ಶ್ರೀರಾಮನ ಪಟ್ಟಾಭಿಷೇಕವೂ…. ಚಳ್ಳಂಗಾಯಿಯ ಉಪ್ಪಿನಕಾಯಿಯೂ
ನಮ್ಮ ಬಾಲ್ಯದಲ್ಲಿ ಅಜ್ಜಿ ಹೇಳುತ್ತಿದ್ದ ಹಲವಾರು ಕಥೆಗಳಲ್ಲಿ ‘ಮಂಗಗಳು ಚಳ್ಳಂಗಾಯಿ ಉಪ್ಪಿನಕಾಯಿ’ ತಿಂದ ಕಥೆಯೂ ಇತ್ತು.ಆ ಕಥೆಯ ಸಾರಾಂಶ ಹೀಗಿದೆ :
” ರಾವಣವಧೆಯ ನಂತರ, ಸೀತೆ ಮರಳಿ ಬಂದ ಮೇಲೆ, ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕವು ಬಲು ವಿಜೃಂಭಣೆಯಿಂದ ನೆರವೇರಿತು. ಶ್ರೀರಾಮನು ತನ್ನ ವನವಾಸದ ಕಷ್ಟದ ದಿನಗಳಲ್ಲಿ ಸಹಾಯ ಮಾಡಿದ ಕಿಷ್ಕಿಂಧೆಯವರನ್ನು ಮರೆಯದೇ ಔತಣಕ್ಕೆ ಆಹ್ವಾನಿಸಿದ್ದನು. ‘ಅದು ಗಂಭೀರ ಸಭೆಯೆಂದೂ, ಕಪಿಚೇಷ್ಟೆ ಮಾಡಬಾರದೆಂದೂ’ ಮುನ್ನೆಚ್ಚರಿಕೆ ಕೊಟ್ಟಿದ್ದನು. ‘ಆಗಲಿ, ತೆಪ್ಪಗೆ ಇರುತ್ತೇವೆ’ ಎನ್ನುತ್ತಾ, ವಾನರ ಸೈನ್ಯವೂ ಸಡಗರದಿಂದ ಅಯೋಧ್ಯೆಗೆ ಹೊರಟಿತು. ಸಂಭ್ರಮದಿಂದ ಶ್ರೀರಾಮನ ಪಟ್ಟಾಭಿಷೇಕ ನೆರವೇರಿತು. ಊಟಕ್ಕೆ ಬಗೆಬಗೆಯ ಅಡುಗೆಗಳನ್ನು ಬಡಿಸಿದರು.
ಎಲ್ಲರೂ ಊಟ ಸವಿಯಲಾರಂಭಿಸಿದಾಗ ಮರಿಮಂಗವೊಂದು, ಎಲೆತುದಿಯಲ್ಲಿ ಬಡಿಸಿದ್ದ ಚಳ್ಳಂಗಾಯಿಯ ಉಪ್ಪಿನಕಾಯಿಯನ್ನು, ಕೈಯಲ್ಲಿ ಹಿಡಿದುಕೊಂಡಾಗ,ಅನಿರೀಕ್ಷಿತವಾಗಿ ಚಳ್ಳಂಗಾಯಿಯ ಬೀಜ ಸಿಡಿದು, ಒಂದು ಅಡಿ ಎತ್ತರಕ್ಕೆ ಹಾರಿತು.
ಕೂಡಲೇ ಮರಿಮಂಗದ ಅಹಂ ಜಾಗೃತವಾಯಿತು. ಈ ಪುಟಾಣಿ ಚಳ್ಳಂಗಾಯಿಯ ಬೀಜಕ್ಕಿಂತ ಹೆಚ್ಚು ಎತ್ತರಕ್ಕೆ, ನಾನು ಹಾರಲಾರೆನೇ, ಎನ್ನುತ್ತಾ ಎರಡು ಆಡಿ ಎತ್ತರಕ್ಕೆ ಹಾರಿ, ಊಟದ ಪಂಕ್ತಿಯಲ್ಲಿ ಪುನ: ಕುಳಿತುಕೊಂಡಿತು. ಪಕ್ಕದಲ್ಲಿದ್ದ ಇನ್ನೊಂದು ಕಪಿಯು, ‘ಇವನಿಗಿಂತ ಹೆಚ್ಛು ಎತ್ತರಕ್ಕೆ, ಹಾರದಿದ್ದರೆ, ನಾನೇತಕ್ಕೆ’ ಎಂದು ಸಾಬೀತುಪಡಿಸಲು ಮೂರು ಅಡಿ ಎತ್ತರಕ್ಕೆ ಹಾರಿ ಕುಳಿತುಕೊಂಡಿತು. ಅದರ ಪಕ್ಕದ ಮಂಗ 5 ಆಡಿ …..ಇನ್ನೊಂದು 6 ಅಡಿ…..ಮತ್ತೊಂದು 8 ಅಡಿ.. ..ಹೀಗೆ ತನ್ನ ಪಕ್ಕದ ಕಪಿಗಿಂತ ತಾನು ಶಕ್ತಿಶಾಲಿ ಎಂದು ತೋರಿಸಿಕೊಳ್ಳಲು, ಪ್ರತಿಯೊಂದು ಮಂಗವೂ ಊಟದ ಪಂಕ್ತಿಯಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚೆಚ್ಛು ಎತ್ತರಕ್ಕೆ ಹಾರುತ್ತಾ ಕೊನೆಗೆ ಸುಗ್ರೀವ, ಹನುಮಂತರೂ ಸ್ಪರ್ಧಾತ್ಮಕವಾಗಿ ಅತಿ ಎತ್ತರಕ್ಕೆ ಜಿಗಿದರಂತೆ..ಹೀಗೆ ವಾನರಸೇನೆ ಊಟದ ನಡುವೆ ಗದ್ದಲ ಸೃಷ್ಟಿಸಿತು….ತಮ್ಮ ಹುಟ್ಟುಗುಣ ಕಪಿಬುದ್ಧಿಯನ್ನು ತೋರಿಸಿಯೇ ಬಿಟ್ಟರು ” ಇದು ಅಜ್ಜಿ ಹೇಳಿದ ಚಳ್ಳಂಗಾಯಿ ಉಪ್ಪಿನಕಾಯಿಯ ಕಥೆ.
ಚಳ್ಳಂಗಾಯಿ ಎಂದರೆ ಏನೆಂದು ಕೇಳಿದ್ದಾಗ ನಮ್ಮಜ್ಜಿ ನಮಗೆ ಅರ್ಥವಾಗಲಿ ಎಂದು ಎಳೆ ಮಿಡಿ-ಮಾವಿನ ಉಪ್ಪಿನಕಾಯಿಯ ಒಳಗಿರುವ ಎಳೆಗೊರಟು ಎಂದಿದ್ದರು. ಹಾಗಾಗಿ ಇದೊಂದು ಕಾಲ್ಪನಿಕ ಕಾಯಿ ಅಂದುಕೊಂಡಿದ್ದೆ.
ಕಳೆದ ವರ್ಷ ಮೂಡುಬಿದಿರೆಯ ಸೋನ್ಸ್ ಫಾರ್ಮ್ ನಲ್ಲಿ ಚಳ್ಳಂಗಾಯಿ ಮರವನ್ನು ನೋಡಿದ್ದೆ. ವಿಕಿಪಿಡಿಯಾದ ಪ್ರಕಾರ ಇದು ಏಷ್ಯಾದ ಕಾಡುಗಳಲ್ಲಿ ಧಾರಾಳವಾಗಿ ಕಾಣಸಿಗುವ ಮಧ್ಯಮಗಾತ್ರದ ಮರ. Cordia myxa ಇದರ ಸಸ್ಯಶಾಸ್ತ್ರೀಯ ಹೆಸರು . Lasura,Assyrian ಎಂಬ ಹೆಸರೂ ಇದೆ. ದೊಡ್ಡ ಎಲೆಗಳ ಈ ಮರವು ಬೇಸಗೆಯಲ್ಲಿ ಹೂ ಬಿಟ್ಟು ಸಣ್ಣ ಗಾತ್ರದ ಹಸಿರು ಕಾಯಿಗಳನ್ನೂ, ಆಮೇಲೆ ಹಳದಿ ಹಣ್ಣುಗಳನ್ನು ಕೊಡುತ್ತದೆ. ಕಾಯಿಗಳಿಂದ ರುಚಿಕರವಾದ ಉಪ್ಪಿನಕಾಯಿ ತಯಾರಿಸಬಹುದು, ಹಣ್ಣುಗಳು ಹುಳಿ-ಸಿಹಿ ಮಿಶ್ರ ರುಚಿ ಹೊಂದಿರುತ್ತವೆ.
ಚಳ್ಳಂಗಾಯಿ ಮರದ ತೊಗಟೆ, ಎಲೆ, ಕಾಯಿಗಳಲ್ಲಿ ಔಷಧೀಯ ಗುಣಗಳಿವೆ. ಕಾಯಿಯಲ್ಲಿ ಲಭಿಸುವ ಅಂಟನ್ನು ಹಿಂದಿನ ಕಾಲದಲ್ಲಿ ಪೇಪರ್ ಅಂಟಿಸಲು ಬಳಸುತ್ತಿದ್ದರಂತೆ. ಮರದ ಕಾಂಡದಿಂದ ಪೀಠೋಪಕರಣಗಳನ್ನು ತಯಾರಿಸುತ್ತಾರೆ. ಒಟ್ಟಾರೆಯಾಗಿ ಬಹೂಪಯೋಗಿ, ಈ ಚಳ್ಳಂಗಾಯಿ ಮರ.
– ಹೇಮಮಾಲಾ.ಬಿ
(ಚಿತ್ರ, ಮಾಹಿತಿ: ಸೋನ್ಸ್ ಫಾರ್ಮ್, ವಿಕಿಪಿಡಿಯ)
challangai ಕಥೆ ನೆನಪಿಸಿದ್ದಕ್ಕೆ ಧನ್ಯವಾದಗಳು .ನಾನೂ ಈಕಥೆಯನ್ನು ಚಿಕ್ಕವಳಿರುವಾಗ ಕೇಳಿದ್ದೆ .
ಕನ್ನಡದಲ್ಲಿ ಏನ್ ಹೇಳ್ತಾರೇ
ಚಳ್ಳೆಹಣ್ಣು