ಹಲಸಿನಕಾಯಿಯ ಉಪ್ಪುಸೊಳೆ….ವೈವಿಧ್ಯತೆ..
ಹಲಸಿನಕಾಯಿಗಳು ಧಾರಾಳವಾಗಿ ಬೆಳೆಯುವ ಕರಾವಳಿ-ಮಲೆನಾಡಿನ ಹಳ್ಳಿಮನೆಗಳಲ್ಲಿ ಸಾಮಾನ್ಯವಾಗಿ ಡಿಸೆಂಬರ್ ನಲ್ಲಿ ಎಳೆಗುಜ್ಜೆಗಳು ಸಿಗುತ್ತವೆ. ಎಳೆಗುಜ್ಜೆಯ ಪಲ್ಯದಿಂದ ಆರಂಭವಾದ ಹಲಸಿನ ಅಡುಗೆಗಳ ವೈವಿಧ್ಯತೆ ಜುಲೈ ವರೆಗೂ ಇರುತ್ತದೆ. ಖಾರದ ಅಡುಗೆಗಳಾಗಿ ಹಲಸಿನಕಾಯಿಯ ಪಲ್ಯ, ಸಾಂಬಾರು, ಜೀರಿಗೆಬೆಂದಿ, ಹಪ್ಪಳ, ಚಿಪ್ಸ್ ಇತ್ಯಾದಿ ಮೇಳೈಸಿದರೆ, ಸಿಹಿ ಅಡುಗೆಗಳಾಗಿ ಹಲಸಿನಹಣ್ಣಿನ ಪಾಯಸ, ಮುಳಕ, ದೋಸೆ, ಕಡುಬು, ಜ್ಯಾಮ್ ಇತ್ಯಾದಿ ಸಾಥ್ ಕೊಡುತ್ತವೆ. ಇವೆಲ್ಲಾ ತಾಜಾ ಹಲಸಿನಕಾಯಿ ಲಭ್ಯವಿರುವ ತಿಂಗಳುಗಳ ವೈಭವ. ಹಲಸಿನಕಾಯಿ ಲಭ್ಯವಿಲ್ಲದ ಇತರ ತಿಂಗಳುಗಳಲ್ಲಿಯೂ ತಿನ್ನಬೇಕೆನಿಸಿದರೆ, ಅದಕ್ಕೂ ಉಪಾಯವಿದೆ. ಬಲಿತ ಹಲಸಿನಕಾಯಿಯ ಸೊಳೆಗಳನ್ನು ಬೇರ್ಪಡಿಸಿ, ಹಲಸಿನ ಬೀಜ ತೆಗೆದು, ಉಪ್ಪು ನೀರಿನಲ್ಲಿ ಶೇಖರಿಸಿ ಗಾಳಿಯಾಡದಂತೆ ಮುಚ್ಚಿ ಇಟ್ಟರೆ ಒಂದು ವರ್ಷಕ್ಕೂ ಕೆಡುವುದಿಲ್ಲ.
ಮುಸಲಧಾರೆಯಾಗಿ ಸುರಿವ ಮಳೆಯಲ್ಲಿ ತರಕಾರಿ ಬೆಳೆಸಲು ಕಷ್ಟ. ಹಿಂದಿನ ಕಾಲದಲ್ಲಿ, ಅಂಗಡಿಗಳಿಂದ ತರಕಾರಿ ತರುವ ಪದ್ಧತಿ ಇರಲೇ ಇಲ್ಲ. ಹಾಗಾಗಿ ಮನೆಯೊಡತಿಗೆ ಮಳೆಗಾಲಕ್ಕೆಂದು ಕೆಲವು ತರಕಾರಿಗಳನ್ನು ಶೇಖರಿಸಿಡುವ ಹೊಣೆಗಾರಿಕೆಯಿತ್ತು. ಹೆಂಗೆಳೆಯರು ಸೇರಿದ ಕಡೆ ಅವರ ಮಾತುಗಳಲ್ಲಿ “ನಿಮಗೆ ಉಪ್ಪುಸೊಳೆ ಹಾಕಿ ಆಯಿತೇ” ಎಂದು ಪರಸ್ಪರ ವಿಚಾರಿಸಿಕೊಳ್ಳುವುದು ತೀರಾ ಸಾಮಾನ್ಯ ಆಗಿತ್ತು. ತಮ್ಮ ಮರಗಳಲ್ಲಿ ಸಾಕಷ್ಟು ಹಲಸಿನಕಾಯಿ ಇದ್ದವರು ಅಗತ್ಯ ಉಳ್ಳವರಿಗೆ ಉಚಿತವಾಗಿ, ಧಾರಾಳವಾಗಿ ಹಂಚುತ್ತಿದ್ದರು. ಉಪ್ಪು ನೀರಿನಲ್ಲಿ ಶೇಖರಿಸಿಟ್ಟ ಸೊಳೆಗೆ ಮಳೆಗಾಲದಲ್ಲಿ ಅಗ್ರ ತರಕಾರಿಯ ಮಾನ್ಯತೆ ಲಭಿಸುತ್ತಿತ್ತು. ಈ ಉದ್ದೇಶಕ್ಕಾಗಿಯೇ ಹೆಚ್ಚಿನ ಮನೆಗಳಲ್ಲೂ ‘ಸೊಳೆ ಮಂಡಗೆ’ ಎಂದು ಕರೆಯಲ್ಪಡುವ ದೊಡ್ಡದಾದ ಮಣ್ಣಿನ ಜಾಡಿ ಅಥವಾ ಭರಣಿ ಇರುತ್ತಿತ್ತು.
ಈಗಲೂ ಕೆಲವು ಮನೆಗಳಲ್ಲಿ ಸಾಂಬಾರು ಸೌತೆ, ಕುಂಬಳಕಾಯಿ, ಉಪ್ಪಿನೀರಿನಲ್ಲಿ ಹಾಕಿದ ಹಲಸಿನಕಾಯಿ ಸೊಳೆ ಮತ್ತು ಮಾವಿನಕಾಯಿ..ಇತ್ಯಾದಿಗಳನ್ನು ಮಳೆಗಾಲಕ್ಕೆಂದೇ ಸಂಗ್ರಹಿಸಿಡುವ ಪದ್ಧತಿಯಿದೆ. ಉಪ್ಪು ನೀರಿನಲ್ಲಿ ಶೇಖರಿಸಿದ ಹಲಸಿನ ಸೊಳೆಗೆ ವಿಶಿಷ್ಟ ಪರಿಮಳ ಇರುತ್ತದೆ. ಕೆಲವರಿಗೆ ಈ ಪರಿಮಳ ಇಷ್ಟವಾದರೆ, ಇನ್ನು ಕೆಲವರಿಗೆ ಇದೇ ವಾಸನೆಯ ಕಾರಣದಿಂದ ಉಪ್ಪುಸೊಳೆಯ ಅಡುಗೆಗಳು ಇಷ್ಟವಾಗುವುದಿಲ್ಲ! ಉಪಯೋಗಿಸುವ ಮುನ್ನ ಉಪ್ಪು ಸೊಳೆಯನ್ನು ಸ್ವಲ್ಪ ಸಮಯ ನೀರಲ್ಲಿ ನೆನೆಸಿ ತೊಳೆಯಬೇಕು. ಅದರಲ್ಲಿ ಹೆಚ್ಚುವರಿ ಉಪ್ಪು ಇದ್ದರೆ, ಜಾಸ್ತಿ ಸಮಯ ನೆನೆಸಿ ಉಪ್ಪನ್ನು ಕಡಿಮೆಮಾಡಿ ಬಳಸಬೇಕು
ಉಪ್ಪು ಸೊಳೆಯ ಪಲ್ಯ ಬಹಳ ರುಚಿ, ತಯಾರಿಕೆಯೂ ಬಲು ಸರಳ. ಸೊಳೆಗಳನ್ನು ಚಿಕ್ಕದಾಗಿ ಕತ್ತರಿಸಿ, ಒಂದಿಷ್ಟು ಖಾರಪುಡಿ, ಕಾಯಿತುರಿ, ಕರಿಬೇವಿನಸೊಪ್ಪು ಸೇರಿಸಿ ಒಗ್ಗರಣೆ ಹಾಕಿದರಾಯಿತು. ಅನ್ನದೊಂದಿಗೆ ಉಣ್ಣಲು ಚೆನ್ನಾಗಿರುತ್ತದೆ. ಆವರವರ ಆಯ್ಕೆಗೆ ತಕ್ಕಂತೆ ವಿವಿಧ ಮಸಾಲೆ ಬಳಸಿ ಉಪ್ಪು ಸೊಳೆಯ ಸಾಂಬಾರು, ಬೋಳುಹುಳಿ, ಕೂಟು ಇತ್ಯಾದಿ ತಯಾರಿಸಬಹುದು.
ಎರಡು ಕಪ್ ನಷ್ಟು ಉಪ್ಪುಸೊಳೆಗೆ, ಒಂದು ದೊಡ್ಡ ಚಮಚ ಅಕ್ಕಿ, ಒಂದೆರಡು ಹಸಿರುಮೆಣಸಿನ ಕಾಯಿ, ಒಂದು ಚಮಚ ತೆಂಗಿನತುರಿ, ಚಿಟಿಕೆ ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ, ಬಾಳೆ ಎಲೆಯಲ್ಲಿ ತಟ್ಟಿ , ರೊಟ್ಟಿ ಮಾಡಿ ಬೇಯಿಸಿದರೆ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿಯಾಗಿರುತ್ತದೆ.
ಇದೇ ಹಿಟ್ಟಿಗೆ ಸ್ವಲ್ಪ ಚಿರೋಟಿ ರವೆ ಸೇರಿಸಿ (ಬೇಕಿದ್ದರೆ ಕರಿಬೇವಿನಸೊಪ್ಪು, ಹೆಚ್ಚಿದ ಈರುಳ್ಳಿ ಸೇರಿಸಿ) ವಡೆಯಂತೆ ಕರಿದರೆ ಸಂಜೆಯ ಸ್ನ್ಯಾಕ್ಸ್ ಗೆ ಸೂಪರ್ ರುಚಿ.ಈ ಹಿಟ್ಟನ್ನು ಸಣ್ಣಗೆ ತಟ್ಟಿ ಕೊಬ್ಬರಿ ಚೂರನ್ನು ಸೇರಿಸಿ, ಉಂಡೆ ಮಾಡಿ ಎಣ್ಣೆಯಲ್ಲಿ ಕರಿದರೆ ಉಂಡುಲಕಾಳು* ಎಂಬ ತಿಂಡಿ ಸಿದ್ಧವಾಗುತ್ತದೆ. ಹೊರಗಡೆ ಜೋರಾಗಿ ಮಳೆ ಸುರಿಯುತ್ತಿರುವಾಗ, ಮನೆಯೊಳಗಡೆ ಮನೆಮಂದಿ ಎಲ್ಲರೂ ಸೇರಿ ಹರಟುತ್ತಾ ಸಾಂಪ್ರದಾಯಿಕ ಕುರುಕಲು ತಿನಿಸುಗಳನ್ನು ತಯಾರಿಸಿ ಬಿಸಿಕಾಫಿಯೊಂದಿಗೆ ಮೆಲ್ಲುವುದು ‘ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿರುತ್ತದೆ’.
ಆಧುನಿಕ ಅಡುಗೆಮನೆಯಲ್ಲಿ ಅತಿಯಾಗಿ ಸಮಯ ಬೇಡುವ ಸಾಂಪ್ರದಾಯಿಕ ತಿನಿಸುಗಳ ತಯಾರಿಯು ವಿರಳವಾಗಿದೆ. ಈಗಿನ ಗಡಿಬಿಡಿಯ ಜೀವನ, ವರ್ಷದ ಎಲ್ಲಾ ಕಾಲದಲ್ಲಿಯೂ ವಿವಿಧ ತರಕಾರಿಗಳ ಲಭ್ಯತೆ, ವಿವಿಧ ಹೊಸರುಚಿಗಳ ಆವಿಷ್ಕಾರ, ಉದ್ಯೋಗಸ್ಥ ಮಹಿಳೆಯರಿಗೆ ಅಡುಗೆಗೆ ಸಿಗುವ ಅಲ್ಪಾವಧಿ, ಸುಲಭವಾಗಿ ಲಭಿಸುವ ಬೇಕರಿಯ ಸಿದ್ಧ ಆಹಾರಗಳು ……ಹೀಗೆ ಹಲವಾರು ಕಾರಣಗಳಿಂದ ಬಹಳಷ್ಟು ಸಾಂಪ್ರದಾಯಿಕ ಆಡುಗೆಗಳು ನೇಪಥ್ಯಕ್ಕೆ ಸರಿದಿವೆ.
– ಹೇಮಮಾಲಾ.ಬಿ