ಪುಸ್ತಕಗಳೇ ನಮ್ಮ ಹಿತೈಷಿಗಳು
ಗ್ರಂಥಾಲಯವು ಶ್ರೀಸಾಮಾನ್ಯನ ವಿಶ್ವವಿದ್ಯಾನಿಲಯ, ಜ್ಞಾನದಾಹಿಗಳಿಗೆ ಗ್ರಂಥಗಳೇ ನಿಜವಾದ ಹಿತೈಷಿಗಳು. ಒಂದು ಸದ್ಗ್ರಂಥವನ್ನು ಕೈಗೆತ್ತಿಕೊಂಡು ಓದಿದಾಗ ಮನಸ್ಸಿಗಾಗುವ ಆನಂದ ಅವರ್ಣನೀಯ. ಶಿಕ್ಷಣವೆಂಬುದು ನಾಲ್ಕು ಗೋಡೆಗಳ ನಡುವೆ ಶಾಲಾ ಕಾಲೇಜುಗಳ ಕೊಠಡಿಯಲ್ಲೇ ಆಗಬೇಕೆಂದಿಲ್ಲ. ಬದಲಾಗಿ ಉತ್ತಮ ಪುಸ್ತಕಗಳನ್ನು ಸದಾ ಅಧ್ಯಯನ ಮಾಡುವ ಮೂಲಕ ಜ್ಞಾನವನ್ನು ಸಾಕಷ್ಟು ವೃದ್ಧಿಸಿಕೊಳ್ಳಬಹುದು.
ಖ್ಯಾತ ನ್ಯಾಯತಜ್ಞ, ಅರ್ಥಶಾಸ್ತ್ರಜ್ಞರೋರ್ವರು ಹೇಳಿದ ಮಾತೊಂದು ಹೀಗಿದೆ: ‘ರಾಷ್ಟ್ರದ ಏಳಿಗೆಗೆ ಸಾಕ್ಷರತೆಯೊಂದೇ ಸಾಲದು. ಓದಲು ಸಮರ್ಥರಾದ ಜನರಿರುವುದು ಒಳ್ಳೆಯದು, ಅದರಲ್ಲೂ ಯಾವುದು ಯೋಗ್ಯ, ಯಾವುದು ಯೋಗ್ಯವಲ್ಲ ಎಂದು ತಿಳಿಯಬಲ್ಲ ಜನರಿರುವುದು ಮತ್ತಷ್ಟು ಉತ್ತಮ’ ಎಂದು. ಈ ಮಾತು ಬಹಳ ಅರ್ಥಪೂರ್ಣವಾಗಿದೆ.
ಓದಿನಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ನಿರ್ಧರಿಸುವುದು ಅಗತ್ಯ. ಏಕೆಂದರೆ ಉತ್ತಮ ಪುಸ್ತಕ ವ್ಯಕ್ತಿಯ ಮೇಲೆ ಎಷ್ಟು ಸತ್ಪರಿಣಾಮ ಬೀರಬಲ್ಲದೋ, ಒಂದು ಕೆಟ್ಟ ಸಾಹಿತ್ಯವುಳ್ಳ ಪುಸ್ತಕ ವ್ಯಕ್ತಿಯ ಮೇಲೆ ಅಷ್ಟೇ ದುಷ್ಪರಿಣಾಮವನ್ನೂ ಬೀರಬಲ್ಲದು.
ಪುಸ್ತಕಗಳ ಆಯ್ಕೆ :-
ಆಯ್ಕೆ ಮಾಡುವವರಿಗೆ ಉತ್ತಮ ಪುಸ್ತಕಗಳಿಗೇನೂ ಕೊರತೆಯಿಲ್ಲ. ಇದು ಅವರವರು ರೂಢಿಸಿಕೊಂಡ ಆಸಕ್ತಿಗೆ ಅನುಗುಣವಾಗಿರುತ್ತದೆ. ಗ್ರಂಥಾಲಯ ಪ್ರವೇಶಿಸಿದ ಓದುಗ ಓರಣವಾಗಿಟ್ಟ ಪುಸ್ತಕಗಳತ್ತ ಕೈಯಾಡಿಸುತ್ತಾನೆ. ಅಲ್ಲಿ ಸಾಮಾಜಿಕ ಕಾದಂಬರಿಗಳಿಂದ ಹಿಡಿದು ಕಲೆ, ವಿಜ್ಞಾನ, ಧಾರ್ಮಿಕ, ನೈತಿಕ ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳನ್ನೊಳಗೊಂಡ ಗ್ರಂಥಗಳಿರುತ್ತವೆ. ಕಾದಂಬರಿಗಳತ್ತಲೇ ಹೆಚ್ಚಾಗಿ ಕೈ ಮುಂದೆ ಹೋಗುವ ಇಂದಿನ ಜನರಲ್ಲಿ ಕೇವಲ ಸಾಮಾಜಿಕ ಜೀವನದ ನೋವು ನಲಿವುಗಳನ್ನೊಳಗೊಂಡಂತಹ ಪುಸ್ತಕಗಳೇ ಆಕರ್ಷಿಸುತ್ತಿರುವುದನ್ನು ಕಾಣಬಹುದು.
ಗ್ರಂಥಾಲಯದಲ್ಲಿ ಎಲ್ಲಾ ಬಗೆಯ ಪುಸ್ತಕಗಳು ಒಳಗೊಂಡಿದ್ದರೂ ಕಾದಂಬರಿಗಳಿರುವಷ್ಟು ಬೇಡಿಕೆ ಉಳಿದ ಪುಸ್ತಕಗಳಿಗಿಲ್ಲ. ನಿಜವಾದ ಜ್ಞಾನ ಹೆಚ್ಚಿಸುವ ಚಿಂತನ ಲೇಖನ, ಬರಹಗಳನ್ನೊಳಗೊಂಡ ಪುಸ್ತಕಗಳು ಧೂಳು ತುಂಬಿಕೊಂಡೇ ಬಿದ್ದಿರುವುದನ್ನು ಕಾಣುತ್ತೇವೆ! ಕೆಲವು ಪುಸ್ತಕಗಳು ಓದಿದ ನಂತರ ಓದುಗನ ಚಿಂತೆಯನ್ನು ಹೆಚ್ಚಿಸಿದರೆ, ಇನ್ನು ಕೆಲವು ಚಿಂತನೆಗೆ ಒಳಪಡಿಸುತ್ತದೆ. ಒಳ್ಳೆಯದನ್ನು ಆಯ್ಕೆ ಮಾಡುವ ಓದುಗ ಚಿಂತನೆಗೆ ಎಡೆ ಮಾಡಿಕೊಡುವ ಪುಸ್ತಕಗಳನ್ನೇ ಆಯ್ಕೆ ಮಾಡುತ್ತಾನೆಯೇ ಹೊರತು ‘ಚಿಂತೆ’ಗೆ ಅವಕಾಶವನ್ನೀಯುವಂತಹುದನ್ನಲ್ಲ.
‘ಚಿಂತನೆ’ಗೆ ಒಳಪಡಿಸುವ ಪುಸ್ತಕಗಳನ್ನು ಓದುವ ಆಸಕ್ತಿ ಎಷ್ಟು ಮಂದಿಗಿದೆ ಎಂದು ಯೋಚಿಸಿದರೆ ಬಹಳ ವಿರಳ ಎನ್ನಬಹುದು. ಚಿಂತನಾರ್ಹ ಲೇಖನಗಳು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಸತತವಾಗಿ ಚಿಂತನಾರ್ಹ ಬರಹಗಳನ್ನು ಓದುವ ಹಾಗೂ ಆ ಲೇಖನಗಳನ್ನು ಮನನ ಮಾಡಿ ಅದಕ್ಕೆ ವಿಮರ್ಶೆ ಬರೆಯುವ ಮೂಲಕ ಸಾಹಿತ್ಯ ಬರವಣಿಗೆಯ ಬೆಳವಣಿಗೆಗೆ ಯತ್ನಿಸುವವರು ಕಡಿಮೆ ಎಂದರೆ ತಪ್ಪಲ್ಲ. ಇದನ್ನೆಲ್ಲ ಗಮನಿಸಿದಾಗ ಇಂದಿನ ಶಿಕ್ಷಣದಲ್ಲೇ ಓದುವ ಬಗ್ಗೆ ‘ಯಾವುದನ್ನು ಓದಬೇಕು, ಯಾವುದು ಬೇಡ’ ಎಂಬ ಕುರಿತು ಪಠ್ಯ ವಿಷಯವನ್ನು ತರುವುದೂ ಸೂಕ್ತವೆನಿಸುತ್ತದೆ. ಶಾಲೆಗಳಲ್ಲಿ ‘ನೈತಿಕ ಶಿಕ್ಷಣ’ ವಿಷಯವು ಪಠ್ಯದಲ್ಲಿದ್ದರೂ ಅದರ ಅನುಷ್ಠಾನ ಪ್ರಶ್ನಿಸುವಂತಿದೆ.
ಇಂದು ‘ಆಧ್ಯಾತ್ಮಿಕ’ ಪುಸ್ತಕಗಳಿಗಿಂತಲೂ ಯುವ ಜನತೆ ‘ಅಶ್ಲೀಲ ಸಾಹಿತ್ಯ’ ಪುಸ್ತಕಗಳತ್ತಲೇ ಒಲವು ತೋರುತ್ತಿರುವುದು ಬೇಸರದ ಸಂಗತಿ. ಅಂತಹ ಪುಸ್ತಕಗಳು ಯುವ ಜನಾಂಗವನ್ನು ತಪ್ಪು ದಾರಿಯತ್ತ ಕೊಂಡೊಯ್ಯುತ್ತಿರುವುದು ಸತ್ಯ. ಆದ್ದರಿಂದ ನಮ್ಮ ಮನಸ್ಸು ಯಾವುದರತ್ತ ಸಾಗುವುದು ಒಳಿತು ಹಾಗೂ ಯಾವುದು ಕೆಡುಕು ಎಂಬ ಚಿಂತನೆ ಮೂಡಿದಾಗ ಮಾತ್ರ ಉತ್ತಮ ಪುಸ್ತಕಗಳತ್ತ ಗಮನ ಹರಿಸಲು ಸಾಧ್ಯ. ಆದರೆ ಅದನ್ನು ಮನದಟ್ಟು ಮಾಡುವುದು ಅಗತ್ಯ.
ಒಂದು ಒಳ್ಳೆಯ ಪುಸ್ತಕವು ಕಷ್ಟಕಾಲದಲ್ಲಿ ಸ್ನೇಹಿತನಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ಹೇಳುತ್ತದೆ. ಏಕಾಕಿತನದ ಭಾರವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದು ಎಂತಹ ಆಳವಾದ ದು:ಖವನ್ನೂ ಮರೆಯಲು ಸಹಾಯ ಮಾಡುತ್ತದೆ. ಈ ರೀತಿಯಲ್ಲಿ ಪುಸ್ತಕಗಳೇ ನಮ್ಮ ಹಿತೈಷಿಗಳು ಎನ್ನಬಹುದು.
– ಎನ್. ಸ್ವಾತಿ, ಉಡುಪಿ
ಉತ್ತಮ ಬರಹ….
ನಿಜ.ಉತ್ತಮ ಚಿಂತನೆ ಮತ್ತು ನಿರೂಪಣೆ . ಆದರೆ ಈಗೀಗ ಜನರಲ್ಲಿ ಪುಸ್ತಕವನ್ನು ಓದುವ ಹವ್ಯಾಸ ಕ್ಷೀಣಿಸುತ್ತಿದೆ..