ನೆನಪು 21: ಸುಗಮ ಸಂಗೀತ ಗಾರುಡಿಗ ಸಿ ಅಶ್ವಥ್ ಹಾಗೂ ಕೆ ಎಸ್ ನ ಸ್ನೇಹ

Share Button

ಕವಿ ಕೆ ಎಸ್ ನ

ಸುಗಮ ಸಂಗೀತ ಕ್ಷೇತ್ರದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಸಿ ಅಶ್ವಥ್ ಅವರೊಡನೆ ನಮ್ಮ ತಂದೆಯವರ ಸ್ನೇಹ ನಿಕಟವಾದುದು. ಅದು ಬೇರೂರಿದ್ದು 1981ರ ನಂತರ; ಮೈಸೂರ ಮಲ್ಲಿಗೆ ಹಾಗೂ ಇತರ ಸಂಕಲನಗಳಲ್ಲಿದ್ದ ಭಾವಗೀತೆಗಳನ್ನು ಮೈಸೂರ ಮಲ್ಲಿಗೆ ಎಂಬ ಧ್ವನಿಸುರುಳಿಯಾಗಿ ಹೊರತಂದ ಸಂದರ್ಭದಲ್ಲಿ. ಮೈಸೂರು ಅನಂತಸ್ವಾಮಿಯವರು ನಿಸಾರರ “ನಿತ್ಯೋತ್ಸವ” ಧ್ವನಿಸುರುಳಿ ಹೊರತಂದು ಯಶಸ್ವಿಯಾದ ನಂತರದ ಸಮಯದಲ್ಲೇ ಸಿ ಅಶ್ವಥ್ ರವರು ಎನ್ ಎಸ್ ಎಲ್ ಭಟ್ಟರ ದೀಪಿಕಾ ಕ್ಯಾಸೆಟ್ಟಿಗೆ ಸಂಗೀತ ಸಂಯೋಜನೆ ಮಾಡಿದರು. ಭಾವಗೀತೆಗಳ ಕ್ಯಾಸೆಟ್ ಸಂಸ್ಕೃತಿ ಹೀಗೆ ನಿಧಾನವಾಗಿ ನೆಲೆಯೂರುತ್ತಿರುವ ಸಂದರ್ಭದಲ್ಲಿ ಕೆ ಎಸ್ ನ ಅವರ ಭಾವಗೀತೆಗಳನ್ನು ಒಂದು ಕ್ಯಾಸೆಟ್ ನಲ್ಲಿ ಸಂಕಲಿಸುವ ಉತ್ಸಾಹ ಅಶ್ವಥ್ ಅವರಲ್ಲಿ ಮೂಡಿತು..ಸಂಗೀತಾ ಸಂಸ್ಥೆಯ ಮಾಲೀಕರಾದ ಮಹೇಶ್ ಅವರನ್ನು ಕ್ಯಾಸೆಟ್ಗೆ ಹಣ ಹೂಡಲು ಒಪ್ಪಿಸಿದರು.

ಧ್ವನಿಮುದ್ರಣದ ಅನುಮತಿ ಪಡೆಯಲು ನಮ್ಮ ತಂದೆಯವರನ್ನು ಅಶ್ವಥ್ ಸತತವಾಗಿ ಭೇಟಿ ಆಗುವ ಪರಿ ಆರಂಭವಾದದ್ದು ಹೀಗೆ. ಕೆಲವು ಕವನ ಸಂಕಲನಗಳ ಕಾಪಿ ರೈಟ್ ಪ್ರಕಾಶಕರ ಬಳಿ ಇದ್ದುದರಿಂದ ಅವರ ಅನುಮತಿಯನ್ನೂ ಪಡೆಯಬೇಕಾದ ಅನಿವಾರ್ಯತೆ ಇತ್ತು. ಛಲವಾದಿ ಅಶ್ವಥ್ ಎಲ್ಲ ಅಡೆತಡೆಗಳನ್ನೂ ಗೆದ್ದು ಕ್ಯಾಸೆಟ್ ಸಿದ್ಧಪಡಿಸಿಯೇ ಬಿಟ್ಟರು.1982ರಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರಿರಂಗ ಅವರ ಅಧ್ಯಕ್ಷತೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಡಾ.ರಾಜಕುಮಾರ್ ಧ್ವನಿಸುರಳಿಯನ್ನು ಲೋಕಾರ್ಪಣೆ ಮಾಡಿದರು.

ಧ್ವನಿಸುರಳಿ ಅತಿ ಶೀಘ್ರದಲ್ಲೇ ಜನಮನ ಸೂರೆಗೊಂಡಿತು. ಅದುವರೆಗೆ ಆಕಾಶವಾಣಿ,ಎಚ್ ಎಂ ವಿ ಮುಂತಾದ ಸಂಸ್ಥೆಗಳ ಮೂಲಕ ದೇವಂಗಿ ಚಂದ್ರಶೇಖರ್, ಎಮ್ ಪ್ರಭಾಕರ್, ಜಯವಂತಿದೇವಿ ಹಿರೆಬೆಟ್, ಎಮ್ ಎಸ್ಶೀಲಾ, ಎಚ್ ಕೆ ನಾರಾಯಣ ಇಂಥವರು ಹಾಡಿ ಪ್ರಚುರಪಡಿಸಿದ ಭಾವಗೀತೆಗಳು /ಹಾಡುಗಳು ಒಂದು ಸೀಮಿತ ವಲಯದಲ್ಲಿ ಜನಪ್ರಿಯವಾಗಿತ್ತು.ಈಗ ಕೆ ಎಸ್ ನ ಭಾವಗೀತೆಗಳು ಕ್ಯಾಸೆಟ್ ಮೂಲಕ ಎಲ್ಲೆಡೆ ಪಸರಿಸಿತು.ಇದೆಲ್ಲ ಕನಸುಗಾರ ಅಶ್ವಥ್ ಅವರ ಶ್ರಮ,ಆಸಕ್ತಿಗಳ ಫಲ ಎಂಬುದು ನಿಸ್ಸಂಶಯ.

ಸುಗಮ ಸಂಗೀತ ಗಾರುಡಿಗ ಸಿ ಅಶ್ವಥ್

ಅಶ್ವಥ್ ಅವರಿಗೆ ಮತ್ತೊಂದು ಮಹತ್ವಾಕಾಕ್ಷೆಯ ಯೋಜನೆ ಇತ್ತು.ಅದು ಮೈಸೂರ ಮಲ್ಲಿಗೆ ಭಾವಗೀತೆಗಳನ್ನು ಆಧಾರವಾಗಿರಿಸಿ,ಯುಕ್ತ ಕಥೆಯೊಂದನ್ನು ರೂಪಿಸಿ ಚಲನಚಿತ್ರವೊಂದನ್ನು ನಿರ್ಮಿಸುವುದು.ಇದಕ್ಕಾಗಿ ಅವರು ಉದ್ಯಮಿ ಹರಿಖೋಡೆಯವನ್ನು ಚಿತ್ರ ನಿರ್ಮಾಣ ಮಾಡಲು ಒಪ್ಪಿಸಿದರು.(ಖೋಡೆಯವರು ಅದಾಗಲೇ ಸಂತಶಿಶುನಾಳ ಶರೀಫ ಚಿತ್ರ ನಿರ್ಮಿಸಿ ರಾಷ್ಟ್ರ ಪ್ರಶಸ್ತಿಗಳನ್ನೂ ಗಳಿಸಿದ್ದರು) . ಅಶ್ವಥ್ ರವರು ಮತ್ತೆ ನಮ್ಮ ತಂದೆಯವರನ್ನು ಹಾಡುಗಳ ಅನುಮತಿಗಾಗಿ ಒಪ್ಪಿಸಿ ಕಾರ್ಯಪ್ರವೃತ್ತರಾದರು. ಗೀತೆಗಳಿಗೆ ಹೊಂದುವ ಕಥೆಯ ಹಂದರಕ್ಕಾಗಿ ಸಾಕಷ್ಟು ಶೋಧಿಸಿ ಸ್ವಾತಂತ್ರ ಸಂಗ್ರಾಮದ ಹಿನ್ನಲೆಯೇ ಸಮಂಜಸವೆಂದು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅದೆಷ್ಟು ಬಾರಿ ಅಶ್ವಥ್ ನಮ್ಮ ಮನೆಗೆ ಬೇಸರವಿಲ್ಲದೆ ಭೇಟಿಯಿತ್ತಿದ್ದರೋ!  ಒಮ್ಮೆ  ರಾತ್ರಿಹತ್ತು ಗಂಟೆಗೆ ಒಂದು ಟೇಪ್ ರೆಕಾರ್ಡರ್ ನೊಡನೆ ಮನೆಗೆ ಬಂದು ಮಲಗಿದ್ದ ನಮ್ಮ ತಂದೆಯವರನ್ನು ಎಬ್ಬಿಸಿ “ಎಚ್ಚರ ಮಾಡಿಕೊಳ್ಳಿ ,ಈ ಟ್ಯೂನ್ ಕೇಳಿ ನಿಮ್ಮ ಅಭಿಪ್ರಾಯ ಹೇಳಿ.ಎರಡು ದಿನದಿಂದ ಕಷ್ಟ ಪಟ್ಟಿದ್ದೇನೆ ಇದಕ್ಕೆ “ ಎಂದರು.ಅವರ ಶ್ರಮ, ಉತ್ಸಾಹ ,ಆತುರ ಎಲ್ಲ ಮುಖದಲ್ಲೇ ಧ್ವನಿತವಾಗಿತ್ತು.

ಚಿತ್ರೀಕರಣ ನಡೆದ ತೀರ್ಥಹಳ್ಳಿಗೆ ನಮ್ಮ ತಂದೆಯವರನ್ನು ಕರೆದುಕೊಂಡು ಹೋಗಿದ್ದರು. ಮೈಸೂರ ಮಲ್ಲಿಗೆ ಚಲನ ಚಿತ್ರವಾಗಿ ಯಶಸ್ವಿಯಾಗಿ ತೆರೆಕಂಡಿತು.ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರಾದೇಶಿಕಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿತು. ಜತೆಗೆ ನಮ್ಮ ತಂದೆಯವರಿಗೆ ಉತ್ತಮ ಗೀತರಚನಕಾರ ಪ್ರಶಸ್ತಿ ಲಭಿಸಿತು. ಅಶ್ವಥ್ ಅವರಿಗೆ ಸ್ವಲ್ಪ ನಿರಾಸೆಯಾಯಿತು.ತಮ್ಮ ರಾಗಸಂಯೋಜನೆಗಾಗಿ ಉತ್ತಮ ಸಂಗೀತ ನಿರ್ದೇಶಕ  ಪ್ರಶಸ್ತಿ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ಯಾರ ಹತ್ತಿರವೋ ”ಅವರಿಗೆ ಗೀತರಚನೆಗೆ ಪ್ರಶಸ್ತಿ ಬಂದದ್ದುಸಂತೋಷವೇ.ಆದರೆ ನನಗೂ  ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಬರಬೇಕಿತ್ತು” ಎಂದರಂತೆ. ನಮ್ಮ ತಂದೆಯವರಿಗೂ ಅಶ್ವಥ್ ಅವರಿಗೆ ಪ್ರಶಸ್ತಿ ದೊರಕದೆ ಇದ್ದುದಕ್ಕೆ ಬೇಸರವಾಯಿತು.

ಆದರೂ ಈ ಕಹಿನೆನಪನ್ನು ಮರೆತು ನಮ್ಮ ತಂದೆಯವರೊಡನೆ ಸಲುಗೆಯ,ಗೌರವಪೂರ್ಣ ಸ್ನೇಹಭಾವ ಹೊಂದಿದ್ದವರು ಅಶ್ವಥ್. ನಮ್ಮ ತಂದೆಯವರು ನಿಧನಾನಂತರ ಅವರ ಸ್ಮರಣೆಯಲ್ಲಿ ನಡೆದ ಹಲವಾರು ಗೀತನಮನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕವಿಯೊಂದಿಗಿನ ತಮ್ಮ ಮಧುರ ನೆನಪುಗಳನ್ನು ಮೆಲುಕುಹಾಕಿದ್ದರು. ಭಾವಗೀತೆಯನ್ನು ಸುಗಮಸಂಗೀತವಾಗಿಸಿ ಅದನ್ನು ಸಂಗೀತೋದ್ಯಮದ ಎತ್ತರಕ್ಕೆ ಕೊಂಡೊಯ್ದ ಸಾಹಸಿ ಅಶ್ಥಥ್.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:  http://surahonne.com/?p=30330

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

2 Responses

  1. ನಯನ ಬಜಕೂಡ್ಲು says:

    ಇವತ್ತಿಗೂ ಆ ಭಾವಗೀತೆಗಳು ಅತಿ ಮಧುರ, ಮತ್ತೆ ಮತ್ತೆ ಕೇಳಬೇಕು ಅನ್ನುವ ತುಡಿತವನ್ನು ಮನದಲ್ಲಿ ಹುಟ್ಟುಹಾಕುತ್ತವೆ.

  2. ಶಂಕರಿ ಶರ್ಮ, ಪುತ್ತೂರು says:

    ಮಧುರವಾದ ಆ ಹಾಡುಗಳನ್ನು ಮೆಲುಕು ಹಾಕುವುದೇ ಒಂದು ಸಂತಸ… ಉತ್ತಮ ಮಾಹಿತಿಗಳನ್ನೊಳಗೊಂಡ ಅರ್ಥಪೂರ್ಣ ಲೇಖನಮಾಲೆ..ಧನ್ಯವಾದಗಳು.. ನಮನಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: