ಎಲ್ಲಿ ಹೋದೆ ಗುಬ್ಬಚ್ಚಿ?
ನಾವೆಲ್ಲ ಚಿಕ್ಕವರಾಗಿದ್ದಾಗ ಗುಬ್ಬಕ್ಕ ಮತ್ತು ಕಾಗಕ್ಕ ಕಥೆಯನ್ನು ಅದೆಷ್ಟು ಬಾರಿ ಕೇಳಿ ಆನಂದಿಸಿದ್ದೆವು. ಮುಗ್ಧ ಮನಸ್ಸಿಗೆ ಬಹಳ ಆಪ್ಯಾಯಮಾನವಾಗಿತ್ತಲ್ಲವೇ ಈ ಕಥೆ? ಈಗ ಎಲ್ಲಿ ಹೋದವು ಗುಬ್ಬಚ್ಚಿಗಳು? ನಗರಗಳಲ್ಲಿ ಗುಬ್ಬಚ್ಚಿ ಕಾಣುತ್ತಿಲ್ಲ. ಅಲ್ಲಿಯ ಪರಿಸರ ಅದಕ್ಕೆ ಹೊಂದುತ್ತಿಲ್ಲ. ಹಳ್ಳಿಗಳ ಕಡೆ ಗುಬ್ಬಿಗಳು ಇನ್ನೂ ಇವೆ. ಇದೇ ಸಮಾಧಾನಕರ ವಿಷಯ. ಈಗ ನಗರದಲ್ಲೇ ಇರುವ ಮಕ್ಕಳು, ಬಹುಮಹಡಿ ಕಟ್ಟಡದಲ್ಲಿರುವವರು ಗುಬ್ಬಚ್ಚಿಗಳನ್ನು ನೋಡಿದ್ದಾರೋ ಇಲ್ಲವೋ?
ಮಾರ್ಚ್ 20 ರಂದು ಪ್ರತಿವರ್ಷ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುತ್ತೇವೆ. ಈ ಪುಟ್ಟ ಚುರುಕಿನ ಪಕ್ಷಿ ಎಲ್ಲರಿಗೂ ಇಷ್ಟವಾಗುತ್ತದೆ. ನಾವು ಚಿಕ್ಕಂದಿನಲ್ಲಿ ಮನೆಯಲ್ಲಿ ಗೂಡು ಕಟ್ಟುವ, ಭತ್ತ ಮತ್ತು ಅಕ್ಕಿಯನ್ನು ಹೆಕ್ಕಿಕೊಂಡು ಭರ್ರೆಂದು ಹಾರುವ ಗುಬ್ಬಚ್ಚಿಗಳನ್ನು ನೋಡುವುದು ಸಾಮಾನ್ಯವಾಗಿತ್ತು. ಅವರೆಕಾಯನ್ನು ಬಿಡಿಸುವಾಗ ಸಿಕ್ಕುವ ಹುಳಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹೋಗುತ್ತಿತ್ತು. ಆದರೆ ಈಗ ಈ ನೋಟಗಳು ಸಿಕ್ಕುವುದೇ ಇಲ್ಲ. ಅಕ್ಕಿಯ ಮಿಷನ್‌ಗಳ ಹತ್ತಿರವೂ ಗುಬ್ಬಚ್ಚಿಗಳ ಹಿಂಡೇ ಇರುತ್ತಿತ್ತು.
ಆಂಗ್ಲ ಭಾಷೆಯಲ್ಲಿ ಹೌಸ್ ಸ್ಪಾರೋ (House sparrow) ಎಂದು ಗುಬ್ಬಚ್ಚಿ ಕರೆಸಿಕೊಳ್ಳುತ್ತದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಹಲವು ರೀತಿಯ ಗುಬ್ಬಚ್ಚಿಗಳು ಕಾಣಬರುತ್ತವೆ. ನಾವು ನೋಡುವ ಗುಬ್ಬಚ್ಚಿಯ ವೈಜ್ಞಾನಿಕ ಹೆಸರು ಪ್ಯಾಸ್ಸರ್ ಡೊಮೆಸ್ಟಿಕಸ್ (Passer domesticus) ಸಾಧಾರಣವಾಗಿ 16 ಸೆಂ.ಮೀ ಉದ್ದ ಮತ್ತು24-39.5 ಗ್ರಾಂ. ತೂಕವಿರುತ್ತದೆ. ಹೆಣ್ಣು ಗುಬ್ಬಚ್ಚಿ ಮತ್ತು ಎಳೆಯ ಗುಬ್ಬಿಗಳು ತಿಳಿಕಂದು ಮತ್ತು ಬೂದು ಬಣ್ಣದಲ್ಲಿರುತ್ತವೆ. ಗಂಡು ಗುಬ್ಬಚ್ಚಿ ಅಚ್ಚ ಕಪ್ಪು, ಬಿಳಿ ಮತ್ತು ಕಂದು ಬಣ್ಣದ ಗುರುತುಗಳನ್ನು ಹೊಂದಿರುತ್ತದೆ. ಗುಬ್ಬಚ್ಚಿ ಮಾನವನ ವಾಸಸ್ಥಳದ ಹತ್ತಿರವೇ ತಾನೂ ಇರುತ್ತದೆ. ದಟ್ಟಕಾಡು, ಹುಲ್ಲುಗಾವಲು ಮತ್ತು ಮರುಭೂಮಿಯಲ್ಲಿರುವುದಿಲ್ಲ. ಇದರ ಆಹಾರ ಮುಖ್ಯವಾಗಿ ಕಾಳುಕಡ್ಡಿಗಳು, ಜೊತೆಗೆ ಕೀಟಗಳನ್ನು ಭಕ್ಷಿಸುತ್ತದೆ. ಗುಬ್ಬಚ್ಚಿಯನ್ನು ಹೊಂಚುಹಾಕಿ ಹಿಡಿಯುವ ಪ್ರಾಣಿಗಳೆಂದರೆ ಬೆಕ್ಕು, ಹದ್ದು ಮತ್ತು ಇತರ ಬೇಟೆಯಾಡುವ ಸಣ್ಣ ಪ್ರಾಣಿಗಳು. ಗುಬ್ಬಚ್ಚಿಯು ಐಯುಸಿಎನ್ ಅಳಿವಿನಂಚಿನ ಪಟ್ಟಿಯಲ್ಲಿ ಆತಂಕಕಾರಿ ಎಂದೇನೂ ಇಲ್ಲ. ಆದರೆ ಕೆಲವು ಸ್ಥಳಗಳಿಂದ ವಿಶೇಷವಾಗಿ ದೊಡ್ಡ ನಗರಗಳಿಂದ ಕಾಣೆಯಾಗಿದೆ. ಗುಬ್ಬಚ್ಚಿಗಳು ಗುಂಪಿನಲ್ಲಿ ವಾಸಿಸುತ್ತವೆ. ಅವುಗಳ ಸಂಭ್ರಮದ ಚೀರ್ಪ್-ಚೀರ್ಪ್ ಮತ್ತು ಚಟ-ಪಟ ಕೂಗು ಕೇಳುವುದಕ್ಕೆ ಚಂದ.
ಗುಬ್ಬಚ್ಚಿ ಮೊಟ್ಟೆ ಚಿಕ್ಕದು, ಮೇಲೆ ಚುಕ್ಕೆಗಳಿರುತ್ತದೆ. 10-14 ದಿನಗಳಲ್ಲಿ ಮರಿ ಆಚೆ ಬರುತ್ತದೆ. ಗೂಡಿನಲ್ಲಿ ಇನ್ನೂ ಹದಿನೈದು ದಿನಗಳಿರುತ್ತವೆ. ನಮ್ಮ ದೇಶದ ನಗರಗಳಲ್ಲಿ ಗುಬ್ಬಚ್ಚಿ ಕಾಣೆಯಾಗುತ್ತಿರುವುದು ಖೇದದ ಸಂಗತಿ. ಭಾರತದಲ್ಲಿ 5 ರೀತಿಯ ಗುಬ್ಬಿಗಳಿವೆ. ದೇಶದ ಉದ್ದಗಲಕ್ಕೂ ಕಾಣಬರುತ್ತವೆ. ಪಶ್ಚಿಮ ಹಿಮಾಲಯದ ಕಡೆ ಯೂರೋಪ್ ಗುಬ್ಬಚ್ಚಿ ಕಾಣುತ್ತದೆ.
ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಕಾರಣಗಳೇನು?
ಗುಬ್ಬಚ್ಚಿಗಳಿಗೆ ಬೇಕಾದ ಆಹಾರ ಸಿಕ್ಕುತ್ತಿಲ್ಲ. ಪರಿಸರ ಮಾಲಿನ್ಯ ಮತ್ತೊಂದು ಕಾರಣ. ಗುಬ್ಬಚ್ಚಿಗಳು ಮೊಟ್ಟೆ ಇಡಲು ಅನುಕೂಲವಾದ ಸ್ಥಿತಿ ಇಲ್ಲ. ಮೊದಲು ಹೆಂಚಿನ ಮನೆಯಲ್ಲಿ ಮೇಲೆ ಗೂಡುಕಟ್ಟಲು ಅವುಗಳಿಗೆ ಅನುಕೂಲವಾಗಿತ್ತು. ನಗರೀಕರಣವು ತಾರಸಿಗಳ ಕೆಳಗೆ ಗವಾಕ್ಷಿಗಳೇ ಇಲ್ಲದಂತೆ ಮಾಡಿ, ಹವಾ ನಿಯಂತ್ರಕಗಳನ್ನು ಅಳವಡಿಸುವಂತೆ ಮಾಡಿದೆ. ಮೊಬೈಲ್ ಟವರ್‌ಗಳ ವಿಕಿರಣಗಳು ಇನ್ನೊಂದು ಕಾರಣ. ಕೀಟನಾಶಕಗಳ ಉಪಯೋಗ ಮತ್ತು ವಾಯುಮಾಲಿನ್ಯದ ವಿಷಾನಿಲಗಳು ಮತ್ತು ಜಾಗತಿಕ ತಾಪಮಾನ ಏರಿಕೆ ಇನ್ನಿತರ ಕಾರಣಗಳು. ಬಹುಮಹಡಿ ಕಟ್ಟಡಗಳಲ್ಲಿ ಕಿಟಕಿಗಳಿಗೆ ಗಾಜುಗಳನ್ನು ಅಳವಡಿಸುತ್ತಾರೆ. ಇದು ಬೆಳಕನ್ನು ಪ್ರತಿಫಲಿಸುತ್ತದೆ, ಪಕ್ಷಿಗಳಿಗೆ ಗೊಂದಲವುಂಟು ಮಾಡುತ್ತದೆ. ಅವು ಗಾಜಿಗೆ ಡಿಕ್ಕಿ ಹೊಡೆದು ಸಾಯಬಹುದು.
ದೆಹಲಿಯಲ್ಲಿ ಒಂದು ವರ್ಷದಿಂದ ಗುಬ್ಬಚ್ಚಿಗಳ ಸಂಖ್ಯೆ ಸ್ವಲ್ಪ ಜಾಸ್ತಿಯಾಗಿದೆಯಂತೆ ಇದು ಆಶಾದಾಯಕ ಸುದ್ದಿ (ಮಾರ್ಚ್ 2021, ಹಿಂದೂಸ್ತಾನ್ ಟೈಮ್ಸ್) ನಾನು ಕೆಲವು ವರ್ಷಗಳ ಹಿಂದೆ ದೆಹಲಿಯ ಸ್ವಾಮಿ ನಾರಾಯಣ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಒಳ್ಳೆಯ ಸಂಖ್ಯೆಯಲ್ಲಿ ಗುಬ್ಬಚ್ಚಿಗಳನ್ನು ನೋಡಿದೆ.
ಗುಬ್ಬಚ್ಚಿಯನ್ನು ಹೇಗೆ ಉಳಿಸಬಹುದು?
ಗುಬ್ಬಚ್ಚಿಯನ್ನು ಸ್ನೇಹದಿಂದ ನೋಡಿ. ಶುದ್ಧ ನೀರು ಮತ್ತು ಕಾಳುಗಳನ್ನು ಇಡಿ. ಗೂಡುಗಳನ್ನು ಮಾಡಿ ಸ್ವಲ್ಪ ಮೇಲೆ ತಾರಸಿಯ ಹತ್ತಿರ ಇಡಬಹುದು. ಪ್ಲಾಸ್ಟಿಕ್ ಕ್ಯಾನ್ ಮತ್ತು ಪಿ.ವಿ.ಸಿ ಪೈಪ್‌ನಲ್ಲೂ ತೂತು ಕೊರೆದು ಇಡಬಹುದು.
ಹತ್ತಿರದಲ್ಲೇ ಮರಗಳಿದ್ದರೆ ಒಳ್ಳೆಯದು. ನಿಮ್ಮ ತೋಟದಲ್ಲಿ ಕೀಟನಾಶಕ ಮತ್ತು ಇತರ ಔಷಧಿಗಳನ್ನು ಉಪಯೋಗಿಸಬೇಡಿ. ಮಾನವನ ಕಾಳಜಿ ಗುಬ್ಬಚ್ಚಿ ಉಳಿಸುವುದರಲ್ಲಿ ಬಹಳ ಅಗತ್ಯ.
ಕರ್ನಾಟಕದಲ್ಲಿ ಗುಬ್ಬಚ್ಚಿ ಪ್ರೇಮಿಗಳು
ಹೌದು. ಅನೇಕ ಗುಬ್ಬಚ್ಚಿ ಪ್ರೇಮಿಗಳು ನಮ್ಮಲ್ಲಿದ್ದಾರೆ. ಮೈಸೂರಿನಲ್ಲಿರುವ ಪರಿಸರ ಕಾಳಜಿ ತೋರುವ ಚೈತ್ರ ಫೌಂಡೇಶನ್ (ರಿ.,) ಇಬ್ಬರು ಗುಬ್ಬಚ್ಚಿ ಪ್ರೇಮಿಗಳನ್ನು 2016 ಮತ್ತು 2021ರಲ್ಲಿ ಸನ್ಮಾನಿಸಿದೆ. ಚಿಕ್ಕಮಗಳೂರಿನ ಹಿರೇಕೊಳಲು ಗ್ರಾಮದ ಚಂದ್ರು ಅವರು ನೂರಾರು ಗುಬ್ಬಚ್ಚಿಗಳಿಗೆ ಆಶ್ರಯ ನೀಡಿ ಅವುಗಳ ಸಂಖ್ಯೆ ಜಾಸ್ತಿಯಾಗುವಂತೆ ಮಾಡಿದ್ದಾರೆ. ಇವರು ಅಕ್ಕಿ ಮತ್ತು ಕಾಳುಗಳನ್ನು ನೀಡುತ್ತಾರೆ. ಗೂಡು ಕಟ್ಟಲು ಸಹಾಯವಾಗುವಂತೆ ಪ್ಲಾಸ್ಟಿಕ್ ಕ್ಯಾನ್‌ಗಳಿಗೆ ದೊಡ್ಡ ರಂಧ್ರಗಳನ್ನು ಮಾಡಿ ಮೇಲೆ ನೇತುಹಾಕುತ್ತಾರೆ. ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಜಯರಾಮರಾವ್‌ರವರು ತಮ್ಮ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಿ ಅವುಗಳ ಸಂಖ್ಯೆ ಜಾಸ್ತಿಯಾಗುವಂತೆ ಮಾಡಿದ್ದಾರೆ. ಜಳಕ ಮಾಡಲು ಸೋಪಾನಗಳು ಮತ್ತು ಅದರ ಮೇಲೆ ಜುಳು ಜುಳು ಹರಿಯುವ ನೀರು, ಕಾಳುಗಳಿಗೆ ದೊಡ್ಡ ಫೀಡರ್, ಇಟ್ಟಿದ್ದಾರೆ. ಮನೆಯ ಸುತ್ತ ಮತ್ತು ಮುಂದೆ ನೆರಳಲ್ಲಿ, ಮೇಲೆ ಉದ್ದಕ್ಕೂ ಪಿ.ವಿ.ಸಿ ಪೈಪ್‌ಗಳನ್ನು ಕಟ್ಟಿದ್ದಾರೆ. ಇವುಗಳಲ್ಲಿ ಅಲ್ಲಲ್ಲೇ ದೊಡ್ಡ ರಂಧ್ರಗಳನ್ನು ಮಾಡಿ ಗೂಡು ನಿರ್ಮಿಸಲು ಅನುಕೂಲ ಮಾಡಿದ್ದಾರೆ.
ನೀವೂ ಗುಬ್ಬಚ್ಚಿಗಳ ಸಂಖ್ಯೆ ಜಾಸ್ತಿ ಆಗಲು ಪ್ರಯತ್ನ ಮಾಡಿ. ಆಲ್ ದಿ ಬೆಸ್ಟ್.
–ಡಾ.ಎಸ್. ಸುಧಾ
ಇಲ್ಲೆಲ್ಲೂ ಇಲ್ಲದಿರುವ ಗುಬ್ಬಚ್ಚಿಗಳು ಏನೇ ಗುಬ್ಬಚ್ಚಿ ಸ್ನೇಹಿ ಪರಿಸರ, ಅನುಕೂಲ ನಿರ್ಮಿಸಿದರೂ ಬಂದಾವು ಹೇಗೆ,?
ಕರೆತರುವುದು ಎಲ್ಲಿಂದ????
ನಗರದಲ್ಲಿಲ್ಲ. ಆದರೆ ಹಳ್ಳಿಗಳಲ್ಲಿ ಉಳಿಸಿ. ಮತ್ತೆ ನಗರದಲ್ಲಿ ಅನುಕೂಲವಾಗುವಂತೆ ಮಾಡಿದರೆ ಮತ್ತೆ ಬಂದೀತು. ದೆಹಲಿಯ ಉದಾಹರಣೆ ಕೊಟ್ಟಿದೆ. ಬೇರೆ ಪಕ್ಷಿಗಳಿಗೆ ಅನುಕೂಲ ಆಗುತ್ತದೆ. ಆಶಾಭಾವ ಇರಬೇಕು.
ಮಾಹಿತಿಪೂರ್ಣ ಹಾಗೂ ಗುಬ್ಬಿಗಳ ರಕ್ಷಣೆಯ ಕುರಿತಾಗಿ ಉತ್ತಮ ಸಲಹೆಗಳನ್ನೊಳಗೊಂಡ ಬರಹ.
ನಮಸ್ಕಾರ. ವಂದನೆಗಳು ನಯನ
ಗುಬ್ಬಿ ಗುಬ್ಬಚ್ಚಿ ಮೊದಲ ನೆನಪು ನಂತರ ದಿನಗಳ ವಿದ್ಯಮಾನಗಳಿಂದ ಅವುಗಳ ಸಂಖ್ಯೆ ಅಪರೂಪವಾಗುತ್ತಿರುವುದು..ಅದಕ್ಕೆ ಕಾರಣ..
ನಮ್ಮ ಕರ್ತವ್ಯ ಎಲ್ಲವನ್ನೂ ಚಿಕ್ಕ ಲೇಖನ ದಲ್ಲಿ ಚೊಕ್ಕವಾಗಿ ಕಟ್ಟಿ ಕೊಟ್ಟಿರುವ ನಿಮಗೆ ಧನ್ಯವಾದಗಳು ಮೇಡಂ
ನಮಸ್ಕಾರ. ಒಳ್ಳೆಯ ವಿಶ್ಲೇಷಣೆ ನಾಗರತ್ನ.
ಪರಿಸರ ಕಾಳಜಿಯುಳ್ಳ ಚೆಂದದ ಬರಹ.
ಧನ್ಯವಾದಗಳು ಹೇಮಮಾಲರವರಿಗೆ. ಪರಿಸರ ಕಾಳಜಿ ನಮ್ಮ ಎಲ್ಲರ ಕರ್ತವ್ಯ ಎಂದು ಭಾವಿಸಿದ್ದೇನೆ
ಗುಬ್ಬಚ್ಚಿಗಳ ಕುರಿತಾದ ಸಕಾಲಿಕ ಲೇಖನ ಪರಿಹಾರದ ಸರಳೋಪಾಯಗಳೊಂದಿಗೆ ಮುಕ್ತಾಯಗೊಂಡಿರುವುದು ಅಭಿನಂದನೀಯ.
ಚಿಕ್ಕಂದಿನಲ್ಲಿ ಗುಬ್ಬಚ್ಚಿಗಳೊಡನೆ ಬೆಳೆದ ನೆನಪುಗಳು ಕಾಡತೊಡಗಿವೆ. ರತ್ನಾ ಮೇಡಂ ಹೇಳಿದಂತೆ ಇಲ್ಲದ ಗುಬ್ಬಚ್ಚಿಗಳನ್ನು ಉಳಿಸುವುದು ಹೇಗೆ? ನಮ್ಮ ಮನೆ ಸುತ್ತುಮುತ್ತಲು ಬೇಕಾದಷ್ಟು ಮರಗಿಡಗಳಿದ್ದರೂ ಗುಬ್ಬಚ್ಚಿ ಬಿಟ್ಟು ಬೇರೆಲ್ಲಾ ಇವೆ. ಅವುಗಳಿಗೇ ನೀರು, ಕಾಳು ಹಾಕುವೆವು. ಚಂದದ ಲೇಖನ.
Asirvadam PAKSI SEVA PRBU SEVA .- SWAMI GANESHSWAROOP. ADISHANKAR MUTT GANJAM SRIRANGAPATNA (CAMP at Coimbatore)
Respected Sudha Madam, many many thanks for making us to remember tiny Gubbachhi.
ಆಧುನಿಕತೆಯ ಆಡಂಬರದಲ್ಲಿ ಅವನತಿಯಾಗುತಿದೆ ಪಕ್ಷಿಗಳು/ /
ಗುಬ್ಬಿಗಳ ದುರ್ಸ್ತಿತಿ
ಆಧುನಿಕತೆಯ ಆಡಂಬರದಲ್ಲಿ ಅವನತಿಯಾಗುತಿದೆ ಪಕ್ಷಿಗಳು/ /
ವನಸಿರಿ ಬನಸಿರಿ ನಾಶವಾಗುತಿದೆ ಅಭಿವೃದ್ಧಿಯ ಸೋಗಿನಲ್ಲಿ/
ಆಧುನಿಕತೆಯ ಆಡಂಬರದಲ್ಲಿ ಅವನತಿಯಾಗುತಿದೆ ಪಕ್ಷಿಗಳು/
ಕಾಣೆಯಾಗುತಿದೆ ಸಹಜೀವಿಗಳು ಬೆಳವಣಿಗೆಯ ಸಬೂಬಿನಲ್ಲಿ/
ಗುಬ್ಬಿಯ ವಂಶವು ಗುಬ್ಬಿಯ ಸಂಸಾರವು ವಿರಳವಾಗುತಿದೆ/
ಮಾನವರ ನಿರ್ಲಕ್ಷತೆಯಲ್ಲಿ ಗೂಡು ಕಟ್ಟಲು ಅನುಕೂಲಗಳಿಲ್ಲ/
ಸಹಜೀವಿಗಳಾಗಿ ಜೀವಿಸುತ್ತಿದ್ದ ಗುಬ್ಬಿಗಳು ಕಾಣೆಯಾಗುತಿದೆ/
ಮನುಜರ ಅಲಕ್ಷತೆಯಲ್ಲಿ ನಿವಾಸ ಶೃಜಿಸಲು ಸೌಕರ್ಯಗಳಿಲ್ಲ/
ಬರಿ ನೆನಪಾಗಿದೆ ಗುಬ್ಬಿಗಳ ಸಮೂಹದ ಚಿಲಿಪಿಲಿ ಸಂಗೀತವು /
ಎಲ್ಲ್ಲೆಡೆ ಹಾರಡುವ ಧೃಶ್ಯ ಸಧೃಶ್ಯಗಳು ಕಲ್ಪನೆಯಾಗಿ ಉಳಿದಿದೆ/
ಬರಿ ಉಹೆಯಾಗಿದೆ ಗುಬ್ಬಿಗಳ ಗುಂಪಿನ ಅಂದ ಚಂದ ನಲಿದಾಟವು/
ಗುಬ್ಬಿಗಳ ಸಂರಕ್ಷಣೆ ಮಾನವರ ತುರ್ತಿನ ಜವಾಬ್ದಾರಿಯಾಗಿದೆ/ /