ಹೋಗಿ ಬಾ ಮಾಗಿ……….
ಚುಮು ಚುಮು ಚಳಿಯ ಹಿತ-ಅಹಿತಗಳು ಇನ್ನೇನು ಮುಗಿಯುತಲಿಹುದು. ಈ ಋತುಗಳೊಂದಿಗೆ ನಮ್ಮ ನಂಟು ಸರ್ವಕಾಲಕ್ಕು ಜೊತೆಯಾಗಿ ಇರುವಂತದ್ದು. ಚಳಿಯೆಂದರೆ ದೂರ ಮಾಡುವ ಮಾತೇ ಇಲ್ಲದ ಬೆಸೆಯುವ ಬೆಸುಗೆ. ಎರಡು ಅಂಗೈಗಳನ್ನು ಬಗಬಗನೆ ಉಜ್ಜಿ ಬಿಸಿಮಾಡಿ ಮುಖಕ್ಕೆ ಆನಿಸಿಕೊಳ್ಳುವ ಆಪ್ತ ಹೊತ್ತು. ಒಟ್ಟಿನಲ್ಲಿ ಒಗ್ಗೂಡಿಸುವ, ಸನಿಹಕ್ಕೆ ತರುವ, ಬಳಿ ಬರುವ, ಹತ್ತಿರದ, ಬೆಚ್ಚಗಿಸುವ, ಮುದುಡಿ ಅರಳಿಸುವ ಭಾವ ಬಂಧನ.ಹಬೆಯಾಡುವ ಕಾಫಿಗೆ ಬಿಸಿಯುಸಿರ ಚೆಲ್ಲಿ ಆಸ್ವಾದಿಸುವ ಪರಿ ಎಂದಿಗೂ ಆರದಿರಲಿ ಎಂಬ ವಿಸ್ಮಯ ಭಾವ. ಈ ಮಾಗಿ ಚಳಿಗೆ ಅದರೊಂದಿಗೆ ಕುಳಿರ್ ಗಾಳಿಗೆ ಫಲಪುಷ್ಪ ತುಂಬಿದ ಮರಗಿಡಗಳು ಬಾಗುವುದನ್ನು ಕಾಣುವುದೇ ಆಹ್ಲಾದಕರವಾದ ಸಂಗತಿ. ಹೇಮಂತ ಋತುವಿನ ಫಲಗಾಳಿಯ ಅನಿರ್ವಚನೀಯ ಆನಂದವನ್ನು ಅನುಭವಿಸಿದವರು ಮಾತ್ರ ಬಲ್ಲರು ಇದರ ಸವಿಯ. ಹೂ ಬಿಸಿಲಿನಲ್ಲಿ ನಿಂತು ಚಳಿಯನ್ನು ದೂರತಳ್ಳಲು ಹಪಹಪಿಸುವ ದೇಹ ಒಳಗೆಲ್ಲೋ ಚಳಿಯ ಹಿತವನ್ನು ಅನುಭವಿಸಿ ಮುದಗೊಳ್ಳುತ್ತದೆ. ಬದುಕಿನೊಳಗಣ ಹಬೆಯಾಡುವ ಈ ಚಳಿ ಲೋಕದ ವಿಸ್ಮಯವೇ ಹೌದು. ಇದು ಚಳಿಯ ಮಹಿಮೆ.
ಚಳಿಗಾಲ ಮಾತ್ರವೇ ಅತಿಯಾಗಿ ಬೀಸುವ ಈ ಫಲಗಾಳಿಯೆಂಬ ಅಲೆಯಲ್ಲಿ ಸಂಗೀತದ ನಾದವಿದೆ.ಆದರೆ ಅದನ್ನು ಅನುಭವಿಸುವ ಅರಿವು ಮತ್ತು ಮನಸ್ಸು ಎರಡೂ ಇರಬೇಕು. ಎಲ್ಲಾ ಕಾಲಗಳಿಂದಲೂ ಸ್ವಲ್ಪ ಅನನ್ಯತೆ ಎಂದೆನಿಸುವ ಈ ಋತುವಿನಲ್ಲಿ ಬೆಳಗ್ಗೆ ಬೇಗನೆ ಏಳಲು ದೇಹ ಮತ್ತು ಮನಸ್ಸು ಸಹಕರಿಸುವುದೇ ಇಲ್ಲ. ಆದರೆ ಈ ಸಹಕರಿಸದ ಮನಸ್ಸು ಮತ್ತು ದೇಹಗಳ ನಡುವೆ ಅನಿವಾರ್ಯತೆಯಿಂದ ಏಳಲೇಬೇಕಾದ ಜೀವಗಳು ಎಂತಹ ಥರಗುಟ್ಟುವ ಚಳಿಯಲ್ಲಿ ಎದ್ದು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು.ಅಮ್ಮಂದಿರಿಗೆ ಬೆಳ್ಳಂಬೆಳಗೆ ಮಕ್ಕಳನ್ನು ಏಳಿಸಿ ಶಾಲೆಗೆ ಹೊರಡಿಸುವುದೇ ಹರಸಾಹಸ.ಅಮ್ಮನಂತು ಚಳಿಯನ್ನು ಗಣನೆಗೆ ತೆಗೆದುಕೊಳ್ಳದೆ ಎಂದಿಗಿಂತಲೂ ತುಸು ಬೇಗನೆ ಏಳವುದೇ ಅನಿವಾರ್ಯ. ಏಕೆಂದರೆ ಮಕ್ಕಳು ಅವರವರ ಕೆಲಸ ಕಾರ್ಯಗಳನ್ನು ಎಂದಿನಂತೆ ಚಳಿಗಾಲದಲ್ಲಿ ನಿಭಾಯಿಸಲು ಕೊಂಚ ಹಿಂದೇಟು ಹಾಕುವರು. ಒಣಹವೆಯ ವಾತಾವರಣದಲ್ಲಿ ಮಕ್ಕಳಿಗೆ ಆರೋಗ್ಯದಲ್ಲು ಏರುಪೇರು ಬರುವುದು ಚಳಿಗಾಲದಲ್ಲಿ ಸಾಮಾನ್ಯ. ಆದರಿಂದ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಅಮ್ಮನ ಹೆಗಲ ಮೇಲೆ ಚಳಿಗಾಲದಲ್ಲಿ ಭಿನ್ನ ಭಿನ್ನ ಕೆಲಸಗಳು ಕುಳಿತುಬಿಡುತ್ತವೆ. ಅಂಗಳದ ಹೂ ಬಿಸಿಲಿನಲ್ಲಿ ಮಕ್ಕಳನ್ನು ನಿಲ್ಲಿಸಲು ಆಗದ ತರಾತುರಿಯಲ್ಲಿ ಶಾಲೆಗೆ ಕಳುಹಿಸಲೇಬೇಕು.
ಸರ್ವ ಋತುಗಳಲ್ಲಿಯು ಹಳ್ಳಿ ಮತ್ತು ಪಟ್ಟಣದ ವಾತಾವರಣದಲ್ಲಿ ತುಸು ಹೆಚ್ಚೆನಿಸುವ ಬದಲಾವಣೆಗಳು ,ವ್ಯತ್ಯಾಸಗಳು ಇದ್ದೇ ಇದೆ . ಯಾವುದೇ ಋತುವಾದರು ಅದರ ಒಳರಿವನ್ನು ಕಾಣುವ ಸೊಬಗು ಹಳ್ಳಿಯಲ್ಲಿಯೇ ಚೆನ್ನ. ಅದನ್ನು ಅನುಭವಿಸುವಂತಹ ವ್ಯವಧಾನವು ನಗರವಾಸಿಗಳ ಧಾವಂತದ ಬದುಕಿನಲ್ಲಿ ಇರುವುದು ಇಲ್ಲ. ಹಳ್ಳಿ ಮನೆಯ ಒಲೆಯ ಮುಂದೆ ಮುಂಜಾನೆ ಹೊತ್ತು ಒಂದು ಕ್ಷಣ ಮನೆಮಂದಿಯರನ್ನೆಲ್ಲಾ ಒಂದುಗೂಡಿಸುತ್ತದೆ ಈ ಚಳಿ. ಹಿಂದಿನ ಕಾಲದಂತೆ ಮೈ ಕೊರೆಯುವ ಚಳಿ ಇತ್ತೀಚೆಗೆಯ ದಿನಗಳಲ್ಲಿ ಇಲ್ಲದಿದ್ದರು ಚಳಿಯ ಸ್ಪರ್ಶವನ್ನು ನಾವೆಲ್ಲರೂ ಅನುಭವಿಸುತ್ತೇವೆ. ದಟ್ಟ ಕಾಡುಗಳುಳ್ಳ ಮಲೆನಾಡಿನಲ್ಲಿ ಮಾಗಿ ಚಳಿಯ ಅನುಭವ ಇನ್ನೂ ತೀವ್ರವಾಗಿರುತ್ತದೆ. ಮಾವು, ಹಲಸು, ಗೇರು ಸೇರಿದಂತೆ ಇನ್ನೂ ಹಲವಾರು ಕಾಡಿನಲ್ಲಿರುವ ಮರಗಳು ಫಲ ಬಿಡುವ ಈ ಹೇಮಂತ ಋತುವೆಂದರೆ ಪ್ರಕೃತಿಗು ಬಲು ಅಚ್ಚು ಮೆಚ್ಚು. ಈ ಸಮಯ ಫಲಪುಷ್ಪಗಳನ್ನು ಹೊತ್ತ ಮರಗಿಡಗಳನ್ನು ನೋಡುವುದೇ ಒಂದು ಸೊಬಗು. ಮನೆಮುಂದಿನ ಚಿಕ್ಕು, ನಕ್ಷತ್ರ ಹಣ್ಣುಗಳನ್ನು ಸವಿಯಲು ಬರುವ ಅಪರೂಪದ ಪುಟ್ಟ ಪುಟ್ಟ ಹಕ್ಕಿಗಳಿಂಚರ ಇನ್ನೂ ಸೊಬಗಿನಂದ. ಫಲಗಾಳಿ ಎಂದೇ ಕರೆಯಲ್ಪಡುವ ಹಿತವಾದ ಗಾಳಿ ಮುಂಜಾನೆ ಬೀಸುತ್ತಿದ್ದರೆ ಮರಗಿಡಗಳು ಬಾಗಿ ನಮ್ಮನ್ನು ಬರಸೆಳೆಯುತ್ತವೆ! ಉಳಿದ ಕಾಲಗಳಿಂದಲೂ ಪ್ರಕೃತಿಯಲ್ಲಿ ಪುಷ್ಪಗಳು ಅರಳಿ ನಿಲ್ಲುವುದು ಚಳಿಗಾಲದಲ್ಲಿ ಜಾಸ್ತಿ. ಆದರಿಂದ ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಚಳಿಗಾಲವೇ ಸುಸಮಯ.ಅದರಲ್ಲೂ ದಟ್ಟ ಚಳಿಗಾಲದ ಕೊಡಗಿನಂತಹ ಪ್ರದೇಶದಲ್ಲಿ ಮಂಜು ಮುಸುಕಿದ ವಾತಾವರಣವನ್ನು ನೋಡಲು ಎರಡು ಕಣ್ಣು ಸಾಲದು. ಜನರು ತಾವೇ ಇಷ್ಟಪಟ್ಟು ಚಳಿಗಾಲದಲ್ಲಿ ಚಾರಣಕ್ಕೆಂದು ಹಿಮಚ್ಛಾದಿತ ಪ್ರದೇಶಗಳಿಗೆ ಪ್ರವಾಸ ಹೋಗುವುದುಂಟು.
ಧವಸ ಧಾನ್ಯಗಳು ,ಆಹಾರ ಬೆಳೆಗಳು, ಹಣ್ಣುಗಳು ಕಟಾವಿಗೆ ಬರುವ ಈ ಕಾಲ ರೈತರಿಗೆ ಹೆಚ್ಚು ಕೆಲಸದ ಸಮಯ. ಚಳಿಯನ್ನು ಲೆಕ್ಕಿಸಲು ಪುರುಸೊತ್ತು ಇಲ್ಲದ ಈ ಋತುವಿನಲ್ಲಿ ಕೆಲಸ ಕಾರ್ಯಗಳು ಬಿಗಡಾಯಿಸುತ್ತವೆ. ಚಳಿಗಾಲಕ್ಕೆಂದೇ ವಿಶೇಷ ವಿನ್ಯಾಸದಲ್ಲಿ ಉಣ್ಣೆ ಬಟ್ಟೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರು ರೈತರಿಗೆ ಇದ್ಯಾವುದರ ಪರಿವೆಯೇ ಇರುವುದಿಲ್ಲ. ಶುಷ್ಕ ವಾತಾವರಣಕ್ಕೆ ತಕ್ಕಂತೆ ದೇಹಕ್ಕೆ ಬೇಕಾದಂತಹ. ಆರೋಗ್ಯಕರ ವಿಷಯವನ್ನು ಅವರೇ ಮಾಡಿಕೊಳ್ಳುತ್ತಾರೆ. ಸರ್ವ ಋತುಗಳಂತೆ ಮಗುಮ್ಮಾಗಿ ಈ ಋತುವು ಕಳೆದು ಹೋದರು ತಂತಿ ಮೀಟಿದ ವೀಣೆಯ ನಾದದಂತೆ ಏನೋ ಒಂದು ಮಿಡಿತದಲೆ ಸ್ಪರ್ಶಿಸಿ ಹೋದಂತೆ ಎಲ್ಲರಿಗೂ ಅನಿಸದೆ ಇರದು.
ಹಾಗು ಹೀಗು ಸದ್ದಿಲ್ಲದೆ ಇನ್ನೇನು ಮಾಗಿ ಮುಗಿಯಲು ಸನ್ನಿಹಿತವಾಗುತ್ತಿದೆ.ಇದೇ ಗಾದಿಯಲ್ಲಿ ಹೊಸವರುಷವು ಸುದ್ದಿ ಮಾಡುತ್ತ ಬಂದಾಯ್ತು. ಕೋಗಿಲೆಯ ಕೂಜನ ಕಿವಿಗೆ ಇಂಪಾಗಿ ಬೀಳುವ ಈ ಸವಿಸಮಯಕ್ಕೆ ಇನ್ನೊಂದು ವರುಷ ಕಾಯಲೇಬೇಕು.ಮುಂದಿನ ವರುಷದ ನಮ್ಮ ಆಲೋಚನೆಗಳು ಮತ್ತು ಗುರಿಗಳು ಸ್ಪಷ್ಟವಾಗಿದ್ದು ಅದರತ್ತ ನಾವು ಹೆಜ್ಜೆ ಇಡಬೇಕು. ಋತುಗಳು ಬರುತ್ತವೆ ಬಂದಂತೆ ಕರಗಿಯು ಹೋಗುತ್ತದೆ. ನಮ್ಮೊಳಗಿನ ಸಂತೋಷವನ್ನು ದ್ವಿಗುಣಗೊಳಿಸುತ್ತಾ ಹೋಗುವುದರಿಂದಲೇ ಈ ಋತುಗಳೂ ಸಾರ್ಥಕತೆಯನ್ನು ಕಂಡುಕೊಳ್ಳಬಹುದು. ಕಾಲ ಕಾಲದ ಋತುಗಳ ಸ್ವಾದ ಅನುಭವಿಸುವ ಮನಸ್ಸು ನಮ್ಮದಾಗಿರಬೇಕು. ತುತ್ತು ಎತ್ತಿಡಬೇಕಾದ ಅನಿವಾರ್ಯತೆ ಇಲ್ಲದ ಈ ಕಾಲ ಸರ್ವಕಾಲಕ್ಕೂ ಸಂಪನ್ನವಾಗಿರಲಿ.
.
– ಸಂಗೀತ ರವಿರಾಜ್ , ಮಡಿಕೇರಿ ತಾಲ್ಲೂಕು,