ಹಸಿರು ಜೋಳ ಹೊಲದಲ್ಲಿ..
ಅದು ನಮ್ಮ ಮದುವೆಯಾದ ಹೊಸತು. ನಾವಾಗ ಬೆಂಗಳೂರಿಗೆ ಹೋಗಿದ್ದೆವು. ನೂತನ ದಂಪತಿಗಳಿಗೆ ಅಂತಹ ಜವಾಬ್ದಾರಿಗಳೇನು ಇರುವುದಿಲ್ಲ. ಆ ದಿನಗಳಲ್ಲಿ ಅವರನ್ನು ಊರೂರಿನಲ್ಲಿರುವ ಬಂಧು ಬಳಗದವರು ಕರೆದು ಕಳಿಸುವುದು ನಮ್ಮ ಕಡೆಯ ವಾಡಿಕೆ. ನಾವು ಸಹ ಹಾಗೆಯೇ ಬೆಂಗಳೂರಿನಲ್ಲಿರುವ ನಮ್ಮ ಬಂಧುಗಳ ಮನೆಗೆಂದು ಹೋಗಿದ್ದು. ಅಲ್ಲಿ ಮೂರ್ನಾಲ್ಕು ದಿನಗಳಿದ್ದು, ಮೂರ್ನಾಲ್ಕು ಬಂಧುಗಳ ಮನೆಗೆ ಹೋಗಿ ಬಂದೆವು.
ಆ ಸಂದರ್ಭದಲ್ಲಿನ ಮತ್ತೆ ಮತ್ತೆ ನೆನಪಾಗುವ ಒಂದು ಘಟನೆ. ಅದೊಂದು ಸಂಜೆ ನಾನೂ ನನ್ನವಳು ನಮ್ಮ ಬಂಧುಗಳ ಮನೆಯ ಹತ್ತಿರದಲ್ಲಿದ್ದ ಪಾರ್ಕಿಗೆಂದು ಹೋಗಿದ್ದು. ಆ ಪಾರ್ಕಿನ ಗೇಟಿನ ಬದಿಯಲ್ಲೇ ಒಂದಷ್ಟು ಜನ ಗುಂಪು ಗುಂಪಾಗಿದ್ದರು. ಅವರುಗಳು ಏನನ್ನೋ ಕೊಂಡು ತಿನ್ನುತ್ತಿದ್ದರು. ಒಂದಷ್ಟು ಜನ ಕೊಂಡುದುದನ್ನು ಕೈಯಲ್ಲಿ ಹಿಡಿದು ಗುಂಪಿನಿಂದ ಆಚೆ ಬಂದರೆ, ಮತ್ತಷ್ಟು ಜನ ಹೊಸದಾಗಿ ಗುಂಪು ಕಟ್ಟುತ್ತಿದ್ದರು. “ಓಯ್, ನಂಗೂ ಅದ್ನ ಕೊಡ್ಸು, ನಾನೂ ತಿನ್ಬೇಕು” ಚಿಕ್ಕಮಕ್ಕಳು ಜಾತ್ರೆಯಲ್ಲಿ ಮಿಠಾಯಿ ಅಂಗಡಿಯತ್ತ ಬೆರಳು ಮಾಡುವಂತೆ ನನ್ನವಳು ಆ ಗುಂಪಿನತ್ತ ಬೆರಳು ತೋರಿದಳು. ಗೇಟಿನ ಈ ಬದಿಯಲ್ಲಿ ನನ್ನವಳನ್ನು ನಿಲ್ಲಿಸಿ, ಇನ್ನೊಂದು ಬದಿಗಿರುವ ಆ ಗುಂಪಿನತ್ತ ನಾನು ಹೋದೆ. ಆ ಗುಂಪಿನಲ್ಲಿ ಒಂದಾದೆ. ನನಗದು ಏನೆಂದು ಗೊತ್ತಿರಲಿಲ್ಲ. ಅದರ ಹೆಸರು ಸಹ ತಿಳಿದಿರಲಿಲ್ಲ. ಆ ಅಂಗಡಿಯಾತನಲ್ಲಿ ಏನೆಂದು ಕೇಳಬೇಕೆಂಬುದು ಗೊತ್ತಾಗದೇ ಸುಮ್ಮನೇ ಒಂದೆರಡು ನಿಮಿಷ ನಿಂತಿದ್ದೆ. ನನಗಿಂತಲೂ ಹಿಂದೆ ಬಂದವರು, ಸುತ್ತಲೂ ನಿಂತವರು ಏನೆಂದು ಕೇಳುತ್ತಾರೆಂದು ಗಮನಿಸುತ್ತಿದ್ದೆ. ಕೈಯಲ್ಲಿ ಹಣ ಹಿಡಿದು ಸುತ್ತಲೂ ನಿಂತಿದ್ದ ಗಿರಾಕಿಗಳಿಗೆ ಅವರು ಕೇಳಿದ್ದನ್ನು ಕೊಟ್ಟು, ಹಣ ಪಡೆದು, ಚಿಲ್ಲರೆ ನೀಡಿ ತುಂಬಾ ಚಾಕಚಕ್ಯತೆಯಿಂದ ವ್ಯಾಪಾರ ಮಾಡುತ್ತಿದ್ದ. ಚಿಕ್ಕ ಮಕ್ಕಳ ಜೊತೆ ಬಂದವರು ಸ್ವೀಟ್ ಎನ್ನುತ್ತಿದ್ದರು. ಇನ್ನುಳಿದಂತೆ ಬಹುಪಾಲು ಮಂದಿ ಮಸಾಲೆ ಕೇಳುತ್ತಿದ್ದರು. ಕೆಲವು ನಿಮಿಷಗಳಿಂದ ನಿಂತಿದ್ದ ನನ್ನನ್ನು ಅಷ್ಟು ಗಜಿಬಿಜಿ ಗದ್ದಲದ ನಡುವೆ ಅದು ಯಾವಾಗ ಗಮನಿಸಿದ್ದನೋ?! ಆ ಅಂಗಡಿಯಾತ ನನ್ನ ಪಕ್ಕದಲ್ಲಿದ್ದ ಗಿರಾಕಿಯ ಕೈಗೆ ಚಿಲ್ಲರೆ ನೀಡುತ್ತಾ, ಏನ್ಬೇಕು ಎಂಬಂತೆ ನನ್ನತ್ತ ನೋಡಿದ. ನಾನು ‘ಮಸಾಲಾ’ ಎಂದು ಎಲ್ಲರೂ ಹೇಳುವಂತೆ ಚುಟುಕಾಗಿ ಹೇಳಿದೆ. ಜೊತೆಗೆ ಒಂದು ಎಂಬುದನ್ನು ಸೇರಿಸಿ ‘ಒಂದ್ ಮಸಾಲಾ’ ಎಂದೆ. ಅಂಗಡಿಯಾತ ಬೇಯಿಸಿದ ಮುಸುಕಿನ ಜೋಳದ ಕಾಳುಗಳನ್ನ ಒಂದು ಬಟ್ಟಲಿಗೆ ಹಾಕಿ, ಉಪ್ಪು ಖಾರದ ಜೊತೆ ಇನ್ನೂ ಏನೇನೋ ಮಸಾಲೆ ಪುಡಿಗಳನ್ನು ಕಾಳಿನ ಮೇಲೆ ಉದುರಿಸಿ, ದೊಡ್ಡ ಚಮಚೆಯಿಂದ ಚೆನ್ನಾಗಿ ತಿರುಗಿಸಿ, ದೊಡ್ಡದೊಂದು ಪೇಪರ್ ಲೋಟಕ್ಕೆ ತುಂಬಿಸಿ, ಜೋಳದ ಕಾಳು ತುಂಬಿದ ಆ ಲೋಟದ ಜುಟ್ಟಿಗೆ ಪ್ಲಾಸ್ಟಿಕ್ ಸ್ಪೂನನ್ನು ಮುಡಿಸಿ ಮಸಾಲಾ ಕಾರ್ನ್ ಅನ್ನು ನನ್ನ ಕೈಗಿಟ್ಟ. ಹಣ ಪಡೆದು ಸರಿಯಾದ ಚಿಲ್ಲರೆ ಕೊಟ್ಟ.
‘ಇದೇನಿದು! ಬೇಯ್ಸಿರೋ ಮುಸ್ಕಿನ್ ಜೋಳಕ್ಕೆ ಉಪ್ಪು ಖಾರ ಉದ್ರುಸವ್ರೆ ಅಷ್ಟೇ..’ ಅಂದ ನನ್ನವಳು ಮಸಾಲಾ ಕಾರ್ನ್ ಮೆಲ್ಲತ್ತಾ, ಪಾರ್ಕಿನಲ್ಲಿ ಜೊತೆಗೆ ಹೆಜ್ಜೆ ಹಾಕುವಾಗ ಬಹುದಿನಗಳ ಅವಳಾಸೆಯ ಕುರಿತು ಹೇಳಿದಳು. ನಮ್ಮ ಮದುವೆಗು ಮೊದಲು ನಾವಂದು ಹೋಗಿದ್ದೆವಲ್ಲ ಆ ಬಂಧುಗಳ ಮನೆಯಲ್ಲೇ ನನ್ನವಳು ಒಂದೆರಡು ವರ್ಷ ಇದ್ದಿದ್ದು. ಅಲ್ಲೇ ಹತ್ತಿರದ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೋಗುತ್ತಿದ್ದಳು. ಪ್ರತಿದಿನ ಸಂಜೆ ಕೆಲಸದಿಂದ ಮನೆಗೆ ವಾಪಸ್ಸಾಗುವಾಗ ಅದೇ ಪಾರ್ಕಿನ ರಸ್ತೆಯಲ್ಲಿ ಬರುತ್ತಿದ್ದವಳು ಆ ಮಸಾಲಾ ಕಾರ್ನ್ ಅಂಗಡಿಯ ಮುಂದಿರುವ ಗುಂಪನ್ನು ನೋಡಿ ತನಗೂ ಅದನ್ನು ತಿನ್ನಬೇಕು ಅನಿಸುತಿತ್ತಂತೆ. ಅದೂ ಒಂದು ದಿನವಲ್ಲ, ಸತತ ಎರಡು ವರ್ಷಗಳ ಕಾಲ! ಆದರೆ ಅದರ ಹೆಸರೇನು ಗೊತ್ತಿಲ್ಲ. ಹೋಗಿ ಏನೆಂದು ಕೇಳಬೇಕು? ಜೊತೆಗೆ ಅಷ್ಟೊಂದು ಗುಂಪಿನ ನಡುವೆ ಹೋಗಿ ಕೊಂಡು ತಿನ್ನುವುದಕ್ಕೂ ಮುಜುಗರ. ಈ ಕಾರಣಗಳಿಂದಾಗಿ ಎರಡು ವರ್ಷಗಳ ಕಾಲ ‘ಮಸಾಲಾ ಕಾರ್ನ್’ ತಿನ್ನುವ ಆಸೆಯನ್ನು ಹಾಗೇ ಜೀವಂತ ಇರಿಸಿಕೊಂಡಿದ್ದಳಂತೆ.
‘ಥ್ಯಾಂಕ್ಸ್’ ಹೇಳಿ ಖಾಲಿಯಾದ ಪೇಪರ್ ಲೋಟವನ್ನು ಕಸದ ಬುಟ್ಟಿಗೆಸೆದಳು. ನಿಜಾ ಹೇಳ್ತೀನಿ. ನಂಗೂ ಅದರ ಹೆಸರು ಗೊತ್ತಿರಲಿಲ್ಲ. ಸುಮ್ಮನೇ ಒಂದಿಷ್ಟು ಹೊತ್ತು ಅಲ್ಲಿ ನಿಂತಿದ್ದೆ. ಎಲ್ಲರೂ ಏನೆಂದು ಕೇಳುತ್ತಾರೆಂದು ಗಮನಿಸಿದೆ. ಆನಂತರ ಕೊಂಡು ತಂದಿದ್ದೆಂದು ನನ್ನವಳ ಬಳಿ ಸತ್ಯವನ್ನು ನುಡಿದೆ. “ಹಾಗಾದ್ರೆ ಈಗ ಮಸಾಲ ಕಾರ್ನ್ ಅಂತಲೇ ಕೇಳಿ ಇನ್ನೊಂದ್ ತಗೊಂಡ್ ಬಾ” ಅಂದಳು. ಅಂದು ಎರಡು ಬಾರಿ ಮಸಾಲಾ ಕಾರ್ನ್ ಅನ್ನು ಸಂತೃಪ್ತಿಯಿಂದ ತಿಂದು ಎರಡು ವರ್ಷಗಳ ತನ್ನ ಆಸೆಯನ್ನು ಈಡೇರಿಸಿಕೊಂಡಳು.
ನಮ್ಮ ಹಳ್ಳಿಯಲ್ಲಿ ನಾವು ಬೆಳೆಯುವ ಜೋಳವನ್ನೇ ನಾವಂದು ಆ ನಗರದಲ್ಲಿ ಹಣಕೊಟ್ಟು ಕೊಂಡು ತಿಂದೆವು. ಹಳ್ಳಿಗರ ಪಾಲಿಗೆ ಮುಸುಕಿನ ಜೋಳವೆಂದರೆ ಇಷ್ಟೇ.. ದನ ಜಾನುವಾರುಗಳ ಮೇವಿಗಾಗಿ, ರೊಟ್ಟಿಯ ಕಾಳಿಗಾಗಿ, ಮತ್ತು ವರಮಾನಕ್ಕಾಗಿಯೂ ಬೆಳೆಯುವ ಧಾನ್ಯವಷ್ಟೇ. ಆದರೆ ನಗರಗಳಲ್ಲಿ ಸ್ವಿಟ್ ಕಾರ್ನ್, ಮಸಾಲಾ ಕಾರ್ನ್, ಪಾಪ್ ಕಾರ್ನ್, ಕಾರ್ನ್ ಪ್ಲೆಕ್ಸ್ ಹೀಗೆ ಹಲವು ರೂಪಗಳನ್ನು ಪಡೆಯುತ್ತದೆ.
ಮುಸುಕಿನ ಜೋಳದ ಜೊತೆ ನನಗೆ ಹಲವು ನೆನಪುಗಳಿವೆ. ನಮ್ಮ ಬಾಲ್ಯದಲ್ಲಿ ನಮ್ಮ ಹೊಲದಲ್ಲಿ ಭತ್ತ, ರಾಗಿ, ರೇಷ್ಮೆ, ಶೇಂಗಾ, ಸೂರ್ಯಕಾಂತಿಗಳ ಜೊತೆ ಮುಸುಕಿನ ಜೋಳವನ್ನು ಬೆಳೆಯುತ್ತಿದ್ದರು. ಮೆಕ್ಕೆಜೋಳ, ಹಲ್ಲುಜೋಳ ಎಂಬ ಉಪನಾಮವು ಇರುವ ಈ ಮುಸುಕಿನ ಜೋಳದ ಕಾಳುಗಳು ತೆನೆಗಟ್ಟುವ ವೇಳೆಗೆ ಹಕ್ಕಿ ಪಕ್ಷಿಗಳು ಅದರಲ್ಲೂ ಹೆಚ್ಚಾಗಿ ಗಿಳಿಗಳು ಹೊಲಕ್ಕೆ ಲಗ್ಗೆಯಿಡುತ್ತವೆ. ಬೆಳೆಯನ್ನೆಲ್ಲ ಅವುಗಳೆ ತಿಂದರೆ ನಮಗಿನ್ನು ಉಳಿಯುವುದೇನು? ಆದ್ದರಿಂದ ಆ ಸಮಯದಲ್ಲಿ ಜೋಳದ ಹೊಲಕ್ಕೆ ಕಾವಲಿರಬೇಕು. ನಾವಾಗ ಶಾಲೆಗೆ ಹೋಗುವವರೆಗೆ ಮತ್ತು ಶಾಲೆಯಿಂದ ಬಂದಾಗ ಹೊತ್ತು ಮುಳುಗುವವರೆಗೂ ಜೋಳದ ಹೊಲದಲ್ಲಿ ಕಾವಲಿರಬೇಕಿತ್ತು. ಕೈಯಲ್ಲೊಂದು ತಟ್ಟೆಯೋ, ತಗಡಿನ ಡಬ್ಬವೋ ಹಿಡಿದು ದೊಣ್ಣೆಯ ತುಂಡಿನಿಂದ ಬಡಿದು ಸದ್ದು ಮಾಡುತ್ತಾ ಹೊಲದ ಸುತ್ತಲೂ ಸುತ್ತುತ್ತಿದ್ದೆವು. ಆ ಸದ್ದಿಗೆ ಹಕ್ಕಿಗಳು ಹೆದರಿ ಹಾರಿ ಹೋಗುತ್ತಿದ್ದವು. ಹೀಗೆ ಕಾವಲು ಕಾಯುತ್ತ ದಿನಕಳೆದಂತೆ ಜೋಳದ ತೆನೆ ಒಂದಿಷ್ಟು ಬಲಿಯುತ್ತಿರುವಾಗಲೇ ಅಮ್ಮ ಆರೇಳು ತೆನೆಗಳ ಕಿತ್ತುತಂದು, ಮನೆಯಲ್ಲಿ ಒಲೆಯ ಮೇಲಿಟ್ಟು ಬೇಯಿಸಿ ಕೊಡುತ್ತಿದ್ದಳು. ಚಿಕ್ಕಪ್ಪ, ಮಾವ ಇವರುಗಳು ಹೊಲದಲ್ಲೇ ನಾಲ್ಕೈದು ತೆನೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟು ಕೊಡುತ್ತಿದ್ದರು. ಬೇಯಿಸಿ ತಿನ್ನುವ ಕಾಳಿಗಿಂತಲೂ ಹೀಗೆ ಹೊಲದಲ್ಲಿ ಸುಟ್ಟು ತಿನ್ನುವುದರಲ್ಲೇ ಹೆಚ್ಚು ರುಚಿಯಿತ್ತು.
ದಿನಕಳೆದಂತೆ ಅದೇಕೋ ಮನೆಯವರು ಮುಸುಕಿನ ಜೋಳವನ್ನು ಕಾಳಿಗಾಗಿ ಬೆಳೆಯುವುದನ್ನೇ ಬಿಟ್ಟುಬಿಟ್ಟರು. ಬಹುಶಃ ಕಡಿಮೆ ಆದಾಯದ ಕಾರಣವಿರಬಹುದು. ಬರೀ ಹಸುಕರುಗಳ ಮೇವಿಗಾಗಿ ಮಾತ್ರವೇ ಮುಸುಕಿನ ಜೋಳ ಬೆಳೆಯುವುದು ನಮಗೆ ರೂಢಿಯಾಯಿತು. ಈಗಲೂ ಅದು ಮುಂದುವರೆದಿದೆ. ವಾರದ ಹಿಂದೆ ಮಗಳೊಂದಿಗೆ ಜೋಳದ ಹೊಲಕ್ಕೆ ಹೋದಾಗ ಇವೆಲ್ಲವೂ ನೆನಪಾದವು. ತೆನೆಯಿನ್ನೂ ಹಾಲ್ದುಂಬುವಾಗಲೇ ಮೇವಿಗಾಗಿ ಕೊಯ್ಯಬೇಕು. ಹೀಗೆ ಹಾಲ್ದುಂಬುವ ತೆನೆಯ ಮೇಲೆ ಕೂದಲಿನಂತೆ ಉದ್ದ ಉದ್ದ ಎಳೆಯಾಗಿ ಜುಟ್ಟು ಬೆಳೆದಿರುವುದನ್ನು ನೋಡಿ, ಅಪ್ಪಾ ಇಲ್ನೋಡು. ಈ ಗಿಡಕ್ಕೂ ಕೂದಲಿದೆ. ಇದಕ್ಕೆ ಅಮ್ಮ ಇಲ್ವಾ? ಇದಕ್ಕೂ ಅಮ್ಮ ಇದ್ದಿದ್ರೆ ನಮ್ಮಮ್ಮ ನಂಗೆ ನೀಟಾಗಿ ತಲೆಬಾಚಿ ಜಡೆ ಹಾಕಿ ರೆಡಿ ಮಾಡುತ್ತಲ್ಲ ಹಾಗೇ ರೆಡಿ ಮಾಡ್ತಿತ್ತು ಅಲ್ವಾ! ಎಂದು ಮತ್ತೆ ಮತ್ತೆ ಜೋಳದ ಮೇಲಿನ ಮುಸುಕನ್ನ ಅದರ ನೆತ್ತಿಯಲ್ಲಿರುವ ಜುಟ್ಟನ್ನು ಮುಟ್ಟಿ ಮುಟ್ಟಿ ಸಂಭ್ರಮಿಸಿದಳು. ಅದೇ ಸಮಯದಲ್ಲಿ ಎರಡು ಜೋಡಿ ಗಿಳಿಗಳು ಕಿಕ್ಕಿಕ್ ಕ್ರಿಚ್ ಕ್ರಿಚ್ ಎನ್ನುತ್ತಾ ಜೋಳದ ಹೊಲಕ್ಕೆ ಹಾರಿಬಂದು, ತೆನೆಯಿನ್ನೂ ಕಾಳುಗಟ್ಟಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ಹಾರಿಹೋದವು. ಅಪ್ಪಾ ಅಪ್ಪಾ ಅಲ್ನೋಡು ಗಿಳಿ ಗಿಳಿ ಪಿ ಫಾರ್ ಪ್ಯಾರೊಟ್ ಎಂದು ತನ್ನ ಅಮೃತ ನುಡಿಯಲ್ಲಿ ಹೇಳಿ ಸಂಭ್ರಮಿಸಿದಳು. ಬರೀ ಇಷ್ಟಕ್ಕೆ ಸುಮ್ಮನಾಗದೇ ಅಪ್ಪಾ,ಅಪ್ಪಾ ಪಾರಿವಾಳದ್ದು ಪೊಯೆಮ್ ಹೇಳ್ಕೊಟ್ಟಿದ್ದೀಯಲ್ಲ. ಅಂತದ್ದು ಗಿಳಿದು ಒಂದು ಹೇಳ್ಕೊಡು. ನಾನು ಪಾರಿವಾಳ ಬಿಳಿ ಬಿಳಿ ಎಂದು ಬರೆದು ಶಿಶುಗವಿತೆಯನ್ನು ಹೇಳಿಕೊಟ್ಟು ಕಲಿಸಿದ್ದೆ. ಈಗ ಗಿಳಿಯ ಕುರಿತು ಪದ್ಯ ಹೇಳಿಕೊಡುವಂತೆ ಪೀಡಿಸಿದಳು.
ನನಗೆ ಮತ್ತೆ ನನ್ನ ಬಾಲ್ಯ ನೆನಪಾಯಿತು. ಜೋಳದ ಹೊಲದಲ್ಲಿ ಗಿಳಿಗೆ ಕಾವಲಿದ್ದ ದಿನಗಳು. ಹಸಿರಾಗಿರುವ ಜೋಳದ ಹೊಲದಲ್ಲಿ ಗಿಳಿ ಕುಳಿತರು ಕಾಣುವುದಿಲ್ಲ. ಅದೂ ಸಹ ಹಸಿರು ಬಣ್ಣವೇ ತಾನೆ! ನಾವು ತಟ್ಟೆ ಬಡಿದು ಸದ್ದು ಮಾಡುತ್ತಾ ಹೊಲ ಸುತ್ತುವಾಗ ಇದ್ದಕ್ಕಿದ್ದಂತೆ ಹಸಿರು ರೆಕ್ಕೆ ಬಡಿದು ಹಸಿರು ಜೋಳದ ಗರಿಗಳಿಂದ ಮೇಲೆ ಹಾರುತ್ತಿದ್ದವು. ಆಗಲೂ ಹಸಿರಿನಲ್ಲಿ ಕುಳಿತ ಆ ಹಸಿರು ಗಿಳಿಯಂತೆ ಕಾಣುತ್ತಿರಲಿಲ್ಲ.. ಆ ಸಂದರ್ಭದ ನೆನಪಿನೊಂದಿಗೆ ಶಿಶುಗವಿತೆನ್ನು ಮನಸಲ್ಲೇ ನೇಯ್ದು, ಮಗಳಿಗೆ ಹೇಳಿಕೊಟ್ಟೆ. ಮಗಳು ಸಂಭ್ರಮಿಸಿದಳು. ಆ ಶಿಶುಗವಿತೆಯ ಧ್ಯಾನದಲ್ಲೇ ಮನೆಗೆ ಬರೋ ವೇಳೆಗೆ ಅದು ಹಾಯ್ಕುವಿನ ರೂಪ ಪಡೆದಿತ್ತು.
ಶಿಶುಗವಿತೆ
ಹಸಿರು ಜೋಳ ಹೊಲ
ತೆನೆ ಬಿಟ್ಟಿತಲ್ಲ
ಗಿಳಿ ಕಾಣುತಿಲ್ಲ
ಕೆಂಪು ಮೂತಿ ಕಳ್ಳ
ಹಾಯ್ಕು
ಹಸಿರು ಹೊಲ
ಕೆಂಪು ಮೂತಿಯ ಗಿಳಿ
ತಿನ್ನುತ್ತಿದೆ ಜೋಳ
***
-ನವೀನ್ ಮಧುಗಿರಿ
ನವಿರಾದ ನಿರೂಪಣೆ… ನಿಮ್ಮ ಅನುಭವಾಮೃತ ಸವಿಯಾಗಿದೆ. ಚುಟುಕುಗಳೂ ಚೆಂದಿವೆ…
ಧನ್ಯವಾದಗಳು..
ಲೇಖನವೂ,ಚುಟುಕು ಕವಿತೆಗಳೂ ಸೊಗಸಾಗಿವೆ. ಪುಟ್ಟ ಮಗಳ ಫೊಟೊ ಇನ್ನೂ ಚೆಂದ.
ನಿಮ್ಮ ಪ್ರೋತ್ಸಾಹಕ್ಕೆ ಹೃತ್ಪೂರ್ವಕ ಧನ್ಯವಾದಗಳು ಮೇಡಮ್..
ಹಸಿರಿನ ನಡುವೆ ಉಸಿರು (ಮಗಳು). ಅಪ್ಯಾಯಮಾನ ಬರಹ. ಓದುವಾಗ ಮನಸಿನ ತುಂಬಾ ತುಂಬಿಕೊಳ್ಳುವ ಆಹ್ಲಾದ. Beautiful
ಧನ್ಯವಾದಗಳು..
ಆಹಾ…ನವಿರಾದ ನಿರೂಪಣೆ… ಲೇಖನ ತುಂಬಾ ಚೆನ್ನಾಗಿದೆ
ಧನ್ಯವಾದಗಳು…
ನನ್ನ ಬಾಲ್ಯಕ್ಕೆ ಕರೆದುಕೊಂಡು ಹೋದಿರಿ.. ❤
ಧನ್ಯವಾದಗಳು ಸಂದೇಶ್ ಸರ್..
ನವಿರಾದ ನಿರೂಪಣೆಯೊಂದಿಗೆ ಸೊಗಸಾದ ಸಿಹಿ ನೆನಪುಗಳ ಬುತ್ತಿ ಬಿಚ್ಚಿಟ್ಟಿರುವಿರಿ.. ಖುಷಿಯಾಯ್ತು.