ಮೋಟಾರ್ ವೈಂಡಿಂಗ್ ಕ್ಷೇತ್ರ ಗಂಡಸರಿಗಷ್ಟೇ ಸೀಮಿತವೇ?

Spread the love
Share Button
ನಯನ ಬಜಕೂಡ್ಲು

ನಯನ ಬಜಕೂಡ್ಲು

ಸಭೆ , ಸಮಾರಂಭ, ಪಾರ್ಟಿ, ಎಲ್ಲೇ ಹೋದರೂ ಮದುವೆಯಾದ ಹೆಣ್ಣು ಮಕ್ಕಳನ್ನು ಎಲ್ಲರೂ ಕೇಳುವ ಒಂದು ಸಾಮಾನ್ಯ ಪ್ರಶ್ನೆ “… ಹೌಸ್ ವೈಫಾ….?”, “ಏನಾದರೂ ಕೆಲಸದಲ್ಲಿ ಇದ್ದೀರಾ…?”, “ಹೊರಗಡೆ ಕೆಲಸಕ್ಕೆ  ಹೋಗ್ತೀರಾ…?”

‘ಗೃಹಿಣಿ’ ಎಂಬ ಪದ ಕೇಳಿದೊಡನೆ, ಅದೆಲ್ಲೋ ಒಂದಷ್ಟು ತಾತ್ಸಾರದ ಭಾವವು ಮಾತು, ಭಾವಗಳಲ್ಲಿ ಇಣುಕುತ್ತವೆ. ವಸ್ತುಸ್ಥಿತಿಯೇನೆಂದರೆ, ಮನೆ ನಿರ್ವಹಣೆ ,ಮನೆಯ ಎಲ್ಲ ಜವಾಬ್ಧಾರಿಗಳನ್ನು ವಹಿಸಿಕೊಳ್ಳುವುದು ಯಾವ ಕೆಲಸಕ್ಕಿಂತಲೂ ಏನೂ ಕಮ್ಮಿ ಇಲ್ಲ. ಅದೊಂದು ಗುರುತರವಾದ ಜವಾಬ್ಧಾರಿ. ಇಲ್ಲಿ ಬಹಳಷ್ಟು ತಾಳ್ಮೆ, ತ್ಯಾಗಗಳನ್ನು ಗೃಹಿಣಿಯ ಕಡೆಯಿಂದ ನಾವು ಕಾಣಬಹುದು.

ಗೃಹಿಣಿಯಾಗಿದ್ದುಕೊಂಡೇ ಬಹಳಷ್ಟು ಜನ ದುಡಿದು ಸ್ವಾಭಿಮಾನದ ಬಾಳನ್ನು ಬಾಳುವವರೂ ಇದ್ದಾರೆ . ಬಹಳಷ್ಟು ಜನ ನನ್ನನ್ನು ನೀವು ಏನು ಮಾಡಿಕೊಂಡು ಇದ್ದೀರಿ ಅಂತ ಕೇಳುವಾಗ ನಾನು ಫ್ಯಾನ್ ವೈಂಡಿಂಗ್ ಮಾಡುತ್ತೇನೆ ಅಂತ ಹೇಳುತಿದ್ದೆ. ಆಗೆಲ್ಲಾ(ಹಲವರು ಈಗಲೂ!) ಇದನ್ನು ಕೇಳಿ ಹೆಣ್ಣು ಮಕ್ಕಳೂ ಈ ಕೆಲಸ ಮಾಡುತ್ತಾರಾ ಎಂದು ಆಶ್ಚರ್ಯಪಟ್ಟಿದ್ದರು!
ಈಗಿನ ಕಾಲದ ಪ್ರತಿಯೊಬ್ಬ ಹೆಣ್ಣೂ ಬಹಳ ಸ್ವಾಭಿಮಾನಿ. ಯಾರಿಗೂ, ಏನೂ, ಯಾವ ರೀತಿಯಲ್ಲೂ ಕಡಿಮೆ ಇಲ್ಲ. ಗಂಡು-ಹೆಣ್ಣು ಎನ್ನುವ ಭೇದ ಇಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ದುಡಿಯುತ್ತಾಳೆ.

ಮೊದಲು ನಾನು ಕೂಡ ದೊಡ್ಡ ತಲೆಬಿಸಿ ಇಲ್ಲದೆ ಮನೆ, ತೋಟ ಅಂತ ಆರಾಮವಾಗಿದ್ದೆ. ಆಗ ಸಾಕಷ್ಟು ಸಮಯವಿರುತ್ತಿತ್ತು ನನ್ನ ಬಳಿ. ನನ್ನ ಯಜಮಾನರಿಗೆ ಎಲೆಕ್ಟ್ರಿಕಲ್ ಅಂಗಡಿ ಇತ್ತು . ಅವರು ವೈರಿಂಗ್ ಮತ್ತು ಮೋಟಾರ್  ವೈಂಡಿಂಗ್ ಕೆಲಸ ಮಾಡುತ್ತಿದ್ದರು. ತುಂಬಾ ಕಷ್ಟವೂ ಅಲ್ಲದ ,ತೀರಾ ಸುಖವೂ ಅಲ್ಲದ ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದೆವು ನಾವು.

ಒಂದು ದಿನ ನನ್ನ ಗಂಡ ಮನೆಗೆ ಫ್ಯಾನ್ಗಳನ್ನು ವೈಂಡ್ ಮಾಡುವ ಯಂತ್ರವನ್ನು ತಂದಿರಿಸಿದರು. ರಾತ್ರಿ ಅಂಗಡಿಯಿಂದ ಮನೆಗೆ ಬಂದ ಮೇಲೆ ಮನೆಯಲ್ಲಿ ವೈಂಡಿಂಗ್ ನ ಕೆಲಸ ಮಾಡುತಿದ್ದರು. ನನಗೂ ಇವರ ಈ ಕೆಲಸದಲ್ಲಿ ಏನೋ ಕುತೂಹಲ. ಅವರು ಕೆಲಸ ಮಾಡುವಾಗ ಸುಮ್ಮನೆ ನಿಂತು ನೋಡುತಿದ್ದೆ. ಹಗಲು ಹೊತ್ತು ಅವರು ಅಂಗಡಿಗೆ ಹೋದಾಗ ಸ್ವಲ್ಪ ಸ್ವಲ್ಪವೇ ಅವರು ಅರ್ಧಕ್ಕೆ ನಿಲ್ಲಿಸಿದ್ದ ಕೆಲಸವನ್ನು ಮಾಡಲು ಶುರು ಮಾಡಿದೆ, ನೋಡಿಕೊಂಡಿದ್ದ ಅನುಭವದ ಮೇಲೆ.

(ಚಿತ್ರ ಕೃಪೆ: ಅಂತರ್ಜಾಲ)

(ಚಿತ್ರ ಕೃಪೆ: ಅಂತರ್ಜಾಲ)

ಹೀಗೆಯೇ ಕಲಿತು ಮಾಡುತ್ತಾ ಮಾಡುತ್ತಾ ಈಗ ನಾನು ಒಬ್ಬಳು ಪರ್ಫೆಕ್ಟ್ ಫ್ಯಾನ್ ವೈಂಡರ್ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ.

ಯಾವ ಕೆಲಸವೂ ಕೀಳಲ್ಲ. ಹಾಗೆಯೇ ಮನಸು ಮಾಡಿದಲ್ಲಿ ಯಾವ ಕೆಲಸವೂ ಕಷ್ಟವಲ್ಲ. ನಮ್ಮಲ್ಲಿ ಆ ಕೆಲಸವನ್ನು ಕಲಿತು ಮಾಡುವ ಛಲ ಇರಬೇಕು ಅಷ್ಟೇ. ವೈಂಡಿಂಗ್ ನ ಕೆಲಸ ಶುರು ಮಾಡಿದ ಮೇಲೆ ನನ್ನಲ್ಲಿ ಏನೋ ಒಂದು ನಿರಾಳ ಭಾವ. ಮೊದಲೆಲ್ಲಾ ಯಾವುದಕ್ಕೂ ಉಪಯೋಗ ಇಲ್ಲದವಳು, ದಂಡಪಿಂಡ , ಯೂಸ್ ಲೆಸ್ ಫೆಲ್ಲೋ ಈ ತರದ ನೆಗೆಟಿವ್ ಭಾವನೆಗಳು ಬಹಳ ಕಾಡುತಿದ್ದವು. ಈ ಕೆಲಸ ಮಾಡಲು ಶುರು ಮಾಡಿದ ಮೇಲೆ ನಾನು ಯಾರಿಗಿಂತಲೂ ಕಮ್ಮಿ ಇಲ್ಲ, ನಾನೂ ಸಂಪಾದನೆ ಮಾಡಿಯೇ ಉಣ್ಣುವವಳು, ಅನ್ನೋ ಸ್ವಾಭಿಮಾನದ ಭಾವ, ಸ್ವಾವಲಂಬನೆಯ ಭಾವ ಜಾಗೃತವಾಯಿತು. ಇದಕ್ಕೆಲ್ಲಾ ಕಾರಣ ಪ್ರತಿ ನನ್ನ ಕಲಿಕೆಯ ಹೆಜ್ಜೆಯಲ್ಲೂ ನನ್ನ ಗಂಡ ನನ್ನಲ್ಲಿ ತುಂಬಿದ ಉತ್ಸಾಹ, ನೀಡಿದ ಪ್ರೊತ್ಸಾಹ.

ಎಲ್ಲಾ ಹೆಣ್ಣು ಮಕ್ಕಳೂ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡು ಸ್ವಾಭಿಮಾನಿಗಳಾಗಬೇಕು . ಕೆಲಸ ಚಿಕ್ಕದಿರಲಿ ದೊಡ್ಡದಿರಲಿ ದುಡಿಯಬೇಕು. ಆಗ ಅವಳ ಮನದಲ್ಲಿ ಇರುವ ಎಲ್ಲಾ ಕೀಳರಿಮೆಯ ಭಾವಗಳೂ ತನ್ನಿಂದ ತಾನೇ ದೂರವಾಗುವುದಲ್ಲದೆ, ಸಂಸಾರ ಸಾಗರದಲ್ಲಿ ಗಂಡನಿಗೆ ಹೆಗಲು ಕೊಡುವ ಧೀರೆ ಅನ್ನಿಸಿಕೊಳ್ಳುತ್ತಾಳೆ. ಈಗಿನ ಕಾಲದಲ್ಲಿ ಇದು ಅನಿವಾರ್ಯ ಕೂಡ, ಇಲ್ಲದಿದ್ದಲ್ಲಿ ಸಂಸಾರ ನಿರ್ವಹಣೆ ಕೂಡ ಬಹಳ ಕಷ್ಟ. ಕೆಲಸ ಯಾವುದೇ ಇರಲಿ ಚಿಕ್ಕದು ದೊಡ್ಡದೆಂದು ಸಂಕುಚಿತ ಭಾವದಿಂದ  ನೋಡದೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಿಧಾನವಾಗಿ ಯಶಸ್ಸು ತನ್ನಿಂದ ತಾನೇ ದೊರೆಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ತೃಪ್ತಿ ದೊರಕುತ್ತದೆ.

– ನಯನ ಬಜಕೂಡ್ಲು.

12 Responses

 1. Anonymous says:

  ಒಳ್ಳೆಯ ಸಂದೇಶ..

 2. ಕಲಾ ಚಿದಾನಂದ says:

  ಒಳ್ಳೆಯ ಸಂದೇಶವಿರುವ ಲೇಖನ

 3. Krishnaprabha says:

  Hats off ನಯನಾ ಅವರಿಗೆ. ಮನೆ ನಿಭಾಯಿಸುವುದು ಹೆಂಡತಿಯ ಕರ್ತವ್ಯ ಅಂತ ರೂಢಿಯಲ್ಲಿದೆ. ಹೆಂಡತಿಯ ಭಾವನೆಗಳಿಗೆ ಬೆಲೆ ಕೊಡುವ ಗಂಡನಿಗೆ ಸರಿಸಮನಾಗಿ ಹೆಗಲು ನೀಡುವಳು ಹೆಣ್ಣು

 4. Harshitha says:

  Nice article madam..you are an inspiration to many…

 5. Shankari Sharma says:

  ನೀವನ್ನುವುದು ನಿಜ. ಆದರೆ ವೃತ್ತಿ ಜೊತೆಗೆ ಮನೆ, ಮಕ್ಕಳನ್ನು ನಿಭಾಯಿಸುವುದು ಎಷ್ಟು ಕಷ್ಟವೆಂದು ಅದರ ಅನುಭವವಿರುವ ನನಗೆ ತಿಳಿದಿದೆ. ಎರಡೂ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಪೂರೈಸಿದರೂ ನಮಗಾಗಿ ಸಮಯವೆಂಬುದೇ ಇರುವುದಿಲ್ಲ. ಹೊರಗೆ ದುಡಿವ ಮಹಿಳೆ ಅಂದುಕೊಳ್ಳುವುದು…ಮನೇಲೇ ಇದ್ರೆ ಎಷ್ಟು ಒಳ್ಳೇದಲ್ವಾ? ಆದರೆ ಮನೆಯಲ್ಲಿರುವವರ ಯೋಚನೆ, ಕೆಲಸದಲ್ಲಿರುವುದೆಷ್ಟು ಖುಷಿ ಅಲ್ವಾ? ಎರಡೂ ಒಳ್ಳೆಯದೇ ಆದರೂ, ನೀವು ಮಾಡುತ್ತಿರುವಂತೆ, ಮನೆಯಲ್ಲೇ ಏನಾದರೂ ಮಾಡುವ ದುಡಿಮೆ ತುಂಬಾ ಹಿತಕರ ಎಂದು ನನ್ನ ಅನಿಸಿಕೆ. ನಿಮ್ಮ ಬರಹ ಎಲ್ಲರಿಗೂ ಸ್ಫೂರ್ತಿಯಾಗಲಿ.

 6. Hema says:

  ನೆಮ್ಮದಿಯ ಬದುಕಿಗೆ ಪೂರಕವಾದ ನೀತಿ ಹಾಗೂ ಜೀವನ ಪ್ರೀತಿಯನ್ನು ಅಳವಡಿಸಿಕೊಂಡ ರೀತಿ ಬಹಳ ಇಷ್ಟವಾಯಿತು ನಯನಾ . ಹೀಗೆ ಧನಾತ್ಮಕವಾಗಿ ಆಲೋಚಿಸಿ ಕೆಲಸ ಮಾಡುವವರನ್ನು ಶ್ರೇಯಸ್ಸು ಹುಡುಕಿಕೊಂಡು ಬರುತ್ತದೆ. ಒಳ್ಳೆಯದಾಗಲಿ, ಸದಾ ನಿಮಗೆ ಯಶಸ್ಸು ಸಿಗಲೆಂದು ಹಾರೈಸುತ್ತೇನೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: