ಕೋರೊನಮ್ಮ ನಿನ್ನ ಮಹಿಮೆ
ಕೊರೊನಮ್ಮ ನಿನ್ನ ಮಹಿಮೆ ಅಪಾರ. ನಿನ್ನಯ ಮೇಲಿನ ಭಕುತಿಯಿಂದ 3 ಮೀಟರ್ ಅಂತರ ಕಾಪಾಡಿಕೊಂಡೇ ನಿನ್ನ ನಮಿಸಲು ತಯಾರಾಗಿಹರು. ನಿನ್ನ ಈ ನಿಯಮ ಮೀರಿ ಪೂಜಿಸದೇ ಬಂದಿಹ ನಿನ್ನ ಭಕುತರಿಗೆ ನೀನು ನೀಡುವ ಮಹಾನ್ ಶಿಕ್ಷೆಗೆ ಹೆದರಿಹರು. ಜಾತಿ,ಮತ,ಭಾಷೆಗಳ ಬೇಧವ ಮರೆತು ಜನಸಾಗರವಿಂದು ಒಂದಾಗಿಹುದು. ಕರೆಯದೇ ಬಾರದ ಅತಿಥಿ ನೀನೆಂದು ಲಾಕ್ ಡೌನ್ ಎಂಬ ನಿಯಮ ಹೇರಿಕೊಂಡು ಮನೆಸೇರಿ ನಿನ್ನ ನಾಮ ಜಪಿಸುತಿಹರು. ಮನೆಯಲ್ಲೇ ಕುಳಿತು ಕಚೇರಿ ಕೆಲಸ ಮುಗಿಸಿ, ಮನೆಯಲ್ಲೇ ವಿವಿಧ ತಿಂಡಿ ಭಕ್ಷ್ಯ ಮಾಡಿ ವಾಟ್ಸಪ್ಪ್,ಫೇಸಬುಕು ಮೂಲಕ ನಿನಗೆ ನೈವೇದ್ಯ ತೋರಿಸುತಿಹರು. ವಿಧವಿಧ ಕಲಾಕಾರರು ತಾವೇನು ಕಡಿಮೆಯೆಂದು ನಿನ್ನ ಭಜನೆಯ,ನೃತ್ಯ ಸಂಯೋಜನೆಯ ಮಾಡಿ ಟಿಕ್ ಟಾಕ್ ಬಳಸಿ ನಿನ್ನ ಕೀರ್ತನೆ ಮಾಡುತಿಹರು. ನಿನ್ನಯ ನಾಮ ಜಪಿಸುವ “ಆರೋಗ್ಯ ಸೇತು” ಕೂಡ ನಮ್ಮ ಮುಂದಿದೆ. ಯಾವ ದೇವರಿಗೂ ಸಿಗದ ಆಪ್ ಸೌಲಭ್ಯ ನಿನಗೆ ಮಾತ್ರ.
ನಿನ್ನ ಗೆಳತಿಯೆಂದು ನಾವೆಣಿಸಿಹ ಪ್ರಕೃತಿ ಮಾತೆಗೇನೋ ನೀನು ಸಹಾಯ ಮಾಡಿರುವೆ.ದ್ವಿಚಕ್ರ,ಕಾರು,ಜೀಪು ಇತ್ಯಾದಿ ವಾಹನಗಳಿಗೂ ನಿನ್ನ ಭಯ ಕಾಡಿದಂತಿದೆ. ಸವಾರಿಯಲ್ಲೂ ಒಬ್ಬರಿಗಿಂತ ಜಾಸ್ತಿ ಸುತ್ತಬಾರದೆಂಬ ಹೊಸ ನಿಯಮ ಹೇರಿಕೊಂಡು ವಾಹನಗಳಿಗೆ ಲಘು ಅನುಭವ. ಇದನೆಲ್ಲ ಕಂಡು ನೀನು ಈ ವಾಹನದ ಸಹವಾಸ ಸಾಕೆಂದು ನಿಶ್ಚಲ ವಸ್ತುಗಳನ್ನು ನಿನ್ನ ವಾಹನ ಮಾಡಿಕೊಂಡಿರುವೆಯೇನು?ನಿನಗೆ ವಾಯುಮಾಲಿನ್ಯದ ಅಪವಾದ ಬೇಡವೆಂದೇನೋ! ನಿನ್ನ ಬರುವಿನಿಂದ ಹಿಮಾಲಯ, ಗಂಗೆ,ತುಂಗೆಗಳೆಲ್ಲ ಶುದ್ಧವಾಗಿವೆಯಂತೆ. ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ. ಪರಿಸರ ಶುದ್ಧಿಗೊಳಿಸಲು ನಿನ್ನ ದರ್ಶನ ನೀಡಿದೆಯೇನು?
ವಿದೇಶದಲ್ಲಿ ನಿನ್ನ ಉದ್ಭವವಾದರೇನು ಸಮುದ್ರ ದಾಟಿ ಬರಲು,ದೇವರಿಗೆ ಷರತ್ತು ಇಲ್ಲವಲ್ಲ. ನಿನ್ನ ಪೂಜಿಸದಿಹ ಭಕ್ತರಿಗೆ ಒದಗಿಹ ನೆಗಡಿ,ಕೆಮ್ಮು,ಜ್ವರವೆಂದು ಒದ್ದಾಡುತಿಹ ಜನವೀಗ,ರೋಗ ನೀರೋಧಕ ಶಕ್ತಿಗಾಗಿ ಒದ್ದಾಡುತಿಹರು. ನಿನ್ನ ತೆಗಳಿದ ಅವರ ಮನೆ,ಗೆಳೆಯರ ಬಳಗಕ್ಕೂ ಅದೇ ಸಂಕಷ್ಟ.ಪ್ರಕೃತಿ ಮಾತೆಯ ಸಹಾಯದಿಂದ ವೈದ್ಯರು,ದಾದಿಯರು,ಸ್ವಯಮ್ ಸೇವಕರ ಕೃಪೆಯಿಂದ ಅವರ ಚೇತರಿಕೆ ಸಾಧ್ಯವಾಗಿದೆ. ನಿನ್ನ ಭಕ್ತ ಜನರಲ್ಲಿ ಸೋಂಕಿಗೀಡಾದವರು,ಶಂಕಿತರು,ಚೇತರಿಸಿಕೊಂಡವರು,ಮುಕ್ತಿ ಪಡೆದವರೆಂಬ ನಾಲ್ಕು ವಿಧಗಳು ತಾಯಿ. ದೇವಾಲಯದಲ್ಲಿ ಸರತಿ ಸಾಲಿನಲ್ಲಿ ದರುಶನಕ್ಕಾಗಿ ನಿಂತಿರುವಾಗ ನೀರೀಕ್ಷಣಾ ಕೊಠಡಿಗೆ ಕಳಿಸುವಂತೆ,ನಿನ್ನ ಪೂಜೆ ಮಾಡದೇ ಇರುವವರಿಗೆ ಕ್ವಾರಂಟೈನ್ ಕೊಠಡಿಯೇ ಗತಿಯಾಗಿದೆ. ಇವರೆಲ್ಲರಿಗೂ ನಿನ್ನ ಸಹಸ್ರನಾಮ ಜಪಿಸುವ ಕೆಲಸ. ದೇವಾಲಯ,ಚರ್ಚು,ಮಸೀದಿಗಳು ಮತ,ಜಾತಿ ಬೇಧವ ಮರೆತು ನಿನ್ನದೇ ಪಾರಾಯಣ ನಡೆಸುತಿಹರು. ವಿಜ್ಞಾನಿಗಳಿಗಂತೂ ನಿನ್ನ ಚರಿತ್ರೆ,ನಿನ್ನ ಮಹಿಮೆಯದೇ ಜಪ ತಪ. ನೀನು ನೀಡುವ ವರಗಳದೇ ಕುರಿತು ಚಿಂತನೆ ನಡೆಸುವ ಕೆಲಸ.ನಿನ್ನಯ ಆರಾಧನೆ ಕುರಿತು ದೂರ ದೂರ ಕುಳಿತು ಸುರಕ್ಷಾ ಕವಚ ಧರಿಸಿ ಸಂಶೋಧನೆಗೆ ಇಳಿದಿದ್ದಾರೆ. ನಿನ್ನಿಂದ ವೈದ್ಯಕೀಯ ಕ್ಷೇತ್ರದಲ್ಲಿ ಮಹಾನ್ ಬೆಳವಣಿಗೆಯಾಗಿದೆ.
ನಿನ್ನಿಂದ ದಿನಾಲೂ ವೇಗದ ಬದುಕು ನಡೆಸುತ್ತ ಕಚೇರಿ,ಮನೆ,ಹೋಟೆಲು,ವ್ಯವಹಾರ,ಎಂದೆಲ್ಲ ಚಿಂತಿಸುತ್ತಿದ್ದ ಜನತೆಗೆ ಒಂದು ವಿರಾಮವನ್ನು ನೀಡಿದೆ ನೀನು.ಪಾರ್ಕು,ರೆಸಾರ್ಟು,ಪ್ರೇಕ್ಷಣೀಯ ಸ್ಥಳಗಳಿಗೆ ನೀನು ಸ್ವಲ್ಪ ಶಾಂತಿಯನ್ನು ನೀಡಿದೆ. ಮಕ್ಕಳನ್ನು ಶಾಲೆ,ಟ್ಯೂಷನಗೆ ಅಟ್ಟಿ ತಮ್ಮ ಲೋಕದಲ್ಲೇ ನಿರತರಾದ ಪಾಲಕರಿಗೆ ಮಕ್ಕಳೊಂದಿಗೆ ಕಾಲ ಕಳೆಯುವ ಅವಕಾಶ ನೀಡಿದೆ. ಮನೆಯವರೊಂದಿಗೆ ಒಂದು ಸಣ್ಣ ಕರೆಮಾಡಿ ಯೋಗಕ್ಷೇಮ ವಿಚಾರಿಸದ ಬಳಗಕ್ಕೆ ಒಂದು ಕರೆಯೋ,ವಿಡಿಯೋ ಕರೆಯೋ ಮಾಡಿ ಮಾತನಾಡುವ ಕಾಲಾವಕಾಶ ನೀಡಿದೆ. ಕಾಲವೇ ಸ್ಥಬ್ಧವಾದಂತಿದೆ.
ಇನ್ನೂ ಸಾಕು ಮಾಡು ತಾಯಿ ನಿನ್ನ ಪ್ರಭಾವವ.ಅದ ಸಹಿಸುವ ಶಕ್ತಿ ಈ ಮಕ್ಕಳಿಗಿಲ್ಲ. ಹುಟ್ಟಿದ ಸಣ್ಣ ಮಗುವಿನ ಮೇಲೂ ನಿನ್ನ ಕೋಪವ ತೋರಿಸುವೆಯೇಕೆ? ಕಲ್ಲಾಗಿ ಬಿಡು ತಾಯೆ,ಬೇರೆಲ್ಲ ದೇವರಂತೆ. ನಿನಗೆ ಸ್ಯಾನಿಟೈಝೆರ್,ಹ್ಯಾಂಡ್ ವಾಶ್ ನಿಂದ ಅಭಿಷೇಕ ಮಾಡುವೆವು. ನಿನಗೆ ಹಣ್ಣು ಕಾಯಿ ಮಾಡಿ,ನಿನಗೇ ಸಮರ್ಪಿಸುವೆವು. ಉರುಳು ಸೇವೆ,ಪ್ರದಕ್ಷಿಣೆ ಸೇವೆಯಂತೂ ನಿನಗೆ ವರ್ಜ್ಯ. ಸೀರೆ,ಪಂಚೆ,ಸಾಂಸ್ಕೃತಿಕ ಉಡುಗೆ ತೊಡುಗೆಗಳೊಂದಿಗೆ(ಧರಿಸುವ ಚಾಲೆಂಜ್ ನ್ನು ಫೇಸುಬುಕ್ಕು,ವಾಟ್ಸಪ್ಪ್ ನಲ್ಲೂ ಇದೆಯಲ್ಲ ) ಮುಖಗವಸು,ಕೈಗವಸು ಧರಿಸಿಯೇ ನಿನಗೆ ಪೂಜೆ ಸಲ್ಲಿಸುವೆವು. ದಿನಾಲೂ ನೂರಾರು ಬರಿ ಕೈತೊಳೆಯುವ ಸೇವೆಯನ್ನೇ ಮಾಡುವೆವು. ಬಡವ ಬಲ್ಲಿದರಿಗೆ ನಿನ್ನ ಹೆಸರಲ್ಲಿ ಅನ್ನ ಸಂತರ್ಪಣೆ ಮಾಡುವೆವು. ನಿರ್ಗತಿಕರಿಗೆ,ಕೈಲಾಗದವರಿಗೆ ಸಹಾಯ ಮಾಡುವೆವು. ನಿನ್ನ ಮೂರ್ತಿಗೆ ಹೊಸ(ಹಳೆ ಬಟ್ಟೆ) ಸೀರೆ ಉಡಿಸಿ,ಪಕ್ಕದ ಗ್ರಾಮವೇನು?ಶತ್ರು ದೇಶಕ್ಕೂ ಕಳಿಸೆವು!ಆರತಿಯೆತ್ತಿ ಮಣ್ಣಿನಾಳದಲ್ಲಿ ನಿನ್ನ ಪ್ರತಿಷ್ಠಾಪಿಸುವೆವು.ಇಂದು ಬರಬೇಡ,”ನಾಳೆ ಬಾ” ಎಂದು ಬರೆಯದೇ ನಿನ್ನ ಅವತಾರವಿನ್ನೂ ಸಾಕು ತಾಯೆ ಎನ್ನುವೆವು.ನಿನಗೇಕೆ ಮತ್ತೆ ಅವತಾರವೆತ್ತುವ ತೊಂದರೆಯಲ್ಲವೇ?
– ಸಾವಿತ್ರಿ ಶ್ಯಾನುಭಾಗ, ಕುಂದಾಪುರ
ಬರೆದಿರುವ ಅಷ್ಟೂ ವಿಚಾರವೂ ಪ್ರತಿಯೊಬ್ಬನ ಕತೆಯೇ ಸರಿ
ಕೊರೊನಮ್ಮನ ಪೂಜೆ ಪೊಗದಸ್ತಾಗಿದೆ! ಈಗ ಬಂದಿದೆಯಲ್ಲ.. “ಕೋವಿಡ್ ಕವಚ’’ದ ಗುರಾಣಿಯನ್ನು ಹಿಡಿದು ಬರುತ್ತಿದ್ದೇವೆ..ಎಚ್ಚರೆಚ್ಚರ!!
ಧನ್ಯವಾದಗಳು
ತಿಳಿ ಹಾಸ್ಯಭರಿತ ಲೇಖನ ತುಂಬಾ ಸೊಗಸಾಗಿದೆ
ಧನ್ಯವಾದಗಳು