ಪುಸ್ತಕ ಪರಿಚಯ: ಜಯಶ್ರೀ ಬಿ. ಕದ್ರಿ ಅವರ ‘ಬೆಳಕು-ಬಳ್ಳಿ’
ಪುಸ್ತಕದ ಶೀರ್ಷಿಕೆ : ಬೆಳಕು ಬಳ್ಳಿ
ಲೇಖಕರು:- ಜಯಶ್ರೀ. ಬಿ. ಕದ್ರಿ
ಪ್ರಕಾಶಕರು:- ಸುಮಾ ಪ್ರಕಾಶನ, ರಾಜಾಜಿ ನಗರ, ಬೆಂಗಳೂರು.
ನಮ್ಮ ಸುತ್ತಮುತ್ತ ನಡೆಯುವ ಪುಟ್ಟ ಪುಟ್ಟ ಘಟನೆ , ವಿಚಾರಗಳನ್ನೇ ಅಕ್ಷರ ರೂಪ ನೀಡಿ ಒಂದು ಆಯಾಮಕ್ಕೆ ತರುವ ಜಯಶ್ರೀ ಬಿ ಕದ್ರಿ ಯವರ ಬರಹಗಳು ಮನಸ್ಸಿಗೆ ಮುದ ನೀಡುವಂತೆ ಇರುತ್ತವೆ. ಇವರ ಮೊದಲ ಪುಸ್ತಕ “ತೆರೆದಂತೆ ಹಾದಿ”– ವೈಚಾರಿಕ ಬರಹಗಳು” ಪುಸ್ತಕದ ನಂತರ ಈಗ ಮತ್ತೊಂದು ಕೃತಿ “ಬೆಳಕು -ಬಳ್ಳಿ” (ಜೀವನಪ್ರೀತಿಯ ಬರಹಗಳು). ‘ತೆರೆದಂತೆ ಹಾದಿ’ ಕೃತಿಯು ಸಾಹಿತ್ಯ ಪ್ರಶಸ್ತಿಗೂ ಆಯ್ಕೆಯಾಗಿತ್ತು ಅನ್ನೋದು ಸಂತಸದ ವಿಚಾರ.
“ಅಡುಗೆ” ಅನ್ನುವ ಪದವೇ ನಮಗೆ ಹೇ… ಇದರಲ್ಲೇನಿದೆ ಅಂತಹುದು ಅನ್ನುವ ತಾತ್ಸಾರ ಭಾವವನ್ನು ನಮ್ಮಲ್ಲಿ ಮೂಡಿಸಬಹುದು. ಆದರೆ ಅದರೊಳಗಿನ ಸ್ವಾರಸ್ಯವನ್ನು ಲೇಖಕಿ ತಮ್ಮ ಬರಹದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಡುಗೆ ಮಾಡುವುದೇನು ಸಾಮಾನ್ಯ ವಿಚಾರ ಅಲ್ಲ. ನಾವು ತಯಾರಿಸಿದ ಆಹಾರ ಹಸಿದವರ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ ಅದನ್ನು ತಿಂದವರಲ್ಲಿ ಒಂದು ಸಂತೃಪ್ತ ಭಾವ ಮೂಡಬೇಕು ಆಗಲೇ ಮಾಡಿದ ಅಡುಗೆ ಸಾರ್ಥಕ ಅನ್ನಿಸೋದು ಅಲ್ಲದೆ ಈ ಭಾವ ‘ಅಡುಗೆಯ ಈ ಬಂದ’ ಲೇಖನ ಓದಿದಾಗ ಮನಸ್ಸಲ್ಲಿ ಮೂಡಿತು.
ಇವತ್ತು ಮಾಹಿತಿ ತಂತ್ರಜ್ಞಾನದ ಜಗತ್ತು ವಿಶಾಲವಾಗಿದೆ. ಕಂಪ್ಯೂಟರ್, ಟಿವಿ, ಮೊಬೈಲ್, ಇಂಟರ್ನೆಟ್ ನ ಲೋಕದೊಳಗೆ ನಾವೆಲ್ಲಾ ಕಳೆದು ಹೋಗುತ್ತಿದ್ದೇವೆ. ಇಂತಹ ಫಾಸ್ಟ್ ಯುಗದಲ್ಲೂ ಆಕಾಶವಾಣಿ, ರೇಡಿಯೊ ಎಂಬ ಹಳೆಯ ಗೆಳೆಯನನ್ನು ಯಾರೂ ಮರೆತಿಲ್ಲ. ಜಗತ್ತು ಎಷ್ಟೇ ಮುಂದುವರೆದಿದ್ದರೂ ರೇಡಿಯೋ ಅನ್ನುವ ಗೆಳೆಯ ಹೊಸ ಹೊಸ ಆಯಾಮವನ್ನು ಪಡೆದು ನಮ್ಮೊಂದಿಗೆ ನಮ್ಮ ದಿನನಿತ್ಯದ ಬದುಕಿನ ಭಾಗ ಆಗಿ ಇದ್ದಾನೆ ಅನ್ನೋದನ್ನ ವಿವರಿಸಿದ ಒಂದು ಸೊಗಸಾದ ಲೇಖನ .
ಚೆನ್ನಾಗಿ ಕಾಣಿಸಿಕೊಳ್ಳಬೇಕು ಅನ್ನುವ ಭಾವ ಯಾರಿಗೆ ತಾನೆ ಇಲ್ಲ…..? ಅಲಂಕಾರ, ಬ್ಯೂಟಿ ಪಾರ್ಲರ್ ಗಳಿಗೆ ಹೋಗುವುದು, ಸಿಂಗರಿಸಿಕೊಳ್ಳುವುದು ಎಲ್ಲವೂ ಅದಮ್ಯ ಜೀವನ ಪ್ರೀತಿಯ ಒಂದು ಭಾಗವೇ. ದೇಹಕ್ಕೆ ಮುಪ್ಪಾದರೂ ಇಂತಹ ಚಟುವಟಿಕೆಗಳು ಮನಸ್ಸಿಗೆ ಮುಪ್ಪಡರಲು ಬಿಡುವುದಿಲ್ಲ ಅನ್ನೋದು ಕೂಡ ಸತ್ಯ. ಹಾಗಂತ ಅತಿಯಾಗಿ ಇವುಗಳ ಮೊರೆ ಹೋಗುವುದರಿಂದಲು ದುಷ್ಪರಿಣಾಮಗಳು ಉಂಟಾಗುತ್ತವೆ ಅನ್ನೋ ಅಂಶವನ್ನು ತಿಳಿಸುವ ಲೇಖನ “ಬ್ಯೂಟಿಫುಲ್ ಮನಸುಗಳು”.
ಸಿನೆಮಾಗಳ ಕುರಿತಾಗಿ ಮೊದಲಿನ ಕಾಲದಲ್ಲಿದ್ದ ಹಳೆಯ ತಲೆಮಾರಿನ ಜನಗಳ ಅಭಿಪ್ರಾಯ ಹಾಗೂ ಈಗಿನವರ ನೋಡುವ ದೃಷ್ಟಿಕೋನದ ತುಲನೆ. ಪ್ರಕೃತಿಯ ರಕ್ಷಣೆ, ರೈತಾಪಿ ವರ್ಗದ ಪರಿಶ್ರಮ, ಕಷ್ಟ, ಹಳ್ಳಿಯ ಹೆಣ್ಣು ಮಕ್ಕಳ ಬದುಕು, ಹೋರಾಟ, ಕೆಲಸಗಳ ಕುರಿತಾಗಿ ಒಂದು ಲೇಖನ ತುಂಬಾ ಇಷ್ಟವಾಯಿತು. ಹಳ್ಳಿಯ ಜನತೆಯೇ ಹಾಗೆ ಲಾಭ ನಷ್ಟದ ಲೆಕ್ಕ ಹಾಕದೆ ತಮ್ಮ ಪಾಡಿಗೆ ತಾವು ನಿರಂತರ ದುಡಿಮೆಯಲ್ಲಿ ತೊಡಗಿರುತ್ತಾರೆ. ಇದು ಬದುಕಲು ಅನಿವಾರ್ಯ ಕೂಡ. ಯುವಜನತೆಯು ಇವರೊಂದಿಗೆ ಕೈ ಜೋಡಿಸಿದಲ್ಲಿ ನಮ್ಮ ಪ್ರಕೃತಿಯಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು. ಎಲ್ಲರೂ ಪೇಟೆಯ ಬಣ್ಣದ ಬದುಕಿನತ್ತ ವಾಲಿದಲ್ಲಿ ಕೃಷಿ ಚಟುವಟಿಕೆಗಳು ಅಳಿವಿನ ಅಂಚನ್ನು ತಲುಪಿ ತಿನ್ನುವ ಅನ್ನಕ್ಕೂ ಕುತ್ತು ಬರುವುದರಲ್ಲಿ ಸಂಶಯವಿಲ್ಲ.
ಫೇಸ್ ಬುಕ್ ಎಂಬ ಮಾಯಾ ಪ್ರಪಂಚದ ಕಥೆ. ಇದೊಂದು ಸುಂದರ ಜಗತ್ತು ಅಷ್ಟೇ ಅಪಾಯಕಾರಿ ಅನ್ನೋದು ಲೇಖಕಿಯ ಅಭಿಪ್ರಾಯ. ಹೌದು , ವಿವೇಚನೆಯಿಂದ ಇದನ್ನು ಬಳಸಿದಲ್ಲಿ ಇಲ್ಲಿ ಹಲವಾರು ವಿಚಾರಗಳು ಕುಳಿತಲ್ಲಿಯೇ ಲಭ್ಯ. ಮೈಮರೆತು ಕೆಟ್ಟವರ ಹಿಡಿತಕ್ಕೆ ಬಂದಲ್ಲಿ ಪ್ರಾಣ ಕಳೆದುಕೊಳ್ಳುವಷ್ಟು ಅಪಾಯಕಾರಿ. ಸಾಹಿತ್ಯಾಸಕ್ತಿ ಇರುವವರಿಗಂತೂ ಇದೊಂದು ಸುಂದರ ಪ್ರಪಂಚ.
ಹಳ್ಳಿ /ಕೃಷಿಕರ ಕಷ್ಟ ,ಬವಣೆ , ಪರಿಶ್ರಮದ ಕುರಿತಾದ ಒಂದು ಲೇಖನ .ಅವರು ಬೆಳೆಯುವ ಬೆಳೆ, ಅದಕ್ಕೆ ಸರಿಯಾದ ಬೆಲೆ ಸಿಗದಿರುವುದು, ಕೊಟ್ಟಿಗೆ, ತೋಟ, ಮನೆ, ಗದ್ದೆಗಳ ಜಂಜಾಟದಲ್ಲಿ ಬದುಕು ಸವೆಸುವ ಹೆಣ್ಣುಮಕ್ಕಳು, ಎಲ್ಲವೂ ಇಲ್ಲಿ ವಾಸ್ತವದ ಚಿತ್ರಣ ಗಳೇ. ಇಲ್ಲಿ ಲೇಖಕಿ ಹಳ್ಳಿಗಾಡಿನ ಜನರ ಆಸೆ ಆಕಾಂಕ್ಷೆಗಳನ್ನು ಪೋಷಿಸುವ ಅವುಗಳಿಗೆ ಸ್ಪಂದಿಸುವ ಭರವಸೆ ತುಂಬಿದ ಮಾತುಗಳನ್ನು ಉಲ್ಲೇಖಿಸಿರುವುದು ಅವರ ವಿಶಾಲ ಮನೋಭಾವಕ್ಕೆ ಹಿಡಿದ ದರ್ಪಣ. ಪರರ ಕುರಿತಾದ ಕಾಳಜಿ ಇಲ್ಲಿ ಕಾಣಿಸುತ್ತದೆ.
ಆತ್ಮಹತ್ಯೆಯತ್ತ ಮುಖ ಮಾಡುತ್ತಿರುವ ಯುವ ಜನತೆಯ ಮನಸ್ಥಿತಿ, ಪರಿಸ್ಥಿತಿ, ಎದುರಿಸುತ್ತಿರುವ ಸಮಸ್ಯೆಗಳ ಕುರಿತಾದ ಒಂದು ಲೇಖನ. ಇಲ್ಲಿ ಯುವ ಜನತೆಯ ಜೀವನ ಶೈಲಿ, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ರೀತಿ ಎಲ್ಲರ ಕಣ್ಣು ತೆರೆಸುವಂತಿದೆ, ಎಚ್ಚೆತ್ತುಕೊಳ್ಳುವಂತೆ ಇದೆ. ಇದನ್ನು ಓದಿದಾಗ ಒಮ್ಮೆ ನಡೆದು ಬಂದ ಹಾದಿಯನ್ನು ಹಿಂತಿರುಗಿ ನೋಡಬೇಕು ಅನ್ನಿಸಿತು. ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳಿ ಎನ್ನುವ ಸಂದೇಶವಿದೆ ಇಲ್ಲಿ. ಹೌದು ಇಂತಹ ಒಂದು ಬದಲಾವಣೆ ಇವತ್ತು ಎಲ್ಲರಲ್ಲಿಯೂ ಆಗಬೇಕಿದೆ.
“ಬೆಳಕು -ಬಳ್ಳಿ ಜೀವನಪ್ರೀತಿಯ ಬರಹಗಳು” – ಹೆಸರೇ ಸೂಚಿಸುವಂತೆ ಇದರ ತುಂಬಾ ನಮ್ಮದೇ ಬದುಕಿನ ಘಟನೆಗಳು ಅನಾವರಣಗೊಂಡಿದೆ. ಇಲ್ಲಿ ಯುವಕರು, ಹಿರಿಯರು, ಮಧ್ಯ ವಯಸ್ಸಿನ ಹೆಣ್ಣು ಮಕ್ಕಳು , ಹಳ್ಳಿ, ಪಟ್ಟಣ, ಸಿರಿವಂತರು, ಸಾಮಾನ್ಯರು ಹೀಗೆ ಎಲ್ಲರ ಬದುಕಿನ ಚಿತ್ರಣ ಕಾಣಸಿಗುತ್ತದೆ. ದಿನನಿತ್ಯದ ಬದುಕಿಗೆ ಹತ್ತಿರವಿರುವ ಕಾರಣ ಇಲ್ಲಿನ ಬರಹಗಳು ಆಪ್ತವೆನಿಸುತ್ತವೆ ಅಷ್ಟೇ ಅಲ್ಲ ಬಹಳ ಇಷ್ಟವಾಗುತ್ತವೆ.
– ನಯನ ಬಜಕೂಡ್ಲು
ಉತ್ತಮ ಪರಿಚಯಯುಕ್ತ ಲೇಖನ.
ಧನ್ಯವಾದಗಳು
ಪುಸ್ತಕ ಪರಿಚಯ, ಪುಸ್ತಕ ಓದಲು ಪ್ರೇರೇಪಣೆ ನೀಡುವಂತೆ ಸೊಗಸಾಗಿದೆ.
ಧನ್ಯವಾದಗಳು ಮೇಡಂ
Thumba chennagide
ಧನ್ಯವಾದಗಳು
ಸೊಗಸಾಗಿ ಪುಸ್ತಕವನ್ನು ಪರಿಚಯಿಸಿದ್ದೀರಿ.. ಧನ್ಯವಾದಗಳು…ಹಾಗೂ ಲೇಖಕಿ ಜಯಶ್ರೀ.ಕದ್ರಿ ಅವರಿಗೂ ಅಭಿನಂದನೆಗಳು…
ಸೊಗಸಾದ ಪುಸ್ತಕದ ಲೇಖಕಿ ಜಯಶ್ರೀಯವರಿಗೆ ಹಾಗೂ ಅದರ ಪರಿಚಯ ಮತ್ತು ವಿಮರ್ಶೆಯನ್ನು ಅಷ್ಟೇ ವಿಚಾರಪೂರ್ಣವಾಗಿ ಮಾಡಿದ ನಯನಾ ಮೇಡಂ ಅವರಿಗೂ ಅಭಿನಂದನೆಗಳು.
ಕೃತಿ ಪರಿಚಯಿಸಿದ ನಯನಾ ಅವರಿಗೆ, ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಲ್ಮೆಯ ನಮನಗಳು.