ಸಂಕ್ರಮಣ ಕಾಲ
ಸಂಕ್ರಾಂತಿ ಹಬ್ಬ ಬಂತು, ಸಜ್ಜೆ ರೊಟ್ಟಿ, ಕುಂಬಳಕಾಯಿ, ಬದನೇಕಾಯಿ ಎಣ್ಣೆಗಾಯಿ, ಗಡಸೊಪ್ಪು ಮಾಡಬೇಕಲ್ಲ. ಜೊತೆಗೆ ಎಳ್ಳು ಸಕ್ಕರೆ ಅಚ್ಚು ರೆಡಿಮಾಡಬೇಕು. ಒಂದು ವಾರದಿಂದಲೇ ಸಿದ್ದತೆ ಆರಂಭ. ಒಂದು ದೊಡ್ಡ ಪಟ್ಟಿ ತಯಾರಿಸಿ, ದಿನಸಿ ಅಂಗಡಿಗೆ ಹೊರಟೆ. ವೈದ್ಯಳಾಗಿದ್ದ ಮಗಳು ಹಬ್ಬ ಬಂದ ತಕ್ಷಣ ಯಾವುದಾದರೂ ಪ್ರೇಕ್ಷಣ ಯ ಸ್ಥಳ ಹುಡುಕಿ, ರೆಸಾರ್ಟ್ ಕಾಯ್ದಿರಿಸಿ ಕುಟುಂಬ ಸಮೇತ ಹೊರಟುಬಿಡುವಳು. ಹಬ್ಬ ಮಾಡಲು ನಮ್ಮ ಮನೆಗೆ ಬಾ ಎಂದು ಕರೆದರೆ ”ಅಮ್ಮಾ, ಹಬ್ಬ ಎಂದರೆ ಸಂಭ್ರಮ, ಸಡಗರ, ಸಂತಸ ಇರಬೇಕಲ್ವಾ? ನೀನು ಸಂಪ್ರದಾಯಗಳ ಹೆಸರಲ್ಲಿ, ಹಬ್ಬ ಹರಿದಿನಗಳಲ್ಲಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳುತ್ತಿಯಾ, ನೀವೂ ನಮ್ಮ ಜೊತೆ ಬನ್ನಿ. ಎಲ್ಲರೂ ಒಟ್ಟಿಗೇ ಸೇರಿ ಖುಷಿಯಾಗಿ ಕಾಲ ಕಳೆಯೋಣ” ಎಂದು ನನಗೇ ಉಪದೇಶ ಮಾಡುತ್ತಿದ್ದಳು. ಅವಳ ಮಾತಿಗೆ ಪ್ರತ್ಯುತ್ತರ ನೀಡಲು ಸೋತು, ಮೌನಕ್ಕೆ ಶರಣಾಗುತ್ತಿದ್ದೆ. ಅವರು ಹಿಂತಿರುಗಿ ಬಂದಾಗ ಹಬ್ಬದ ಅಡಿಗೆ ಬಿಸಿಮಾಡಿ ಬಡಿಸುತ್ತಿದ್ದೆ.
ಇಂಗ್ಲಿಷ್ ಕ್ಯಾಲೆಂಡರ್‌ನಂತೆ ಜನವರಿ ಒಂದರಂದೇ ಹೊಸವರ್ಷ ಆಚರಿಸಿದರೂ, ಕೆಲವರು ಸಂಕ್ರಾಂತಿ ಹಬ್ಬವೇ ಹೊಸವರ್ಷದ ಆರಂಭ ಎಂದೂ ಘೋಷಿಸುವರು. ಮತ್ತೆ ಕೆಲವರು ಯುಗಾದಿಯಂದು ಹೊಸವರ್ಷವನ್ನು ಆಚರಿಸುವರು. ಹೌದಲ್ಲ, ನಮ್ಮ ನಾಡಿನ ಬಹುಮುಖೀ ಸಂಸ್ಕೃತಿಯ ವಿನ್ಯಾಸವಲ್ಲವೇ ಇದು? 2022 ಕಳೆದು 2023 ಕ್ಕೆ ಅಡಿಯಿಟ್ಟಿದ್ದೆವು. ಕಳೆದ ವರ್ಷದಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕುತ್ತಾ ಸಂಕ್ರಾಂತಿ ಹಬ್ಬ ಆಚರಿಸಲು ವಸ್ತುಗಳನ್ನು ಕೊಳ್ಳಲು ಅಂಗಡಿಗೆ ಹೊರಟಿದ್ದೆ. ನಾನು ನೀಡಿದ ಪಟ್ಟಿಯಂತೆ ಅಂಗಡಿಯವನು ಸಾಮಾನುಗಳನ್ನು ತೂಕ ಮಾಡಿ ಚೀಲಕ್ಕೆ ತುಂಬಿಸಿ, ಬಿಲ್ ನೀಡಿದ. ನಾನು ಹಣ ಕೊಡಲು ಪರ್ಸ್‌ನ್ನು ಬ್ಯಾಗಿನಿಂದ ತೆಗೆಯಲು ನೋಡಿದೆ. ಅರೆ, ನನ್ನ ಪರ್ಸ್, ಹುಡುಕಾಡಿದೆ, ಪರ್ಸ್ ಮಾಯವಾಗಿತ್ತು.. ನನ್ನ ಗೊಂದಲ ಕಂಡ ಅಂಗಡಿಯವನು, ಇರಲಿ ಬಿಡಿ ಮೇಡಂ, ನಾಳೆ ಹಣ ತಂದುಕೊಡಿ, ಎಂದ. ದಾರಿಯಲ್ಲಿ ಬರುವಾಗ ನನ್ನ ಪರ್ಸ್ ಬಿದ್ದಿರಬಹುದೇ ಎಂದೆನಿಸಿ, ಪರ್ಸ್ ಹುಡುಕುತ್ತ ಮನೆಗೆ ಮರಳಿದೆ. ಐಶ್ವರ್ಯ ಆಭರಣದ ಅಂಗಡಿಯವರು ನೀಡಿದ್ದ ಪರ್ಸ್ ಅದು. ಪರ್ಸ್‌ನಲ್ಲಿ ಎರಡರಿಂದ ಎರಡೂವರೆ ಸಾವಿರ ಹಣ ಇತ್ತು, ಮನೆಯ ಬೀಗದ ಕೈ ಇತ್ತು, ಹಾನಗಲ್ಲು ಕುಮಾರ ಸ್ವಾಮಿಗಳ ಸಿನೆಮಾ ನೋಡಲು ಕೊಂಡಿದ್ದ ಟಿಕೆಟ್ ಇತ್ತು. ಸಧ್ಯ, ಚೀಲದ ಮುಂದಿನ ಪಾಕೆಟ್‌ನಲ್ಲಿ ಮೊಬೈಲಿತ್ತು, ಸ್ನೇಹಿತೆ ಅನು, ಫೋನ್ ಮಾಡಿದ್ದರಿಂದ ಪರ್ಸ್‌ನಲ್ಲಿದ್ದ ಫೋನ್ ಸ್ಥಳಾಂತರವಾಗಿತ್ತು.
ಮನೆಗೆ ಬಂದವಳೇ, ಮೊದಲು ಎ.ಟಿ.ಎಮ್. ಕಾರ್ಡ್ ಹುಡುಕಿದೆ, ನನ್ನ ಪುಣ್ಯ, ಅದೂ ಬೇರೊಂದು ವ್ಯಾನಿಟಿ ಬ್ಯಾಗಿನಲ್ಲಿ ಜೋಪಾನವಾಗಿತ್ತು. ಮನೆಯವರಿಗೆ ತಿಳಿಸಿದರೆ, ಎಷ್ಟು ಬಯ್ಯುತ್ತಾರೇನೋ ಎಂದು ಹೆದರಿ ಸುಮ್ಮನಿದ್ದೆ. ಆದರೆ ಮನದಲ್ಲಿ ಮೂಡುತ್ತಿದ್ದ ಆತಂಕ, ಗಾಬರಿ ಹೆಚ್ಚಾಗಿ ಎಲ್ಲವನ್ನೂ ಹೇಳಿಬಿಟ್ಟೆ. ಅವರು ಒಂದು ಮಾತನ್ನೂ ಆಡದೆ ನನ್ನನ್ನೇ ನೋಡಿದರು, ಅವರ ತೀಕ್ಷ್ಣವಾದ ನೋಟ ನನ್ನನ್ನು ಇರಿಯುವಂತಿತ್ತು. ವಯಸ್ಸಾಯಿತು, ಮರೆವು ಜಾಸ್ತಿಯಾಗಿದೆ ಎಂದು ವಯಸ್ಸಿನ ಮೇಲೆ ನನ್ನ ಬೇಜವಾಬ್ದಾರಿತನವನ್ನು ಜಾರಿಸಿ ಬಿಡುವ ಯತ್ನ ಮಾಡಿದೆ. ಇದುವರೆಗೂ ಏನೋ ಕಳೆದಿಲ್ಲ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದೆ. ನೀನು ಇಡುವ ವಸ್ತುಗಳು ನಿನಗೇ ಸಿಗಲ್ಲ, ಪಾಪ ಕಳ್ಳನಿಗೆ ಹೇಗೆ ಸಿಗಲು ಸಾಧ್ಯ ಎಂದು ಲೇವಡಿ ಮಾಡಿದರು. ಯಜಮಾನರ ಪ್ರತಿಕ್ರಿಯೆಗೆ ಪೂರಕವಾಗಿ, ಕಾಲೇಜಿನಲ್ಲಿ ನಡೆದ ಘಟನೆಯೊಂದು ನೆನಪಾಗಿತ್ತು. ಒಮ್ಮೆ ಮನಸ್ಸಿಲ್ಲದ ಮಾರ್ಗ,ದ ಲೇಖಕರಾದ ಮೀನುಗುಂಡಿ ಸುಬ್ರಮಣ್ಯ ಎಂಬ ಆಪ್ತ ಸಮಾಲೋಚಕರನ್ನು ಮೈಸೂರಿನಿಂದ ಕಾಲೇಜಿನ ಸಮಾರಂಭವೊಂದಕ್ಕೆ ಕರೆಸಿದ್ದರು. ಅವರ ಜೊತೆ ಕಾಲೇಜಿನ ಶಿಕ್ಷಕರ ಸಂವಾದವೊಂದನ್ನು ಏರ್ಪಾಡು ಮಾಡಲಾಗಿತ್ತು. ಅವರ ಬಳಿ ಎಲ್ಲರೂ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆಯಲು ಕಾತುರರಾಗಿದ್ದರು. ನನ್ನ ಸರದಿ ಬಂದಾಗ ನಾನು ಹೇಳಿದ್ದು ಪುಸ್ತಕ ಓದಲು ಹೊರಟರೆ, ಪುಸ್ತಕ ಓದುವುದಕ್ಕಿಂತ ಪುಸ್ತಕ ಹುಡುಕಲೇ ಹೆಚ್ಚು ಸಮಯ ವ್ಯಯವಾಗುತ್ತೆ. ವಸ್ತುಗಳನ್ನು ಹುಡುಕುತ್ತಲೇ ಅರ್ಧ ಆಯುಷ್ಯ ಕಳೆದುಬಿಟ್ಟಿದ್ದೇನೆ. ಅವರು ನಸುನಗುತ್ತಾ ಉತ್ತರಿಸಿದ್ದು ನೀವೇ ಈ ಸಮಸ್ಯೆಗೆ ಪರಿಹಾರ ಹೇಳಿ ನೋಡೋಣ ಎಂದರು. ನಾನು ಅರಿಯದೆ ಅವರು ಒಡ್ಡಿದ ಬಲೆಗೆ ಬಿದ್ದೆ. ನನ್ನ ಉತ್ತರ ವಸ್ತುಗಳನ್ನು ಉಪಯೋಗಿಸಿದ ಬಳಿಕ ಅವುಗಳನ್ನು ಮರಳಿ ಅದೇ ಸ್ಥಾನದಲ್ಲಿ ಇಡುವುದು. ಹೌದಲ್ಲ, ನನ್ನ ಸಮಸ್ಯೆಗೆ ಪರಿಹಾರ ನನ್ನಲ್ಲೇ ಇತ್ತು. ಆದರೆ ನನ್ನ ನಂಬಿಕೆ ಏನು ಗೊತ್ತಾ ಪರಿಹಾರ ಇರುವುದು ಬೇರೆಯವರಿಗೆ ಹೇಳಲಿಕ್ಕೆ, ನಾವು ಅನುಸರಿಸುವುದಕ್ಕಲ್ಲ ಎಂದು.
ಪರ್ಸ್ ಕಳೆದ ದಿನ ಕಾಲಿಂಗ್ ಬೆಲ್ ಸದ್ದಾದ ತಕ್ಷಣ ಬಾಗಿಲ ಬಳಿ ಓಡುತ್ತಿದ್ದೆ, ಯಾರಾದರೂ ಸಹೃದಯರು ತಮಗೆ ಸಿಕ್ಕ ನನ್ನ ಪರ್ಸ್ ಹಿಂತಿರುಗಿಸಲು ಬಂದಿರಬಹುದೇನೋ ಎಂದು. ಕಳೆದ ಬೀಗದ ಕೈ ಗೊಂಚಲಿಗೆ ಗುಜರಾತ್ ಪ್ರವಾಸ ಹೋದಾಗ ಕೊಂಡ ಗಾಂಧೀಜಿಯ ನಗುಮೊಗದ ಚಿತ್ರದ ಪದಕ ಬೇರೆ ಇತ್ತು. ಸತ್ಯಮೇವ ಜಯತೇ ಎಂದು ಸಾರಿದ ಗಾಂಧೀಜಿಯ ಚಿತ್ರ ಇದ್ದುದರಿಂದ ಯಾರಾದರೂ ಹಿಂತಿರುಗಿ ಕೊಡಬಹುದೇನೋ ಎಂಬ ಆಶಾಭಾವ. ಆದರೆ ಆ ಪರ್ಸ್ ನನಗೆ ಸೇರಿದ್ದು ಎಂದು ಅವರು ಪತ್ತೆ ಮಾಡುವುದಾದರೂ ಹೇಗೆ ಎಂಬ ಯಕ್ಷಪ್ರಶ್ನೆ ಬೇರೆ ಕಾಡುತ್ತಿತ್ತು. ಒಂದೆರೆಡು ದಿನ ಕಳೆದಂತೆ ಪರ್ಸ್ ಕಳೆದಿದ್ದ ನೋವು, ಬೇಸರ ಕಡಿಮೆಯಾಗಿತ್ತು. ಇರಲಿ, ಹಣದ ಅವಶ್ಯಕತೆ ನನಗಿಂತ ಅವರಿಗೆ ಹೆಚ್ಚಾಗಿರಬಹುದೇನೋ. ನನಗೆ ಆ ಪರ್ಸಿನ ಋಣ ಇರಲಿಲ್ಲವೇನೋ. ಹೀಗೇ ಏನೇನೋ ಅನಿಸಿಕೆಗಳು.
ಕಳೆಯುವುದು ಎಂಬ ಪದದ ಹಲವು ಕೋನಗಳನ್ನು ಮನಸ್ಸು ಮೆಲುಕು ಹಾಕತೊಡಗಿತ್ತು. ಕಾಲ ಕಳೆಯಬೇಡ ಎಂಬ ಪದವನ್ನು ಬಾಲ್ಯದಿಂದಲೂ ಹಿರಿಯರಿಂದ ಕೇಳುತ್ತಲೆ ಬಂದವರು ನಾವು. ಶಾಲೆಯಲ್ಲಿ ಓದುವಾಗ ‘Time and Tide wait for none’ ಎಂಬ ಇಂಗ್ಲಿಷ್ ಗಾದೆ ಮಾತೊಂದಕ್ಕೆ ಪ್ರಬಂಧ ಬರೆದವರು ನಾವು. ಕಳೆದು ಹೋದ ಬಾಲ್ಯ ಮತ್ತೆ ಸಿಗಲು ಸಾಧ್ಯವೇ? ಕಳೆದು ಹೋದ ಯೌವ್ವನ ಸಿಕ್ಕಿದ್ದು ಯಯಾತಿಗೆ ಮಾತ್ರ. ಅವನ ಮಗ ತಂದೆಯ ಮುಪ್ಪನ್ನು ಪಡೆದು ತನ್ನ ಯೌವ್ವನವನ್ನು ತಂದೆಗೆ ಬಳುವಳಿಯಾಗಿ ನೀಡಿದ್ದ ಪಿತೃಭಕ್ತ. ನಾನು ಪರ್ಸ್ ಕಳೆದದ್ದರ ಬಗ್ಗೆ, ಯೋಗಕೇಂದ್ರದಲ್ಲಿ ಪರಿಚಿತರಾಗಿದ್ದ ಅಡಿಗ ಸರ್‌ರವರಿಗೆ ಹೇಳಿದಾಗ, ಅವರು ಹೇಳಿದ ಮಾತುಗಳು ಅತ್ಯಮೂಲ್ಯವಾಗಿದ್ದವು ಏನನ್ನಾದರೂ ಕಳೆದು ಕೊಂಡಾಗ ನಿಧಾನವಾಗಿ ಈ ಭವಬಂಧನವನ್ನು ಕಳಚಿಕೊಳ್ಳುತ್ತಿದ್ದೇವೆ ಎಂಬ ಭಾವ ಮೂಡಬೇಕು. ಒಂದಲ್ಲ ಒಂದು ದಿನ ಎಲ್ಲವನ್ನೂ ಬಿಟ್ಟು ಹೊರಡಲೇ ಬೇಕಲ್ಲ. ನಾನು, ನನ್ನದು ಎಂಬ ಅಹಂಕಾರವೂ ಕಳೆಯುವ ಸಂಕ್ರಮಣ ಕಾಲ ಇದಲ್ಲವೇ? ಅವರು ಮಾತುಗಳನ್ನು ಆಲಿಸಿದ ನನಗೆ ಮತ್ತೆ ಸಂಕ್ರಾಂತಿಯ ನೆನಪಾಯಿತು ದಕ್ಷಿಣಾಯಣ ಕಳೆದು ಉತ್ತರಾಯಣದ ಕಡೆ ಸಾಗುವ ಕಾಲ. ಎಳ್ಳು ಬೆಲ್ಲ ಹಂಚಿ, ಹಿಂದಿನ ಕಹಿಯನ್ನು ಮರೆತು, ಸವಿಯಾದ ಮಾತಾಡಿ ಎನ್ನುವ ಕಾಲ.
ಶೇಕ್ಸ್‌ಪಿಯರ್‌ನ ನಾಟಕ, ‘As You Like It’ ನಲ್ಲಿ ಜೇಕ್ಸ್ (Jaques) ಹೇಳುವಂತೆ ಮಾನವನು ತನ್ನ ಬದುಕಿನಲ್ಲಿ ಏಳು ಹಂತಗಳನ್ನು ದಾಟುವನು, ಮೊದಲನೇ ಹಂತ ಅಳುತ್ತಾ ವಾಂತಿ ಮಾಡುತ್ತಾ ತಾಯಿಯ ಗರ್ಭದಿಂದ ಹೊರ ಜಗತ್ತಿಗೆ ಕಾಲಿಡುವ ಶಿಶು, ಎರಡನೇ ಹಂತ ಶಾಲೆಗೆ ಹೋಗುವ ಮಕ್ಕಳ ಬಾಲ್ಯಾವಸ್ಥೆ, ಮೂರನೆಯದು ಹದಿಹರೆಯದ ಅವಸ್ಥೆ, ನಾಲ್ಕನೆಯದು ಯೌವ್ವನಾವಸ್ಥೆ, ಐದನೆಯದು ಪ್ರೌಢಾವಸ್ತೆ, ಆರನೆಯದು ಮುಪ್ಪು ಹಾಗೂ ಕೊನೆಯ ಅವಸ್ಥೆ ಸಾವಿಗಾಗಿ ಪರಿತಪಿಸುವ ಹಂತ. ಅಂತಿಮ ಅವಸ್ಥೆಯಲ್ಲಿ ಒಂದೊಂದೇ ಅಂಗಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಯಮನಿಗೆ ಶರಣಾಗುವನು. ಒಂದೊಂದೇ ಹಂತವನ್ನು ಕಳೆದು ಕೊಳ್ಳುತ್ತಾ ಮುಂದಿನ ಹಂತಕ್ಕೆ ತಲುಪುವನು. ಹೀಗೆ ಕಳೆದು ಹೋದ ಬಾಲ್ಯವನ್ನಾಗಲೀ ಅಥವಾ ಯೌವನವನ್ನಾಗಲೀ ಮರಳಿ ಪಡೆಯಲು ಸಾಧ್ಯವೇ?
ಹಾಗಿದ್ದಲ್ಲಿ ಏನನ್ನು ಕಳೆಯಬೇಕು, ಏನನ್ನು ಪಡೆಯಬೇಕು? ಕಳೆದು ಹೋದ ಕಾಲದ ಅನುಭವದಿಂದ ವರ್ತಮಾನವನ್ನು ರೂಪಿಸಿಕೊಳ್ಳುವ ಕಾಲ. ಅಜ್ಞಾನ ಕಳೆದು ಜ್ಞಾನವನ್ನು ಗಳಿಸುವ ಕಾಲ, ಕತ್ತಲೆ ಕಳೆದು ಬೆಳಕಿನೆಡೆ ಧಾವಿಸುವ ಕಾಲ, ಅಸತ್ಯದಿಂದ ಸತ್ಯದೆಡೆಗೆ ಸಾಗುವ ಕಾಲ. ಮೌಢ್ಯವನ್ನು ಕಳೆಯಲು ವಿಜ್ಞಾನದ ದೀವಿಗೆಯನ್ನು ಹಚ್ಚುವ ಕಾಲ.
ಇಂಗ್ಲಿಷ್ ನುಡಿಗಟ್ಟೊಂದು ನೆನಪಾಯಿತು – If Wealth is lost Nothing is lost /If Health is lost Something is lost / If Character is lost Everything is lost. ಹಾಗಿದ್ದಲ್ಲಿ ನಾನು ಆರೋಗ್ಯವನ್ನು ಕಳೆದುಕೊಂಡಿಲ್ಲ, ನಿತ್ಯ ಯೋಗಾಬ್ಯಾಸ ಮಾಡುವ ನನಗೆ ಆ ಧನ್ವಂತರಿಯು ಉತ್ತಮ ಆರೋಗ್ಯವನ್ನು ನೀಡಿದ್ದಾನೆ. ಇನ್ನು ಚಾರಿತ್ರ್ಯ ಕಳೆದುಕೊಳ್ಳುವ ಕ್ಷೇತ್ರದಲ್ಲಿ ನಾನಿಲ್ಲ, ನಲವತ್ತು ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ನಿರತಳಾದವಳು, ವಿದ್ಯಾರ್ಥಿಗಳಿಗೆ ಕಲಿಸುತ್ತಾ ಕಲಿಯುತ್ತಾ ಮುಂದೆ ಸಾಗಿದವಳು. ಹಾಗಿದ್ದಲ್ಲಿ ಕೇವಲ ಹಣವನ್ನು ಕಳೆದುಕೊಂಡಿರುವ ನಾನು ಏನನ್ನೂ ಕಳೆದುಕೊಳ್ಳಲೆ ಇಲ್ಲ ಅಲ್ಲವೇ? ನೀವೇನಂತೀರಾ?
–ಡಾ.ಗಾಯತ್ರಿದೇವಿ ಸಜ್ಜನ್
ಕೊನೆಯ ಸಾಲುಗಳು ಬಹಳ ಚಂದ ಹಾಗೂ ಸತ್ಯ. ಹಬ್ಬಗಳೆಂದರೆ ಬಹಳ ಕೆಲಸವಿರುತ್ತದೆ ಹಾಗೂ ಆಯಾಸವೂ ಆಗುತ್ತದೆ. ಆದರೆ ಆ ಆಚರಣೆಯಲ್ಲೂ ಒಂದು ಸಂತೋಷವಿದೆ.
ಒಂದು ಪರ್ಸ ಕಳೆದು ಹೋದುದರ ಸುತ್ತ ಮೂಡಿಬಂದ ವಿಚಾರ ವೈವಿಧ್ಯಗಳ ಚಿಂತನೆ ಓದುಗರನ್ನೂ ಚಿಂತನೆಗೆ ಹಚ್ವುವಂತೆ ಲೇಖನ ರೂಪುಗೊಂಡಿದೆ.
ಅನುಭವದ ಚಂದದ ಲೇಖನ. ಚೆನ್ನಾಗಿದೆ ಮೇಡಂ
ಸಹೃದಯ ಓದುಗರಿಗೆ ಹಾಗೂ ಪ್ರತಿಕ್ರಿಯೆಯನ್ನು ತಿಳಿಸಿದವರಿಗೆ ವಂದನೆಗಳು
ನಿಮ್ಮ ಲೇಖನಿಗೆ ಸಿಗುವ ವಿಷಯಗಳ ವಿಸ್ತಾರ ದೊಡ್ಡದು… ಪರ್ಸ್ ಕಳ್ಳತನವಾದುದನ್ನೂ ಸಾಹಿತ್ಯಿಕವಾಗಿ ನಿರೂಪಿಸಿದ್ದೀರಿ!.
ಪರ್ಸ್ ಕಳೆದುದು ಕೂಡಾ ನಿಮಗೆ ಒಂದು ಒಳ್ಳೆಯ ಸಿದ್ಧಾಂತವನ್ನು ನೆನಪಿಸಿ ಕೊಟ್ಟಿತು! ಎಲ್ಲರಿಗೂ ಇದನ್ನು ಅರಗಿಸಿಕೊಳ್ಳಲು ಕಷ್ಟವೇನೋ… ಚಂದದ ಬರೆಹ..ಧನ್ಯವಾದಗಳು ಮೇಡಂ
ವಂದನೆಗಳು ಹೇಮ ಮೇಡಂ ಹಾಗೂ ಶಂಕರಿ ಮೇಡಂ ಅವರಿಗೆ