‘ನೆಮ್ಮದಿಯ ನೆಲೆ’-ಎಸಳು 14

Share Button

(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಯ ಸರಳ ವಿವಾಹ, ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು ಮಕ್ಕಳಾಗಿ, ಆಧುನಿಕ ಮನೋಭಾವನೆಯೊಂದಿಗೆ ತಮ್ಮ ವಿವಾಹದ ವ್ಯವಸ್ಥೆ ತಾವೇ ಮಾಡಿಕೊಳ್ಳುವುದು ಬಿಸಿತುಪ್ಪದಂತಾಗುತ್ತದೆ. ಮಗ ತಮ್ಮ ಅಗತ್ಯಕ್ಕಾಗಿ ಅಮೇರಿಕಾಕ್ಕೆ ಕರೆಯಿಸಿಕೊಳ್ಳುತ್ತಾನೆ, ಬರಬರುತ್ತಾ ಸೊಸೆಯ ಅನಾದರ ಗಮನಕ್ಕೆ ಬರುತ್ತದೆ…ಈ ನಡುವೆ ಗೆಳತಿ ಸಂಧ್ಯಾಳೊಂದಿಗೆ ಒಡನಾಟ ಶುರುವಾಯಿತು…..ಮುಂದಕ್ಕೆ ಓದಿ)

ತನ್ನ ಸೊಸೆಯಿಂದ ವಿಷಯ ತಿಳಿದ ಸಂಧ್ಯಾ ನನಗೆ ಫೋನ್ ಮಾಡಿ  ‘ ಅಂತೂ ಇಷ್ಟು ವರ್ಷಕ್ಕೆ ಮನಸ್ಸು ಮಾಡಿದೆಯಲ್ಲಾ ಒಳ್ಳೆಯದಾಯ್ತು ಬಿಡು’  ಎಂದಳು. ಅವಳ ನಿರ್ದೇಶನದಂತೆ ಪ್ರವಾಸಗಳಿಗೆ ತಯಾರಾಗಿ ಹೋಗಿ ಬರಲು ಪ್ರಾರಂಭಿಸಿದೆ.  ಮೊದಲು ನನ್ನ ಪ್ರವಾಸ ಪ್ರಾರಂಭವಾದದ್ದೇ ನನ್ನೂರು ನಂಜನಗೂಡಿನಿಂದ. ಅಲ್ಲಿನ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು ಯಾವುದಿದೆ ಎಂದುಕೊಂಡು ಹೊರಟ ನನಗೆ ಅಶ್ಚರ್ಯವಾಯಿತು. ನಂಜನಗೂಡಿನೊಳಗೇ ಏಳು ದೇವಸ್ಥಾನಗಳು, ಸುತ್ತಮುತ್ತಲ ದೇವನೂರು, ತಗಡೂರು, ಕಳಲೆ, ಗೊಪಾಲಸ್ವಾಮಿ ಬೆಟ್ಟ, ಹಿಮವತ್‌ಗೋಪಾಲಸ್ವಾಮಿ ಕ್ಷೇತ್ರ, ಕಬಿನಿ ರೆಸಾರ್ಟ್‌ಮುಂತಾದವು. ಇಷ್ಟೆಲ್ಲಾ ಇವೆಯಾ? ಅನ್ನಿಸಿತು. ನಂಜನಗೂಡಿನಿಂದ ಸುಮಾರು ಹದಿನಾರು ಕಿ.ಮೀ. ದೂರದಲ್ಲಿರುವ ಎಡತಲೆ ಎಂಬಲ್ಲಿ ನಾಲ್ಕುನೂರು ವರ್ಷ ಪುರಾತನ ಹೊಯ್ಸಳ ಶೈಲಿಯ ದೇವಸ್ಥಾನ ನನಗೆ ಬಹಳ ಹಿಡಿಸಿತು. ಆ ಊರಿಗೆ ಎಡತಲೆ ಎಂಬ ಹೆಸರಿನ ಇತಿಹಾಸ, ಅಲ್ಲಿನ ಲಕ್ಷ್ಮೀನರಸಿಂಹ, ಲಕ್ಷ್ಮೀಕಾಂತ, ವೇಣುಗೋಪಾಲ, ದೇವಸ್ಥಾನದ ಆವರಣದಲ್ಲಿ ಸೇರಿದ್ದವು. ಅಲ್ಲಿಯ ವೇಣುಗೋಪಾಲ ಸ್ವಾಮಿಯ ಸನ್ನಿಧಿಯಲ್ಲಿ ಮಕ್ಕಳಿಲ್ಲದ ದಂಪತಿಗಳು ಅವರನ್ನು ಆರಾಧಿಸಿ ಬೇಡಿಕೊಂಡರೆ ಅವರಿಗೆ ಖಂಡಿತ ಮಕ್ಕಳಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಅದೇ ದೇವಸ್ಥಾನದ ಅನತಿದೂರದಲ್ಲಿ ಅಲ್ಲಿದ್ದ ಪಾಳೆಯಗಾರನೊಬ್ಬ ಕಟ್ಟಿಸಿದ ಚಾವಡಿಯ ಕಟ್ಟಡವೊಂದಿದೆ. ಅದರ ಒಳಾಂಗಣದಲ್ಲಿ ಸುತ್ತಲೂ ಕಲ್ಲಿನ ಜಗುಲಿಗಳಿದ್ದವು. ಮುಖ್ಯಭಾಗದಲ್ಲಿ ಕೊಂಚ ಎತ್ತರವಾಗಿದ್ದ ಒಂದು ಪೀಠವಿತ್ತು. ಕುತೂಹಲ ತಡೆಯಲಾರದೆ ಅಲ್ಲಿನ ಅರ್ಚಕರನ್ನು ಕೇಳಿ ತಿಳಿದುಕೊಳ್ಳಬೇಕೆನ್ನುವಷ್ಟರಲ್ಲಿ ನನ್ನ ಜೊತೆಯಲ್ಲಿ ಬಂದಿದ್ದ ಗೆಳತಿ ಸಂಧ್ಯಾ ‘ಈ ಅಯ್ಯನವರು ಕತೆ ಹೇಳಲಿಕ್ಕೆ ಶುರುಮಾಡಿದರೆ ಇವತ್ತಿಗೆ ಮುಗಿಯಲ್ಲ. ಮುಂದಿನ ಜಾಗಕ್ಕೆ ಹೋಗಲು ತಡವಾಗುತ್ತೆ. ಅಲ್ಲಿರುವ ಕಲ್ಲಿನ ಜಗುಲಿಗಳನ್ನೆಲ್ಲ ಎಣಿಸಿಕೋ. ಅವುಗಳ ಕಥೆಯನ್ನು ನಾನು ನಿನಗೆ ತೊರಿಸುತ್ತೇನೆ’ ಎಂದು ತನ್ನ ಮೊಬೈಲಿನಲ್ಲಿ ಯಾವುದೋ ಯುಟ್ಯೂಬ್ ಚಾನಲ್‌ನಲ್ಲಿದ್ದ ವಿವರಣೆಗಳನ್ನು ನನಗೆ ತೋರಿದಳು. ಬಸ್ಸಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಎಲ್ಲರೂ ಬಂದಿದ್ದಾರೆಯೇ ಎಂದು ಗಮನಿಸಿ ಸ್ವಸ್ಥಾನಕ್ಕೆ ಕುಳಿತೆವು. ಇದೊಂದು ಸ್ಥಳೀಯ ದಂತಕತೆಯೋ, ಜನಪದರ ನಂಬಿಕೆಯೋ ಇರಬೇಕು. ಕೇಳು ಎಂದು ಅಲ್ಲಿನ ಕತೆಯನ್ನು ಹೇಳಲು ಪ್ರಾರಂಭಿಸಿದಳು.

‘ಆಗಿನ ಕಾಲದಲ್ಲಿ ಸುತ್ತಮುತ್ತಲಿದ್ದ ಪ್ರದೇಶವೆಲ್ಲ ಭೀಮಣ್ಣನಾಯಕ ಎನ್ನುವ ಪಾಳ್ಳೇಗಾರನ ಆಡಳಿತಕ್ಕೆ ಸೇರಿತ್ತು. ಆತನಿಗೆ ವಿವಾಹವಾಗಿ ಎರಡುವರ್ಷಗಳಾದರೂ ಮಕ್ಕಳಿರಲಿಲ್ಲ. ಆಗ ಆತ ಪತ್ನೀ ಸಮೇತನಾಗಿ ಇಲ್ಲಿನ ವೇಣುಗೋಪಾಲಸ್ವಾಮಿಯ ದೇವಾಲಯಕ್ಕೆ ಬಂದು ಪೂಜೆಸಲ್ಲಿಸಿ ಹರಕೆ ಮಾಡಿಕೊಂಡನಂತೆ. ನಂತರ ಅವನಿಗೆ ಹದಿನಾರು ಮಂದಿ ಹೆಣ್ಣುಮಕ್ಕಳು ಜನಿಸಿದರಂತೆ. ಅವರೆಲ್ಲರಿಗೂ ತಾನಿದ್ದ ಸರಹದ್ದಿನಲ್ಲೇ ಒಂದೊಂದು ವಿಭಾಗಗಳಲ್ಲಿ ತುಂಬ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುತ್ತಿದ್ದ ಸುಸಂಕೃತ ಮನೆತನಗಳಲ್ಲಿನ ಯುವಕರನ್ನು ಹುಡುಕಿ ವಿವಾಹ ಮಾಡಿದನಂತೆ. ಎಲ್ಲಾ ಹೆಣ್ಣುಮಕ್ಕಳು ಅಳಿಯಂದಿರನ್ನೂ ಒಮ್ಮೆಗೇ ದರ್ಶನಮಾಡಲು ಅನುಕೂಲವಾಗಲೆಂದು ಹದಿನಾರು ಜಗುಲಿಗಳಿರುವ ಈ ಚಾವಡಿಯನ್ನು ಕಟ್ಟಿಸಿದನಂತೆ. ಆಗಿನ ರೀತಿರಿವಾಜಿನಂತೆ ಅಳಿಯನನ್ನು ನೇರವಾಗಿ ಅತ್ತೆಯು ನೋಡಬಾರದೆಂದಿತ್ತು. ಹಾಗಾಗಿ ಪ್ರತಿಯೊಂದು ಜಗುಲಿಯಲ್ಲೂ ಒಬ್ಬೊಬ್ಬ ಜೋಡಿಯಂತೆ ಮಗಳು, ಅಳಿಯಂದಿರು ಬೇರೆಬೇರೆಯಾಗಿ ಕುಳಿತುಕೊಂಡಾಗ ಮುಖ್ಯ ಪೀಠದಲ್ಲಿ ಕುಳಿತ ಪಾಳ್ಳೇಗಾರ ಮತ್ತವನ ಪತ್ನಿಗೆ ಅವರೆಲ್ಲರೂ ಕಾಣಿಸುವಂತೆ ಅಲ್ಲಿನ ವಾಸ್ತುಜಾಣ್ಮೆಯಿಂದ ನಿರ್ಮಿಸಲಾಗಿತ್ತು. ಮಧ್ಯೆ ಮಧ್ಯೆ ಇರುವ ಸ್ಥಂಭಗಳು ನಾಯಕನ ರಾಣಿಗೆ ಹೆಣ್ಣುಮಕ್ಕಳು ಮಾತ್ರ ಗೋಚರಿಸಿ ಅಳಿಯಂದಿರುಗಳು ಕಾಣಿಸದಂತೆ ಇದ್ದುವು. ಇದನ್ನು ಈಗಲೂ ಪರೀಕ್ಷಿಸಬಹುದು. ಹೀಗೆ ವರ್ಷಕ್ಕೊಮ್ಮೆ ಎಲ್ಲ ಮಕ್ಕಳ ಸಂಸಾರಗಳು ಅಲ್ಲಿ ದೇವರ ಸನ್ನಿಧಿಗೆ ಆಗಮಿಸಿ ಬೆಳಗಿನಿಂದ ಸಂಜೆಯಯವರೆಗೆ ಅಲ್ಲಿನ ದೇವಾಲಯದಲ್ಲಿ ಪೂಜೆ ನೆರವೇರಿಸಿ ಚಾವಡಿಯಲ್ಲಿ ಆಮೋದ ಪ್ರಮೋದ, ನೃತ್ಯ, ಸಂಗೀತ ಮೊದಲಾದ ಮನರಂಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟೋಪಚಾರಗಳನ್ನು ಮುಗಿಸಿಕೊಂಡು ಸಂಜೆಯವೇಳೆಗೆ ತಂತಂಮ್ಮ ಊರುಗಳಿಗೆ ತೆರಳುತ್ತಿದ್ದರಂತೆ. ಪ್ರತಿಯೊಬ್ಬ ಮಗಳ ಮನೆಗೂ ಪ್ರತ್ಯೇಕವಾಗಿ ಹೋಗಿಬಂದರೆ ಅದಕ್ಕಾಗಿಯೇ ಸಾಕಷ್ಟು ಸಮಯ ಹರಣವಾಗುತ್ತದೆಂದು ಇಂತಹ ಉಪಾಯವನ್ನು ಮಾಡಿದ್ದನಂತೆ. ಇಂತಹ ಸ್ಥಳೀಯ ಇತಿಹಾಸದ ಕತೆಗಳು ನನಗೆ ಬೇಕಾದಷ್ಟು ಗೊತ್ತಿವೆ. ನಿನಗೆ ಕುತೂಹಲವಿದ್ದರೆ ಖಂಡಿತ ಹೇಳುತ್ತೇನೆ’ ಯೋಚಿಸಬೇಡ ಎಂದಳು ಸಂಧ್ಯಾ.

‘ಅದೆಲ್ಲ ಸರಿ ಸಂಧ್ಯಾ ನೀನು ಇಂತಹ ಒಂದೊಂದು ಸ್ಥಳಗಳನ್ನು ಎಷ್ಟು ಸಾರಿ ನೋಡಿರಬಹುದು? ಹೀಗೆ ನೋಡಿದ್ದನ್ನೇ ನೋಡಲು ನಿನಗೆ ಬೇಸರವಾಗುವುದಿಲ್ಲವೇ?’ ಎಂದು ಅವಳನ್ನು ಕೇಳಿದೆ.

ನನ್ನ ಮಾತನ್ನು ಕೇಳಿದ ಅವಳು ‘ಹೂ ಕಣೆ, ನೀನು ಹೇಳುವುದರಲ್ಲಿ ಸತ್ಯವಿದೆ. ಆದರೆ ಮನೆಯಲ್ಲಿ ನನ್ನ ಸೊಸೆ, ಮಗಳ ಪೈಪೋಟಿ ನೋಡಿ ನೋಡಿ ಸಾಕಾಗಿ ನನಗೆ ಹೀಗೆ ಹೊರಬರುವುದು ನೆಮ್ಮದಿ ಕೊಡುತ್ತದೆ. ಇದು ಒಂದು ರೀತಿಯಲ್ಲಿ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವ ಸುಲಭದ ಉಪಾಯ. ನನ್ನವರು, ಮಗ ಬೇಡವೆನ್ನದೆ ಜನಗಳನ್ನು ಕೊಂಡೊಯ್ಯುವ ಜವಾಬ್ದಾರಿಯನ್ನು ನನಗೆ ವಹಿಸಿದಾಗಲೆಲ್ಲ ನಾನು ಬರುತ್ತಲೇ ಇರುತ್ತೇನೆ’ ಎಂದಳು ವಿಷಾದದಿಂದ.

ಅವಳ ಮಾತಿನ ಹಿಂದಿದ್ದ ವೇದನೆ ಅರ್ಥವಾಗಿ ನಾನು ಇನ್ನೆಂದೂ ಅವಳನ್ನು ಇಂತಹ ಪ್ರಶ್ನೆಗಳನ್ನು ಕೇಳಬಾರದೆಂದು ಮೌನವಹಿಸಿದೆ . ಆ ನಂತರದ ಪ್ರವಾಸಕ್ಕೆ ಹೋಗುವ ಮೊದಲು ಯಾವ ಸ್ಥಳಗಳಿಗೆ ಭೇಟಿಕೊಡುತ್ತೇನೆ, ಅಲ್ಲಿ ಮುಖ್ಯವಾದದ್ದೇನು, ಎಂಬುವ ವಿಚಾರಗಳ ಬಗ್ಗೆ ಐತಿಹಾಸಿಕ, ಪೌರಾಣಿಕ ಹಿನ್ನೆಲೆಗಳನ್ನು ಮೊದಲೇ ತಿಳಿದುಕೊಂಡು ಹೋಗುವ ಪರಿಪಾಠ ಮಾಡಿಕೊಂಡೆ. ಅದನ್ನು ಹೊರತುಪಡಿಸಿ ಉಳಿದ ವಿಚಾರಗಳ ಬಗ್ಗೆ ಗೆಳತಿಯನ್ನು, ಅಥವಾ ಸಹಪ್ರಯಾಣಿಕರನ್ನು ಕೇಳಿ ತಿಳಿದುಕೊಳ್ಳುವ ರೀತಿ ನನ್ನಲ್ಲಿ ಮೈಗೂಡಿತು.

ವಿಶ್ವ ಪ್ರಸಿದ್ಧ ಹಂಪಿಯ ಪ್ರವಾಸ ಕಾಲದಲ್ಲಿ ವಿಜಯನಗರದ ರಾಜಮನೆತನಗಳ ಪೂರ್ಣ ವಿವರಗಳು, ಅಲ್ಲಿ ನೋಡಬೇಕಾದ ಸ್ಥಳಗಳ ಮಾಹಿತಿಗಳು ಲಭ್ಯವಿದ್ದುದರಿಂದ ಕಾಲು ಸೋಲುವವರೆಗೂ ನಡೆದಾಡಿ ಕಣ್ಣು ಸೋಲುವವರೆಗೂ ವೀಕ್ಷಿಸಿದೆ. ಪುರಾತತ್ವ ಇಲಾಖೆಯವರು ಉತ್ಖನನ ಮಾಡಿ ಪೂರ್ವಕಾಲದ ಇತಿಹಾಸವನ್ನು ನಮ್ಮ ಕಣ್ಮುಂದೆ ತೆರೆದಿಟ್ಟಿದ್ದಾರೆ ಎಂದೆನ್ನಿಸಿತು.
ಇನ್ನು ಐಹೊಳೆ, ಪಟ್ಟದಕಲ್ಲು, ಬಾದಾಮಿ ಮುಂತಾದ ಸ್ಥಳಗಳಲ್ಲಿ ಚಾಲುಕ್ಯ ಶಿಲ್ಪಕಲಾ ವೈಭವ, ಶಿಲಾ ಶಾಸನಗಳು, ದೇವಾಲಯಗಳ ನಿರ್ಮಾಣದ ಹಲವು ಹಂತಗಳ ಪ್ರಾತ್ಯಕ್ಷಿಕೆಗಳು, ಗುಹಾಂತರ ದೇವಾಲಯದ ಜಾಣ್ಮೆಗಳು, ವಸ್ತುಸಂಗ್ರಹಾಲಯ ಎಲ್ಲವನ್ನೂ ನೋಡಿದಾಗ ವಿವಿಧ ಕಾಲಘಟ್ಟದಲ್ಲಿ ಹಲವು ಸಂತತಿಗಳ ದೊರೆಗಳು, ಆಯಾ ಪರಂಪರೆಗಳಿಗೆ, ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಿಸಿದ ವೈಭವೋಪೇತ, ಸಾಂಸ್ಕೃತಿಕ, ಮಾದರಿಗಳು ಮತ್ತು ಅವಶೇಷಗಳು ಇಂದಿಗೂ ಜೀವಂತವಾಗಿ ಇತಿಹಾಸವನ್ನು ಸಾರುತ್ತಿವೆ. ಅಂದಿನ ಕುಶಲಕಲೆಗಳಿಗೆ ಸಾಕ್ಷೀಭೂತವಾಗಿವೆ. ಇಲ್ಲಿ ಜೌನ, ಬೌದ್ಧ, ವೈಷ್ಣವ, ಶೈವ, ನಾಲ್ಕೂ ಧರ್ಮಗಳ ವಿಶಿಷ್ಟತೆ, ವಿಭಿನ್ನತೆ ಸ್ಪಷ್ಟವಾಗಿ ಗೋಚರಿಸುತ್ತದೆ ಎನ್ನಿಸಿತು.

ಸೋಮನಾಥಪುರದ ದೇವಾಲಯ

ಇವುಗಳನ್ನು ಕುರಿತು ಜನಸಾಮಾನ್ಯರು ಹೇಳುವ ಮಾತು ಅತ್ಯಂತ ಮಾರ್ಮಿಕವಾದರೂ ಅರ್ಥಪೂರ್ಣವಾದುದು. ಐಹೊಳೆಯು ಪ್ರಾಥಮಿಕಶಾಲೆ, ಬಾದಾಮಿಯು ಮಾಧ್ಯಮಿಕಶಾಲೆ, ಪಟ್ಟದಕಲ್ಲು ಕಾಲೇಜಿನ ರೀತಿಯಲ್ಲಿ ಶಿಲ್ಪಕಲೆ, ದೇವಾಲಯ ನಿರ್ಮಾಣದ ಕಲೆಯು ಬೆಳವಣಿಗೆ ಹೊಂದಿದೆ. ಮುಂದೆ ಪ್ರಾವೀಣ್ಯತೆ ಪಡೆದಮೇಲೆ ಬೇಲೂರು, ಹಳೇಬೀಡು, ಸೋಮನಾಥಪುರದ ದೇವಾಲಯಗಳು ವಿಶ್ವವಿದ್ಯಾನಿಲಯದ ಹಂತದವು. ಈ ರೀತಿಯಲ್ಲಿ ಕರ್ನಾಟಕದ ಶಿಲ್ಪಕಲೆಯು ಹಂತಹಂತವಾಗಿ ಬೆಳವಣಿಗೆ ಹೊಂದಿತು ಎನ್ನುತ್ತಾರೆ. ಇದು ಸತ್ಯವೆನ್ನಿಸುತ್ತದೆ.

ಇವೆಲ್ಲದರ ಜೊತೆಗೆ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ಶ್ರೀಮಂತ ಖಜಾನೆಯಾಗಿರುವ ಪ್ರದೇಶಗಳಲ್ಲಿ ಗುಹಾಲಯಗಳು ಮತ್ತು ಸ್ವತಂತ್ರ ದೇವಾಲಯ ನಿರ್ಮಾಣದಲ್ಲಿ ಅರಂಭಿಕ ಹಂತಕ್ಕೆ ಸೇರಿದ ಮತ್ತು ಅತ್ಯಂತ ಸುಂದರವಾದ ನಿದರ್ಶನಗಳು ಕಂಡು ಬರುತ್ತವೆ. ಈ ನಿರ್ಮಾಣಗಳ ನಂತರದ ಅವಧಿಯಲ್ಲಿ ದಕ್ಷಿಣ ಭಾರತದಾದ್ಯಂತ ಕಟ್ಟಲ್ಪಟ್ಟ ದೇವಾಲಯಗಳಿಗೆ ನೀಲಿ ನಕಾಶೆಯನ್ನೊದಗಿಸಿದವು ಎಂದು ಹೇಳಬಹುದು.

ಹುನಗುಂದ ತಾಲೂಕಿನ ಕೂಡಲಸಂಗಮ ಕ್ಷೇತ್ರವು ಈಗ ಅಂತರ್ರಾಷ್ಟ್ರೀಯ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರ. ಹನ್ನೆರಡನೆಯ ಶತಮಾನದಲ್ಲಿ ಇಲ್ಲಿಯೇ ಜಾತವೇದಮುನಿಗಳು ವಿದ್ಯಾಕೇಂದ್ರವೊಂದನ್ನು ನಡೆಸುತ್ತಿದ್ದರು. ಅದೇ ವಿದ್ಯಾಲಯದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಮುಂತಾದವರು ವಿದ್ಯಾಭ್ಯಾಸ ಮಾಡಿದ್ದರು. ಇದು ಸಾಮಾಜಿಕ ಕ್ರಾಂತಿಮಾಡಿದ ಶರಣಶ್ರೇಷ್ಠ, ಜಗಜ್ಯೋತಿ ಅಭಿದಾನವನ್ನು ಪಡೆದ ಬಸವೇಶ್ವರರು ಐಕ್ಯಹೊಂದಿದ ಸ್ಥಳ. ಜಗತ್ತಿನಲ್ಲಿ ಗುಮ್ಮಟಾಕಾರದ ಸಭಾಭವನ, ದಾಸೋಹ ಯಾತ್ರಿನಿವಾಸ, ಪೂಜಾವನ ಮತ್ತು ಮಾತೆ ಮಹಾದೇವಿಯ ಆಶ್ರಮ , ಶರಣ ಸಾಹಿತ್ಯ ಭಂಢಾರಲ್ಲವೂ ಇಲ್ಲಿದೆ. ಇದನ್ನು ಸಂದರ್ಶಿಸಿದಾಗ ಮನಸ್ಸಿಗೆ, ಕಣ್ಣಿಗೆ ಮುದತಂದಿತು. ಹಿಂದೆಯೇ ಬಸವಣ್ಣನವರು ತಾವೇ ರೂಪಿಸಿದ ಮಾನವತಾವಾದದ ಶರಣಪಂಥವನ್ನು ಅವರ ಕಣ್ಣೆದುರಿಗೇ ಅಂದಿನ ಪಟ್ಟಭದ್ರರ ಕುತಂತ್ರಗಳಿಂದ ನಾಶಮಾಡುವ ಪ್ರಯತ್ನ ನಡೆದದ್ದನ್ನು ಕಂಡು ಬೇಸರಿಸಿ ಅವರು ಇಲ್ಲಿಗೆ ಬಂದು ತಮ್ಮ ಆರಾಧ್ಯದೈವ ಸಂಗಮನಾಥನಲ್ಲಿ ಐಕ್ಯರಾದರು. ನನ್ನ ವೈಯಕ್ತಿಕ ಮನಸ್ಸಿಗೆ ಅವರು ಇಲ್ಲಿಗೆ ಹೊರಟು ಬರುವ ಬದಲು ಶತಾಯಗತಾಯ ಕಲ್ಯಾಣದಲ್ಲಿಯೇ ಇದ್ದು ಅವರನ್ನೆದುರಿಸಿ ಹೋರಾಟದಲ್ಲಿ ಅಂತ್ಯರಾಗಿದ್ದರೆ ಇನ್ನೂ ಪ್ರಸಿದ್ಧರಾಗುತ್ತಿದ್ದರೇನೋ ಅನ್ನಿಸಿತು. ಆದರೆ ಗತಕಾಲವನ್ನು ಮರಳಿ ನಿರ್ಮಿಸಲಾದೀತೇ? ಆದರೆ ಇಂತಹ ವೈಯಕ್ತಿಕ ವಿಚಾರವನ್ನು ಇತರರೊಡನೆ ಹಂಚಿಕೊಳ್ಳುವ ಸಾಹಸಕ್ಕೆ ಹೋಗಲಿಲ್ಲ.

ಕಡಲ ತೀರದ ಜಿಲ್ಲೆಗಳ ಧರ್ಮಸ್ಥಳ, ಶೃಂಗೇರಿ, ಉಡುಪಿ, ಕಟೀಲು, ಹೊರನಾಡು, ತೀರದುದ್ದಕ್ಕೂ ಇರುವ ಅನೇಕ ಗಣಪತಿಯ ದೇವಾಲಯಗಳು ಆನೆಗೊಂದಿ, ಇಡುಗುಂಜಿ, ಬಯಲು ಗಣಪತಿ, ಮುಂತಾದವುಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುವ ಧಾರ್ಮಿಕ ಸ್ಥಳಗಳು. ಇವೆಲ್ಲವನ್ನೂ ದರ್ಶಿಸಿದಾಗ ಕೆಲವು ಕಾಲ ಮನಸ್ಸಿಗೆ ಸಾರ್ಥಕಭಾವ ಮೂಡಿಸಿತ್ತು. ಅಲ್ಲಿನ ದಾಸೋಹಗಳಿರುವ ಸ್ಥಳಗಳಲ್ಲಿ ಉಚ್ಛನೀಚ, ಭೇದಭಾವಗಳಿಲ್ಲದೆ ಪ್ರಸಾದ ನೀಡುವ ಕ್ರಮ ನನ್ನನ್ನು ವಿನೀತಳನ್ನಾಸಿತು. ದಕ್ಷಿಣದಲ್ಲಿ ಬೇಲೂರು, ಹಳೆಬೀಡು, ಸೋಮನಾಥಪುರ ದೇವಾಲಯಗಳು, ಮಹೋನ್ನತ ಶಿಲ್ಪಕಲಾ ವೈಭವದ ನೆನಪನ್ನು ಅನಾವರಣಗೊಳಿಸಿದ್ದವು. ಪವಿತ್ರ ಜೈನಕ್ಷೇತ್ರ ಶ್ರವಣ ಬೆಳಗೊಳದ ಬೆಟ್ಟ ಹತ್ತುವಾಗ ಕಷ್ಟವೆನ್ನಿಸಿದರೂ ಆಕಾಶದೆತ್ತರಕ್ಕೆ ನಿಂತು ಸಾವಿರ ವರ್ಷಗಳಿಂದ ವೈರಾಗ್ಯದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುತ್ತಿರುವ ಭವ್ಯ ಗೊಮ್ಮಟನ ಮೂರ್ತಿಯ ಮುಂದೆ ಆಯಾಸವೆಲ್ಲವೂ ಕಣ್ಮರೆಯಾಗಿ ಭಕ್ತಿಭಾವ ತಲೆದೋರಿತ್ತು. ನನಗರಿವಿಲ್ಲದೆಯೇ ಕರಗಳು ಜೋಡಿಸಿಕೊಂಡವು. ಮನಸ್ಸು ಶಾಂತವಾಯಿತು.

ನಂತರದ ಪ್ರವಾಸದಲ್ಲಿ ಮಹಾರಾಷ್ಟ್ರದ ಕೆಲವು ತಾಣಗಳನ್ನು ಸುತ್ತಿಬಂದೆನು. ಅತ್ಯದ್ಭುತವೆನ್ನಿಸಿದ್ದು ಔರಂಗಾಬಾದ್ ಜಿಲ್ಲೆಯ ಅಜಂತಾ, ಎಲ್ಲೋರಾದ ಗುಹೆಗಳು. ಬೇರೆ ದೇವಾಲಯಗಳಂತೆ ಇಲ್ಲಿ ಆರಾಧನೆಯಿಲ್ಲ. ಏಕೆಂದರೆ ಸಾಕಷ್ಟು ಗುಹಾಂತರ ದೇವಾಲಯಗಳು ಪರಿಪೂರ್ಣವಾಗಿಲ್ಲ, ಕೆಲವು ಭಗ್ನಗೊಂಡಿವೆ. ಪಟ್ಟಣ ಪ್ರದೇಶದಿಂದ ಬಹುದೂರದಲ್ಲಿ ಬೆಟ್ಟಗಳನ್ನು ಕೊರೆದು ಇವುಗಳನ್ನು ನಿರ್ಮಿಸಲಾಗಿದೆ. ಇವುಗಳ ನಿರ್ಮಾಣಕ್ಕೆ ಸಾಕಷ್ಟು ವರ್ಷಗಳೇ ಕಳೆದಿರಬಹುದು. ಅಲ್ಲಿಯೂ ಸಹ, ಶೈವ, ಬೌದ್ಧ, ಜೈನ ಧರ್ಮಗಳ ಅಂಶಗಳನ್ನು ಅನುಸರಿಸಿ ನಿರ್ಮಾಣಗಳನ್ನು ಮಾಡಲಾಗಿದೆ. ಅತ್ಯದ್ಭುತವೆನ್ನಿಸುವ ಈ ಗುಹೆಗಳಲ್ಲಿ ಅಮೂಲ್ಯವಾದ ವರ್ಣಚಿತ್ರಗಳಿವೆ. ಇಲ್ಲಿ ಬಳಸಿರುವ ಬಣ್ಣಗಳು ಸಂಪೂರ್ಣವಾಗಿ ನೈಸರ್ಗಿಕವಾದವು. ಇವೆಲ್ಲವೂ ಸಾವಿರಾರು ಪ್ರೇಕ್ಷಕರನ್ನು ದೇಶವಿದೇಶಗಳಿಂದ ದಿನವೂ ಆಕರ್ಷಿಸುತ್ತಿವೆ.

ಮುಂದಿನ ಬಾರಿ ಒರಿಸ್ಸಾ ಪ್ರವಾಸ ಕಾಲದಲ್ಲಿ ನನಗೆ ಹೆಚ್ಚು ಮುದಕೊಟ್ಟ ದೇವಾಲಯವೆಂದರೆ ಕೋನಾರ್ಕದ ಸೂರ್‍ಯದೇವಾಲಯ. ಪ್ರಸಿದ್ಧವಾದ ಪ್ರವಾಸಿ ಕ್ಷೇತ್ರ ಮತ್ತು ಶಿಲ್ಪಕಲೆಯೂ ಅದ್ಭುತವಾಗಿದೆ. ಸೂರ್ಯನು ಏಳುಕುದುರೆಗಳನ್ನು ಕಟ್ಟಿದ ಇಪ್ಪತ್ನಾಲ್ಕು ಚಕ್ರಗಳಿರುವ ರಥವನ್ನೇರಿ ಬರುತ್ತಿದ್ದಾನೆ ಎಂದು ರೂಪಿಸಿರುವ ಭವ್ಯ ಮಂದಿರ. ಮರಳುಕಲ್ಲಿನಿಂದ ಕಟ್ಟಿರುವ ಈ ದೇವಾಲಯ ೧೩ನೆಯ ಶತಮಾನದಲ್ಲಿ ಗಂಗವಂಶದ ರಾಜನಾದ ನರಸಿಂಹದೇವನು ಕಟ್ಟಿಸಿದನೆಂದು ಇತಿಹಾಸದಲ್ಲಿ ದಾಖಲಾಗಿದೆ. ದೇವಾಲಯವು ಈಗ ಸುಸ್ಥಿತಿಯಲ್ಲಿಲ್ಲ. ಮುಂಜಾನೆಯ ಮೊದಲ ಸೂರ್ಯಕಿರಣಗಳು ಗರ್ಭಗುಡಿಯ ಸೂರ್ಯದೇವನ ಮೂರ್ತಿಯಮೇಲೆ ಬೀಳುತ್ತಿದ್ದವು. ಅಂತಹ ಕೋನದಲ್ಲಿರುವ ಇದನ್ನು ಕೋನಾರ್ಕ (ಅರ್ಕ ಎಂದರೆ ಸೂರ್ಯ) ಎಂಬ ಹೆಸರಿಟ್ಟು ಕರೆದಿರಬಹುದು. ಅಲ್ಲಿ ನನಗೆ ಪ್ರವಾಸಕಾಲದಲ್ಲಿ ಭೇಟಿಯಾದ ಮಾರ್ಗದರ್ಶಿಯೊಬ್ಬರು ಅಲ್ಲಿ ಪ್ರಚಲಿತವಾಗಿರುವ ಒಂದು ದಂತಕಥೆಯನ್ನು ಹೇಳಿದರು. ಅದು ಬಹಳ ಸ್ವಾರಸ್ಯಕರವಾಗಿದೆ.

ಆ ಶತಮಾನದ ಪ್ರಸಿದ್ಧ ಶಿಲ್ಪಿಯಾದ ಬಿಸುಮಹಾರಾಣನ ನೇತೃತ್ವದಲ್ಲಿ ಸುಮಾರು 12000 ಕುಶಲ ಕರ್ಮಿಗಳು 12 ವರ್ಷಗಳು ದುಡಿದು ಈ ದೇವಾಲಯವನ್ನು ನಿರ್ಮಿಸುತ್ತಿದ್ದರು. ಆದಷ್ಟು ಬೇಗ ಅದನ್ನು ಪೂರ್ಣಗೊಳಿಸಬೇಕೆಂದು ರಾಜನ ಆದೇಶವಾಗಿತ್ತು. ಎಲ್ಲ ಕೆಲಸಗಳೂ ಮುಗಿದು ದೇವಸ್ಥಾನದ ಮುಖ್ಯ ಗೋಪುರದ ಮೇಲಿನ ಕಳಶವನ್ನು ಕೂಡಿಸುವ ಕೆಲಸ ಮಾತ್ರ ಏಕೋ ಬಹಳ ಕ್ಲಿಷ್ಟವಾಗಿತ್ತು. ಎಷ್ಟು ಪ್ರಯತ್ನ ಮಾಡಿದರೂ ಅವರ ಅಳತೆಗಳು ಸರಿಹೊಂದದೆ ಲೆಕ್ಕ ತಪ್ಪಾಗುತ್ತಿತ್ತು. ಇದು ಎಲ್ಲರ ಚಿಂತೆಗೆ ಕಾರಣವಾಗಿತ್ತು. ಆ ಸಮಯದಲ್ಲಿ ಶಿಲ್ಪಿ ಬಿಸುಮಹಾರಾಜನ ಮಗ ಧರ್ಮಪಾದನೆಂಬುವನು ಅದುವರೆಗೆ ಬಾಲ್ಯದಿಂದಲೂ ತಂದೆಯನ್ನು ನೋಡದೇ ಇದ್ದವನು ತನ್ನ ತಾಯಿಯ ಅನುಮತಿ ಪಡೆದು ಅವನನ್ನು ಹುಡುಕಿಕೊಂಡು ಅಲ್ಲಿಗೆ ಬಂದನಂತೆ. ಅವನಿಗೆ ತಂದೆಯು ಭೇಟಿಯಾದ ಸಂದರ್ಭದಲ್ಲಿ ಅವರು ಚಿಂತಿಸುತ್ತಿದ್ದ ಸಮಸ್ಯೆಯ ಬಗ್ಗೆ ಅವನು ತಿಳಿದುಕೊಳ್ಳುತ್ತಾನೆ. ಅವನು ವಯಸ್ಸಿನಲ್ಲಿ ಕಿರಿಯನಾದರೂ ಶಿಲ್ಪಕಲೆಯಲ್ಲಿ ತನ್ನ ತಂದೆಯಂತೆಯೇ ಅಪಾರ ಪ್ರಾವೀಣ್ಯತೆ ಗಳಿಸಿರುತ್ತಾನೆ. ಅವನು ತಂದೆ ಮತ್ತು ಇತರ ಶಿಲ್ಪಿಗಣವನ್ನೊಪ್ಪಿಸಿ ಆ ಸಮಸ್ಯೆಯನ್ನು ಬಗೆಹರಿಸಿ ಚಾಣಾಕ್ಷತೆಯಿಂದ ಮಂದಿರದ ಕಳಶವನ್ನು ಸರಿಯಾಗಿ ಕೂಡಿಸುವಲ್ಲಿ ಸಫಲನಾಗುತ್ತಾನೆ. ಇದರಿಂದ ಶಿಲ್ಪಿಗಣದವರೆಲ್ಲರೂ ಸುಪ್ರೀತರಾಗಿ ಅವನನ್ನು ಕೊಂಡಾಡುತ್ತಾರೆ. ಆದರೆ ಅವರಿಗೆ ರಾಜ ಈ ಕೆಲಸವನ್ನು ಸಮರ್ಪಕವಾಗಿ ಮಾಡಲಾಗದ ತಪ್ಪಿಗೆ ಉಳಿದ ಶಿಲ್ಪಿಗಳನ್ನೆಲ್ಲ ಶಿಕ್ಷಿಸುತ್ತಾನೆ ಎಂಬ ಆತಂಕಕ್ಕೊಳಗಾಗುತ್ತಾರೆ. ಆಗ ಧರ್ಮಪಾದನು ತನ್ನಿಂದ ಅಷ್ಟೂ ಜನರು ಶಿಕ್ಷೆಗೊಳಗಾಗುವುದನ್ನು ತಪ್ಪಿಸಲು ತಾನೇ ಯಾರಿಗೂ ಕಾಣಿಸದಂತೆ ಅಲ್ಲಿಂದ ಮರೆಯಾಗಲು ಆ ಕಳಸ ಗೋಪುರದ ಮೇಲಿನಿಂದ ಸಮುದ್ರಕ್ಕೆ ಬಿದ್ದು ತನ್ನ ಪ್ರಾಣತ್ಯಾಗ ಮಾಡುತ್ತಾನೆ. ವಿಷಯ ತಿಳಿದ ರಾಜನು ಯಾರನ್ನೂ ಶಿಕ್ಷಿಸದಿದ್ದರೂ ಪ್ರಾರಂಭದಲ್ಲೇ ಕಳಂಕಪ್ರಾಯವಾದ ಕಾರಣ ಅಲ್ಲಿ ಪೂಜೆ ನಡೆಯಲೇ ಇಲ್ಲವೆಂಬ ದಂತಕಥೆಯಿದೆ. ನೋಡಲು ಮಾತ್ರ ಕುಶಲತೆಯ ವೈಭವ ಮನಮುಟ್ಟುತ್ತದೆ. ಈಗ ಮಳೆ, ಗಾಳಿ, ಛಳಿ ಮತ್ತು ಪ್ರಕೃತಿಯ ವಿಕೋಪಗಳಿಂದ ನಲುಗಿದೆ. ಮುಖ್ಯ ದೇವಾಲಯದೊಳಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು.

ಕೋನಾರ್ಕದ ಸೂರ್‍ಯದೇವಾಲಯ

ನಾನು ಆ ಮಾರ್ಗದರ್ಶಿಯನ್ನು ಒಂದು ಪ್ರಶ್ನೆಕೇಳಿದೆ. ಆತ ನನಗೆ ಗೊತ್ತಿದ್ದರೆ ಹೇಳುತ್ತೇನೆ ಎಂದ. ನಾನು ದೇವಾಲಯವೆಂದರೆ ಒಂದು ಪವಿತ್ರವಾದ ಹಾಗೂ ಪೂಜನೀಯತಾಣ. ಇಲ್ಲಿಗೆ ಭೇಟಿನೀಡುವವರು ಅಸಂಖ್ಯಾತರು. ಅದರಲ್ಲಿ ಹಿರಿಯರು, ಕಿರಿಯರೆಲ್ಲರೂ ಇರುತ್ತಾರೆ. ಇಂತಹ ಸ್ಥಳದಲ್ಲಿ ಭಿತ್ತಿಶಿಲ್ಪಗಳಲ್ಲಿ ಕಾಮಸೂತ್ರದ ಪರಿಚಯ ಮಾಡಿಕೊಡುವಂತಹ ಹಲವಾರು ಶಿಲ್ಪಗಳಿವೆ. ಇವುಗಳು ಆವಶ್ಯಕವೇ? ಈ ಸಂಶಯ ನನ್ನನ್ನು ಕಾಡುತ್ತದೆ ಎಂದು ಕೇಳಿದೆ. ಅದಕ್ಕವರು ಮೇಡಂ, ನಿಮ್ಮ ಪ್ರಶ್ನೆಯನ್ನು ಹಿಂದಿನಿಂದಲೂ ಬಹಳ ಮಂದಿ ಕೇಳಿದ್ದಾರೆ. ಇದಕ್ಕಿರುವ ಒಂದು ಮಾಹಿತಿಯ ಪ್ರಕಾರ ಇದು ಎಲ್ಲ ದೇವಾಲಯಗಳಲ್ಲಿಯೂ ಕಂಡು ಬರುತ್ತದೆ. ಇಲ್ಲಿ ನೋಡಿ ಇದರಲ್ಲಿ ನಾಲ್ಕು ಹಂತಗಳಲ್ಲಿ ಜೀವನದ ದೃಶ್ಯಗಳಿವೆ. ಕೆಳಗಿನ ಹಂತದಲ್ಲಿ ಮನುಷ್ಯನ ಬಾಲ್ಯಾವಸ್ಥೆಯ ಸೂಚಕಗಳಾಗಿವೆ. ಮಕ್ಕಳು ಇಷ್ಟಪಡುವ ಶಿಲ್ಪಗಳು. ತುಂಟಾಟಗಳು, ಆನೆ ಕುದುರೆ ಮೊದಲಾದ ಪ್ರಾಣಿಗಳಿವೆ. ಪ್ರಕೃತಿಯ ಹೂಬಳ್ಳಿಗಳಿವೆ. ನಂತರದ ಹಂತದಲ್ಲಿ ಯೌವನದ ಅವಸ್ಥೆಯ ಸಹಜವಾದ ಕೌಮಾರ್ಯದ ಸೂಚಕವಾದ ಪೌರಾಣಿಕ ಕಥೆಗಳು, ಯುದ್ಧವಿದ್ಯೆ, ಶಸ್ತ್ರಾಭ್ಯಾಸ, ಸಾಹಸಗಳಿವೆ. ಆಗಿನ ಕಾಲದ ಯುವಕರಿಗೆ ಸೂಕ್ತವಾದ ಶಿಲ್ಪಗಳಿವು. ಮುಂದಿನ ಹಂತದಲ್ಲಿ ಗ್ರಾಹಸ್ತ್ಯ ಜೀವನಕ್ಕೆ ಸಂಬಂಧಿಸಿದ ಶಿಲ್ಪಗಳಾದ ಸರಸಕಲೆಗಳು, ಪ್ರಣಯಕಲೆಗಳು, ರಾಸಕ್ರೀಡೆಗಳು, ದಾಂಪತ್ಯ ಚಟುವಟಿಕೆಗಳಿವೆ. ಮೂರೂಹಂತಗಳನ್ನು ದಾಟಿ ಮನುಷ್ಯನು ವಾನಪ್ರಸ್ಥಾಶ್ರಮಕ್ಕೆ ತೆರಳುವನು. ನಾಲ್ಕನೆಯ ಹಂತದ ಶಿಲ್ಪಗಳಲ್ಲಿ ತಪಸ್ಸು, ದೈವಭಕ್ತಿ, ಅಧ್ಯಾತ್ಮ ಚಿಂತನೆ, ಇದಕ್ಕೆ ಪೂರಕವಾದ ಶಿಲ್ಪಗಳು ಮೇಲಿನ ಸ್ಥರದಲ್ಲಿವೆ. ಒಟ್ಟಾರೆ ಜೀವನದ ಎಲ್ಲ ಹಂತಗಳನ್ನೂ ಸೂಚಿಸುವುದಕ್ಕೇ ಮತ್ತು ಅಧ್ಯಾತ್ಮವನ್ನು ಅಂತಿಮ ಗುರಿಯೆಂದು ತೋರುವುದಕ್ಕೆ ಎಲ್ಲ ರೀತಿಯ ಶಿಲ್ಪಗಳು ಅನಿವಾರ್ಯ ಎಂದನು. ಇವುಗಳಿಂದ ಯಾವ ರೀತಿಯಲ್ಲೂ ಮುಜುಗರ ಪಟ್ಟುಕೊಳ್ಳಬೇಕಾಗಿಲ್ಲ ಎಂದು ಹೇಳಿದನು. ನನಗೆ ಎಂತಹ ಅರ್ಥವತ್ತಾದ ವಿವರಣೆ ಎನ್ನಿಸಿತು. ಮುಂದೆ ನಾನು ಪುರಿಯ ಜಗನ್ನಾಥ ಮತ್ತ್ತು ಭುವನೇಶ್ವರದ ಲಿಂಗರಾಜ ದೇವಾಲಯಗಳ ಸಮುಚ್ಛಯ ದರ್ಶನಮಾಡಿ ಹಿಂದಿರುಗಿದೆ.

ನನ್ನ ಮುಂದಿನ ಬಾರಿಯ ಪ್ರವಾಸವು ದಕ್ಷಿಣದ ತಮಿಳುನಾಡಿನತ್ತ. ನಾನು ಅಲ್ಲಿ ಕಂಡಷ್ಟು ದೇವಾಲಯಗಳನ್ನು ಇನ್ನೆಲ್ಲೂ ಕಾಣಲಿಲ್ಲ. ಎಲ್ಲಿ ನೋಡಿದರೂ ಬೃಹತ್ತಾದ ಕಲ್ಲಿನ ಕಟ್ಟಡಗಳ ದೇವಾಲಯಗಳು. ಅವುಗಳ ಭವ್ಯತೆಯೇ ಅಚ್ಚರಿ ಮೂಡಿಸಿತು. ಹೊರಾಂಗಣ, ಒಳಾಂಗಣ, ಪ್ರಾಂಗಣ ಎಲ್ಲವೂ ವಿಶಾಲವಾದವು. ಕಾಂಚೀಪುರಂ ಕಾಮಾಕ್ಷಿ, ಚಿದಂಬರಂನ ನಟರಾಜ, ಚಿದಂಬರನಾಥ, ಮಹಾವಿಷ್ಣು, ತಂಜಾವೂರಿನ ಬೃಹದೇಶ್ವರ, ಕುಂಭಕೋಣಂನ ಆದಿಕುಂಭೇಶ್ವರ, ಸಾರಂಗಪಾಣಿ, ಚಕ್ರಪಾಣಿ ದೇವಾಲಯಗಳು ಸುತ್ತಿದ್ದೇ ಸುತ್ತಿದ್ದು. ಶ್ರೀರಂಗಂನಲ್ಲಿ ಅಂತ್ಯರಂಗನಾಥನ ದರ್ಶನಕ್ಕೆ ಹೋದಾಗ ಅಲ್ಲಿ ಕಾಯ್ದಿದ್ದು, ತಳ್ಳಾಟ, ಲಂಚಕೊಟ್ಟು ಮಧ್ಯದಲ್ಲಿ ದರ್ಶನಕ್ಕೆ ಹೋದದ್ದು ಎಲ್ಲವೂ ಸ್ವಾಮಿಯ ದರ್ಶನಭಾಗ್ಯ ಲಭಿಸಿದಾಗ ಕಣ್ಮರೆಯಾದವು. ನಾನು ದೇವರೇ ನಿನ್ನ ದರ್ಶನಕ್ಕೆ ಬಂದರೆ ಇಷ್ಟೊಂದು ಕಷ್ಟಪಡಬೇಕೇ? ಹೋಗಲಿ ದರ್ಶನವಾದರೂ ಸ್ವಲ್ಪ ವಿರಾಮದಲ್ಲಿ ಮಾಡೋಣವೆಂದರೆ ಮುಂದೆ ಸರಿಯೆಂದು ನಿಶ್ಕರುಣೆಯೀಂದ ತಳ್ಳುತ್ತಾರೆ.

ನನ್ನ ಗೆಳತಿ ಸಂಧ್ಯಾಳ ಹತ್ತಿರ ಹೀಗೆ ಭಂಗಪಡುವುದಕ್ಕೆ ಅಷ್ಟು ದೂರದಿಂದ ಬರಬೇಕೇ? ಇದರಿಂದ ಯಾವ ಪುರುಷಾರ್ಥ ಸಾಧನೆ. ಎಂದಾಗ ಅವಳು ನೀನು ಹೇಳುವುದೆಲ್ಲ ನಿಜವೇ. ಆದರೆ ಪ್ರತಿಯೊಂದಕ್ಕೂ ಆಯಾ ಸ್ಥಳದ ಮಹಿಮೆ ಮುಖ್ಯವಾಗುತ್ತದೆ. ಅದರ ಹಿಂದಿರುವ ಪೌರಾಣಿಕ ಇತಿಹಾಸ, ಜನರಲ್ಲಿರುವ ನಂಬಿಕೆ, ವಿಶ್ವಾಸ ದೇವಾಲಯದ ನಿರ್ಮಾಣದಲ್ಲಿನ ಕೌಶಲ್ಯ ಇವಾವುದೂ ಸುಳ್ಳಲ್ಲ. ಅದಕ್ಕಾಗಿಯೇ ಜನ ಇಷ್ಟು ಕಷ್ಟವಾದರೂ ಬರುತ್ತಾರೆ ಎಂದಳು. ನಾನು ಓದಿದ್ದ ಹನ್ನೆರಡನೆಯ ಶರಣ ಇತಿಹಾಸದಲ್ಲಿನ ಮಾತುಗಳು ಗುಡಿ ಗುಂಡಾಂತರಗಳನ್ನು ಏಕೆ ವ್ಯರ್ಥವಾಗಿ ಸುತ್ತುವೆ? ಇದರಿಂದ ಪುರೋಹಿತರ ಹಿಡಿತಕ್ಕೆ ಸಿಕ್ಕಿ ಒದ್ದಾಡುತ್ತೀರಾ? ಸತ್ಯ ಧರ್ಮ ನಿಷ್ಠೆಯಿಂದ ಪರಮಾತ್ಮನಲ್ಲಿ ನಂಬಿಕೆಯಿಟ್ಟು ಬದುಕು ನಡೆಸಿದರೆ ದೇವನೇ ನಿನ್ನ ಬಳಿಗೆ ಬಂದು ನಿನ್ನಲ್ಲಿ ನೆಲೆಸುತ್ತಾನೆ ಎಂಬ ಮಾತು ಎಷ್ಟು ಸತ್ಯವೆಂಬುದು ನೆನಪಾಯಿತು. ನನ್ನೊಳಗೆ ನಾನೇ ನಗುತ್ತಾ ಮೌನವಹಿಸಿದೆ.

ಇಷ್ಟೆಲ್ಲ ಪ್ರವಾಸ ಮಾಡಿದ್ದಲ್ಲದೆ ಹಲವಾರು ಸಮುದ್ರ ತೀರದ ಬೀಚುಗಳನ್ನೂ ನೋಡುವ ಸಂದರ್ಭಗಳೂ ಬಂದೊದಗಿದವು. ದೂರದಲ್ಲಿ ನಿಂತು ಅಲ್ಲಿ ವಿಹರಿಸುವ ಪ್ರವಾಸಿಗಳನ್ನು, ಸಮುದ್ರದ ಅಲೆಗಳ ನರ್ತನವನ್ನೂ ನೀಲ ಸಾಗರದ ಸೌಂದರ್ಯವನ್ನು ಅವಲೋಕಿಸಿದೆ. ಕೆಲವರು ತಮ್ಮದೇ ಆಲೋಚನಾ ತರಂಗಗಳೊಡನೆ ವಿಹರಿಸುತ್ತಾ ಆನಂದ ಪಡುತ್ತಿದ್ದರು. ಮತ್ತೊಂದೆಡೆ ಯಾವುದೇ ಎಗ್ಗುಸಿಗ್ಗು ಇಲ್ಲದಂತೆ ತಮ್ಮದೇ ಲೋಕದಲ್ಲಿ ಮುಳುಗಿದ್ದವರ ಗುಂಪು, ಮಗದೊಂದೆಡೆ ಪರಿಸರ ಪ್ರಜ್ಞೆಯಿಲ್ಲದಂತೆ ಪರಿವಾರದವರೊಂದಿಗೆ ಕುಡಿತ, ಮೋಜು ಮಸ್ತಿಯಲ್ಲಿ ತೇಲಾಡುತ್ತಿದ್ದರು. ಇದರ ಮಧ್ಯೆ ಅಲ್ಲಿ ಸಣ್ಣಪುಟ್ಟ ವ್ಯಾಪಾರಿ ಜನರು ಬಿಸಿಲು ಮಳೆ ಗಾಳಿಯೆನ್ನದೆ ಬೆಳಗಿನಿಂದ ರಾತ್ರಿಯವರೆಗೆ ಅದೂ ಇದೂ ಮಾರಾಟಮಾಡುತ್ತಾ ನಾಲ್ಕು ಕಾಸುಗಳಿಸಿ ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಿದ್ದರು. ಆಗ ನನಗೆ ಈ ಜನ ತಮ್ಮ ಕಸುವಿದ್ದಷ್ಟು ದಿನ ದುಡಿಯಬಹುದು. ನಂತರ ಇವರ ಜೀವನ ಹೇಗೆ? ಹೃದಯ ಏಕೋ ಭಾರವಾಯಿತು. ಆಗ ನನ್ನ ಮನಸ್ಸಿನಲ್ಲಿ ನಮಗೆ ಇಂಥಹ ನೆಮ್ಮದಿಯ ಬದುಕು ಕೊಟ್ಟು ಉಪಕಾರ ಮಾಡಿದ್ದೀಯಾ ಭಗವಂತಾ, ನಿನಗೆ ಕೋಟಿಕೋಟಿ ನಮನಗಳು ಎಂದುಕೊಂಡೆ.

ಹೀಗೆ ನನ್ನ ಪ್ರವಾಸದ ಓಡಾಟಗಳು ಸತತವಾಗಿ ಸುಮಾರು ಮೂರು ವರ್ಷಗಳ ಕಾಲ ಮುಂದುವರೆಯಿತು. ಹೊಸ ಪ್ರವಾಸದ ರೂಪುರೇಷೆಗಳು ಸಿದ್ಧವಾದ ತಕ್ಷಣ ನನ್ನ ಗೆಳತಿ ಸಂಧ್ಯಾಳಿಂದ ನನಗೆ ಮಾಹಿತಿ ದೊರೆಯುತ್ತಿತ್ತು. ನನಗಿಷ್ಟವಾದ ಸ್ಥಳಗಳಿಗೆ ನಾನು ಹೋಗುತ್ತಿದ್ದೆ. ಒಮ್ಮೆ ದೂರದ ಸ್ಥಳಗಳಾದರೆ ಮತ್ತೊಮ್ಮೆ ಸಮೀಪದ ಸ್ಥಳಗಳು. ಒಂದು ಸಾರಿ ಮೈಸೂರಿನ ಸುತ್ತಮುತ್ತಲಿನ ಕೆಲವು ಸ್ಥಳಗಳಿಗೆ ಪ್ರವಾಸ ಏರ್ಪಡಿಸಿದರೆಂದಾಗ ಅವಳ ಭಜನಾ ಮಂಡಲಿಯವರೊಡನೆ ಹೋಗಿದ್ದೇನೆ. ಇನ್ನೊಮ್ಮೆ ಮನೆಗೆ ಯಾರೋ ನೆಂಟರು ಬಂದಾಗಲೂ ಆಹ್ವಾನ ಬಂದಿತ್ತು. ನಾನು ಬರಲಾಗುವುದಿಲ್ಲವೆಂದದ್ದಕ್ಕೆ ಆಕೆ ಮತ್ತೊಮ್ಮೆ ಗುಂಪಿನೊಡನೆ ಪ್ರತ್ಯೇಕವಾಗಿ ನೋಡುವಿಯಂತೆ ಎಂದು ಒತ್ತಾಯಿಸಿದಾಗ ನಾನು ಬರುವುದಿಲ್ಲವೆಂದು ನಿರಾಕರಿಸಿದೆ. ಅಷ್ಟು ಹೊತ್ತಿಗಾಗಲೇ ನನಗೆ ಪ್ರವಾಸದ ಬವಣೆ ಸಾಕಾಗಿತ್ತು. ಇದೂ ಏಕತಾನತೆ ಎನ್ನಿಸತೊಡಗಿತ್ತು.

ಕಳೆದ ಕೆಲವು ವರ್ಷಗಳ ಸುತ್ತಾಟದಲ್ಲಿ ಸಾಕಷ್ಟು ಸ್ಥಳಗಳನ್ನು ನೋಡಿದ್ದಾಯಿತು. ನನಗೆ ಇದರ ಬಗೆಗೆ ಮೊದಲಿದ್ದ ಉತ್ಸಾಹ ಬರುತ್ತಾ ಬರುತ್ತಾ ಕಡಿಮೆಯಾಗತೊಡಗಿತು. ಕೆಲವು ಸ್ಥಳಗಳು ನನ್ನ ಕಲ್ಪನೆಗಿಂತಲೂ ಚೆನ್ನಾಗಿದ್ದರೆ ಇನ್ನು ಕೆಲವು ವಾಸ್ತವಕ್ಕಿಂತ ಕಲ್ಪನೆಯೇ ಚೆನ್ನ ಎನ್ನುವಂತಹ ಅನುಭವ. ಹಲವು ಸುಂದರವಾದ ಪ್ರವಾಸಿ ತಾಣಗಳಲ್ಲಿ ಎಲ್ಲಾ ವಯಸ್ಸಿನ ಜೋಡಿಗಳನ್ನು ತಮ್ಮ ಕುಟುಂಬದ ಸದಸ್ಯರುಗಳು, ಮಕ್ಕಳೊಡನೆ ನೋಡಿದಾಗ ಮರೆಯಬೇಕೆಂದುಕೊಂಡಿದ್ದ ಹಳೆಯ ನೆನಪುಗಳು ನನ್ನನ್ನು ಮುತ್ತಿ ಕಾಡತೊಡಗುತ್ತಿದ್ದವು.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=31851

-ಬಿ.ಆರ್ ನಾಗರತ್ನ, ಮೈಸೂರು

6 Responses

  1. ನಯನ ಬಜಕೂಡ್ಲು says:

    ಬದುಕೆಂಬ ಅಂಗಳದಲ್ಲಿ ಅಡಿ ಇಡುವ ಹಲವು ಮಗ್ಗುಲುಗಳ ಪರಿಚಯ.

  2. ಸುಮ ಕೃಷ್ಣ says:

    ಸ್ಥಳಗಳು, ಅದರ ಇತಿಹಾಸ, ಬಹಳ ಚನ್ನಾಗಿ ಮೂಡಿ ಬಂದಿದೆ, ನಾ ನೋಡಿದ್ದ ಜಾಗಗಳ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದಂತಾಯಿತು….

  3. sudha says:

    nagarathna explanation of places is good. only if you go there you can enjoy the architecture and local history and culture and cuisine. if we don’t go we miss it.

  4. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಸಹೃದಯರಿಗೆ

  5. ಶಂಕರಿ ಶರ್ಮ says:

    ಹಲವಾರು ಪ್ರವಾಸೀ ಕೇಂದ್ರಗಳು, ದೇವಾಲಯಗಳ ವಿಸ್ತೃತ ಮಾಹಿತಿ, ಪೂರಕ ಕಥೆಗಳನ್ನು ಒಳಗೊಂಡ ಲೇಖನ ಬಹಳ ಚೆನ್ನಾಗಿದೆ ಮೇಡಂ.

  6. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಮೇಡಂ

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: