ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 3
ನಂದನ್ ಕಾನನ್, ವಿಶಾಲವಾದ ಪ್ರಾಕೃತಿಕ ಪ್ರಾಣಿ ಸಂಗ್ರಹಾಲಯವಾಗಿದ್ದು ನಾವು ವೀಕ್ಷಿಸಬೇಕಾಗಿದ್ದ ಸ್ಥಳಗಳಲ್ಲೊಂದು. ಆದರೆ, “ಚಂಡಮಾರುತದ ಹೊಡೆತಕ್ಕೆ ಅಲ್ಲಿಯ ಮರ ಗಿಡಗಳೆಲ್ಲಾ ನಾಶವಾಗಿದ್ದು, ಪ್ರಾಣಿಗಳಿಗೂ ತುಂಬಾ ತೊಂದರೆಯಾಗಿರಬಹುದು. ಅಲ್ಲಿ ನೋಡಲು ಏನೂ ಇಲ್ಲ” ಎಂದು ಬಾಲಣ್ಣನವರು ಹೇಳಿದಾಗ ಎಲ್ಲರಿಗೂ ಮತ್ತೊಮ್ಮೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದಂತೂ ನಿಜ.
ನಾವು ವೀಕ್ಷಿಸುತ್ತಿದ್ದ ಪುರಾತನ ಕಾಲದ ಖಂಡಗಿರಿ ಗುಹೆಗಳ ಬಗ್ಗೆ ಅತ್ಯುತ್ತಮ ಮಾಹಿತಿಗಳಿಗಾಗಿ ಒಳ್ಳೆಯ ಗೈಡ್ ಕೂಡಾ ಇದ್ದರು. ಕಳಿಂಗರಾಜರ ಕಾಲದಲ್ಲಿ ರೂಪುಗೊಂಡಿದ್ದ ಸುಮಾರು 752 ಗುಹೆಗಳಲ್ಲಿ 18 ಗುಹೆಗಳು ಮಾತ್ರ ಈಗ ಉಳಿದಿವೆ. ರಾಜರು ತಮ್ಮ ದರ್ಬಾರು ಸಮಯದಲ್ಲಿ ರಾತ್ರಿ ಹೊತ್ತು ಸಾಲು ದೀಪಗಳನ್ನಿರಿಸಿ ನರ್ತನ ವೀಕ್ಷಿಸುತ್ತಿದ್ದ ವೇದಿಕೆಯಲ್ಲಿ ನಾವೂ ವಿರಾಜಮಾನರಾಗಿ ಗ್ರೂಪ್ ಫೋಟೋ ಕ್ಲಿಕ್ಕಿಸಿ ಸಾರ್ಥಕತೆ ಪಡೆದೆವು! 14ನೇ ಗುಹೆಯಾದ ಹಾಥಿ ಗುಫಾದ ಮೇಲ್ಭಾಗದಲ್ಲಿ ಪಾಲಿ ಲಿಪಿಯಲ್ಲಿ ಬರೆದಿದ್ದ ಉಲ್ಲೇಖನಗಳ ಸಹಿತ ಎಲ್ಲಾ ಗುಹೆಗಳೂ ಕಲ್ಲಿನ ಸವೆತದೊಂದಿಗೆ ವಿನಾಶದ ಹಾದಿ ಹಿಡಿದಿದ್ದರೂ, ಅಲ್ಲಲ್ಲಿ ಶಿಥಿಲಗೊಂಡಿದ್ದ ಶಿಲಾಸ್ಥಂಬಗಳ ರಿಪೇರಿಯೊಂದಿಗೆ ಹೊಸ ರೂಪ ಕೊಡುವ ಕೆಲಸಗಳನ್ನು ಸರಕಾರದವರು ಕೈಗೆತ್ತಿಕೊಂಡುದು ಶ್ಲಾಘನೀಯ. ನಮ್ಮಲ್ಲಿ ಕೆಲವರು ಬೃಹದಾಕಾರದ ಶಿಲೆಯನ್ನು ಎತ್ತಿ ಹಿಡಿದು ಭೀಮಕಾಯರಾದರೆ, ಇನ್ನು ಕೆಲವರು ಅದನ್ನು ಕಿರುಬೆರಳಿನಿಂದೆತ್ತಿ ಗೋವರ್ಧನ ಗಿರಿಧಾರಿಯಾದರು!
ನಮ್ಮೂರಲ್ಲಿ ಬಿರು ಬೇಸಿಗೆಯ ಸೆಕೆ, ಬೆವರು ಅನುಭವಿಸುತ್ತಿದ್ದ ನಮಗೆ, ‘ಅದೇನೂ ಲೆಕ್ಕಕ್ಕೇ ಅಲ್ಲ’ ಎಂದು ಅನುಭವಕ್ಕೆ ಬಂದುದು ಅಲ್ಲಿ. ಎಲ್ಲರೂ ಬೆಟ್ಟವನ್ನೇ ಕಡಿದು ಬಂದರೇನೋ ಎಂಬಂತೆ ಬೆವರ ಧಾರೆಯಲ್ಲಿ ತೊಯ್ದು ಕಂಗೆಟ್ಟದ್ದಂತೂ ನಿಜ. ಅದಾಗಲೇ ಸಂಜೆ 5ಗಂಟೆ. ನಮ್ಮೆಲ್ಲರ ಸ್ಥಿತಿ ಕಂಡು ಬಾಲಣ್ಣನವರಿಗೆ ಕರುಣೆಯುಕ್ಕಿ, ಅಲ್ಲೇ ಬೀದಿ ಬದಿಯ ಸೀಯಾಳದ ಗಾಡಿಯ ರಾಶಿಯನ್ನು ತಕ್ಷಣ ಖಾಲಿಯಾಗಿಸಿ ಎಲ್ಲರ ಉದರ, ವದನ ತಣ್ಣಗಾಗಿಸಿದರು. ಹಾಗೆಯೇ ಆಯಾಸ ಕಡಿಮೆಯಾಗುತ್ತಿದ್ದಂತೆ, ಎದುರಿನ ಉದಯಗಿರಿ ಬೆಟ್ಟದಲ್ಲಿ ಹೊಸತಾಗಿ ನಿರ್ಮಾಣಗೊಂಡಿದ್ದ ದೇವಿ ದೇವಸ್ಥಾನವನ್ನು ವೀಕ್ಷಿಸುವ ವಿಚಾರ ಬಂದಾಗ ಹೆಚ್ಚಿನವರೆಲ್ಲಾ ಹಿಂದೆ ಸರಿದರು. 200ಮೆಟ್ಟಿಲು ಹತ್ತಿ ಹೋಗುವುದು ಸ್ವಲ್ಪ ಕಷ್ಟವೆನಿಸಿದರೂ, ಕೇಶವಣ್ಣನವರ ಉತ್ಸಾಹದ ಗಾಳಿ ತಾಗಿ ನಾವು ಕೆಲವರು ಬೆಟ್ಟವೇರತೊಡಗಿದೆವು. ಎದುರಿಗೇ ವಾನರ ಸಂಸಾರ ಬೀಡು ಬಿಟ್ಟಿತ್ತು. ಅವುಗಳಿಂದ ತಪ್ಪಿಸಿಕೊಂಡು ಮುಂದೆ ನೋಡಿದರೆ ಮೆಟ್ಟಲಿನ ಮೇಲೆಯೇ ದೊಡ್ಡ ಮರವೊಂದು ಅಡ್ಡ ಬಿದ್ದಿತ್ತು. ‘ಅದನ್ನು ದಾಟಲು ಕಷ್ಟವಪ್ಪಾ’ ಎಂದು ಯೋಚಿಸುವಷ್ಟರಲ್ಲಿ ಯಾರೋ ಅದನ್ನು ಏರಿ ದಾಟಿದಾಗ ನಾವೂ ಅದಲ ಮೇಲೇರಿ ಹೋಗಿ, 35 ಮೆಟ್ಟಲೇರಿ, ಉದಯಗಿರಿಯಲ್ಲಿದ್ದ ಪುಟ್ಟ ಗುಹೆ ಹಾಗೂ ಅದರೊಳಗೆ ಪೂಜೆಗೊಳ್ಳುತ್ತಿದ್ದ ದೇವಿಗೆ ಅಡ್ಡಬಿದ್ದು ಇನ್ನುಳಿದ ಮೆಟ್ಟಿಲುಗಳನ್ನು ಏರ ಹೊರಟಾಗ, ಅದಾಗಲೇ ಸೂರ್ಯ ತನ್ನ ಬಿಸಿಗೆ ತಾನೇ ಬಸವಳಿದು ಮುಳುಗಲು ಸನ್ನದ್ಧನಾಗಿದ್ದ. ನಾವು ಮತ್ತೂ ಮೇಲೇರುವ ಬಗ್ಗೆ ಸಂದೇಹದಲ್ಲಿದ್ದರೂ ಸಿಕ್ಕಿದ ಅವಕಾಶವನ್ನು ಬಿಡಲು ಮನಸ್ಸಾಗದೆ ಮೇಲೇರಿದೆವು. ಹೊಸತಾಗಿ ಕಟ್ಟಲ್ಪಟ್ಟಿದ್ದ ಆ ಪಾರ್ವತೀ ದೇವಸ್ಥಾನ ಅದಾಗಲೇ ಮುಚ್ಚಿತ್ತು. ಹೊರಗಿನಿಂದಲೇ ಅಡ್ಡ ಬಿದ್ದು ಚಂದದ ಸೂರ್ಯಾಸ್ಥವನ್ನು ವೀಕ್ಷಿಸಿ ಕೆಳಗಿಳಿದಾಗ, ದಾರಿಯಲ್ಲಿ ಬಿದ್ದಿದ್ದ ಮರವನ್ನು ಅಲ್ಲಿಯ ಯುವಕರ ತಂಡ ತೆರವುಗೊಳಿಸುತ್ತಿತ್ತು. ನಾವು ನಮ್ಮ ಗುಂಪನ್ನು ಸೇರಿಕೊಂಡಾಗ ಅದಾಗಲೇ ಕತ್ತಲಾವರಿಸಿತ್ತು. ಎಲ್ಲರನ್ನೂ ಬಸ್ಸಿನೆಡೆಗೆ ಆಟೋ ಮಾಡಿ ಕಳಿಸಿಕೊಟ್ಟರು, ಬಾಲಣ್ಣನವರು. ಮುಂದಿನ ನಮ್ಮ ನಡಿಗೆ ಲಿಂಗರಾಜ ದೇವಸ್ಥಾನದೆಡೆಗೆ…
(ಮುಂದುವರಿಯುವುದು..)
ಹಿಂದಿನ ಪುಟ ಇಲ್ಲಿದೆ: ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 2
-ಶಂಕರಿ ಶರ್ಮ, ಪುತ್ತೂರು.
ಪ್ರವಾಸ ಕಥನ ಚೆನ್ನಾಗಿ ಮೂಡಿಬರುತ್ತಿದೆ ಶಂಕರಿಶರ್ಮ.
ಧನ್ಯವಾದಗಳು ಮೇಡಂ.
ವಾ….ವ್ ಚಂದದ ಪ್ರವಾಸ . ಇತಿಹಾಸಕ್ಕೆ ಸಂಬಂಧಪಟ್ಟ ವಿಚಾರಗಳು ಇಂಟೆರೆಸ್ಟಿಂಗ್ ಆಗಿದೆ .
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.