ನಮ್ಮ ನೆಲದ ಸೊಗಡಿನ ಕಥೆ

Share Button

ಹೀಗೊಂದು ಕಾಲವಿತ್ತು ಎಂದು ನನ್ನ ಅಪ್ಪ ಹೇಳಿದ ಅರವತ್ತರ ದಶಕದ ಕಥೆಗಳು ಇನ್ನೂ ಕಿವಿಯಲ್ಲಿ ಗುಯ್ಗುಡುತ್ತಿರುವಾಗಲೇ , ತೊಂಬತ್ತರ ದಶಕದಲ್ಲಿ ನಾನು ಕಂಡ ನಾಡು -ನುಡಿ, ಜೀವನಶೈಲಿ ಸಂಪೂರ್ಣ ಬದಲಾಗಿದ್ದು ಗೊತ್ತೇ ಆಗಲಿಲ್ಲ.

ಅವರೆಲ್ಲರೂ ಕೂಡು ಕುಟುಂಬದ ಕುಡಿಗಳು. ಮನೆಯಲ್ಲಿ ಅಜ್ಜನ ಸೋದರರು ಸೇರಿದಂತೆ, ಅವರ ಹೆಂಡತಿ ಮಕ್ಕಳೊಂದಿಗೆ ಮನೆಯೊಂದು ಗಿಜಿಗಿಜಿ ಜಾತ್ರೆಯಾಗಿತ್ತು. ಊಟಕ್ಕೆ, ಬಟ್ಟೆಗಳಿಗೆ ತತ್ವಾರವಿದ್ದ ಕಾಲವಂತೆ. ನನ್ನಜ್ಜನ ಯಜಮಾನಿಕೆಯಲ್ಲಿ ಮನೆಯ ವ್ಯವಹಾರ ನಿರಾಂತಕವಾಗಿ ನಡೆಯುತ್ತಿತ್ತು. ಆದರೆ ಧರಿಸಲು ಕೇವಲ ಎರಡೇ ಜೊತೆ ಬಟ್ಟೆ, ಒಂದು ಜೊತೆ ಮೈಮೇಲೆ ಇದ್ದರೆ ಮತ್ತೊಂದು ತೊಳೆಯಲು ಹೋಗಿರುತ್ತಿತ್ತು. ಕೂರೆ ಎನ್ನುವ ಹುಳಗಳು ಸೇರಿಕೊಂಡ ಧಿರಿಸುಗಳನ್ನು ಬಿಸಿನೀರಿನಲ್ಲಿ ಕುದಿಸಿ ತೊಳೆದು ಹಾಕುತ್ತಿದ್ದರಂತೆ. ಸೋಪ್ಗಳು ಅಷ್ಟಕ್ಕಷ್ಟೇ. ದೂರದ ಬಾವಿಯಿಂದ ನೀರು ಸೇದಿ ಮನೆಗೆ ತರುವುದು, ವಾರಕ್ಕೊಮ್ಮೆ ಸ್ನಾನ, ಅಷ್ಟೇನೂ ಹೇಳಿಕೊಳ್ಳಲಾರದ ಗುಣಮಟ್ಟದ ಬಟ್ಟೆಗಳು, ಹಬ್ಬಗಳಿಗೆ ಮಾತ್ರ ಕಾಣುತ್ತಿದ್ದ ಅನ್ನದೂಟ, ನಡೆದೇ ಸಾಗುತ್ತಿದ್ದ ನನ್ನೂರಿನ ರಸ್ತೆಗಳು ಸವೆದೇ ಹೋಗಿದ್ದವಂತೆ ಇವರ ಓಡಾಟಕ್ಕೆ. ಚಪ್ಪಲಿ ಇರದ ಕಾಲುಗಳಿಗೆ ರಾತ್ರಿ ಮಾತ್ರ ವಿರಾಮ ದೊರೆಯುತ್ತಿತ್ತು. ಬಯಲು ಸೀಮೆಯ ಭೂಮಿಯಲ್ಲಿ ಬೆಳೆಯುತ್ತಿದ್ದ ನವಣೆ ದಿನನಿತ್ಯದ ಊಟಕ್ಕೆ ಮೀಸಲಾಗಿತ್ತು, ಬಿಳಿಜೋಳದ ರೊಟ್ಟಿ, ಮುದ್ದೆಗಳೆಂದರೆ ಇಂದಿನವರಿಗೇನು ಗೊತ್ತು ಆ ಗಮ್ಮತ್ತು ಎನ್ನುತ್ತಾರೆ.

ನಾವೀಗ ಸಿರಿಧಾನ್ಯಗಳೆಂದು ನೂರು ರೂಪಾಯಿಗೆ ಒಂದು ಕೆಜಿಯಂತೆ ಡಯಟ್ ನೆಪಕ್ಕೆ ಕೊಂಡು ತರುವ ನವಣೆ, ಸಾಮೆ, ಹಾರಕ, ಊದಲು ಆಗ ದಿನನಿತ್ಯದ ಊಟವಾಗಿದ್ದವು. ನೆಲ್ಲಕ್ಕಿ ಅನ್ನ ಉಣ್ಣುವ ಮನೆಯವರು ಸಿರಿವಂತರು ಎನ್ನುವ ಆ ಕಾಲಕ್ಕೆ ಸಿರಿಧಾನ್ಯಗಳು ಬಡವರ ಮನೆಯ ಕಣಜ ತುಂಬಿರುತ್ತಿದ್ದವು. ಕಾಲ ಬದಲಾಗಿ ನೆಲ್ಲಕ್ಕಿಗಿಂತ ಎರಡು ಪಟ್ಟು ಹಣ ಕೊಟ್ಟು ತರುವ ಸಿರಿಧಾನ್ಯಗಳು ಸಿರಿವಂತರ ಧಾನ್ಯಗಳಾಗಿವೆ.

ಮನೆತುಂಬಿದ ಜನಗಳು, ನಡುವೆ ದನಕರುಗಳಿಗೆ ಕಟ್ಟಿಸಿದ ಅಂಕಣ. ಮನೆಯೊಳಗೆ ಸಗಣಿ-ಗಂಜಲದ ವಾಸನೆ ತುಂಬಿರುತ್ತಿತ್ತು. ಆದರೆ ಎಂದಿಗೂ ಅದು ಗಲೀಜು ಎನಿಸಿರಲಿಲ್ಲ. ಆಧುನಿಕತೆಯ ಸೋಗಿನಲ್ಲಿ ನಾವು ಮನೆಯೊಳಗೆ ನಮ್ಮ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದೇವೆ. ಅವರ ಚಿಂತನೆಗಳಿಗೂ ನಮ್ಮ ಯೋಜನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.

ಶ್ರಮದ ದುಡಿಮೆಯಿಂದ ಹೊಟ್ಟೆ ತುಂಬುತ್ತಿದ್ದ ಕಾಲದಲ್ಲಿ ಡೊಳ್ಳು ಹೊಟ್ಟೆಗಳಿಗೆ ಅವಕಾಶ ಇರುತ್ತಿರಲಿಲ್ಲ. ಮನೆಯಲ್ಲಿ ಗುಡಿಸಿ, ಸಾರಿಸಿ,ಧಾನ್ಯಗಳನ್ನು ಕುಟ್ಟಿ, ಬೀಸಿ ಹಿಟ್ಟು ಮಾಡುತ್ತಿದ್ದ ನನ್ನಜ್ಜಿಯರು ನಿಜಕ್ಕೂ ಶ್ರೇಷ್ಟರು. ಅವರ ಆರೋಗ್ಯದ ರಹಸ್ಯ ಇದೇ ಇರಬೇಕು. ಅಷ್ಟೇ ಅಲ್ಲದೆ ಬಿಸಿಲಿನಲ್ಲಿ ಹೊಲಗಳಿಗೂ ತೆರಳಿ ಕೆಲಸ ಮಾಡುತ್ತಿದ್ದರು. ಈಗಲೂ ಕೆಲ ಮಹಿಳೆಯರು ಮಾಡುತ್ತಾರೆ. ಪ್ರಮಾಣ ತುಂಬಾ ಕಡಿಮೆ. ಆದರೆ ಮನೆಗಳು ಸಂಪೂರ್ಣವಾಗಿ ಸುಧಾರಣೆಗೊಳಪಟ್ಟಿವೆ. ಆಗಿನವರಂತೆ ಕಷ್ಟ ಪಡುವಂತಿಲ್ಲ ನಾವು. ಅದಕ್ಕೇ ನಮ್ಮ ಆರೋಗ್ಯಮಟ್ಟ ಕುಸಿಯುತ್ತಿದೆ. ಮೂವತ್ತಾದರೆ ಸಾಕು ಬೆನ್ನು ನೋವು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ತೊಂಬತ್ತಾದರೂ ಗಟ್ಟಿಮುಟ್ಟಾಗಿರುತ್ತಿದ್ದ ಅವರ ಮುಂದೆ ನಾವು ಪಿಳಿಪಿಳಿ ನೋಡುವಂತಾಗಿದೆ. ಸರಾಸರಿ ವಯೋಮಾನದ ಮಿತಿ ಅರವತ್ತರ ಆಸುಪಾಸಿಗೆ ಬಂದಿದ್ದೇವೆ. ಇದಕ್ಕೆಲ್ಲಾ ನಮ್ಮ ಆಹಾರ-ವಿಹಾರ, ಬದಲಾದ ಜೀವನ ಶೈಲಿಯಲ್ಲದೇ ಮತ್ತೇನು!!!

ಅಪ್ಪನ ಕಾಲದ ಜೀವನಕ್ಕೆ ಹೋಲಿಸಿದರೆ ನಮ್ಮದು ಸ್ವಲ್ಪ ಮಟ್ಟಿಗೆ ಸುಧಾರಿತವಾಗಿತ್ತು.ಅವರಷ್ಟು ಕಠಿಣವಾಗಿಲ್ಲದ ಜೀವನ ನಮಗೆ ಸಿಕ್ಕಿದ್ದಕ್ಕೆ ಪುಣ್ಯಮಾಡಿದ್ದೇವೆ ನಾವು ಎಂದು ಭಾವಿಸುವಂತೆಯೇ ಇಲ್ಲ.ಅನುಕೂಲಕರ ಪರಿಸ್ಥಿತಿಯನ್ನು ಪಡೆದರೂ ಅದು ಆರ್ಥಿಕವಾಗಿ ಮಾತ್ರ ಎಂದು ನಮಗೆ ಈಗ ಅನಿಸುತ್ತಿದೆ. ಕಾರಣವಿಷ್ಟೇ ಆರೋಗ್ಯ- ನೆಮ್ಮದಿಯ ದೃಷ್ಟಿಯಿಂದ ನಾವು ನತದೃಷ್ಟರೇ ಅಲ್ಲವೇ? ಕಣ್ಣಿಗೆ ಕಂಡದ್ದೆಲ್ಲವೂ ಕಾಲ ಬುಡದಲ್ಲಿ ಬೀಳುತ್ತಿದ್ದರೂ ಭಾವನಾತ್ಮಕವಾಗಿ ಅಸ್ಥಿರವಾದ ಸಂಬಂಧಗಳು ಹೆಚ್ಚಾಗಿವೆ. ಎಲ್ಲವನ್ನೂ ಕಳೆದುಕೊಂಡ ಅನಾಥಪ್ರಜ್ಞೆಗೆ  ಜೀವಂತ ಸಾಕ್ಷಿಯಾಗಿದ್ದೇವೆ. ನಿಜಕ್ಕೂ ಪುಣ್ಯವಂತರು ನಾವಲ್ಲ, ನಮ್ಮ ಪೂರ್ವಜರು.!!

ನನ್ನ ಅನುಭವಕ್ಕೆ ಬಂದಿರುವ ವಿಷಯ ನಮ್ಮ ಎರೆಹೊಲದಲ್ಲಿ ಈರುಳ್ಳಿ ಬೆಳೆಯುತ್ತಿದ್ದ ಸಮಯದಲ್ಲಿ ನನ್ನಮ್ಮ ಕೆಲಸ ಮಾಡಿ ಸಂಜೆ ಮನೆಗೆ ಬಂದಾಗ ಅವಳ ಸೀರೆಯೆಲ್ಲಾ ಈರುಳ್ಳಿಯ  ಘಾಟು ವಾಸನೆಯಿಂದ ತುಂಬಿರುತ್ತಿತ್ತು. ಆಗೆಲ್ಲಾ ನನಗೆ ಸಹಿಸಲು ಆಗದಷ್ಟು ಅಸಹ್ಯ ಎನಿಸುತ್ತಿತ್ತು. ಯಾಕಾದರೂ ನನ್ನಮ್ಮನ  ಬಳಿ ಬರಬೇಕೋ ಎಂದು ಆದರೆ ಕೆಲವೇ ವರ್ಷಗಳಲ್ಲಿ ಬಹಳಷ್ಟು ಬದಲಾಗಿಬಿಟ್ಟಿದೆ. ಈಗಂತೂ ಆ ಸೊಗಡೂ ಇಲ್ಲ, ಅಮ್ಮನೂ ಇಲ್ಲ. ಎಲ್ಲವನ್ನೂ ಕಳೆದುಕೊಂಡಿರುವ ಹತಾಶೆಯಲ್ಲಿ ನಾವಿದ್ದೇವೆ .

ನಾವಾದರೂ ಸ್ವಲ್ಪಮಟ್ಟಿಗೆ ನೋಡಿದ ಅಂಥ ದಿನಗಳು ನಮ್ಮ ಈಗಿನ ಮಕ್ಕಳಿಗಿಲ್ಲವಲ್ಲ. ಅವರ ಭವಿಷ್ಯದ ಕಥೆ ಏನು?ಹುಟ್ಟಿದಾರಭ್ಯ ಚಿನ್ನದ ಚಮಚವನ್ನೇ ಬಾಯಲ್ಲಿರಿಸಿ ಕಷ್ಟದ ಅನುಭವವೇ ಆಗಲು ಬಿಡುತ್ತಿಲ್ಲ.ಸುಖದ ಸುಪ್ಪತ್ತಿಗೆಯಲ್ಲಿರಿಸಿ ಸೋಲಿನ ಅನುಭವದ ಪರಿಚಯವಿಲ್ಲ ಈಗಿನ ಮಕ್ಕಳಿಗೆ. ಅಷ್ಟೇ ಅಲ್ಲದೆ ತಾಳ್ಮೆಯೂ ಇಲ್ಲ.ಎಲ್ಲವೂ ಎಣಿಸಿದಂತೆ, ಬಯಸಿದಂತೆ ನಡೆದೇಬಿಡಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.ನಮಗೆ ಅಜ್ಜನ,ಅಪ್ಪನ ಕಾಲದಲ್ಲಿದ್ದ ಜೀವನದ ಪರಿಚಯವಿದೆ, ಅದರ ಅರಿವಿನ ಮೂಲಕ ನಾವು ಸ್ವಲ್ಪ ದೂರ ನಡೆದಿದ್ದೇವೆ.

ಮತ್ತೊಮ್ಮೆ ಅಂಥದ್ದೊಂದು ಅವಧಿಗೆ ನಮ್ಮ ಜೀವನ ಸರಿಯಬೇಕೆನಿಸಿದೆ. ಮಣ್ಣಿನ ಘಮದ ಅನುಭವ ಪಡೆಯಬೇಕು. ಕಷ್ಟದ ಸಮಯದಲ್ಲಿ ಮುನ್ನಡೆಯುವ ಛಾತಿ ಗಳಿಸಬೇಕು. ಹೀಗೆಲ್ಲಾ ಆಸೆಗಳೂ, ಕನಸುಗಳೂ ಆಗಾಗ್ಗೆ ಕಣ್ಮುಂದೆ ಹಾದುಹೋಗುತ್ತವೆ. ಆದರೂ ಬಹಳ ದೂರ ನಡೆದಿದ್ದೇವೆ. ಹಿಂತಿರುಗಿ ನೋಡಿದಾಗ ಏನೋ ಅತೃಪ್ತ ಭಾವವೊಂದು ಹೀಗನ್ನಿಸುತ್ತದೆ “ಕಾಲ ಬದಲಾಯಿತೋ ಜನಗಳು ಬದಲಾದರೋ ಬದುಕಂತೂ ಬಿಗಡಾಯಿಸಿದೆ.ಜೀವನಕ್ಕೆ ಅದರದ್ದೇ ಆದ ಅರ್ಥವಿಲ್ಲ. ಅದಕ್ಕೆ ಅರ್ಥ ಕಲ್ಪಿಸುವ ಕೆಲಸ ನಮ್ಮ ಕೈಯಲ್ಲೇ ಇದೆ‌”.

ಅಸಾಧಾರಣವಾದುದನ್ನು ಸಾಧಿಸುತ್ತೇವೆ ಎಂಬ ಹೆಬ್ಬಯಕೆಯೊಂದಿದ್ದರೆ ಸಾಲದು,ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿವಹಿಸಿ ಪರಿಶ್ರಮದ ಅರಿವನ್ನು, ಸರಳ – ಸುಂದರ ಜೀವನ ಪಾಠವನ್ನು ಅರ್ಥೈಸುವ ಕಾರ್ಯದಲ್ಲಿ ನಮ್ಮ ಪಾಲು ಇದೆ.ನಮ್ಮ ನೆಲದ ಸೊಗಡಿನ ಕಥೆಗೆ ಮರುಜೀವನ ಕೊಡುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.

-ಸರಿತಾ ಮಧು, ನಾಗೇನಹಳ್ಳಿ

16 Responses

  1. Meghana Kanetkar says:

    ನಮ್ಮ ಮುಂದಿನ ಪೀಳಿಗೆಗೆ ಏನಾದರೂ ಕೊಡುಗೆ ನೀಡಬೇಕು ಆ ಜವಾಬ್ದಾರಿ ನಮ್ಮಲ್ಲಿ ಮೂಡಬೇಕು.
    ಎಷ್ಟು ಚಂದದ ಸಂದೇಶ

  2. ನಯನ ಬಜಕೂಡ್ಲು says:

    ನಿಜ, ಅನುಕೂಲ ಹೆಚ್ಚಾದಂತೆ ಖಾಯಿಲೆಗಳೂ ಹೆಚ್ಚಾಗಿವೆ ಇವತ್ತಿನ ದಿನಗಳಲ್ಲಿ. ಕೊನೆಯಲ್ಲಿ ನೀಡಿದ ಸಂದೇಶ ತುಂಬಾ ಚೆನ್ನಾಗಿದೆ.

  3. Dharmanna dhanni says:

    ಅರ್ಥಪೂರ್ಣ ಬರಹ.ಜಿವನದ ನೆನಪುಗಳು ಸ್ಮರಣೆ ಸೊಗಸಾಗಿವೆ.ಧನ್ಯವಾದಗಳು

  4. ಅಪ್ಪ-ಅಮ್ಮ ಅಜ್ಜ-ಅಜ್ಜಿಯ ನೆನಪುಗಳು ಎಷ್ಟೊಂದು ಚಂದ. ಕಾಲ ಹೋದದ್ದೇ ಗೊತ್ತಾಗಲಿಲ್ಲ ಹಿಂದಿನ ನೆನಪುಗಳನ್ನು ನೆನಪು ಮಾಡಿಕೊಟ್ಟದ್ದಕ್ಕೆ ವಂದನೆಗಳು

  5. ASHA nooji says:

    ಮೊದಲೆಲ್ಲ ಹಾಗೆ ಜೀವನ …ಈಗಿನಷ್ಟು ಸುಲಭ ವಿಲ್ಲದಿದ್ದರೂ ..ಸಂಬಂಧಗಳು …ಮತ್ತು .ಬಾಂಧವ್ಯ ಎಲ್ಲವೂ ಎಷ್ಟು ಚೆನ್ನಾಗಿತ್ತು ಈಗಿನ ಮಣ್ಣಿನ ಸೊಗಡು …ಬರೀ ಕೆಲಸ ಕೆಲಸ. ….ಅಷ್ಟೇ ಯಾರಿಗೂ ಯಾರನ್ನೂ ಪರಿಚಯವಿಲ್ಲ‌…..ಚಂದದ ಬರಹ

  6. ಶಂಕರಿ ಶರ್ಮ says:

    ಬೆಳಗಿನಿಂದ ರಾತ್ರಿ ವರೆಗೆ ಮೈಮುರಿದು ದುಡಿಯುತ್ತಿದ್ದ ಹಿರಿಯರ ನೆನಪು ಮಾಡುವಂತಾಯಿತು. ಉತ್ತಮ ಸಂದೇಶ ಹೊತ್ತ ಸೊಗಸಾದ ಲೇಖನ ಆತ್ಮೀಯವಾಗಿದೆ.

  7. Savithri bhat says:

    ಲೇಖನ ಹಲವಾರು ದಶಕಗಳ ಹಿಂದಕ್ಕೆ ಕೊಂಡೊಯ್ದಿತ್ತು. ಸೊಗಸಾದ ನಿರೂಪಣೆ.

  8. ಸರಿತಾ ಮಧು says:

    ಹೌದು.. ಹಿಂದಿನವರು ಅನುಭವಿಸಿದ ,ನಾವು ಕಂಡ ಈಗಿನವರು ಕಾಣದ ಬದುಕು…

  9. ಸೋಮಶೇಖರ್ . ಜಿ says:

    ಸಂದು ಹೋದ ಜೀವನಶೈಲಿಯೊಂದರ ಬಗ್ಗೆ ಹೃದಯಸ್ಪರ್ಶಿ ಬರಹ ನಿಮ್ಮದು..
    ಗತಕ್ಕೆ ಸರಿದ ಚೆಂದದ ನೆನಪುಗಳು,ಭವಿಷ್ಯದ ಬಗೆಗಿನ ನಿಮ್ಮ ಆತಂಕ ಮತ್ತು ಕಾಳಜಿ ಅರ್ಥಪೂರ್ಣವಾದೆ

  10. Anonymous says:

    Aaginaddu uttama jeevana

  11. ಶಶಿಕಲಾ ನಾಗರಾಜ್ says:

    ಚಂದದ ಬರಹ, ಪೂರ್ವಜರಿಗೂ ನವ ಪೀಳಿಗೆಗೂ ಮಧ್ಯದ ಕೊಂಡಿ ನಾವು, ನಮ್ಮದೇ ಜವಾಬ್ದಾರಿ ಯಾಗುತ್ತದೆ ಮಕ್ಕಳಲ್ಲಿ ಶ್ರಮದ ಅರಿವು ಮೂಡಿಸುವುದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: