ವೃತ್ತಿ ಬದುಕಿನ ಹಾಸ್ಯ ರಸಾಯನ!!

Share Button

ನಾನು ಕದ್ರಾ ಯೋಜನಾ ಪ್ರದೇಶದಲ್ಲಿ ಸುಮಾರು ಎಂಟು ವರ್ಷಗಳಷ್ಟು ದೀರ್ಘ ಕಾಲ ಇದ್ದೆ. ನನ್ನ ವೃತ್ತಿಜೀವನದ ಕೆಲವು ನಗೆ ಪ್ರಸಂಗಗಳ ಕಡೆಗೆ ಗಮನ ಹರಿಸೋಣ.

ನಮ್ಮಲ್ಲಿ ಟಿಪ್ಪರ್ ಓಡಿಸುವ ಒಬ್ಬ ಚಾಲಕನಿದ್ದ. ಮಹಾರಾಷ್ಟ್ರದ ಜತ್ ಊರಿನವನು. ಅಲ್ಲಿ ಹೆಚ್ಚಾಗಿ ಕನ್ನಡ ಮಾತನಾಡುವವರಿದ್ದಾರಂತೆ. ಅವನಿಗೂ ಕನ್ನಡ ಚೆನ್ನಾಗಿ ಬರುತ್ತಿತ್ತು . ಜೊತೆಗೆ ಮರಾಠಿ ಭಾಷೆ ಸಹ ಚೆನ್ನಾಗಿ ಮಾತನಾಡುತ್ತಿದ್ದ . ನಮ್ಮ ಕನ್ನಡ ಬಲ್ಲವರೊಂದಿಗೆ ನಾವೆಲ್ಲ ಕನ್ನಡಲ್ಲೇ ಮಾತನಾಡುತ್ತಿದ್ದೆವು. ಅದು ನಮ್ಮಗಳಲ್ಲಿದ್ದ ಒಂದು ವಿಶೇಷತೆ. ನಾವು ಕೆಲಸ ಮಾಡಿದ ಎಲ್ಲ ಶಾಖೆಗಳಲ್ಲಿ ಇದನ್ನು ಪಾಲಿಸಿದ್ದೇನೆ.  ವಿಷಯಕ್ಕೆ ಬರೋಣ. ಅವನು ಒಮ್ಮೆ ಟಿಪ್ಪರ್ನಲ್ಲಿ ಕಂಪೆನಿಯ ಸಮಾನು ಹಾಕಿಕೊಂಡು ದಾಂಡೇಲಿಗೆ ಹೋಗಿದ್ದ. ಅಲ್ಲಿಗೆ ಹೋಗಬೇಕಾದರೆ ಅಣಶಿ ಘಾಟ್ ಹತ್ತಿ ಜೊಯಿಡಾ ಮುಖಾಂತರ ಹೋಗಬೇಕು. ಅದು ಬೆಳಗಾಂ ಮತ್ತು ಧಾರವಾಡಕ್ಕೆ ಹೋಗುವ ರಸ್ತೆಯಾಗಿತ್ತು. ಟಿಪ್ಪರ್ ಇಂದ ಸಾಮಾನೆಲ್ಲ ಇಳಿಸಿ ವಾಪಸ್ಸು ಬರುವವೇಳೆಗೆ ಕತ್ತಲಾಗಿದೆ. ಬರುವಾಗ ಯಾರೋ ಕದ್ರಾ ಕಡೆ ಬರುವವರು ಕೈ ಅಡ್ಡಹಾಕಿದ್ದಾರೆ. ಟಿಪ್ಪರ್ನಲ್ಲಿ ಅವನೊಬ್ಬನೇ ಇದ್ದದ್ದು. ಮಾತನಾಡಿಕೊಂಡು ಹೋಗಬಹುದೆಂದು ಹತ್ತಿಸಿಕೊಂಡಿದ್ದಾನೆ. ದಾಂಡೇಲಿ ದಾಟಿದ ಮೇಲೆ ಗಾಢವಾದ ಅರಣ್ಯ ಪ್ರದೇಶ ಶುರುವಾಗುತ್ತದೆ. ಆ ರಸ್ತೆಯಲ್ಲಿ ವಾಹನ ಸಂಚಾರವಾಗಲಿ, ಜನಸಂಚಾರವಾಗಲಿ ಬಹಳ ಕಮ್ಮಿ. ಊರುಗಳು ಸಹಾ ಬಹಳ ವಿರಳವಾಗಿ ಸಿಗುತ್ತವೆ. ಆದ್ದರಿಂದ ಜೊತೆಗೊಬ್ಬರಿರಲಿ ಎಂದು ಆ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದಾನೆ.

ಜೊಯಿಡಾ ಬಳಿ ಬಂದಾಗ ಅಲ್ಲಿನ ಪೊಲೀಸ್ ಸಹಾಯಕ ನಿರೀಕ್ಷಕರು (PSI) ಟಿಪ್ಪರನ್ನು ತಡೆದು ನಿಲ್ಲಿಸಿದ್ದಾರೆ. ದಾಖಾತಿಗಳನ್ನು ಕೇಳಿದ್ದಾರೆ. ಎಲ್ಲವನ್ನೂ ಕೊಟ್ಟಿದ್ದಾನೆ. ಕಂಪೆನಿಯ ಹೆಸರು ನೋಡಿ ಮನಸ್ಸಿನಲ್ಲಿ ಏನು ಯೋಚಿಸಿದರೋ ಗೊತ್ತಿಲ್ಲ. ತತ್ಕ್ಷಣ ಪ್ರಯಾಣಿಕರನ್ನು ಏಕೆ ಹಾಕಿಕೊಂಡು ಬಂದಿದ್ದೀಯಾ ಅಂದಿದ್ದಾರೆ. ಅವನು ಒಬ್ಬನೇ ಬರುತ್ತಿದ್ದುದರಿಂದ ಕರೆದುಕೊಂಡೆ ಸ್ವಾಮಿ ಎಂದಿದ್ದಾನೆ. ಟಿಪ್ಪರನ್ನು ಠಾಣೆಗೆ ತರಲು ಹೇಳಿದ್ದಾರೆ. ಕೊಂಡುಹೋಗಿ ನಿಲ್ಲಿಸಿದ್ದಾನೆ. ಸ್ವಲ್ಪ ಸಮಯದ ನಂತರ ದಾಖಲೆಪತ್ರಗಳನ್ನು ಕೇಳಿ ಕಂಪೆನಿ ಜಾಗಕ್ಕೆ ಹೋಗುವುದಾಗಿ ತಿಳಿಸಿದ್ದಾನೆ. ಪೊಲೀಸ್ ಸಹಾಯಕ ನಿರೀಕ್ಷಕರು ಯಾವ ಒತ್ತಡದಲ್ಲಿದ್ದರೋ ಏನೋ ಸಿಟ್ಟಿನಿಂದ ಎದ್ದು ನಮ್ಮ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. “ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ” ಅನ್ನುವಂತೆ ಆಯಿತು. ಅವನಿಗೆ ಬಯ್ದು ನಿಮ್ಮ ಕಂಪನಿಯ ಅಧಿಕಾರಿಯನ್ನು ಕರೆದುಕೊಂಡು ಬಾ ಎಂದು ಫರ್ಮಾನಿಸಿದ್ದಾರೆ!. ಸರಿ ಅವನು ಯಾವುದೋ ವಾಹನ ಹಿಡಿದು ತನ್ನ ದುಃಖ ತಾಳಲಾರದೆ ಪರಮಾತ್ಮನನ್ನು ಹೊಟ್ಟೆಯೊಳಗೆ ತುಂಬಿಕೊಂಡೆ ಬಂದಿದ್ದಾನೆ. ಬಂದವನೇ ನಮ್ಮ ಬಳಿ ನಡೆದ ವಿಷಯವನ್ನೆಲ್ಲ ಚಾಚೂ ತಪ್ಪದೆ ಹೇಳಿದ.

“ಕತ್ತೆ ಕಳೆದರೆ ಪಾಳು ಮೋಟು ಗೋಡೆ ಹಿಂದೆ ಹುಡುಕು” ಅನ್ನುವ ಮಾತಿದೆ. ವಿಷಯ ನನ್ನ ಅಂಗಳಕ್ಕೆ ಬಂತು. ನಾನು ಕದ್ರಾ ಸ್ಟೇಶನ್ ಪೊಲೀಸ್ ಸಹಾಯಕ ನಿರೀಕ್ಷಕರನ್ನು ಭೇಟಿಯಾಗಲು ಹೊರಟೆ. ಉದ್ದಿಶ್ಯ ಇಷ್ಟೇ ಜೋಯಿಡಾದ ಪೊಲೀಸ್ ಸಹಾಯಕ ನಿರೀಕ್ಷಕರ ಪೂರ್ವಾಪರ ತಿಳಿಯಬೇಕಿತ್ತು. ಅವರು ಸ್ಟೇಷನ್ ನಲ್ಲಿ ಇದ್ದರು. ಹೋಗಿ ಅವರಿಗೆ ವಂದಿಸಿದೆ. ಆತ್ಮೀಯತೆಯಿಂದ ಕೂರಲು ಹೇಳಿದರು. ಕುಶಲೋಪರಿ ನಂತರ ವಿಷಯ ಏನೆಂದು ಕೇಳಿದರು. ಜೋಯಿಡಾದಲ್ಲಿ ನಡೆದ ಘಟನೆ ಹೇಳಿ ಚಾಲಕನಿಂದ ತಪ್ಪಾಗಿದ್ದರೆ ಖಟ್ಲೆ (Case) ಹೂಡಬೇಕಿತ್ತೆಂದು, ಅದು ಬಿಟ್ಟು ಅವನಿಗೆ ಥಳಿಸಿದ್ದೇಕೆ? ಈ ವಿಷಯದಲ್ಲಿ ಸ್ವಲ್ಪ ಮಾಹಿತಿ ಬೇಕಿತ್ತೆಂದು ಹೆಸರಿನ ಸಹಿತ ಎಲ್ಲ ಕೇಳಿ ತಿಳಿದುಕೊಂಡೆ. ಅವರಿಗೆ ಗೊತ್ತಿತ್ತು ನಾನು ಆಗಾಗ ಕಾರವಾರಕ್ಕೆ ಹೋಗಿ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಬರುತ್ತಿದ್ದೆ. ಏಷ್ಟೋ ಸಲ ಸದರಿಯವರಿಗೆ ವೈರ್ಲೆಸ್ ಸಂದೇಶ ಬರುತ್ತಿತ್ತು ಕಾರವಾರದ ಪೊಲೀಸ್ ಸಹಾಯಕ ನಿರೀಕ್ಷಕರ ಕಚೇರಿಯಿಂದ ನಾನು ಅವರನ್ನು ಸಂಪರ್ಕಿಸುವಂತೆ. ಅವರು ಪ್ರಭು ಇಲ್ಲೇ ಕುಳಿತಿರಿ ಐದು ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ಹೊರಹೋದರು.  ಹತ್ತು ನಿಮಿಷಗಳ ನಂತರ ವಾಪಸ್ ಬಂದರು. ನಾನು ಜೊಯಿಡಾ ಠಾಣಾಧಿಕಾರಿಯವರಿಗೆ ಮಾತನಾಡಿದ್ದೇನೆ, ನಾಳೆ ನಿಮ್ಮ ಚಾಲಕನನ್ನು ಅಲ್ಲಿಗೆ ಕಳುಹಿಸಿಕೊಡಿ, ಟಿಪ್ಪರ್ ಬಿಟ್ಟು ಕಳಿಸುತ್ತಾರೆ ಎಂದರು. ಏಕೆ ಸರ್ ಏನಾಯಿತು ಎಂದು ಕೇಳಿದೆ. ಅವರು ಆ ಮನುಷ್ಯ ಸಹ ಒಳ್ಳೆಯವರೇ, ಏನೋ ವಿಷಗಳಿಗೆ, ಸ್ವಲ್ಪ ದುಡುಕಿದ್ದಾರೆ, ನೀವು ಚಾಲಕನನ್ನು ಕಳಿಸಿಕೊಡಿ, ಇದನ್ನೆಲ್ಲ ಮೇಲಧಿಕಾರಿಗಳಿಗೆ ತಿಳಿಸುವ ಅಗತ್ಯವಿಲ್ಲ ಎಂದು ಹೇಳಿ ಬೀಳ್ಕೊಟ್ಟರು.

ಮರುದಿನ ದಿನ ಬೆಳಿಗ್ಗೆ ಚಾಲಕನನ್ನು ಜೊಯಿಡಾಗೆ ಕಳುಹಿಸಿಕೊಟ್ಟೆವು. ಮದ್ಯಾಹ್ನದ ಹೊತ್ತಿಗೆ ಟಿಪ್ಪರ್ ಸಂಗಡ ಬಂದ. ಗ್ಯಾರೇಜಿನಲ್ಲಿ ಟಿಪ್ಪರ್ ಬಿಟ್ಟು ಸೀದಾ ನನ್ನ ಬಳಿ ಬಂದ. ಬಂದವನೆ ಕಾಲು ಮುಟ್ಟಿ ನಮಸ್ಕರಿಸಿದ. ಬೇಡವೆಂದರೂ ಕೇಳಲಿಲ್ಲ. ಮುಖದಲ್ಲಿ ಸಂತಸ ಚಿಮ್ಮುತ್ತಿತ್ತು. ಜೊಯಿಡಾದಲ್ಲಿ ಏನಾಯಿತು ಅಂದೆ. ಅವನ ಮಾತುಗಳನ್ನು ಯಥಾವತ್ತಾಗಿ ಇಲ್ಲಿ ಹೇಳುತ್ತಿದ್ದೇನೆ.

”ಸರ್ ನಾನು ಹೆದರಿಕೆಯಿಂದಲೇ ಸ್ಟೇಷನ್ ಒಳಗೆ ಕಾಲಿಟ್ಟೆ. ಅವರು ತಮ್ಮ ಖುರ್ಚಿಯಲ್ಲಿ ಕುಳಿತಿದ್ದರು. ನಾನು ಅವರಿಗೆ ವಂದಿಸಿದೆ. ನನ್ನನ್ನು ನೋಡಿದರು. ಹೆಸರಿಡಿದು ಕರೆದು ತಮ್ಮ ಮುಂದಿನ ಖುರ್ಚಿಯಲ್ಲಿ ಕೂರಲು ಹೇಳಿದರು. ಅಳುಕಿನಿಂದ ನಿಂತೆ ಇದ್ದೆ. ಮತ್ತೆ ಕೂರುವಂತೆ ಹೇಳಿದರು, ಕುಳಿತೆ. ನಿನ್ನೆ ನಡೆದಿದ್ದನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ ಅಂದರು. ನಿಮ್ಮ ಬಗ್ಗೆ ಕೇಳಿದರು. ನನಗೆ ತಿಳಿದಿದ್ದನ್ನು ಹೇಳಿದೆ. ಟಿಪ್ಪರಿನ ಕಾಗದಪತ್ರಗಳನ್ನೆಲ್ಲ ಕೊಟ್ಟರು. ನನಗೆ ಟೀ ಸಹ ತರಿಸಿ ಕೊಟ್ಟರು. ಎಷ್ಟು ಬೇಡ ಅಂದರೂ ಕೇಳಲಿಲ್ಲ. ಪೊಲೀಸ್ ಸ್ಟೇಷನ್ ನಲ್ಲಿ ಚಾಲಕರುಗಳಿಗೆ ಗೌರವ ಸಿಗುವುದು ಕಮ್ಮಿ. ನನಗೆ ಬಹಳ ಖುಷಿಯಾಯಿತು. ಇದು ಸಾಧ್ಯವಾದದ್ದು ನಿಮ್ಮಿಂದ” ಎಂದ. ಅವನ ಮುಖದಮೇಲೆ ಖುಷಿ ಕಂಡು ನನಗೂ ಸಮಾಧಾನವಾಯ್ತು.

ಕದ್ರಾ ಯೋಜನೆಯಲ್ಲಿ ನಮ್ಮ ಬ್ಯಾಂಕಿಂಗ್ ಅಗತ್ಯಗಳನ್ನು ಅಚ್ಚುಕಟ್ಟಾಗಿ ಪೂರೈಸುತ್ತಿದ್ದುದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂದು ಹೇಳಲು ಹರ್ಷಿಸುತ್ತೇನೆ. ನನ್ನ ಸ್ನೇಹಿತರೆ ಅಲ್ಲಿನ ಶಾಖಾ ಪ್ರಮುಖರು. ಶ್ರೀ  ಶೃಂಗೇಶ್ವರ ಶರ್ಮಾ ಎಂದು ಅವರ ಹೆಸರು, ನಮ್ಮ ಮಲೆನಾಡಿನವರು. ಉತ್ಸಾಹಿ ಯುವಕರು. ಬ್ಯಾಂಕಿಂಗ್ ಸೇವೆ ಅಡೆತಡೆಯಿಲ್ಲದೆ ಎಲ್ಲರಿಗೂ ಸಿಗಬೇಕೆಂಬ ಧ್ಯೇಯ ಹೊಂದಿದ್ದರು. ನಾನು ಕದ್ರಾಕ್ಕೆ ಮೊದಲಿಗೆ ಹೋದಾಗ ಭೇಟಿ ಮಾಡಿದ ವ್ಯಕ್ತಿ ಇವರು. ಮೃದು ಮಾತಿನ, ಕವಿಹೃದಯದ, ನಗುಮುಖದ, ಸರಳ ಸಜ್ಜನ. ಆಗೆಲ್ಲ ಬ್ಯಾಂಕಿನ ಸೇವೆ ಇಷ್ಟು ವೈಜ್ಞಾನಿಕ ಪ್ರಗತಿ ಕಂಡಿರಲಿಲ್ಲ. ನಮ್ಮ ಹಲವು ಉದ್ಯೋಗಿಗಳಿಗೆ ಅವರ ಹೆಸರನ್ನು ಉಚ್ಚರಿಸುವುದು ಕಷ್ಟವಾಗುತ್ತಿತ್ತು. ಬಹಳ ಜನ ಅವರನ್ನು “ಶೃಂಗೇರಿ ಶರ್ಮಾ” ಎಂದೇ ಕರೆಯುತ್ತಿದ್ದರು!!. ಅವರ ಊರು ಶೃಂಗೇರಿ ಪಕ್ಕದ ಕೊಪ್ಪ. ನಮ್ಮ ಉದ್ಯೋಗಿಗಳಿಗೆ ಹಣ ಕಳಿಸಲು ಇದ್ದ ದಾರಿ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಮನಿ ಟ್ರಾನ್ಸ್ಫರ್. ಸುಮಾರು 300 ರಿಂದ 400 ಉಳಿತಾಯ ಖಾತೆಗಳನ್ನು ನಮ್ಮ ಉದ್ಯೋಗಿಗಳು ತೆರೆದಿದ್ದರು. ನಮ್ಮ ಕಂಪೆನಿಯು ಖಾತೆಯೂ ಅಲ್ಲಿತ್ತು. ಜೊತೆಗೆ ನಾವು ಕೆಲಸ ಪಡೆದಿದ್ದ ಸಂಸ್ಥೆಯ ಖಾತೆ ಮತ್ತು ಅವರ ಉದ್ಯೋಗಿಗಳ ಖಾತೆಗಳು ಅಲ್ಲಿದ್ದವು. ಎಲ್ಲರಿಗೂ ಬ್ಯಾಂಕಿನಲ್ಲಿ ನಗುಮುಖದ ಸೇವೆ. ನಾವು ಸಂಬಳ ವಿತರಿಸುವಾಗ ನಗದನ್ನೆ ನೀಡುತ್ತಿದ್ದೆವು. ಏಕೆಂದರೆ ಹೆಚ್ಚು ಜನ ಖಾತೆ ಹೊಂದಿರಲಿಲ್ಲ ಮತ್ತು ಎಲ್ಲರಿಗೂ ಬ್ಯಾಂಕಿಂಗ್ ವ್ಯವಹಾರದ ಅನುಭವ ಇರಲಿಲ್ಲ. ತಿಂಗಳ ಮೊದಲ ಹತ್ತು ಹನ್ನೆರಡು ದಿನ ಬ್ಯಾಂಕಿನ ಸಿಬ್ಬಂದಿಗೆ ಪುರುಸೊತ್ತಿಲ್ಲದ ದಿನಗಳು. ಅವರು ಸಹ ಸಹಕರಿಸುತ್ತಿದ್ದರು. ಒಮ್ಮೊಮ್ಮೆ ಗೋವಾದ ಮಡಗಾಂನಿಂದ ಹಣ ತರಿಸಿ ಕೊಟ್ಟದ್ದೂ ಇದೆ. ಉತ್ತರಭಾರತದಲ್ಲಿ ಡಿಡಿ ಪಡೆಯಲು ಮೂರು ದಿನ ಬೇಕಂತೆ. ಇಲ್ಲಿ ಸೇವೆ ಕಂಡು ಉತ್ತರ ಭಾರತದ ಕೆಲಸಗಾರರಿಗೆ ಖುಷಿ. ನಾನು ಉತ್ತರ ಭಾರತಕ್ಕೆ ಹೋದಾಗ ಅಲ್ಲಿನ ಬ್ಯಾಂಕಿಂಗ್ ಸೇವೆಯ ಅನುಭವವ ನನಗೂ ಆಯಿತು!

PC: Internet

ಒಮ್ಮೆ ನಮ್ಮ ಕಂಪೆನಿಯ ಶಾಖಾ ವ್ಯವಸ್ಥಾಪಕರು ಸಂಬಳ ವಿತರಣೆಗೆ ಹಣ ಕೇಳಿದ್ದಾರೆ. ಇಂದು ಹಣ ದೊರೆಯುವುದಿಲ್ಲ, ಕಡಿಮೆ ಇದೆ, ನಾಳೆ ಸಿಗಬಹುದು ಅಂದಿದ್ದಾರೆ. ಬ್ಯಾಂಕ್ ಶಾಖೆಗಳಲ್ಲಿ ಹಣ ಇಟ್ಟುಕೊಳ್ಳಲು ಸಹ ಮಿತಿ ಹೇರಿರುತ್ತಾರೆ. ಅದನ್ನು ವಿಮೆ ಮಾಡಿಸಿರುವ ಮೊತ್ತ ಮತ್ತು ನಿತ್ಯ ಹಣದ ವ್ಯವಹಾರದ ಮೇಲೆ ನಿರ್ಧರಿಸುತ್ತಾರೆ ಮೇಲಧಿಕಾರಿಗಳು. ಅದಕ್ಕಾಗಿ ಒಮ್ಮೊಮ್ಮೆ ಹೀಗಾಗುತ್ತದೆ. ನಮ್ಮ ಉದ್ಯೋಗಿಗಳೆಲ್ಲ ಸಂಬಳ ಬೇಕೆಂದು ಒತ್ತಡ ಹಾಕಿದರು. ನಾನು ಹೋಗಿ ನಮ್ಮ ವ್ಯವಸ್ಥಾಪಕರನ್ನು ಸಂಬಳದ ಬಗ್ಗೆ ಕೇಳಿದೆ. ಬ್ಯಾಂಕಿನಲ್ಲಿ ಹಣ ಇಲ್ಲವಂತೆ ಅಂದರು. ನಾನು ”ಸರ್ ಹಣದ ಏರ್ಪಾಡು ಮಾಡಿದರೆ ಇಂದು ಸಂಬಳ ವಿತರಣೆ ಮಾಡಬಹುದೇ ” ಎಂದು ಕೇಳಿದೆ. ”ಬ್ಯಾಂಕಲ್ಲಿ ಹಣವೇ ಇಲ್ಲದ ಮೇಲೆ ಹೇಗೆ ಕೊಡುತ್ತಾರೆ” ಎಂದು ದೂರ್ವಾಸರಂತೆ ಆದರು. ನೋಡಿ ಸಿಕ್ಕರೆ ಕೊಡೋಣ ಅಂದರು. ನಾನು ಬ್ಯಾಂಕ್ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿದೆ. ಅವರಲ್ಲಿ ವಿನಂತಿ ಮಾಡಿದೆ.

”ನಮಗೆ ಈ ದಿನ ಸಂಬಳ ವಿತರಣೆಗೆ ಹಣ ಬೇಕಾಗಿದೆ. ನಿಮ್ಮ ಇಂದಿನ ಹಣದ ವ್ಯವಹಾರದ ಸಮಯ ಮುಗಿದಮೇಲೆ ನಮಗೆ ಕೊಡುವಷ್ಟು ಹಣ ಇದ್ದರೆ ದಯೆಮಾಡಿ ಕೊಡಿ” ಅಂದೆ. ”ಆಗಲಿ ನೋಡಿ ನಿಮಗೆ ಕರೆ ಮಾಡುತ್ತೇನೆ” ಅಂದರು. ಆಗ ಹಣದ ವ್ಯವಹಾರ ಮಧ್ಯಾನ್ಹ ಎರಡೂವರೆಗೆ ಮುಕ್ತಾಯವಾಗುತ್ತಿತ್ತು. ಎರಡೂವರೆ ನಂತರ ಅವರಿಂದ ಹಣ ಪಡೆದುಕೊಂಡು ಹೋಗಲು ಕರೆ ಬಂತು. ನಾನು ನಮ್ಮ ವ್ಯವಸ್ಥಾಪಕರಿಗೆ ವಿಷಯ ತಿಳಿಸಿ ಚೆಕ್ಕನ್ನು ಕೊಡಲು ಹೇಳಿದೆ. ಚೆಕ್ಕು ಬರೆಸಿ ಕೊಟ್ಟರು. ಹೋಗಿ ಹಣ ಪಡೆದು ಅವರಿಗೆ ಧನ್ಯವಾದ ಹೇಳಿ ಬಂದೆ. ನಮ್ಮ ವ್ಯವಸ್ಥಾಪಕರು ಮುಖ ಊದಿಸಿಕೊಂಡು ಕುಳಿತಿದ್ದರು. ನನ್ನನ್ನು ನೋಡಿ ”ಬ್ಯಾಂಕಿನಲ್ಲಿ ಕಂಪೆನಿ ಖಾತೆ ನಿರ್ವಹಿಸುವವನು ನಾನು. ನಾನು ಕೇಳಿದರೆ ಹಣ ಇಲ್ಲ ಎಂದರು. ನೀವು ಕೇಳಿದರೆ ಕೊಟ್ಟಿದ್ದಾರೆ” ಎಂದು ಅಸಮಾಧಾನ ಹೊರಹಾಕಿದರು. ನಾವು ವ್ಯವಹರಿಸುವ ರೀತಿ ಅನೇಕ ಬಾರಿ ನಮಗೆ ಪೂರಕ ಫಲಿತಾಂಶ ತಂದುಕೊಡುತ್ತದೆ.  ಕೆಲವರು ತಾವು ಕಂಪೆನಿಯ ಅಧಿಕಾರಿ ಹಾಗೆಯೇ ಜಗಕ್ಕು ಸಹ ಅಂದುಕೊಂಡರೆ ಹೀಗಾಗುವುದು ಸಹಜ!

ಈ ನಮ್ಮ ಕಂಪೆನಿಯ ಶಾಖೆಯಲ್ಲಿ ಇನ್ನೊಂದು ಪ್ರಸಂಗ ನಡೆಯಿತು. ಇಬ್ಬರು ಹಿರಿಯ ಶಾಖಾ ವ್ಯವಸ್ಥಾಪಕರಿದ್ದರು. ಒಬ್ಬರು ಕಛೇರಿಯ ಆಡಳಿತ ನೋಡಿಕೊಂಡರೆ ಇನ್ನೊಬ್ಬರು ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದರು. ಅವರುಗಳು ಅನ್ಯೋನ್ಯವಾಗಿದ್ದರು. ಪ್ರಶ್ನೆ ಇದ್ದದ್ದೇ ಅವರ ಗೃಹ ಮಂತ್ರಿಗಳದ್ದು!. ಸಾಮಾನ್ಯವಾಗಿ ಅವರುಗಳು ಸ್ವಲ್ಪವೂ ರಾಜಿಯಾಗುವುದಿಲ್ಲ. ಇಲ್ಲಿ ಮನಸ್ತಾಪ ಬಂದದ್ದು ಒಂದು ಒರಳುಕಲ್ಲಿಗಾಗಿ. ಒಬ್ಬರು ಮಹಾರಾಷ್ಟ್ರದವರಾದರೆ ಇನ್ನೊಬ್ಬರು ಕರ್ನಾಟಕದವರು.  ನಮ್ಮ ಸ್ನೇಹಿತರೆ ಅದ ಮೆಕ್ಯಾನಿಕಲ್ ಫೋರ್ಮನ್ ಒಬ್ಬರು ಒಂದು ಚಿಕ್ಕ ರುಬ್ಬುವ ಕಲ್ಲನ್ನು ತಂದು ಗೆಸ್ಟ್ ಹೌಸ್ ನಲ್ಲಿ ಇಟ್ಟಿದ್ದರು. ಸಾಮಾನ್ಯವಾಗಿ ವಿದ್ಯುತ್ ಕೈ ಕೊಟ್ಟಾಗ ಅದರ ಉಪಯೋಗ. ಆದರೆ ಇಲ್ಲಿ ಆ ರುಬ್ಬುವ ಕಲ್ಲನ್ನು ಯಾರ ಮನೆಯಲ್ಲಿ ಇಟ್ಟುಕೊಳ್ಳಬೇಕೆಂಬ ಬಗ್ಗೆ ಮನಸ್ತಾಪ. ಗೆಸ್ಟ್ ಹೌಸ್ ನೋಡಿಕೊಳ್ಳುವ ಮನುಷ್ಯ ಇದನ್ನು ನನಗೆ ಹೇಳಿದ. ‘ಸರ್ ಇವರಿಬ್ಬರ ಮದ್ಯೆ ನಾನು ಹೈರಾಣಾಗುತ್ತಿದ್ದೇನೆ!. ಇವರಿಗೆ ರುಬ್ಬುವಕಲ್ಲು ಕೊಟ್ಟರೆ ಅವರಿಗೆ ಸಿಟ್ಟು, ಅವರಿಗೆ ಕೊಟ್ಟರೆ ಇವರಿಗೆ ಸಿಟ್ಟು’ ಅಂದ. ನಾನು ತಕ್ಷಣ ಈಗ ರುಬ್ಬುವಕಲ್ಲು ಎಲ್ಲಿದೆ ಎಂದು ಕೇಳಿದೆ. ಗೆಸ್ಟ್ ಹೌಸ್ ನಲ್ಲಿ ಇದೆಯೆಂದ. ತಂದು ನಮ್ಮ ಮನೆಯಲ್ಲಿಡಲು ಹೇಳಿದೆ. ನಮ್ಮ ಮನೆಗೆ ತಂದಿಟ್ಟ. ಯಾರೂ ಅದರ ಬಗ್ಗೆ ಚಕಾರ ಎತ್ತಲಿಲ್ಲ. ನಾನೂ ಏನನ್ನೂ ಕೇಳಲಿಲ್ಲ. ಎಲ್ಲ ತಣ್ಣಗಾಯಿತು. ಹೇಗಿದೆ ನನ್ನ ಮಾರ್ಜಾಲ ನ್ಯಾಯ!!??.

ಒಮ್ಮೆ ಗ್ಯಾರೆಜಿನಲ್ಲಿ ಕೆಲಸ ಮಾಡುವಾಗ ನಮ್ಮ ಫೋರ್ಮನ್ ಒಬ್ಬರ ಕೈ ಯಂತ್ರಕ್ಕೆ ಸಿಲುಕಿ ಜಖಂಗೊಂಡಿತು. ತಕ್ಷಣ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಕೈ ಬೆರಳುಗಳಿಗೆ ಬಲವಾದ ಗಾಯಗಳಾಗಿದ್ದವು. ಕೆಲವರಿಗೆ ಗಾಯ ಗುಣವಾಗುವುದಕ್ಕಿಂತ ದೇಹದ/ಕೆಲಸ ಮಾಡುವ ಭಾಗಗಳಿಗೆ ಶಾಶ್ವತ ಜಖಂ ಆದರೆ ಸಿಗುವ ವಿಮೆ ಹಣದ ಮೇಲೆ ಕಣ್ಣಿರುತ್ತದೆ!. ಆಸ್ಪತ್ರೆ ಸೇರಿದ ವ್ಯಕ್ತಿ ಸ್ವಲ್ಪ ಆಸೆಯ ವ್ಯಕ್ತಿ, ಮೇಲಾಗಿ ದಿನವೂ ಸುರೆಗೆ ಮೊರೆ ಹೋಗುವ ವ್ಯಕ್ತಿ. ಅವರಿಗೆ ಆಸ್ಪತ್ರೆಯಲ್ಲಿ ಯಾರೋ ಒಂದು ಕೈ ಬೆರಳು ಹೋದರೆ ಇಷ್ಟು ವಿಮೆ ಹಣ, ಎರಡು ಹೋದರೆ ಇಂತಿಷ್ಟು ಮತ್ತು ಪೂರ್ಣ ಕೈ ನಿಷ್ಕ್ರಿಯಗೊಂಡರೆ ಹೆಚ್ಚು ಹಣ ಸಿಗುತ್ತೆ ಎಂದು ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಪಿಡುಗು ಈಗಲೂ ಇದೆ. ಗುಣವಾಗುವುದಕ್ಕಿಂತ ಹಣವೇ ಪ್ರಧಾನವಾಗಿಬಿಡುತ್ತೆ. ಸರಿ ಆ ವ್ಯಕ್ತಿ ಕೆಲವರ ಹತ್ತಿರ ತನಗೆ ಚಿಕಿತ್ಸೆ ಸರಿಯಾಗಿ ದೊರೆಯುತ್ತಿಲ್ಲ ಎಂದು ಹೇಳಿ ಕಳುಹಿಸಿದರು. ನಾನು ಆಸ್ಪತ್ರೆಗೆ ಹೋದೆ. ಅವರ ಕುಂದುಕೊರತೆಗಳನ್ನು ಹೇಳಿಕೊಂಡರು. ವೈದ್ಯರ ಶುಶ್ರೂಷಾ ವಿಧಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಅವರು ನನಗೆ ಹೇಳಿದರು. ‘ಸರ್ ವೈದ್ಯರು ಹೇಳಿದ್ದಾರೆ ನನ್ನ ಕೈ ಬೆರಳುಗಳು ಇನ್ನೂ ಕೆಲವು ದಿನಗಳಲ್ಲಿ ಹಾಗೆಯೇ ಒಣಗಿ ಬಿದ್ದುಹೋಗುವವಂತೆ. ಅಲ್ಲಿವರೆಗೆ ಇಲ್ಲೇ ಇರಬೇಕಂತೆ. ಎನುಮಾಡುವುದು’ ಎಂದು ಚಿಂತೆ ವ್ಯಕ್ತಪಡಿಸಿದರು. ಕೈ ಬೆರಳುಗಳು ದ್ರಾಕ್ಷಿಗೊಂಚಲಿನ ಹಣ್ಣುಗಳೆ ಮಾಗಿದ ತಕ್ಷಣ ಉದುರಿ ಬೀಳಲು!?. ಅವರ ನಾಟಕ ಅರ್ಥವಾಯಿತು. ‘ಸರಿ ನಾನು ಡಾಕ್ಟರ್ ಹತ್ತಿರ ಮಾತನಾಡುತ್ತೇನೆ’ ಎಂದೆ. ಹಾಗೆಯೇ ಅವರನ್ನು ಭೇಟಿಮಾಡಿದೆ.

ಅವರು ನನಗೆ ಈ ಮನುಷ್ಯನ ದುರ್ನಡತೆ ಬಗ್ಗೆ ತಿಳಿಸಿದರು. ಅದೇ ತೀರ್ಥಸೇವೇನೆ!. ಅದು ಚಿಕಿತ್ಸೆ ಮೇಲೆ ಪರಿಣಾಮ ಬೀರುತ್ತದೆ ಅನ್ನುತ್ತಾರೆ. ಆದ್ದರಿಂದ ಗಾಯಗಳು ಮಾಯಲು ಸಮಯ ತೆಗೆದುಕೊಳ್ಳುತ್ತಿದೆ ಎಂದರು. ಸ್ವಲ್ಪ ಗಮನ ಹರಿಸಲು ಅವರನ್ನು ವಿನಂತಿಸಿದೆ. ಮತ್ತೆ ನಮ್ಮ ಫೋರ್ಮನ್ ಬಳಿ ಬಂದು ಡಾಕ್ಟರ್ ಹೇಳಿದ್ದನ್ನು ಹೇಳಿದೆ. ”ಇನ್ನೂ ಕುಡಿದದ್ದು ಕಂಡುಬಂದರೆ ಆ ಕಾರಣವನ್ನೆ ಕೊಟ್ಟು ನಿಮ್ಮನ್ನು ಬಿಡುಗಡೆಗೊಳಿಸುತ್ತಾರೆ. ಆಗ ನಿಮಗೆ ಕಂಪೆನಿ ಸಂಬಳವನ್ನೂ ಕೊಡುವುದಿಲ್ಲ ಮತ್ತು ವೈದ್ಯಕೀಯ ಶುಶ್ರೂಷೆಯನ್ನೂ ಮಾಡುವುದಿಲ್ಲ, ನಾನೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ನಿಮ್ಮಿಷ್ಟದಂತೆ ಮಾಡಿ” ಎಂದೆ. ಏಕೆಂದರೆ ನನಗೆ ಗೊತ್ತಿತ್ತು ಅವರಿಗೆ ಯಾರೋ ದುರ್ಬೋಧನೆ ಮಾಡುತ್ತಿದ್ದಾರೆ ಎಂದು. ನನ್ನ ಮಾತು ಕೇಳಿ ದಂಗಾದರು. ‘ಇಲ್ಲ ಸರ್ ಹಾಗೆಲ್ಲ ಮಾಡುವುದಿಲ್ಲ, ಇನ್ನುಮೇಲೆ ಡಾಕ್ಟರ್ ಹೇಳಿದಂತೆ ಕೇಳುತ್ತೇನೆ ‘ಅಂದರು. ಕೆಲದಿನಗಳಲ್ಲೆ ಗುಣಮುಖರಾಗಿ ಬಂದರು. ಅವರಿಗೆ ನ್ಯಾಯವಾಗಿ ಸಿಗಬೇಕಿದ್ದ ವಿಮೆ ಹಣ ಸಹ ದೊರೆಯಿತು.

ಇನ್ನೂ ಕೆಲವು ಸಂಗತಿಗಳಿವೆ. ಮುಂದೆ ನೋಡೋಣ.

ಜಿ.ಎಸ್.ಟಿ. ಪ್ರಭು

5 Responses

  1. ನಾಗರತ್ನ ಬಿ.ಆರ್. says:

    ವ್ರುತ್ತಿಬದುಕಿನ ಅನುಭವ ಸಹಜವಾಗಿ ಓದಿಸಿಕೊಂಡು ಹೋಯಿತು. ಧನ್ಯವಾದಗಳು ಸಾರ್.

  2. ನಯನ ಬಜಕೂಡ್ಲು says:

    ಸಾಲು ಸಾಲು ಅನುಭವಗಳ ಗುಚ್ಛ.

  3. ಶಂಕರಿ ಶರ್ಮ says:

    ವೃತ್ತಿ ಬದುಕಿನ ಸ್ವಾರಸ್ಯಕರ ಎಳೆಗಳನ್ನು ಬಿಚ್ಚಿಟ್ಟ ಲೇಖನ ಬಹಳ ಚೆನ್ನಾಗಿದೆ ಸರ್.

  4. B c n murthy says:

    ಸ್ವಾರಸ್ಯಕರವಾಗಿದೆ ನಿಮ್ಮ ಅನುಭವ ಕಥನ ಸಾರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: