಂತರು. ಅವರಿಬ್ಬರಲ್ಲಿ ಹೊಂದಾಣಿಕೆ ಎಷ್ಟು ಚೆನ್ನಾಗಿದೆ. ನನ್ನಮ್ಮ ಅಪ್ಪನನ್ನು ಯಾರ ಮುಂದೆಯೂ ಲಘುವಾಗಿ ಮಾತನಾಡಿದ್ದನ್ನು ನೋಡಿಲ್ಲ. ನಮ್ಮ ಹತ್ತಿರವೂ ಅಷ್ಟೇ. ಸಿರಿತನ, ಬಡತನ, ಏನೇ ಇರಲಿ ಗಂಡಹೆಂಡತಿಯರಲ್ಲಿ ಹೊಂದಾಣಿಕೆ ಮುಖ್ಯ. ಹೂಂ ನನ್ನ ಹಣೆಬರಹದಲ್ಲಿ ದೇವ ಏನು ಬರೆದಿದ್ದಾನೋ” ಅಷ್ಟರಲ್ಲಿ ”ಭಾಗ್ಯಾ, ಭಾವನಾ ಏಳ್ರಮ್ಮಾ” ಎಂಬ ಕರೆ ಬಂದ ಕೂಡಲೇ ತನ್ನ ಆಲೋಚನೆಯಿಂದ ಹೊರಬಂದವಳೇ ”ಭಾವನಾ ಎದ್ದೋಳೇ, ಅಮ್ಮ ಕೂಗುತ್ತಿದ್ದಾರೆ ”ಎಂದು ತಂಗಿಯನ್ನು ಎಬ್ಬಿಸಿದಳು. ಅಲ್ಲೇ ಮಲಗಿದ್ದ ಚಿಕ್ಕ ತಂಗಿಯರ ಕಡೆಗೆ ನೋಡಿದಳು. ಅವರ ಕಾಲಬುಡದಲ್ಲಿ ಬಿದ್ದಿದ್ದ ಹೊದಿಕೆಯನ್ನು ಅವರ ಕತ್ತಿನವರೆಗೂ ಹೊದಿಸಿ ರೂಮಿನಿಂದ ಹೊರಬಂದಳು ಭಾಗ್ಯ. ಅಕ್ಕನನ್ನು ಹಿಂಬಾಲಿಸಿದಳು ಭಾವನಾ. ಮಕ್ಕಳಿಬ್ಬರನ್ನು ನೋಡಿದ ಲಕ್ಷ್ಮಿ ಅವರುಗಳು ಮಾಡಬೇಕಾದ ಕೆಲಸಗಳನ್ನು ಹೇಳಿ ತಾನು ಸ್ನಾನ ಮಾಡಲು ತೆರಳಿದಳು. ಅಮ್ಮನ ಆಣತಿಯಂತೆ ಕೆಲಸಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಮಾಡಿ ಮುಗಿಸಿದರು. ತಮ್ಮ ತಾಯಿಯ ಸ್ನಾನದ ನಂತರ ತಮ್ಮದನ್ನೂ ಮುಗಿಸಿ ಅಪ್ಪನಿಗೆ ಪೂಜೆಗೆಲ್ಲವನ್ನೂ ಅಣಿ ಮಾಡಿದರು. ಅಷ್ಟರಲ್ಲಿ ಚಿಕ್ಕ ತಂಗಿಯರಿಬ್ಬರೂ ಎದ್ದು ಬಂದಿದ್ದು ಕಂಡು ತಮಗೆ ತಾಯಿ ನಿರ್ದೇಶಿಸಿದ್ದಂತೆ ಭಾವನಾ ಅವರಿಗೂ ಏನು ಮಾಡಬೇಕೆಂದು ಹೇಳಿ ತಾನೂ ಹಿರಿಯಳು ಎಂಬಂತೆ ಬಿಂಬಿಸಿಕೊಂಡಳು. ಅದನ್ನು ನೋಡಿದ ಭಾಗ್ಯ ಮನಸ್ಸಿನಲ್ಲೇ ನಕ್ಕು ಸುಮ್ಮನಾದಳು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=34805
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
ಸೊಗಸಾಗಿದೆ. ಬಹಳ ಚೆನ್ನಾಗಿ ಮುಂದುವರಿಯುತ್ತಿದೆ ಕಥೆ
ಧನ್ಯವಾದಗಳು ಮೇಡಂ
ಧನ್ಯವಾದಗಳು ನಯನ ಮೇಡಂ
ಬಹಳ ಚೆನ್ನಾಗಿ ಸಾಗುತ್ತಿರುವ ಸಾಂಸಾರಿಕ ಕಥೆಯು ಕುತೂಹಲದಾಯಕವಾಗಿದೆ…ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಚೆನ್ನಾಗಿ ಸಾಗುತ್ತಿದೆ
ಧನ್ಯವಾದಗಳು ಪದ್ಮಿನಿ ಮೇಡಂ
ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ್ದೀರಿ,….
ಧನ್ಯವಾದಗಳು ಗೆಳತಿ ವೀಣಾ