ಹುಲಿಯ ಬೆನ್ನೇರಿದ ಬಾಲಕ…?
ಲೋಕದಲ್ಲಿ ಮಲತಾಯಿಯ ಮತ್ಸರವೆಂಬುದು ಮಹಾ ಕಠಿಣವಾದುದು. ಮೊದಲನೆಯವಳ ಮಗುವನ್ನು ಸರಿಯಾಗಿ ಪೋಷಣೆ ಮಾಡದೆ, ಆಹಾರವನ್ನೂ ಸರಿಯಾಗಿ ಕೊಡದೆ ಇನ್ನಿಲ್ಲದಂತೆ ಪೀಡಿಸುವುದು ಸರ್ವೇ ಸಾಮಾನ್ಯ. ಮಲತಾಯಿಗೆ ಮಕ್ಕಳಾಯಿತೂಂದ್ರೆ ಮತ್ತೆ ಕೇಳುವುದೇ ಬೇಡ. ಬಲ ಮಗುವನ್ನು ಕೊಂದು ಬಿಡಬೇಕೆಂಬ ಸಂಚು ಹೂಡಿ ಮಂತ್ರ – ತಂತ್ರಗಳ ಸಹಿತ ಎಲ್ಲಾ ವಿದ್ಯೆಗಳನ್ನೂ ಉಪಯೋಗಿಸುವರು. ಮಲತಾಯಿಯ ಶೋಷಣೆಗೆ ಒಳಗಾದ ಮಕ್ಕಳು ಬೇಕಾದಷ್ಟು ಕಷ್ಟವನ್ನು ಅನುಭವಿಸಿ ಜರ್ಝರಿತರಾಗುವರು. ಇತ್ತ ತಾಯಿಯೂ ಇಲ್ಲದೆ ಅತ್ತ ತಂದೆಯ ಸಹಾಯವೂ ಸಿಗದೆ ಅಂತಹ ಮಕ್ಕಳಿಗೆ ದೇವರೇ ದಿಕ್ಕು, ಕಾರುಣ್ಯ ಸಿಂಧುವೂ ಅನಾಥ ರಕ್ಷಕನೂ ಆದ ಪರಮಾತ್ಮನು ಒಂದಲ್ಲ ಒಂದು ವಿಧದಲ್ಲಿ ಅಂತಹವರ ತಲೆ ಕಾಯುತ್ತಾನೆ ಎನ್ನುವುದು ಮಾತ್ರ ಸುಳ್ಳಲ್ಲ. ಇಂತಹ ದೃಷ್ಟಾಂತಗಳು ತೋರಿದಾಗ ಮಲತಾಯಿಯರಿಗೆ ಅವರ ಸರ್ವಾಪರಾಧಗಳು ಮುಗಿದು ಪಾಪದ ಕೊಡ ತುಂಬಿದ ಮೇಲೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವುದೂ ಇದೆ. ಹಾಗಯೇ ಅಂತಹ ಒಬ್ಬ ಮಲತಾಯಿಯ ಮಗನಾಗಿ, ದೇವತಾ ಪುರುಷರಾಗಿ ಜನ್ಮವೆತ್ತುವವರೂ ಪುರಾಣದಲ್ಲಿ ಅನೇಕ. ಈ ನಿಟ್ಟಿನಲ್ಲಿ ಈಗ ಮಣಿಕಂಠನ ಬಗ್ಗೆ ತಿಳಿಯೋಣ.
ಪುರಾತನ ಕಾಲದಲ್ಲಿ ದಕ್ಷಿಣ ಭಾರತದ ಪಂದಲ ಎಂಬ ರಾಜ್ಯಕ್ಕೆ ‘ಕೇತಕೀವರ್ಮ’ನೆಂಬ ರಾಜನಿದ್ದನು. ಅವನ ಪತ್ನಿಯ ಹೆಸರು ಸುಮುಖಿ. ಈ ಅರಸು ದಂಪತಿಗಳಿಗೆ ಬಹುಕಾಲ ಮಕ್ಕಳಾಗಲಿಲ್ಲ. ಆ ಚಿಂತೆ ರಾಜನನ್ನು ಅತೀವವಾಗಿ ಕಾಡುತ್ತಿತ್ತು. ರಾಜನೆಂದ ಮೇಲೆ ವಿನೋದಕ್ಕಾಗಿಯಾದರೂ ಬೇಟೆಯಾಡಲು ಕಾಡಿಗೆ ಹೋಗುವುದು ಸಾಮಾನ್ಯ. ಒಂದು ದಿನ ಹೀಗೇ ರಾಜನು ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಒಂದು ಸುಂದರವಾದ ಗಂಡು ಶಿಶುವು ಅಳುತ್ತಿರುವುದು ಕಂಡಿತು. ರಾಜನು ಆ ಮಗುವನ್ನು ಕೈಗೆತ್ತಿಕೊಂಡನು. ಮಕ್ಕಳಿಲ್ಲದ ತನಗೆ ದೇವರೇ ನೀಡಿದ ವರ ಎಂದು ಹರ್ಷಿತನಾಗಿ ಅರಮನೆಗೆ ತಂದನು. ರಾಜನು ಜ್ಯೋತಿಷ್ಯರನ್ನು ಕರೆಸಿ ದೊರೆತ ಶಿಶುವಿನ ಬಗ್ಗೆ ಪ್ರಶ್ನೆ ಚಿಂತನೆ ಮಾಡಿಸಿದ ಜೋಯಿಸರ ಪ್ರಶ್ನೆ ಚಿಂತನೆಯಿಂದ ಈ ಮಗುವು ಹರಿ ಹಾಗೂ ಹರನ ಸಾಂಗತ್ಯದಿಂದ ಜನಿಸಿದುದು ಎಂದು ತಿಳಿಯಿತು. ಅವನಿಗೆ ‘ಹರಿಹರ’ ಎಂದು ಹೆಸರಿಟ್ಟರು.
ರಾಜನಿಗೆ ದೊರೆತ ಶಿಶುವಿನ ಕಾಲ್ಗುಣ ಒಳ್ಳೆಯದೇ ಆಯ್ತು. ರಾಣಿ ‘ಸುಮುಖಿ’ಯು ಗರ್ಭವತಿಯಾದಳು. ಹಾಗೆಯೇ ಒಂದು ದಿನ ಗಂಡು ಮಗುವಿಗೆ ಜನ್ಮವಿತ್ತಳು. ಆ ಮಗುವಿಗೆ ‘ಕನಕವರ್ಮ’ ಎಂದು ನಾಮಕರಣ ಮಾಡಿದರು. ಸುಮುಖಿಗೆ ದಿನ ಹೋದಂತೆ ಹರಿಹರನಲ್ಲಿ ಮತ್ಸರ ಉಂಟಾಗತೊಡಗಿತು.ರಾಣಿ ಎಂದ ಮೇಲೆ ಆಕೆಯ ಸೇವಕಿಯರಲ್ಲಿ ದುರ್ಭೋದನೆ ಕೊಡುವವರೂ ಇದ್ದಾರಲ್ಲವೇ? `ನಿನ್ನ ಮಗನಾದ ಕನಕಮರ್ಮನಿಗೆ ಪಟ್ಟ ಸಿಗಲಾರದು. ಅದು ಎಂದಿದ್ದರೂ ಹರಿಹರನಿಗೇ ದಕ್ಕುವುದು‘ ಎಂದು ಕಿವಿಯೂದಿದರು. ಈಗ ಹರಿಹರನ ಜೀವ ತೆಗೆಯುವದೇ ಸರಿಯಾದ ಪರಿಹಾರ ಎಂದು ಅದಕ್ಕೆ ಬೇಕಾದ ಸಂಚು ಹೆಣೆಯತೊಡಗಿದಳು. ಒಂದು ದಿನ ಕಟುಕರನ್ನು ಕರೆಯಿಸಿ ಬಾಲಕನನ್ನು ಕಾಡಿಗೊಯ್ದು ಕೊಂದು ಬಿಡಲು ನೇಮಿಸಿದಳು.
ನಾವೊಂದು ಬಗೆದರೆ ದೈವ ಚಿತ್ತವೇ ಬೇರೆಯಂತೆ! ಕಟುಕರು ಬಾಲಕನನ್ನು ಉಪಾಯದಿಂದ ಕಾಡಿಗೆ ಎಳೆತಂದರು. ಇನ್ನೇನು ಹರಿಹರನನ್ನು ಸಂಹಾರ ಮಾಡಲು ಖಡ್ಗ ಎತ್ತಿದ ಕೂಡಲೇ ಯಾವುದೋ ಶಿಷ್ಟ ಶಕ್ತಿಯು ತಡೆಯಿತು. ಮಾತ್ರವಲ್ಲ ಕಟುಕರನ್ನು ಅಲ್ಲಿಂದ ಪಲಾಯನ ಮಾಡುವಂತೆ ಮಾಡಿತು. ದೈವ ಸಹಾಯದಿಂದ ಬಾಲಕನ ಕೊರಳಿಗೆ ಮಣಿಹಾರವೊಂದು ಬಿತ್ತು.
ಇತ್ತ ಅರಮನೆಯಲ್ಲಿ ಬಾಲಕನನ್ನು ಕಾಣದೆ ರಾಜ ಚಿಂತಾಕ್ರಾಂತನಾದ. ರಾಣಿಯೂ ಸೇವಕರೂ ಏನು ಅರಿಯದವರಂತೆ ನಟಿಸಿದರು. ಹರಿಹರನನ್ನು ಹುಡುಕಿ ತರಲು ಸೇವಕರಿಗೆ ಆಜ್ಞಾಪಿಸಿದನು. ಅವರೆಲ್ಲ ಬರಿಗೈಲಿ ಬಂದರು. ರಾಜನೇ ಸ್ವತಃ ಮಗನನ್ನು ಹುಡುಕುತ್ತ ಹೋಗಿ ಅರಣ್ಯಕ್ಕೆ ಪ್ರವೇಶಿಸಿದ. ದೂರದಲ್ಲೊಂದು ಮರದ ಕೆಳಗೆ ಮಣಿಹಾರ ಧರಿಸಿದ ಮಗ ಗೋಚರಿಸಿದ. ರಾಜನಿಗೆ ಸ್ವರ್ಗವೇ ಸಿಕ್ಕಿದಷ್ಟು ಆನಂದವಾಯ್ತು. ‘ಮಣಿಕಂಠ’ ಎಂದು ಕರೆದು ಎತ್ತಿ ಮುದ್ದಾಡಿದ. ರಾಣಿಯ ಕಿತಾಪತಿ ರಾಜನಿಗೆ ಅರಿಯದೇ ಹೋಯ್ತು. ಅಂತೂ ಕೈ ತಪ್ಪಿ ಹೋದ ಪುತ್ರ ದೊರಕಿದ.ಅರಮನೆಗೆ ಬಂದ ಬಾಲಕನನ್ನು ಎಲ್ಲರೂ ಮಣಿಕಂಠ ಎಂದು ಕರೆಯತೊಡಗಿದರು.
ರಾಣಿಯು ತನ್ನ ತಂತ್ರವನ್ನು ಅಲ್ಲಿಗೇ ಬಿಡಲಿಲ್ಲ. ಒಬ್ಬ ಹಿತವಾರಿಕೆಯ ವೈದ್ಯನನ್ನುಕರೆದು ಪಿಸುಗುಟ್ಟಿ ಕಳುಹಿಸಿದಳು. ಮಾರನೇ ದಿನ ರಾಣಿಗೆ ತಡೆಯಲಾರದ ಹೊಟ್ಟೆನೋವು. ನರಳಾಡಿದಳು. ರಾಜನು ಗಾಬರಿಯಿಂದ ವೈದ್ಯರನ್ನು ಕರೆಯಿಸಿದ. ಊಹೂಂ ರಾಣಿಯು ಕಳ್ಳ ಹೊಟ್ಟೆನೋವಿಗೆ ವೈದ್ಯರ ಔಷಧಿ ಫಲಕಾರಿಯಾಗಲಿಲ್ಲ. ಕೊನೆಗೊಬ್ಬ ರಾಣಿಯ ಹಿತಚಿಂತಕನಾದ ವೈದ್ಯ ಬಂದ. ರಾಣಿಯನ್ನು ಪರೀಕ್ಷಿಸಿದ. ವೈದ್ಯ ‘ಇದು ಅಂತಿಂತಹ ಹೊಟ್ಟೆನೋವಲ್ಲ! ಇದಕ್ಕೆ ಹುಲಿಯ ಹಾಲಿನಲ್ಲಿ ಔಷಧಿ ಅರೆಯಬೇಕು. ಆದರೆ ಹುಲಿಯ ಹಾಲನ್ನು ತರುವವರಾರು? ಯಾರೂ ಮುಂದೆ ಬರಲಿಲ್ಲ. ಹಲವಾರು ಪಾರಿತೋಷಕ, ಅರ್ಧ ರಾಜ್ಯ ಕೊಡುತ್ತೇನೆ ಎಂದು ರಾಜ ಡಂಗುರ ಸಾರಿಸಿದರೂ ಯಾರೂ ಇಲ್ಲ. ಕೊನೆಗೆ ಮಣಿಕಂಠ ರಾಜನ ಹತ್ತಿರ ಬಂದು ‘ಅಪ್ಪಾ, ಹುಲಿಯ ಹಾಲನ್ನು ನಾನೇ ತರುತ್ತೇನೆ’ ಎಂದ. ತಂದೆ ಬೇಡವೆಂದು ಎಷ್ಟು ಹೇಳಿದರೂ ಕೇಳದ ಮಣಿಕಂಠ ಅಮ್ಮನ ನೋವನ್ನು ನಿವಾರಿಸುವ ಹೊಣೆ ಮಗನಾದ ನನ್ನ ಮೇಲೆ ಇದೆ ತಾನೇ! ಎಂದು ಏಳೆಂಟು ವರ್ಷದ ಬಾಲಕ ಹುಲಿಯ ಹಾಲು ತರಲು ಕಾನನಕ್ಕೆ ಹೊರಟೇ ಬಿಟ್ಟ. ಕಾಡಿನಲ್ಲಿ ಹುಲಿಯನ್ನು ಹುಡುಕುತ್ತಾ ಹೊರಟ ಬಾಲಕನಿಗೆ ಅನೇಕ ಅಡೆ-ತಡೆಗಳು ಎದುರಾದವು. ‘ಮಹಿಷಿ’ ಎಂಬ ರಾಕ್ಷಸಿ ಅವನನ್ನು ತಿನ್ನಲು ಬಂದಳು. ಆಕೆಯನ್ನು ಕೊಂದು ಮುಂದೆ ಸಾಗಿದ. ಹೀಗೆ ಸಾಗುತ್ತಿದ್ದಾಗ ಒಂದು ಹೆಣ್ಣು (ಮರಿಹಾಕಿದ) ಹುಲಿ ಕಂಡು ಅದರ ಬೆನ್ನೇರಿದ. ದೇವತಾ ಪುರುಷನಲ್ಲವೇ? ಹುಲಿಯ ಮೇಲೆ ಸವಾರಿ ಮಾಡುತ್ತಿದ್ದ ಬಾಲಕ ಅದನ್ನು ನಾಡಿನ ಕಡೆಗೆ ಎಬ್ಬಿಸಿದ. ಆಶ್ಚರ್ಯ! ಅನೇಕ ಹುಲಿಗಳು ಇದರ ಬೆನ್ನ ಹಿಂದೆಯೇ ಬರತೊಡಗಿದವು. ಕಂಡ ಊರಿನ ಜನರು ಹೆದರಿ ಓಡಿದರೆ ಇನ್ನು ಕೆಲವರು ಹುಡುಗನಿಗೆ ಕೈ ಮುಗಿದರು. ಈ ದೃಶ್ಯವನ್ನು ಕಂಡ ರಾಣಿಯ ಆಲೋಚನೆ ಬುಡಮೇಲಾಯಿತು. ಹುಲಿಯನ್ನರಸಿ ಹೋದ ಮಣಿಕಂಠ ಹುಲಿಯ ಬಾಯಿಗೆ ಆಹಾರವಾಗಬಹುದೆಂದು ಎಣಿಸಿದ್ದಳಾಕೆ. ಆದರೆ…. ಆದುದೇನು?! ತನ್ನ ತಪ್ಪನ್ನೆಲ್ಲ ಒಪ್ಪಿಕೊಂಡು ಬಾಲಕನಲ್ಲಿ ಕ್ಷಮೆಯಾಚಿಸಿದಳು.
ಕ್ಷತ್ರಿಯರಿಗೆ ಶೌರ್ಯವೇ ಆಭರಣ, ಬಾಲಕನ ಧೈರ್ಯ, ಸಾಹಸಕ್ಕೆ ಮನಸಾರೆ ಮೆಚ್ಚಿದ ಕೇತಕೀವರ್ಮ ತಾನು ವಾನಪ್ರಸ್ಥಕ್ಕೆ ತೆರಳುವುದಾಗಿಯೂ ನೀನು ರಾಜ್ಯವಾಳಬೇಕೆಂದೂ ಹೇಳಿದ. ತಂದೆಯ ಈ ಮಾತಿಗೆ ಮಣಿಕಂಠ ಒಪ್ಪಿಗೆ ಕೊಡಲಿಲ್ಲ. ‘ನನಗೆ ರಾಜ್ಯವಾಗಲೀ ಕೋಶವಾಗಲೀ ಅಧಿಕಾರವಾಗಲೀ ಒಂದೂ ಬೇಡ. ನಶ್ವರವಾದ ಈ ಬದುಕಿಗೆ ಹೊರತಾದ ಶಾಶ್ವತವಾದ ಪದವಿಯಿದೆ. ‘ವನಾಂತರಕ್ಕೆ ತಪಸ್ಸಿಗೆ ಹೊರಡುತ್ತೇನೆ’ ಎಂದ. ರಾಜ ಎಷ್ಟು ತಡೆದರೂ ಕೇಳದೆ ಸಕಲವನ್ನೂ ತೊರೆದು ಹೊರಟೇ ಬಿಟ್ಟ. ವನದಲ್ಲಿ ತಪಸ್ಸು ಮಾಡಲು ತೊಡಗಿದ ಈತನೇ ಶಾಸ್ತಾರ, ಅಯ್ಯಪ್ಪ, ಹರಿಹರ, ಮಣಿಕಂಠ ಎಂಬ ಹೆಸರುಗಳಿಂದ ಲೋಕ ಪೂಜನೀಯನೆನಿಸಿದನು.
–ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಮಣಿಕಂಠನ ಮಹಿಮೆಯು ಓದಿಸಿಕೊಂಡಿತು. ನಮ್ಮ ಪುರಾಣಗಳಲ್ಲಿ
ಅಡಗಿರುವ ಸಂಕೇತ ಮತ್ತು ಪ್ರತಿಮೆಗಳು ಅರ್ಥಗರ್ಭಿತವಾದವು.
ಅವು ಮೊಗೆದಷ್ಟೂ ಸಿಗುವ ಅಂತರ್ಜಲ, ನಮ್ಮ ಬಾಳುವೆಗೆ ಬೇಕಾದ ಅಮೃತ
ಅಭಿನಂದನೆಗಳು
ಎಂದಿನಂತೆ.. ಪುರಾಣಕಥೆಗಳಲ್ಲಿ ಈ ಸಾರಿಯ ಮಣಿಕಂಠನ.ಕಥೆ ಚೆನ್ನಾಗಿ ಮೂಡಿಬಂದಿದೆ..ಧನ್ಯವಾದಗಳು ವಿಜಯಾ ಮೇಡಂ..
ಧನ್ಯವಾದಗಳು ಮಂಜುರಾಜ್.
ಸುರಹೊನ್ನೆಯ ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ಪುರಾಣ ಕಥಾ ಮಾಲಿಕೆಯಲ್ಲಿ ಈ ಸಲದ ಅಯ್ಯಪ್ಪನ ಕಥೆ ಕುತೂಹಲಪೂರ್ಣವಾಗಿದೆ.
ಹರಿಹರ ಸುತನೆ ಅಯ್ಯಪ್ಪ, ಮಣಿಕಂಠ ಎಂಬ ನಾಮಪ್ರವರಗಳನ್ನು ಭಕ್ತಿಗೀತೆಗಳಲ್ಲಿ ಕೇಳಿದ್ದ ಶಬರಿ ಮಲೈ ಅಯ್ಯಪ್ಪ ಸ್ವಾಮಿಯ ಪುರಾಣ ಕಥೆ ಕುತೂಹಲ ತಣಿಸುವ ಮಾಹಿತಿಯನ್ನು ನೀಡಿತು.