ನವೋಲ್ಲಾಸದ ನವರಾತ್ರಿ
ಇದು ಈಗಿನ ನವರಾತ್ರಿಯ ನವೋಲ್ಲಾಸ ಅಲ್ಲ. ನಮ್ಮ ಬಾಲ್ಯದ ದಿನಗಳದ್ದು. ಆಗ ಪರೀಕ್ಷೆಗಳು ಮುಗಿದು ರಜೆ ಆರಂಭವಾಗಿರುತ್ತಿತ್ತು. ಮನಸ್ಸು ಹಕ್ಕಿಯಂತೆ ಹಗುರಾಗಿರುತ್ತಿತ್ತು. ರಜಾದ ಮಜಾವನ್ನು ಕೊಲ್ಲುವ ಖಳನಾಯಕರಂಥ ಕೆಲವು ಅಧ್ಯಾಪಕರು ಹೋಮ್ ವರ್ಕ್ ಕೊಡುತ್ತಿದ್ದರೂ ಅದನ್ನು ರಜೆಯ ಕೊನೆಯ ದಿನಕ್ಕೆ ಮೀಸಲಿರಿಸಿ ತತ್ಕಾಲಕ್ಕೆ ಮರೆತು ಬಿಡುತ್ತಿದ್ದೆವು. ಪಿತೃ ಪಕ್ಷದ ಕೊನೆಯ ದಿನದಂದು ದೇವರ ಪೀಠ, ಪ್ರಭಾವಳಿ ಇತ್ಯಾದಿ ಎಲ್ಲ ಪರಿಕರಗಳನ್ನು ಸ್ವಚ್ಛವಾಗಿ ತೊಳೆಯುವುದರೊಂದಿಗೆ ನವರಾತ್ರಿಯ ಸಂಭ್ರಮ ಆರಂಭ. ಸಂಜೆಯಾಗುತ್ತಲೇ ಹುಡುಗರೆಲ್ಲರೂ ಒಂದೊಂದು ಚಿಕ್ಕ ಬುಟ್ಟಿ ಹಿಡಿದುಕೊಂಡು ದೇವಿಗೆ ಪ್ರಿಯವಾದ ಕೇಪುಳದ ಹೂವುಗಳನ್ನು ತರಲು ಗುಡ್ಡೆಗೆ ಹೊರಡುತ್ತಿದ್ದೆವು. ಒಂಭತ್ತು ದಿನವೂ ಹೂಗಳು ಬೇಕಾಗಿದ್ದುದರಿಂದ ಇಂಥಿಂಥ ದಿನ ಇಥಿಂಥ ಕಡೆ ನಮ್ಮ ದಂಡಯಾತ್ರೆ ಎಂದು ಮೊದಲೇ ನಿರ್ಧರಿಸಿಕೊಂಡಿರುತ್ತಿದ್ದೆವು.
ಇದಕ್ಕಾಗಿ ಎಷ್ಟೋ ಬೇಲಿಗಳನ್ನು ದಾಟುವ, ಅಗಳುಗಳನ್ನು ಹಾರುವ ಸಂದರ್ಭವೂ ಬರುತ್ತಿತ್ತು. ಏನಾದರೂ ಎಲ್ಲ ಬುಟ್ಟಿಗಳು ಹೂಗಳಿಂದ ತುಂಬದೆ ಮನೆಗೆ ಹಿಂತಿರುಗುವ ಪ್ರಶ್ನೆಯೇ ಇರಲಿಲ್ಲ. ನವರಾತ್ರಿ ಅಂದರೆ ಕೇಪುಳ ಹಣ್ಣುಗಳ ಕಾಲವಲ್ಲವಾದ್ದರಿಂದ ಹೂಗಳ ಮೇಲಷ್ಟೇ ಗಮನ ಕೇಂದ್ರೀಕರಿಸಲು ನಮಗೆ ಸಾಧ್ಯವಾಗುತ್ತಿತ್ತು. (ಬೇಸಗೆಯಲ್ಲಿ ಹಣ್ಣು ಬಿಡಲು ಆರಂಭವಾದ ಮೇಲೆ ನಾವೆಂದೂ ನೇರವಾಗಿ ಶಾಲೆಗೆ ಹೋದದ್ದೇ ಇಲ್ಲ. ಗುಡ್ಡವಿಡೀ ಸುತ್ತಾಡಿ ಜೇಬು ತುಂಬಾ ಕೇಪುಳ ಹಣ್ಣು ತುಂಬಿದ ಮೇಲಷ್ಟೇ ಶಾಲೆಯ ಹಾದಿ ನಮಗೆ ಕಾಣುತ್ತಿದ್ದುದು.) ಅಷ್ಟೋತ್ತರ ನಾಮಾವಳಿಗೆ ಬೇಕಾದಷ್ಟು ಹೂಗಳನ್ನು ತೆಗೆದಿರಿಸಿಕೊಂಡು ಉಳಿದವುಗಳ ಮಾಲೆ ತಯಾರಿಸುವುದು ಹೆಚ್ಚಾಗಿ ನಮ್ಮ ಹಿರಿಯಣ್ಣ ಹಾಗೂ ಅಕ್ಕನ ಕೆಲಸವಾಗಿರುತ್ತಿತ್ತು. ಒಂಭತ್ತು ದಿನಗಳಿಗೂ ಬೇಕಾಗುವಷ್ಟು ಬಾಳೆ ನಾರನ್ನು ಇದಕ್ಕಾಗಿ ಮೊದಲೇ ಸಿದ್ಧಪಡಿಸಿಟ್ಟುಕೊಳ್ಳಲಾಗುತ್ತಿತ್ತು.. ಪುಷ್ಕಳವಾಗಿ ಅರಳುತ್ತಿದ್ದ ಗೋರಟೆ ಹಾಗೂ ನಾವು ಮೈಸೂರು ಗೋರಟೆ ಎಂದು ಕರೆಯುತ್ತಿದ್ದ ಹಳದಿ ಹೂಗಳ ಮಾಲೆಗಳನ್ನು ತಯಾರಿಸಲೂ ಇದು ಬೇಕಾಗುತ್ತಿತ್ತು. ಇವುಗಳನ್ನು ಆಯಾ ದಿನ ಬೆಳಗ್ಗೆಯೇ ಕಟ್ಟಲಾಗುತ್ತಿತ್ತು.
ನವರಾತ್ರಿಯ ಮೊದಲ ದಿನ ಬೆಳಗ್ಗೆ ತೆನೆ ತರುವ ಸಂಭ್ರಮ. ವಾಡಿಕೆಯ ಕೆಲಸದಾಳೊಬ್ಬ ಭತ್ತದ ತೆನೆ, ಮಾವು, ಹಲಸು ಮತ್ತು ಬಿದಿರಿನ ಎಲೆ ಹಾಗೂ ದಡ್ಡಾಲ್ ಎಂಬ ಮರದ ನಾರುಗಳನ್ನು ತಂದು ಮೊದಲೇ ಒಂದು ಗೆರಸೆಯೊಳಗೆ ಸಿದ್ಧವಾಗಿಟ್ಟಿರುತ್ತಿದ್ದ ಒಂದು ಸೇರು ಅಕ್ಕಿ, ಮುಳ್ಳು ಸೌತೆ, ಸುಲಿಯದ ತೆಂಗಿನಕಾಯಿಗಳ ಜೊತೆ ಇಟ್ಟು “ಪೊಲಿಯೇ ಪೊಲಿ ಪೊಲಿ ಪೊಲಿ ಪೊಲಿಚ್ಚೆ” ಅನ್ನುತ್ತಾ ತುಳಸಿ ಕಟ್ಟೆಯ ಎದುರು ಇರಿಸುತ್ತಿದ್ದ. ಆತನನ್ನು ಸೂಕ್ತ ಗೌರವದೊಂದಿಗೆ ಸನ್ಮಾನಿಸಲಾಗುತ್ತಿತ್ತು. ಮಧ್ಯಾಹ್ನ ತಂದೆಯವರು ಶಂಖ ಜಾಗಟೆಗಳ ಗೌರವದೊಂದಿಗೆ ತುಲಸಿ ಕಟ್ಟೆ ಎದುರಿಂದ ಆ ಗೆರಸೆಯನ್ನು ಒಳಗೆ ತಂದು ದೇವರ ಪಕ್ಕ ಇರಿಸಿ ಆ ಎಲ್ಲ ಸುವಸ್ತುಗಳಿಗೆ ಪೂಜೆ ಸಲ್ಲಿಸಿ ನಂತರ ನವರಾತ್ರಿ ಪೂಜೆ ಆರಂಭಿಸುತ್ತಿದ್ದರು. ಪೂಜೆಯ ಕೊನೆ ಹಂತದಲ್ಲಿ ಸಿಗುವ ಪಂಚಾಮೃತಕ್ಕಾಗಿ ನಾವೆಲ್ಲ ಕಾದಿರುತ್ತಿದ್ದೆವು. ಪೂಜೆ ಮುಗಿದು ಮಧ್ಯಾಹ್ನ ಭೋಜನ ತೀರಿದ ಬಳಿಕ ಮಾವಿನೆಲೆ ಮತ್ತು ಹಲಸಿನೆಲೆಗಳನ್ನು ವಿಶೇಷ ರೀತಿಯಲ್ಲಿ ಮಡಚಿ ಅದರೊಳಗೆ ಬಿದಿರಿನ ಎಲೆ ಮತ್ತು ಭತ್ತದ ತೆನೆ ಇರಿಸಿ ನಾರಿನಿಂದ ಬಿಗಿದು ವಿವಿಧ ಕಡೆ ಕಟ್ಟಲು ಸಿದ್ಧಗೊಳಿಸುವ ಕೆಲಸ. ದೇವರ ಕೋಣೆ, ಕುಡಿಯುವ ನೀರಿನ ಪಾತ್ರೆ, ಮಜ್ಜಿಗೆ ಕಡೆಯುವ ಕಂಬ, ಮನೆಯ ಹೆಬ್ಬಾಗಿಲು, ಪಡಸಾಲೆಯ ಕಂಬ, ಮಗುವಿನ ತೊಟ್ಟಿಲು, ಬಾವಿ, ಹಟ್ಟಿ, ಅಡಕೆ ಮರ, ತೆಂಗಿನ ಮರ ಇತ್ಯಾದಿ ಕಡೆ ತೆನೆ ಕಟ್ಟಲಾಗುತ್ತಿತ್ತು. ಕೊನೆಗೆ ಒಂದಷ್ಟು ತೆನೆಗಳನ್ನು ಒಂದು ಅಡಿಕೆ ಹಾಳೆಯೊಳಗಿರಿಸಿ ಅಕ್ಕಿ ಮುಡಿಯಂತೆ ಕಟ್ಟಿ ಅದನ್ನೊಯ್ದು ಅಡಿಗೆ ಮನೆಯ ಅಟ್ಟದೊಳಗೆ ಧೊಪ್ಪೆಂದು ಸದ್ದು ಬರುವಂತೆ ಒಗೆಯಲಾಗುತ್ತಿತ್ತು. ಹೆಚ್ಚಾಗಿ ಈ ಕೆಲಸ ನನ್ನ ಪಾಲಿನದಾಗಿರುತ್ತಿತ್ತು. ವರ್ಷವಿಡೀ ಇದೇ ರೀತಿ ಅಕ್ಕಿ ಮುಡಿಗಳು ಅಟ್ಟಕ್ಕೆ ಬಂದು ಬೀಳಲಿ ಎಂಬ ಆಶಯವಂತೆ ಈ ಆಚರಣೆಯದು.
ದಿನವೂ ಬೆಳಗ್ಗೆ ಅಣ್ಣ ಸಪ್ತಶತಿ ಪಾರಾಯಣ ಮಾಡುತ್ತಿದ್ದರೆ ರಾತ್ರೆ ತಂದೆಯವರು ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡುತ್ತಿದ್ದರು. ಆ ಪುಸ್ತಕದಲ್ಲಿ ದೇವಿಯು ಚಂಡ ಮುಂಡರನ್ನು ವಧಿಸುವ ಸುಂದರವಾದ ವರ್ಣ ಚಿತ್ರವೊಂದಿತ್ತು. ಅದನ್ನು ತೋರಿಸುವಂತೆ ನಾವು ತಂದೆಯವರನ್ನು ಕೇಳುವುದಿತ್ತು. ಪಾರಾಯಣದ ಒಂದು ಹಂತದಲ್ಲಿ ಚಿಟಿಕೆಯಷ್ಟು ಮಂತ್ರಿಸಿದ ಭಸ್ಮವನ್ನು ನಮ್ಮ ಬಾಯಿಗೆ ಹಾಕುತ್ತಿದ್ದರು. ಸಪ್ತಶತಿಯಲ್ಲಿ ಪದೇ ಪದೇ ಬರುವ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಹಾಗೂ ಲಕ್ಷ್ಮೀನಾರಾಯಣ ಹೃದಯದ ಫಟು ಕುರು ಕುರು ಸ್ವಾಹಾ ಎಂಬ ಸಾಲುಗಳು ನಮಗೆಲ್ಲರಿಗೂ ಕಂಠಪಾಠವಾಗಿದ್ದವು!
ಆಗಿನ್ನೂ ನಮ್ಮ ಹಳ್ಳಿಗೆ ವಿದ್ಯುತ್ತು ಬಂದಿರಲಿಲ್ಲ. ಆದರೂ 50 ವೋಲ್ಟಿನ ಬ್ಯಾಟರಿಯಿಂದ ನಡೆಯುವ ರೇಡಿಯೊ ಒಂದು ನಮ್ಮಲ್ಲಿತ್ತು. ನಮ್ಮ ಒಬ್ಬ ಅಣ್ಣನಿಗೆ ಕಸದಿಂದ ರಸ ತಯಾರಿಸುವ ವಿದ್ಯೆ ಚೆನ್ನಾಗಿ ಗೊತ್ತಿತ್ತು. ರೇಡಿಯೋಗೆ ಉಪಯೋಗಿಸಲಾಗದಂಥ ಹಳೆಯ ನಿರುಪಯೋಗಿ ಬ್ಯಾಟರಿಯೊಂದನ್ನು ಒಡೆದು ಅದರೊಳಗೆ ಟಾರ್ಚಿನಲ್ಲಿ ಉಪಯೋಗಿಸುವಂಥ ಚಿಕ್ಕ ಚಿಕ್ಕ ಸೆಲ್ಲುಗಳಂಥದೇ ರಚನೆ ಇರುವುದನ್ನು ಅವರು ಕಂಡುಕೊಂಡಿದ್ದರು. ಆ ಸೆಲ್ಲುಗಳನ್ನು ಎರಡು ವಯರುಗಳ ಮೂಲಕ ಬಲ್ಬಿಗೆ ಜೋಡಿಸಿದಾಗ ಅದನ್ನು ಉರಿಸುವಷ್ಟು ವಿದ್ಯುತ್ತು ಅವುಗಳಲ್ಲಿ ಉಳಿದಿರುವುದೂ ಅವರಿಗೆ ಗೊತ್ತಾಗಿತ್ತು. ಇದನ್ನು ದೇವರ ಮಂಟಪದ ಅಲಂಕಾರಕ್ಕೆ ಯಾಕೆ ಉಪಯೋಗಿಸಬಾರದು ಎಂಬ ಯೋಚನೆ ಅವರಿಗೆ ಬಂತು. ಏನನ್ನಾದರೂ ಯೋಚಿಸಿದರೆ ಅದನ್ನು ಮಾಡಿಯೇ ತೀರುವುದು ಅವರ ಜಾಯಮಾನ. ಅಷ್ಟಿಷ್ಟು ಬಡಗಿ ಕೆಲಸವೂ ಅವರಿಗೆ ಬರುತ್ತಿತ್ತು. ಮರದ ತುಂಡೊಂದನ್ನು ಕೆತ್ತಿ ಒಂದು ಬ್ಯಾಟರಿ ಬಾಕ್ಸು ಮತ್ತು ಗೆರಟೆ ಹಾಗೂ ಒಂದು ಹಳೆಯ ಸ್ಪ್ರಿಂಗ್ ಉಪಯೋಗಿಸಿ ಒಂದು ಟಾಗಲ್ ಸ್ವಿಚ್ಚು ತಯಾರಿಸಿ ನವರಾತ್ರಿ ಪೂಜೆಯ ಹೊತ್ತಲ್ಲಿ ದೇವರ ಮೇಲೆ ಬಲ್ಬಿನ ಬೆಳಕು ಬೀಳುವಂತೆ ಮಾಡಿಯೇ ಬಿಟ್ಟಿದ್ದರು.
ನವರಾತ್ರಿಯಿಂದ ಆರಂಭವಾಗುವ ಆಶ್ವೀಜ ಮಾಸದ ಭಾನುವಾರಗಳಂದು ಬೆಳಗ್ಗೆ ತಣ್ಣೀರಲ್ಲಿ ಸ್ನಾನ ಮಾಡುವ ಸಂಪ್ರದಾಯ ನಮ್ಮಲ್ಲಿತ್ತು. ಹಿರಿಯರೆಲ್ಲರೂ ಬಾವಿಯಿಂದ ನೀರೆಳೆದು ಸ್ನಾನ ಮುಗಿಸಿದರೂ ನಾವು ತೋಟದ ಪಕ್ಕದಲ್ಲಿ ಹರಿಯುವ ಮೃತ್ಯುಂಜಯಾ ನದಿಗೆ ಹೋಗುತ್ತಿದ್ದೆವು. ಅಷ್ಟರಲ್ಲಿ ಮಳೆ ಕಡಿಮೆಯಾಗಿ ನದಿ ನೀರು ತಿಳಿಯಾಗಿರುತ್ತಿತ್ತು. ಆ ಚುಮು ಚುಮು ಚಳಿಯಲ್ಲಿ ಮೊದಲ ಮುಳುಗು ಹಾಕುವುದು ಕಠಿಣವೆನಿಸಿದರೂ ನಂತರ ಮೇಲೆ ಬರುವ ಮನಸ್ಸೇ ಬರುತ್ತಿರಲಿಲ್ಲ. ಸ್ನಾನ ಮುಗಿಸಿದ ಮೇಲೆ ಕೆಂಪು ಕಲ್ಲೊಂದನ್ನು ಅರೆದು ಗಂಧದಂತೆ ಹಣೆಗೆ ಹಚ್ಚಿಕೊಳ್ಳುತ್ತಿದ್ದೆವು. ಆ ದಿನ ಅಕ್ಕಿಯ ತಿಂಡಿ ತಿನ್ನಬಾರದೆಂಬ ನಿಯಮವಿದ್ದುದರಿಂದ ಬೆಳಗ್ಗಿನ ಫಲಾಹಾರಕ್ಕೆ ಅರಳಿನ ಮೊಗ್ಗುಗಳ ಉಸ್ಲಿ. ಭತ್ತ ಹುರಿದು ಅರಳು ತಯಾರಿಸುವಾಗ ಪೂರ್ತಿ ಸಿಡಿಯದೆ ಉಳಿದ ಚೂರುಗಳೇ ಈ ಅರಳಿನ ಮೊಗ್ಗುಗಳು. ಅಕ್ಕಿಯದೇ ಇನ್ನೊಂದು ರೂಪವಾದರೂ ಉರಿಯಲ್ಲಿ ಸುಟ್ಟು ಶುದ್ಧವಾದದ್ದು ಎಂಬ ನಂಬಿಕೆ. ಮಧ್ಯಾಹ್ನದ ನೈವೇದ್ಯಕ್ಕೆ ದಿನವೂ ಏನಾದರೂ ಸಿಹಿ ಇರುತ್ತಿತ್ತು. ಮೊದಲ ದಿನ ಹೆಚ್ಚಾಗಿ ಹಾಲುಬಾಯಿ, ನಂತರದ ದಿನಗಳಲ್ಲಿ ಮುಳ್ಳು ಸೌತೆಯ ಕಡುಬು, ಅದರದ್ದೇ ಗುಳಿ ಅಪ್ಪ, ಅಂಬೋಡೆ ಪಾಯಸ, ಅಕ್ಕಿಯ ಮೋದಕ, ಅತಿರಸ, ಎರಿಯಪ್ಪ, ನೀರುದೋಸೆ ಕಾಯಿ ಹೂರಣ, ಒತ್ತುಶ್ಯಾವಿಗೆ ರಸಾಯನ, ಗೋಧಿಯ ಉಂಡೆ, ಕೇಸರಿ ಭಾತ್, ಪಂಚಕಜ್ಜಾಯದ ಉಂಡೆ ಇತ್ಯಾದಿ.
ಈ ಮೊದಲೇ ಹೇಳಿದಂತೆ ದಿನವೂ ಕೇಪುಳದ ಹೂವುಗಳನ್ನು ತರಲು ವಿವಿಧ ಜಾಗಗಳಿಗೆ ಹೋಗುವಾಗ ಕೆಲವೊಮ್ಮೆ ಕಾವಟೆ ಎಂಬ ಮೃದುವಾದ ಮರದ ದೊಡ್ಡ ದೊಡ್ಡ ಮುಳ್ಳುಗಳನ್ನು ಎಬ್ಬಿಸಿ ತಂದು, ಅದರ ತಳವನ್ನು ಕಲ್ಲಿಗೆ ಉಜ್ಜಿ ನಯವಾಗಿಸಿ, ಕೊಡೆ ಕಡ್ಡಿಯಿಂದ ಮಾಡಿದ ಚಾಣದಿಂದ ಕೆತ್ತಿ ನಮ್ಮ ಹೆಸರಿನ ಮುದ್ರೆ ತಯಾರಿಸುವುದೂ ಇತ್ತು. ಅದಕ್ಕೆ ಸಿಗರೇಟು ಡಬ್ಬಿಯ ಮುಚ್ಚಳದಲ್ಲಿ ಚಿಂದಿ ಬಟ್ಟೆಯೊಂದನ್ನಿರಿಸಿ ಹಳೆ ಬ್ಯಾಟರಿಯೊಳಗಿನ ಮಸಿಯನ್ನು ನೀರಲ್ಲಿ ಕಲಸಿ ಹಚ್ಚಿದ ಇಂಕ್ ಪ್ಯಾಡ್.
ಧರ್ಮಸ್ಥಳದಲ್ಲಿ ಮಹಾನವಮಿಯಯಂದು ಕುಮಾರಿಕಾ ಸುವಾಸಿನಿಯರಿಗೆ ಸೀರೆ ವಿತರಿಸುವ ಸಂಪ್ರದಾಯವಿದೆ. ನಮ್ಮ ಮನೆಯ ಹೆಣ್ಣುಮಕ್ಕಳು ಯಾವತ್ತೂ ಈ ಅವಕಾಶ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಜೊತೆಯಾಗಿ ಹೋಗುವ ಅಣ್ಣಂದಿರೊಡನೆ ನಾನೂ ಸೇರಿಕೊಳ್ಳುವುದಿತ್ತು. ಸುಮಾರು 7 ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸುವುದಾಗಿತ್ತು. ದಾರಿಯುದ್ದಕ್ಕೂ ಗುಡ್ದ ಹಾಗೂ ಗದ್ದೆಗಳ ಸರಣಿ. ಗದ್ದೆಯ ಅಗಲ ಕಿರಿದಾದ ಬದುಗಳ ಮೇಲೆ ನಡೆಯುವಾಗ ಆಚೀಚೆ ನೋಡುತ್ತಾ ಪ್ರಕೃತಿ ಸೌಂದರ್ಯ ಸವಿಯಲು ಹೊರಟರೆ ಕೆಸರಿನೊಳಗೆ ಬೀಳುವುದೇ ಸೈ. ಒಂದು ಕಡೆಯಂತೂ ಕುತ್ತಿಗೆವರೆಗೆ ಹೂತು ಹೋಗುವಷ್ಟು ಕೆಸರು. ಒಂದಿಬ್ಬರು ಅಜಾಕರೂಕತೆಯಿಂದ ಹಾಗೆ ಹೂತು ಹೋಗಿ ಅವರನ್ನು ಮೇಲೆಳೆಯಲು ಹರಸಾಹಸ ಪಡಬೇಕಾಗಿ ಬಂದಿತ್ತಂತೆ. ಧರ್ಮಸ್ಥಳ ತಲುಪಿದೊಡನೆ ಹೆಣ್ಣು ಮಕ್ಕಳು ದೇವಸ್ಥಾನದ ಒಳಗಡೆ ಹೋದರೆ ನಾವು ಅಂಗಡಿ ಬೀದಿಗಳಲ್ಲಿ ಒಂದಷ್ಟು ಹೊತ್ತು ಠಳಾಯಿಸಿ ಕಾಲು ಸೋಲತೊಡಗಿದೊಡನೆ ವಸಂತ ಮಹಲಿನಲ್ಲಿ ಬೆಳಗಿನ ವರೆಗೂ ನಡೆಯುವ ನಾಟಕಕ್ಕೋ ಸಂಗೀತ ಕಾರ್ಯಕ್ರಮಕ್ಕೋ ಪ್ರೇಕ್ಷಕರಾಗುತ್ತಿದ್ದೆವು. ಬೆಳಗಾದೊಡನೆ ಹೆಣ್ಣು ಮಕ್ಕಳು ಸೀರೆ ಸಿಕ್ಕಿದ ಖುಶಿಯೊಂದಿಗೆ, ನಾವು ದಣಿದ ಕಾಲುಗಳೊಂದಿಗೆ ಅವೇ ಗುಡ್ಡ ಗದ್ದೆಗಳನ್ನು ದಾಟಿ ಮನೆ ಸೇರುತ್ತಿದ್ದೆವು. ನಿದ್ದೆಗಣ್ಣಾಗಿರುತ್ತಿದ್ದುದರಿಂದ ಗದ್ದೆ ಬದುಗಳಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತಿತ್ತು.
ನಮ್ಮ ಹಳ್ಳಿ ಕಡೆ ನವರಾತ್ರಿ ವೇಷಗಳು ಬರುತ್ತಿದ್ದುದು ಕಮ್ಮಿ. ಕೆಲವೊಮ್ಮೆ ಮುಖಕ್ಕೆ ಮಸಿ ಮೆತ್ತಿ ಕೊಳಲು ನುಡಿಸುವ ಆದಿವಾಸಿ, ಸಿದ್ ಔರ್ ಸಿದ್ ಅನ್ನುತ್ತಾ ಬರುವ ಅನಾರ್ಕಲಿ, ಕರಡಿ ಅಥವಾ ಸಿಂಹದ ವೇಷ ಇತ್ಯಾದಿ ಬರುತ್ತಿದ್ದವು. ಹುಲಿ ವೇಷವಂತೂ ಇಲ್ಲವೆನ್ನುವಷ್ಟು ಕಮ್ಮಿ. ಇವುಗಳನ್ನು ನೋಡಿ ನಮಗೂ ಉಮೇದು ಬಂದು ಅಡಿಕೆ ಹಾಳೆಯಿಂದ ಕರಡಿ ಮುಖ ತಯಾರಿಸಿ ಅದಕ್ಕೆ ಕಪ್ಪು ಬಳಿದು ಬಾಯಲ್ಲಿ ಕೆಂಪು ರಬ್ಬರ್ ಹಾಳೆಯ ನಾಲಗೆ ಸಿಕ್ಕಿಸಿ ಅಂಗಳದ ತೊಂಡೆ ಚಪ್ಪರಕ್ಕೆ ತೂಗು ಹಾಕಿ ಸಂಭ್ರಮಿಸುವುದಿತ್ತು.
ಈ ರೀತಿ ನವರಾತ್ರಿಯ ನವೋಲ್ಲಾಸ ಮುಗಿದ ಮೇಲೆ ಉಳಿಸಿಟ್ಟಿದ್ದ ರಜೆಯ ಹೋಮ್ ವರ್ಕ್ ಇತ್ಯಾದಿ ಮುಗಿಸಿ ಮುಂದೆ ಬರುವ ದೀಪಾವಳಿ ಸಂಭ್ರಮದ ಸವಿಗನಸು ಕಾಣುತ್ತಾ ಶಾಲೆಯ ಕಡೆ ಭಾರವಾದ ಹೆಜ್ಜೆ ಹಾಕುತ್ತಿದ್ದೆವು.
Nice
ಧನ್ಯವಾದ
‘ನವೋಲ್ಲಾಸದ ನವರಾತ್ರಿ’ ನಮ್ಮ ಬಾಲ್ಯದಲ್ಲಿ ಹಳ್ಳಿಗಳ ನಮ್ಮ ಮನೆಗಳಲ್ಲಿ ಆಚರಿಸುತ್ತಿದ್ದ ನವರಾತ್ರಿ ಆಚರಣೆಯ ಮರೆಯಲಾಗದ ಸುಂದರ ಚಿತ್ರಣ.
ಧನ್ಯವಾದ.
ಚಿಕ್ಕಂದಿನಲ್ಲಿನ ನವರಾತ್ರಿಯ ನವೋಲ್ಲಾಸ ಅನುಭವ ಕಥನ ಚೆನ್ನಾಗಿದೆ ಸರ್…