ಕಾದಂಬರಿ : ‘ಸುಮನ್’ – ಅಧ್ಯಾಯ8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಅನಾಗರಿಕರು ಯಾರು?

ಅಂದು ಬೆಳಗ್ಗೆ ಗಿರೀಶ ತಿಂಡಿ ತಿನ್ನುತ್ತ  “ರಂಗಪ್ಪ, ನಾಳೆ ನನ್ನ ಫ್ರೆಂಡ್ ಸುರೇಶ ಬರ್ತಿದಾನೆ. ಅದೇ ಎರಡು ವರ್ಷದ ಹಿಂದೆ ಬಂದಿದ್ದನಲ್ಲ. ನಾಳೆ ನಮ್ಮ ಮನೆಲೇ ಇರ್ತಾನೆ. ಗೆಸ್ಟ್ ರೂಮು ರೆಡಿ ಮಾಡು” ರಂಗಪ್ಪನಿಗೆ ಸಂಬೋಧಿಸಿದರೂ ಸುಮನ್‍ಗೂ ಹೇಳಿದ. ಗಿರೀಶ ಅತ್ತ ಹೋದ ಮೇಲೆ ಸುಮನ್ ತಾನೇ ಖುದ್ದಾಗಿ ಗೆಸ್ಟ್ ರೂಮು ತಯಾರು ಮಾಡಿ, ಬಚ್ಚಲು ಮನೆಯಲ್ಲಿ ನೀರು ಬರ್ತಿದ್ಯಾ, ಗೀಸರ್ ಕೆಲಸ ಮಾಡ್ತಾ ಇದ್ಯಾ ಎಲ್ಲಾ ನೋಡಿ ಒಂದು ಹೂಗುಚ್ಚ ತರಿಸಿ ಮೂಲೆಯ ಮೇಜಿನ ಮೇಲಿಟ್ಟಳು. ಅವಳ ಎಲ್ಲಾ ಕೆಲಸದಲ್ಲು ಟಾಮಿ ಸಂತಸದಿಂದ ಭಾಗಿಯಾಗಿ ಎಲ್ಲದರ ಬಗ್ಗೆ ತನ್ನ ಅಭಿಪ್ರಾಯ ಸೂಚಿಸಿತು ಬೊಗಳುತ್ತ.

ಮಾರನೆಯ ಬೆಳಗ್ಗೆ ಏರ್ಪೋರ್ಟಿನಿಂದ ನೇರವಾಗಿ ಗಿರೀಶ ಮನೆಗೆ ಬಂದಿಳಿದ ಸುರೇಶ. ಗಿರೀಶ ಅವನನ್ನು ಸಂತಸದಿಂದ ಬರ ಮಾಡಿಕೊಂಡ. ಅವನು ಫ್ರೆಶ್ ಆಗಿ ಬರುವ  ಹೊತ್ತಿಗೆ ಸುಮನ್ ಕೆಳಗೆ ಬಂದಳು.

“ಸುರೇಶ ದಿಸ್ ಈಸ್ ಸುಮನ್ ಮೈ ವೈಫ್” ಸುರೇಶ ಊಟದ ಮೇಜನ್ನು ಸಮೀಪಿಸಿದಂತೆ ಗಿರೀಶ ಸುಮನಳನ್ನು ಪರಿಚಯಿಸಿದ. ಸುರೇಶ ಕೈ ಚಾಚಿದ. ಸುಮನ್ ತನ್ನ ಕೈ ಮುಂದೆ ಮಾಡಿದಳು. ಸ್ಕರ್ಟ್ ತೊಟ್ಟು ಮೇಕಪ್ ಇಲ್ಲದೆ ಗುಲಾಬಿಯಂತಿದ್ದ ಸುಮನಳನ್ನು ಬೆರಗಿನಿಂದ ನೋಡಿದ ಸುರೇಶ. ಅವನ ಕಣ್ಣಿನಲ್ಲಿದ್ದ ಕಾಮಕ್ಕೆ ಅಸಹ್ಯಸಿಕೊಂಡು ಸುಮನ್ ಕೈ ಹಿಂತೆಗೆಯಲು ಕೊಸರಾಡಿದಳು. ಸುರೇಶ ಅವಳ ಕೈಯನ್ನು ಮೃದುವಾಗಿ ಅಮುಕಿ ಅವಳ ಕಣ್ಣನ್ನು ಸೆರೆ ಹಿಡಿಯಲು ಪ್ರಯತ್ನಿಸಿದ. ಸುಮನಳ ಕಣ್ಣು ಕಿಡಿ ಕಾರಿದವು. ಕೈ ಸರನ್ನೆ ಎಳೆದುಕೊಂಡಳು. ಇದ್ಯಾವುದರ ಅರಿವಿಲ್ಲದೆ ಗಿರೀಶ ರಂಗಪ್ಪ ತಂದಿಟ್ಟ ಬ್ರೆಡ್‍ಗೆ ಜಾಮ್ ಸವರುತ್ತಿದ್ದ.  ಸುಮನ್ ತಲೆ ತಗ್ಗಿಸಿ ತನ್ನ ಅವಲಕ್ಕಿಗೆ ಕೈ ಹಾಕಿದಳು. ವಾರ್ಷಿಕೋತ್ಸವದ ನಂತರ ತನ್ನ ತಿಂಡಿ ಅಡುಗೆ ಮಾಡಿಕೊಳ್ಳಲು ಶುರು ಮಾಡಿದನ್ನು ಮುಂದುವರಿಸಿದ್ದಳು. ಗಿರೀಶ  ಏನೋ ಮಾತಾಡುತ್ತಿದ್ದ. ಸುರೇಶ ಅವಳ ತಟ್ಟೆಯಲ್ಲಿದ್ದದನ್ನು ನೋಡಿ “ಏನು ಸುಮನ್ ಡಯಟ್ ಆ? ಫಿಗರ್ ಚೆನ್ನಾಗಿ ಮೆಂಟೇನ್ ಮಾಡಿದ್ದೀಯಾ” ಅವನ ಕಣ್ಣು ಸುಮನ್ ಮೈಮೇಲೆ ಹರಿದಾಡಿತು.  ಸುಮನ್ ರೋಷದಿಂದ ಕೆಂಪಾದಳು. “ಫಿಗರ್ ಬಗ್ಗೆ ಕಾಳಜಿ ಏನೂ ಇಲ್ಲ. ತಿಂಡಿಗೆ ಬೇಕಾದ್ರೆ ಚಾಕಲೇಟು ತಿಂತಾಳೆ. ಆದ್ರೆ ನಮ್ಮ ತಿಂಡಿ ಅವಳಿಗೆ ರುಚಿಸಲ್ಲ. ಟೇಸ್ಟ್ ಇಲ್ಲ”  ತಾತ್ಸರದಿಂದ ಗಿರೀಶ ನುಡಿದ.  ಸುರೇಶ ತುಟಿ ಕೊಂಕಿಸಿ ನಕ್ಕ. ಸುಮನ್ ಎರಡು ತುತ್ತು ತಿಂದು ಮೇಜನ್ನು ಬಿಟ್ಟು ಎದ್ದಳು. ಅವರಿಬ್ಬರು ಎಷ್ಟೋ ಹೊತ್ತು ಮಾತಾಡುತ್ತಿದ್ದರು. ತಿಂಡಿ ಮುಗಿಸಿ ಲಿವಿಂಗ್ ರೂಮಿನಲ್ಲಿ ಬಂದು ಕುಳಿತರು. ಸುರೇಶ ಕೇಳಿದಕ್ಕೆ ಹೂಂ ಉಹೂಂ ಬಿಟ್ಟರೆ ಅವಳಿಂದ ಇನ್ನೊಂದು ಮಾತಿಲ್ಲ. ಗಿರೀಶ ಇದನ್ನು ಗಮನಿಸುತ್ತಿದ್ದ. ಸುರೇಶ ಸುಮನಳ ಮೈಮಾಟವನ್ನು ಗಮನಿಸುತ್ತಿದ್ದ. ಸುಮನ್ ಒಳಗೆ ಕುದಿಯುತ್ತಿದ್ದಳು. ಹನ್ನೆರಡಕ್ಕೆ ಇಬ್ಬರು ಆಫೀಸಿಗೆ ಹೊರಟರು. ಸುಮನ್ ನಿಟ್ಟುಸಿರು ಬಿಟ್ಟಳು. 

ರಾತ್ರಿ ಊಟದ ನಂತರ ಸುರೇಶ ತನ್ನ ರೂಮಿನಿಂದ ಚಿವಾಸ್ ರೀಗಲ್ ತಂದು ಮೇಜಿನ ಮೇಲಿಟ್ಟ. ಗಿರೀಶ ಎರಡು ಗ್ಲಾಸ್ ತೆಗೆದು ಅದರ ಪಕ್ಕ ಇಟ್ಟ. ಇಬ್ಬರು ಕುಡಿಯುತ್ತ ಕುಳಿತರು. ಸುಮನ್ ಗಿರೀಶ ಕುಡಿಯುವುದನ್ನು ಮೊದಲ ಸಲಿ ನೋಡುತ್ತಿದ್ದಳು. ಕೆಲ ನಿಮಿಷದಲ್ಲಿ ಕೋಣೆಯ ತುಂಬ ಘಾಟು ಹರಡಿ ಸುಮನ್‍ಗೆ ವಾಂತಿ ಬರುವ ಹಾಗೆ ಆಯಿತು. ಸರಿ ಹೊರಡಲು ಎದ್ದಳು. “ಸ್ಟೇ ಸುಮನ್ ಗಿವ್ ಅಸ್ ಕಂಪನಿ” ಹೋಗುತ್ತಿದ್ದ ಸುಮನಳ ಕೈ ಹಿಡಿದ ಸುರೇಶ. ಸಿಟ್ಟಿನಿಂದ ಕೈ ಎಳೆದುಕೊಂಡು ಸುಮನ್ ಸುರೇಶನನ್ನು ದುರಗುಟ್ಟಿ ನೋಡಿದಳು. “ಬಡ ಮೇಷ್ಟ್ರ ಮಗಳು. ಎಲ್ಲಿ ನೋಡಿರಬೇಕು ಇದೆಲ್ಲ. ಒಂದು ಡ್ರೆಸ್ ಸೆನ್ಸ್ ಇಲ್ಲ. ಹೈ ಕ್ಲಾಸ್ ಲೈಫಸ್ಟೈಲ್ ನೋಡಿಲ್ಲ. ಹೋದ ಕಡೆ ಹೇಗೆ ನಡ್ಕೋಬೇಕು ಗೊತ್ತಿಲ್ಲ. ಏನೂ ಟೇಸ್ಟ್ ಇಲ್ಲ ಏನಿಲ್ಲಾ ಹಳ್ಳಿ ಗುಗ್ಗು” ಕುಡಿದ ಅಮಲಿನಲ್ಲಿ ಗಿರೀಶ ಅವಳ ಮೇಲಿನ ಜಿಗುಪ್ಸೆ, ತಿರಸ್ಕಾರವನ್ನು ಹೊರ ಹಾಕಿದ. ಉಪ್ಪೇರಿಗಳನ್ನು ಮೇಜಿನ ಮೇಲಿಡುತ್ತಿದ್ದ ರಂಗಪ್ಪನ ಕಿವಿ ಚುರುಕಾಗಿತ್ತು. ಅಡುಗೆಮನೆಯ ಬಾಗಿಲಲ್ಲಿ ವಿಜಯ ಹಲ್ಲು ಬಿಟ್ಟು ನಿಂತ್ತಿದ್ದಳು. ಎವೆಯಿಕ್ಕದೆ ಸುಮನ್ ಗಿರೀಶನ ನೋಡಿದಳು. “ಫಿನಿಶಿಂಗ್ ಸ್ಕೂಲ್‍ಗೆ ಸೇರಿಸು” ಸುರೇಶನ ಉತ್ತರ ಛಡಿ ಏಟಿನಂತೆ ಬಂತು, ಸಿಟ್ಟು ಅವಮಾನದಿಂದ ಸುಮನ್ ಧಡಧಡ ಮೆಟ್ಟಲು ಹತ್ತಿ ಮೇಲೆ ಹೋದಳು. ಗರಬಡಿದವಳಂತೆ ಕುಳಿತಳು ಹಾಸಿಗೆ ಮೇಲೆ. ತನ್ನ ಕಿವಿಯನ್ನು ತಾನೇ ನಂಬಲಿಲ್ಲ. ಹತ್ತು ನಿಮಿಷ ಹಾಗೆ ಕುಳಿತ್ತಿದ್ದಳು. ಕೊನೆಗೆ ರೋಷ ಭುಗಿಲೆದ್ದು, ನೋವಿನಿಂದ ಅಳು ಉಕ್ಕಿ ಬಂತು. ಎದ್ದು ಬಾಗಿಲು ಹಾಕಿ ತಡೆಯಲಾರದೆ ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಳು. ಇದ್ಯಾವುದರ ಅರಿವಿಲ್ಲದೆ ಗಿರೀಶ ತನ್ನ ಕುಡಿತ ಮುಂದವರಿಸಿದ. ಸುರೇಶನ ಕಣ್ಣಿನಲ್ಲಿ ಸಮನ್ ತೇಲಾಡುತ್ತಿದ್ದಳು.

ರಾತ್ರಿಯಿಡೀ ಅತ್ತು ಸುಮನಳ ಕಣ್ಣು ಕೆಂಪಗಾದವು. ಅವಮಾನದ ಮೇಲೆ ಅವಮಾನ. ಏಟಿನ ಮೇಲೆ ಏಟು. ಯಾರದು ಅಸಭ್ಯ ವರ್ತನೆ?  ಹೆಂಡತಿಯನ್ನು ಕೈ ಹಿಡದು ಎಳೆಯುವಾಗ ಕುಳಿತು ನೋಡುವ ಗಂಡ. ಇದು ಯಾವ ಸಂಸ್ಕೃತಿ? ಯಾರಿಗೆ ಬೇಕು ಗಿರೀಶ ಹಾಗೂ ಅವನ ಗೆಳೆಯರ ಜೀವನಶೈಲಿ? ಹೈ ಕ್ಲಾಸ್ ಅಂತೆ ಹೈ ಕ್ಲಾಸ್. ಅಗ್ಗವಾಗಿ ನಡೆದುಕೊಳ್ಳುವುದೇ ಹೈ ಕ್ಲಾಸ್ ಏನೋ? ಆಸಭ್ಯವಾಗಿ ಡ್ರೆಸ್ ಮಾಡಿಕೊಳ್ಳುವುದು ಸಭ್ಯರ ಲಕ್ಷಣ. ಯಾರಿಗೆ ಬೇಕು ಇಂತಹ ಟೇಸ್ಟ್? ಹೆಣ್ಣು ಒಂದು ವಸ್ತು. ಬೇಟೆಯಲ್ಲಿ ಕೊಂದ ಮೃಗದ ತಲೆಯನ್ನು ಹೆಮ್ಮೆಯಿಂದ ಗೋಡೆಯ ಮೇಲೆ ಪ್ರದರ್ಶಿಸುವ ಹಾಗೆ ಒಂದು  ಟ್ರೊಫಿ.   ಹಾಗೇ ಹೆಣ್ಣೂ ಒಂದು ಟ್ರೊಫಿ. ಇವರಿಗೆಲ್ಲ ಸಮಾಜದಲ್ಲಿ ಪ್ರದರ್ಶನ ಮಾಡಲು ಒಬ್ಬ ಟ್ರೊಫಿ ವೈಫ್ ಬೇಕು. ಸ್ಟೈಲಾಗಿ ಡ್ರೆಸ್ ಮಾಡಿಕೊಂಡು ಕಿಟ್ಟಿ ಪಾರ್ಟಿ, ಕಾರ್ಡ್ಸ ಆಡ್ತಾ ಕಾಲಾಹರಣ ಮಾಡಿಕೊಂಡು, ಪಾರ್ಟಿಗಳಲ್ಲಿ ಚೆಲ್ಲು ಚೆಲ್ಲಾಗಿ ಆಡಿಕೊಂಡಿರಬೇಕು. ತಲೆಲಿ ಸಗಣಿ ತುಂಬಿದ್ರು ಸರಿ. ಒಬ್ಬರಾದ್ರೂ ಕೆಲಸ ಮಾಡೋಕ್ಕೆ ಹೋಗಲ್ಲ ಅಥವಾ ಸಮಾಜ ಸೇವೆ ಮಾಡ್ತಾರಾ ಅದರ ಅರ್ಥಾನೇ ಗೊತ್ತಿಲ್ಲ ಇವರಿಗೆ. ಗಂಡನ ಪಕ್ಕ ಒಂದು ಪ್ರದರ್ಶನದ ವಸ್ತು. ರೋಗಿ ಬಯಿಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ. ಅವರ ಗಂಡಸರಿಗೆ ಹೆಣ್ಣು ಒಂದು ಭೋಗದ ವಸ್ತು, ಒಬ್ಬ ಮೆದುಳಿಲ್ಲದ ಮಣ್ಣಿನ ಬೊಂಬೆ ಬೇಕು. ಆ ಗಂಡಸರು ಬಯಸಿದ ಹಾಗೆ ಅವರ ಹೆಂಡತಿಯರು ತಮ್ಮನ್ನು ರೂಪಿಸಿಕೊಂಡಿದ್ದಾರೆ. ಥೂ. ಇಂತಹ ಅಸಹ್ಯ ವರ್ತನೆ ಕಲಿಯೋಕ್ಕೆ ನಾನು ಫಿನಿಶಿಂಗ್ ಸ್ಕೂಲ್‍ಗೆ ಬೇರೆ ಹೋಗಬೇಕು. ಫಿನಿಶಿಂಗ್ ಸ್ಕೂಲ್ ಬೇಕಾಗಿರೋದು ನನಗಲ್ಲ ಅವರಿಗೆ. ನನಗಲ್ಲ ಸಂಸ್ಕಾರ, ಸಂಸ್ಕೃತಿಯ ಪಾಠ ಬೇಕಾಗಿರೋದು ಅವರಿಗೆ. ಅಷ್ಟರ ಮೇಲೆ ಅವನ್ಯಾರು ಸುರೇಶ ನಂಗೆ ಹೇಳೋಕ್ಕೆ. ಯಾರು ಯಾವ ಮಿತಿಯಲ್ಲಿರಬೇಕೋ ಅದನ್ನು ಅವನು ಮೊದಲು ಕಲಿಲಿ. ಸುಮನಳ ಯೋಚನೆ ನಡದೇ ಇತ್ತು. “ಧಿಸ್ ಮ್ಯಾರೇಜ್ ಈಸ್ ನಾಟ್ ವರ್ಕಿಂಗ್  ಸುಮನ್” ಅವಳಿಗೆ ದಿಡೀರನೆ ಈ ಯೋಚನೆ ಬಂದದ್ದೇ ತಡ ಅಳು ಇನ್ನಷ್ಟು ಜೋರಾಯಿತು. ಎಲ್ಲಾ ಬಿಟ್ಟು ಅಮ್ಮನ ಮನೆಗೆ ಹೋಗಿ ಬಿಡಲೆ ಎಂದು ಯೋಚಿಸಿದಳು. ಮನಸ್ಸಿನ ಮೂಲೆಯಲ್ಲಿ ಒಂದು ಚಿಕ್ಕ ಆಸೆ. ಮಗು ಆಗುವುದೇನೋ. ಅವಾಗ ಎಲ್ಲಾ ಸರಿ ಹೋಗುವುದೇನೋ. ಇದೇ ಗುಂಗಿನಲ್ಲಿ ಬೆಳಗಿನ ಜಾವದಲ್ಲಿ ಸುಮನ್ ನಿದ್ರೆಗೆ ಶರಣಾದಳು.

ಪುಟ್ಟ ಮಗುವಿನ ಹಿಂದೆ ಸುಮನ್ ಓಡುತ್ತಿದ್ದಳು. ಅದು ತಿರುಗಿ ಸುಮನ್ ಬರ್ತಾ ಇದಾಳೆ ಎಂದು ಖಚಿತ ಪಡಿಸಿಕೊಂಡು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಗುತ್ತ ಮುಂದೆ ಓಡಿತು. ಗಕ್ಕನೆ ಸುಮನ್ ಎದ್ದು ಗಡಿಯಾರ ನೋಡಿದಳು. ಗಂಟೆ ಎಂಟು. ಕಿವಿ ಆಲಿಸಿ ಕೇಳಿದಳು. ಬಾಗಿಲು ತೆರದು ಹಾಕಿದ ಶಬ್ದ. ಕಿಟಕಿ ಪರದೆ ಸರಿಸಿ ನೋಡಿದಳು. ರಂಗಪ್ಪ ಹಲ್ಲು ಗಿಂಜುತ್ತ ಸೊಟಕೇಸನ್ನು ಕಾರಿನ ಡಿಕ್ಕಿಯಲ್ಲಿ ಇಡುತ್ತಿದ್ದ. ಸುರೇಶ ಅವನ ಕೈಗೆ ದುಡ್ಡು ಇತ್ತು ಕಾರು ಹತ್ತಿದ. ಗಿರೀಶ ಕಾರು ಸ್ಟಾರ್ಟ್ ಮಾಡಿದ. ಪೀಡೆ ತೊಲಗಿತು ಎಂದಕೊಂಡು ಸುಮನ್ ಬಾಗಿಲು ತೆರೆದು ಆಚೆ ಬಂದಳು. ರಂಗಪ್ಪ ಹಾಗೂ ವಿಜಯ ಅವಳನ್ನು ನೋಡಿ ಮುಸಿ ಮುಸಿ ನಕ್ಕಿದ್ದು ಕಾಣಿಸಿದರೂ ಅದನ್ನು ಅಲಕ್ಷಸಿ  ತಿಂಡಿ ಮಾಡಿ ತಟ್ಟೆಯಲ್ಲಿ ಹಾಕಿಕೊಂಡು ಟಾಮಿಯನ್ನು ಕರೆದುಕೊಂಡು ಮೇಲಕ್ಕೆ ಬಂದಳು. ತಿಂಡಿ ತಟ್ಟೆ ಮುಂದೆ ಇಟ್ಟಕೊಂಡು ಅಳುತ್ತ ಕುಳಿತ ಸುಮನಳನ್ನು ಟಾಮಿ ದುಃಖದಿಂದ ನೋಡುತ್ತ ಕುಳಿತ್ತಿತ್ತು. ಸುಮನ್ ಬಗ್ಗಿ ಅದನ್ನು ನೇವರಿಸಿದಾಗ ತೆವಳುತ್ತ ಅವಳ ಹತ್ತಿರ ಬಂದು ಅವಳ ಕಾಲು ನೆಕ್ಕಿ ಅವಳ ಕಾಲ ಮೇಲೆ ತಲೆಯಿಟ್ಟು ಮಲಗಿತು ಅಳಬೇಡ ಸುಮನ್ ಎನ್ನುವಂತೆ.

“ಬಡೂರ ಮನೆ ಹೆಣ್ಣು, ನಮ್ಮ ಲೇಫ್‌ಗೆ ಸರಿ ಹೋಗಲ್ಲ. ಹಳ್ಳಿ ಗುಗ್ಗು” ಗಾಳಿಯಲ್ಲಿ ಮಾತಿನ ಜೊತೆ ನಗು ತೇಲಿ ಬಂದಾಗ ಎದ್ದು ಕಿಟಕಿಯ ಹೊರಗೆ ನೋಡಿದಳು. ಟಾಮಿ ಮನೆಯ ಪಕ್ಕ ವಿಜಯ ತನ್ನ ಗೆಳತಿಯರಿಗೆ ನಡೆದ ಘಟನೆಯನ್ನು ಹೇಳುತ್ತ ನಗುತ್ತಿದ್ದಳು. ಸರಸರನೆ ಕೆಳಗೆ ಇಳಿದು ಬಾಗಿಲು ತೆಗೆದು “ವಿಜಯಾ, ವಿಜಯಾ” ಸಿಟ್ಟಿನಲ್ಲಿ ಕೊಗಿದಳು. ಅವಳನ್ನು ನೋಡಿ ಬೇರೆ ಹೆಂಗಸರು ತಲೆ ತಗ್ಗಿಸಿ ಜಾಗ ಖಾಲಿ ಮಾಡಿದರು. ವಿಜಯ ತಲೆ ತಗ್ಗಿಸುತ್ತ ಮನೆಯೊಳಗೆ ಬಂದಳು. ಬಾಗಿಲು ಹಾಕಿ “ವಿಜಯ ತೊಗೋ ಎರಡು ತಿಂಗಳ ಸಂಬಳ. ನಾಳೆಯಿಂದ ನೀನು  ಬರೋದು ಬೇಡ” ಪರ್ಸಿನಿಂದ ದುಡ್ಡು ತೆಗೆದು ಅವಳ ಕೈಯಲ್ಲಿಟ್ಟು ಬಾಗಿಲು ತೆರೆದು ನಿಂತಳು ಸುಮನ್. “ಹಳ್ಳಿ ಗುಗ್ಗು ಯಾರಿಗ ಬೇಕು ನಿನ್ನ ಸಹವಾಸ” ಎನ್ನುವ ಮುಖಚರ್ಯೆ ಹೊತ್ತ ವಿಜಯ ಹೊರ ನಡೆದಳು. ಎಲ್ಲವನ್ನು ನೋಡುತ್ತಿದ್ದ ರಂಗಪ್ಪ ಬಾಲ ಮುದುರಿಕೊಂಡು ಅಡುಗೆಮನೆ ಸೇರಿದ.

ವಿಜಯನ ಮೇಲಿನ ಸಿಟ್ಟಿಗಿಂತ ಗಿರೀಶನ ಮೇಲೆ ಸಿಟ್ಟು ಜಾಸ್ತಿ ಆಯಿತು. ಬೇಲಿಯೇ ಎದ್ದು ಹೊಲ ಮೇದರೇ ಇನ್ನೇನು ಆಗುವುದು. ಸಂಜೆ ಗಿರೀಶ ಬಂದಾಗ ರಂಗಪ್ಪ ಬಣ್ಣ ಕಟ್ಟಿ ವರದಿ ಒಪ್ಪಿಸುವುದು ಸುಮನ್ ಕಿವಿಗೆ ಬಿತ್ತು. ಅವಳೇನು ತನ್ನ ಸಮರ್ಥನೆ ಮಾಡಲು ಕೆಳಗೆ ಬರಲಿಲ್ಲ. ಗಿರೀಶಗೆ ಸುರೇಶ ಮುಂದೆ ತನ್ನ ಹೆಂಡತಿ ಪ್ರದರ್ಶಿಸಿದ ಅನಾಗರಿಕ ವರ್ತನೆಯೇ ತಲೆ ತಿನ್ನುತ್ತಿತ್ತು. ಸುಮ್ಮನೆ ಕೇಳಿಸಿಕೊಂಡ. ಮಾರನೆಯ ದಿನ ರಂಗಪ್ಪ ವಿಜಯ ಮಾಡ ಬೇಕಿದ್ದ ಕೆಲಸ ಸಿಟ್ಟಿನಿಂದ ತಾನೇ ಮಾಡುತ್ತಿದ್ದಾಗ ಸುಮನ್ ಅವನ್ನನ್ನು ನಿರ್ಲಕ್ಷಿಸಿದಳು. ಹದಿನೈದು ದಿನದ ನಂತರ ತರಕಾರಿ ಮಾರುವವಳು ತನ್ನ ನಾದಿನಿಗೆ ಕೆಲಸಬೇಕು ಅಂತ ಬೇಡಿದಾಗ ಅವಳನ್ನ ನೇಮಿಸಿದಳು ಸುಮನ್.

ತಿಂಗಳಾಗಿತ್ತು ಸುರೇಶ ಬಂದು ಹೋಗಿ. ಶೀತಲ ಯುದ್ದ ನಡಿದೇ ಇತ್ತು ಸುಮನ್ ಹಾಗೂ ಗಿರೀಶ ಮಧ್ಯ.

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=38254

(ಮುಂದುವರಿಯುವುದು)

-ಸುಚೇತಾ ಗೌತಮ್.‌

10 Responses

  1. Prarthana says:

    Waiting for the next episode.. very interesting turn of events.. Wonder how long Suman has patience ..
    Very good writing Sucheta..keeps me engrossed and eagerly waiting to read more…

  2. ಈ ದಂಪತಿಗಳ ಸಾಂಗತ್ಯ …ಯಾವ ಹಂತ ಮುಟ್ಟುತ್ತದೆಯೋ ದೇವರೇ ಬಲ್ಲ… ಕುತೂಹಲ ಹುಟ್ಟಿಸುತ್ತಾ ಸಾಗುತ್ತಿದೆ..ಕಾದಂಬರಿ..

  3. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ, ಮುಂದೇನು ಅನ್ನುವ ಕುತೂಹಲ.

  4. Padmini Hegde says:

    ಕಥೆಯ ನಡಿಗೆ ಚೆನ್ನಾಗಿದೆ

  5. ಶಂಕರಿ ಶರ್ಮ says:

    ಸೊಗಸಾದ ಸರಳ, ಸುಂದರ ಶೈಲಿಯ ಕಾದಂಬರಿ ‘ಸುಮನ್ ` ಬಹಳ ಕುತೂಹಲಕಾರಿಯಾಗಿದೆ. ..ಧನ್ಯವಾದಗಳು ಸುಚೇತಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: