ಸಂವೇದನೆ ರಹಿತ ಸಮಾಜ ಸಾಗುತ್ತಿರುವುದು ಎತ್ತ!? 

Share Button

ನಾವು ಯಾವ ವೇಗದಲ್ಲಿದ್ದೇವೆ ಎಂದರೆ, ನಮ್ಮ ಗುರಿಯನ್ನು ನಿರ್ಧರಿಸಿಕೊಂಡು ಅದರತ್ತ ವಯಸ್ಸು ಮತ್ತು ಮನಸ್ಸನ್ನು ಕೇಂದ್ರೀಕರಿಸಿರುತ್ತೇವೆ. ನಮ್ಮ ಸುತ್ತಲಿನ ಅಗತ್ಯಕ್ಕೆ ಸ್ಪಂದಿಸಲಾರದಷ್ಟು ಸಂವೇದನಾ ರಹಿತ ಮನಸ್ಥಿತಿಯಲ್ಲಿ ಓಡುತ್ತಿರುತ್ತೇವೆ. ಓಡುವ ವೇಗದಲ್ಲಿ ಗುರಿ ಮುಟ್ಟುವ ಕಡೆಗೆ ಮಾತ್ರ ಮನವಿಟ್ಟು, ಜಗದ ಇತರೆ ಆಗುಹೋಗುಗಳಿಗೆ ಪ್ರತಿಕ್ರಿಯಿಸದಂತೆ ಸರ್ವೇಂದ್ರಿಯಗಳಿಗೆ ಶುದ್ಧ ತರಬೇತಿ ಕೊಟ್ಟಿರುತ್ತೇವೆ. ಸಂದರ್ಭಕ್ಕೆ ತಕ್ಕಹಾಗೆ ಕುರುಡರೂ, ಮೂಗರೂ, ಕಿವುಡರೂ, ದಪ್ಪ ಚರ್ಮದವರೂ, ಹೆಳವರೂ ಆಗಿ ಬದಲಾಗಿಬಿಡುತ್ತೇವೆ.

ಬೆಂಗಳೂರಿನಂತಹ ಯಾವುದಾದರೂ ನಗರದಲ್ಲೊಮ್ಮೆ ಸುತ್ತಾಡಿದರೆ ಸಾಕು, ನಮ್ಮ ಅಸೂಕ್ಷ್ಮ ಮನಸ್ಥಿತಿಗೆ, ಸಂವೇದನಾರಾಹಿತ್ಯ ನಡವಳಿಕೆಗೆ ಸಾಕಷ್ಟು ಸಾಕ್ಷ್ಯಪುರಾವೆಗಳು ದೊರಕುತ್ತವೆ. ಸೂಕ್ಷ್ಮಗ್ರಾಹಿಗಳು ಆಗಿರುವವರಿಗೆ ಇಷ್ಟರಲ್ಲಿ ತಮಗಾದ ಇಂಕಹ ಅನುಭವಗಳ ನೆನಪೂ ಆಗಿರಬಹುದು.

ವಿಚಾರ-1
ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಬಹುಸಂಖ್ಯಾತರ ಸಾಮಾನ್ಯ ಆಯ್ಕೆ. ಬಸ್ಸು ಅಥವಾ ಮೆಟ್ರೋ ಅಂತಹ ಸಂಚಾರದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಹಲವು ನಿಯಮಗಳನ್ನು ರೂಪಿಸಲಾಗಿದೆ. ಮಹಿಳೆ, ಪುರುಷ, ಹಿರಿಯರು, ಸೈನಿಕರು, ವಿಕಲಾಂಗಚೇತನರು, ಗರ್ಭಿಣಿಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗಳಿರುತ್ತವೆ.ಇಂತಹ ವಿಶೇಷ ವ್ಯವಸ್ಥೆಗಳು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ರೂಪಿಸಲಾಗಿರುತ್ತವೆ. ಇದರ ಅರಿವಿರದಂತೆ ವರ್ತಿಸುವುದಕ್ಕೆ ಹಲವರು ತಮ್ಮ ಪಂಚೇಂದ್ರಿಯಗಳ ಜೊತೆಗೆ ಮನಸ್ಸಿಗೂ ಪೂರ್ವತರಬೇತಿ ನೀಡಿರುತ್ತಾರೆ. ನಿಷ್ಕ್ರಿಯ, ಜಡಸ್ಥಿತಿಯ ಅವರು ಒಂದು ಸಾಮಾಗ್ರಿ ತುಂಬಿದ ಮೂಟೆಯ ಹಾಗೆ ಪ್ರಯಾಣಿಸುತ್ತಿರುತ್ತಾರೆ.

ಬಸ್ಸು, ರೈಲು, ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ಒಳಗೆ ಹತ್ತುವ ಜನರಲ್ಲಿ ಗರ್ಭಿಣಿಯರು, ವಯಸ್ಸಾದವರು, ಅಂಗವಿಕಲರು ಕಾಣಿಸುವುದೇ ಇಲ್ಲ. ನುಗ್ಗುತ್ತಾ ಹತ್ತುವುದು, ದೂಡುತ್ತಾ ಇಳಿಯುವುದು ಮಾಡುತ್ತೇವೆ. ಒಳಗೆ ಜಾಗ ದೊರೆತರೆ, ಅದರಲ್ಲಿ ಕುಳಿತ ತಕ್ಷಣ ಮಾಯಕದ ನಿದ್ದೆ ಆವರಿಸಿಬಿಡುತ್ತದೆ! ಅಥವಾ ಆವಾಹಿಸಿಕೊಳ್ಳುತ್ತೇವೆ. ವಿದ್ಯಾವಂತರ ಹಾಗೆ ಕಾಣುವ ನಾವು ಪುಸ್ತಕದ ವಿದ್ಯೆಯನ್ನು ಅಂಕಗಳಿಕೆಗಾಗಿ ಕಲಿತಿರುತ್ತೇವೆ. ಆದರ್ಶ, ನೀತಿ, ಮೌಲ್ಯದ ಪಾಠಗಳನ್ನು ಶಾಲೆ, ಕುಟುಂಬ, ಸಮಾಜದಲ್ಲಿ ಸರಿಯಾಗಿ ಕಲಿತಿರುವುದಿಲ್ಲ ಅಥವಾ ಕಲಿಸಿರುವುದಿಲ್ಲ.

ಇನ್ನೂ ಕೆಲವರು ತಮ್ಮ ತೊಡೆಯ ಮೇಲೆ ಕೂರಿಸಿಕೊಳ್ಳಬಹುದಾದ ಸಣ್ಣ ಮಕ್ಕಳನ್ನೂ ಸಹ ಪಕ್ಕದ ಜಾಗದಲ್ಲಿ ಕೂರಿಸಿ, ಅವರಿಗೂ ಟಿಕೇಟ್ ತೆಗೆದುಕೊಂಡಿದ್ದೇವೆಂದು ಜಂಭದಿಂದ ವಾದಿಸುವುದುಂಟು. ಆದರೆ ಆ ಸಂದರ್ಭಗಳಲ್ಲಿ ಟಿಕೇಟ್ ಖರೀದಿಸಿರುವ ಕಾನೂನಿಗಿಂತಲೂ ಒಂದು ಮಾನವೀಯ ಮೌಲ್ಯವು ಹೆಚ್ಚು ಬೆಲೆ ಉಳ್ಳದ್ದಾಗಿರುತ್ತದೆ. ಜನರಿಂದ ತುಂಬಿರುವ ಬಸ್ಸಿನೊಳಗೆ ಗರ್ಭಿಣಿಯರಿಗೆ, ಪುಟ್ಟಮಕ್ಕಳನ್ನು ಎತ್ತಿಕೊಂಡವರಿಗೆ, ವಯಸ್ಸಾದವರಿಗೆ, ವಿಶೇಷ ಚೇತನರಿಗೆ ಮಕ್ಕಳಿಂದ ಜಾಗ ಕೊಡಿಸುವುದಿಲ್ಲ. ಕೆಲವೊಮ್ಮೆ ಅಂತಹವರ ಸ್ಥಿತಿ ಕಂಡು ಕನಿಕರಿಸಿ ಪ್ರಜ್ಞಾವಂತರಾದ ಮಕ್ಕಳೇ ಎದ್ದುನಿಂತರೂ ಅವರನ್ನೂ ಗದರಿಸಿ ಕೂರಿಸುವಲ್ಲಿಗೆ ಹಿರಿತನದ ಹಕ್ಕನ್ನು ಚಲಾಯಿಸಲಾಗುತ್ತದೆ.

ಹೀಗೆ ಮಾಡುವುದರಿಂದ ಯುವ ಮನಸ್ಸಿಗೆ ಒಂದು ಉತ್ತಮ ನೀತಿಯನ್ನು, ಬದುಕಿನ ಮೌಲ್ಯವನ್ನು ಉದಾಹರಣೆ ಸಮೇತ ಕಲಿಸುವ ಅಥವಾ ಆ ಮಕ್ಕಳಿಗೆ ನಾವೇ ಆದರ್ಶವ್ಯಕ್ತಿಗಳು ಆಗಬಹುದಾದ ಸುವರ್ಣಾವಕಾಶದಿಂದ ವಂಚಿತರಾಗಿರುವ ಸೂಕ್ಷ್ಮತೆಯೂ ಗೊತ್ತಾಗುವುದಿಲ್ಲ…!

ವಿಚಾರ-2
ಇದಂತೂ ನಿತ್ಯದ ಗೋಳು ಮನೆ ಕಚೇರಿ, ಹೊಟೇಲ್, ಆಸ್ಪತ್ರೆ, ಮೊದಲಾದ ಸ್ಥಳಗಳಲ್ಲಿ ದಿನಂಪ್ರತಿ ಉತ್ಪಾದಿತವಾಗುವ ಕಸವನ್ನು ಹಸಿ- ಒಣ ಎಂದು ವಿಂಗಡಿಸದೆ, ಒಂದೇ ಬುಟ್ಟಿಯೊಳಗೆ ಹಾಕಿ ಕಸ ಒಯ್ಯುವವರಿಗೆ ನೀಡುವುದು ಇದೆಯಲ್ಲಾ… ಅದೆಂತಹ ಅಮಾನವೀಯ, ಅನಾಗರಿಕ ನಡವಳಿಕೆ ಗೊತ್ತೇ? ಕಸ ಒಯ್ಯುವವರೂ ನಮ್ಮಂತೆಯೇ ಮನುಷ್ಯರು ಎಂದು ಕಾಣಲಾರದಷ್ಟು ಪರಮ ಅನಾಗರಿಕ ವರ್ತನೆ ಅದು.

ನಾವೇ ಮತ್ತೊಮ್ಮೆ ನಮ್ಮ ಕೈಯಿಂದ ಮುಟ್ಟಲಾರದ ನಮ್ಮ ಮನೆಯ ಕಸವನ್ನು ಮತ್ತೊಬ್ಬ ವ್ಯಕ್ತಿಯು ನಮ್ಮ ಕಣ್ಣೆದುರಿಗೇ ಬರಿಗೈಯಿಂದ ವಿಂಗಡಿಸುತ್ತಾ ಇರುವಾಗ ತಲೆ ತಗ್ಗಿಸಿ ನಿಲ್ಲಬೇಕಾದ ನಮಗೆ ಏನೂ ಅನ್ನಿಸುವುದಿಲ್ಲ.

‘ಕಸ ವಿಂಗಡಿಸಿರಿ’ ಎಂದು ಎಷ್ಟೆಲ್ಲಾ ಜಾಹೀರಾತು, ಪ್ರದರ್ಶನ, ಫಲಕ ಮೊದಲಾದವುಗಳಿಂದ ಸರಕಾರಗಳು ಹಾಗೂ ಪರಿಸರ ಕಾಳಜಿಯುಳ್ಳ ಪ್ರಜ್ಞಾವಂತರು ಪರಿಪರಿಯಾಗಿ ಹೇಳಿದರೂ ಸಹ ‘ನಾವು ಕಸ ವಿಂಗಡಿಸಿಕೊಟ್ಟರೂ ಅವರು ಪುನಃ ಒಂದೇ ಡಬ್ಬಿಗೆ ಸುರಿದುಕೊಳ್ಳುತ್ತಾರೆ’ ಎನ್ನುತ್ತಾ ಸಮಸ್ಯೆ ನಮ್ಮದಲ್ಲ ಎಂದು ಸರಳವಾಗಿ ಹೇಳಿಬಿಡುತ್ತೇವೆ. ಆದರೆ ನಿಜಕ್ಕೂ ನಾವು ಕಸವನ್ನು ಸರಿಯಾಗಿ ವಿಂಗಡಿಸಲಾರದಷ್ಟು ಅಸೂಕ್ಷ್ಮ ಮನಸ್ಸಿನ ಸೋಮಾರಿಗಳು ನಾವಾಗಿರುತ್ತೇವೆ.

ಇದರ ಬದಲು, ನಾವೆಲ್ಲರೂ ಪ್ರತ್ಯೇಕವಾಗಿ ಕಸ ವಿಂಗಡಿಸಿ ಹಾಕುವುದನ್ನು ರೂಢಿ ಮಾಡಿಕೊಂಡು, ‘ನೀವೂ ಸಹ ಹೀಗೆಯೇ ಶಿಸ್ತಿನಿಂದ ನಾವು ವಿಂಗಡಿಸಿರುವ ಕಸವನ್ನು ತೆಗೆದುಕೊಂಡು ಹೋಗಿರಿ, ಬೇರ್ಪಡಿಸಿದ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಿರಿ, ಅಗತ್ಯವಿದ್ದಲ್ಲಿ ಮರು ಬಳಕೆ ಮಾಡಿರಿ’ ಎಂದು ಸರಕಾರಕ್ಕೆ ಗಟ್ಟಿ ದನಿಯಲ್ಲಿ ಆಗ್ರಹಿಸಬಹುದಾದ ನೈತಿಕ ಹಕ್ಕು ಕಳೆದುಕೊಳ್ಳುತ್ತೇವೆ. ಬಹುಪಾಲು ಕಳೆದುಕೊಂಡಿದ್ದೇವೆ.

ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ, ಸಣ್ಣ ಬದಲಾವಣೆ ಮಾಡಿಕೊಳ್ಳುವುದರಿಂದ ಸುತ್ತಲಿನ ವಾತಾವರಣಕ್ಕೆ ಆಗಬಹುದಾದ ಅಗಾಧ ಸಹಾಯದ ಕುರಿತು ಸ್ವಲ್ಪವೂ ಯೋಚಿಸುವುದಿಲ್ಲ. ನಂನಮ್ಮ ಸ್ವಾರ್ಥ, ಸಣ್ಣತನ, ಸೋಮಾರಿತನಗಳನ್ನು ಬಿಟ್ಟರೆ ಸುತ್ತಲಿನ ಸ್ಥಳವೂ ಭೂಮಿಯ ಮೇಲಿನ ಸ್ವರ್ಗವಾಗುತ್ತದೆ ಹಾಗೂ ಮನುಷ್ಯರೂ ಪ್ರಾಣಿ-ಪಕ್ಷಿಗಳಾದಿ ಸಕಲ ಚರಾಚರಗಳು ನೆಮ್ಮದಿಯಿಂದ ಬದುಕಬಹುದು.

ಇಷ್ಟು ಹೇಳಿರುವ ವಿಚಾರಗಳು ಯಾರಿಗೂ ಹೊಸದೇನೂ ಅಲ್ಲ. ಇಂತಹ ಸಾವಿರ ವಿಷಯಗಳಿವೆ. ಆದರೂ ಇದರತ್ತ ನಾವು ಸವಿವರವಾಗಿ ಯೋಚಿಸುವುದಿಲ್ಲ. ನಮ್ಮ ಸ್ವಾರ್ಥಪೂರ್ಣ ನವ ನಾಗರಿಕತೆಗೆ ‘ಸೂಕ್ಷ ಸಂವೇದನೆ’ ಎಂಬುದರ ಅರ್ಥ ಸ್ಪಷ್ಟವಾಗಿ ತಿಳಿದಿಲ್ಲ. ಇದು ನೈತಿಕ ಅನಾಹುತವಲ್ಲದೆ ಬೇರೇನು?!

-ವಸುಂಧರಾ ಕದಲೂರು

7 Responses

  1. Samatha.R says:

    ತುಂಬಾ ಚೆನ್ನಾಗಿ ಹೇಳಿದ್ದೀರಿ..ಇದೆಲ್ಲವೂ ಎಲ್ಲರಿಗೂ ಗೊತ್ತಿರುವ ವಿಚಾರಗಳೇ ಆದರೆ ಯಾರೂ ಅನುಷ್ಠಾನಕ್ಕೆ ತರುವುದಿಲ್ಲ.ಇದು ಜನರ ಮೂರ್ಖತನವೇ,ಅಹಂಕಾರವೇ,ಇಲ್ಲ ಸೋಮಾರಿತನ ವೇ ತಿಳಿಯದು.ಆದರೆ ಕೆಲವರ ನಿಷ್ಕಾಳಜಿ ಗೆ ಹಲವರು ತೊಂದರೆಗೆ ಒಳಗಾಗುವುದು ಬೇಸರದ ಸಂಗತಿ…ಅರಿವಿನ ಅನುಷ್ಠಾನದ ಕೊರತೆ ಯೆ ಈಗಿನ ಸಮಸ್ಯೆ…ಒಳ್ಳೆಯ ಲೇಖನ..

  2. Anonymous says:

    ಚೆನ್ನಾಗಿ ಬರೆದಿದ್ದೀರ.

  3. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿ ಹೇಳಿದ್ದೀರಿ. ನಮ್ಮ ನಮ್ಮ ಜವಾಬ್ದಾರಿಗಿಂತ ಮಾನವೀಯತೆಯನ್ನು ಎಚ್ಚರಿಸುವಂತಿದೆ ಬರಹ.

  4. ಬಿ.ಆರ್.ನಾಗರತ್ನ says:

    ನೀವು ಹೇಳಿರುವುದು ಎಲ್ಲಾ ಸತ್ಯ ನೋಡಿ ದರೂ ಏನು ಮಾಡಲಾಗದ ಪರಿಸ್ಥಿತಿ ಯೂ ಸತ್ಯ ಗಮನಿಸಿದ ಅಂಶಗಳನ್ನು ಲೇಖನಕ್ಕಿಳಿಸಿ ನಮ್ಮ ನೆನಪಿನ ಬುತ್ತಿ ಬಿಚ್ಚಿಸಿದಕ್ಕೆ ಒಂದು ನಮನ

  5. Hema says:

    ನಿಜ…ಚೆಂದದ ಲೇಖನ, ವಾಸ್ತವಕ್ಕೆ ಹಿಡಿದ ಕನ್ನಡಿ..

  6. ಶಿವಮೂರ್ತಿ.ಹೆಚ್. says:

    ಬಹಳ ಅರ್ಥಪೂರ್ಣ ಲೇಖನ ಮೇಡಂ

  7. sudha says:

    The present day society is machine like without any feelings or responsibility. good article.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: