ನಮ್ಮ ಮನೆಯ ಪಕ್ಕದಲ್ಲಿಯೇ ಒಂದು ಭಗವತಿ ಕ್ಷೇತ್ರವಿದೆ ..ವರುಷದಲ್ಲಿ ಒಮ್ಮೆ ನಡೆವ ಊರ ಜಾತ್ರೆ .. ಮೇಲ್ನೋಟಕ್ಕೆ ಬಿಲ್ಲವರ ಕ್ಷೇತ್ರ/ಭೂತಸ್ತಾನ ಎಂದು ಕಂಡರೂ ಊರಿನ ಎಲ್ಲಾ ಹಿಂದೂಗಳು ಒಗ್ಗಟ್ಟಿನಿಂದ ಭಕ್ತಿಯಿಂದ ನಂಬಿ ನಡೆಸಿಕೊಂಡು ಹೋಗುತ್ತಿರುವ ಸಂಭ್ರಮವಿದು.ಈ ದೇವಿ ಭಗವತಿ ಹೆಚ್ಚಾಗಿ ಕೇರಳದ ಮಣ್ಣಿನಲ್ಲೇ ಪೂಜಿಸಲ್ಪಡುವುದು.ಇತರ ರಾಜ್ಯಗಳಲ್ಲಿ ಹೆಚ್ಚಾಗಿ ಪೂಜಿಸಲ್ಪಡುವ ದುರ್ಗಾ, ಸರಸ್ವತಿ, ಕಣ್ಣಕಿ ಮೊದಲಾದ ದೇವತೆಗಳಿಗೂ ಈ ಭಗವತಿ ದೇವಿಗೋ ಏನೋ ಸಂಬಂದ ಇರಬಹುದೆಂದು ನನ್ನ ಅನಿಸಿಕೆಯಾಗಿತ್ತು.ಇತಿಹಾಸವನ್ನು ಒಂದಿಷ್ಟು ಕುತೂಹಲದಿಂದ ನೋಡುವ ಹವ್ಯಾಸ ನನ್ನದು .. ಆದರೆ ನನ್ನ ಅನಿಸಿಕೆ ಸುಳ್ಳಾಗಲಿಲ್ಲ.
.
ಇನ್ನು ನಾನು ತಿಳಿದ ಇತಿಹಾಸದ ಬಗ್ಗೆ ಒಂದಿಷ್ಟು ನಿಮ್ಮೊಂದಿಗೆ ಹಂಚಿಕೊಳ್ಳು ತ್ತೇನೆ.ದೂರದ ತಮಿಳುನಾಡಿನ ಕಾವೇರಿ ಪಟ್ಟಣಂ ಎಂಬಲ್ಲಿ ಒಬ್ಬ ಶ್ರೀಮಂತ ವರ್ತಕನಿದ್ದನು. ಹೆಸರು ಕೊವಲನ್. ಆತನ ಮುದ್ದಾದ ಮಡದಿ ಕಣ್ಣಿಗೈ .. ಆಕೆಯೂ ಶ್ರೀಮಂತ ಕುಟುಂಬದಿಂದ ಬಂದವಳು.
ಇಬ್ಬರೂ ಸುಂದರವಾದ ದಾಂಪತ್ಯ ಜೀವನ ನಡೆಸಿಕೊಂಡು ಹೋಗುತ್ತಿದ್ದರು.
.
ಪಕ್ಕದೂರಿನ ಮಾಧವಿ ಎಂಬ ನರ್ತಕಿ ತನ್ನ ನರ್ತನ ಕಲೆಯಿಂದ ಊರಲ್ಲಿ ಪ್ರಸಿದ್ದಿ ಪಡೆದಿದ್ದಳು. ಒಮ್ಮೆ ಈ ಕೊವಲನ್ ಅವಳ ನರ್ತನ ಕಂಡು ಅವಳಲ್ಲಿ ಅನುರಕ್ತನಾಗುತ್ತಾನೆ.ಜೊತೆಯಾಗಿ ಜೀವನ ಸಾಗಿಸಲು ಪ್ರಾರಂಭಿಸುತ್ತಾರೆ.ಒಂದು ಹೆಣ್ಣು ಮಗುವಿನ ಜನನವೂ ಆಗುತ್ತದೆ.
‘
ಇಲ್ಲಿ ಕಾವೇರಿ ಪಟ್ಟಣಂ ದಲ್ಲಿ ಪತ್ನಿ ಕಣ್ಣಿಗೈ ತನ್ನ ಗಂಡನ ಆಗಮನಕ್ಕಾಗಿ ಕಾಯುತ್ತಾ ಇರುತ್ತಾಳೆ… ಇಂದಲ್ಲ ನಾಳೆಯಾದರೂ ಬಂದೇ ಬರುವನೆಂಬ ನಂಬಿಕೆ.ಆದರೆ ಆಕೆಯ ನಂಬಿಕೆ ಸುಳ್ಳಾಗಲಿಲ್ಲ.ಅತ್ತ ಕೊವಲನ್ ಮಾಧವಿ ಜೊತೆ ಕಳೆದು ತನ್ನ ಎಲ್ಲಾ ಐಶ್ವರ್ಯವನ್ನು ಕಳೆದುಕೊಂಡು ದಿವಾಳಿಯಾಗುತ್ತಾನೆ.ತನ್ನ ತಪ್ಪಿನ ಅರಿವಾಗಿ ಮೊದಲ ಹೆಂಡತಿಯ ಪಾದವೇ ಗತಿ ಎಂಬಂತೆ ತನ್ನೂರಿಗೆ ಮರಳುತ್ತಾನೆ.
‘
ಮಡದಿ ಕಣ್ಣಿಗೈ ಗಂಡನನ್ನು ಮನ್ನಿಸಿ ಇನ್ನು ಈ ಊರಲ್ಲಿ ಇರುವುದ ಬೇಡ . ನಾವು ದೂರದ ಶ್ರೀಮಂತ ಪಟ್ಟಣ ಮಧುರೈ ಗೆ ಹೋಗೋಣವೆಂದು ತೀರ್ಮಾನಿಸುತ್ತಾಳೆ.ಅಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸೋಣವೆಂದು ತೀರ್ಮಾನಿಸಿ ತನ್ನ ಕಾಲಲ್ಲಿದ್ದ ಕಾಲ್ಗೆಜ್ಜೆಯೊಂದನ್ನು ಬಿಚ್ಚಿ ಗಂಡನಲ್ಲಿ ಇದನ್ನು ಮಾರಲು ತಿಳಿಸುತ್ತಾಳೆ.ಈ ಗೆಜ್ಜೆ ಮುತ್ತು ರತ್ನ, ಹವಳದಿಂದ ಪೋಣಿಸಿದ ಕಾಲ್ಗೆಜ್ಜೆ ಯಾಗಿತ್ತು.
‘
ಅದೇ ಸಮಯದಲ್ಲಿ ಮಧುರೈ ಅರಸ ಪಾಂಡ್ಯ ರಾಜನ ಮಡದಿಯ ಕಾಲ್ಗೆಜ್ಜೆಯೂ ಕಳ್ಳತನವಾಗಿರುತ್ತದೆ. ಮಧುರೈ ನಲ್ಲಿ ಮಾರಾಟ ಮಾಡುವ ಸಂಧರ್ಭದಲ್ಲಿ ಕೈಯಲ್ಲಿ ಕಂಡ ಕಾಲ್ಗೆಜ್ಜೆಯು ಇದು ಅರಮನೆಯಿಂದ ಕಳ್ಳತನವಾದ ಗೆಜ್ಜೆಯೇ ಇರಬಹುದೆಂದು ಭಾವಿಸಿ ಅಲ್ಲಿನ ವರ್ತಕರು ರಾಜನ ಭಟರಿಗೆ ತಿಳಿಸಿ ಆತನನ್ನು ಬಂಧಿಸುವಂತೆ ಮಾಡುತ್ತಾರೆ.ಮುಂದೆ ಕೊವಲನ್ ನ ಯಾವ ಮಾತನ್ನೂ ಆಲಿಸದೆ ಆತನಿಗೆ ಮರಣದಂಡನೆ ವಿಧಿಸಲಾಗುತ್ತದೆ.
.
ಕೊವಲನ್ ಪತ್ನಿ ಕಣ್ಣಿಗೈ ಗೆ ವಿವರ ತಿಳಿಯುತ್ತದೆ ..ಆಕೆ ನೇರವಾಗಿ ರಾಜನ ಅರಮನೆಯತ್ತ ಹುಚ್ಚಿಯಂತೆ ಬೊಬ್ಬಿಡುತ್ತಾ ಓಡಿ ಬರುತ್ತಾಳೆ . ಆಕೆ ಮತ್ತು ರಾಜರ ನಡುವೆ ಮಾತಿನ ಚಕಮುಕಿ ನಡೆಯುತ್ತದೆ.ಕೊನೆಗೆ, ನಿನ್ನ ಮಡದಿ ರಾಣಿಯ ಗೆಜ್ಜೆಯನ್ನು ಎಸೆಯಲು ತಿಳಿಸುತ್ತಾಳೆ .
,
ಕೋಪದಿಂದ ರಾಣಿಯ ಗೆಜ್ಜೆಯನ್ನು ರಾಜ ಎಸೆಯುತ್ತಾನೆ .. ” ನೋಡು .. ಇದು ಮುತ್ತಿನಿಂದ ಮಾಡಿದ ಗೆಜ್ಜೆ .. ” ಎಂದು ಮೀಸೆ ತಿರುವಿ ಹೇಳುತ್ತಾನೆ .
ಆಕೆ .. ” ಸರಿ .. ನಿನಗೆ ನನ್ನ ಗಂಡನಿಂದ ಸಿಕ್ಕಿದ ಗೆಜ್ಜೆಯನ್ನೂ ಎಸೆ ” ಎನ್ನುತ್ತಾಳೆ.
ಅದನ್ನೂ ಎಸೆಯುತ್ತಾನೆ ..
.
ಆದರೆ ಆ ಗೆಜ್ಜೆ ಬರಿಯ ಮುತ್ತುಗಳದ್ದಾಗಿರಲಿಲ್ಲ .. ಹವಳ ಮತ್ತು ರತ್ನಗಳನ್ನೂ ಪೋಣಿಸಿ ತಯಾರಿಸಲಾಗಿತ್ತು.. !!!
.
,
ರಾಜನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಕ್ಷಮೆ ಕೇಳುತ್ತಾನೆ .. ತನ್ನ ಕಿರೀಟ ಸಿಂಹಾಸನ ತ್ಯಜಿಸಿ ಆಕೆಯ ಕಾಲಿಗೆ ಬೀಳುತ್ತಾನೆ.
ಅವಳ ಕೋಪ ಇಳಿಯಲೇ ಇಲ್ಲ ..
,
ಕೆಂಡಾ ಮಂಡಲವಾದ ಆಕೆ ಶಾಪ ಕೊಡುತ್ತಾಳೆ …
,
ಬಹುಶ ನಿಮಗೆ ಮೈಸೂರು ಅರಸರಿಗೆ ಅಲಮೇಲಮ್ಮ ಕೊಟ್ಟ ಶಾಪದ ಬಗ್ಗೆ ನೆನಪಾಗಬಹುದು …
” ತಲಕಾಡು ಮರಳಾಗಿ ಮಾಲಿಂಗಿ ಮಡುವಾಗಿ ಮೈಸೂರು ದೊರೆಗೆ ಮಕ್ಕಳಾಗದಿರಲಿ .. ” ಇದೇ ಅಲಮೇಲಮ್ಮ ಕೊಟ್ಟ ಶಾಪ. ಕಣ್ಣಿಗೈ ಕೊಟ್ಟಿದ್ದೂ ಇಂಥಹದೇ ಒಂದು ಶಾಪ .. !!!
,
“ಮಧುರೈ ಸುಟ್ಟು ನಾಶವಾಗಲಿ …. “
,
ಕ್ಷಣಾರ್ಧದಲ್ಲೇ ಇಡೀ ಮಧುರೈ ಹೊತ್ತಿ ಉರಿಯುತ್ತದೆ. ಆಗ ಮಧುರೈ ಮೀನಾಕ್ಷಿ ದೇವಿ ಪ್ರತ್ಯಕ್ಷವಾಗಿ ಕಣ್ಣಿಗೈ ಗೆ ಸಾಂತ್ವನ ಹೇಳುತ್ತಾಳೆ. ನಂತರ ಸ್ವಲ್ಪ ಶಾಂತವಾದ ಕಣ್ಣಿಗೈ ನೇರವಾಗಿ ಇಂದಿನ ಕೇರಳದ ಗುರುವಾಯೂರ್ ಗೆ ಪ್ರಯಾಣಿಸುತ್ತಾಳೆ. ಈ ಮಾರ್ಗವಾಗಿ ಬರುವಾಗ ತಿರುವನಂತಪುರದ ಆಟ್ಟುಕಾಲ್ ನಲ್ಲಿಯೂ ದರ್ಶನ ನೀಡುತ್ತಾಳೆ ಮತ್ತು ಕೊನೆಗೆ ತ್ರಿಶೂರ್ ಬಳಿ ಕೊಡುಂಗಲ್ಲೂರ್ ಎಂಬಲ್ಲಿ ವಿಶ್ರಾಂತಿ ಪಡೆಯುತ್ತಾಳೆ.ಮಧುರೈ ಮೀನಾಕ್ಷಿ ದೇವಿ ಕೊಟ್ಟ ಅನುಗ್ರಹದಂತೆ ನಂತರ ಕಣ್ಣಿಗೈ ದೇವತೆಯಾಗಿ ರೂಪ ಪಡೆಯುತ್ತಾಳೆ. ಇದೇ ಕಣ್ಣಿಗೈ ಕೇರಳ ಹಾಗೂ ಇನ್ನಿತರ ಭಾಗಗಳಲ್ಲಿ ನಂಬಿಕೆಯಲ್ಲಿರುವ ಭಗವತಿ ಎನ್ನುವುದು ಐತಿಹ್ಯ . ಬಹುಶಃ ಭಗವತಿಯ ಬಗ್ಗೆ ಇನ್ನಿತರ ಐತಿಹ್ಯ ಕೂಡಾ ಇರಬಹುದು . ಆದರೆ ತಮಿಳು ಗ್ರಂಥಗಳಲ್ಲಿ ಈ ಭಗವತಿಯೇ ಕಣ್ಣಿಗೈ ಎಂಬ ಉಲ್ಲೇಖ ಇರುವುದಂತೂ ಸತ್ಯ.
ಇನ್ನೊಂದು ಪುರಾಣ ಕಥೆಯ ಪ್ರಕಾರ ಕಣ್ಣಿಗೈ ಪಾಂಡಿ ರಾಜನ ಬಳಿ ತನ್ನ ಕಡಗವನ್ನು ಅಡವು ಇಡುತ್ತಾಳೆ ಮತ್ತು ಆಕೆ ನಂತರ ಬಂದು ಕೇಳುವಾಗ ರಾಜ ಅದನ್ನು ಹಿಂತಿರುಗಿಸುವುದಿಲ್ಲ. ಬದಲಾಗಿ ಆತನ ಮಗ ನೀಲಕಂಠ ಆ ಗೆಜ್ಜೆ ಕಟ್ಟಿ ನರ್ತಿಸುತ್ತಾನೆ . ಇದರಿಂದ ಕೋಪಗೊಂಡ ಕಣ್ಣಿಗೈ ಆತನನ್ನು ಸಮುದ್ರಕ್ಕೆ ಎಸೆಯುತ್ತಾಳೆ. ಈ ಎರಡೂ ಕಥೆಗಳಲ್ಲಿ ಗೆಜ್ಜೆ/ಕಡಗ ಮತ್ತು ಪಾಂಡಿರಾಜ ನ ಹೆಸರು ಇರುವುದರಿಂದ ಇವೆರಡೂ ಪರಸ್ಪರ ಒಂದಕ್ಕೊಂದು ಪೂರಕವಾಗಿಯೇ ಇದೆ.
,
– ಕೆ. ಎ. ಎಂ. ಅನ್ಸಾರಿ
Nice write up 🙂
ಧನ್ಯವಾದಗಳು .. 🙂