ನಳ ದಮಯಂತಿ

Share Button

ನಿಷಧ ದೇಶದಲ್ಲಿ ನಳನೆಂಬ ರಾಜಕುಮಾರನಿದ್ದನು. ಅತಿ ಗುಣಸಂಪನ್ನನು, ಮಹಾಬಲಶಾಲಿಯು ಆಗಿದ್ದು, ತನ್ನ ಪರಾಕ್ರಮ, ತೇಜಸ್ಸಿನಿಂದಲೇ ಅವನು ಚಕ್ರವರ್ತಿಯಾಗಿ ಅನೇಕ ರಾಜರುಗಳ ರಾಜನಾಗಿ ಆಳ್ವಿಕೆ ಮಾಡುತಿದ್ದನು. ಆತನು, ವೇದಾಧ್ಯಯನ ಸಂಪನ್ನನಾಗಿ, ಬ್ರಹ್ಮನಿಷ್ಟನಾಗಿದ್ದು,  ಅಶ್ವಪರೀಕ್ಷೆಯಲ್ಲಿ ನಿಷ್ಣಾತನಾಗಿದ್ದನು. ಅವನ ಸೌಂದರ್ಯಕ್ಕೆ ಮಾರುಹೋಗದವರೇ ಇರಲಿಲ್ಲ. ರೂಪು, ಸಂಪತ್ತು, ಯೌವ್ವನ ಇದೆಲ್ಲವೂ ಇದ್ದರೂ, ಸೌಜನ್ಯವರಿತ ನಡವಳಿಕೆಯವನಾಗಿದ್ದು,  ಉದಾರಿಯು ಜಿತೇಂದ್ರಿಯನೂ ಆಗಿ ನಿಷಧ ದೇಶವನ್ನು ಸಂರಕ್ಷಿಸುತಿದ್ದನು.

ಅದೇ ಕಾಲದಲ್ಲಿ, ವಿದರ್ಭ ದೇಶವನ್ನು ಭೀಮನೆಂಬ ರಾಜನು ಆಳುತಿದ್ದನು. ಮಕ್ಕಳಿಲ್ಲದ ಅವನು ಬ್ರಹ್ಮರ್ಷಿಗಳಾದ ದಮ ರ ಅನುಗ್ರಹದಿಂದ ಮೂವರು ಗಂಡು ಮಕ್ಕಳು ದಮ, ದಾಂತ, ದಮನ ಮತ್ತು ಅನುಪಮವಾದ ಸೌಂದರ್ಯವನ್ನು ಹೊಂದಿರುವ  ಸುಪುತ್ರಿ, ದಮಯಂತಿಯನ್ನು ಪಡೆದನು.

ದಮಯಂತಿ ಯೌವ್ವನಕೆ ಕಾಲಿಟ್ಟಳು. ಸ್ವರ್ಣ ಹಂಸವೊಂದರ ಮೂಲಕ ನಳನ ಸದ್ಗುಣಗಳ ಬಗ್ಗೆ ಕೇಳಿ, ಮನದಲ್ಲೇ ಅವನನ್ನು ಮೋಹಿಸತೊಡಗಿದಳು. ಆ ಸ್ವರ್ಣಹಂಸವು ನಳನ ಬಳಿಗೆ ಬಂದು, ಅವನಲ್ಲೂ ದಮಯಂತಿಯ ಬಗ್ಗೆ ಹೇಳಿ ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಗುವಂತೆ ಮಾಡಿತು. ಭೀಮ ಮಹಾರಾಜ ಮಗಳಾದ ದಮಯಂತಿಗೆ ಸ್ವಯಂವರವನ್ನು ಏರ್ಪಡಿಸಿದ್ದನು. ಅನೇಕ ರಾಜಕುಮಾರರು ಮಾತ್ರವಲ್ಲ, ದೇವತೆಗಳಾದ ಇಂದ್ರ, ಅಗ್ನಿ, ವರುಣ ಮತ್ತು ಯಮನು ಸ್ವಯಂವರದಲ್ಲಿ ಭಾಗವಹಿಸಿದ್ದರು.

ಸ್ವಯಂವರದಲ್ಲಿ ಭಾಗವಹಿಸಿರುವ ದೇವತೆಗಳೆಲ್ಲರೂ ನಳನ ರೂಪದಲ್ಲೇ ಬಂದಿದ್ದರು.ಒಬ್ಬರನ್ನು ದಮಯಂತಿಯು ತನ್ನ ಪತಿಯೆಂದು ಆರಿಸಿಕೊಳ್ಳಬೇಕಾಗಿತ್ತು. ದಮಯಂತಿ ತನ್ನ ಪ್ರೇಮನಿಷ್ಠೆಯಿಂದ ದೇವತೆಗಳನ್ನೇ ಪ್ರಾರ್ಥಿಸಿ,  ನಳನನ್ನು ತನ್ನ ಪತಿಯನ್ನಾಗಿ ಆಯ್ಕೆಮಾಡಿಕೊಂಡಳು.ಅತಿಮಾನುಷ ಶಕ್ತಿಯುಳ್ಳ ಕಲಿಯು ಸಹ ದಮಯಂತಿಯನ್ನು ಮದುವೆಯಾಗಬೇಕೆಂದಿದ್ದನು. ಆದರೆ ಅವನು ಬರುವ ಮುನ್ನವೆ ದಮಯಂತಿಯ ಸ್ವಯಂವರ ಮುಗಿದು, ನಳನನ್ನು ತನ್ನ ಪತಿಯಾಗಿ ಸ್ವೀಕರಿಸಿಯಾಗಿತ್ತು. ಇದರಿಂದ ಕೋಪಗೊಂಡ ಕಲಿಯು ನಳನ ಸಾಮ್ರಾಜ್ಯವನ್ನು ನಾಶಮಾಡುತ್ತೇನೆಂದು ಶಪಥ ಮಾಡಿದನು.

ನಳ ಮತ್ತು ದಮಯಂತಿಯು ಮದುವೆಯಾಗುತ್ತಾರೆ. ಇವರಿಬ್ಬರಿಗೆ ಇಬ್ಬರು ಮಕ್ಕಳೂ ಜನಿಸುತ್ತಾರೆ. ನಳಮಹಾರಾಜನ ಏಳಿಗೆಯನ್ನು ಆತನ ಸಹೋದರನಾದ ಪುಷ್ಕರನು ಸಹಿಸದಾದನು.ನಳಮಹಾರಾಜನ ದೌರ್ಬಲ್ಯವು ಜೂಜು ಎಂದು ತಿಳಿದಿದ್ದ ಪುಷ್ಕರನು ನಳಮಹಾರಾಜನ ಜೊತೆ ಜೂಜಿನ ಆಟವನ್ನು ಆಡುತ್ತಾನೆ. ಕಲಿಯ ವಕ್ರದೃಷ್ಠಿಯ ಫಲವಾಗಿ, ಜೂಜಿನ ಆಟದಲ್ಲಿ ನಳಮಹಾರಾಜರು ತನ್ನ ಸರ್ವಸ್ವವನ್ನು ಕಳೆದುಕೊಳ್ಳುತ್ತಾನೆ.ಅನಂತರ ಪುಷ್ಕರನು ರಾಜ್ಯವನ್ನು ವಶಪಡಿಸಿಕೊಂಡು,  ನಳನನ್ನು ತನ್ನ ರಾಜ್ಯದಿಂದ ಹೊರಗೆ ಹೋಗಲು ಹೇಳುತ್ತಾನೆ. ಅರಣ್ಯಕ್ಕೆ ಹೊರಟುನಿಂತ ನಳನ ಜೊತೆಗೆ, ದಮಯಂತಿಯು ಹೊರಡುತ್ತಾಳೆ. ಮಕ್ಕಳನ್ನು ತನ್ನ ತವರು ಮನೆಗೆ ಕಳುಹಿಸಿ ತಾನೂ ಪತಿಯೊಂದಿಗೆ ಅರಣ್ಯಕ್ಕೆ ಹೋಗುತ್ತಾಳೆ. ಅರಣ್ಯದಲ್ಲಿ ನಡೆದು ನಡೆದು, ಮತ್ತು ಆಹಾರವೂ ಇಲ್ಲದೆ ಇಬ್ಬರು ಆಯಾಸಗೊಳ್ಳುತ್ತಾರೆ. ಆಗ ನಳನು ತನ್ನ ಪತ್ನಿಯಾದ ದಮಯಂತಿಗೆ ತನ್ನನ್ನು ಬಿಟ್ಟು ವಿದರ್ಭ ರಾಜ್ಯಕ್ಕೆ ತೆರಳಲು ಹೇಳುತ್ತಾನೆ. ಆದರೆ ದಮಯಂತಿಯು ವಿದರ್ಭ ರಾಜ್ಯಕ್ಕೆ ಹೋಗಲು ಒಪ್ಪುವುದಿಲ್ಲ.
.
ಒಂದು ರಾತ್ರಿಯ ವೇಳೆ ದಮಯಂತಿಯು ನಿದ್ರೆಯಲ್ಲಿದ್ದಾಗ ನಳನು ಆಕೆಯನ್ನು  ಒಂಟಿಯಾಗಿ  ಕಾಡಿನಲ್ಲೆ ಬಿಟ್ಟು ಹೋಗುತ್ತಾನೆ.ನಳನು ಒಂಟಿಯಾಗಿ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಆರ್ತಧ್ವನಿ ತನ್ನನ್ನು ರಕ್ಷಿಸುವಂತೆ ಕರೆಯುವುದು ಕಿವಿಗೆ ಬೀಳುತ್ತದೆ.ಧ್ವನಿ ಕೇಳಿಬಂದ ದಾರಿಯಲ್ಲಿ ನಳನು ಸಾಗುತ್ತಾನೆ.ಆ ಧ್ವನಿಯು  ಸರ್ಪರಾಜನಾದ ಕಾರ್ಕೋಟಕನದ್ದಾಗಿ,  ನನ್ನನ್ನು ಕಾಡ್ಗಿಚ್ಚಿನಿಂದ ರಕ್ಷಿಸಿ ಎಂದು ಬೇಡಿಕೊಳ್ಳುತ್ತದೆ. ನಳನು ಕಾರ್ಕೋಟಕವನ್ನು ರಕ್ಷಿಸುತ್ತಾನೆ. ಕೂಡಲೆ ಆ  ಕಾರ್ಕೋಟಕವು ನಳನನ್ನು ಕಚ್ಚುತ್ತದೆ.ಕಾರ್ಕೋಟದ ವಿಷದ ಪರಿಣಾಮದಿಂದಾಗಿ ನಳನ ರೂಪವು ವಿರೂಪಗೊಳ್ಳುತ್ತದೆ. ‘ಉಪಕಾರ ಮಾಡಿದರೆ, ಕಡಿಯುವುದೇ’ ಎಂದು ಕೇಳಿದ ನಳನಿಗೆ ಸರ್ಪವು ಈ ರೂಪವು ನಿನ್ನನ್ನು  ನಿನ್ನ ಶತ್ರುಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಎಂದು ಹೇಳುತ್ತದೆ. ಪವಿತ್ರ ವಸ್ತ್ರಗಳನ್ನು ನೀಡಿ, ನೀನು ಬಯಸಿದಾಗ ಇದನ್ನು ಧರಿಸಿಕೊಂಡರೆ ಮತ್ತೆ ನಿನಗೆ  ನಿಜ ರೂಪ ಬರುತ್ತದೆ ಎಂದು ಹೇಳಿ ಮಾಯವಾಗುತ್ತದೆ. ನಳನು ಬೇರೊಂದು ರಾಜ್ಯಕ್ಕೆ ಹೊರಟುಹೋಗಲು ತಯಾರಾಗುತ್ತಾನೆ.
.
ನಿದ್ರೆಯಿಂದ ಎಚ್ಚರವಾದಾಗ ನಳನು ಇಲ್ಲದಿರುವುದನ್ನು ಕಂಡ ದಮಯಂತಿಗೆ ಭಯವಾಗುತ್ತದೆ. ನಳನು ಬರೆದಿಟ್ಟಿರುವ ಕಾಗದವೊಂದು ಆಕೆಗೆ ಸಿಗುತ್ತದೆ. ಆ ಕಾಗದದಲ್ಲಿ ನಳನು ಆಕೆಗೆ ತನ್ನ ತವರು ಮನೆಗೆ ಹೋಗುವಂತೆ ಹೇಳಿರುತ್ತಾನೆ. ದಮಯಂತಿಯು ದಟ್ಟ ಅರಣ್ಯದ ಮುಂದೆ ಹೋಗುತ್ತಿದ್ದಾಗ  ಎದುರಾದ ಒಬ್ಬ ಕಾಡ ಕಿರಾತನ ಕಾಮದ ಕಣ್ಣು ಅವಳ ಮೇಲೆ ಬಿತ್ತು. ಪತಿವ್ರತೆಯಾದ ಅವಳನ್ನು ಸ್ಪರ್ಶಿಸಲು ಬರುವಾಗ, ಅವನು ಉರಿದು ಭಸ್ಮವಾದನು. ಅನಂತರ, ಕೆಲವರು ಯಾತ್ರಿಕರ ಗುಂಪನ್ನು ಸೇರಿಕೊಂಡು ಚೇದಿ ರಾಜ್ಯವನ್ನು ತಲುಪಿ ಅಲ್ಲಿ ಅರಮನೆಯಲ್ಲಿ ರಾಜನ ಮಗಳ  ಸೇವೆಯನ್ನು ಮಾಡುತ್ತಾ ಇರುತ್ತಾಳೆ.ಸ್ವಲ್ಪ ವರ್ಷಗಳ ಬಳಿಕ ದಮಯಂತಿಯನ್ನು ಹುಡುಕಿಕೊಂಡು ಬಂದಂತಹ ಅವಳ ತಂದೆಯ ಮನೆಯವರು ಅವಳನ್ನು ಕರೆದುಕೊಂಡು ಹೋಗಿ, ನಳನನ್ನು ಹುಡುಕುವ ವ್ಯವಸ್ಥೆಯನ್ನು ಮಾಡುತ್ತಾರೆ. ಆದರೆ ನಳನು ಎಲ್ಲೂ ಕಾಣಸಿಗದಾಗ, ದಮಯಂತಿಯು ನಳನು ಇಲ್ಲಿಗೆ ಮತ್ತೆ ಬರಬೇಕಾದರೆ ಏನೂ ಮಾಡಬೇಕೆಂದು ಯೋಚಿಸುತ್ತಾಳೆ. ಅನಂತರ ಆಕೆಯು ಪುನಃ ಸ್ವಯಂವರದ ನಾಟಕ ರಚಿಸುತ್ತಾಳೆ. ದಮಯಂತಿ ಪುನಃಸ್ವಯಂವರದ ಪತ್ರವು ಅಯೋಧ್ಯೆಯ ಅರಸನಾದ ಋತುಪರ್ಣನಿಗೂ ಸಿಗುತ್ತದೆ. ಋತುಪರ್ಣನ ಆಸ್ಥಾನದಲ್ಲಿ ಕುದುರೆಗಳನ್ನು ನೋಡಿಕೊಳ್ಳುವ ಕೆಲಸವನ್ನು ಬಾಹುಕನೆನ್ನುವ ಹೆಸರಿನಿಂದ ನಳನು ಮಾಡುತಿದ್ದನು. ಸ್ವಯಂವರದ ಒಂದು ದಿನ ಮುಂಚಿತವಾಗಿ ಪತ್ರ ಸಿಕ್ಕಿದರೆ, ಅಲ್ಲಿಗೆ ಹೋಗುವುದು ಹೇಗೆಯೆಂದು ಚಿಂತಾಕ್ರಾಂತನಾದ ರಾಜನಿಗೆ ಬಾಹುಕನು ತಾನು ತಲುಪಿಸುವುದಾಗಿ ಆಶ್ವಾಸನೆ ಕೊಡುವನು.
.
ಪ್ರಯಾಣಕ್ಕೆ ರಥವನ್ನು ಅಣಿಗೊಳಿಸು ಎಂದು ಋತುಪರ್ಣನು ಹೇಳಿದ ಕೂಡಲೇ, ಬಾಹುಕನು ಅಶ್ವಶಾಲೆಗೆ ಹೋಗಿ ಪ್ರತಿಯೊಂದು ಕುದುರೆಗಳ ಅವಯವಗಳು, ಬಣ್ಣ, ಕಾಲುಗಳು ಸುಳಿಗಳು ಇವನ್ನೆಲ್ಲ ಪರೀಕ್ಷಿಸಿದನು. ಅಶ್ವಗಳ ಆಯ್ಕೆಗೆ ಕಾಲಹರಣ  ಮಾಡುವುದನ್ನು ಕಂಡ ಋತುಪರ್ಣ ಶೀಘ್ರವಾಗಿ ಕುದುರೆಯನ್ನ ಆಯ್ದು ರಥಕ್ಕೆ ಕಟ್ಟು ಎಂದು ಅವಸರ ಪಡಿಸಿದನು.  ಆದರೂ ಬಾಹುಕನು ಸಾವಧಾನದಿಂದಲೇ ಕುದುರೆಯನ್ನ ಆಯ್ದು,  ಬಳಿಕ  ತಂದು ರಥಕ್ಕೆ ಕಟ್ಟಿದನು. ಆ ಕುದುರೆಗಳಾದರೋ ಬಡಕಲು ಕುದುರೆಗಳಂತೆ ಕಾಣಿಸುತ್ತಿವೆಯಾದರೂ,  ದೂರ ಪ್ರಯಾಣ ಮತ್ತು ವೇಗದ ಪ್ರಯಾಣಕ್ಕೆ ಸೂಕ್ತವಾದ ಕುದುರೆಗಳಾಗಿದ್ದವು.
.
ಅಷ್ಟೊಂದು ಸಮಯವನ್ನ ತೆಗೆದುಕೊಂಡ ಬಾಹುಕ ಕೃಶವಾಗಿದ್ದ ಕುದುರೆಗಳನ್ನ ರಥಕ್ಕೆ ಕಟ್ಟಿದುದನ್ನ ಕಂಡ ಋತುಪರ್ಣನಿಗೆ ಸಿಟ್ಟು ಬಂದಿತು.  ಆತ ಕೋಪದಿಂದಲೇ, ” ಅಯ್ಯಾ ಬಾಹುಕ , ಇಷ್ಟು ಸಮಯ ತೆಗೆದುಕೊಂಡು ರಥಕ್ಕೆ ಕಟ್ಟಿರುವ ಕುದುರೆಯಾದರೂ ಎಂಥಾದ್ದು…ಇಂತಹಾ ಕೃಶವಾದ ಕುದುರೆಗಳನ್ನು ಕಟ್ಟಿ,  ದೂರದ ಪ್ರಯಾಣ ಸವೆಸಲು ಸಾಧ್ಯವೇ… ಇವುಗಳು ನನ್ನ ರಥವನ್ನ ನಮ್ಮ ತೂಕವನ್ನೂ ಹೊರಬಲ್ಲುದೇ…? ” ಎಂದು ಪ್ರಶ್ನಿಸಿದಾಗ, “ಮಹಾರಾಜ, ನಾನು ಆರಿಸಿರುವ  ಕುದುರೆಗಳು ಒಂದೇ ದಿನದಲ್ಲಿ ಪ್ರಯಾಣ ಮಾಡಲು ಖಂಡಿತವಾಗಿಯೂ ಸಮರ್ಥವಾಗಿದೆ” ಅಂದ.  ಅಶ್ವಶಾಸ್ತ್ರವನ್ನ ಬಲ್ಲವ ಬಾಹುಕ ಎನ್ನುವ ಅರಿವು ಋತುಪರ್ಣನಿಗಾದೊಡನೆ, ಆಗಲಿ, ನೀನು ಆಯ್ದ ಕುದುರೆಗಳನ್ನೇ ಕಟ್ಡು ಶೀಘ್ರವಾಗಿ ಪ್ರಯಾಣ ಬೆಳೆಸೋಣ ” ಎಂದನು. ಕೂಡಲೇ  ಕುದುರೆಗಳನ್ನು ರಥಕ್ಕೆ ಕಟ್ಟಿ,  ರಾಜನನ್ನು  ರಥವೇರಲು ಹೇಳಿ, ಹೊರಡುವ ಮೊದಲು ನರಶ್ರೇಷ್ಠನಾದ ನಳನು  ಕುದುರೆಗಳ ಮೈದಡವಿ ಸಂತೈಸಿ ಮೇಲಕ್ಕೆಬ್ಬಿಸಿ, ಕಡಿವಾಣವನ್ನು ಹಿಡಿದು ಒಮ್ಮೆ ಚಾವಟಿಯ ಸದ್ದು ಮಾಡಿದನು. ಆ ಚಾವಟಿಯ ದ್ವನಿ ಕೇಳಿಸಿದ್ದೇ ತಡ ಕುದುರೆಗಳು ಅಂತರಿಕ್ಷದಲ್ಲಿ ಸಂಚರಿಸುತ್ತಿವೆಯೋ  ಎಂಬಂತೆ ವಾಯುವೇಗದಲ್ಲಿ ಓಡತೊಡಗಿತು.
.
ದೈಹಿಕವಾಗಿ ಕೃಶವಾಗಿರುವಂತಹಾ ಕುದುರೆಗಳನ್ನ ಆಯ್ದು ವಾಯುವೇಗದಲ್ಲಿ ಅವುಗಳನ್ನ ಓಡಿಸುತ್ತಿದ್ದ ಬಾಹುಕನ ಪ್ರಾವೀಣ್ಯತೆಯನ್ನ ಕಂಡ ಮಹಾರಾಜ ದಂಗಾಗಿಬಿಟ್ಟನು. ಮಾತಲಿಗಿರುವ ಅಶ್ವಚಾಲನಾ ಪ್ರೌಢಿಮೆ,  ಶಾಲಿಹೋತ್ರನ ಅಶ್ವ ನೈಪುಣ್ಯ ಕಂಡನು.. ಅಶ್ವಶಾಸ್ತ್ರವನ್ನ ಚೆನ್ನಾಗಿ ಬಲ್ಲಂತಹಾ ನನ್ನೊಡೆಯ ನಳ ಮಹಾರಾಜನೇ ಬಂದನೇ… ಬಾಹುಕನಿಗೂ ನಳ ಮಹಾರಾಜರಿಗೂ ಏನೊಂದೂ ವ್ಯತ್ಯಾಸ ಕಾಣಿಸುತ್ತಿಲ್ಲ. ವಯಸ್ಸೂ ಒಂದೇ ರೀತಿಯದಾಗಿದೆ .ನಳಮಹಾರಾಜರಂತೆಯೇ ಅಶ್ವವಿದ್ಯೆಯನ್ನು ಬಲ್ಲ ಇವನ ರೂಪ ಮಾತ್ರ ನಳ ಮಹಾರಾಜರದಲ್ಲ.. ಈತನ ಕೌಶಲ್ಯವನ್ನ ಕಾಣುವಾಗ ಈತ ನಳನೇ ಆಗಿರಬೇಕು ಎಂದು ಮನವು ಹೇಳುತಿದೆ. ರೂಪವೊಂದರ ಹೊರತಾಗಿ  ಈತ ನಳ ಮಹಾರಾಜನೇ ಇರಬೇಕು ಎಂದು ಯೋಚಿಸಿದನು.
.
ಅಷ್ಟರಲ್ಲಿ ಋತುಪರ್ಣನ ಅಂಗವಸ್ತ್ರವು ಜಾರಿ ರಥದಿಂದ ಕೆಳಕ್ಕೆ ಬಿತ್ತು. ಇದನ್ನ ಕಂಡ ಋತುಪರ್ಣನು ಆ ಕ್ಷಣಕ್ಕೆ ಜೋರಾಗಿ ಕೂಗಿ  ” ಬಾಹುಕ ರಥವನ್ನ ನಿಲ್ಲಿಸು ನನ್ನ ಉತ್ತರೀಯವು ಬಿದ್ದು ಹೋಯಿತು” ಅಂತ ಹೇಳಿದನು. ಆಗ ಬಾಹುಕನು ರಥವನ್ನ ಅದೇ ವೇಗದಲ್ಲಿ ಓಡಿಸುತ್ತಾ, ” ಮಹಾರಾಜ, ಈಗ ರಥವನ್ನ ನಿಲ್ಲಿಸುವಂತಿಲ್ಲ… ನಿಮ್ಮ ಅಂಗವಸ್ತ್ರವು ಒಂದು  ಯೋಜನದಷ್ಟು ಹಿಂದೆ ಬಿದ್ದಿದೆ. ಇದನ್ನ ಕೇಳಿದ ಕೂಡಲೇ ಋತುಪರ್ಣನು ತನ್ನ ಅಂಗವಸ್ತ್ರದ ಆಸೆಯನ್ನೇ ಬಿಟ್ಟು ಬಿಟ್ಟನು. ರಥವು ಅಷ್ಟೊಂದು ವೇಗದಲ್ಲಿ ತನ್ನ ಗಮ್ಯದೆಡೆಗೆ ಸಾಗುತ್ತಿತ್ತು . ಋತುಪರ್ಣನು ಬಾಹುಕನಲ್ಲಿ ನೀನ್ಯಾರೆಂದು ನನ್ನಲ್ಲಿ ಹೇಳೆಂದು ಬಹುವಿಧವಾಗಿ ಪ್ರಾರ್ಥಿಸಿಕೊಂಡನು. ನಳನು ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ಸಖನಲ್ಲಿ ಹೇಳಿದನು. ದ್ಯೂತದಲ್ಲಿ ಸೋಲಲು ಕಾರಣ, ಅಕ್ಷವಿದ್ಯೆ ಅರಿಯದೇ ಇದ್ದುದರಿಂದ ಎಂದು ನಳನಿಗೆ ಅಕ್ಷವಿದ್ಯೆಯನ್ನು ಬೋಧಿಸಿದನು. ಪ್ರತಿಯಾಗಿ, ನಳನು ಋತುಪರ್ಣನಿಗೆ ಅಶ್ವಹೃದಯವನ್ನು ಬೋಧಿಸಿದನು.
.
ಸಮಯಕ್ಕೆ ಮೊದಲೇ ಋತುಪರ್ಣ ರಾಜ ಬಂದುದರಿಂದ, ದಮಯಂತಿಗೆ ಅವನ ಸಾರಥಿ ಅಶ್ವಹೃದಯವನ್ನು ಬಲ್ಲ ನಳನೇ ಇರಬೇಕೆಂದು ಸಂದೇಹ ಬಂತು. ಆದರೆ, ಅವನ ಕುರೂಪದ ಬಗ್ಗೆ ಶಂಕೆ ಹುಟ್ಟಿತು. ದಮಯಂತಿ ಋತುಪರ್ಣನ ಬಿಡದಿಗೆ ನೀರು, ಬೆಂಕಿಗಳನ್ನುಳಿದು ಅಡುಗೆ ಸಾಮಾಗ್ರಿಗಳನ್ನು ಕಳುಹಿಸಲು ಹೇಳಿದಳು.  ಅದೆಲ್ಲವೂ ಇಲ್ಲದಿದ್ದರೂ ಬಾಹುಕ ಅಡುಗೆ ಮಾಡಿದ್ದಾನೆಂಬುವುದು ಗೊತ್ತಾಯಿತು. ಅದು ಹಿಂದೆ ಸ್ವಯಂವರದ ಸಂದರ್ಭದಲ್ಲಿ, ನಳನ ದೇವತಾಭಕ್ತಿಗೆ ಕರುಣಿಸಿದ ವರದಂತೆ, ಅಗ್ನಿ, ವಾಯು, ವರುಣರು ಪ್ರಾರ್ಥಿಸಿದಾಗ ಒಲಿದು ಒದಗುತಿದ್ದರು. ಹಾಗಾಗಿ, ಬಾಹುಕನೇ ನಳನೆಂಬುವುದು ದಮಯಂತಿಗೆ ಖಾತ್ರಿಯಾಯಿತು.ದಮಯಂತಿ ಬಾಹುಕನ ಬಳಿಗೆ ಏಕಾಂತದಲ್ಲಿ ಸಂಧಿಸಿ, ಅವನ ವಿಕಾರರೂಪವನ್ನು ಕಂಡರೂ ಅಳುತ್ತಾ, ಅವನ ಪಾದಕ್ಕೆ ಬಿದ್ದಳು. ನಳನು ಕಾರ್ಕೋಟಕ ನೀಡಿದ ವಸ್ತ್ರಗಳನ್ನು ಮತ್ತೆ ಸುತ್ತಿಕೊಂಡನು. ಮತ್ತೆ ನಳನಾಗಿ ಕಂಗೊಳಿಸಿದನು. ನಳ ಮತ್ತೆ ಬಂದುದನ್ನು ಕಂಡು, ಭೀಮ ರಾಜನಿಗೂ ಸಂತಸವಾಯಿತು. ಋತುಪರ್ಣ ರಾಜನು ಅವರ ಪುನರ್ಮಿಲನದಿಂದ ಸಂತಸಗೊಂಡು, ಮತ್ತೆ ಅಯೋಧ್ಯೆಗೆ ಹೋದನು. ನಳ ದಮಯಂತಿಯರ ಪುನಃ ಸ್ವಯಂವರ ನಡೆಯಿತು.
.
ನಳನು ಕೆಲವೇ ದಿನಗಳಲ್ಲಿ ನಿಷಧ ದೇಶಕ್ಕೆ ಹೋಗಿ ಪುಷ್ಕರನೊಡನೆ ದ್ಯೂತವನ್ನಾಡಲು ಕರೆದನು. ಅಕ್ಷವಿದ್ಯೆಯನ್ನು ಅರಿತವನಾದುದರಿಂದ ತಾನು ಕಳೆದುದನ್ನೆಲ್ಲಾ ಮತ್ತೆ ಗೆದ್ದುಕೊಂಡನು. ನಿಷಧ ಸಾಮ್ರಾಟನಾಗಿ ಮೆರೆದನು. ಭಗವಂತನ ಕೃಪೆಯಿಂದಾಗಿ ಬಂದ ಕಷ್ಟಗಳೆಲ್ಲಾ ಪರಿಹಾರವಾಗಿ, ಸಂತಸದಿಂದ ರಾಜ್ಯಾಡಳಿತವನ್ನು ಸುಸೂತ್ರವಾಗಿ ಮುನ್ನಡೆಸಿದನು.
.
– ಪದ್ಮಾ ಆಚಾರ್ಯ, ಪುತ್ತೂರು

7 Responses

  1. km vasundhara says:

    ಪುರಾಣ ಕತೆ ಚೆನ್ನಾದ ನಿರೂಪಣೆ…

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ.

  3. Hema, hemamalab@gmail.com says:

    ಬಾಲ್ಯದಲ್ಲಿ ಓದಿದ್ದ,ಅಲ್ಪ ಸ್ವಲ್ಪ ನೆನಪಿದ್ದ ಕಥೆಯಿದು.ಈಗ ಪುನ: ಓದಲು ಖುಷಿಯಾಯಿತು.

  4. Krishnaprabha says:

    ಎರಡು ದಿನ ಮೊದಲಷ್ಟೇ ಓದಿದ ಕಥೆ… ನಿರೂಪಣೆ ಬಹಳ ಚೆನ್ನಾಗಿ ಮೂಡಿಬಂದಿದೆ

  5. ಶಂಕರಿ ಶರ್ಮ says:

    ಚಿಕ್ಕಂದಿನಲ್ಲಿ ಓದಿದ ನಳ ದಮಯಂತಿ ಕಥೆ ಮರೆತು ಹೋಗಿತ್ತು.. ತಮ್ಮ ಸೊಗಸಾದ, ಮನಮುಟ್ಟುವ ಕಥಾ ನಿರೂಪಣೆಗೆ ಅಭಿನಂದನೆಗಳು ಪದ್ಮಾ ಮೇಡಂ.

  6. Savithri bhat says:

    ಚಿಕ್ಕಂದಿನಲ್ಲಿ ನಳ ದಮಯಂತಿ ಯಕ್ಷಗಾನ ನೋಡಿದ ನೆನಪು.ಈಗ ಪುನಃ ನಿಮ್ಮ ಲೇಖನ ಓದಿ ಕುಶಿ ಆಯಿತು. ಧನ್ಯವಾದಗಳು ಮೇಡಂ.ನಿರೂಪಣೆಯು ಚೆನ್ನಾಗಿದೆ

  7. ಸೋಮಶೇಖರಯ್ಯ says:

    ತುಂಬಾ ಚನ್ನಾಗಿ ಮಕ್ಕಳಿಗೆ ಅರ್ಥ ಆಗುವ ಹಾಗೆ ಕಥೆ ಬರೆದಿದ್ದೀದ್ದೀರಿ ಮೇಡಮ್. ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: