‘ನೆಮ್ಮದಿಯ ನೆಲೆ’-ಎಸಳು 9

Share Button


(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ  ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಗೆ ಮದುವೆಯ ಪ್ರಸ್ತಾಪ ಬಂದು, ನಂಜನಗೂಡಿನ ವರನೊಂದಿಗೆ ವಿವಾಹ ನಿಶ್ಚಯವಾಯಿತು, ಸರಳ ವಿವಾಹ ಸುಸೂತ್ರವಾಗಿ ನೆರವೇರಿ,  ಪತಿಗೃಹದಲ್ಲಿ  ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು ಮಕ್ಕಳಾಗಿ ಎಲ್ಲವೂ ಸುಸೂತ್ರವಾಗಿರುವಾಗ ಅಮ್ಮ ಅನಿರೀಕ್ಷಿತವಾಗಿ ಮರಣಿಸಿದರು… ….ಮುಂದಕ್ಕೆ ಓದಿ)

ನಾವು ಹಿಂದಿರುಗಿದ ಹದಿನೈದು ದಿನಗಳೊಳಗೆ ಮನೆಯಲ್ಲಿದ್ದ ಸಾಮಾನುಗಳಲ್ಲಿ ತಮಗೆ ಬೇಕಾದವುಗಳನ್ನು ಆರಿಸಿಕೊಂಡು ಮಿಕ್ಕವನ್ನು ವಿಲೇವಾರಿ ಮಾಡಿ ಬಂದ ಮೊತ್ತವನ್ನು ಅಣ್ಣಂದಿರಿಬ್ಬರೂ ಹಂಚಿಕೊಂಡು ಮನೆಯನ್ನು ಕೊಂಡಿದ್ದ ವಾರಸುದಾರರಿಗೆ ಒಪ್ಪಿಸಿದರು. ಅಪ್ಪ ಮೊದಲೇ ವ್ಯವಸ್ಥೆ ಮಾಡಿಕೊಂಡಿದ್ದ ಮನೆಗೆ ಹೋದರೆಂದು ತೋಟ ಮಾಡುತ್ತಿದ್ದ ಬಸವ ಫೋನ್ ಮಾಡಿ ನನಗೆ ತಿಳಿಸಿದನು. ಆದರೆ ಈ ಸಂಗತಿಯನ್ನು ಅಪ್ಪನಾಗಲೀ, ಅಣ್ಣಂದಿರಾಗಲೀ ತಿಳಿಸುವ ಶ್ರಮ ತೆಗೆದುಕೊಳ್ಳಲಿಲ್ಲ. ಹೋಗಲಿ ಬಿಡು, ಇಲ್ಲದ ಚಿಂತೆಮಾಡಿ ನಾನೇಕೆ ಬೇಯಬೇಕೆಂದುಕೊಂಡು ಸುಮ್ಮನಾದೆ. ಮಕ್ಕಳು ಶಾಲೆಗೆ ಹೋದನಂತರ ನಾನು ಅತ್ತೆಯವರ ಜೊತೆ ಜಮೀನಿನ ಹತ್ತಿರ ಹೋಗುವುದು, ಅವರ ಲೆಕ್ಕಪತ್ರಗಳನ್ನಿಡುವಲ್ಲಿ ಸಹಾಯ ಮಾಡುವುದು, ಸಮಾಜದ ಚಟುವಟಿಕೆಗಳಲ್ಲಿ ತೊಡಗುವುದು, ತರಗತಿಗಳನ್ನು ನಡೆಸುವುದು ಇವೇ ಮುಂತಾದ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡೆ. ಮಕ್ಕಳಿಗೆ ಪಾಠ ಹೇಳಿಕೊಡುವುದು ನನ್ನ ಪಾಲಿಗೇ ಬಿತ್ತು. ಏಕೆಂದರೆ ಬೆಳಗ್ಗೆ ಅವರಪ್ಪನ ಮುಖ ನೋಡುತ್ತಿದ್ದ ಮಕ್ಕಳಿಗೆ ರಾತ್ರಿ ಅವರು ಹಿಂತಿರುಗಿ ಬರುವಷ್ಟರಲ್ಲಿ ಎಷ್ಟೊ ಬಾರಿ ಊಟ ಮುಗಿಸಿ ಮಲಗಿರುತ್ತಿದ್ದರು. ರಜೆಯಿದ್ದ ದಿವಸ ಅವರೊಡನೆ ಆಟವಾಡುವುದೇ ಹೊರತು ಪಾಠದ ಮಾತೇ ಇರಲಿಲ್ಲ. ಮಧ್ಯೆ ಮಧ್ಯೆ ಮೈಸೂರಿನಲ್ಲಿದ್ದ ತಾತನ ಮನೆಗೆ ಭೇಟಿ. ಹೀಗೇ ವರ್ಷಗಳು ಉರುಳುತ್ತಾ ಸಾಗಿದವು.

ಅಪ್ಪ ತಾವು ಹೋಟೆಲಿನ ಲೆಕ್ಕ ಬರೆಯುವ ಕಾಯಕವನ್ನು ಬಿಡದೆ ನಡೆಸಿಕೊಂಡು ಹೋಗುತ್ತಿದ್ದರು. ಅದರ ಜೊತೆಯಲ್ಲಿ ಪರವೂರುಗಳ ದೇವಸ್ಥಾನಗಳಿಗೆ ಭೇಟಿ, ಪ್ರವಚನ, ಪೂಜಾಪಾಠಗಳ ಕಡೆ ಹೆಚ್ಚು ಗಮನ ಹರಿಸುತ್ತಾ ತಮ್ಮನ್ನು ತಾವು ಚಟುವಟಿಕೆಯಿಂದಿಟ್ಟುಕೊಂಡಿದ್ದರು. ಅವರನ್ನು ನೋಡಲೆಂದು ಹೋದಾಗ ಒಮ್ಮೊಮ್ಮೆ ಅಣ್ಣಂದಿರು, ಅತ್ತಿಗೆಯರು, ಮಕ್ಕಳ ಭೇಟಿಯಾಗುತ್ತಿತ್ತು. ಅವರಲ್ಲಿ ಯಾವ ಸಂಭ್ರಮವೂ ಕಾಣದೆ ಅದು ಕೇವಲ ಔಪಚಾರಿಕ ಹಂತ ಮುಟ್ಟಿತ್ತು. ಇದರಿಂದ ಸಂಬಂಧಗಳಿಗೆ ಸೇತುವೆಯಾಗುತ್ತೇನೆ ಅಂದುಕೊಂಡಿದ್ದ ನನಗೆ ನಿರಾಸೆಯಾಯಿತು. ಇರಲಿ, ಮಕ್ಕಳು ದೊಡ್ಡವರಾದಮೇಲೆ ಅವರುಗಳೇ ಒಂದಾಗಬಹುದೆಂದು ಆಶಾಸೌಧವನ್ನು ಕಟ್ಟಕೊಳ್ಳುತ್ತಲೇ ವರ್ಷಗಳನ್ನು ಕಳೆದೆ.

ಕಾಲವು ಹಾಗೇ ಇರುತ್ತದೆಯೇ? ಯಾವುದೇ ಖಾಯಿಲೆ ಕಸಾಲೆಯಿಲ್ಲದೆ ಆರೋಗ್ಯವಾಗಿದ್ದ ಮಾವನವರು ಇದ್ದಕ್ಕಿದ್ದಂತೆ ದೈವಾಧೀನರಾದರು. ಅದೇ ವೇಳೆಯಲ್ಲಿ ಮೈಸೂರಿನಲ್ಲೇ ಹಾಗೂ ಹೀಗೂ ವರ್ಗಾವಣೆಯಾಗದೆ ಉಳಿದುಕೊಂಡಿದ್ದ ನನ್ನವರನ್ನು ಮಂಡ್ಯ ಕಾಲೇಜೊಂದಕ್ಕೆ ವರ್ಗಾವಣೆ ಮಾಡಲಾಯಿತು. ನನ್ನ ಮಗಳು ಮಾಧವಿ ನಾಲ್ಕನೆಯ ತರಗತಿ ಮುಗಿಸಿ ಮಾಧ್ಯಮಿಕ ಶಾಲೆಗೆ ಸೇರಲು ಮತ್ತು ನನ್ನ ಮಗ ಆದಿತ್ಯ ಮಿಡ್ಲ್‌ಸ್ಕೂಲು ಪಾಸಾಗಿ ಹೈಸ್ಕೂಲು ಸೇರಲು ಸಿದ್ಧವಾಗಿದ್ದರು. ಆಗ ನನ್ನತ್ತೆಯವರು “ದಯಾ ಮೈಸೂರಿನಲ್ಲಿ ಒಂದು ಮನೆ ಮಾಡಿಬಿಡು. ಮಕ್ಕಳಿಗೂ ಅನುಕೂಲ. ನಿನಗೆ ಹೇಗೂ ಓಡಾಡಿ ರೂಢಿಯಿದೆಯಲ್ಲ, ಹಾಗೇ ಮಂಡ್ಯಕ್ಕೂ ಹೋಗಿಬರಬಹುದು” ಎಂದು ಸಲಹೆ ನೀಡಿದರು. ಅದಕ್ಕೆ ನನ್ನವರು “ಅಮ್ಮಾ ನೀವಿಲ್ಲಿ ಒಬ್ಬರೇ ಆಗುತ್ತೀರಲ್ಲಾ, ಎಲ್ಲವನ್ನೂ ನಿಭಾಯಿಸಿಕೊಂಡು ಹೇಗೆ ನಡೆಯುತ್ತೇ?” ನನ್ನವರ ಮಾತನ್ನು ಅರ್ಧದಲ್ಲೇ ತಡೆದು ಅತ್ತೆ “ನಿಮ್ಮಪ್ಪ ಇಲ್ಲದ ಮನೆಯಲ್ಲಿ ಒಂಟಿಯಾಗಿ ನಾನಿರುವುದಿಲ್ಲ. ಆಗುವುದೂ ಇಲ್ಲ. ಈಗಾಗಲೇ ನಾನು ನಾಲ್ಕಾರು ಜನಕ್ಕೆ ಹೇಳಿದ್ದೇನೆ. ಮನೆಗೆ, ಜಮೀನಿಗೆ ಬೆಲೆ ಕಟ್ಟಿಸಿಕೊಂಡು ಬಂದಾಗಿದೆ. ನನ್ನ ದೊಡ್ಡಪ್ಪನ ಮಗ, ಅದೇ ‘ಅಚ್ಯುತ’ ತಾನೇ ತೆಗೆದುಕೊಳ್ಳುತ್ತೇನೆಂದು ಹೇಳಿದ್ದಾನೆ. ನಮ್ಮವನೇ ಆದ್ದರಿಂದ ಯಾವಾಗಲಾದರೂ ಒಮ್ಮೆ ಇಲ್ಲಿಗೆ ಬಂದರೆ ಉಳಿಯಲು ಒಂದು ಮನೆ ಸಿಕ್ಕಂತಾಗುತ್ತದೆ. ಸಂಬಂಧವೂ ಮುಂದುವರೆಯುತ್ತದೆಂದು ಒಪ್ಪಿದ್ದೇನೆ. ಬೇಸಿಗೆ ರಜೆ ಮುಗಿಯುವಷ್ಟರಲ್ಲಿ ಎಲ್ಲ ತೀರ್ಮಾನವಾಗುತ್ತೆ. ನೀನು ಅಲ್ಲಿನ ವ್ಯವಸ್ಥೆ ಮಾಡಿಕೊ. ನಿನ್ನ ಅಣ್ಣಂದಿರು, ಅಕ್ಕಂದಿರಿಗೂ ವಿಷಯ ತಿಳಿಸಿ ಅನುಕೂಲ ಮಾಡಿಕೊಂಡು ಬರಲು ಹೇಳುತ್ತೇನೆ” ಎಂದರು.
ನಾವು ಮೈಸೂರಿಗೆ ಮನೆಮಾಡಿ ಬಂದಾಯಿತು.

ಅತ್ತೆಯವರ ಮಾತನ್ನು ಕೇಳುತ್ತಿದ್ದ ನನಗೆ ಅವರ ಆಲೋಚನೆ, ನಿರ್ಧಾರಗಳನ್ನು ಕಂಡು ಅಚ್ಚರಿಯಾಯಿತು. ಮಾವನವರು ಬದುಕಿದ್ದಾಗ ಅವರು ಮನೆಗೇನೂ ಅಷ್ಟಾಗಿ ಅಂಟಿಕೊಂಡಿರಲಿಲ್ಲ. ಆದರೆ ಅತ್ತೆಯವರೊಡನೆ ಹೊಂದಾಣಿಕೆಯಲ್ಲಿ ಲೋಪವೊಂದೂ ಕಂಡು ಬಂದಿರಲಿಲ್ಲ. ಆಸ್ತಿ ವಹಿವಾಟಿನಲ್ಲಿ ಅವರ ಮಕ್ಕಳಾರೂ ತಲೆಹಾಕದಿರುವುದೂ, ಹಾಗೆಂದು ಯಾವುದಕ್ಕೂ ದರ್ಪದಿಂದ ಬೀಗದ ಅತ್ತೆ, ಈಗ ಈ ರೀತಿಯ ತೀರ್ಮಾನ ತೆಗೆದುಕೊಂಡದ್ದು ಕಂಡು ಕುತೂಹಲ ತಡೆಯಲಾರದೆ ನನ್ನವರನ್ನು ಕೇಳಿದೆ.

ಅದಕ್ಕವರು “ಬಾ ಇಲ್ಲಿ ಕುಳಿತುಕೋ, ನಾನು ಹೇಳುವುದನ್ನು ಗಮನವಿಟ್ಟು ಕೇಳು “ಎಂದರು. ನಾನು “ರೀ ಇದು ನೀವು ಪಾಠ ಮಾಡುವ ಕಾಲೇಜಿನ ತರಗತಿಯಲ್ಲ, ನಾನು ನಿಮ್ಮ ವಿದ್ಯಾರ್ಥಿಯೂ ಅಲ್ಲ” ಎಂದೆ. “ಅಯ್ಯೋ ಸುಕನ್ಯಾ ಹಾಗಲ್ಲವೇ, ನಾನೀಗ ಹೇಳುವ ಸಂಗತಿ ಕೇಳಿದರೆ ಇಂಥವರೂ ಇದ್ದಾರೆಯೇ ಎಂದು ನಿನಗನ್ನಿಸುವುದರಲ್ಲಿ ಎರಡು ಮಾತಿಲ್ಲ. ಹೇಳುತ್ತೇನೆ ಕೇಳು. ನಾವಿರುವ ಮನೆ, ಜಮೀನು, ಅಷ್ಟೇ ಏಕೆ ಹಸುಗಳು ಇವೆಲ್ಲವನ್ನೂ ನನ್ನಪ್ಪ ಗಳಿಸಿದ್ದಾಗಲೀ, ಅವರಪ್ಪನಿಂದ ಬಂದದ್ದಾಗಲೀ ಅಲ್ಲ. ಇವೆಲ್ಲವನ್ನೂ ನನ್ನಮ್ಮನಿಗೆ ಅವಳ ತವರಿನಿಂದ ಸಂದ ಉಡುಗೊರೆ. ಐಮೀನ್ ಸ್ತ್ರೀಧನ. ಇನ್ನೂ ಕೇಳಿಲ್ಲಿ, ನಮ್ಮೆಲ್ಲರ ಓದು, ಮದುವೆ, ಇವುಗಳ ಕರ್ಚುವೆಚ್ಚಕ್ಕೆ ಒತ್ತಾಸೆಯಾಗಿ ನಿಂತವಳು ನನ್ನಮ್ಮನೇ. ಆಕೆ ನಿಲುವಾಭರಣ ಸುಂದರಿಯಾಗಿ ಈ ಮನೆಗೆ ಸೊಸೆಯಾಗಿ ಬಂದವಳು. ಇಂದು ನಿರಾಭರಣ ಸುಂದರಿಯಾಗಿದ್ದಾಳೆ. ಹಾಗೆಂದು ನನ್ನಪ್ಪ ಕೆಟ್ಟವರೇನಾಗಿರಲಿಲ್ಲ. ಆದರೆ ಅವರು ಸುಖಜೀವಿ. ಹೆಚ್ಚು ಆಯಾಸ ಮಾಡಿಕೊಳ್ಳದೆ ಬದುಕು ನಡೆಸಿ ಮರೆಯಾದರು. ನಮ್ಮ ಮದುವೆಯಾಗಿ ಹತ್ತುವರ್ಷಗಳಿಗೂ ಹೆಚ್ಚು ಕಾಲವಾಯಿತು. ಈ ಸಮಯದಲ್ಲಿ ಎಂದಾದರೂ ನನ್ನಮ್ಮ ಮನೆಗೆ ಮಕ್ಕಳಿಗೆ ಮಾಡಿದ್ದನ್ನು ಎತ್ತಿ ಆಡಿದ್ದನ್ನು ಕಂಡಿದ್ದೀಯಾ? ಹಾಗೆಯೇ ನನ್ನಪ್ಪನನ್ನೂ ಎಂದಾದರೂ ತಿರಸ್ಕಾರವಾಗಿ ಕಂಡಿದ್ದಿದೆಯಾ? ಇದವಳ ಸಹಜ ಸ್ವಭಾವ”.

ನನ್ನವರ ಮಾತಿನಲ್ಲಿದ್ದ ಖಚಿತತೆ ನನ್ನನ್ನು ಮತ್ತೆ ಮುಂದೆ ಮಾತನಾಡದಂತೆ ತಡೆಯಿತು. ಇಷ್ಟು ವರ್ಷಗಳ ಅಂತರದಲ್ಲಿ ಅಂತಹ ಒಂದೇ‌ ಒಂದು ಸುಳಿವೂ ನನಗೆ ಸಿಕ್ಕಿರಲಿಲ್ಲ. ನನ್ನವರಿಂದಾಗಲೀ, ಅವರ ಅಕ್ಕಂದಿರು, ಅಣ್ಣಂದಿರುಗಳಿಂದಾಗಲೀ, ಹೋಗಲಿ ನನ್ನ ಓರಗಿತ್ತಿಯರಿಂದಾಗಲೀ ಏನೂ ಗೊತ್ತಾಗಲಿಲ್ಲ. ಅಬ್ಬಾ ! ನನ್ನತ್ತೆ ಎಂತಹ ಆದರ್ಶ ಮಹಿಳೆ! ಮನದಲ್ಲೇ ಆ ನಿಗರ್ವಿ ಮಹಾಮಾತೆಗೆ ನಮಿಸಿದೆ.

ಆನಂತರ ಆಸ್ತಿಯನ್ನೆಲ್ಲಾ ಮಾರಿಬಂದ ಹಣವನ್ನು ಆರುಭಾಗ ಮಾಡಿದರು. ಮಕ್ಕಳಿಗೆ ಕೊಡಲಿಲ್ಲ. ನಾಲ್ಕುಜನ ಸೊಸೆಯಂದಿರಿಗೆ, ಇದ್ದೊಬ್ಬ ಮಗಳಿಗೆ ಕೊಟ್ಟುಬಿಟ್ಟರು. ಒಂದು ಭಾಗವನ್ನು ತಮ್ಮಲ್ಲಿಟ್ಟುಕೊಂಡರು. “ನೋಡಿ ಮಕ್ಕಳೇ ಇದನ್ನೂ ಈಗಲೇ ಹಂಚಿಕೊಡಬಹುದಿತ್ತು. ಆದರೆ ಇದುವರೆಗೂ ಯಾರ ಹತ್ತಿರವೂ ಕೈ ಒಡ್ಡದೆ ಬದುಕು ನಡೆಸಿಕೊಂಡು ಬಂದಿದ್ದೇನೆ. ಅಲ್ಲದೆ ಈಗ ನನಗೆ ಹತ್ತಿರ ಹತ್ತಿರ ಎಂಭತ್ತು ವರ್ಷಗಳು. ಇದುವರೆಗೆ ಯಾವುದೇ ದೀರ್ಘ ಅನಾರೋಗ್ಯ ನನ್ನನ್ನು ಕಾಡಿಲ್ಲ. ಮುಂದೆ ಎಷ್ಟು ವರ್ಷ ಬದುಕುತ್ತೇನೋ ನನಗೆ ತಿಳಿಯದು. ಮುಂದೆ ನನಗೇನಾದರೂ ಆದರೆ ನೀವ್ಯಾರಾದರೂ ಈ ಹಣವನ್ನು ಉಪಯೋಗಿಸಬಹುದು. ಹಾಗೂ ಉಪಯೋಗವಾಗದೇ ಹಾಗೇ ಮಿಕ್ಕರೆ ಅದು ನನ್ನ ಮೊಮ್ಮಕ್ಕಳಿಗೆ” ಎಂದು ಹೇಳಿದರು.

ಒಬ್ಬೊಬ್ಬರ ಮನೆಯಲ್ಲಿ ತಾನು ಮೂರು ತಿಂಗಳಿನಂತೆ ಇರುತ್ತೇನೆಂದು ನಿಗದಿ ಮಾಡಿಕೊಂಡು ಅದರಂತೆಯೇ ಒಬ್ಬ ಮಗನ ಮನೆಯಿಂದ ಮತ್ತೊಬ್ಬ ಮಗನ ಮನೆಗೆ ಹೋಗುವುದು ಬರುವುದು ನಡೆದಿದ್ದರೂ ಒಂದು ಸಾರಿಯೂ ಯಾರ ಮನೆಯ ವಿಷಯ ಇನ್ನೊಬ್ಬರಲ್ಲಿ ಬಾಯಿ ಬಿಡುತ್ತಿರಲಿಲ್ಲ. ಅಷ್ಟೆ ಏಕೆ ಅಕ್ಕಪಕ್ಕದವರೊಡನೆ ಆಗಲೀ, ಮನೆಗೆ ಬಂದು ಹೋಗುವವರೊಡನೆಯಾಗಲಿ ಅವರು ಕೇಳಿದಷ್ಟಕ್ಕೆ ಮಾತ್ರ ಉತ್ತರ ನೀಡಿ ಒಳ ನಡೆದುಬಿಡುತ್ತಿದ್ದರು.

ಈ ವ್ಯವಸ್ಥೆ ಒಂದೆರಡು ವರ್ಷಗಳು ನಡೆಯಿತಷ್ಟೇ. ಆನಂತರ ನಮ್ಮತ್ತೆಗೆ ‘ಆಲ್ಜಿಮೀರ್’ ಎಂಬ ಮರೆವಿನ ಖಾಯಿಲೆ ಆವರಿಸಿಕೊಂಡಿತು. ತಮ್ಮ ಮಕ್ಕಳನ್ನೇ ಗುರುತಿಸಲಾಗದ ಮಟ್ಟಕ್ಕೆ ಅವರು ತಲುಪಿದರು. ಪೂಜೆ, ಪುನಸ್ಕಾರ, ಔಷಧೋಪಚಾರ ಎಲ್ಲ ಮಾಡಿಸಿದರೂ ಪ್ರಯೋಜನವಾಗಲಿಲ್ಲ. ಇಂಥವರನ್ನು ಅಲ್ಲಿ‌ಇಲ್ಲಿ ಓಡಾಡಿಸುವುದು ಸರಿಯಲ್ಲವೆಂದು ನಿಶ್ಚಯಿಸಿದೆ. ಅವರನ್ನು ನಮ್ಮಲ್ಲಿಯೇ ಇರಿಸಿಕೊಂಡೆವು. ನನ್ನವರ ಅಣ್ಣಂದಿರು, ಅತ್ತಿಗೆಯರುಗಳಿಗೆ ಅವರನ್ನು ನೋಡಬೇಕೆನಿಸಿದರೆ ನೀವುಗಳೇ ಬಂದುಹೋಗಿ ಎಂದು ಹೇಳಿಬಿಟ್ಟೆ. ನಿರ್ವಾಹವಿಲ್ಲದೆ ಅವರೂ ಸಮ್ಮತಿಸಿದರು. ಕಣ್ಣಿನಲ್ಲಿ ಕಣ್ಣಿಟ್ಟು ನಾನವರನ್ನು ನೋಡಿಕೊಳ್ಳುತ್ತಿದ್ದೆ. ಎಂಥಹ ತಾಯಿಗೆ ಇಂಥಹ ಶಿಕ್ಷೆ ಎಕೆ ಕೊಟ್ಟೆದೇವರೇ? ಎಂದು ಹಲುಬುತ್ತಿದ್ದೆ.. ಅದಾದ ಒಂದುವರ್ಷ ಮಗುವಿನಂತೆ ಬದುಕಿದ್ದು ಮಗುವಿನಂತೆಯೇ ದೈವದಲ್ಲಿ ಸೇರಿಹೋದರು.

ಅತ್ತೆಯವರ ಕಾಲಾನಂತರ ಮಿತಭಾಷಿಯಾದ ನನ್ನವರಿಗಿಂತ ಮಕ್ಕಳೊಡನೆಯೇ ನನ್ನ ಒಡನಾಟ ಹೆಚ್ಚಾಯಿತು. ಹಾಗೇ ಇಲ್ಲಿಯೂ ಮಹಿಳಾ ಸಂಘಗಳ ಚಟುವಟಿಕೆಯೂ ಅಧಿಕವಾಯಿತು. ಮಗ ಆದಿತ್ಯ ಪಿ.ಯು.ಸಿ. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದ್ದರೂ ಸಿ.ಇ.ಟಿ. ಪ್ರವೇಶ ಪರೀಕೆಯಲ್ಲಿ ನಿರೀಕ್ಷಿಸಿದ ರ್‍ಯಾಂಕ್ ಪಡೆಯಲಿಲ್ಲ. ಅದರಿಂದಾಗಿ ಅವನು ಬಯಸಿದ ವಿಷಯದಲ್ಲಿ, ಬಯಸಿದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಸಿಗುವುದು ಕಷ್ಟ ಸಾಧ್ಯವೆಂದು ತಿಳಿಯಿತು. ಆಗ ನನ್ನವರು “ನೋಡು ಆದಿತ್ಯ, ಮೆರಿಟಿನ ಸೀಟಿನಲ್ಲಿ ಯಾವ ವಿಷಯ ಸಿಗುತ್ತದೆಯೋ ಅದನ್ನೇ ಸೇರಿ ಓದುವುದಾದರೆ ಓದು. ಇಲ್ಲದಿದ್ದರೆ ನಿನಗಿಷ್ಟವಾದ ಬೇರೆ ಕೋರ್ಸಿಗೆ ಸೇರಿಕೋ. ನಾನಂತೂ ಡೊನೇಷನ್ ಕೊಡಲಾರೆ, ಹಾಗೂ ನಿನ್ನನ್ನು ಬೇರೆ ಊರಿಗೆ ಕಳುಹಿಸಿ ಖರ್ಚುವೆಚ್ಚವನ್ನು ಭರಿಸಿ ನಿಭಾಯಿಸುವುದು ನನಗಿಷ್ಟವಿಲ್ಲ” ಎಂದುಬಿಟ್ಟರು.

ಮೊದಲಿನಿಂದಲೂ ತನ್ನಪ್ಪನೊಡನೆ ಹೆಚ್ಚು ಸಲುಗೆಯಿಲ್ಲದ ಅವನು ನನಗೆ ಬೆನ್ನುಹತ್ತಿದ. “ಅಮ್ಮಾ ಪ್ಲೀಸ್ ಅಪ್ಪನಿಗೆ ಹೇಳಮ್ಮಾ. ನನಗಿಷ್ಟವಿಲ್ಲದ ವಿಷಯ ತೆಗೆದುಕೊಂಡು ಹೇಗೆ ಓದಲಿ? ಬೇರೆ ಕೋರ್ಸಿಗೆ ಹೋಗಲು ನನಗಿಷ್ಟವಿಲ್ಲ. ಏನಾದರೂ ಮಾಡು ಪ್ಲೀಸ್” ಎಂದು ಗೋಗರೆದ. ನಿರಾಸೆಯಿಂದ ಕುಗ್ಗಿದ ಅವನ ಮುಖವನ್ನು ನೋಡಲಾರದೆ ನನ್ನವರನ್ನು ಒಪ್ಪಿಸಿ ಅತ್ತೆಯವರು ನನಗೆ ಕೊಟ್ಟಿದ್ದ ಹಣವನ್ನು ಬಳಸಿಕೊಳ್ಳಲು ಅವರಿಗೆ ನೀಡಿದೆ.

ಆಗ ನನ್ನವರು “ಬೇಡ ಸುಕನ್ಯಾ, ಅಷ್ಟು ಇಷ್ಟವಿಲ್ಲದವನು ಇನ್ನಷ್ಟು ಪರಿಶ್ರಮ ವಹಿಸಿ ಓದಬೇಕಿತ್ತು. ಈಗ ಈ ಹಣವನ್ನು ಡೊನೇಷನ್ ಕೊಟ್ಟು ಸೇರಿಸಿದೆ ಎಂದಿಟ್ಟುಕೋ. ಮುಂದೆ ಅದೇ ಬದ್ಧತೆ ಇಟ್ಟುಕೊಂಡು ಓದುತ್ತಾನೆಂದು ಹೇಗೆ ನಂಬುವುದು?” ಎಂದು ವಿರೋಧಿಸಿದರು. “ಪಾಪ ಹಾಗೇಕೆ ಬಯಸುತ್ತೀರಾ? ಎಸ್.ಎಸ್.ಎಲ್.ಸಿ. ಯಲ್ಲಿ ಅವನು ಒಳ್ಳೆಯ ರ್‍ಯಾಂಕ್ ಬಂದಿರಲಿಲ್ಲವೇ? ಈಗೇನೋ ಸಿ.ಇ.ಟಿ.ಯಲ್ಲಿ ಸ್ವಲ್ಪ ಎಡವಟ್ಟಾಗಿದೆ. ಅದಕ್ಕಾಗಿ ಅವನನ್ನು ನಿರಾಸೆಗೊಳಿಸುವುದು ಬೇಡ” ಎಂದು ಪಟ್ಟು ಹಿಡಿದು ಒಪ್ಪಿಸುವಲ್ಲಿ ಯಶಸ್ವಿಯಾದೆ.ಆನಂತರ ಅವನು ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸದೆ ಜವಾಬ್ದಾರಿಯಿಂದ ಅಭ್ಯಾಸಮಾಡಿ ಉತ್ತಮ ರೀತಿಯಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ.

ಓದಿನಲ್ಲಿ ಅತಿಯಾದ ಆಸಕ್ತಿಯೇನೂ ಹೊಂದಿಲ್ಲದ ಮಗಳು ಮಾಧವಿ ಎಲ್ಲಿಯೂ ನಿಲ್ಲದೆ ಎಡವದೆ ಪದವೀಧರೆಯಾಗಿ ಒಂದು ಕೆಲಸ ಗಿಟ್ಟಿಸಿಕೊಂಡಳು. ಇಬ್ಬರು ಮಕ್ಕಳೂ ಚೆಲುವಿನಲ್ಲಿ ಒಬ್ಬರನ್ನು ಒಬ್ಬರು ಮೀರಿಸುವಂತಿದ್ದರೂ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು. ಮಗ ಆದಿತ್ಯ ಗಂಭೀರ ಪ್ರವೃತ್ತಿಯವನಾದರೆ, ಮಗಳು ಮಾಧವಿ ಹೆಣ್ಣುಗಂಡು ಭೇದವಿಲ್ಲದೆ ಎಲ್ಲರೊಡನೆ ಸ್ವಚ್ಛಂದವಾಗಿ ಬೆರೆತು ತಿರುಗುವ ದಾಷ್ಟಿಕತೆ ಹೊಂದಿದ್ದಳು. ಇವಳ ಸ್ವಭಾವ ನನ್ನನ್ನು ಆಗಾಗ ಚಿಂತೆಗೆ ದೂಡುತ್ತಿತ್ತು. ತಡೆಯಲಾರದೆ ನನ್ನ ಆತಂಕವನ್ನು ನನ್ನವರೊಡನೆ ಹೇಳಿಕೊಂಡು ಪೇಚಾಡುತ್ತಿದ್ದೆ. ಆಗೆಲ್ಲ ಅವರು “ನೋಡು ಸುಕನ್ಯಾ, ಈಗಿನ ಮಕ್ಕಳು ನಮ್ಮ ಹಾಗಲ್ಲ. ಕಾಲವೂ ಬದಲಾಗಿದೆ. ಅಲ್ಲದೆ ಬೆಳೆದ ಮಕ್ಕಳನ್ನು ತೀರಾ ಬಿಗಿಯಾಗಿ ಮುಷ್ಟಿಯಲ್ಲಿ ಇಟ್ಟುಕೊಳ್ಳಲಾಗದು. ಹಾಗೆ ಮಾಡಲೂ ಬಾರದು. ಬಿಗಿಯಾದಷ್ಟೂ ಒತ್ತಡ ಜಾಸ್ತಿಯಾಗಿ ತಮ್ಮನ್ನು ಕಟ್ಟಿಹಾಕಿದ ಗೂಟವನ್ನೇ ಕಿತ್ತುಕೊಂಡು ಹೋಗಿಬಿಡುವ ಸಂಭವವಿದೆ. ಬುದ್ಧಿವಂತರಾಗಿದ್ದಾರೆ ತಮ್ಮ ಹಾದಿ ಕಂಡುಕೊಳ್ಳುತ್ತಾರೆ. ಸುಮ್ಮನೆ ನೀನೇಕೆ ತಲೆಕೆಡಿಸಿಕೊಳ್ಳುತ್ತೀಯೆ?” ಎಂದು ಬಾಯ್ಮುಚ್ಚಿಸುತ್ತಿದ್ದರು.

ನನ್ನವರು ಕೊಡುತ್ತಿದ್ದ ಸಮಝಾಯಿಷಿ ಉತ್ತರದಿಂದ ನನಗೆ ತೃಪ್ತಿಯಾಗುತ್ತಿರಲಿಲ್ಲ. ಮದುವೆಯಾದ ಸ್ವಲ್ಪ ಕಾಲದಲ್ಲೇ ನನ್ನವರ ಸ್ವಭಾವದ ಅರಿವಾಗಿತ್ತು. ಮಿತಭಾಷಿಯಾದ ನನ್ನವರು ಜೊತೆಗೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬಂದಿದ್ದನ್ನು ನಿರ್ವಿಕಾರವಾಗಿ ಸ್ವೀಕರಿಸುವ ವ್ಯಕ್ತಿಯೆಂಬುದು. ವಯಸ್ಸಿಗೆ ಬಂದಿದ್ದ ಮಗಳು ಸಿಕ್ಕಸಿಕ್ಕವರೊಡನೆ ಎಗ್ಗುಸಿಗ್ಗಿಲ್ಲದಂತೆ ಓಡಾಡುತ್ತಿದ್ದರೆ ನೋಡಿದವರು ಎನು ತಿಳಿದುಕೊಂಡಾರು? ಈಗಂತೂ ಏನೂ ಇಲ್ಲದೆಯೇ ಕಥೆ ಕಟ್ಟುತ್ತಾರೆ. ಛೆ ಛೇ ನನ್ನ ಮಗಳು ತುಂಬ ಆತ್ಮೀಯತೆಯಿಂದ ನಡೆದುಕೊಳ್ಳುತ್ತಿದ್ದವನನ್ನು ನೋಡಿದಾಗಲೆಲ್ಲ ಓ ! ಇವನನ್ನು ಅವಳು ಇಷ್ಟಪಡುತ್ತಿರಬೇಕು, ಇವನೇ ನನ್ನ ಅಳಿಯನಾಗಬಹುದೇನೋ? ಎಂದು ಕಲ್ಪಿಸಿಕೊಂಡು ಊಹುಂ, ಇರಲಾರದು, ಆವತ್ತು ಬಂದಿದ್ದನಲ್ಲ ಇನ್ನೊಬ್ಬ ಅವನು? ಅವಳು ಮಾತ್ರ ಯಾರ ಬಗ್ಗೆಯೂ ಚಕಾರವೆತ್ತುತ್ತಿರಲಿಲ್ಲ. ಪುಣ್ಯಾತಗಿತ್ತಿ ಹೋಗಲಿ ಬೇರೆ ಯಾರನ್ನಾದರೂ ನಾವು ವಿಚಾರಿಸೋಣವೆಂದರೆ “ಅಮ್ಮಾ ನೀನೇನು ಒಳ್ಳೆ ಅಡುಗೂಲಜ್ಜಿ ತರ ಆಡ್ತೀ, ಯಾಕವಸರ ಮಾಡುತ್ತೀ, ಸುಮ್ಮನಿರು. ನನ್ನ ಬಾಳಸಂಗಾತಿಯನ್ನು ನಾನೇ ಆರಿಸಿಕೊಳ್ಳುತ್ತೇನೆ” ಎಂದು ಬಾಯ್ಮುಚ್ಚಿಸುತ್ತಿದ್ದಳು.

ಅಪ್ಪನೊಡನೆ ಇವನ್ನೆಲ್ಲ ಹೇಳಿಕೊಳ್ಳಲು ಸಂಕೋಚ. ಅಮ್ಮನೋ, ಅತ್ತೆಯೋ ಇದ್ದಿದ್ದರೆ ಸರಿಹೋಗುತ್ತಿತ್ತು. ನನ್ನ ಒಡಹುಟ್ಟಿದವಳೊಬ್ಬಳು ಇದ್ದಾಳೆ ಪಾಪ ಅವಳದ್ದೇ ಹಾಸಿ ಹೊದೆಯುವಷ್ಟಿದೆ, ಅದರ ಮಧ್ಯೆ ನನ್ನದನ್ನೇಕೆ ತುರುಕಲಿ. ಮೊನ್ನೆ ಅವಳಿಂದ ಫೋನ್ ಬಂದಾಗ ಅವಳ ಕಿರಿಯ ಮಗಳು ತನ್ನ ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದೇನೆ. ಅವನನ್ನೇ ಮದುವೆಯಾಗುತ್ತೇನೆಂದು ಪಟ್ಟು ಹಿಡಿದಿದ್ದಾಳಂತೆ. ಅ ಸುದ್ಧಿ ತಿಳಿದಾಗಿನಿಂದ ಅವರ ಮನೆಯಲ್ಲಿ ಕುರುಕ್ಷೇತ್ರವೇ ಪ್ರಾರಂಭವಾಗಿದೆಯೆಂದು ಗೋಳಾಡಿದಳು. ನಾನೇ ಅವಳಿಗೆ ಸಮಾಧಾನ ಹೇಳಿದ್ದೆ. ಅಂತಹುದರಲ್ಲಿ ನನ್ನ ಸಮಸ್ಯೆಗೆ ಜಾಗವೇ ಇಲ್ಲ. ಸದ್ಯ ನನ್ನ ಮಗ ಈ ಬಜಾರಿ ಮಗಳಂತಲ್ಲ. ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೆ. ಆದರೆ ಈ ಸಮಾಧಾನ ಬಹಳ ಕಾಲ ಉಳಿಯಲಿಲ್ಲ. “ಎಂದೂ ಸದ್ದು ಮಾಡದ ಸಿದ್ದ ಸದ್ದಿಲ್ಲದೆ ಎದ್ದ” ಎಂಬಂತೆ ನನ್ನೆಲ್ಲ ಕನಸುಗಳನ್ನೂ ತಳ್ಳಿಹಾಕುವಂತೆ ಆಟಂಬಾಂಬ್ ಸಿಡಿಸಿಬಿಟ್ಟ ನನ್ನ ಮಗ. ಅಮ್ಮಾ ನನ್ನ ಸಹೋದ್ಯೋಗಿ ಪ್ರಣತಿ ಎಂಬ ಹುಡುಗಿಯನ್ನು ನಾನು ಇಷ್ಟಪಟ್ಟಿದ್ದೇನೆ. ಮದುವೆ ಅಂತಾದರೆ ಅವಳನ್ನೇ ಎಂದು ಇದ್ದಕ್ಕಿದ್ದಂತೆ ಸುದ್ಧಿ ಪ್ರಕಟಿಸಿದ.

ಈ ವಿಷಯವನ್ನು ನನ್ನವರಿಗೆ ತಿಳಿಸಿದೆ. ಅದನ್ನು ಕೇಳಿದ ಅವರು ” ಓ ! ಇದು ಕ್ಯಾಂಪಸ್ ಸೆಲೆಕ್ಷನ್, ವೆರಿಗುಡ್, ಹುಡುಗಿಯನ್ನು ಹುಡುಕುವ ತೊಂದರೆಯನ್ನು ನಮಗೆ ತಪ್ಪಿಸಿದ ನಮ್ಮ ಮಗ. ಅವರು ಯಾವ ಊರಿನವರಂತೆ? ಹುಡುಗಿಯ ತಂದೆ ತಾಯಿಗಳ ವಿವರಗಳನ್ನು ಕೇಳಿಕೋ. ಮಾತುಕತೆಯಾಡಿ ಓಲಗ ಊದಿಸಿಯೇಬಿಡೋಣ. ಅಲ್ಲದೆ ಪರದೇಶಕ್ಕೆ ಹೋಗುವ ಹುನ್ನಾರ ಬೇರೆ ನಡೆಸಿದ್ದಾನೆ. ಅಂದಮೇಲೆ ಮದುವೆ ಮಾಡಿಯೇ ಕಳುಹಿಸಿಬಿಡೋಣ, ಶುಭಸ್ಯಶೀಘ್ರಂ. ಆಗಿಹೋಗಲಿ” ಎಂದರು.

ಹೂಂ ಈ ಮನುಷ್ಯನಿಗೆ ಕೋಪ, ಬೇಸರಿಕೆ, ನಿರಾಸೆ ಯಾವುದೂ ಬರುವುದಿಲ್ಲವೇ? ಇಷ್ಟು ದೊಡ್ಡ ಸಂಗತಿಯನ್ನು ಹೇಳಿದಾಗಲೂ ಹೀಗೆ ಪ್ರತಿಕ್ರಿಯೆ ! ಆದರೂ ಒಂದು ಮಾತು ಹೇಳೋಣವೆಂದು “ಅಲ್ಲರೀ, ನಾವು ಈ ಮಕ್ಕಳನ್ನು ಬೆಳೆಸುವುದರಲ್ಲಿ ನನ್ನಿಂದೇನಾದರೂ ತಪ್ಪಾಯಿತೇ? ಅತಿ ಸಲುಗೆ ಕೊಟ್ಟದ್ದು ” ಎಂದೆ. ನನ್ನ ಮಾತನ್ನು ಅರ್ಧದಲ್ಲೇ ತಡೆಯುತ್ತಾ “ಹಾಗೇಕೆ ಅಂದುಕೊಳ್ಳುತ್ತೀ ಸುಕನ್ಯಾ, ಅದು ನಿನ್ನ ತಪ್ಪುಗ್ರಹಿಕೆ. ನಿಮ್ಮ ದೊಡ್ಡಣ್ಣನ ಮಗಳನ್ನು ಅವಳ ಅಪ್ಪ ಅಮ್ಮ ಹದ್ದಿನಂತೆ ಕಾಯುತ್ತಿದ್ದರು. ಮಗಳ ಮೇಲೆ ವಿಪರೀತ ಕಟ್ಟುಪಾಡು ಮಾಡಿದ್ದರು. ಆದರೇನಾಯಿತು ನೆನಪಿದೆಯೇ?” ಎಂದರು.

ಹೌದು ಅವಳೇನು ಮಾಡಿದ್ದಳು ಎಲ್ಲವನ್ನೂ ಮುಚ್ಚಿಟ್ಟು ಅಣ್ಣ ಗೊತ್ತುಮಾಡಿದ್ದ ಹುಡುಗನೊಡನೆ ನಿಶ್ಚಿತಾರ್ಥ ಇಟ್ಟಿದ್ದರು. ಆ ದಿನವೇ ಅವಳು ಮನೆಯಿಂದ ನಾಪತ್ತೆಯಾಗಿದ್ದಳು. ಇದರಿಂದಾಗಿ ನಮ್ಮ ಅಣ್ಣನಿಗೆ ಹೃದಯಾಘಾತವಾಗಿ ಆಸ್ಪತ್ರೆಯವಾಸ ಅನುಭವಿಸಿ ಬಂದಿದ್ದರು. ಅವಳು ಅನ್ಯಜಾತಿಯವನನ್ನು ವರಿಸಿದ್ದಳು. ಈ ವಿಷಯವನ್ನು ಮುಚ್ಚಿಟ್ಟು ಮನೆಯವರು ಬೇರೆ ಪ್ರಯತ್ನ ಮಾಡಿದ್ದರು. ಅವರ ಮನೆಯವರು ಅಣ್ಣನ ಅನಾರೋಗ್ಯಕ್ಕೆ ಅವಳೇ ಕಾರಣವಾದಳೆಂದು ಮಗಳನ್ನು ಮನೆಯಿಂದ ದೂರಮಾಡಿದ್ದರು. ಆದರೆ ಕೆಲವು ಕಾಲವಾದ ನಂತರ ಈಗ ಏನೂ ಆಗಿಯೇ ಇಲ್ಲವೇನೋ ಎಂಬಂತೆಲ್ಲರೂ ಜೊತೆಗೂಡಿದ್ದಾರೆ.

“ಏನು?..ಏಕೆ ಮೌನವಾದೆ ಸುಕನ್ಯಾ? ನಾನು ನಿನ್ನ ಮನಸ್ಸಿಗೆ ನೋವುಂಟು ಮಾಡಲು ಈ ವಿಷಯ ಹೇಳಲಿಲ್ಲ. ಮೊದಲೇ ನಮ್ಮ ಮಗ ವಿಷಯ ತಿಳಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾನೆ ತಿಳಿದುಕೋ. ಇಲ್ಲಸಲ್ಲದ ಆಲೋಚನೆಗಳನ್ನು ಬಿಟ್ಟು ಸದ್ಯಕ್ಕೆ ನಿಶ್ಚಿಂತೆಯಾಗಿ ಮಲಗು” ಎಂದು ವಿಷಯಕ್ಕೆ ಮುಕ್ತಾಯ ಹಾಡಿದರು.

ನನ್ನವರ ಆದೇಶದಂತೆ ಮಗನನ್ನು ವಿಚಾರಿಸಿದಾಗ ತಿಳಿದುಬಂದ ಸಂಗತಿ ಇಷ್ಟು. ಉಡುಪಿಯ ಮೂಲದವರಾದ ಅವರ ತಂದೆತಾಯಿಗಳು ಉದ್ಯೋಗನಿಮಿತ್ತ ಮುಂಬಯಿಯಲ್ಲಿ ನೆಲೆಯಾದವರು. ಅವರಿಗೆ ಇಬ್ಬರು ಮಕ್ಕಳು, ಹುಡುಗಿಯ ಅಪ್ಪ ಇಂಜಿನಿಯರ್, ಅಮ್ಮ ಗೃಹಿಣಿ. ಅವರು ನಮ್ಮ ಮತಸ್ಥರೇ. ಆದರೂ ಒಳಪಂಗಡದಲ್ಲಿ ಸ್ವಲ್ಪ ಭಿನ್ನವಿದೆ. ನಮ್ಮ ತಾತನವರು ಹೇಳುತ್ತಿದ್ದರಲ್ಲ ಪಂಗಡಗಳು ಸ್ಮಾರ್ತರು, ಮಾಧ್ವರು, ಹವ್ಯಕರು ಅಂತ ಏನೇನೋ. ಹಾಗೇ ಅವರು ಮಾತನಾಡುವುದು ಕೊಂಕಣಿನೋ, ತುಳುನೋ ಇರಬೇಕು. ಆದರೆ ಕನ್ನಡ ಗೊತ್ತು ಎಂದ ಮಗ.

“ಸರಿಬಿಡು ಅದೇನೂ ಅಂತ ದೊಡ್ಡ ವಿಷಯವಲ್ಲ. ಅವರಪ್ಪನ ಫೋನ್ ನಂಬರ್ ಕೊಡು. ನಿಮ್ಮಪ್ಪ ಅವರೊಡನೆ ಮಾತನಾಡಲಿ” ನಂತರ ಯೋಚನೆಮಾಡೋಣ. ಎಂದೆ.

“ಯೋಚಿಸೋಣ ಅಂದರೆ ಏನಮ್ಮಾ? ಅಪ್ಪನಿಗೆ ನೀನೇ ಹೇಳಮ್ಮಾ. ಏನಾದರೂ ಉಲ್ಟಾ ಮಾತನಾಡಿಬಿಟ್ಟಾರು” ಎಂದ. “ಹೌದೇ ಹಾಗಿದ್ದರೆ ನಿಮ್ಮಪ್ಪನ ಹತ್ತಿರ ನೀನೇ ಮಾತನಾಡು ಆದಿ” ಎಂದೆ.

“ಮಾತನಾಡಬಹುದು ಆದರೆ.. ಅನ್ನುವಷ್ಟರಲ್ಲಿ ಅವನಪ್ಪ ಬಾಗಿಲು ತೆಗೆದುಕೊಂಡು ಒಳಬಂದು ಹೂ ಹೇಳಪ್ಪಾ ಆದಿ, ಅಮ್ಮನಷ್ಟು ಫ್ರೆಂಡ್ಲಿ ಇಲ್ಲಾಂತ, ಸಾರಿ ಮಗನೇ ಅಮ್ಮ ಮಗನ ಸಂಭಾಷಣೆಯನ್ನು ಕದ್ದು ಕೇಳಿದ್ದಕ್ಕೆ. ಕಾರಣ ನೀವುಗಳೇ, ಮಾತಿನ ಭರದಲ್ಲಿ ಮುಂಬಾಗಿಲನ್ನು ಮುಚ್ಚಿಯೇ ಇರಲಿಲ್ಲ” ಎಂದು ನನಗೆದುರಾಗಿದ್ದ ಕುರ್ಚಿಯ ಮೇಲೆ ಕುಳಿತುಕೊಂಡರು. ಸರಿ ಮೊದಲಿನಂತೆ ಎಲ್ಲ ಪ್ರವರ ಪುನರಾವರ್ತನೆಯಾಯಿತು. “ನಾನೂ ನಿಮ್ಮಂತೆಯೇ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂದಿದ್ದೇನೆ” ಎಂಬ ಮಾತನ್ನೂ ಸೇರಿಸಿದ ಮಗ.

“ನಾವಿಬ್ಬರೂ ಅದಕ್ಕೆ ಅವರುಗಳು ಸಮ್ಮತಿಸಬೇಕಲ್ಲಾ?” ಎಂದೆವು.
“ಇಲ್ಲಮ್ಮಾ, ಇದರ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಒಂದೆರಡು ಶರತ್ತಿನ ಮೇಲೆ ಒಪ್ಪಿದ್ದಾರೆ” ಎಂದ ಕುಮಾರ ಕಂಠೀರವ.
ಎಲ್ಲವನ್ನೂ ಆಗಲೇ ನಿರ್ಧರಿಸಲಾಗಿದೆ. ನಮ್ಮ ಔಪಚಾರಿಕ ಒಪ್ಪಿಗೆ ಕಾದಿರಿಸಲಾಗಿದೆ. ಅರ್ಥವಾಯಿತು. ಆದರೂ ಅದೇನು ಶರತ್ತುಗಳೆಂದು ಕೇಳಬಹುದೇ? “ಎಂದೆವು.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ:    http://surahonne.com/?p=31510

-ಬಿ.ಆರ್ ನಾಗರತ್ನ, ಮೈಸೂರು

7 Responses

  1. ನಯನ ಬಜಕೂಡ್ಲು says:

    ನಮ್ಮದೇ ನಡುವಿನ ಕಥೆ, ಎಲ್ಲೋ ಒಂದು ಕಡೆ ಕೆಲವೊಂದು ಸನ್ನಿವೇಶಗಳು ನಮ್ಮ ಬದುಕಿಗೆ ಬಹಳ ಆಪ್ತ, ಉದಾಹರಣೆಗೆ ಅಕ್ಕ, ತಂಗಿ, ಅತ್ತಿಗೆ ನಾದಿನಿ, ಅತ್ತೆ ಸೊಸೆಯ ನಡುವಿನ ಸಂಬಂಧಗಳು.

  2. Anonymous says:

    ನಮಸ್ಕಾರ ಅತ್ತೆಯ ಪಾತ್ರ ಮನೋಜ್ಞ ವಾಗಿದೆ,ಕತೆ ಎಳೆಯದೆ ವೇಗವಾಗಿ ಸಾಗುತ್ತಾ ಓದಿಸಿಕೊಂಡು ಹೋಗುತ್ತದೆ,ವಿದ್ಯಾ ವೆಂಕಟೇಶ್

  3. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಸಹೃದಯರಿಗೆ.

  4. ಮಾಲತಿ says:

    ಪ್ರತಿ ಮನೆಯ ಕಥೆಯು ಇದೆ ಆಗಿದೆ. ಪ್ರೇಮ ವಿವಾಹ ಸರ್ವೇಸಾಮಾನ್ಯವಾಗಿ ಹೋಗಿದೆ. ಕಥೆ ಹೆಚ್ಚು ಗೋಳುಮಯವಾಗಿರದೆ ಸುಗಮವಾಗಿ ಸಾಗುತ್ತಿದೆ.

  5. ಶಂಕರಿ ಶರ್ಮ says:

    ಸುಲಲಿತವಾಗಿ ಓದಿಸಿಕೊಂಡು ಹೋಗುವ ಸಾಂಸಾರಿಕ ಕಥಾ ಧಾರಾವಾಹಿಯು ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಸುಕನ್ಯಾಳ ಅತ್ತೆಯಂತಹವರು ಇರುವುದು ಬಹಳ ಕಡಿಮೆ.

  6. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಸಹೃದಯರಿಗೆ

  7. Anonymous says:

    ಧನ್ಯವಾದಗಳು ಸಹೃದಯರಿಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: