ಕೂಡಿ ಉಂಡರೆ ಸ್ವರ್ಗ ಸುಖ

Share Button

ಇತ್ತೀಚೆಗೆ ಕುಟುಂಬದ ಸದಸ್ಯರೆಲ್ಲರೂ ದುಡಿಯಲು ಹೊರ ಹೋಗುವುದು ಅನಿವಾರ್ಯವಾಗಿದೆ. ಇದರಿಂದ ಪ್ರತಿನಿತ್ಯದ ಜೀವನ ಕ್ರಮದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ತಮ್ಮ ತಮ್ಮ ಕೆಲಸದ ವೇಳೆಗೆ ಅನುಸಾರವಾಗಿ ಕುಟುಂಬದ ಸದಸ್ಯರು ಹೊರಹೋಗುವ ಈ ದಿನಗಳಲ್ಲಿ ಬೆಳಗಿನ ತಿಂಡಿಯ ಶಾಸ್ತ್ರವನ್ನು ಮುಗಿಸಿ ಲಗು ಬಗೆಯಿಂದ ಹೊರ ಬೀಳುತ್ತಾರೆ. ಕೆಲವೊಂದು ವೃತ್ತಿಗಳಲ್ಲಿರುವವರಿಗೆ ಆಯಾ ಕಚೇರಿಗಳಲ್ಲಿಯೇ ಉಪಹಾರವನ್ನು ನೀಡುವ ವ್ಯವಸ್ಥೆ ಇರುತ್ತದೆ. ಮಧ್ಯಾಹ್ನದ ಊಟವಂತೂ ಹೊರಗಡೆಯೇ ಕಳೆದು ಹೋಗುತ್ತದೆ. ಆದರೆ ರಾತ್ರಿಯ ಊಟವನ್ನು ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಮಾಡುವ ಅವಕಾಶವಿರುತ್ತದೆ. ಆದರೆ ಇಂತಹ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳುತ್ತಿಲ್ಲ.

ಹಿಂದೆ ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ಊಟ ಮಾಡುತ್ತ ಯಾವುದೋ ಒಂದು ವಿಷಯದ ಬಗೆಗೆ ಚರ್ಚೆ ಮಾಡುತ್ತಲೋ ಇಲ್ಲಾ ತಮಾಷೆ ಮಾಡುತ್ತಲೋ ಆಹಾರವನ್ನು ಅನುಭವಿಸಿ ತಿನ್ನುತ್ತಿದ್ದರು. ಆದರೆ ಇಂದು ಒಟ್ಟಿಗೆ ಕುಳಿತರೂ ಚರ್ಚೆ, ತಮಾಷೆಗಳಿರುವುದಿಲ್ಲ. ಟಿ.ವಿ. ಎದುರು ಮಂತ್ರಮುಗ್ಧರಾಗಿ ಕುಳಿತಿರುತ್ತೇವೆ. ಯಾಂತ್ರಿಕವಾಗಿ ನಮ್ಮ ಕೈ ತಟ್ಟೆಯಿಂದ ಬಾಯಿಗೂ, ಬಾಯಿಯಿಂದ ತಟ್ಟೆಗೂ ಹೋಗಿ ಬರುತ್ತಿರುತ್ತದೆ. ನಾವು ಏನನ್ನು ತಿನ್ನುತ್ತಿರುವೆವು ಎಂಬ ಅರಿವೂ ನಮಗಿರುವುದಿಲ್ಲ. ಇನ್ನು ಆಹಾರದ ರಸಸ್ವಾದವನ್ನು ಅನುಭವಿಸುವುದಂತೂ ದೂರದ ಮಾತು. ತಮ್ಮ ತನು-ಮನಗಳನ್ನು ತೊಡಗಿಸಿ ಕಷ್ಟಪಟ್ಟು ಆಹಾರವನ್ನು ತಯಾರಿಸುವ ಹೆಣ್ಣು ಮಕ್ಕಳು ತಾವು ಮಾಡಿದ ಅಡುಗೆಯ ವಿಮರ್ಶೆಯನ್ನು ತಾವೇ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.

PC: ಸಾಂದರ್ಭಿಕ ಚಿತ್ರ

ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ. ಪಾಲಕರು ತಮಗೆ ಸಿಗುವ ಅತ್ಯಲ್ಪ ಸಮಯವನ್ನು ಮಕ್ಕಳ ಜೊತೆ ಕಳೆಯಲು ಅವಕಾಶ ಸಿಗುತ್ತದೆ. ದಿನವಿಡೀ ಅಂದಿನ ದಿನವನ್ನು ಹೇಗೆ ಕಳೆದರೆಂಬುದನ್ನು ತಿಳಿದುಕೊಳ್ಳಬಹುದು. ಅವರ ಓದು- ಬರಹ, ಬೇಕು-ಬೇಡಗಳ ಬಗ್ಗೆ ಅರಿತುಕೊಳ್ಳಬಹುದು.

ಸಹ ಪಂಕ್ತಿ ಭೋಜನ ನಮ್ಮ ಸಂಪ್ರದಾಯದ ಒಂದು ಭಾಗವಾಗಿದೆ. ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಸಂತೋಷ ಇಮ್ಮಡಿಗೊಂಡರೆ, ದು:ಖ ಕಡಿಮೆಯಾಗುತ್ತದೆ. ಕೆಲ ಹಬ್ಬ ಹರಿದಿನಗಳಲ್ಲಿ ವನ ಭೋಜನ ಮಾಡುವ ಪರಿಪಾಠವನ್ನು ಇನ್ನೂ ಕೆಲವರು ರೂಢಿಸಿಕೊಂಡಿದ್ದಾರೆ. ನಾಗರ ಪಂಚಮಿಯಲ್ಲಿ ಅಲ್ಲೀಕೆರಿ ಎಂಬ ಹೆಸರಲ್ಲಿ ಗ್ರಾಮೀಣ ಜನರು ವನಭೋಜನವನ್ನು ನಡೆಸುತ್ತಾರೆ. ದಿನದ ಜಂಜಾಟಗಳಿಂದ ತುಸು ಬದಲಾವಣೆಯನ್ನು ಪಡೆಯಲು, ಬೇಸರಿಕೆಯನ್ನು ನೀಗಲು ವನ ಭೋಜನಗಳು ದಾರಿ ಮಾಡಿಕೊಡುತ್ತವೆ. ನಾಲ್ಕು ಗೋಡೆಗಳ ಮಧ್ಯದಲ್ಲಿ ಕುಳಿತು ತಿನ್ನುವ ಆಹಾರವನ್ನು ಯಾವುದೋ ತೋಟದಲ್ಲೋ, ವನದಲ್ಲೋ ಇಲ್ಲವೆ ಹೊಲದಲ್ಲಿಯೋ ಕುಳಿತು ತಿಂದಾಗ ಅದರ ರುಚಿ ದ್ವಿಗುಣಗೊಳ್ಳುತ್ತದೆ.

‘ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೆ ತನ್ನ ಬಳಗವ, ಕೋಳಿಯೊಂದು ಗುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವ ‘ ಎಂದು ಬಸವಣ್ಣನವರು ಹೇಳುವಂತೆ, ಪ್ರಾಣಿ-ಪಕ್ಷಿಗಳು ಕೂಡ ಜೊತೆಗೂಡಿ ಆಹಾರವನ್ನು ತಿನ್ನಲು ಬಯಸುತ್ತವೆ. ಒಟ್ಟಿಗೆ ಕುಳಿತು ಕೂಡಿ ಉಂಡರೆ ಅದರ ಸುಖ ಸ್ವರ್ಗಕ್ಕೆ ಸಮನಾಗಿರುತ್ತದೆ.

-ಗೌರಿ.ಚಂದ್ರಕೇಸರಿ, ಶಿವಮೊಗ್ಗ.

 

2 Responses

  1. shankari sharma says:

    ಒಳ್ಳೆಯ ಲೇಖನ.

  2. Gouri says:

    ಧನ್ಯವಾದಗಳು ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: