ಯಾಗಂಟಿ-ಅಹೋಬಲ-ಬೆಲಂ ಕೇವ್ಸ್-ಭಾಗ 3
ನವನಾರಸಿಂಹರ ದರ್ಶನ ಮಾಡಿ ಛತ್ರಕ್ಕೆ ವಾಪಸ್ಸಾಗಿ ಊಟ ಮುಗಿಸಿ, ಅಲ್ಲಿನ ಅತಿಥೇಯರಿಗೆ ವಂದಿಸಿ ಬೆಲಂ ಕೇವ್ಸ್ ಕಡೆಗೆ ಹೊರಡಲು ಜೀಪನ್ನು ಏರಿದೆವು. ಅದು ಉತ್ತಮವಾದ ಮಾರ್ಗವಾಗಿತ್ತು. ದಾರಿಯಲ್ಲಿ ಕರ್ನೂಲ್ ನವಾಬರ ಅರಮನೆ ಮುಂದೆ ಫೋಟೊ ಕ್ಲಿಕ್ಕಿಸಿದೆವು. ಅಲ್ಲಿ ಈಗ ಯಾರೂ ವಾಸವಿಲ್ಲ.
ಸುಮಾರು ಎರಡು ಗಂಟೆ ಪ್ರಯಾಣಿಸಿ, ಬೆಲಂ ಕೇವ್ಸ್ ತಲಪಿದೆವು. ‘ಬೆಲಂ ಕೇವ್ಸ್’ ಎಂಬ ನೈಸರ್ಗಿಕ ಗುಹೆಗಳು, ಅಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿವೆ. ಗುಹೆಗಳು ಸುಮಾರು 3.5 ಕಿ.ಮೀ ಉದ್ದವಿದ್ದು, ಭಾರತದಲ್ಲಿ ಎರಡನೆಯ ಸ್ಥಾನದಲ್ಲಿದೆ. ನೀರು ಮತ್ತು ಸುಣ್ಣದಕಲ್ಲಿನ ರಾಸಾಯನಿಕ ಪ್ರಕ್ರಿಯೆಯಿಂದ ನೈಸರ್ಗಿಕವಾಗಿ ಉಂಟಾಗುವ stalactite ಮತ್ತು stalagmite ಎಂಬ ಶಿಲಾರಚನೆಗಳನ್ನು ಹೊಂದಿದ ಈ ಗುಹೆಯನ್ನು ಉತ್ತಮ ಪ್ರವಾಸಿತಾಣವಾಗಿ ಆಧುನಿಕೀಕರಿಸಿದ್ದಾರೆ.
‘ಬೆಲಂ ಕೇವ್ಸ್’ ನ ಮುಖ್ಯದ್ವಾರದ ಶಾಂತಮೂರ್ತಿಯಾದ ಬುದ್ಧನ ಈ ಸುಂದರ ಪ್ರತಿಮೆ ಇದೆ. ಸಹಸ್ರಾರು ವರ್ಷಗಳ ಹಿಂದೆ ನೈಸರ್ಗಿಕವಾಗಿ ನಿರ್ಮಾಣಗೊಂಡ ಈ ಗುಹೆಯಲ್ಲಿ ಬೌದ್ಧ ಸನ್ಯಾಸಿಗಳು ವಾಸಿಸುತ್ತಿದ್ದರಂತೆ.ಹಾಗಾಗಿ ಗುಹೆಯ ಮುಖ್ಯದ್ವಾರದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ಈ ಗುಹೆಯು ಕೆಲವು ಕಡೆ ಸಬ್ ವೇ ಯಂತೆ ಅಗಲವಾಗಿದ್ದರೆ, ಇನ್ನು ಕೆಲವು ಕಡೆ ತೆವಳಿಕೊಂಡು ಹೋಗುವಷ್ಟು ಕಿರಿದಾಗಿದೆ. ಭೀಮನ ಗಧೆ. ಮೊಸಳೆ, ಆನೆ, ಶಿವಲಿಂಗ, ಶಿರಡಿ ಬಾಬಾ , ಆಲದ ಮರ ಇತ್ಯಾದಿ ನಮ್ಮ ಕಲ್ಪನೆಯ ವಸ್ತು/ವ್ಯಕ್ತಿಗಳನ್ನು ಹೋಲುವ ಆಕಾರಗಳಿವೆ. ಗುಹೆಯಲ್ಲಿ ಗಾಳಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಮಾಡಿರುವುದರಿಂದ ಕ್ಷೇಮವಾಗಿ ಹೋಗಿ ಬರಬಹುದು. ಗುಹೆಯು ಕೆಲವು ಕಡೆ 120 ಅಡಿಯಷ್ಟು ಭೂಗರ್ಭದಲ್ಲಿದೆ.
ನಮ್ಮ ಗೈಡ್ ಹೇಳಿದ ಪ್ರಕಾರ ಬಹಳ ಹಿಂದೆ ಇಲ್ಲಿ ಚಿತ್ರಾವತಿ ಎಂಬ ನದಿ ಹರಿಯುತ್ತಿತ್ತಂತೆ. ಈಗ ನದಿ ಬತ್ತಿ ಹೋಗಿ ಇಲ್ಲಿ ಕೃಷಿಭೂಮಿ ಸೃಷ್ಟಿಯಾಗಿದೆ. ಹನಿಯಾಗಿ ಭೂಮಿಗಿಳಿದ ಅಂತರ್ಜಲವು ಇಲ್ಲಿನ ಸುಣ್ಣಕಲ್ಲಿನೊಂದಿಗೆ ರಾಸಾಯನಿಕವಾಗಿ ವರ್ತಿಸಿ, ಮಿಲಿಯಾಂತರ ವರ್ಷಗಳಲ್ಲಿ ಈಗ ನಮಗೆ ಕಾಣಿಸುವ ಗುಹೆಯಾಗಿ ರೂಪುಗೊಂಡಿದೆ.
ಬೆಲಂ ಕೇವ್ಸ್ ಅನ್ನು ನೋಡಿ, ಹೊರಗಡೆ ಬಂದು, ಐಸ್ ಕ್ರೀಮ್ ತಿಂದು, ಗುತ್ತಿ ರೈಲ್ವೇಸ್ಟೇಷನ್ ಗೆ ಹೋಗಲೆಂದು ಪುನ: ಜೀಪ್ ಏರಿದೆವು. ದಾರಿಯಲ್ಲಿ ಎದುರಾದ ‘ತಾಡಪತ್ರಿ’ ಊರಲ್ಲಿ ‘ಬುಗ್ಗ ರಾಮಲಿಂಗೇಶ್ವರ ದೇವಾಲಯ’ಕ್ಕೂ ಭೇಟಿ ಕೊಟ್ಟೆವು. ಇಲ್ಲಿನ ಸ್ಥಳಪುರಾಣದ ಪ್ರಕಾರ, ಲಕ್ಷ್ಮಣನು ತಾಟಕಿಯನ್ನು ಕೊಂದ ಮೇಲೆ ಸ್ತ್ರೀಹತ್ಯಾ ಪರಿಹಾರಾರ್ಥವಾಗಿ ಈಶ್ವರನನ್ನು ಪೂಜಿಸಿದನು. ಅವನಿಗೆ ಪೂಜಿಸಲೆಂದು ಸ್ವತ: ಶ್ರೀರಾಮನೇ ಈ ಸ್ಥಳದಲ್ಲಿ ಶಿವಲಿಂಗವನ್ನು ಪ್ರತಿಸ್ಠಾಪಿಸಿದನು. ಆ ಸಂದರ್ಭದಲ್ಲಿ, ಶಿವಲಿಂಗದ ಸಮೀಪ ನೀರಿನ ಬುಗ್ಗೆಯೊಂದು ಹುಟ್ಟಿ ಬಂತು. ಹಾಗಾಗಿ ಈ ಕ್ಷೇತ್ರಕ್ಕೆ ಬುಗ್ಗರಾಮಲಿಂಗೇಶ್ವರ ಎಂದು ಹೆಸರು. ಗರ್ಭಗುಡಿಯಲ್ಲಿ ಶಿವಲಿಂಗದ ಪಕ್ಕ ನೀರಿನ ಸೆಲೆಯನ್ನು ಈಗಲೂ ಇದೆ.
ಬಹಳ ಸುಂದರವಾದ ವಾಸ್ತುಶಿಲ್ಪಗಳಿಂದ ಕೂಡಿದ ಈ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ಕಟ್ಟಲಾಯಿತು. ವಿಜಯನಗರದ ವೈಭವದ ಕಾಲದಲ್ಲಿ, ಅವರು ಕಟ್ಟಿಸಿದ ಎಲ್ಲಾ ದೇವಾಲಯಗಳಲ್ಲಿಯೂ ರಾಜಲಾಂಛನವಾದ ‘ವರಾಹ’ ವನ್ನು ಕೆತ್ತುತ್ತಿದ್ದರಂತೆ. ಈ ಲಾಂಛನದಲ್ಲಿ ವರಾಹವು ಖಡ್ಗ, ಸೂರ್ಯ ಮತ್ತು ಚಂದ್ರರನ್ನು ನೋಡುತ್ತಿರುವಂತೆ ಕೆತ್ತಲಾಗಿದೆ,. ತಾಡಪತ್ರಿ ‘ಬುಗ್ಗ ರಾಮಲಿಂಗೇಶ್ವರ ದೇವಾಲಯ’ದ ಮುಖ್ಯದ್ವಾರದ ಗೋಡೆಯಲ್ಲಿ ವರಾಹ ಲಾಂಛನವಿದೆ.
ಅಲ್ಲಿಂದ ಮುಂದುವರಿದು, ಹೋಟೆಲ್ ಒಂದರಲ್ಲಿ ಊಟ ಮುಗಿಸಿ, ಗುತ್ತಿ ರೈಲ್ವೇ ಸ್ಟೇಷನ್ ತಲಪಿದೆವು. ರಾತ್ರಿ 1130 ಗಂಟೆಗೆ ಬಂದ ರೈಲು ನಮ್ಮನ್ನು ಮರುದಿನ, ಸೆಪ್ಟೆಂಬರ್ 21 ರಂದು ಬೆಳಗ್ಗೆ ಮೈಸೂರು ಸೇರಿಸಿತು. ಹೀಗೆ ಒಟ್ಟಾರೆಯಾಗಿ ಎರಡು ದಿನದ ಈ ಕಾರ್ಯಕ್ರಮದಲ್ಲಿ, ಯಾಗಂಟಿ, ಅಹೋಬಲ ಮತ್ತು ಬೆಲಂ ಕೇವ್ಸ್ ಗಳಿಗೆ ಭೇಟಿ ಕೊಟ್ಟು 12 ಕ್ಕೂ ಹೆಚ್ಚು ದೇವಾಲಯಗಳನ್ನು ಸಂದರ್ಶಿಸಿದೆವು. ಕಾಡು ದಾರಿಯಲ್ಲಿ ಚಾರಣವನ್ನೂ ಮಾಡಿ, ಐತಿಹಾಸಿಕ ತಾಣಗಳನ್ನೂ ನೋಡಿ ಭೂಗರ್ಭದೊಳಗೂ ಫ್ಲಾಷ್ ವಿಸಿಟ್ ಕೊಟ್ಟು ಬಂದೆವು.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅಯೋಜಿಸಿದ ಮೈಸೂರಿನ ಯೈ.ಎಚ್.ಎ.ಐ ತಂಡದ ಶ್ರೀ ನಾಗೆಂದ್ರಪ್ರಸಾದ್ ಹಾಗೂ ಶ್ರೀ ವೈದ್ಯನಾಥನ್ ಅವರಿಗೆ ಅನಂತ ಧನ್ಯವಾದಗಳು.
ಹಿಂದಿನ ಭಾಗಗಳನ್ನು ಓದಲು ಕೊಂಡಿಯನ್ನು ಕ್ಲಿಕ್ಕಿಸಿ:
ಯಾಗಂಟಿ-ಅಹೋಬಲ-ಬೆಲಮ್ ಕೇವ್ಸ್- ಭಾಗ 2 :
ಯಾಗಂಟಿ-ಅಹೋಬಲ-ಬೆಲಮ್ ಕೇವ್ಸ್- ಭಾಗ 1 :
– ಹೇಮಮಾಲಾ.ಬಿ. ಮೈಸೂರು
ಚಾರಣದ ಅನುಭವಗಳನ್ನು ಅತ್ತ್ಯುತ್ತಮವಾಗಿ ಮಾಹಿತಿ ಪೂರ್ಣವಾಗಿ ವಿವರಿಸಿದ್ದೀರಿ.. ಮೂರೂ ಭಾಗಗಳು ತುಂಬಾ ಇಷ್ಟವಾದುವು .. 🙂