ಕಾದಂಬರಿ: ನೆರಳು…ಕಿರಣ 3
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ತಾನೆಂದುಕೊಂಡಂತೆ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದಳು ಭಾಗ್ಯ. ಮಾರನೆಯ ದಿನ ತಂಗಿಯರೊಡನೆ ಪಗಡೆಯಾಡುತ್ತಿದ್ದ ಅವಳಿಗೆ ಮನೆಯ ಹೊರಗಡೆ ಯಾರೋ ತನ್ನಪ್ಪನ ಹೆಸರು ಹಿಡಿದು ಕರೆದಂತಾಯಿತು. ಯಾರೆಂದು ಕತ್ತು ಹೊರಕ್ಕೆ ಹಾಕಿ ನೋಡುವಷ್ಟರಲ್ಲಿ ಅಲ್ಲಿಯೆ ಅಂಗಡಿಯಲ್ಲಿದ್ದ ಅಪ್ಪ ಮತ್ತೊಂದು ರೂಮಿನಲ್ಲಿ ಲೆಕ್ಕಪತ್ರ ನೋಡುತ್ತಿದ್ದ ಅಮ್ಮ ಇಬ್ಬರೂ ಹೊರಕ್ಕೆ ಬಂದು ಬಂದವರನ್ನು ಮನೆಯೊಳಕ್ಕೆ ಕರೆಯದೆ ರೂಮಿಗೆ ಕರೆದುಕೊಂಡು ಹೋಗಿದ್ದು ಕಾಣಿಸಿತು. ಹಾಗೇ ಬಂದವರ ಕೈಯಲ್ಲಿದ್ದ ಲಕೋಟೆ ಅವಳ ಕುತೂಹಲವನ್ನು ಕೆರಳಿಸಿತು. ಹಾಗೇ ಅವಳ ಮನಸ್ಸು ಹದಿನೈದು ದಿನಗಳು ಹಿಂದಕ್ಕೆ ಸರಿಯಿತು. ಪರೀಕ್ಷೆ ಮುಗಿಯುವವರೆಗೂ ಮನೆಯಲ್ಲಿ ಮದುವೆಯ ಬಗ್ಗೆ ಯಾವ ಚರ್ಚೆಗಳೂ ನಡೆದಿರಲಿಲ್ಲ. ಆಗ ಭಗವಂತ ನನ್ನ ಕೋರಿಕೆಯನ್ನು ನೆರವೇರಿಸಿದಂತೆ ಕಾಣಿಸುತ್ತದೆಂದು ನಿರಾತಂಕವಾಗಿತ್ತು. ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದು ಆಯಿತು. ಆದರೀಗ ಮತ್ತೆ ಆ ವ್ಯಕ್ತಿಯ ಬರುವಿಕೆ, ತಂಗಿಯೊಡನೆ ಆಟವಾಡುತ್ತಿದ್ದ ದಾಳವನ್ನು ಇನ್ನೊಬ್ಬ ತಂಗಿಗೆ ವಹಿಸಿಕೊಟ್ಟು ಏನು ಕಾರಣ ತಿಳಿಯಬೇಕೆಂದು ತಲೆಬಾಗಿಲಿನ ಒಳಕ್ಕೆ ಹೊರಗಿನವರಿಗೆ ಕಾಣಿಸಿಕೊಳ್ಳದಂತೆ ನಿಂತುಕೊಂಡಳು ಭಾಗ್ಯ.
”ಭಟ್ಟರೇ, ಲಕ್ಷ್ಮಮ್ಮನವರೇ ನಿಮ್ಮ ಅದೃಷ್ಟ ಖುಲಾಯಿಸಿತೆಂದು ತಿಳಿಯಿರಿ. ಏಕೆಂದರೆ ನಿಮ್ಮ ಮಗಳದ್ದೂ ಜೋಯಿಸರ ಮಗನದ್ದೂ ಜಾತಕಗಳು ವೈನಾಗಿ ಕೂಡಿ ಬಂದಿವೆಯಂತೆ. ಅಪ್ಪಯ್ಯಾ ಹೇಳಿದರು. ಅತ್ತ ಜೋಯಿಸರ ಮನೆಯಲ್ಲಿ ಗುರುತು ಹಾಕಿದ್ದನ್ನು ನಮ್ಮ ಅಪ್ಪಯ್ಯನ ಕೈಯಲ್ಲೇ ಕೊಟ್ಟುಕಳಿಸಿದ್ದಾರೆ. ತಮ್ಮ ಮಗನ ಜಾತಕವನ್ನೂ ಕೊಟ್ಟು ಕಳಿಸಿದ್ದಾರೆ. ನೀವೂ ಒಂದು ಸಾರಿ ನೋಡಿಸಿಬಿಡಿ ಎಂದು ಹೇಳಿದರಂತೆ. ಇಗೋ ಇಬ್ಬರು ನೋಡಿ ಲೆಕ್ಕಾಚಾರ ಹಾಕಿ ಕೊಟ್ಟಿರುವ ಜಾತಕಗಳು. ಹೆಣ್ಣು ನೋಡುವ ಶಾಸ್ತ್ರ ಯಾವಾಗ ಇಟ್ಟುಕೊಳ್ಳಬಹುದೆಂದು ಕೇಳಿ ತಿಳಿಸಲು ಹೇಳಿದ್ದಾರೆ. ಅದಕ್ಕಾಗಿ ಯಾವ ಮನೆಗೂ ಬೇಡವಂತೆ. ದೇವಸ್ಥಾನಕ್ಕೆ ನೀವು ಮಗಳನ್ನು ಕರೆದುಕೊಂಡು ಬಂದರೆ ಸಾಕಂತೆ. ಎಂದು ಎಲ್ಲ ವರದಿ ಒಪ್ಪಿಸಿ ನೀವಿಬ್ಬರೂ ಯೋಚಿಸಿ ಅಪ್ಪಯ್ಯನಿಗೆ ತಿಳಿಸಿದರೆ ಸಾಕು, ಅವರೇ ಎಲ್ಲ ಏರ್ಪಾಡು ಮಾಡುತ್ತಾರೆ. ಜೋಯಿಸರ ಮನೆಯ ರೀತಿ ರಿವಾಜು ಅಪ್ಪಯ್ಯನಿಗೆ ಚೆನ್ನಾಗಿ ಗೊತ್ತು. ನಾನಿನ್ನು ಬರಲೇ” ಎಂದದ್ದು ಕೇಳಿಸಿತು. ಅಷ್ಟನ್ನು ಕೇಳಿಸಿಕೊಂಡ ಭಾಗ್ಯ ತಾನು ನಿಂತ ಜಾಗಬಿಟ್ಟು ಒಳನಡೆದಳು.
”ಏ ಸುಬ್ಬಣ್ಣಾ, ಒಳ್ಳೆಯ ಶುಭ ಸಮಾಚಾರ ತಂದಿದ್ದೀಯೆ. ಹಾಗೇ ಹೋಗುವುದಾ, ಬಾ ಸ್ವಲ್ಪ ಕಾಫಿ ಮಾಡುತ್ತೇನೆ” ಎಂದು ಹೇಳಿದ ಲಕ್ಷ್ಮಿಯ ಮಾತಿಗೆ ಭಟ್ಟರೂ ಧ್ವನಿಗೂಡಿಸಿದರು. ”ಬೇಡಿ, ಎಲ್ಲಾ ಪಕ್ಕ ಆಗಲಿ, ನಾನೇ ಕೇಳಿ ಕಾಫಿ ಏಕೆ ಹೋಳಿಗೆ ಮಾಡಿಸಿಕೊಂಡು ಊಟವನ್ನೇ ಮಾಡುತ್ತೇನೆ” ಎಂದರು ಸುಬ್ಬಣ್ಣ.
”ಓ..ಒಂದು ವಿಷಯವನ್ನು ಈ ಗಡಿಬಿಡಿಯಲ್ಲಿ ಹೇಳೋದು ಮರೆತಿದ್ದೆ” ಎಂದರು.
”ಅದೇನು ಹೇಳು ಸುಬ್ಬಣ್ಣ” ಎಂದು ಕೇಳಿದರು ಭಟ್ಟರು.
”ಏನಿಲ್ಲ, ನನ್ನ ಸ್ನೇಹಿತ ಬಲರಾಮ, ನಿಮಗೂ ಗೊತ್ತಲ್ಲಾ.. ಮುಂದಿನವಾರ ಅವನ ತಂಗಿಯ ಮದುವೆ. ಮನೆ ಮುಂದೆಯೇ ಧಾರೆ ಎರೆದು ಕೊಡುತ್ತಿದ್ದಾನೆ. ಅವನಿಗೆ ಆದಿನ ಪಾತ್ರೆಪಡಗದಿಂದ ಹಿಡಿದು ನೀವು ಸಮಾರಂಭಕ್ಕೆ ಒದಗಿಸುವ ಎಲ್ಲ ಪರಿಕರಗಳೂ ಬೇಕಂತೆ. ಬಾಡಿಗೆಯಲ್ಲಿ ಸ್ವಲ್ಪ ರಿಯಾಯಿತಿ ತೋರಿಸಬೇಕೆಂದು ಕೇಳಿಕೊಳ್ಳಲು ನನ್ನೊಡನೆ ಹೇಳಿಕಳುಹಿಸಿದ್ದಾನೆ. ಪಾಪ ಬಡವ, ಇವಳು ಮೂರನೆಯ ತಂಗಿ. ಇದೊಂದು ಮದುವೆ ಮುಗಿಸಿದರೆ ಒಂದು ಘಟ್ಟ ಮುಟ್ಟಿದಂತೆ. ಅವರಪ್ಪ ಏನನ್ನೂ ಮಾಡದಿದ್ದರೂ ಮಕ್ಕಳನ್ನು ಮಾಡಿ ಎಲ್ಲ ಭಾರವನ್ನೂ ಹಿರಿಯ ಮಗ ಬಲರಾಮನ ಮೇಲೆ ಹಾಕಿ ಕಣ್ಮುಚ್ಚಿಕೊಂಡ. ಪುಣ್ಯಾತ್ಮ ಇರುವ ತುಂಡುಭೂಮಿ, ಚಿಕ್ಕ ಮನೆ, ಅಲ್ಲಿ ಇಲ್ಲಿ ಮಾಡುವ ಪೌರೋಹಿತ್ಯ. ಅವುಗಳಿಂದ ಎಷ್ಟು ಮಹಾ ಬರುತ್ತೆ? ಅವನು ನನಗೆ ಬರೀ ಗೆಳೆಯನಾಗಿಲ್ಲ, ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಇದ್ದಾನೆ. ಅಪ್ಪಯ್ಯ ಅವನ ಅಸಹಾಯಕ ಪರಿಸ್ಥಿತಿಯನ್ನು ಗಮನಿಸಿ ಆಗಿಂದಾಗ್ಗೆ ತಮಗೆ ತೋಚಿದ ರೀತಿಯಲ್ಲಿ ಸಹಾಯಹಸ್ತ ಚಾಚುತ್ತಿರುತ್ತಾರೆ. ಈ ಸಾರಿ ಮದುವೆಯ ಊಟದ ಖರ್ಚನ್ನು ಅಪ್ಪಯ್ಯನೇ ವಹಿಸಿಕೊಂಡಿದ್ದಾರೆ. ಪುಣ್ಯಕ್ಕೆ ವರನ ಕಡೆಯಿಂದ ಯಾವ ಬೇಡಿಕೆಯೂ ಇಲ್ಲ. ಒಂದೇ ದಿನದ ಮದುವೆ. ಅವನೇ ನಿಮ್ಮನ್ನು ಕೇಳಬಹುದಿತ್ತು. ವಿಪರೀತ ಸಂಕೋಚದ ಪ್ರಾಣಿ. ಅದಕ್ಕೇ ನಾನು ಅವನ ಪರವಾಗಿ ಕೇಳಿದೆ” ತಪ್ಪಾಗಿ ತಿಳಿಯಬೇಡಿ. ಎಂದ ಸುಬ್ಬಣ್ಣ.
”ಅಯ್ಯೋ, ಇಷ್ಟೇನಾ? ಅದಕ್ಕ್ಯಾಕಿಷ್ಟು ಹಿಂಜರಿಕೆ. ಅವನ ಕೈಲಿ ಎಷ್ಟಾಗುತ್ತೋ ಅಷ್ಟೇ ಕೊಡಲಿಕ್ಕೇಳು. ನಾವೂ ಏನು ಕುಬೇರನ ಮಕ್ಕಳಲ್ಲ. ಬಡವರೇ, ಬಡವರಿಗೆ ಬಡವರೇ ಬಂಧುಗಳು. ಇವತ್ತೇ ಬಂದು ಬುಕ್ ಮಾಡಿಕೊಂಡು ಹೋಗಲು ಹೇಳು” ಎಂದು ಸುಬ್ಬಣ್ಣನನ್ನು ಬೀಳ್ಕೊಟ್ಟು ಮನೆಯೊಳಕ್ಕೆ ಬಂದರು ದಂಪತಿಗಳು.
”ಲಕ್ಷ್ಮೀ, ಮೊದಲ ಹಂತ ಮುಗಿಯಿತು. ಇನ್ನು ನಮ್ಮ ಭಾಗ್ಯನ್ನ ನೋಡೋದು. ನಾವಂದುಕೊಂಡಂತೆ ಮದುವೆ ಮಾಡಿಕೊಡಲು ಒಪ್ಪಿದರೆ ‘ಶುಭಸ್ಯಶೀಘ್ರಂ’ ಏನಂತಿ” ಎಂದರು ಶಂಭುಭಟ್ಟರು. ”ಹಾಗೇ ಮಾಡೋಣ ಬಿಡಿ. ಅಲ್ಲಾ ನಮ್ಮಜ್ಜಿ ಹೇಳ್ತಿದ್ರು, ಅವರ ಕಾಲಕ್ಕೆ ‘ಅಷ್ಟವರ್ಷೇ ಭವೇತ್ ಕನ್ಯಾ’ ಅಂತ ಹುಡುಗಿ ದೊಡ್ಡವಳಾಗೋಕ್ಕಿಂತ ಮುಂಚೆಯೇ ತಾಳಿ ಕಟ್ಟಿಸುತ್ತಿದ್ದರಂತೆ. ಸದ್ಯ, ನಮ್ಮ ಕಾಲಕ್ಕೆ ಸ್ವಲ್ಪ ರಿಯಾಯಿತಿ ಅಂತಲೇ ಹೇಳಬಹುದು. ನಮ್ಮ ಮೊಮ್ಮಕ್ಕಳ ಕಾಲಕ್ಕೆ ಸಾಕಷ್ಟು ಬದಲಾವಣೆ ಕಾಣಬಹುದೇನೋ” ಎಂದಳು, ಲಕ್ಷ್ಮಿ.
”ಆಗ ವಯಸ್ಸಿನ ಅಂತರವೂ ಬಹಳವಿರುತ್ತಿತ್ತು. ನನ್ನ ಅಪ್ಪನಿಗೂ ಅಮ್ಮನಿಗೂ ಹನ್ನೆರಡು ವರ್ಷ ವ್ಯತ್ಯಾಸವಿತ್ತು” ಎಂದರು ಭಟ್ಟರು.
”ಹೆ..ಹೆ.. ಅದೇನು ಹೇಳ್ತೀರಾ ಇಲ್ಲಿಕೇಳಿ, ನಮ್ಮಜ್ಜಿಗೂ ತಾತನಿಗೂ ಇಪ್ಪತ್ತೆರಡು ವರ್ಷ ಅಂತರವಿತ್ತಂತೆ. ಅವರ ಮೊದಲನೇ ಹೆಂಡತಿ ಹೆರಿಗೆ ಸಮಯದಲ್ಲಿ ತೀರಿಹೋದ ಮೇಲೆ ನಮ್ಮ ತಾತ ಕೆಲವು ವರ್ಷ ಮದುವೇನೇ ಆಗಿರಲಿಲ್ಲವಂತೆ. ಆಮೇಲೆ ಎಲ್ಲರೂ ಬಲವಂತ ಮಾಡಿದಾಗ ಯಾವುದೋ ಬಂಧುಗಳ ಮದುವೆಯಲ್ಲಿ ನಮ್ಮಜ್ಜಿಯನ್ನು ನೋಡಿ ಮೆಚ್ಚಿ ಮದುವೆಯಾಗಿದ್ದಂತೆ. ಪಾಪ ಅಜ್ಜಿಯ ಮನೆಯವರು ಕಡುಬಡವರಾಗಿದ್ದರಂತೆ. ಹೀಗಾಗಿ ನಮ್ಮ ಮದುವೆಯಾಯ್ತು ಎಂದು ಅಜ್ಜಿ ಹೇಳಿದ್ದ ನೆನಪು. ಫಟಾಫಟ್ ಮಕ್ಕಳೂ ಆದವು. ಆ ಮಕ್ಕಳು ಕೈಯಿಗೆ ಬರುವ ಮುನ್ನವೇ ತಾತ ಕೈಲಾಸವಾಸಿಯಾದ್ರಂತೆ. ಅಜ್ಜಿ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದರು. ತಮ್ಮ ಮಗಳಿಗೆ ಎಲ್ಲ ರೀತಿಯಲ್ಲೂ ವಯಸ್ಸು, ಮನೆತನ, ಹುಡುಗನ ಗುಣವಿಶೇಷಗಳು ತಿಳಿದೇ ಮದುವೆ ಮಾಡಿದಳು. ಆದರೇನಾಯ್ತು, ನನ್ನವ್ವ ನನ್ನನ್ನು ಭೂಮಿಗೆ ತಂದು ತಾನು ಹೊರಟುಹೋದಳು. ಅಮರ ಪ್ರೇಮಿಯಂತೆ ನಮ್ಮಪ್ಪ ಆಗ ಮನೆಬಿಟ್ಟು ಹೋದವರು ಇದುವರೆಗೆ ಇದ್ದಾರೋ ಇಲ್ಲವೋ ದೇವರೇ ಬಲ್ಲ. ಇದು ನಾನು ಪಡೆದು ಬಂದದ್ದು. ನಮ್ಮ ಮಕ್ಕಳನ್ನೆಲ್ಲಾ ಒಂದು ದಡ ಸೇರಿಸುವವರೆಗೆ ನಮ್ಮನ್ನು ಇರಿಸಪ್ಪಾ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ” ಎಂದು ಹೇಳಿ ಅಡುಗೆಮನೆಗೆ ನಡೆದಳು ಲಕ್ಷ್ಮಿ. ಭಟ್ಟರು ಅಂಗಡಿಗೆ ಹಿಂದಿರುಗಿದರು.
ಬೆಳಗ್ಗೆ ಹತ್ತು ಗಂಟೆಯಿಂದ ಸುಮಾರು ಹನ್ನೆರಡು ಗಂಟೆಯವರೆಗೆ ನಡೆದ ಮಾತುಕತೆಗಳನ್ನೆಲ್ಲ ಆಲಿಸಿದ ಭಾಗ್ಯಳಿಗೆ , ಅಲ್ಲಾ ಇಷ್ಟೆಲ್ಲ ಮಾತಕತೆಗಳನ್ನು ನಡೆಸಿದರಲ್ಲ, ತಮ್ಮ ಮಗಳನ್ನು ಒಂದು ಮಾತು ಕೇಳಬೇಕೆಂಬ ಯೋಚನೆ ಅವರಿಗೆ ಬಾರದೆ ಇದ್ದುದು ಅಚ್ಚರಿ ತರಿಸಿತು. ಅಪ್ಪನಿಗಂತೂ ಅವೆಲ್ಲ ಯೋಚನೆಗಳು ಬರುವುದಿಲ್ಲ. ಏಕೆಂದರೆ ಅವರ ತಿಳಿವಳಿಕೆ ಮಟ್ಟ ಅಷ್ಟಕಷ್ಟೆ. ಆದರೆ ಅಮ್ಮ ಬುದ್ಧಿವಂತೆ, ಅವಳಾದರೂ ಬಾಯಿಮಾತಿಗೆ.. ಉಹುಂ..ಅದು ಹೇಗೆ ಸಾಧ್ಯ? ಆಕೆಗೆ ಚಿಕ್ಕಂದಿನಿಂದಲೂ ಬದುಕಿನಲ್ಲಿ ಅಭದ್ರತೆ , ಮದುವೆಯ ನಂತರ ತಾಕಲಾಟ, ಆದಷ್ಟೂ ಬೇಗ ಮಕ್ಕಳ ಜವಾಬ್ದಾರಿಯನ್ನು ಮುಗಿಸಬೇಕೆಂಬ ಹಪಾಹಪಿ. ಎಲ್ಲವೂ ಕಣ್ಮುಂದೆ ಬಂದು ನಿಂತವು. ”ನಾನು ಕೈತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳುವುದು, ಅದರಿಂದ ಅವರುಗಳು ಆತಂಕಪಟ್ಟುಕೊಳ್ಳುವುದು ಬೇಡ. ನನ್ನ ಹಣೆಯಲ್ಲಿ ಬರೆದ ಹಾಗೆ ಆಗುತ್ತೆ” ಎಂದುಕೊಂಡಳು ಭಾಗ್ಯ.
ಅಷ್ಟರಲ್ಲಿ ”ಭಾಗ್ಯಾ ಬಾಯಿಲ್ಲಿ ಊಟಕ್ಕೆ ಸಿದ್ಧಪಡಿಸು, ಅಪ್ಪ ಅಂಗಡಿಗೆ ಬೀಗಹಾಕಿ ಬರಲು ಹೋಗಿದ್ದಾರೆ. ತಂಗಿಯರನ್ನೂ ಕರೆ. ಎಲ್ಲರೂ ಒಟ್ಟಿಗೆ ಕುಳಿತುಬಿಡಿ. ಊಟಮುಗಿಸಿ ಸ್ವಲ್ಪ ರೆಸ್ಟ್‌ಮಾಡಿ ಆಮೇಲೆ ಮುಂದಿನ ರೂಮಿನಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿರುವ ಪುಸ್ತಕಗಳನ್ನು ಜೋಡಿಸುವಿರಂತೆ. ನಾಳೆ ನಾಡಿದ್ದರಿಂದ ದಿನವೂ ಸ್ವಲ್ಪ ಸ್ವಲ್ಪ ಮನೇಲಿರೋ ಧೂಳುದುಂಬು ತೆಗೆದು ಸ್ವಚ್ಛಮಾಡಿ. ಪರೀಕ್ಷೆ ಪರೀಕ್ಷೆ ಅಂತ ಆ ಕಡೆ ಗಮನ ಕೊಟ್ಟು ಈ ಕಡೆಯೆಲ್ಲಾ ತುಂಬಾ ಗಲೀಜಾಗಿದೆ ಎನ್ನಿಸುತ್ತಿದೆ” ಎಂದು ಹೇಳುತ್ತಿದ್ದಂತೆ ಭಟ್ಟರು ಆಗಮಿಸಿದರು.
ತನ್ನ ಹೆಂಡತಿ ಹೇಳುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡವರೇ ”ಅವ್ವಯ್ಯಾ ಲಕ್ಷ್ಮೀ ಮಂಗಳಕಾರ್ಯವೇನಾದರೂ ಪಕ್ಕಾ ಆದರೆ ಮನೆಗೆಲ್ಲಾ ಸುಣ್ಣಬಣ್ಣ ಮಾಡಿಸಲೇಬೇಕು. ಆಗ ಒಮ್ಮೆಗೇ ಒಪ್ಪ ಓರಣ ಮಾಡಿಸಿದರಾಯ್ತು. ಸುಮ್ಮನೆ ಏಕೆ ಮಕ್ಕಳ ಕೈಯಲ್ಲಿ ಮಾಡಿದ್ದೇ ಕೆಲಸ ಮಾಡಿಸುತ್ತೀಯೆ” ಎಂದು ಹೇಳುತ್ತಾ ಮನೆಯ ಹಿತ್ತಲಲ್ಲಿದ್ದ ಹೊರಬಚ್ಚಲು ಕಡೆ ಕೈಕಾಲು ತೊಳೆಯಲು ನಡೆದರು. ಊಟದ ಮನೆಗೆ ಬಂದ ಭಟ್ಟರು ಎದುರು ಸಾಲಿನಲ್ಲಿ ಸಾಲಾಗಿ ಇಟ್ಟಿದ್ದ ತಟ್ಟೆಗಳನ್ನು ನೋಡಿದರು. ”ಅರೆ ! ಮಕ್ಕಳೇ ನೀವ್ಯಾರೂ ಇನ್ನೂ ಊಟಮಾಡಿಲ್ಲವೇ? ಲಕ್ಷ್ಮೀ ಇವರುಗಳೆಲ್ಲ ಸ್ಕೂಲಿಗೆ ಹೋಗುವಾಗ ಬೇಗ ಊಟಮಾಡಿ ಅಭ್ಯಾಸವಾಗಿರುತ್ತೆ. ಇಷ್ಟೊತ್ತು ಕಾಯಿಸಿದ್ದೀ, ಬೇಗ ಊಟ ಹಾಕಬಾರದಿತ್ತೆ” ಎಂದರು.
”ಹೂ..ಹಾಕಬಹುದಿತ್ತು. ಆದರೆ ನಮ್ಮಲ್ಲಿ ಬಹುತೇಕರ ಮನೆಗಳಲ್ಲಿ ಎರಡೇ ಊಟ ಮಾಡುವ ಪದ್ಧತಿ ಇಟ್ಟುಕೊಂಡವರೇ ಜಾಸ್ತಿ. ಈಗ ಇಲ್ಲಿ ನಾಲ್ಕು ಸಾರಿ ಬಾಯಾಡಿಸುವುದನ್ನು ಕಲಿತುಬಿಟ್ಟರೆ ಅಲ್ಲಿಗೆ ಹೋದಾಗ ಹೊಂದಿಕೊಳ್ಳುವುದು ಕಷ್ಟವಾದೀತು. ಅಭ್ಯಾಸವಾಗಲೀಂತ ಹೀಗೆ, ಅಲ್ಲದೆ ನಾನೇನು ಅವರುಗಳಿಗೆ ಎಲ್ಲಾ ದಿನಗಳಲ್ಲೂ ಹೀಗೆ ಇರಿಸೋಲ್ಲ. ಶಾಲೆಗೆ ರಜೆಯಿದ್ದಾಗ ಮಾತ್ರ. ಏಕೆ ನೀವು ಮರೆತಿರಬಹುದು. ನಾನು ಈ ಮನೆಗೆ ಸೊಸೆಯಾಗಿ ಬಂದ ಹೊಸದರಲ್ಲಿ ಹಿರಿಯರು, ನಿಮ್ಮದು, ಎಲ್ಲರದ್ದೂ ಊಟ ಉಪಚಾರವಾದ ಮೇಲಲ್ಲವೇ ನನ್ನ ಸರದಿ ಬರುತ್ತಿದ್ದದ್ದು. ಅಷ್ಟರಲ್ಲಿ ನನಗೆ ಹೊಟ್ಟೆ ಹಸಿದು ಸಂಕಟವಾಗುತ್ತಿತ್ತು. ಬಸಿರು, ಬಾಣಂತನಗಳಲ್ಲಿ ಸ್ವಲ್ಪ ರಿಯಾಯಿತಿ ಇತ್ತು. ಅವೆಲ್ಲ ಬವಣೆಗಳನ್ನು ನನ್ನ ಮಕ್ಕಳು ಅನುಭವಿಸುವುದು ಬೇಡಾಂತ ಈರೀತಿ ಮಧ್ಯೆ ಮಧ್ಯೆ ಅಭ್ಯಾಸವಾಗಿದ್ದರೆ ಮುಂದೆ ಅವರು ಹೋದಮನೆಗಳಲ್ಲಿ ನಿಭಾಯಿಸಲು ಸುಲಭವಾಗುತ್ತದೆ ಅಂತ ಅಷ್ಟೇ. ನನಗೇನು ಅವರುಗಳ ಮೇಲೆ ಅಕರಾಸ್ತೆ ಇಲ್ಲವೆಂದುಕೊಂಡಿರಾ? ”ಎಂದಳು ಲಕ್ಷ್ಮಿ.
ಊಟಕ್ಕೆ ಸಿದ್ಧತೆ ಮಾಡುತ್ತಿದ್ದ ಭಾಗ್ಯಳಿಗೆ ತನ್ನ ತಾಯಿಯ ಮುಂದಾಲೋಚನೆ ಹಿಡಿಸಿದರೂ ಒಳಗೊಳಗೇ ನಗು ಬಂತು. ಹಬ್ಬ ಹರಿದಿನಗಳಲ್ಲಿ, ನೆಂಟರಿಷ್ಟರು ಬಂದಾಗ, ಹಿರಿಯರ ಪೂಜಾ ದಿನಗಳಲ್ಲಿಯೂ ಆಯಾ ದಿನಗಳ ಪದ್ಧತಿ, ಸಂಪ್ರದಾಯಗಳಂತೆ ವಿಶೇಷ ಖಾದ್ಯಗಳ ಅಡುಗೆ ತಯಾರಾಗುತ್ತಿತ್ತು. ಮಿಕ್ಕ ದಿನಗಳಲ್ಲಿ ಅನ್ನ, ಹುಳಿ, ತಿಳಿಸಾರು, ಪಲ್ಯ, ಒಮ್ಮೊಮ್ಮೆ ಕೊಸಂಬರಿ, ಹಪ್ಪಳ, ಉಪ್ಪಿನಕಾಯಿ, ಮೊಸರು ಇತ್ಯಾದಿಗಳಷ್ಟೇ. ಆದರೆ ಬೇರೆಬೇರೆ ಕಾಳುಗಳು, ತರಕಾರಿ, ಸೊಪ್ಪು ಬಳಸಿ ಬಹಳ ರುಚಿಯಾಗಿ ಅಡುಗೆ ಮಾಡುತ್ತಿದ್ದ ಅಮ್ಮ ನಮಗೆಲ್ಲಾ ಅತ್ಯಂತ ಪ್ರೀತಿಯಿಂದ ಉಣಬಡಿಸುತ್ತಿದ್ದಳು. ಹಾಗೇ ತಯಾರಿ ಮಾಡುವ ವಿಧಾನವನ್ನೂ ಹೇಳಿಕೊಡುತ್ತಿದ್ದಳು. ಶಾಲೆಗೆ ಹೋಗುವಾಗ ಹುಳಿಯನ್ನ ಬಡಿಸಿ, ಮೊಸರನ್ನವನ್ನು ಡಬ್ಬಿಗಳಿಗೆ ಹಾಕಿಕೊಡುತ್ತಿದ್ದಳು. ಸಂಜೆ ಶಾಲೆಯಿಂದ ಬಂದೊಡನೆ ಬಟ್ಟೆ ಬದಲಾಯಿಸಿ ಕೈಕಾಲು ಮುಖ ತೊಳೆದ ಕೂಡಲೇ ಒಗ್ಗರಣೆ ಹಾಕಿಟ್ಟ ಕಡಲೆಪುರಿ, ಹುರಿದ ಅವಲಕ್ಕಿ, ಸುಟ್ಟ ಹುರುಳಿ ಹಪ್ಪಳ, ಏನೂ ಇಲ್ಲದಿದ್ದರೆ ಕೊಬ್ಬರಿಬೆಲ್ಲ ಕೈಗಿಡುತ್ತಿದ್ದಳು. ಪಾಠದ ಕಾರ್ಯಕ್ರಮ ಮುಗಿದ ಕೂಡಲೇ ಊಟಕ್ಕೆ ಬಡಿಸುತ್ತಿದ್ದಳು. ಶಾಲೆಗೆ ರಜಾಇದ್ದ ದಿವಸಗಳಲ್ಲಿ ಊಟ ತಡವಾಗುತ್ತದೆಂದು ಎಲ್ಲರಿಗೂ ಒಂದು ಚಿಕ್ಕ ಕಪ್ಪಿನಲ್ಲಿ ಹಾಲು, ಸ್ವಲ್ಪ ಹುರಿಟ್ಟನ್ನು, ಅಥವ ಮೆಂತ್ಯದಿಟ್ಟನ್ನೋ ತಿನ್ನಲು ಕೊಡುತ್ತಿದ್ದಳು. ಈಗ ನೋಡಿದರೆ ಅಪ್ಪನ ಮುಂದೆ ಹೀಗೆ ಹೇಳುವುದನ್ನು ಕೇಳಿದರೆ ನಾವು ಮುಂದೆ ಹೇಗಿರಬೇಕೆಂಬುದರ ಸೂಚನೆ. ಅಬ್ಬಾ ! ಅಮ್ಮಾ ..ನಿನ್ನ ಸಮಯಸ್ಫೂರ್ತಿ ನನ್ನಲ್ಲೂ ಯಾವಾಗಲೂ ಸ್ಫುರಿಸುವಂತೆ ಮಾಡು ಎಂದು ಆಶಿಸಿದಳು.
ಎಲ್ಲರೂ ಊಟ ಮುಗಿಸಿ ಅವರವರ ತಟ್ಟೆಗಳನ್ನೆತ್ತಿ ತೊಳೆದಿಟ್ಟು ನೆಲವನ್ನು ಗೋಮಯಮಾಡಿ ಹೊರನಡೆದರು. ಭಾಗ್ಯ ತನ್ನಮ್ಮನಿಗೆ ಅವರೇ ಬಡಿಸಿಕೊಳ್ಳುತ್ತೇನೆಂದರೂ ಕೇಳದೆ ತಾನೇ ನಿಂತು ಊಟಬಡಿಸಿ ಉಪಚಾರ ಮಾಡಿದಳು. ಈಗಲಾದರೂ ಅಮ್ಮ ಏನಾದರೂ ಹೇಳುತ್ತಾಳೇನೋ ಎಂದು ನಿರೀಕ್ಷಿಸಿದಳು. ಆದರೆ ಲಕ್ಷ್ಮಿ ಯಾವ ವಿಷಯವನ್ನೂ ಅವಳೆದುರಿನಲ್ಲಿ ಬಾಯಿಬಿಡದೆ ಮೌನವಾಗಿ ಊಟಮುಗಿಸಿ ಎದ್ದಳು. ಇದರಿಂದ ಭಾಗ್ಯಳಿಗೆ ನಿರಾಸೆಯಾದರೂ ಮಿಕ್ಕ ಪದಾರ್ಥಗಳನ್ನು ಬೇರೆ ಪಾತ್ರೆಗಳಿಗೆ ತೆಗೆದಿಟ್ಟು ಅಲ್ಲೆಲ್ಲವನ್ನೂ ಸ್ಥಳ ಸ್ವಚ್ಛ್ಛಮಾಡಿ ಹೊರಬಂದಳು.
ಅಡುಗೆ ಮನೆಯಿಂದ ಹೊರಗೆ ಬಂದ ಭಾಗ್ಯ ಸೀದಾ ತಾವು ಅಭ್ಯಾಸ ನಡೆಸುತ್ತಿದ್ದ ರೂಮಿನ ಕಡೆ ನಡೆದಳು. ಅವಳ ಮೊದಲನೆಯ ತಂಗಿ ಭಾವನಾ ಅಕ್ಕನನ್ನು ಹಿಂಬಾಲಿಸಿದಳು. ಆಗಲೇ ರೂಮಿನ ಬಾಗಿಲು ತೆಗೆದು ಪುಸ್ತಕಗಳನ್ನು ಜೋಡಿಸಿಡುತ್ತಿದ್ದ ಮತ್ತಿಬ್ಬರು ತಂಗಿಯರು ಅಕ್ಕಂದಿರು ಬಂದಿದ್ದು ನೋಡಿ ”ಇವೆಲ್ಲವನ್ನೂ ಅಟ್ಟದ ಮೇಲಿಟ್ಟು ಬಿಡೋಣವಾ? ಇಲ್ಲಾ ಇಲ್ಲೇ ಗೂಡಿನಲ್ಲಿ ಇಡೋಣವಾ?” ಎಂದು ಕೇಳಿದರು.
”ಏ..ಅಟ್ಟಗಿಟ್ಟ ಏನೂ ಬೇಡ, ಇಲ್ಲೇ ದೊಡ್ಡದಾಗಿರುವ ಗೋಡೆಯ ಗೂಡಿನಲ್ಲಿ ಇಡಿ. ರಿಜಲ್ಟ್ ಬರುವವರೆಗೂ ಅಲ್ಲೇ ಇರಲಿ. ಆಮೇಲೆ ಅಮ್ಮ ಏನು ಹೇಳುತ್ತಾಳೋ ಕೇಳೋಣ” ಎಂದ ಭಾವನಾಳ ಮಾತಿಗೆ ”ಹೌದಾ, ಹಾಗಾದರೆ ನೋಡು ಇಲ್ಲೇ ಎಲ್ಲವನ್ನೂ ಜೋಡಿಸಿದ್ದೇವೆ” ಎಂದು ತಮ್ಮ ಕೆಲಸವಾಯ್ತೆಂದು ಊಟಕ್ಕೆ ಮೊದಲು ಆಡುತ್ತಿದ್ದ ಪಗಡೆಯಾಟ ಮುಂದುವರಿಸುವ ಉಮೇದಿನಿಂದ ಮನೆಯೊಳಕ್ಕೆ ನಡೆದರು.
ಇದ್ಯಾವುದರ ಕಡೆ ಗಮನವೇ ಇಲ್ಲದಂತೆ ಕಿಟಕಿಗೆ ಒರಗಿಕೊಂಡು ಆಚೆ ನೋಡುತ್ತಾ ನಿಂತಿದ್ದ ಅಕ್ಕನನ್ನು ನೋಡಿದಳು ಭಾವನಾ. ಒಳ್ಳೆಯ ಶಿಲಾಬಾಲಿಕೆಯನ್ನು ನೆನಪಿಸುವಂತಿತ್ತು ಆ ಭಂಗಿ. ಎಷ್ಟು ಚೆನ್ನಾಗಿದ್ದಾಳೆ ನಮ್ಮಕ್ಕ, ಹಾ..ನಮ್ಮ ಹೆತ್ತವರ ಜೋಡಿಯೂ ಚಂದವಾಗಿದೆ. ನಾವೂ ಎಲ್ಲರೂ ಸುಂದರಿಯರೇ. ಆದರೆ ಅಕ್ಕನು ಎಲ್ಲರಿಗಿಂತಲೂ ಒಂದುತೂಕ ಹೆಚ್ಚೇ ಎಂದು ಹೇಳಬಹುದು. ನಾನು ಹಾಗೆಂದಾಗಲೆಲ್ಲ ಅಮ್ಮ ಹರಯದಲ್ಲಿ ಎಂಥವರೂ ಚಂದ ಕಾಣಿಸುತ್ತಾರೆ. ಅದು ಮರೆಯಾಗುವುದರೊಳಗೆ ಅವರಿಗೊಂದು ಗೂಡು ಮಾಡಿಬಿಡಬೇಕು ಎನ್ನುತ್ತಿದ್ದಳು. ಅವಳ ಮಾತಿನಲ್ಲೂ ಹುರುಳಿದೆ ಅನ್ನಿಸುತ್ತಿತ್ತು. ಅದಕ್ಕೇ ಅಮ್ಮ ನಾಲ್ಕು ಮಕ್ಕಳ ತಾಯಿಯಾದರೂ ಈಗಲೂ ಅವಳ ಚೆಲುವು ಮಾಸಿಲ್ಲ. ಶಿಸ್ತಿನ ಜೀವನ, ಹಿರಿಯರಿದ್ದಾಗ ಎಲ್ಲಾ ಮನೆಗೆಲಸ. ಅವರೆಲ್ಲ ಸರಿದು ಹೋದಮೇಲೆ ಪ್ರತಿದಿನ ಅಪ್ಪನೊಡನೆ ಜಮೀನಿನ ಕಡೆ ಹೋಗದಿದ್ದರೂ ನಮಗೆ ಶಾಲಾ ರಜೆಯಿದ್ದಾಗಲೆಲ್ಲಾ ಬೆಳ್ಳಂಬೆಳಗ್ಗೇನೇ ಹೊರಟುಬಿಡುತ್ತಾಳೆ. ಆ ದಿನ ಅಡುಗೆ ಮನೆ ಕೆಲಸಗಳೆಲ್ಲ ನಮ್ಮಗಳದ್ದೇ. ಎಲ್ಲವನ್ನೂ ಕಲಿತಿರಬೇಕೆಂಬ ಬಯಕೆ ಆಕೆಯದ್ದು. ಹೂ..ಈಗ ಮಕ್ಕಳ ಮದುವೆಯ ಯೋಚನೆ ಕಡೆ ಗಮನ ಹರಿದಿದೆ. ಸಹಜ ತಾನೇ.
ಅದೇಕೆ ಅಕ್ಕ ಹೀಗೆ ಚಡಪಡಿಸುತ್ತಿದ್ದಾಳೆ? ಎಂದುಕೊಂಡು ಮೆತ್ತಗೆ ಅವಳು ನಿಂತಕಡೆಗೆ ಹೋಗಿ ‘ಅಕ್ಕಾ’ ಎಂದು ಕರೆದಳು. ‘ಏನು ಭಾವನಾ? ‘ಎಂದು ಭಾಗ್ಯ ಅವಳ ಕಡೆ ತಿರುಗಿದಳು. ಅಕ್ಕನ ಚಿಂತೆ ಹೊತ್ತ ಮುಖವನ್ನು ನೋಡಿ ಒಂದು ಕ್ಷಣ ಅಯ್ಯೋ ಎನ್ನಿಸಿತು ಭಾವನಾಳಿಗೆ.
ಆದರೆ ತಕ್ಷಣವೇ ಎಚ್ಚೆತ್ತುಕೊಂಡು ”ಅಕ್ಕಾ ನೀನು ಇಷ್ಟೊಂದು ತಲೆಕೆಡಿಸಿಕೊಳ್ಳುವಂಥಾದ್ದೇನಾಗಿದೆ? ಎಂದಾದರೊಂದು ದಿನ ಮದುವೆಯಾಗಿ ಈ ಮನೆಯಿಂದ ಹೋಗಲೇಬೇಕಲ್ಲವೇ? ಅದು ಈಗಾದರೇನು, ಆಮೇಲಾದರೇನು, ಎಲ್ಲಾ ಒಂದೇ. ನಾವು ಅದೃಷ್ಟವಂತರೆಂದೇ ಹೇಳಬೇಕು. ಇದ್ದುದರಲ್ಲಿ ಇಷ್ಟಾದರೂ ಓದಲಿಕ್ಕೆ ಬಿಟ್ಟಿದ್ದಾರೆ. ಅದು ಅಮ್ಮನೂ ಓದಿದ್ದರಿಂದ. ನಮ್ಮವರೇ ಆದ ಗೀತಾಳ ಮನೆಯ ವಿಷಯ ನಿನಗೂ ಗೊತ್ತಲ್ಲವಾ? ಅವಳು ಎಷ್ಟು ಚೆನ್ನಾಗಿ ಓದುತ್ತಿದ್ದಳು. ದೊಡ್ಡವಳಾದ ಕೂಡಲೇ ಅವರ ಮನೆಯವರು ಶಾಲೆ ಬಿಡಿಸೇಬಿಟ್ಟರು. ಈ ತರಹದ ಎಷ್ಟೋ ಪ್ರಸಂಗಗಳು ನಮ್ಮ ಕಣ್ಮುಂದೆಯೇ ನಡೆಯುತ್ತಿವೆ. ಮೂಲೆಮನೆ ಅಚ್ಯುತರ ತಂಗಿ ಯಶೋದಾ, ಮಗ್ಗುಲ ಮನೆಯ ಸಾವಿತ್ರಿ, ಎದುರುಮನೆ ಮಾಯಾ, ಒಬ್ಬರೇ ಇಬ್ಬರೇ. ಈಗಾಗಲೇ ಅವರಿಗೆಲ್ಲಾ ಮದುವೆಯೂ ಆಗಿಹೋಗಿದೆ. ಮದುವೆಗೇನು ಅವಸರ, ನಾವಿನ್ನೂ ಓದಬೇಕು ಅಂತೆಲ್ಲ ಹೇಳಿದರೆ ಹಿರಿಯರು ಕೇಳಿಬಿಡುತ್ತಾರಾ? ನಮ್ಮ ಸುತ್ತಮುತ್ತಲಿನವರು ಸುಮ್ಮನಿರುತ್ತಾರಾ? ಇಲ್ಲದ ಕಥೆ ಕಟ್ಟಿ ಹಬ್ಬಿಸಿ ಖುಷಿಪಡುತ್ತಾರೆ. ಅಲ್ಲದೆ ವರ್ಷಗಳು ಮುಂದಕ್ಕೆ ಹೋದಂತೆಲ್ಲ ಹೆಣ್ಣು ಮಕ್ಕಳನ್ನು ತಂದುಕೊಳ್ಳುವುದಕ್ಕೇ ಹಿಂದೆಗೆಯುವ ಈ ಪರಿಸ್ಥಿತಿಯಲ್ಲಿ ಅವರಾಗಿಯೇ ನಮ್ಮಮನೆಗೆ ಹೇಳಿ ಕಳುಹಿಸಿ ಉತ್ಸಾಹ ತೋರುತ್ತಿರುವಾಗ ನೀನು… ‘ಚಿಕ್ಕವಳ ಬಾಯಲ್ಲಿ ದೊಡ್ಡ ಮಾತು’ ಅಂದುಕೊಳ್ಳಬೇಡ, ನಾವೆಷ್ಟೇ ಓದಿದರೂ ಹೊರಗೆ ಕೆಲಸಕ್ಕೆ ಕಳುಹಿಸುವ ಗಂಡಸರ ಸಂಖ್ಯೆ ವಿರಳ. ಅಡುಗೆಮನೆ ಕೆಲಸ ನಮ್ಮನ್ನು ಬಿಡುತ್ತದೆಯೇ? ಅದರ ಬದಲು ಸಂತೋಷವಾಗಿ ಮದುವೆ ಮಾಡಿಕೊಳ್ಳುವ ಕಡೆ ಗಮನ ಹರಿಸು. ಬದುಕನ್ನು ನಡೆಸಿ ಹೆತ್ತವರಿಗೆ ನೆಮ್ಮದಿ ನೀಡು ಬಾ. ಅಮ್ಮ ನೆನ್ನೆ ಹೇಳಿಕೊಟ್ಟಿದ್ದಳಲ್ಲ ಹತ್ತಿಯ ಹಾರ ಮಾಡೋಣ” ಎಂದು ಅಕ್ಕನ ಕೈ ಹಿಡಿದುಕೊಂಡು ಜಗ್ಗಿದಳು ಭಾವನಾ.
ಬಂದದ್ದನ್ನು ಹಾಗೇ ಸ್ವೀಕರಿಸಿ ಬದುಕು ನಡೆಸಬೇಕೆಂಬ ತಿಳುವಳಿಕೆ ಹೇಳಿದ ತಂಗಿಯನ್ನು ನೋಡಿ ಅಶ್ಚರ್ಯವಾಯಿತು ಭಾಗ್ಯಳಿಗೆ. ಅವಳು ಹೇಳಿದ ಮಾತಿನಲ್ಲಿದ್ದ ಹಿರಿಯರಿಗೆ ಹೆಣ್ಣುಮಕ್ಕಳ ಜವಾಬ್ದಾರಿಯ ವಾಸ್ತವಾಂಶದ ಚಿತ್ರಣವನ್ನು ತೆಗೆದಿಟ್ಟಂತೆ ಕಾಣಿಸಿತು.
ತನ್ನ ಯೋಚನೆಯನ್ನು ಪಕ್ಕಕ್ಕೆ ಸರಿಸಿ ತಮಗೆ ಹೇಳಿದ ಕೆಲಸದತ್ತ ಗಮನ ಹರಿಸಿದಳು ಭಾಗ್ಯ. ಮಾರನೆಯ ದಿನ ಬೆಳಗ್ಗೆ ಜಮೀನಿನ ಹತ್ತಿರ ಹೋಗಿ ಮನೆಗೆ ಹಿಂತಿರುಗಿ ಬಂದ ಶಂಭುಭಟ್ಟರು ಬರುತ್ತಿದ್ದಂತೆಯೇ ”ಲೆ ಲಕ್ಷ್ಮೀ, ದಾರಿಯಲ್ಲಿ ಸುಬ್ಬಣ್ಣನ ತಂದೆ ಕೇಶವಯ್ಯನವರು ಸಿಕ್ಕಿದ್ದರು. ಮುಂದಿನ ವಾರದಲ್ಲಿ ಒಳ್ಳೆಯ ದಿನಗಳಿವೆ. ಭಾಗ್ಯಳನ್ನು ಅವರು ಹೇಳಿದಂತೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬರೋಣ. ಅ ನಂತರ ದಂಪತಿಗಳು ನಮ್ಮ ಮನೆಗೇ ಬಂದುಬಿಡಿ. ಅಲ್ಲಿಂದಲೇ ಅವರ ಮನೆಗೆ ಹೋಗಿ ಮಿಕ್ಕ ವಿಷಯದ ಮಾತುಕತೆಗಳನ್ನು ಮುಗಿಸಿಬಿಡೋಣ” ಎಂದರು. ಅಲ್ಲದೆ ಒಂದೆರಡು ದಿನ, ಮುಹೂರ್ತಗಳನ್ನು ಗುರುತು ಹಾಕಿಕೊಟ್ಟಿದ್ದಾರೆ. ನೋಡು ಎಂದು ಜೇಬಿನಿಂದ ಚೀಟಿಯೊಂದನ್ನು ತೆಗೆದು ಹೆಂಡತಿಯ ಕೈಯಿಗೆ ಕೊಟ್ಟರು.
ಗಂಡ ಕೊಟ್ಟ ಚೀಟಿಯನ್ನು ತೆಗೆದುಕೊಳ್ಳತ್ತಾ” ರೀ, ನನ್ನದೊಂದು ಮಾತು, ಸುಬ್ಬಣ್ಣ ಹೇಳಿದಾಗ ನನ್ನ ತಲೆಗೆ ಹೊಳೀಲೇ ಇಲ್ಲರೀ” ಎಂದಳು.
ಹೆಂಡತಿಯ ಮಾತನ್ನು ಕೇಳಿದ ಭಟ್ಟರು ಒಂದುಕ್ಷಣ ತಬ್ಬಿಬ್ಬಾದರೂ ಸಾವರಿಸಿಕೊಂಡು ”ಅದೇನು ಮಾತು ಲಕ್ಷ್ಮೀ, ಏಕೆ ಸಂಬಂಧ ಒಪ್ಪಿಗೆಯಾಗಲಿಲ್ಲವೇ? ಅಲ್ಲಾ ಆವತ್ತು ತುಂಬ ಖುಷಿಪಟ್ಟೆ. ಏನು ವಿಷಯ” ಎಂದು ಪ್ರಶ್ನಿಸಿದರು.
”ಛೇ ಛೇ ಬಿಡ್ತು ಅನ್ನಿ, ಸಂಬಂಧದ ವಿಚಾರವಲ್ಲ. ಅವರು ನಮ್ಮ ಹುಡುಗಿಯನ್ನು ಯಾರ ಮನೆಗೂ ಬೇಡ ದೇವಸ್ಥಾನಕ್ಕೆ ಕರೆದುಕೊಂಡು ಬರಲಿ. ಅಲ್ಲೇ ಹೆಣ್ಣು ನೋಡುವ ಶಾಸ್ತ್ರ ಮುಗಿಸಿಬಿಡೋಣ ಅಂತ ಹೇಳಿ ಕಳುಹಿಸಿದರಲ್ಲ. ನನಗ್ಯಾಕೋ ಅದು ಬೇಡವೆಂದು ಅನ್ನಿಸುತ್ತಿದೇರೀ. ಬೆಳಗ್ಗೆಯಾಗಲೀ, ಸಂಜೆಯಾಗಲೀ ದೇವಸ್ಥಾನದಲ್ಲಿ ಜನರಿದ್ದೇ ಇರುತ್ತಾರೆ. ಮಟಮಟ ಮಧ್ಯಾನ್ಹ ಸರಿಯಾಗಲ್ಲ. ನಮ್ಮ ಮನೆಗೆ ಅವರು ಬರುವುದು ಬೇಡವೆಂದಾದರೆ ಸುಬ್ಬಣ್ಣನವರ ಮನೆಯಲ್ಲೇ ಏರ್ಪಾಟು ಮಾಡಿದರಾಯ್ತು. ನಮಗೂ ಮಕ್ಕಳಿಗೂ ಅವರ ಮನೆ ಬೇರೆಬೇರೆ ಎಂದೆನಿಸಿಲ್ಲ. ಆಪ್ತತೆಯ ತಾಣ. ಕೇಶವಣ್ಣನನ್ನು ಕೇಳಿ ನೋಡೋಣವಾ?” ಎಂದಳು ಲಕ್ಷ್ಮೀ. ಅದನ್ನು ಕೇಳಿದ ಭಟ್ಟರು ಹೆಂಡತಿಯ ಮಾತಿನ ಹಿಂದೆ ಇರುವ ಮಗಳ ಮೇಲಿನ ಕಾಳಜಿಯನ್ನು ಅರ್ಥ ಮಾಡಿಕೊಂಡು ”ಆಯ್ತು ಲಕ್ಷ್ಮಿ, ಸ್ನಾನ ಪೂಜೆ ಮುಗಿಸಿ ನಾವೇ ಅಲ್ಲಿಗೆ ಹೋಗಿ ಬರೋಣ” ಎಂದು ಸ್ನಾನದ ಮನೆಯತ್ತ ನಡೆದರು.
ತಂದೆಯು ಸ್ನಾನಮಾಡಿ ಬರುವಷ್ಟರಲ್ಲಿ ಪೂಜೆಗೆ ಅಣಿಮಾಡಲೆಂದು ದೇವರ ಮನೆಯಲ್ಲಿದ್ದ ಭಾಗ್ಯಳಿಗೆ ಅಪ್ಪ ಅಮ್ಮನ ನಡುವೆ ನಡೆದ ಮಾತುಕತೆಗಳು ಕೇಳಿಸಿದ್ದವು. ಅಬ್ಬಾ ! ಅಮ್ಮ ಇಷ್ಟಾದರೂ ಅರ್ಥಮಾಡಿಕೊಂಡಳಲ್ಲ, ಸದ್ಯ ದೇವಸ್ಥಾನದಲ್ಲಿ ಸೇರುವ ಜನಗಳ ನಡುವೆ ಹೆಣ್ಣು ನೋಡುವ ಶಾಸ್ತ್ರ !..ಊಹಿಸಿಕೊಳ್ಲಲೂ ನನ್ನ ಮನಸ್ಸು ಒಪ್ಪಿರಲಿಲ್ಲ. ಆದರೇನು ಮಾಡುವುದು, ಇದ್ಯಾವ ನಿಯಮ? ಪದ್ಧತಿಯೋ? ಹೆಣ್ಣು ಕೊಡುವವರ ಮನೆಗೆ ಗಂಡಿನವರು ಬಂದರೆ ಅವರ ಗೌರವಕ್ಕೆ ಮುಕ್ಕಾಗುತ್ತದೆಯೇ? ಯಾವುದೋ ಓಬಿರಾಯನ ಕಾಲದಲ್ಲಿ ಅದ್ಯಾವ ಪುಣ್ಯಾತ್ಮ ಇಂತಹ ಪದ್ಧತಿಯನ್ನು ಜಾರಿಗೆ ತಂದನೋ ತಿಳಿಯದು, ಈಗ ನಮ್ಮಮ್ಮನ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕರೆ ಸಾಕಪ್ಪಾ. ಸುಬ್ಬಣ್ಣನ ಮನೆ ನಮಗೆಲ್ಲ ತವರುಮನೆ ಇದ್ದಂತಿದೆ. ದೇವರೇ ಅವರುಗಳಿಗೆ ಈ ಪ್ರಸ್ತಾಪವನ್ನು ಒಪ್ಪುವ ಮನಸ್ಸನ್ನು ಕರುಣಿಸು ಎಂದು ಬೇಡಿಕೊಂಢಳು.
ಅಪ್ಪ ಸ್ನಾನ ಮುಗಿಸಿ ದೇವರ ಮನೆಯತ್ತ ಬರುವ ಸೂಚನೆ ಸಿಕ್ಕಿದ್ದರಿಂದ ಸಿದ್ಧತೆಗಳೆಲ್ಲ ಸರಿಯಾಗಿದೆಯಾ ಎಂದು ಒಮ್ಮೆ ಕಣ್ಣಾಡಿಸಿ ಅಲ್ಲಿಂದ ಹೊರಬಂದಳು ಭಾಗ್ಯ.
‘ದೇವರ ಮನೆಯಿಂದ ಹೊರಬಂದ ಮಗಳನ್ನು ದಿಟ್ಟಿಸಿ ನೋಡಿದರು ಭಟ್ಟರು. ಅವಳ ಗಂಭೀರ ಮುಖಭಾವ ಅವರನ್ನು ಒಂದರೆಕ್ಷಣ ವಿಚಲಿತರನ್ನಾಗಿ ಮಾಡಿತು. ನನ್ನ ಮಗಳಿಗೆ ಈ ಮದುವೆ ಇಷ್ಟವಿದೆಯೋ ಇಲ್ಲವೋ ಎಂದು ಒಂದು ಮಾತು ಕೇಳಲಿಲ್ಲ. ಲಕ್ಷ್ಮಿಯಾದರೂ ಕೇಳಿದ್ದಾಳೆಯೋ, ಈಗ ಹೇಗಿದ್ದರೂ ಕೇಶವಯ್ಯನವರ ಮನೆಗೆ ಹೋಗುವ ದಾರಿಯಲ್ಲಿ ಕೇಳಿದರಾಯಿತೆಂದು ಪೂಜೆ ಮಾಡಲು ಒಳ ನಡೆದರು. ಪೂಜೆ ಮುಗಿಸಿ ಹೊರಬಂದ ಭಟ್ಟರು ”ಲಕ್ಷ್ಮೀ ಹೋಗೋಣವೇ?” ಎಂದು ಕೇಳಿದರು.
”ಈಗ ಬೇಡಿ, ಅವರ ಮನೆಯಲ್ಲಿಯೂ ಈಗ ಊಟದ ವೇಳೆ. ನಾವೂ ಊಟ ಮುಗಿಸಿಯೇ ಹೋಗೋಣ. ಸಂಜೆಯವರೆಗೆ ಕೇಶವಣ್ಣನವರು ಎಲ್ಲಗೂ ಹೋಗುವುದಿಲ್ಲ. ಬನ್ನಿ ಊಟಕ್ಕೆ ಸಿದ್ಧವಾಗಿದೆ ” ಎಂದು ಕರೆದಳು ಲಕ್ಷ್ಮಿ. ಸರಿ ಇಬ್ಬರೂ ಊಟ ಮುಗಿಸಿ ಮಿಕ್ಕ ಕೆಲಸಗಳ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿ ಮನೆಯಕಡೆ ನಿಗಾ ಇಡಲು ಎಚ್ಚರಿಕೆ ಹೇಳಿ ಕೇಶವಯ್ಯನವರ ಮನೆಯ ಕಡೆ ಹೆಜ್ಜೆ ಹಾಕಿದರು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=34753
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
ಬಹಳ ಚೆನ್ನಾಗಿದೆ ಕಾದಂಬರಿ. ಸಹಜತೆಯಿಂದ ಕೂಡಿದ ಕಥೆ ಬಹಳ ಆಪ್ತ.
ಭಾಗ್ಯಳ ಬಾಳಿನ ಕಥಾ ಹಂದರ ಸೊಗಸಾಗಿ ಮೂಡಿಬರುತ್ತಿದೆ..ಧನ್ಯವಾದಗಳು ಮೇಡಂ
ಧನ್ಯವಾದಗಳು ನಯನ ಮೇಡಂ ಹಾಗೂ ಶಂಕರಿ ಮೇಡಂ
ಉತ್ತಮವಾಗಿ ಮೂಡಿ ಬರುತ್ತಿದೆ ಮೇಡಮ್
ಧನ್ಯವಾದಗಳು ಸಾರ್
ಆಗಿನ ಪ್ರತಿ ಮನೆಯ ಪರಿಸ್ಥಿತಿಯೂ ಇದೇ ಆಗಿರುತ್ತಿತ್ತು, ಸೊಗಸಾಗಿ ಮೂಡಿ ಬರುತ್ತಿದೆ.
ಧನ್ಯವಾದಗಳು ಗೆಳತಿ ವೀಣಾ