ಅವಿಸ್ಮರಣೀಯ ಅಮೆರಿಕ-ಎಳೆ 7
ಉಲ್ಟಾ…ಪಲ್ಟಾ..!!
ಪ್ರಪಂಚದ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಒಂದು ಕಾನೂನಾದರೆ, ಅಮೆರಿಕದಲ್ಲಿ ಅದು ತದ್ವಿರುದ್ಧವಾಗಿರುವುದನ್ನು ಕಾಣಬಹುದು.. ತನ್ನ ಕತ್ತೆಗೆ ಮೂರೇ ಕಾಲು ಎನ್ನುವಂತೆ. ನಮ್ಮಲ್ಲಿಯ ರಸ್ತೆ ನಿಯಮದಂತೆ, ನಡೆದಾಡುವಾಗ ಅಥವಾ ವಾಹನದಲ್ಲಿ, ರಸ್ತೆಯ ಎಡಭಾಗದಲ್ಲಿ ಹೋಗುವುದು ರೂಢಿ ತಾನೇ? ಆದರೆ ಅಲ್ಲಿ ಎಲ್ಲವೂ ಬಲಭಾಗ! ವಾಹನಗಳು ರಸ್ತೆಯ ಬಲಭಾಗದಲ್ಲಿ ಹೋಗುವುದು, ಚಾಲಕನು ಎಡಭಾಗದಲ್ಲಿರುವನು. ವಾಕಿಂಗ್ ಹೋಗುವಾಗಲೂ ಮುಂಭಾಗದವರಿಗೆ ದಾರಿ ಬಿಟ್ಟು ಸರಿಯಬೇಕಾದುದು ಬಲಭಾಗಕ್ಕೆ. ನನಗಂತೂ ಇದು ಭಾರೀ ಎಡವಟ್ಟಿನ ವಿಷಯವಾಗಿತ್ತು. ಮನೆಯಲ್ಲಿಯು ಕೂಡಾ ಇದೇ ತೊಂದರೆ..ಎಲ್ಲ ಉಲ್ಟ! ವಿದ್ಯುತ್ ಸ್ವಿಚ್ ನಮ್ಮಲ್ಲಿ ಕೆಳಗಡೆ ಮಾಡಿದರೆ ‘ಓನ್’ ಆಗುತ್ತಿದ್ದರೆ ಅಲ್ಲಿ ‘ಆಫ್’ ಆಗುತ್ತದೆ! ನನ್ನ ಮಿದುಳಿಗೆ ಇವುಗಳನ್ನು ಅರಗಿಸಿಕೊಳ್ಳಲು ಕೆಲವು ದಿನಗಳು ಬೇಕಾದವು. ಆದರೆ ಆರು ತಿಂಗಳು ಕಳೆದು ಅಲ್ಲಿಂದ ಊರಿಗೆ ಬಂದ ಬಳಿಕ ಪುನ: ಇಲ್ಲಿಯದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತೆನ್ನಿ!
ಅದಾಗ ಫೆಬ್ರವರಿ ತಿಂಗಳು…ಇನ್ನೂ ಚಳಿಗಾಲ. ರಸ್ತೆಯ ಇಕ್ಕೆಲಗಳಲ್ಲಿ ಒಂದೇ ಒಂದು ಎಲೆಯೂ ಇಲ್ಲದೆ ಬೋಳಾದ ಮರಗಳನ್ನು ಕಂಡು, ಅವು ಸತ್ತುಹೋದ ಮರಗಳೆಂದು ತಿಳಿದು, “ಅದನ್ಯಾಕೆ ಕಡಿಯದೆ ಬಿಟ್ಟಿದ್ದಾರೆ?” ಎಂದು ಮಗಳಲ್ಲಿ ಕೇಳಿದಾಗ ಅವಳು ನಕ್ಕು, “ಇನ್ನೊಂದು ತಿಂಗಳು ಕಾದು ನೋಡು ಹೇಗಾಗುವುದೆಂದು!” ಎಂದಳು. ಚಳಿಗಾಲದ ಪ್ರಾರಂಭದಲ್ಲಿ ಹೆಕ್ಟೇರ್ ಗಟ್ಟಲೆ ಪ್ರದೇಶದಲ್ಲಿ ಮರದ ಎಲೆಗಳು ವಿವಿಧ ಬಣ್ಣಗಳಿಗೆ ತಿರುಗಿ ಕಳಚಿ ಬೀಳಲು ಸಿದ್ಧವಾಗುವ ಸಮಯದಲ್ಲಿ ಅದನ್ನು ನೋಡಲೆಂದೇ ಪ್ರವಾಸಿಗರ ದಂಡು ಬರುವುದು ಸಾಮಾನ್ಯ.. ಅಷ್ಟು ಚಂದ! ಇನ್ನು ಅವುಗಳು ಉದುರಲಾರಂಭಿಸಿದರೆ, ಬಣ್ಣದೆಲೆಗಳ ಹಾಸಿಗೆ ಮರದ ಕೆಳಗೆ..ಅದರ ಅಂದದ ಪರಿಯೇ ಬೇರೆ!
ಇನ್ನು ಅಮೆರಿಕದ ಕಸದ ವಿಲೇವಾರಿಯಂತೂ ಅತ್ಯದ್ಭುತ! ಇಲ್ಲಿಕಸ ಎಲ್ಲೂ ಕಾಣದಿದ್ದರೂ ಕಸವಂತೂ ಆಗಿಯೇ ಅಗುತ್ತದಷ್ಟೆ? ಪ್ರತೀ ಮನೆಯಲ್ಲಿ ನಾಲ್ಕು ಅಡಿ ಎತ್ತರದ, ಕಪ್ಪು, ಹಸಿರು ಮತ್ತು ನೀಲಿ, ಈ ಮೂರು ಬಣ್ಣದ ಕಸದ ಡಬ್ಬಿಗಳು (Trash box) ಇರಲೇಬೇಕು. ಇವುಗಳ ಕೆಳಗಡೆಗೆ ಗಾಲಿಗಳಿರುವುದರಿಂದ ತಳ್ಳಿಕೊಂಡು ಹೋಗಬಹುದು. ಇತ್ತೀಚೆಗೆ ನಮ್ಮಲ್ಲಿಯೂ ಇಂತಹ ಡಬ್ಬಗಳು ಸಾರ್ವಜನಿಕ ಸ್ಥಳಗಳಲ್ಲಿ ಇರಿಸಿರುವುದನ್ನು ಕಾಣಬಹುದು. ನೀಲಿ ಡಬ್ಬವು ಪ್ಲಾಸ್ಟಿಕ್ ನಂತಹ ಮರುಬಳಕೆಯ ವಸ್ತುಗಳಿಗಾಗಿ ಮೀಸಲು, ಕಪ್ಪಗಿನ ಡಬ್ಬದಲ್ಲಿ ಅಡುಗೆಯ ತ್ಯಾಜ್ಯಗಳು ಮತ್ತು ಮನೆಯ ಕೈತೋಟದಲ್ಲಿ ಸಿಗುವಂತಹ ಟೊಂಗೆ, ಎಲೆ, ಹುಲ್ಲುಹಾಸಿನಲ್ಲಿ ತುಂಡರಿಸಿದ ಹುಲ್ಲು ಇತ್ಯಾದಿಗಳಿಗೆ ಹಸಿರು ಡಬ್ಬದಲ್ಲಿ ಸ್ಥಾನ. ವಾರಕ್ಕೊಂದು ದಿನ ಅವುಗಳನ್ನು ಕೊಂಡೊಯ್ಯಲು ಬರುವ ಬೃಹದಾಕಾರದ ಯಂತ್ರದ ಕಾರ್ಯ ವೈಖರಿ ವಿಶೇಷ ರೀತಿಯದು. ಅದರ ಯಾಂತ್ರಿಕ ಕೈಯಿಂದ ನಾಜೂಕಾಗಿ ಕಸವನ್ನು ಆ ಟ್ರಕ್ಕಿಗೆ ತುಂಬಿಸುವುದನ್ನು ನೋಡಲು ನನ್ನಂತಹ ಹೊಸಬರು, ಮಕ್ಕಳು ಕಾದು ಕುಳಿತಿರುವುದೂ ಮಾಮೂಲು. ಪ್ರತಿಯೊಂದು ಡಬ್ಬಕ್ಕೂ ಬೇರೆ ಬೇರೆ ವಾಹನಗಳು ಬಂದು ಖಾಲಿ ಮಾಡಿ ಸ್ವಚ್ಚಮಾಡುವುದನ್ನು ನಾನು ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದುದು ಸುಳ್ಳಲ್ಲ! ಇನ್ನು ಅಡುಗೆ ಕೋಣೆಯಲ್ಲಿ ಉಳಿಯುವ ಅನ್ನ, ಸಾಂಬಾರ್ ಇತ್ಯಾದಿಗಳನ್ನು ಅಡುಗೆಕೋಣೆಯಲ್ಲಿರುವ ಪಾತ್ರೆಗಳನ್ನು ತೊಳೆಯುವ ತೊಟ್ಟಿಯಲ್ಲಿರುವ ರಂಧ್ರಕ್ಕೆ ಹಾಕಿ, ಅದಕ್ಕಾಗಿಯೇ ಇರುವ ಸ್ವಿಚ್ ಹಾಕಿ ಜೊತೆಗೆ ನೀರು ಹಾಕಿಬಿಟ್ಟರೆ ಎಲ್ಲಾ ನುಣ್ಣಗೆ ಪುಡಿಯಾಗಿ ಎಲ್ಲಿ ಹೋಯಿತೆಂದೇ ತಿಳಿಯುವುದಿಲ್ಲ. ಎಲ್ಲೂ ಚರಂಡಿಯ ದುರ್ವಾಸನೆಯ ಸುಳಿವೇ ಇಲ್ಲ.. ಒಳಚರಂಡಿಯ ವ್ಯವಸ್ಥೆ ಅಷ್ಟು ಅಚ್ಚುಕಟ್ಟು. ಅಡುಗೆಕೋಣೆಯ ಒಂದು ನಲ್ಲಿಯನ್ನು ಎಡಬದಿಗೆ ತಿರುಗಿಸಿದರೆ ಕುಡಿಯುವ ನೀರು, ಮಧ್ಯಕ್ಕಿರಿಸಿದರೆ ಸಾದಾ ನೀರು, ಇನ್ನು ಬಲ ಬದಿಗೆ ತಿರುಗಿಸಿದರೆ ಬಿಸಿ ಬಿಸಿ ನೀರು! ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ವಾರವೇ ಬೇಕಾಯ್ತು! ಆಗಾಗ ಉಲ್ಟಾ ಪಲ್ಟಾ ತಿರುಗಿಸಿ ಕೈ ಸುಟ್ಟುಕೊಂಡದ್ದಿದೆ.
ಇಲ್ಲಿಯ ಪರಿಸರ ಅತ್ಯಂತ ಸ್ವಚ್ಛವಿರುವುದರಿಂದ ಸಹಜವಾಗಿಯೇ ಆರೋಗ್ಯದ ಬಗ್ಗೆ ಇಲ್ಲಿನವರ ಕಾಳಜಿ ಅಪಾರವಾದರೂ, ವೈದ್ಯಕೀಯ ನೆರವು ಅಥವಾ ಸವಲತ್ತುಗಳು ಮಾತ್ರ ಸಾಮಾನ್ಯ ಜನರಿಗೆ ಬಹಳ ದುಬಾರಿ! ನಮ್ಮಲ್ಲಿಯಂತೆ, ಕುಟುಂಬ ವೈದ್ಯರೆಂಬವರು ಯಾರೂ ಇರುವುದಿಲ್ಲ. ಸಣ್ಣಪುಟ್ಟ ಖಾಯಿಲೆಗಳಿಗೆ ವೈದ್ಯರನ್ನು ಭೇಟಿ ಮಾಡುವುದು ಬಹಳ ಕಷ್ಟ. ತೊಂದರೆಗಳನ್ನು ಫೋನಿನಲ್ಲಿಯೇ ಕೇಳಿಕೊಂಡು, ಅದರಲ್ಲಿಯೇ ಸಲಹೆಗಳನ್ನೂ ಕೊಡುವರು..ಅಷ್ಟೆ! ಅತ್ಯಂತ ಕ್ಲಿಷ್ಟಕರ, ಶೋಚನೀಯ ಪರಿಸ್ಥಿತಿಗಳಲ್ಲಿ ಮಾತ್ರ ವೈದ್ಯರನ್ನು ಭೇಟಿಯಾಗಬಹುದು..ಅದೂ, ಮುಂದಾಗಿ ನೋಂದಣಿ ಮಾಡಿಸಿಕೊಂಡರೆ ಮಾತ್ರ. ಪಾವತಿಸಬೇಕಾದ ಮೊತ್ತ ಎಲ್ಲವೂ ವಿಮಾ ಕಂಪೆನಿಗಳ ಮೂಲಕ ನಡೆಯುವ ವ್ಯವಹಾರ. ಸಾಕಷ್ಟು ಆರೋಗ್ಯ ವಿಮೆ ಇಲ್ಲವಾದರೆ ಅಲ್ಲಿ ಜೀವನವೇ ಕಷ್ಟಸಾಧ್ಯ. ಅಲ್ಲಿಯ ಈ ಒಂದು ವ್ಯವಸ್ಥೆಯು ಮಾತ್ರ ಬಹಳ ಕೆಟ್ಟದ್ದೆನಿಸುತ್ತದೆ. ನಮ್ಮಲ್ಲಿ ಹೆಚ್ಚೆಂದರೆ ಕೆಲವು ನೂರುಗಳಲ್ಲಿ ಆಗುವ ಬಿಲ್, ಅಲ್ಲಿ ಕೆಲವು ಸಾವಿರಗಳ ಮೇಲೆ ದಾಟುವುದು! ಮಗಳು ಹೇಳಿದ ಇನ್ನೊಂದು ವಿಷಯದಿಂದ ಇದರ ಬಗ್ಗೆ ಇನ್ನೂ ಗಂಭೀರವಾದ ಮಾಹಿತಿ ಲಭ್ಯವಾಯಿತು. ಭಾರತದಿಂದ ಅಲ್ಲಿಗೆ ಹೋಗಿದ್ದ ಕುಟುಂಬದ ಪೋಷಕರು ಅನಾರೋಗ್ಯದಿಂದ ಬಳಲಿದಾಗ, ಮಾಡಿದ ವಿಮೆಗಿಂತಲೂ ಜಾಸ್ತಿ ಖರ್ಚು ಬಿತ್ತು. ಆ ಹಣವನ್ನು ಸರಿದೂಗಿಸಲಾಗದೆ, ಕೈ ಖಾಲಿಯಾಗಿ ಪರಿಸ್ಥಿತಿ ಶೋಚನೀಯವಾಗಿತ್ತು. ಆ ಬಳಿಕ ಅಲ್ಲಿ ಕೆಲಸ ಬಿಟ್ಟು, ಕುಟುಂಬದವರೆಲ್ಲರೂ ಭಾರತಕ್ಕೆ ವಾಪಾಸಾದುದು ಅಲ್ಲಿಯ ಕಠಿಣ ಕಾನೂನು ಕ್ರಮಕ್ಕೆ ಹಿಡಿದ ಕನ್ನಡಿಯಲ್ಲದೆ ಮತ್ತೇನು!
ಮಗಳ ಹೆರಿಗೆಗಾಗಿ ಸುಸಜ್ಜಿತ ಆಸ್ಪತ್ರೆಯ ವೈದ್ಯರಲ್ಲಿ ಮುಂಚಿತವಾಗಿ ಕಾದಿರಿಸಿದ್ದರೂ, ಮಧ್ಯರಾತ್ರಿಯಲ್ಲಿ ನೋವು ಪ್ರಾರಂಭವಾದರೂ ಆಸ್ಪತ್ರೆಗೆ ಸೇರಿಸಿಕೊಳ್ಳಲು ಒಪ್ಪದಿದ್ದಾಗ ನಮ್ಮ ಧೈರ್ಯವು ಬೆಟ್ಟ ಹತ್ತಿತ್ತು. ಅಂತೂ ತಾಸು ಬಿಟ್ಟು ಹೋದಾಗಲೂ ನಮ್ಮ ಅವಸರಕ್ಕೆ ಅವರು ಸ್ಪಂದಿಸದಾಗ ನಿಸ್ಸಹಾಯಕರಾಗಿ ಬಿಟ್ಟೆವು. ಆದರೆ ಆ ಬಳಿಕ ಬಂದ ವೈದ್ಯರು ನಮಗೆ ಖಚಿತ ಮಾಹಿತಿಗಳನ್ನು ನೀಡಿ ಧೈರ್ಯ ತುಂಬಿದಾಗ ನೆಮ್ಮದಿಯಾಯ್ತೆನ್ನಿ. ಹೆರಿಗೆಯ ಬಳಿಕ ಪುಟ್ಟ ಮಗುವನ್ನು ನೋಡಲು ಬರುವವರು ಮೊದಲು ಕಡ್ಡಾಯವಾಗಿ ಸ್ಯಾನಿಟೈಸರಿನಿಂದ ಕೈ ಸ್ವಚ್ಚಗೊಳಿಸಬೇಕಿತ್ತು. ಅದನ್ನು ಆಶ್ಚರ್ಯ, ಕುತೂಹಲದಿಂದ ಗಮನಿಸುತ್ತಿದ್ದ ನಮಗೆ ಅದರ ಅವಶ್ಯಕತೆ ಈಗ ಚೆನ್ನಾಗಿ ಮನದಟ್ಪಾಗಿದೆ ಬಿಡಿ! ಮನೆಯಲ್ಲಿ ಮಗುವಿಗಾಗಿ ತೊಟ್ಟಿಲು ಕಟ್ಟಿ ತೂಗುವ ವ್ಯವಸ್ಥೆ ಇಲ್ಲದ್ದರಿಂದ ಅದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟ ಪಡಬೇಕಾಯಿತು. ಮಗುವಿನ ಜನನದ ಬಳಿಕ ಪ್ರತೀ ತಿಂಗಳು ಆಸ್ಪತ್ರೆಗೆ ಕರೆದೊಯ್ಯಬೇಕು. ಅದರ ತೂಕ, ಎತ್ತರ, ಆರೋಗ್ಯ ಎಲ್ಲವುಗಳ ವಿವರವಾದ ಮಾಹಿತಿಗಳನ್ನು ಪರಿಶೀಲಿಸಿ, ಉಚಿತ ಸಲಹೆಗಳನ್ನು ನೀಡುವರು … ಎಲ್ಲವೂ ಅತ್ಯಂತ ವ್ಯವಸ್ಥಿತ ರೀತಿಯಲ್ಲಿರುತ್ತದೆ.
ಇಲ್ಲಿಯ ಮನೆಗಳು ನೋಡಲು ಬಹಳ ಚೆನ್ನಾಗಿದ್ದರೂ, ಸ್ವಲ್ಪ ವಿಚಿತ್ರ ರೀತಿಯವು. ಮನೆಗಳು ಪೂರ್ತಿ ಮರದಿಂದಲೇ ಮಾಡಲ್ಪಡುತ್ತವೆ. ಸಾಮಾನ್ಯವಾಗಿ ವಾಸಿಸುವ ಮನೆಗಳು ಎರಡು ಅಂತಸ್ತಿಗಿಂತ ಹೆಚ್ಚು ಎತ್ತರವಿರುವುದು ಕಡಿಮೆ. ಪ್ರತಿ ಮನೆಗಳ ನಿರ್ಮಾಣದ ವೇಳೆ ಅಡಿಪಾಯಕ್ಕೆ ಮಾತ್ರ ಕಾಂಕ್ರೀಟ್ ನ್ನು ಬಳಸುವರು. ಚಳಿ ಪ್ರದೇಶವಾಗಿರುವುದರಿಂದ ವಾತಾನುಕೂಲಕ್ಕಾಗಿ ನೆಲದ ಕೆಳಗೆ ಅಡಿಭಾಗದಲ್ಲಿ ಪೂರ್ತಿ, ವಿದ್ಯುತ್ ಜೋಡಣೆ ಹಾಗೂ ರಿಪೇರಿ ಕೆಲಸಗಳಿಗಾಗಿ ಓಡಾಡಲು ಸುಮಾರು ನಾಲ್ಕು ಅಡಿಗಳಷ್ಟು ಎತ್ತರಕ್ಕೆ ಟೊಳ್ಳು ಜಾಗವನ್ನು ಇರಿಸುವರು.
ಚಳಿ ಪ್ರದೇಶವಾಗಿರುವ ಇಲ್ಲಿಯ ಅರಣ್ಯಗಳಲ್ಲಿ ಚೂಪು ಮೊನೆಯ ಎಲೆಯ ಅತ್ಯಂತ ಬಲಿಷ್ಠ ರೆಡ್ವುಡ್(Redwood) ಮರಗಳು ಹೇರಳವಾಗಿವೆ. ಆ ಮರಗಳನ್ನೇ ಯಥೇಚ್ಛವಾಗಿ ಬಳಸಲಾಗುವುದು. ನೋಡು ನೋಡುತ್ತಿದ್ದಂತೆ ತಿಂಗಳೊಳಗಾಗಿ ಎರಡಂತಸ್ತಿನ ಕಟ್ಟಡ ನಿರ್ಮಾಣಗೊಂಡು ಬಿಡುತ್ತದೆ. ಗೆದ್ದಲು ಬರದಂತೆ ಇಡೀ ಮನೆಯನ್ನೇ ರಾಸಾಯನಿಕ ಚಿಕಿತ್ಸೆಗೆ ಒಳಪಡಿಸಿ, ಅದಕ್ಕಿಡೀ ಪ್ಲಾಸ್ಟಿಕ್ ಹೊದೆಸಿ ಬಿಡುವುದು ನೋಡಲು ವಿಚಿತ್ರವಾಗಿರುತ್ತದೆ. ತಿಂಗಳ ಬಳಿಕವೇ ಮನೆಯನ್ನು ವಾಸಕ್ಕೆ ಬಿಟ್ಟುಕೊಡುವರು. ಅಲ್ಲದೆ ನಿಯಮಗಳಿಗೆ ಅನುಸಾರವಾಗಿ ನಿರ್ಮಾಣದ ಪ್ರತಿ ಹಂತದಲ್ಲೂ ಆಗಾಗ ಪರಿಣಿತರಿಂದ ಕೂಲಂಕುಷ ಪರೀಶೀಲನೆ ನಡೆಯುತ್ತಿರುತ್ತದೆ, ಹಾಗೆಯೇ ಯಾವುದೇ ಲಂಚ ವ್ಯವಹಾರವಿಲ್ಲದೆ, ಕೆಲಸ ಸರಿಯಾದ ಬಳಿಕವೇ ಪರವಾನಿಗಿ ಕೊಡಲಾಗುವುದು.
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=34705
ಮುಂದುವರಿಯುವುದು………
–ಶಂಕರಿ ಶರ್ಮ, ಪುತ್ತೂರು.
ಮನೆಯ ಒಳಗಿನ ವ್ಯವಸ್ಥೆ ಅಲ್ಲಿಗೆ ಹೊಂದಿಕೊಳ್ಳಲು ಪರದಾಡಿದ ರೀತಿ.. ಅಲ್ಲದೆ ಅಮೇರಿಕಾದ ನೀತಿ ನಿಯಮಗಳು ಸ್ವಚ್ಛ ತೆ..ಅದನ್ನು ನಮ್ಮ ದೇಶದ ನೀತಿನಯಮಗಳಿಗೆ ಹೋಲಿಕೆ.. ವೈದ್ಯಕೀಯ ಉಪಚಾರದ ಚಿಕಿತ್ಸಾ ಕ್ರಮ.. ಇವೆಲ್ಲವನ್ನು ನಮ್ಮ ಕಣ್ಣೆದುರಿಗೆ ಸೊಗಸಾಗಿ ಅನಾವರಣ ಗೊಳಿಸಿರವ ನಿಮಗೆ ಧನ್ಯವಾದಗಳು ಮೇಡಂ
ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ನಾಗರತ್ನ ಮೇಡಂ.
Nice
ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು.
ಪ್ರವಾಸಕಥನ ಕುತೂಹಲಕರವಾಗಿ ಮೂಡಿ ಬರುತ್ತಿದೆ.
ಬರಹವನ್ನು ಬಹಳ ಚಂದಕ್ಕೆ ಪ್ರಕಟಿಸಿ, ಮೆಚ್ಚಿ ಪ್ರೋತ್ಸಾಹಿಸುವ ಹೇಮಮಾಲಾ ಅವರಿಗೆ ಧನ್ಯವಾದಗಳು
ಕುತೂಹಲಕರವಾಗಿದೆ!
ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು.
ಅಮೆರಿಕ ಪ್ರವಾಸ ಕಥನದ ಪ್ರತಿ ಎಳೆಯೂ ಚೆನ್ನಾಗಿ ಮೂಡಿಬರುತ್ತಿದೆ..
ಅಮೆರಿಕಾದ ಅನುಭವಕಥನ ಚೆನ್ನಾಗಿ ಮೂಡಿ ಬರುತ್ತಿದೆ
ಚೆನ್ನಾಗಿದೆ ಅಮೇರಿಕಾ ಪ್ರವಾಸ ಕಥನ ಮೇಡಮ್
ತುಂಬ ಸ್ವಾರಸ್ಯಕರ ನಿರೂಪಣೆ