ಪಾಕಾಯಣ.
ಸುಮಾರು 47 ವರ್ಷಗಳ ಹಿಂದಿನ ಮಾತು. ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ನಾನು ನಮ್ಮ ಸೋದರ ಮಾವನ ಮಗನನ್ನೇ ವಿವಾಹವಾಗಿ ಆರು ತಿಂಗಳಾಗಿತ್ತು. ಗೃಹಿಣಿಯಾಗಿ ಮೊಟ್ಟಮೊದಲ ಬಾರಿಗೆ ಪತಿಗೃಹಕ್ಕೆ ಸ್ವತಂತ್ರ ಸಂಸಾರ ನಡೆಸಲು ಸಿದ್ಧಳಾದೆ. ಹಿಂದೆ ‘ನೀರು ನೆರಳಿಲ್ಲದ ಜಾಗಕ್ಕೆ ತಪ್ಪುಮಾಡಿದವರನ್ನು ವರ್ಗಾಯಿಸುತ್ತಾರೆಂದು’ ಗಾದೆಮಾತನ್ನು ಕೇಳಿದ್ದೆ. ಆದರೆ ನನ್ನ ಪತಿ ಯಾವುದೇ ತಪ್ಪು ಮಾಡದಿದ್ದರೂ ನೀರು ನೆರಳು ಅಪರೂಪವಾಗಿದ್ದ ಗುಲ್ಬರ್ಗಾಕ್ಕೆ ಪೋಸ್ಟ್ ಮಾಡಿದ್ದರು. ಅದರ ಹಿಂದಿನ ವರ್ಷವಷ್ಟೇ ಆ ಪಟ್ಟಣ ಅತ್ಯಂತ ಭೀಕರ ಬರಗಾಲ ಎದುರಿಸಿ ಆಗತಾನೇ ಚೇತರಿಸಿಕೊಳ್ಳುತ್ತಿತ್ತು ನಾನು ಅಲ್ಲಿಗೆ ಹೊಸ ಸಂಸಾರ ಪ್ರಾರಂಭಮಾಡಲು ಕಾಲಿಟ್ಟೆ.
ಹೋದ ಎರಡುಮೂರು ದಿನಗಳು ನಮ್ಮವರ ಸ್ನೇಹಿತರ ಮನೆಗಳಲ್ಲಿ ಔತಣಗಳು, ಮತ್ತು ಅಲ್ಲಿಯವರೆಗೆ ನಮ್ಮವರು ತಮ್ಮ ಸ್ನೇಹಿತರೊಟ್ಟಿಗೆ ಮೆಸ್ಸ್ ಊಟಮಾಡುತ್ತಿದ್ದಾಗ ಅಡಿಗೆ ಮಾಡುತ್ತಿದ್ದ ನರಸಪ್ಪ ಎಂಬುವರ ಉಸ್ತುವಾರಿಯಲ್ಲಿ ಒಂದು ವಾರ ಕಳೆದುಹೋಯ್ತು. ನಂತರ ನನ್ನ ಸುಪರ್ದಿಗೆ ಬಂದ ಅಡುಗೆಮನೆಯಲ್ಲಿ ನನ್ನ ಕೌಶಲ್ಯ ತೋರಲು ಅವಕಾಶ ಸಿಕ್ಕಿತು. ನಮ್ಮವರು ನರಸಪ್ಪ ನಮಗಾಗಿ ಮೂರು ವರ್ಷಕಾಲ ಮೆಸ್ಸಿನಲ್ಲಿ ಅಡುಗೆ ಮಾಡಿ ಹಾಕಿದ್ದಾನೆ. ಅವನೇನೂ ನಮ್ಮ ಮನೆಯಲ್ಲಿ ಖಾಯಮ್ಮಾಗಿ ಇರುವುದಿಲ್ಲ. ನೀನೇ ಮುಂದೆ ಎಲ್ಲಾ ಮಾಡಬೇಕು ಎಂದರು. ನಾನು ಆತ್ಮ ವಿಶ್ವಾಸದಿಂದ ನನಗೇನು ಅಡುಗೆ ಮಾಡಲು ಬರುವುದಿಲ್ಲ ಎಂದುಕೊಂಡಿರಾ? ನಾಳೆಯಿಂದ ನೋಡಿ ಎಂದು ಜಂಭ ಕೊಚ್ಚಿಕೊಂಡೆ.
ಮಾರನೆಯ ಬೆಳಗ್ಗೆ ಬೇಗನೆ ಎದ್ದು ಶುರು ಮಾಡಿದೆ. ನಮ್ಮವರು ಸ್ನಾನ ಮಾಡಿಬರುವಷ್ಟರಲ್ಲಿ ರೀ ತಿಂಡಿ ರೆಡಿ ಎಂದು ಕರೆದೆ. ವ್ಹಾ !ಇಷ್ಟುಬೇಗ ರೆಡಿ ಮಾಡಿದೆಯಾ? ಎಂದು ಅಚ್ಚರಿಯಿಂದ ಹಬೆಯಾಡುತ್ತಿದ್ದ ಉಪ್ಪಿಟ್ಟನ್ನು ತೆಗೆದುಕೊಂಡು ಖುಷಿಪಟ್ಟರು. ಒಂದು ತುತ್ತು ಬಾಯಿಗಿಟ್ಟರು. ಕೂಡಲೇ ಲೇ ಜಾಡಿಯಲ್ಲಿ ಇನ್ನೂ ಉಪ್ಪು ಉಳಿದಿದೆಯಾ? ಎಂದು ಪ್ರಶ್ನಿಸಿದರು. ಇದೇನು ಇವರೇಕೆ ಹೀಗೆ ಕೇಳುತ್ತಿದ್ದಾರೆ? ಎಲ್ಲೋ ಪೇಟೆಯಿಂದ ಸಾಮಾನು ತರಬೇಕಾದ್ದರಿಂದ ಕೇ:ಳುತ್ತಿರಬೇಕು ಎಂದುಕೊಂಡು ಹಾ ಇದೆಯಲ್ಲಾ ಎಂದೆ. ಅಲ್ಲವೇ ಇದ್ದಬದ್ದ ಉಪ್ಪೆಲ್ಲಾ ಇದರಲ್ಲೇ ಹಾಕಿದಹಾಗಿದೆ. ಅದಕ್ಕೇ ಕೇಳಿದೆ ಎಂದರು. ಮೊಸರು ಕಲೆಸಿಕೊಂಡು ಸೇರಿದಷ್ಟು ತಿಂದು ಕಾಫಿ ಕುಡಿದು ಆಫೀಸಿಗೆ ಹೋದರು. ನಾನೂ ಒಂದಿಷ್ಟು ತಿಂದು ನೋಡಿದೆ. ಉಪ್ಪುರೋಸಾಗಿತ್ತು. ನನಗೇ ಬೇಜಾರಾಯ್ತು. ನನಗೆ ಅಡುಗೆ ಮನೆಕೆಲಸ ಹೊಸದೇನೂ ಅಲ್ಲದಿದ್ದರೂ ನಮ್ಮಮ್ಮನ ಯಜಮಾನಿಕೆಯಲ್ಲಿ ಎಲ್ಲ ನಡೆದು ನಾನು ಬರಿಯ ಪ್ರೇಕ್ಷಕಳಾಗಿದ್ದೆ. ಯಾವುದನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕೆಂಬುದನ್ನು ಎಂದೂ ಮಾಡಿರಲಿಲ್ಲ.
ತಿಂಡಿಯ ಕಥೆಯಂತೂ ಹೀಗಾಯ್ತು ಮಧ್ಯಾನ್ಹಕ್ಕೆ ಅಡುಗೆಯನ್ನಾದರೂ ಚೆನ್ನಾಗಿ ಮಾಡೋಣವೆಂದು ಒಳನಡೆದಾಗ ಕಾಣಿಸಿದ್ದು ಹೊಸ ಕುಕ್ಕರ್. ಕುಕ್ಕರಿನಲ್ಲಿ ಅಡುಗೆ ಮಾಡುವುದು ನನಗೆ ಹೊಸದು. ಏಕೆಂದರೆ ಅಮ್ಮನ ಮನೆಯಲ್ಲಾಗಲಿ, ಅತ್ತೆಯವರಾಗಲಿ ಇದನ್ನು ಬಳಸುತ್ತಿರಲಿಲ್ಲ. ಒಮ್ಮೆ ಈಬಗ್ಗೆ ನಮ್ಮವರಲ್ಲಿ ಪ್ರಸ್ತಾಪಿಸಿದಾಗ ಅವರು ಅದರ ಮ್ಯಾನ್ಯುಯಲ್ ಇದೆ. ಅದನ್ನು ಓದಿದರೆ ಎಲ್ಲಾ ತಿಳಿಯುತ್ತೆ ಎಂದಿದ್ದರು. ನಾನೂ ಅದನ್ನು ಒಮ್ಮೆ ತಿರುವಿ ಹಾಕಿದೆ. ನಂತರ ಇದೇನು ಬ್ರಹ್ಮ ವಿದ್ಯೆಯಲ್ಲ ಎಂದುಕೊಂಡು ಒಂದು ಪಾತ್ರೆಯಲ್ಲಿ ಅಕ್ಕಿ ತೊಳೆದು ಗೊತ್ತಾದ ಪ್ರಮಾಣದಲ್ಲಿ ನೀರು ಹಾಕಿ, ಇನ್ನೊಂದರಲ್ಲಿ ಬೇಳೆ, ಕತ್ತರಿಸಿದ ತರಕಾರಿಗಳನ್ನು ಹಾಕಿ ಜೋಡಿಸಿಟ್ಟು ಕುಕ್ಕರನ್ನು ಒಲೆಯಮೇಲಿಟ್ಟು ಮುಚ್ಚಳ ಮುಚ್ಚಿ ಮೇಲೆ ವೇಯ್ಟ್ ಇಟ್ಟು ಮೂರು ಸಾರಿ ಕೂಗು ಬಂದನಂತರ ಕೆಳಗಿಳಿಸುವುದು. ಆಮೇಲೆ ತರಕಾರಿ, ಬೇಳೆ ಬೆಂದಿರುವುದಕ್ಕೆ ಸ್ವಲ್ಪ ಖಾರ ಅರೆದು ಕುದಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಗ್ಗರಣೆ ಹಾಕಿಬಿಟ್ಟರೆ ಅನ್ನ ಸಾರು ಸಿದ್ಧವಾಗುತ್ತೆ. ತುಂಬ ಸುಲಭ ಎಂದು ಅದರಂತೆಯೇ ಕುಕ್ಕರನ್ನು ಒಲೆಯ ಮೇಲಿಟ್ಟು ಅದರ ಕೂಗಿಗಾಗಿ ಕಾಯುತ್ತಿದ್ದೆ. ಹೊರಗೆ ಹಾಲಿನಲ್ಲಿ ಕುಳಿತು ಯಾವುದೋ ಮಾಗಜೈನ್ ತಿರುವಿ ಹಾಕುತ್ತಿದ್ದೆ. ಅದರಲ್ಲೇ ತಲ್ಲೀನಳಾಗಿದ್ದಾಗ ಇದ್ದಕ್ಕಿದ್ದಂತೆ ಒಳಗಿನಿಂದ ‘ಡಬ್’ ಎಂಬ ಜೋರಾದ ಶಬ್ಧ ಕೇಳಿಸಿತು. ಗಡಿಬಿಡಿಯಿಂದ ಒಳಗೋಡಿದೆ. ಕುಕ್ಕರಿನ ವೇಯ್ಟ್ ಎಗರಿಹೋಗಿತ್ತು. ಅದರೊಳಗಿದ್ದ ತರಕಾರಿ, ಬೇಳೆ, ಅನ್ನಗಳೆಲ್ಲಾ ಬೆಂದು ಮೇಲಿನ ತಾರಸಿಗೆ ಮುಟ್ಟಿದ್ದವು. ಒಂದು ಉದ್ದವಾದ ಕೋಲಿನ ಸಹಾಯದಿಂದ ಸ್ಟೌ ಆರಿಸಿ ಏನು ಮಾಡಬೇಕೆಂದು ತೋಚದೆ ಗರಬಡಿದವಳಂತೆ ನಿಂತೆ. ಕುಕ್ಕರಿನಿಂದ ಬುಸ್ ಎನ್ನುವ ಶಬ್ಧ ಪೂರ್ತಿ ನಿಂತಮೇಲೆ ಒಳಕ್ಕೆ ಕಾಲಿಟ್ಟೆ. ಸುತ್ತಮುತ್ತಲಿದ್ದ ಎಲ್ಲದರ ಮೇಲೂ ಅನ್ನ ಸಾರಿನ ಅಭಿಷೇಕವಾಗಿತ್ತು. ಅವನ್ನೆಲ್ಲ ಮೊದಲಿನ ರೂಪಕ್ಕೆ ತರಬೇಕಲ್ಲಾ ಎಂಬ ಸಂಕಟ ಸೇರಿ ಕಣ್ಣಿನಿಂದ ಗಂಗಾಭವಾನಿ ಸುರಿಯಿತು. ಈ ಅಡುಗೆ ಸಹವಾಸದಲ್ಲಿ ಇನ್ನೂ ಏನೇನು ಕಾದಿದೆಯೋ? ಯಾಕಾದರೂ ಹೆಣ್ಣಾಗಿ ಹುಟ್ಟಿದೆನೋ? ಎಂದು ಜಿಗುಪ್ಸೆಯಿಂದ ಅಡುಗೆಮನೆಯನ್ನೆಲ್ಲಾ ಕಷ್ಟಪಟ್ಟು ಚೊಕ್ಕಟ ಮಾಡಿದೆ. ಸಾಕಷ್ಟು ಸಮಯ ಹಿಡಿಯಿತು.
ಹೊರಗೆ ಬರುವಷ್ಟರಲ್ಲಿ ನನ್ನವರು ಬಾಗಿಲಿನಲ್ಲಿ ಕಂಡರು. ‘ಇಷ್ಟು ಬೇಗ? ಎಂದೆ’.
‘ಏಕೆ ಮಲಗಿಬಿಟ್ಟಿದ್ದೆಯಾ? ಈಗ ಟೈಮ್ ಎಷ್ಟಾಗಿದೆ ಗೊತ್ತಾ? ಬೆಳಗ್ಗೆ ಅಂತೂ ಉಪ್ಪು ಹಿಟ್ಟು ತಿನ್ನಿಸಿದ್ದೆ. ಈಗ ಯಾವ ಹಿಟ್ಟು ತಯಾರಿಸಿದ್ದೀ?’ ಎಂದು ಪ್ರಶ್ನಿಸಿದರು. ನಾನು ಮೌನವಾಗಿ ಅವರನ್ನು ಒಳಕ್ಕೆ ಕರೆದುಕೊಂಡು ಹೋಗಿ ನನ್ನ ಅಡುಗೆಯೆಲ್ಲಾ ಅಲ್ಲಿದೆ ಎಂದು ಸೀಲಿಂಗ್ ತೋರಿಸಿದೆ. ಅವರು ಸದ್ಯ ಸ್ಟೌ ಏನಾದರೂ ಸಿಡಿದು ಅನಾಹುತವಾಗಿದ್ದರೆ, ಅದರಿಂದ ನಿನಗೇನಾದರೂ ಆಗಿದ್ದರೆ ಪೋಲೀಸಿನವರು ನನ್ನನ್ನು ಹಿಡಿದು ಒಳಕ್ಕೆ ಹಾಕೋರು. ಸದ್ಯ ನಾನು ಬಚಾವ್ ಎಂದರು. ನನಗೆ ಅಳು ಬಂತು. ಅದನ್ನು ನೋಡಿ ನನ್ನವರು ಅಳಬೇಡ ಇಂದಿಗೆ ಇಷ್ಟು ಸಾಕು ಎಂದು ಹೇಳಿ ಹೋಟೆಲಿಗೆ ಕರೆದೊಯ್ದು ಊಟಕೊಡಿಸಿ ನನ್ನನ್ನು ಸಮಾಧಾನ ಮಾಡಿದರು.
ಗುಲ್ಬರ್ಗಾದಲ್ಲಿ ಹೆಚ್ಚಾಗಿ ಜೋಳದ ಭಕ್ಕರಿ (ರೊಟ್ಟಿ) ತಿನ್ನುವುದು ರೂಢಿ. ಅವರಿಗೆ ದೋಸೆ, ಇಡ್ಲಿ ಎಂಬ ತಿಂಡಿಗಳೆಂದರೆ ತುಂಬ ಇಷ್ಟ. ಹಳೆ ಮೈಸೂರಿನ ಕಡೆಯವರು ಇವನ್ನು ಚೆನ್ನಾಗಿ ತಯಾರಿಸುತ್ತಾರೆಂಬ ನಂಬಿಕೆ. ಹಾಗಾಗಿ ಮೆಸ್ಸಿನ ನರಸಪ್ಪ ಒಮ್ಮೆ ಅಮ್ಮಾ ನೀವು ದೋಸೆ ಮಾಡಿದಾಗ ನನ್ನನ್ನು ಮರೆಯದೇ ಕರೆಯಬೇಕು ಎಂದು ಬೇಡಿಕೆಯಿಟ್ಟ. ಅದಕ್ಕೇನಂತೆ ಎಂದೆ ನಾನು. ಅದಾದ ಮೂರನೆಯ ದಿನ ದೋಸೆ ತಯಾರಿಗೆ ಅಣಿ ಮಾಡಿಕೊಂಡಿದ್ದೆ. ಸ್ಟೌ ಮೇಲಿಟ್ಟ ದೋಸೆ ಹೆಂಚಿಗೆ ಚೆನ್ನಾಗಿ ಎಣ್ಣೆ ಹಚ್ಚಿ ದೋಸೆ ಹಿಟ್ಟನ್ನು ಗುಂಡಾಕಾರದಲ್ಲಿ ಅದರ ಮೇಲೆ ಬರೆದೆ. ಮೊಗಚುಕೈಗೆ ಆ ದೋಸೆ ಮೇಲಕ್ಕೇಳಲಿಲ್ಲ. ಪ್ರಯತ್ನಪಟ್ಟಾಗ ಚೂರುಚೂರಾಗಿ ಬಂತು. ಎಲ್ಲೋ ಹೆಂಚು ಸರಿಯಾದ ಹದಕ್ಕೆ ಕಾಯ್ದಿರಲಿಲ್ಲ ಎಂದುಕೊಂಡು ಮತ್ತೆ ಎಣ್ಣೆ ಸವರಿ ದೋಸೆ ಹೊಯ್ದೆ. ಅದೂ ಸರಿಯಾಗಿ ಚಕ್ರಾಕಾರವಾಗಿ ಮೇಲಕ್ಕೇಳಲಿಲ್ಲ. ಬೇಜಾರಾಯಿತು. ಮೂರು ನಾಲಕ್ಕು ಪ್ರಯತ್ನಗಳಾದರೂ ದೋಸೆಯಾಕಾರದಲ್ಲಿ ಒಂದೂ ತಯಾರಾಗಲಿಲ್ಲ. ನಮ್ಮವರು ಒಳಗೆ ಬಂದು ನನ್ನ ಅವಸ್ಥೆಯನ್ನು ನೋಡಿದರು. ಎಲ್ಲೋ ಉದ್ದಿನಬೇಳೆ ಪ್ರಮಾಣ ವ್ಯತ್ಯಾಸ ಆಗಿರಬೇಕು ಎಂದರು ನಾನು ಅಕ್ಕಿಯ ಪ್ರಮಾಣದ ಅರ್ಧದಷ್ಟು ಉದ್ದಿನಬೇಳೆ ಹಾಕಿದ್ದೆ. ನನ್ನವರ ಸಲಹೆಯಂತೆ ಮೈದಾ ಹಿಟ್ಟನ್ನು ಅದಕ್ಕೆ ಬೆರೆಸಿ ಹೇಗೋ ಒಂದು ರೀತಿಯ ದೋಸೆ ತಯಾರಿಸಿ ಕೊಟ್ಟೆ. ಆದರೆ ರುಚಿ ಯಾರಪ್ಪನ ಗಂಟು. ಅಮ್ಮ ಮಾಡುತ್ತಿದ್ದ ಗರಿಗರಿ ದೋಸೆ ಪಲ್ಯ ಚಟ್ಣಿಗಳನ್ನು ಸವಿದಿದ್ದ ನಾನು ಪರಿಮಾಣಗಳ ಬಗ್ಗೆ ತಿಳಿದಿರಲಿಲ್ಲ. ಕಷ್ಟಪಟ್ಟು ತಿಂದು ಮುಗಿಸಿದೆವು.
ದಿನ ನಿತ್ಯದ ಪದಾರ್ಥಗಳ ತಯಾರಿಕೆಯೇ ಹೀಗಾದ ಮೇಲೆ ವಿಶೇಷ ತಿನಿಸುಗಳ ಬಗ್ಗೆ ಕೇಳಲೇಬೇಕಿಲ್ಲ. ಚಂಡಿನಂತಾದ ಜಾಮೂನು, ಗಟ್ಟಿಯಾದ ಮೈಸೂರುಪಾಕ್, ಸಜ್ಜಿಗೆಯಂತಾದ ರವೆಉಂಡೆ, ರಬ್ಬರಿನಂತಾದ ಚಕ್ಕುಲಿ, ಪುಡಿಪುಡಿಯಾದ ನಿಪ್ಪಟ್ಟು, ಸೀದು ಕರಕಲಾದ ಒಡೆ ಬೋಂಡಾಗಳು, ಒಂದೇ ಎರಡೇ ಎಲ್ಲ ಪ್ರಯೋಗಗಳೂ ಭಯಾನಕವಾಗಿದ್ದವು. ಬಣ್ಣಿಸಲು ಸಾಧ್ಯವೇ ಇಲ್ಲ. ಏನೇ ಮಾಡಿದರೂ ಯಾವ ಕೋಪತಾಪ ತೋರದೇ ಶಾಂತರಾಗಿ ತಿಂದು ತಮ್ಮ ಸೂಕ್ತ ಸಲಹೆ ಸಹಕಾರ ಕೊಟ್ಟ ನನ್ನ ಪತಿಯ ತಾಳ್ಮೆಯನ್ನು ಮರೆಯುವಂತಿಲ್ಲ. ಈಗ ನಾನು ‘ಭೇಷ್’ ಅನ್ನುವಷ್ಟು ಪಾಕಪ್ರವೀಣೆಯಾಗಿದ್ದೇನೆ. ಅನುಭವ ಎಲ್ಲವನ್ನೂ ಕಲಿಸಿದೆ. ಆದರೆ ಮೊದಲ ಅನುಭವಗಳನ್ನು ಮರೆಯುವಂತಿಲ್ಲ.
-ಬಿ.ಆರ್.ನಾಗರತ್ನ, ಮೈಸೂರು.
Nice one
ಆಹಾ..ನಿಮ್ಮ ಪ್ರಾರಂಭಿಕ ಅಡುಗೆ ನಿರೂಪಣೆ ತುಂಬಾ ಸೊಗಸಾಗಿತ್ತು ಮೇಡಂ. ಮೊದಲೆಲ್ಲ ಅಡುಗೆ ಕಲಿಯಲು ಪುಸ್ತಕ ನೋಡಿ,ಬಲ್ಲವರಲ್ಲಿ ಕೇಳಿ ಕಲಿಯಬೇಕಿತ್ತು. ಈಗ ಸರ್ವ ಅಡುಗೆಗಳೂ ಯೂಟ್ಯೂಬ್ ನಲ್ಲಿ ವೆ
ಅಡುಗೆ ಮಾಡುವ ಜವಾಬ್ದಾರಿ ಸಿಕ್ಕಿದ ಆರಂಭದ ಹಂತದಲ್ಲಿ ನಾನೂ ಇಂಥಹ ಅವಾಂತರಗಳನ್ನು ಮಾಡಿದ್ದೇನೆ..ಚೆಂದದ ಲಘು ಬರಹ.
ಮೊದಮೊದಲ ಅಡುಗೆ ಅವಾಂತರಗಳು ಚೆನ್ನಾಗಿವೆ.
ಹೌದು..ಅಡುಗೆಯ ನಿಮ್ಮ ಮೊದಲ ಅನುಭವ ನಮ್ಮೆಲ್ಲರದೂ ಹೌದು..ಸ್ವಲ್ಪ ಹೆಚ್ಚು ಕಡಿಮೆ ಅಷ್ಟೆ. ಸೊಗಸಾದ ನಿರೂಪಣೆ
ನಾನು ಬರೆದ ಲೇಖನವನ್ನು ಓದಿ ಪ್ರತಿಕ್ರಿಯಿಸಿದ ಎಲ್ಲಾ ಸಾಹಿತ್ಯ ಸಹೃದಯರಿಗೆ ನನ್ನ ಧನ್ಯವಾದಗಳು.
ಧನ್ಯವಾದಗಳು.