ದೇವರ್ಷಿ ನಾರದ
ಋಷಿ ಮುನಿಗಳು ತಪಸ್ಸು ಮಾಡುತ್ತಾರೆ. ತಪಸ್ಸು ಮಾಡುವುದೆಂದರೆ ಕಣ್ಣು ಮುಚ್ಚಿ, ಮೂಗು ಹಿಡಿದು ಕೂರುವುದಲ್ಲ, ಸತ್ಕಾರ್ಯಕ್ಕಾಗಿ, ಸತ್ ಚಿಂತನೆಯಲ್ಲಿ, ಗುರಿಸಾಧಿಸುವ ಯಜ್ಞ (ಕೆಲಸ)ವೇ ತಪಸ್ಸು, ಋಷಿಗಳಲ್ಲಿ ದೇವರ್ಷಿ, ಬ್ರಹ್ಮರ್ಷಿ, ರಾಜರ್ಷಿ ಎಂಬುದಾಗಿ ಮೂರು ವಿಧ .ದೇವಲೋಕದ ಋಷಿಗಳನ್ನು ದೇವರ್ಷಿಗಳೆಂದೂ, ಬ್ರಾಹ್ಮಣ ಋಷಿಮುನಿಗಳನ್ನು ಬ್ರಹ್ಮರ್ಷಿ ಎಂದೂ ಕ್ಷತ್ರಿಯ ಕುಲದ ತಪಸ್ವಿಗಳನ್ನು ರಾಜರ್ಷಿ ಎಂದೂ ಕರೆಯುತ್ತಾರೆ.
ದೇವರ್ಷಿಗಳಲ್ಲಿ ನಾರದನು ಅತ್ಯಂತ ಶ್ರೇಷ್ಠನಾದವನು. ನಾರದ ಬ್ರಹ್ಮನ ಮಾನಸ ಪುತ್ರ. ಬ್ರಹ್ಮದೇವನ ಪಾದಗಳಿಂದ ಜನಿಸಿದವನು, ಪರ್ವತನ ಸೋದರ ಮಾವ. ಸಂಚಾರಿಯಾದ ನಾರದನ ವರ್ಣನೆ, ಅವನ ಭಾಗವಹಿಸುವಿಕೆ ಬಹುಶ: ನಮ್ಮ ಎಲ್ಲಾ ಪುರಾಣಗಳಲ್ಲೂ ಇದೆ. ಅವನು ದೇವಲೋಕಕ್ಕೂ ಭೂಲೋಕಕ್ಕೂ ನಿತ್ಯಸಂಚಾರಿ.
ಒಬ್ಬರ ದೂರನ್ನು ಇನ್ನೊಬ್ಬರಲ್ಲಿ ಹೇಳಿ ಕಲಹವೆಬ್ಬಿಸಿ ಮೋಜು ನೋಡುವ ಅಭ್ಯಾಸ ಕೆಲವರಲ್ಲಿದೆ. ಅಂತಹವರನ್ನು ನಾರದನಿಗೆ ಹೋಲಿಸುವುದುಂಟು. ನಾರದ ಕಲಹಪ್ರಿಯನೇ ಹೌದು. ಆದರೆ ಆ ಕಲಹದಿಂದ ಲೋಕ ಕಲ್ಯಾಣವೇ ಹೊರತಾಗಿ ಕೆಟ್ಟಕಾರ್ಯಗಳಿಗೋ ಮೋಜು ನೋಡುವುದಕ್ಕಾಗಿಯೋ ಬಳಸುವುದನ್ನು ನಾವೆಲ್ಲೂ ಕಾಣಲಾರೆವು. ದೇವಲೋಕದ ವರದಿಗಳನ್ನು ಹೇಳಬೇಕಾದುದನ್ನು ಭೂಲೋಕದಲ್ಲೂ, ಭೂಲೋಕದ ಆಗುಹೋಗುಗಳನ್ನು ದೇವಲೋಕಕ್ಕೂ ಮುಟ್ಟಿಸುವುದು ನಾರದನ ಕೆಲಸ. ಆತನು ಕಲಹಪ್ರಿಯನಗುವುದಕ್ಕೂ ಒಂದು ಸಕಾರಣ ಉಂಟಂತೆ. ನಾರದನು ದಕ್ಷನ ಮಕ್ಕಳಿಗೆ ವೈರಾಗ್ಯವನ್ನು ಬೋಧಿಸಿದನಂತೆ. ಇದಕ್ಕಾಗಿ ಕೋಪಗೊಂಡ ದಕ್ಷನು ‘ನೀನು ಎಲ್ಲೆಲ್ಲೆಯೂ ಅಲೆಯುತ್ತ ಕಲಹಪ್ರಿಯನಾಗಿರು’ ಎಂದು ಶಾಪಕೊಟ್ಟನಂತೆ. ಅಂದಿನಿಂದ ನಾರದ ತ್ರಿಲೋಕ ಸಂಚಾರಿಯಾದ. ಇದರಿಂದ ಲೋಕಕ್ಕೆ ನಾರದನಿಗೆ ಒಳ್ಳೆಯದೇ ಆಯಿತು. ತ್ರಿಲೋಕಗಳ ವಿಶೇಷ ಸುದ್ದಿಯನ್ನು ಮೊದಲು ತಿಳಿಯುವವ ನಾರದ.
ನಾರದನು ಹರಿಭಕ್ತ. ಅವನು ತಾಳ ತಂಬೂರಿ ಹಿಡಿದು ನಾರಾಯಣ ಸ್ಮರಣೆ ಮಾಡುತ್ತಾ ಎಲ್ಲೆಡೆ ಸಂಚರಿಸುವನು. ನಾರದ ಮಾಡಿದ ಅಸಂಖ್ಯ ಸತ್ಕಾರ್ಯಗಳಲ್ಲಿ ಆಯ್ದ ಕೆಲವು ಪ್ರಾಮುಖ್ಯ ಕೆಲಸಗಳು:
- ರಾಮಾಯಣ ಬರೆಯಲು ವಾಲ್ಮೀಕಿಗೆ ಪ್ರೇರೇಪಿಸಿದವನು ನಾರದ, ದರೋಡೆಕೋರನಾಗಿದ್ದ ಕಿರಾತನನ್ನು ತಡೆದು ಕೂರುವಂತೆ ನಿಲ್ಲಿಸಿ ನೀತಿಬೋಧನೆಯನ್ನು ಮಾಡಿ ಒಂದೊಳ್ಳೆ ಕೆಲಸಕ್ಕಾಗಿ ತಪಸ್ಸು ಮಾಡಿಸಿದವನೇ ನಾರದ, ಜ್ಞಾನೋದಯವಾದ ಕಿರಾತನ ಸುತ್ತಲೂ ದೇಹಕ್ಕೆ ಹುತ್ತ ಬೆಳೆದು ವಾಲ್ಮೀಕಿಯೆನಿಸಿದ ಈ ವಾಲ್ಮೀಕಿಗೆ ಪ್ರಸಿದ್ಧ ಪುರಾಣಗಳಲ್ಲೊಂದಾದ ರಾಮಾಯಣ ಮಹಾಕಾವ್ಯವನ್ನು ಬರೆಯುವಂತೆ ನಾರದ ಪ್ರೋತ್ಸಾಹಿಸಿದ.
- ಧರ್ಮರಾಜನಿಗೆ ರಾಜಸೂಯ ಯಾಗ ಮಾಡುವಂತೆ ಸಲಹೆಯಿತ್ರ. ‘ಕೀರ್ತಿವಂತರಾದ ನಿನ್ನ ಹಿರಿಯರು ನಡೆದ ಆದರ್ಶದಲ್ಲಿ ಹಿತಮಿತವಾಗಿ ನೀನೂ ನಡೆದುಕೋ .ಅದೇ ನಿನ್ನ ಉತ್ತರೋತ್ತರ ಸಿದ್ದಿಗೆ ಮಾರ್ಗ’ ಎಂದು ನಾರದ ಉಪದೇಶ ಮಾಡಿದ. ರಾಜಸೂಯ ಯಾಗದ ಪ್ರಥಮ ಉದ್ದೇಶವೆಂದರೆ ಇಂದ್ರಲೋಕದಲ್ಲಿ ಸ್ವರ್ಗಸ್ಥನಾದ ಪಾಂಡುರಾಜನಿಗೆ ಒಳ್ಳೆಯ ಸ್ಥಾನ ಲಭಿಸುವುದು.
- ಪ್ರಹ್ಲಾದನು ತನ್ನ ತಾಯಿ (ಕಯಾದು)ಯ ಉದರದಲ್ಲಿದ್ದಾಗಲೇ ಅವನಿಗೆ ಹರಿಭಕ್ತಿ ಹುಟ್ಟುವಂತೆ ತತ್ವೋಪದೇಶ ಮಾಡಿ. ಇದರಿಂದಾಗಿ ಪ್ರಹ್ಲಾದ ಹರಿಭಕ್ತನಾದ.
- ಸಾವಿತ್ರಿಯ ಪತಿ ಸತ್ಯವಾನನು ಒಂದು ವರ್ಷದಲ್ಲಿ ಸಾಯುವನೆಂದು ಸಾವಿತ್ರಿಯ ತಂದೆಯಾದ ಅಶ್ವಪತಿಗೆ ಮೊದಲೇ ತಿಳಿಸಿದ.
- ಹಲವು ಮಂದಿ ರಾಕ್ಷಸರಿಗೆ ಈತನು ಹರಿಯೊಡನೆ ಕಲಹವನ್ನು ಗಂಟಿಕ್ಕಿ ಭೂಭಾರ ಇಳಿಸಲು ನೆರವಾದನು.
- ಶೈಬರಾಜನಾದ ಸೃಂಜಯನ ಮಗ ಸುವರ್ಣವೀಷ್ಮಿಯನ್ನು ಕಳ್ಳರು ಅಪಹರಿಸಲು ನಾರದನು ಈ ಮಗುವನ್ನು ತಂದುಕೊಟ್ಟು ಆತನ ಮಗಳಾದ ಸುಕುಮಾರಿಯನ್ನು ವಿವಾಹವಾದನು.
- ಶ್ರೀರಾಮನು ಅಯೋಧ್ಯೆಯಲ್ಲಿ ಪತ್ನಿಯೊಂದಿಗೆ ಸುಖದಿಂದಿರುವಾಗ ಅವತಾರದ ಕಾರಣವನ್ನು ಹೇಳಿ ಎಚ್ಚರಿಸಿದ.
- ಮಹಾಭಾರತದ ಕಥೆಯನ್ನು ದೇವಲೋಕದಲ್ಲಿ ಪ್ರಚಾರ ಮಾಡಿದ ಕೀರ್ತಿ ನಾರದನಿಗೆ ಲಭಿಸುತ್ತದೆ.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ನಾರದ ಕಿತಾಪತಿಗೆ ಹೆಸರುವಾಸಿ. ಆದರೆ ಮಾಡಿರುವ ಕಿತಾಪತಿಗಳಿಂದ ಹೆಚ್ಚಿನದು ಒಳ್ಳೆಯದೇ ಆಗಿದೆ. ತಪಸ್ಸಿನ ಕುರಿತಾದ ವಿವರ ಚೆನ್ನಾಗಿದೆ.
ಉತ್ತಮ ಪೌರಾಣಿಕ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ.
ನಾರದ ಮುನಿಯ ಬಗ್ಗೆ ಮಾಹಿತಿ ಸೊಗಸಾಗಿದೆ ಮೇಡಂ
Very informative madam.
ನಾರಾಯಣ ನಾಮವನ್ನು ಜಪಿಸುತ್ತಾ ಮೂರ್ಲೋಕ ಸುತ್ತುವ ಕಲಹಪ್ರಿಯ ನಾರದನ ಬಗ್ಗೆ ಬಹಳ ವಿಚಾರಗಳನ್ನು ಸೊಗಸಾದ ಬರಹದ ಮೂಲಕ ತಿಳಿಸಿದಿರಿ ವಿಜಯಕ್ಕಾ..ಧನ್ಯವಾದಗಳು. ನಾರದನು ಮದುವೆಯಾದ ಬಗ್ಗೆ ಈಗಲೇ ತಿಳಿದುದು. ಕ್ರೂರ ರಾಕ್ಷಸರ ಸಂಹಾರದಿಂದ ಭೂಭಾರ ಇಳಿಸಲು ಕಾರಣವಾದ ಅವನ ಕಲಹಪ್ರಿಯತೆ ಮೆಚ್ಚತಕ್ಕಂತಹದ್ದೇ ಆಗಿದೆ.. ಅಲ್ಲವೇ?