ಧಾರ್ಮಿಕ ಪುಣ್ಯಕ್ಷೇತ್ರ “ಶ್ರೀ ಕೂಡಲಿ”
“ತುಂಗಾ ಪಾನಂ, ಗಂಗಾಸ್ನಾನಂ” ಅಂತಾರೆ. ನಿಜ ಕಾಶಿಗಿಂತಲೂ ಗುಲಗಂಜಿಯಷ್ಟು ಪುಣ್ಯಪ್ರಾಪ್ತಿಯಾಗುವ ಕ್ಷೇತ್ರ ಈ ಕೂಡಲಿ. ಹೆಸರೇ ಸೂಚಿಸುವಂತೆ ತುಂಗ-ಭದ್ರಾ ನದಿಗಳು ಸಂಗಮವಾಗಿರುವ ಪವಿತ್ರ ಕ್ಷೇತ್ರ ಈ “ಕೂಡಲಿ” ಎಂಬ ಊರು. ನದಿಯ ಎರಡೂ ದಂಡೆಯ ಮೇಲೆ ಕಣ್ಣಾಡಿಸಿದರೆ ಹಸಿರ ಸಿರಿಯ, ಗಿರಿ ಪಂಕ್ತಿಗಳ ಸಾಲು ಸಾಲು. ನದಿಯ ಜುಳು ಜುಳು ಕಲರವ ಮನಸ್ಸಿಗೆ ಒಂದು ರೀತಿಯ ಆಹ್ಲಾದವನ್ನು ತರುತ್ತದೆ.
1. ರಾಮೇಶ್ವರ ದೇವಾಲಯ:-
ಇದು ಹೊಯ್ಸಳ ಶೈಲಿಯ ದೇವಾಲಯವಾಗಿದೆ ಮತ್ತು ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಗೆ ಸೇರಿದೆ.ಅಲ್ಲಿ ಶ್ರೀ ರಾಮೇಶ್ವರ, ಶ್ರೀ ಶಕ್ತಿ ಗಣಪತಿ, ಶ್ರೀ ಚಾಮುಂಡೇಶ್ವರಿಯ ವಿಗ್ರಹಗಳಿವೆ. ಶ್ರೀ ರಾಮೇಶ್ವರ ದಲ್ಲಿರುವ ಲಿಂಗವನ್ನು ಶ್ರೀ ರಾಮನೇ ಬಂದು ಪ್ರತಿಷ್ಠೆ ಮಾಡಿದನೆಂಬ ಪ್ರತೀತಿ ಇದೆ.ಶ್ರೀರಾಮನು ಪಟ್ಟಾಭಿಷೇಕಾನಂತರ ಸಂತೋಷದಿಂದ ರಾಜ್ಯವಾಳುತ್ತಿರಲಾಗಿ ಒಮ್ಮೆ ಉದ್ಯಾನದ ಕಡೆ ನಡೆದು ಹೋಗುತ್ತಿರುವಾಗ ಅವನನ್ನು ಎರಡು ನೆರಳಿನ ಆಕ್ಳತಿಗಳು ಅನುಸರಿಸಿ ಬರುತ್ತಿದ್ದವಂತೆ..ಒಂದು ರಾಮನ ನೆರಳು ಇನ್ನೊಂದು ಕಪಿಯ ಆಕೃತಿಯ ನೆರಳು ಇದನ್ನು ಮುನಿಗಳಲ್ಲಿ ವಿಚಾರಿಸಲಾಗಿ, ಆ ನೆರಳು ವಾಲಿಯದ್ದು. ಪ್ರೇತವಾಗಿ ನಿನ್ನನ್ನು ಹಿಂಬಾಲಿಸುತ್ತಿದೆ. ಅದರಿಂದ ಮುಕ್ತಿ ಹೊಂದ ಬೇಕಾದರೆ ತುಂಗಭದ್ರಾ ನದಿಯ ಸಂಗಮ ಕ್ಷೇತ್ರದಲ್ಲಿ ಶಿವಲಿಂಗ ಸ್ಥಾಪನೆ ಮಾಡಿದರೆ ವಾಲಿಯ ಆತ್ಮಕ್ಕೆ ಮುಕ್ತಿ ದೊರಕುತ್ತದೆ ಎಂದರಂತೆ.ಅದರಂತೆಯೇ ಶ್ರೀ ರಾಮನು ಇಲ್ಲಿ ಸ್ನಾನ ಮಾಡಿ ಸ್ವತಃ ತಾನೇ ಶಿವಲಿಂಗ ಪ್ರತಿಷ್ಟಾಪಿಸಿ ಶ್ರದ್ಧ ಭಕ್ತಿಗಳಿಂದ ಪೂಜಿಸಿದನಂತೆ.
ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನು ಶ್ರೀವಿಷ್ಣುವಿಗೆ ಸಂಬಂಧಿಸಿದ ಮಹಾಮಂತ್ರೋಪದೇಶವನ್ನು ಪಡೆದು ಅದರ ಪುನಶ್ಚರಣೆಯಿಂದ ವಿಷ್ಣುಸಾಯುಜ್ಯ ಪಡೆಯಬೇಕೆಂಬ ಹಂಬಲವುಂಟಾಗಿ “ಗಾಲವ” ಋಷಿಗಳ ಆಶ್ರಮಕ್ಕೆ ಬರುತ್ತಾನೆ.ಅಲ್ಲಿ ತನ್ನ ಮನದಿಂಗಿತವನ್ನು ತಿಳಿಸುತ್ತಾನೆ. ಆಗ ಗಾಲವ ಋಷಿಗಳು , “ದ್ವಾತ್ರಿಂಶದ್ವರ್ಣ” ದಿಂದ ಕೂಡಿದ ಶ್ರೀವಿಷ್ಣುವಿನ ಮೂಲಮಂತ್ರವನ್ನು ಉಪದೇಶಿಸಿ ” ಶ್ರೀ ಲಕ್ಷ್ಮೀ ನರಸಿಂಹನೇ” ಇದರ ದೇವತೆ ಎಂದು ವಿವರಿಸಿ ಹರಿಹರ ಸಾನಿಧ್ಯದಿಂದ ಬ್ರಹ್ಮತೀರ್ಥ,ವಿಷ್ಣುತೀರ್ಥ ಮುಂತಾದ ಪವಿತ್ರ ತೀರ್ಥಗಳಿಂದ ಪುನೀತವಾಗಿರುವ ತುಂಗಭದ್ರಾ ಸಂಗಮ ಕ್ಷೇತ್ರದಲ್ಲಿ ಈ ಮಂತ್ರ ಪುರಶ್ಚರಣೆ ಮಾಡಿದರೆ ಸಿಧ್ಧಿಯಾಗುತ್ತದೆ ಎಂದರು.
ಗಾಲವ ಮಹರ್ಷಿಗಳ ಅಣತಿಯಂತೆ ಪ್ರಹ್ಲಾದನು ತುಂಗಭದ್ರಾ ನದಿಯಲ್ಲಿ ಮಿಂದು ಮೂಲಮಂತ್ರವನ್ನು ಪುರಶ್ಚರಣೆ ಮಾಡುತ್ತಾನೆ. ಇದರಿಂದ ಸಂತುಷ್ಠನಾಗಿ ಜಲಮಧ್ಯೆ “ನರಸಿಂಹನು” ಶಾಲಿಗ್ರಾಮ ಶಿಲಾರೂಪಿಯಾಗಿ ದಿವ್ಯದರ್ಶನ ನೀಡುತ್ತಾನೆ. ಪ್ರಹ್ಲಾದನು ನರಸಿಂಹ ನನ್ನು ಜಲಮದ್ಯದಿಂದ ತಂದು ಒಂದು ಕಡೆ ಇಟ್ಟು ಪೂಜಿಸುತ್ತಿರುತ್ತಾನೆ..ಪ್ರಹ್ಲಾದನ ಈ ಭಕ್ತಿಯನ್ನು ಮೆಚ್ಚಿ, ನರಸೀಹನು ಶಿಲೆ ಯಿಂದ ಹೊರಬಂದು ತನ್ನ ನಿಜರೂಪದಲ್ಲಿ ಕಾಣಿಸಿಕೊಂಡು ನಿನಗೆ ಏನು ವರಬೇಕು ಕೇಳು ಎನ್ನಲಾಗಿ.,ಪ್ರಹ್ಲಾದನು “ಜನ್ಮ ಜನ್ಮಾಂತರದಲ್ಲಿಯೂ ನಾನು ನಿನ್ನ ಭಕ್ತನಾಗಿರುವಂತೆ ಅನುಗ್ರಹಿಸು” ಮತ್ತು ನೀನು ಇದೇ ಸ್ಥಳದಲ್ಲಿ ನೆಲಸಿ ಭಕ್ತರ ಆಶೋತ್ರರಗಳನ್ನು ಈಡೇರಿಸು ಎಂದು ವಿನೀತನಾಗಿ ನಾರಸಿಂಹನಲ್ಲಿ ಬೇಡುತ್ತಾನೆ ಹಾಗೆ ಆಗಲಿ ಎಂದು ನರಸಿಂಹನು ಸಾಲಿಗ್ರಾಮ ಶಿಲೆಯಲ್ಲಿಯೇ ಐಕ್ಯರಾಗುತ್ತಾನೆ . ಇಂದಿಗೂ ನಾವು ಶಿಲಾರೂಪದಲ್ಲಿಯೇ ಕಾಣಬಹುದು.
4. ಶ್ರೀ ಶಾರದಾ ಶಕ್ತಿ ಪೀಠ:-ಶ್ರೀ ಶಂಕರಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಶಾರದಾ ದೇವಸ್ಥಾನ ಹಾಗೂ ಶಂಕರಮಠ ವೂ ಇಲ್ಲಿದೆ.ಪ್ರತಿ ನಿತ್ಯ ಶಾರದಾ ಮಾತೆಗೆ ಪೂಜೆ ನೆರವೇರಿಸುತ್ತಾರೆ. ಮುಖ್ಯವಾಗಿ ಮಕ್ಕಳಿಗೆ “ಅಕ್ಷರಾಭ್ಯಾಸ” ವನ್ನು ಪ್ರತಿ ಶುಕ್ರವಾರದಂದು ಮಾಡಲಾಗುತ್ತದೆ.ಇಲ್ಲಿರುವ ಮತ್ತೊಂದು ವಿಶೇಷವೆಂದರೆ ಇಲ್ಲಿರುವುದು “ನಿಂತಿರುವ ಶಾರದಾ ದೇವಿ ” ಬಹಳ ಮನೋಹರ ವಾಗಿದೆ.( ನಿಲುವಾಂಬೆ ಶಾರದೆ) . ಹಿಂದು ಮುಸ್ಲಿಂ ಭಾವೈಕ್ಯತೆ ಯ ಪ್ರತೀಕವಾಗಿರುವ ಈ ಪುಟ್ಟ ಗ್ರಾಮ ಎಲ್ಲ ಸೌಲಭ್ಯಗಳಿಂದವಂಚಿತವಾಗಿರುವುದು ಬೇಸರದ ಸಂಗತಿ.ಮೂಲಭೂತ ಸೌಕರ್ಯ ಗಳನ್ನು ಒದಗಿಸಬೇಕಿದೆ. ಪ್ರವಾಸಿಗರ ಸ್ವರ್ಗದಂತಿರುವ ಈ ಊರು ಅಭಿವೃದ್ಧಿ ಆಗಬೇಕಿದೆ.
5. ಶ್ರೀ ಸಂಗಮೇಶ್ವರ ದೇವಾಲಯ:- ತುಂಗ-ಭದ್ರಾ ನದಿಗಳು ಕೂಡುವ ಈ ಸ್ಥಳದಲ್ಲಿ ದೇವಾಲಯವಿದೆ. ಪ್ರತಿ ವರ್ಷ ಚೈತ್ರ ಮಾಸದಲ್ಲಿ “ಸಂಗಮೇಶ್ವರ” ಜಾತ್ರಾ ಮಹೋತ್ಸವವೂ ಜರುಗುತ್ತದೆ. ಸುತ್ತಮುತ್ತಲಿನ ಹಲವಾರು ಗ್ರಾಮದ ಜನರು ಅಯಾ ಊರಿನ ಗ್ರಾಮದೇವತೆಗಳನ್ನು ಇಲ್ಲಿಗೆ ತಂದು ,ತುಂಗಭದ್ರಾ ಸಂಗಮದಲ್ಲಿ ಮಿಂದು ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಜಾತ್ರೆಯ ವಿಶೇಷ ಅಂದರೆ ಜಾತ್ರೆಯ ಮೂರನೆಯ ದಿನ ಲಂಬಾಣಿ ಜನಾಂಗದವರೆಲ್ಲಾ ಒಟ್ಟಾಗೆ ವಿಶೇಷವಾದ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಜಾತ್ರೆಗೆ ಹೆಚ್ಚಿನ ಕಳೆ ತರುತ್ತಾರೆ.ಅವರದೆ ಬಾಷೆಯಲ್ಲಿ ಲಾವಣಿಗಳನ್ನು ಹಾಡುತ್ತಾ ಸಂಭ್ರಮಿಸುತ್ತಾರೆ.
ಇಂತಹಾ ಸುಂದರ ಪರಿಸರ ಹಿನ್ನೆಲೆ ಹೊಂದಿರುವ ಈ “ಕೂಡಲಿ” ಕ್ಷೇತ್ರದ ಕಾಯಕಲ್ಪವಾಗಬೇಕು.ಪ್ರವಾಸಿಗರ ಕಣ್ಮನ ಸೆಳೆಯುವ ಪ್ರಕೃತಿಸಿರಿಯ ತುಂಗ-ಭದ್ರೆಯರು ಸದಾಕಾಲವೂ ತುಂಬಿ ಹರಿಯಬೇಕು.ಈ ಬಾರಿಯ ವಿಶೇಷವೆಂದರೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಪುಷ್ಕರ ತುಂಗ ಭದ್ರೆಯರ ಮಡಿಲಿನಲ್ಲಿ.ದೇವಾನುದೇವತೆಗಳು ಮಿಂದು ಮಡಿಯುಟ್ಟು ಪಾವನವಾಗಿರುವ ಈ ನದಿಯಲ್ಲಿ ನಾವುಗಳು ಸ್ನಾನ ಮಾಡಿದರೆ ಪಾಪ ಕಳೆದು ಪುಣ್ಯಪ್ರಾಪ್ತಿಯಾಗುವುದು ಎಂಬುದು ಅಲ್ಲಿನ ಜನರ ನಂಬಿಕೆ.
– ಕಲಾಪ್ರಸಾದ್, ಮೈಸೂರು
ಚೆನ್ನಾಗಿದೆ
ಪುಣ್ಯಕ್ಷೇತ್ರ ಕೂಡಲಿಯ ಪೌರಾಣಿಕ ಕಥೆಯನ್ನೂ,ವಿಶೇಷತೆ ಯಾನ್ನು ಚೆನ್ನಾಗಿ ನಿರೂಪಿಸಿದ್ದೀರಿ. ಧನ್ಯವಾದಗಳು ಮೇಡಂ..
ಶ್ರೀ ಕ್ಷೇತ್ರ ಕೂಡ್ಲಿ (ಕೂಡಲಿ ) ಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ನಾನು ಸಹ ಇದೇ ಸ್ಥಳ ದಲ್ಲಿ ಹುಟ್ಟಿ ಬೆಳೆದದ್ದು. ಈ ಸ್ಥಳ ದ ಬಗ್ಗೆ ಈ ಮೂಲಕ ಪರಿಚಯಿಸಿದ ನಿಮಗೆ ಧನ್ಯವಾದಗಳು.
Really we proud about Ur BARAHA SHYLI.GOOD PLEASE U CONTINUE ALL THESE IN UR LFE
ಕುಳಿತಲ್ಲೇ ಪುಣ್ಯಕ್ಷೇತ್ರ ದರ್ಶನ ಮಾಡಿಸಿದ ಕಲಾಪ್ರಸಾದ್ ಅವರಿಗೆ ವಂದನೆಗಳು. ಸಣ್ಣ ವಯಸ್ಸಿನಿಂದಲೂ ಈ ಕೂಡಲಿಯ ಒಡನಾಟ ಇದ್ದರೂ ಇಷ್ಟೊಂದು ಇತಿಹಾಸದ ಮಾಹಿತಿ ಇರಲಿಲ್ಲ. ಸ್ಥಳ ಮಹಿಮೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಸ್ಫುಟವಾಗಿ ಸುಂದರವಾಗಿ ಬರೆದಿದ್ದೀರ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸ್ಥಳೀಯರ ಜೊತೆ ಸೇರಿ ಪುರಾಣ ಪ್ರಸಿದ್ದ ಸ್ಥಳವನ್ನ ಬೆಳೆಸಿದರೆ ಮುಂದಿನ ಪೀಳಿಗೆಗ್ಗೂ ಅನುಕೂಲ ಆಗಬಹುದು.
ನಂದಕಿಶೋರ್ ಬೆಂಗಳೂರು
ಉತ್ತಮ ಮಾಹಿತಿಗಳನ್ನೊಳಗೊಂಡ ಲೇಖನ..ಧನ್ಯವಾದಗಳು
Thanks a lot for your information